Oct 30, 2008

ಸಾಲು – 3

ಸಾಲು ಸಾಲು ಸಾವಿರ ಸಾವಿರ
ಸಾಲು ಮರ ಬೆವರ ಹರಿಸಿ ನೆಟ್ಟವರು ,
ನೆರಳಿಗೆ ಹಾತೊರೆಯದೇ ,
ಪ್ರತಿಫಲಕ್ಕೆ ಕೈಯೊಡ್ಡದೇ ,
ಕಳೆದು ಹೋದವರ ನೆನಪು
ಬಾರದಿರುವುದು ಸೋಜಿಗ !

ದಣಿವು ಇಂಗಿಸುವ ಸಲುವಾಗಿ
ನೂರಾರು ಪದಗಳ ಹಾಡಿ ,
ತಮ್ಮ ಪರಂಪರೆಯ ಮೆರೆದವರು ,
ಇಂದಿಗೂ ಜೀವಂತವಾಗಿರಿಸಿ ,
ಜನಪದವಾಗಿಸಿ ಮರೆಯಾದವರ ,
ಇಂದು ನಕಲು ಮಾಡಿ ಮೆರೆಯುವುದೇ
ದೊಡ್ಡ ಅಚ್ಚರಿ !

ತಲತಲಾಂತರದಿಂದ ತಮ್ಮ ಪೌರುಷ ,
ಅಟ್ಟಹಾಸ, ಅಧಿಕಾರದಿಂದ ಭೇದಭಾವ
ಸೃಷ್ಟಿಸಿ ದರ್ಪದಿಂದ ಮೆರೆದವರು
ಆಳಿದ ಅರಸರ ಪಟ್ಟಿ ಮರೆಯದೆ ಉಳಿಸಿ ,
ಆಳಿಸಿಕೊಂಡವರ ಸುಖದುಃಖ ಗೌಣವಾಗಿಸಿ ,
ಇಂದು
ಸಾಮಾನ್ಯರಾಗಿರುವುದೊಂದು ವಿಪರ್ಯಾಸ ,
ವಿಸ್ಮಯ !

Oct 29, 2008

ಸಾಲು - 2

- 1 -

ಅದೃಷ್ಟವಂತರು, ಸಮರ್ಥರು, ಭ್ರಷ್ಟರು
ತಮ್ಮ ಸಾಧನೆಯ ಪ್ರದರ್ಶನಕ್ಕಿಡುವಾಗ ,
ವಿದ್ಯಾವಂತ ನಿರುದ್ಯೋಗಿಗಳು
ತಮ್ಮ ಅಸಹಾಯಕತೆ ಮರೆಯಲು
ಹಗಲುಗನಸು ಕಾಣುವುದು
ಅಪರಾಧವೆನ್ನಬೇಡಿ ?

- 2 –

ಎತ್ತರದಿಂದ ಒಮ್ಮೆಗೇ ಕುಸಿದವನಿಗೆ ,
ಮತ್ತೆ ಏರಲಾರನೆಂಬ ಅನುಮಾನ
ಸಹಜವಾದರೂ ಅಸಾಧ್ಯವಲ್ಲವೆಂಬುದ ಬಲ್ಲ .
ಎಡವಿ ಬಿದ್ದವನು ತಡಕಾಡುತ್ತಲೇ ಇದ್ದ ,
ಪ್ರತಿ ಹೆಜ್ಜೆ ಅನುಮಾನದಿಂದಲೇ
ಇಡುತ್ತಿದ್ದ .

-3 –
ಅದ್ಭುತ ಸೌಂದರ್ಯವತಿಯೊಬ್ಬಳು
ಯೌವನದಲಿದ್ದಾಗ ತಾನೇ ಶ್ರೇಷ್ಠಳೆಂದು ಬೀಗಿ
ಏಕಾಂಗಿಯಾಗಿಯೇ ಪಶ್ಚಾತಾಪದೊಂದಿಗೆ
ಮುದುಕಿಯಾದಳು .
ಸಾಧಾರಣ ಚೆಲುವೆಯೊಬ್ಬಳು ತನ್ನ ಯೌವನ ,
ಕ್ಷಣಿಕವೆಂದರಿತು ಸುಖದ ಶಿಖರವನ್ನೇರಿ ,
ನೆಮ್ಮದಿಯ ನಿಟ್ಟುಸಿರಿಟ್ಟಳು .

Oct 25, 2008

ಹುಳು ಮತ್ತು...*

ತಿಳಿಗೆಂಪಾದ
ತಿರುಗುಕುರ್ಚಿಯ ಮೇಲೆ ಕುಳಿತು
ವಿಶಾಲವಾದ ಮೃದು ಮೇಲ್ಪದರ ಹೊಂದಿರುವ ಮರದ
ಟೇಬಲ್ಲಿನ ಮೇಲೆ ಕೈಯೂರಿ ,
ಗಹನ ವಿಷಯದಲಿ ಮುಳುಗಿದ್ದರೆ.
ಸಣ್ಣ ಹುಳುವೊಂದು ರಭಸದಿಂದ ಮೇಲೇರುತ್ತಿತ್ತು ,
ಹಸಿವಿಂದಲೋ, ಜೀವ ಭಯದಿಂದಲೋ ,
ಹುಡುಕಾಟದಿಂದಲೋ ಎಂಬುದು ತಿಳಿಯದೆ
ಅದರ ವೇಗ, ಕಾತುರ, ಭಯದ ಚಲನೆಯನ್ನು
ಕುತೂಹಲದಿಂದ ಗಮನಿಸುತ್ತಿದ್ದೆ .

ಒಮ್ಮೆಗೇ ಹಾಳಾದ ಟೆಲಿಪೋನು
ಕೆಟ್ಟ ರಾಗದಲ್ಲಿ ಕಿರುಚಿ ರಸಭಂಗ ಮಾಡಿತ್ತು;
ಕರೆ ಮೇಲಧಿಕಾರಿಯದು.
ಅವರ ಮಾತಿನ ಧಾಟಿ
ಮೇಲೇರುತಿರುವ ಹುಳುವಿನಂತೆ ,
ವೇಗ, ಕಾತುರ, ಭಯದಿಂದ ಕೂಡಿದಂತ್ತಿತ್ತು.

ಆ ಹುಳು, ಮೇಲಧಿಕಾರಿ ಹಾಗು ನಾನು
ಎಲ್ಲರು ಒಂದೇ ಮನಸ್ಥಿತಿ, ಒಂದೇ ಹಾದಿ ,
ಒಂದೇ ವಾಹನದಲ್ಲಿ ಪಯಣಿಸುವ ಪಯಣಿಗರಂತೆ....

Oct 23, 2008

ವಿಸ್ಮಯ*

- 1 -
ಕ್ಲಾಸ್ ರೂಮಿನಲ್ಲಿ ಅಧ್ಯಾಪಕ
ಅಧ್ಯಾತ್ಮ ಅತ್ಯುತ್ತಮ
ಎಂದು ಪದೇ ಪದೇ ಸಾರಿ ಹೇಳುತ್ತಿದ್ದ.
ಗೆಳತಿ
ಅವನನ್ನೇ ದಿಟ್ಟಿಸಿ,
ತುಂಟ ನಗೆ ಬೀಸಿದ ನಂತರ
ರಸಭಂಗವಾದಂತಿದ್ದ.

- 2 -

ನೀನೆ ಸಕ್ಕರೆ, ಬೆಲ್ಲ ಎಂದು
ನಿನ್ನೆಯವರೆಗೆ
ಪುಳಕಿತಗೊಂಡಿದ್ದ
ನಲ್ಲ
ಇಂದೇಕೆ
ಅಪರಿಚಿತ ನೋಟ
ನನ್ನತ್ತ ಬೀರುವನಲ್ಲ?

- 3 -
ನೀನೆ ಎಲ್ಲಾ ಎಂದು,
ಚುಮು ಚುಮು ಚಳಿಯಲ್ಲಿ
ತಬ್ಬಿ ಮುದ್ದಾಡಿದ
ನಲ್ಲ
ಈಗ ಪ್ರತಿ ಮುಂಜಾನೆ
ಬಿಸಿ ಬಿಸಿ ಫಿಲ್ಟರ್ ಕಾಫಿ
ಬೇಕೆಬೇಕೆನ್ನುವನಲ್ಲ!

Oct 22, 2008

ಮತ್ತೆ ಬರುವನು ಚಂದಿರ - 4

ಹಗಲಲ್ಲಿ ರವಿತೇಜ, ಬೆಳ್ಳಕ್ಕಿ ಹಿಂಡು
ಬೆಳ್ಳಿಮೋಡಗಳ ಬೆನ್ನತ್ತಿ ನೆರಳು
ನೀಲಾಂಬರಕೆ ತಾರೆಗಳ ದಂಡು
ಇರುಳಲಿ ಹೊಳೆಯುವ ಚಂದಿರ

ನದಿ ದಡದಲಿ ನಲಿಯುತಿದೆ ನವಿಲು
ರೆಂಬೆ ಕೊಂಬೆಗಳೊಳಗೆ ಹಕ್ಕಿಹಾಡು
ಮನ್ವಂತರ ಮರಳಿ ಮುಕ್ತಿ ಪಡೆದಾಗ
ಹಾರುವ ಹಕ್ಕಿ ಮತ್ತೆ ನೀ ಚಂದಿರ

ಭಾವ ಬಂಧಗಳ ಪರಿಧಿಯಾಚೆಗೆ ಪಯಣ
ಏಕಾಂಗಿ ಹಾದಿಯಲಿ ಶೂನ್ಯ ದಿಗ್ದರ್ಶನ
ಮಟ್ಟಹಾಕಿದವರಾರು ನಿನ್ನ ಅಟ್ಟಹಾಸಕೆ
ಚಟಗಳ ಚಿತೆಗಿಟ್ಟು ಸುಮ್ಮನಿರು ಚಂದಿರ

ಧೀರೋದಾತ್ತ ಹೆಜ್ಜೆ ಸಹಜ ಬದುಕಿನತ್ತ
ಸುತ್ತಮುತ್ತ ಎತ್ತಿ ತೋರುವುದವರ ಚಿತ್ತ
ಸರಳ ಸಜ್ಜನಿಕೆ ಪರಿಚಯವಿರದವರ
ಸಂಗ ನಿನಗೇತಕೋ ಚಂದಿರ

ಒಳ ಹೊರಗೆ ಅಡಗಿರುವ ತಿರುಳೇಕೊ
ಸಾಕ್ಷಿ ಹುಡುಕುವ ಚಪಲ ನಿನಗೇಕೊ
ಅವರವರ ಆತ್ಮ ಅವರವರ ಕರ್ಮ
ಆತ್ಮಶೋಧನೆ ಬೇಕೊ ಚಂದಿರ

ಮೇಲು ಕೀಳೆಂಬುದೀ ಜಗದ ಗೋಳು
ತಲೆತಲಾಂತರದಿ ಬೆಂದಿರುವ ಬಾಳು
ಸಹನೆ, ಸಂಯಮ ಇಂಗಿ ಹತ್ತಿದೆ ಬೆಂಕಿ
ಉರಿಯುತಿದೆ ಒಳಹೊರಗೆ ಚಂದಿರ

ರವಿಯ ಕಿರಣದನನ್ಯ ಸ್ಪರ್ಶಕೆ
ಹೂವು ಅರಳಿದೆ ಮೆಲ್ಲಗೆ
ಬರುವ ದುಂಬಿಗೆ ತೆರೆದು ಹೃದಯ
ಮುಕ್ತಿ ಪಡೆಯಿತು ಚಂದಿರ

ಆಪ್ತಲೋಕವು ತೆರೆದು ಬಾಗಿಲು
ಆರ್ದೃಗೊಳಿಸಿದ ಹಿತಾನುಭವ
ಆನಂದಕರವೊ ಅಂತರಾತ್ಮಕೆ
ಹಸನ್ಮುಖಿ ನಿತ್ಯ ನೀ ಚಂದಿರ

ನೋವು, ನಲಿವು ಸಹಜ ಗೆಳೆಯನೆ
ಸೋಲು, ಗೆಲುವು ಗೌಣ ಆಪ್ತನೆ
ಸುಪ್ತ ಮನದಿ ಸ್ಪಷ್ಟ ಹಾದಿಗೆ
ಹೆಜ್ಜೆ ಇಡುವವ ಜಾಣ ಚಂದಿರ

ತರ್ಕ, ತತ್ವಗಳ ಎಲ್ಲೆ ಮೀರಿ
ನಿತ್ಯ ಹಸಿರಿಗೆ ಉಸಿರು ನೀಡಿ
ಬರುವ ನಾಳೆಯ ಹಸನು ಮಾಡೊ
ನಮ್ಮ ಕಂದ ನಗುವನು ಚಂದಿರ

Oct 4, 2008

ಹೇಗೆ ಹೇಳಲಿ?

ಅಲ್ಲಿ ಯಾರೂ ಇರುವುದಿಲ್ಲ
ಇಲ್ಲಿ ಯಾರೂ ಇರುವುದಿಲ್ಲ
ಯಾರಿಗೆ ಯಾರೂ ಇಲ್ಲ
ಯಾರೂ ಅನಿವಾರ್ಯವಲ್ಲ

ಬೆಳಕಿಗೆ ಬೆಳಕೆಂದರೆ ಸಾಕು
ಕತ್ತಲಿಗೆ ಕತ್ತಲೆಂದರೆ ಸಾಕು
ಎರಡು ಬೆರೆತಿರಲು ಸಾಧ್ಯವಿಲ್ಲ
ಏಕಾಂಗಿ, ಅದೇ ಕಠೋರ ಸತ್ಯ

ಅದಿದ್ದಲ್ಲಿ ಇದು ಇರುವುದಿಲ್ಲ
ಇದಿದ್ದಲ್ಲಿ ಅದು ಇರುವುದಿಲ್ಲ
ಎರಡು ಒಟ್ಟಿಗಿರಲು ಸಾಧ್ಯವಿಲ್ಲ
ಅದಕೆ ಇದು, ಇದಕೆ ಅದು ಅಷ್ಟೆ ನಿಜ

ಜನ್ಮ, ಸ್ಥಳ, ಹೆಸರು, ಜಾತಿ ,
ಧರ್ಮ, ಸಂಸ್ಕೃತಿ, ದೇಶ
ಎಲ್ಲವೂ ಅಂಟಿಸಿಕೊಂಡಿರುವುದಷ್ಟೆ
ಹುಳ, ಉಪ್ಪಟೆಗಳಂತೆ ಕಳಚಿ ಬಿಡಬಹುದು

ಒಂದರ ನಂತರ ಇನ್ನೊಂದು
ಬರುವುದು, ಇರುವುದು, ಹೋಗುವುದು
ಜಗದ ನಿಯಮ
ಕ್ರಿಯೆ, ಪ್ರತಿಕ್ರಿಯೆಯ ಪರಿಣಾಮ

ಎಲ್ಲ ಪ್ರಶ್ನೆಗಳಿಗೆ ಉತ್ತರ ಅನಿವಾರ್ಯವಲ್ಲ
ಪ್ರಶ್ನೆಗಳ ಒಲಿತು, ಕೆಡುಕಿನ ಪರಿಜ್ಞಾನ
ಅನಗತ್ಯ ಕುತೂಹಲ ಕೆರಳಿಸಿದ
ಪಿತಾಮಹನು ಯಾರು ಬಲ್ಲಿರೇನು ?

ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಂದ
ಸಾಧಿಸಿದ್ದಾದರೂ ಏನು ?
ಇವೆಲ್ಲ ಇರದುದರಿಂದ ಅವುಗಳು
ಕಳೆದುಕೊಂಡದ್ದಾದರೂ ಏನು ?

ಎಲ್ಲವು ಎಲ್ಲದರಂತೆ ಇರಲು ಬಿಡಿ
ಎಲ್ಲರಲಿ ಒಬ್ಬರಂತೆ ಜೊತೆಗಿರುವುದ ಕಲಿ
ಕಡಿದು ಹಾಕುವ ಕಾತುರ ಬೇಡ
ಈಗಲಾದರೂ ಮೂರ್ಖ ಪಾಠ ಕಲಿ

Oct 3, 2008

ಮತ್ತೆ ಬರುವನು ಚಂದಿರ - 3

ಅಸಹಾಯ ಅಪ್ರತಿಮ ಶೂರ
ದಾರಿ ಇರಲು ಬಹಳ ದೂರ
ಇರುವುದೆಲ್ಲವ ತೊರೆದು ಬಾರ
ನೀನಾಗುವೆ ಆಗ ಚಂದಿರ

ಕಾಲಗರ್ಭ ಖಾಲಿ ಕಾಗದವಲ್ಲ
ಬರೆದುದೆಲ್ಲವು ಅರ್ಥವಾಗಬೇಕಿಲ್ಲ
ಸಿಕ್ಕಿದಷ್ಟು ಸಾಕು ಸವಿದು
ಮುನ್ನಡೆಯಬೇಕೊ ಚಂದಿರ

ತಿಳುವು, ತಿರುಳು, ತಿರುವುಗಳು
ಹಿಡಿತಕೆ ಎಂದೂ ಸಿಗದವುಗಳು
ಅರಿವಿರುವವರ ಆಂತರ್ಯದಲ್ಲಿ
ಅಡಗಿರುವವೊ ಚಂದಿರ

ಅಸಿವಿಗೆ ಅನ್ನ, ದಾಹಕೆ ನೀರು
ಬಿಸಿಲು, ಗಾಳಿ, ಮಳೆಗೆ ಸೂರು
ಕತ್ತಲು ಕವಿದೆಡೆ ಇರಲು ಬೆಳಕು
ಸಾಕು ಬಾಳಿಗೆ ಚಂದಿರ

ಬೇಕುಗಳ ಬೆನ್ನಟ್ಟಿ ಹೊರಟಿರುವೆ
ಇತಿಹಾಸ ಪುಟಗಳ ಮರೆತಿರುವೆ
ಮತ್ತದೇ ಜಾಗಕ್ಕೆ ಮರಳಿ ಬರುವ
ಬಯಕೆ ಬಿತ್ತಿರುವೆ ಚಂದಿರ

ಮೂರ್ತ, ಅಮೂರ್ತಗಳ ಜೊತೆಗೂಡಿ
ಶಾಂತಿ, ನೆಮ್ಮದಿಗಾಗಿ ತಡಕಾಡಿ
ಬೆಟ್ಟ ಗುಡ್ಡಗಳೆಲ್ಲ ಅಲೆದಾಡಿ
ನಿನ್ನೊಳಗಿರುವವನವ ಚಂದಿರ

ಇರುವ ಪ್ರಶ್ನೆಗಳ ಎಸೆದು ಬಿಡು
ಚಿಂತೆ ಕಂತೆಗಳೊರಗೆ ತೂರಿಬಿಡು
ನಿರಾಳವಾದ ಪುಟ್ಟ ಹೃದಯವು
ನಲಿದಾಡುವುದಾಗ ಚಂದಿರ

ಪಡೆದುದೆಲ್ಲ ಪ್ರದರ್ಶಿಸುವ ಕಾತುರ
ಇರದುದನು ಪಡೆಯುವ ಅತ್ಯವಸರ
ಇರುವ, ಇರದವುಗಳ ಬಲೆಯಲ್ಲಿ
ನಗುವ ಮರೆತೆಯಲ್ಲೊ ಚಂದಿರ

ತನು ಮನ ತಣಿಸುತಲೇ ಅಭ್ಯಾಸ
ಕಲಿತು, ಕಲಿಸು ಕಾಣುವೆ ಕೈಲಾಸ
ವಿಳಾಸಿ ಜೀವನಕೆ ತೀಳಾಂಜಲಿಯಿಡುತ
ಸರಳ ಬದುಕು ಲೇಸೆಂದ ಚಂದಿರ

ಸ್ಪರ್ಧೆಯ ಜಗದಲ್ಲಿ ಸಹನೆಗೆ ಸ್ಥಳವೆಲ್ಲಿ
ಸಾಮರ್ಥ್ಯವೊಂದೆ ಇಲ್ಲಿ ಮಾನದಂಡ
ಇದ್ದವನು ಈಜುವ, ಇರದವನು ಸಾಯುವ
ಮನಃಶಾಂತಿ ಇನ್ನೆಲ್ಲಿ ಚಂದಿರ

Oct 1, 2008

ಅರಳಿಕಟ್ಟೆ*

ಮೋಟು ಬೀಡಿ ಹಚ್ಚಿ
ಅರಳಿಕಟ್ಟೆ ಮೇಲೆ ಕುಳಿತು
ಗೆಳೆಯರ ಮಿತಿಯಿಲ್ಲದ ಹರಟೆಗೆ
ದಿನದ ದಣಿವು ಮಾಯ.

ಮುಸ್ಸಂಜೆಯ ಹೊತ್ತಲ್ಲಿ
ಕುರಿ ಮೇಕೆಗಳ ಹಿಂಡು ಧೂಳೆಬ್ಬಿಸಿ, ಕೂಗಿ
ಮರಿಗಳ ಜೊತೆಸೇರುವ ಕಾತುರವ
ಕಾಣುವುದೇ ಅಚ್ಚರಿ.

ಬಿಸಿ ಬಿಸಿ ರಾಗಿ ಮುದ್ದೆ ,
ಹಸಿ ಅವರೆಕಾಳು ಸಾರುಂಡು
ಗಂಗಿಯ ಬೆವರಿನ ಘಮಲು ಸೆಳೆದಾಗ
ಅವಳ ಕೂಡುವುದೇ ಸಂಭ್ರಮ.

ಮುಂಜಾನೆ ಮುಸುಕಿನಲಿ
ಬೆಚ್ಚನ ಕಂಬಳಿ ಸರಿಸಿ, ಮೈಮುರಿದು ,
ತೆಳುವಾದ ಮೈ ಮನಕೆ
ಕೇಳಿಸುವುದೆಲ್ಲವು ಸಂಗೀತವೇ.