ಬೆಂಕಿ ಎಲ್ಲೆಡೆ ಹರಡುವಾಗ,
ನಂಬಿಕೆ ಕೈ ಕೊಡುವಾಗ,
ವಿನಮ್ರವಾಗಿ ಸುಮ್ಮನಿರಿ
ಭೂತ ನಿಯಂತ್ರಿಸುತ್ತಿದೆ
ಬೆಳಕು ಮಾಯವಾದಾಗ
ಪ್ರೀತಿ ಬೇಸರ ಮೂಡಿಸಿದಾಗ
ಸಂಯಮದಿಂದ ಎಚ್ಚರವಾಗಿರಿ
ಭೂತ ನಿಯಂತ್ರಿಸುತ್ತಿದೆ
ಒಮ್ಮೆಗೆ ಕೆಡುಕು ದಾಳಿಯಿಟ್ಟಾಗ
ಸತ್ಯಕ್ಕೆ ತೀವ್ರ ನೋವುಂಟಾದಾಗ
ಸಹನೆಯಿಂದ ಚುರುಕಾಗಿರಿ
ಭೂತ ನಿಯಂತ್ರಿಸುತ್ತಿದೆ
ಬಾಗಿಲು ವಿಶಾಲವಾಗಿ ತೆರೆದಿರಲಿ
ಗಾಳಿ ನಿಂರಂತರ ಸ್ವಚ್ಛಂದ ಹಾರಾಡಲಿ
ಶಾಂತ ಚಿತ್ತದಿಂದ ಹುಶಾರಾಗಿರಿ
ಭೂತ ನಿಯಂತ್ರಿಸುತ್ತಿದೆ
ಮೌಂಟ್ ಎವರೆಸ್ಟಿನಲ್ಲಾಗಲಿ,
ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ
ನೆಲೆಸಲಾಗಲಿಲ್ಲ
ಭೀಕರ ಬರಗಾಲವನ್ನಾಗಲಿ,
ಅಥವಾ ಭಯಾನಕ ಪ್ರವಾಹಗಳಾಗಲಿ
ಎದುರಿಸಲಾಗಲಿಲ್ಲ
ಪ್ರೀತಿಸಿ ಮೋಸಹೋಗಿದ್ದಾಗಲಿ,
ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ
ತೀವ್ರವಾಗಿ ಕಾಡಲಿಲ್ಲ
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಲು,
ಅಥವಾ ಮಿಗ್21 ಚಾಲಕನಾಗಲು
ಅವಕಾಶ ಸಿಗಲಿಲ್ಲ
ನಿಕೃಷ್ಠ ತ್ಸುನಾಮಿಗೆ ನನ್ನ ಮುಟ್ಟಲಾಗಲಿಲ್ಲ,
ಅಥವಾ ಭಯಂಕರ ಭೂಕಂಪದಿಂದ
ಹರಿದು ಹೋಗಲಿಲ್ಲ
ಭೀಕರ ಅಪಘಾತವಾಗಲಿ,
ಇಲ್ಲಾ ಆತಂಕವಾದಿಗಳ ಆಕ್ರಮಣಕ್ಕಾಗಲಿ
ಬಲಿಯಾಗಲಿಲ್ಲ
ಎಂದೂ ದಿವಾಳಿಯಾಗಲಿಲ್ಲ,
ಇಲ್ಲಾ ಸಂಪೂರ್ಣವಾಗಿ ನೋಟ
ಕಳೆದುಕೊಳ್ಳಲಿಲ್ಲ
ಯಾವ ಕಾಡ್ಗಿಚ್ಚಿಗೂ ಸಿಕ್ಕಿಕೊಳ್ಳಲಿಲ್ಲ,
ಇಲ್ಲಾ ಯಾವ ಕ್ರೂರ ಮೃಗಗಳೂ
ನನ್ನ ಬೇಟೆಯಾಡಲಿಲ್ಲ
ಆಫ್ರಿಕನ್ ಕಾಡುಗಳಲ್ಲಿ ಕಳೆದು ಹೋಗುವುದಾಗಲಿ,
ಅಥವಾ ಅರಬ್ಬೀ ಸಮುದ್ರದಲ್ಲಿ
ಮುಳುಗಿ ಹೋಗಲಿಲ್ಲ
ಈ ಎಲ್ಲಾ ದುರ್ಘಟನೆಗಳಿಂದ ಜೀವಂತ ಪಾರಾಗಿ
ಆ ಅನುಭವಗಾಥೆಗಳ ಹೇಳಲಾಗಲಿಲ್ಲ
ಎಷ್ಟೊಂದು ದುರದೃಷ್ಟಕರ!
ಎಷ್ಟೊಂದು ದುರದೃಷ್ಟಕರ!
ಈ ಕಗ್ಗತ್ತಲಲಿ ಪಯಣದಲಿ
ಏಕಾಂಗಿ ನಾನು
ಅಪರಿಚಿತ ಹಾದಿ
ಅದರ ಅಂತ್ಯದ ಸುಳಿವಿಲ್ಲ
ಏಕತಾನತೆ ಸದಾ ಸತಾಯಿಸುತ್ತಿದೆ
ಆಗಾಗ ಭಯಂಕರ ಚೀರಾಟ ಕೇಳಿಸುತ್ತದೆ
ಅದೇನೆಂದು ಅರಿಯದಾಗಿದೆ,
ಆದರೂ, ಅದು ನನ್ನಲ್ಲಿ ಭಯ, ಅಭದ್ರತೆ ಮೂಡಿಸುತ್ತದೆ.
ಎಲ್ಲಿಂದ ಹೊರಟೆ?
ಈಗ ಎಲ್ಲಿರುವೆ?
ಮುಂದೆ ಎಲ್ಲಿಗೆ?
ಎಂಬುದೊಂದೂ ತಿಳಿಯುತ್ತಿಲ್ಲ
ಸಾಧ್ಯವಾದರೆ ತಿಳಿಯ ಬಯಸುವೆ
ಹುತ್ತದೊಳಗೆ ಹಾವು ಬಿಟ್ಟು
ಸುತ್ತಮುತ್ತ ಹವಣಿಸುತಿಹರು
ಪುಂಗಿಯೂದಿ ಸದ್ದು ಮಾಡದೆ
ದೋಚುತಿಹರೊ ಎಲ್ಲ ಚಂದಿರ
ತಿದ್ದಿ ತೀಡಿ ಮೊನಚಾದ ಚೂರಿ
ತಿರುಗಿ ಇರಿಯುತಿಹರು ಮತ್ತೆ ಅಲ್ಲೇ,
ಯಾರ ಭಯ, ಯಾರ ಜಯ,
ಪಡೆದನೇನೊ ಚಂದಿರ
ಮುಖದಲೊತ್ತು ಸತತ ಸಿನಿಕ ಕಳೆ
ಸಾತ್ವಿಕ ಸಂತಾಪದ ಕ್ರುದ್ಧ ಭಾವದಿಂದ
ಸೋತು ಸೋತು ಜಡವಾದ ಮನವ
ಸಡಿಲವಾಗಿಸೊಮ್ಮೆ ಚಂದಿರ
ಕೆಟ್ಟ ನಿದರ್ಶನ ಮಾದರಿಯಾಗಿರಿಸಿ
ದುರ್ಬಲ ಭಾವನೆಗಳ ಬಂಧನದೊಳಗೆ
ದುಶ್ಚಟಗಳೊಡನೆ ಸರಸವಾಡಿ ಪ್ರತಿದಿನ
ಈ ಕತ್ತಲಕೂಪದಿಂದೊರಗೆ ಬಾರೊ ಚಂದಿರ
ಹನುಮಂತನ ಬಾಲ ಬೆಳೆದಂತೆ
ಉದ್ದೋ ಉದ್ದ... ಉದ್ದನೆ ಸಾಲ
ಎದ್ದು ಬಿದ್ದು, ಬಿದ್ದು ಎದ್ದು
ಇಲ್ಲಿ ಗೆದ್ದವರು ಯಾರೋ ಚಂದಿರ
ಓಡುತಿಹರೋ ಅಣ್ಣ, ಎಲ್ಲ ಓಡುತಿಹರೋ
ಹುಚ್ಚುಕುದುರೆ ಏರಿ ಎಲ್ಲಿಯೂ ನಿಲ್ಲದಂತೆ
ಬಿದ್ದವರೆಷ್ಟೊ, ಸತ್ತವರೆಷ್ಟೊ, ಎಲ್ಲರಮೇಲೆ
ಗೆದ್ದವರೆಷ್ಟೊ ತಿಳಿಸೊ ಚಂದಿರ
ಬಿದ್ದಾನೆಂದರೆ ಬೀಳಲಿ ಹಾಗೆ
ಸತ್ತಾನೆಂದರೆ ಸಾಯಲಿ ಹಾಗೆ
ಬೆಂಕಿಯ ಜ್ವಾಲೆ ಉರಿಯುತ ಸುತ್ತ
ಬರದಿದ್ದರೆ ಸಾಕು ನಮ್ಮನೆಯತ್ತ ಚಂದಿರ
ಕಾಗೆ ಗುಬ್ಬಿಯ ಕತೆಗಳು ಹೇಳುತ
ಸುಬ್ಬ ಸುಬ್ಬಿಯ ಜಗಳವ ತಿಳಿಸುತ
ಡಬ್ಬಿಯಕೊಂಡು ಉಂಡೂ ಬಂದನು
ಚಂಚಲ ಚೆಲುವ ಚತುರನೊ ಚಂದಿರ
ಜಂಬದ ಕೋಳಿ ಕೊಬ್ಬಿದೆ ಬಹಳ
ಸಿಕ್ಕವರೊಂದಿಗೆ ಮಾಡುತ ಜಗಳ
ತೂಕಡಿಸುವವರ ಎಚ್ಚರಗೊಳಿಸಿ
ಚಂಗನೆ ಹಾರಿತು ಎಲ್ಲಿಗೆ ಚಂದಿರ
ಚುಮು ಚುಮು ಚಳಿಯಲಿ
ಸ ರಿ ಗ ಮ ಪ ದ ನಿ ಸ
ಹಾಡುತ ತಾಗುವ ತಂಗಾಳಿಯ
ಜೊತೆ ಸರಸಕೆ ಬರುವೆಯಾ ಚಂದಿರ
ಅರಿಯದ, ಕೇಳದ, ಕಾಣದ ಸ್ಥಳದಲ್ಲಿ,
ನನ್ನ ಯುವರಾಣಿಯನ್ನು ಬಿಟ್ಟು ಬಂದಿದ್ದೇನೆ,
ಅವಳ ನಿಶಕ್ತ ಭುಜಗಳು ಬೆಳ್ಳಿಪೆಟ್ಟಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿವೆ:
ಓ! ಆ ಮುದ್ದು ಮಗುವಿನ ಸ್ಪರ್ಶ,
ಯಾರು--- ಯಾರಿಗೆ ವರ್ಣಿಸಲು ಸಾಧ್ಯ ಎಷ್ಟೆಂದು
ಅಲ್ಲಿದೆ ಹುಚ್ಚುತನ--- ಕ್ರೌರ್ಯ, ಅಥವಾ ನಿಬಂಧನೆ?
ಆ ತುಂಟ ಕಣ್ ರೆಪ್ಪೆಗಳು ಹೇಗೆ ಹೊಳೆಯುತ್ತಿವೆ!
ಆ ತುಟಿಗಳೆಷ್ಟು ಹಸಿಯಾಗಿವೆ!--- ಅವುಗಳ ಮಾತು,
ಪಕ್ವವಾದ ನೀರವತೆಯಲ್ಲಿ, ಸವಿಯಾದ ಶಬ್ಧಗಳ ನೆರಳಲ್ಲಿ:
ಆ ಇಂಪಾದ ಸಂಗೀತ ನನ್ನ ಕಿವಿಗಳಲ್ಲಿ ಮೆಲ್ಲಗೆ ಮಾಯವಾಗುತ್ತಿದೆ ಚಿನ್ನ,
“ಪ್ರೀತಿಯ ಅಪರಿಪೂರ್ಣತೆ, ಅಥವಾ ಅದರ ಗಡಿಗಳ ಎಲ್ಲೆ” ಹೇಗೆ ತಿಳಿಯುವುದು
ನಿಜ!--- ಆ ಎಳಸು ಮುನ್ನೆಚ್ಚರಿಕೆಗಳು!
ನಾನು ನಿನ್ನ ನಿಯಮಗಳನ್ನು ವಿರೋಧಿಸುತ್ತೇನೆ:
ಈ ಸುದಿನದಂದೇ ಆ ತುಂಟಿ ಜನ್ಮ ಪಡೆದದ್ದು!
ಆದ್ದರಿಂದ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ,
ಬೆಳಗಿನ ಅನರೀಕ್ಷಿತ ದುರ್ಘಟನೆಯ ನೋವಿನಿಂದ ಹೊರಬಂದು
ನಾನು ನನ್ನ ಸ್ವರ್ಗವನ್ನು ಹೊಸರೀತಿಯಲ್ಲಿ ಕಲ್ಪಿಸಿಕೊಳ್ಳುವೆ.
(ಮೂಲ ಕವಿ : ಜಾನ್ ಕೀಟ್ಸ್ )
ನನಗೆ ಮಹಿಳೆ, ಮದಿರೆ, ಹಾಗು ನಸ್ಯ ನೀಡಿ
ನಾನು “ಸಾಕಪ್ಪಾ ಸಾಕು!” ಎಂದು ಕಿರುಚುವವರೆಗೂ,
ಯಾವುದೇ ಅಭ್ಯಂತರವಿಲ್ಲದೇ ನನಗೆ ಮರಳಿ
ಜೀವ ಬರುವವರೆಗೂ ನೀವು ಹಾಗೆ ಮಾಡಬಹುದು:
ಅದಕ್ಕಾಗಿ,ನನ್ನ ಕೆನ್ನೆಗಳನ್ನು ಮುಟ್ಟಿ ಹರಸಿ,
ನನಗೆ ನಿಸ್ಸಂಕೋಚವಾಗಿ ಅವರೇ ನನ್ನ ಆತ್ಮೀಯ,
ಆಪ್ತ ತಂದೆ, ಮಗು ಹಾಗು ಭಗವಂತ.
(ಮೂಲಕವಿ: ಜಾನ್ ಕೀಟ್ಸ್ )
ನನಗಾಗಿ ಆ ಬಟ್ಟಲನ್ನು ತುಂಬಿಸು
ಅದರಲ್ಲಿ ನನ್ನ ಆತ್ಮ ಮುಳುಗಿಸುವೆ:
ಆದರೆ, ನನ್ನ ಮನಸಿಂದ ಮಹಿಳೆಯರನ್ನು ಹೊರಗಟ್ಟುವ
ಯಾವುದಾದರೂ ಔಷದಿಯನ್ನು ಅದರಲ್ಲಿ ಬೆರೆಸು:
ಸದಾ ಹೊಮ್ಮುವ ಪ್ರೇರಣೆ ನನಗೆ ಬೇಡವಾಗಿದೆ,
ಅದು ನನ್ನ ಮನಸ್ಸಲ್ಲಿ ಉತ್ಕಟಾಕಾಂಕ್ಷೆ ಸೃಷ್ಟಿಸುತ್ತದೆ,
ನನಗೆ ತಣ್ಣಗೆ ತೀವ್ರವಾಗಿ ಅಮಲೇರಿಸುವ ಪಾನೀಯ
ಎಂದಿಗೂ ಸಿಗುವಂತಿರಲಿ:
ನಂಬಿಕೆ ಕಳೆದುಕೊಂಡ ಹೃದಯವನ್ನು,
ಆ ಸುಂದರ ಕಲಾಕೃತಿ ಹುರಿದುಂಬಿಸಲಿ,
ಅದು ಎಂದಿಗೂ ನನ್ನ ಕಣ್ಣಿನ ಅದ್ಭುತ ಕಲ್ಪನೆ,
ಅದು ಎಂದಿಗೂ ವರ್ಣಿಸಲಾಗದೆ ಕಾಡುವ ಕಲ್ಪನೆ!
ಮೃದುವಾಗಿ ಕರಗುವ ಕೋಮಲ ಮುಖದಿಂದ
ನನಗೆ ದೂರವಾಗಲು ಸಾಧ್ಯವಿಲ್ಲ,
ಕಂಗೊಳಿಸುವ ಆ ಮೋಹಕ ಕಣ್ಣುಗಳಿಂದ,
ಆ ಕುಚಗಳು - - ಭುವಿಯ ಏಕೈಕ ಸ್ವರ್ಗ.
ನನಗೆ ಇದಕಿಂತಲೂ ಮಿಗಿಲಾದುದು ನೋಡಲು ಅಸಾಧ್ಯ;
ನಾನು ಕಾಣುವುದೆಲ್ಲವೂ ನೀರಸವಾಗಿವೆ:
ಅಥವಾ ನಾನು ಆಸಕ್ತಿಯಿಂದ ಪ್ರಯತ್ನಿಸಲಾರೆ,
ಅದು ಶ್ರೇಷ್ಟ ಪುಟವೊ, ಅಥವಾ ತಪಸ್ಸಿನ ಜ್ಞಾನವೊ.
ನನ್ನ ಹೃದಯಮಿಡಿತವೇನಾದರೂ ಅವಳಿಗೆ ತಿಳಿದಿದ್ದರೆ,
ಒಂದು ಕಿರುನಗೆಯಿಂದ ಆ ತೀವ್ರತೆಯನ್ನು ಶಾಂತಗೊಳಿಸುತ್ತಿದ್ದಳು
ಆ ಸಿಹಿ ಅನುಭೂತಿಯಿಂದ ನನಗೆ ನೆಮ್ಮದಿ ಸಿಗುತಿತ್ತು,
ಆ ಹಿತವಾದ ವೇದನೆಯನ್ನು ಅನುಭವಿಸಬಹುದಿತ್ತು.
ಅತ್ಯದ್ಭುತ ಹಿಮಾಲಯ ಶಿಖರಗಳಲ್ಲಿ ಸವಿಗನಸು ಕಾಣುವ ಹಾಗೆ,
ಅವಳು ಎಂದಿಗೂ ನನ್ನಿಂದ ಎಷ್ಟೇ ದೂರದಲ್ಲಿರಲಿ
ಅವಳೇ ನನ್ನ ನೆನಪಿನ ಕಾಮನಬಿಲ್ಲು.
ವಿ.ಸೂ:ಸ್ಥಳದ ಹೆಸರು ಬದಲಿಸಲಾಗಿದೆ
(ಮೂಲಕವಿ: ಜಾನ್ ಕೀಟ್ಸ್ )
ಮದಿರೆ ಬರಲು ಬಾಯಿಯೆಡೆಗೆ,
ಕಣ್ಣಿಂದ ಪ್ರೀತಿ ಹೊಮ್ಮುವುದು;
ನಾವು ಬೆಳೆದು ಮುದುಕರಾಗಿ ಸಾಯುವ ಮುನ್ನ
ಇಷ್ಟೆ ನಾವರಿಯಬೇಕಾದ ಸತ್ಯ.
ಶರಾಬಿನ ಗ್ಲಾಸನ್ನು ನನ್ನ ಬಾಯಿಗೇರಿಸಿ,
ನಿನ್ನನ್ನು ನೋಡಿ, ನಿಟ್ಟುಸಿರಿಡುವೆ.
(ಮೂಲಕವಿ: ವಿಲಿಯಮ್ ಬಟ್ಲರ್ ಯೇಟ್ಸ್ )
ಹಾಡಿ ಕುಣಿಸು ಬಾ, ನನ್ನ ಆಪ್ತ ಗೆಳೆಯನೆ,
ಹಾಗೇ ನನ್ನ ಕುಣಿಸುತ್ತಲೇ ಇರು,
ನಾನು ಸಭ್ಯನಂತೆ ಕಂಡರೂ, ಗಂಟಲು ಪೂರ್ತಿ ಕುಡಿದಿರುವೆ.
ಸಭ್ಯತೆಯೊಂದು ಆಭರಣ
ಅದನ್ನು ಬಹಳ ಮೆಚ್ಚಿಕೊಳ್ಳುವೆ;
ಆದ್ದರಿಂದಲೇ ಮತ್ತೆ ನನ್ನ ಕುಣಿಸುತ್ತಲೇ ಇರು
ಕುಡುಕರು ಸುಳ್ಳು ಹೇಳಿದರೂ ಮತ್ತೆ ಗೊರಕೆ ಹೊಡೆದರೂ.
ಓ ನಿನ್ನ ಹೆಜ್ಜೆಯ ಬಗ್ಗೆ ಎಚ್ಚರವಿರಲಿ, ಹೆಜ್ಜೆಯ ಬಗ್ಗೆ ಎಚ್ಚರ,
ಅಲೆಗಳೊಮ್ಮುವಂತೆ ಕುಣಿಯುತ್ತಲೇ ಇರು,
ಮತ್ತೆ ಹಾಗೆ ಕುಣಿಯುವ ಪ್ರತಿಯೊಬ್ಬನಡಿಯಲ್ಲಿ
ಸತ್ತವನು ತನ್ನ ಸಮಾಧಿಯಲ್ಲಿ.
ಏನೇ ಏರಿಳಿತಗಳಿದ್ದರೂ ಆಪ್ತನೆ,
ಮತ್ಸ್ಯಕನ್ಯೆಯಂತಿರು, ಸೋತ ಸಾಮಾನ್ಯನಂತಲ್ಲ;
ಕುಡುಕನು ಸತ್ತವನಿದ್ದಂತೆ,
ಮತ್ತು ಸತ್ತಿರುವವರೆಲ್ಲರೂ ಕುಡಿದಿದ್ದಾರೆ.
(ಮೂಲಕವಿ: ವಿಲಿಯಮ್ ಬಟ್ಲರ್ ಯೇಟ್ಸ್ )
ಸಾಧನೆಗೆ ಸಿದ್ಧ ಸಾಧನಗಳು
ಸಿಗಲು ಸಾವಿರ ಮಾದರಿಗಳು
ಸತ್ಯ ಮಿತ್ಯ ಅನಗತ್ಯವಿಲ್ಲಿ
ನಿತ್ಯ ನಗದು ನಗುತಿದೆ ಚಂದಿರ
ತನು ಮನಗಳ ವಿಕಸನ ವಿರಳ
ಸರಳವಲ್ಲ ಬದುಕು ನಿತ್ಯ ಜಗಳ
ಮೌಲ್ಯಗಳ ಮಾರಿ ಮೆರೆವರಿಲ್ಲಿ
ನೈತಿಕತೆಗೆ ನೆಲೆಯೆಲ್ಲಿ ಚಂದಿರ
ಹಣದ ಹೊಳೆಗೆ ಜನರು ಜಾರಿ
ಹೆಣದ ಮೇಲೆ ನೊಣಗಳ ಸವಾರಿ
ರಣ ಹದ್ದುಗಳ ಕೇಕೆ ದಾರಿಬಿಡಿ
ಮಾನವ ಮರಳಿ ಮಣ್ಣಿಗೆ ಚಂದಿರ
ತರ್ಕಹೀನ ಸಮಾಜ ಶ್ರೇಣೀಕರಣ
ಮತಿಹೀನ ಮತದ ಕೇಂದ್ರೀಕರಣ
ಬಡವರ ಬದುಕಾಗಿರಲು ಧಾರುಣ
ಕಾರಣವ ಹುಡುಕೊ ಚಂದಿರ
ಜಾತ್ಯಾತೀತ ಜಗದ ನಿರ್ಮಾಣಕೆ
ಜಾತೀಯತೆಯ ತೊಡೆದು ಹಾಕು
ಮಾನವೀಯತೆ ಮುಂಚೂಣಿಗಿರಿಸಿ
ಮೊದಲು ಮನುಜನಾಗು ಚಂದಿರ
ಜನನ ಮರಣ ಸಹಜ ಸುತನೆ
ಅಡ್ಡಗೋಡೆ ಕೆಡಹೊ ಗೆಳೆಯನೆ
ಮನುಜ ಮತವೆ ಜಗದ ಹಿತವು
ಈ ಸತ್ಯವರಿಯೊ ಚಂದಿರ
ವೇದ, ಪುರಾಣಗಳ ಕಟ್ಟಿಬಿಡು
ಕುಲ ಗೋತ್ರಗಳ ತೂರಿಬಿಡು
ಮನುಕುಲಕೆ ಮಗುವೆ ಮಾದರಿ
ಬೇರೆ ತತ್ವ ತರ್ಕ ಬೇಕೆ ಚಂದಿರ
ಅಭದ್ರತೆಗೆ ಸಿಲುಕಿ ಮನವು
ತತ್ತರಿಸುತಿದೆ ಇಡೀ ಜಗವು
ಸರಳ ತತ್ವದೆಲ್ಲೆಮೀರಿದ ಜನರಿಗೆ
ಶಾಂತಿ ಸಿದ್ಧಿಸುವುದೇ ಚಂದಿರ
ಸ್ಮೃತಿಯು ತೀವ್ರವಾಗಿ ಕಾಡುತಿದೆ
ಸ್ಫುಟನೋಟ ತೀಕ್ಷ್ಣವಾಗಿ ಕೆಣಕಿದೆ
ನುಡಿದ ನುಡಿಯ ವಿವರ ತಿಳಿಯುವ
ತಿಳುವಳಿಕೆ ನೀಡೊ ಚಂದಿರ
ತೋರಿಕೆಗೆ ಮಾತ್ರ ಕಠೋರಶಿಸ್ತು
ಬೋಧನೆಗೆ ಮಾತ್ರ ತತ್ವ ವಸ್ತು
ಅಸಾಧಾರಣ ಹಂಬಲಗಳಡಗಿವೆ
ಅವುಗಳ ಶ್ರಾದ್ಧ ಮಾಡೊ ಚಂದಿರ
