May 31, 2008

ಯಾರಿವ?

ಸೂಜಿಗೆ ಸಣ್ಣ ರಂಧ್ರ ಕೊರೆವ
ಸೂಕ್ತ ಶಕ್ತ ದಾರ ಹೆಣೆವ
ಸೂಕ್ಷ್ಮದಿ ಸೇರಿಸಿ ಎಳೆವ
ಸೊಗಸಾದ ಧಿರಿಸು ಹೊಲಿವ

ಕಣ ಕಣವ ಸೇರಿಸಿದವ
ಜೀವವದಕೆ ನೀಡಿದವ
ವಿಸ್ಮಯಗಳ ಸೃಷ್ಟಿಸುವ
ವಿನಯ ವಿಜಯ ಕಾಣುವ

ಶೃತಿ ಲಯವ ಮೀರದವ
ಒಲವನಿತ್ತು ವಿರಹ ನೀತಿ
ಕಲಹವಿರಿಸಿ ಕುಶಲ ಕೇಳಿ
ಬೇಡಿದರು ಕಾಣದವನೆ

ಆಸೆಯಿತ್ತ ಅರಸು ಇವನೆ
ಹಸಿವನಿತ್ತ ಚತುರನಿವನೆ
ಅರಿವುಕೊಟ್ಟು ಆಳುವವನೆ
ಬೇರೆ ವರವ ಕೊಡುವನೆ

ಭೂರಮೆಗೆ ಹಸಿರ ಉಡುಗೆ
ಸಾಗರವೇ ಅದರ ನೆರಿಗೆ
ಆಗಸಕೇಕೆ ನೀಲಿ ಹೊದಿಕೆ
ಸೂರ್ಯ ಚಂದ್ರರಲ್ಲಿ ಬೇಕೆ

ಮೋಡಕಟ್ಟಿ ಮಳೆ ಸುರಿಸಿ
ಗುಡುಗು ಮಿಂಚು ನೆಪಕಿರಿಸಿ
ಹರಡಿ ಸಾವಿರ ಜೀವರಾಶಿ
ಮನುಜನವರ ನಾಯಕನೆ ?

ಅವನು ಯಾರು ಬಲ್ಲಿರೇನು ?
ಅವನ, ಅವಳ ಕಂಡಿರೇನು ?
ಇಟ್ಟವರಾರು ಹೆಸರವರಿಗೆ ?
ದೇವರೆಂದೇ ಹೇಳಬೇಕೇ ?

ಮನಸೇ

ಮರೆಯಲೇಗೆ ಮನಸೇ
ನೀನಿಟ್ಟ ಪುಟ್ಟ ಪುಟ್ಟ
ಹೆಜ್ಜೆ ಪಳೆಯುಳಿಕೆ
ಹಾಗೇ ನಗುತಿದೆ

ಹನಿಯುತಿಹ ಮಳೆಗೆ
ಸೋಕಿ ಬೆವರ ಹನಿಯ
ಜೊತೆಗೆ ಕರಗಿ ತುಟಿಗೆ
ತಾಗಿತಲ್ಲ ನೆನಪಿದೆ

ಬಂಡೆ ಮೇಲೆ ಕೆತ್ತ ಹೆಸರು
ಉಸಿರಿಡಿದು ಒತ್ತಿ ಮೊಹರು
ಇಳಿಸಂಜೆ ಹೊಳೆವ ತಾರೆ
ಸಾಕ್ಷಿಯಾಗಿ ಉಳಿದಿದೆ

ದಿನಕೊಂದು ನೆವವ ಹೂಡಿ
ಅತ್ತ ಇತ್ತ ಮತ್ತೆ ನೋಡಿ
ಇತ್ತಲಿಂದ ಓಡಿ ಬಂದ
ಛಲವೇಕೆ ಇಂಗಿದೆ

ಮುನಿಸಿಂದ ಮುಷ್ಠಿ ಹಿಡಿದು
ಎದೆಯ ಮೇಲೆರಡು ಬಿಗಿದು
ಮೆಲ್ಲಗೆ ಅದಕೆ ಒರಗಿದೆ
ಮೆತ್ತಗೆ ಕಣ್ಣೀರ ಒರಸಿದೆ

ಮೌನವಾಗಿ ತಲೆಯ ತೂಗಿ
ನೂರು ಕನಸ ಕರೆಸಿದೆ
ಜಾಣೆ ನೀನು ಜರಿದರೇನು
ಮರೆಯಲೆಂದು ತಿಳಿಸಿದೆ

May 30, 2008

ಬಸ್ಸು

ಬಸ್ಸು ಮಿಸ್ಸಾಗಿ, ಮುಂದಿನ
ನಿಲ್ದಾಣ ಬಹಳ ದೂರದಲ್ಲಿ
ಬರುವ ಬಸ್ಸಿನ ವಿವರವಿಲ್ಲ
ಸಹ ಪಯಣಿಗರು ಜೊತೆಗಿಲ್ಲ

ಪಯಣ ಸಾಗಲೇ ಬೇಕು
ನಿಲ್ಲಿಸುವಂತಿಲ್ಲ ,
ಕಾಯುವ ಮನಸಿದ್ದರೂ
ಕೂರುವಂತಿಲ್ಲ

ಅಗೋ ಆ ದಟ್ಟ ಕಾಡಿನ
ಮಧ್ಯೆ ನಾ ನಡೆಯ ಬೇಕು
ಅ ಪಕ್ಕದ ಬೆಟ್ಟವ ನಾ
ಹತ್ತಬೇಕು, ಹಾದಿಯಿಲ್ಲ

ಮತ್ತೆ ಬಸ್ಸು ಹೋಗಲು
ಅಲ್ಲಿಗೆ ಹೇಗೆ ಸಾಧ್ಯ
ಎಲ್ಲರ ಪಯಣ ಅಲ್ಲಿಗೆ
ಎಂಬುದು ಊಹೆ ಅಷ್ಟೇ

ಸದ್ಯ, ಮೊದಲಿಗೆ ರಸ್ತೆನೇ
ಇಲ್ಲ, ಮತ್ತದಕೆ ಕಾಯಬೇಕೆ
ಬೇರೆ ಮಾರ್ಗವೇನಾದರೂ
ಇರಹಬಹುದೇನೋ ಗೊತ್ತಿಲ್ಲ

ಮೂಲ ಪ್ರಶ್ನೆ ಮರೆತಂದಿದೆ
ಮೊದಲು ನಾನೇಕೆ ಬಂದೆ
ಇಲ್ಲಿಗೆ, ಮಿಸ್ಸಾದ ಬಸ್ಸು
ಹತ್ತಿ ಹೊರಡಬೇಕಿತ್ತಲ್ಲವೆ

ಸರಿ ಆ ಬಸ್ಸು ಎಲ್ಲಿಗೆ ಹೋಗುತ್ತೆ
ಅಂತಾದರೂ ತಿಳಿದಿತ್ತೆ, ಇಲ್ಲ
ನಾನು ಹೋಗ ಬೇಕಾದ ಸ್ಥಳ -
ವಾದರೂ ಇಲ್ಲ, ಪಯಣವೆಲ್ಲಿಗೆ

ಬಂದಿದ್ದಾಗಿದೆ, ಎಲ್ಲಿಯಾದರೂ
ಹೋಗೋಣವೆನ್ನುವ ತರ್ಕವೆ ,
ಇಲ್ಲ ಭಂಡತನವೆ, ಏನಾದರೂ
ಆಗಲಿ ಮೊದಲು ಇಲ್ಲಿರಬಾರದು

ಅಬ್ಬಾ! ಎಷ್ಟೊಂದು ಪ್ರಶ್ನೆಗಳು
ನನ್ನ ಬಳಿ ಉತ್ತರವೊಂದೂ ಇಲ್ಲ
ಯೋಚಿಸುತ್ತಾ ಇಲ್ಲೇ ಕೂರಬೇಕೆ
ಪಯಣದಲಿ ಯೋಚಿಸಬಹುದಲ್ಲ

ಬಸ್ಸು ಮಿಸ್ಸಾದುದರಿಂದಲೇ ತೊಂದರೆ
ಈ ಪ್ರಶ್ನೆಗಳ ಗೊಡವೆಯಿರುತ್ತಿಲ್ಲ
ಆದದ್ದಾಯಿತು, ಬಸ್ಸಿಗಾಗಿ ಕಾಯಲೇ ,
ಜೊತೆ ಪಯಣಿಗರಿಗಾಗಿ ಕಾಯಲೇ

ಆ ಬೆಟ್ಟದ ಹಾದಿಗಾಗಿ, ಬರುವ
ಬಸ್ಸಿಗಾಗಿ, ನನ್ನ ಪ್ರಶ್ನೆಗಳ
ಉತ್ತರಕ್ಕಾಗಿ, ಸ್ಪಷ್ಟ ಗುರಿಯ
ನಿರ್ಧರಿಸುವವರೆಗೆ ಕಾಯಲೇ

ಏನೂ ಇರದವನಿಗೆ, ಯಾರೂ
ಇರದವನಿಗೆ, ಯಾವ ಕಡೆಗೆ ,
ಯಾರ ಕಡೆಗೆ ಹೋದರೇನು
ಸದ್ಯ ಇಲ್ಲಿರದಿದ್ದರೆ ಸಾಕಷ್ಟೆ

ಇರದವನಿಗೆ ಇಷ್ಟು ಕಷ್ಟವಾದರೆ
ಇನ್ನು ಇರುವವರ ಗತಿ ಏನು ?
ಕಲ್ಪನೆಗೂ ಮೀರಿದ ವಿಷಯ ಬಿಡಿ
ಈ ಸ್ಥಳ ಮಹಿಮೆ ಸರಿಯಿಲ್ಲವಷ್ಟೇ

May 29, 2008

ಅಪರಿಚಿತ

ಮಖವನೇಕೆ ಮುಚ್ಚಲೆತ್ನಿಸುವಿರಿ
ಚಡಪಡಿಸುವಿರೇಕೆ ತೊಂದರೆಯೆ
ಸಹಾಯವಾಗುವುದಾದರೆ ಹೇಳಿ
ಸುಮ್ಮನಿರಲು ಸಹ ಸಿದ್ಧನಿರುವೆ ,
ಮುಜುಗರ ಬೇಡ, ಏನು ಸಮಸ್ಯೆ ?

ಅರೇ ಏನೂ ಇಲ್ಲ, ನಿಮಗೆಲ್ಲ
ಸಮಸ್ಯೆಯಾಗಬಾರದು ಅಂತಲೇ
ಇದೆಲ್ಲ ಅವಸ್ಥೆ, ಅಭ್ಯಾಸವಾಗಿದೆ ಬಿಡಿ

ಹೇಗೆ ಸಾಧ್ಯ, ನಿಮ್ಮ ಮುಖ ಕಂಡರೆ
ನಮಗೇನು ಸಮಸ್ಯೆ, ಅದು ಕೆಟ್ಟದಾಗಿದೆಯೆ ,
ವಿಕಾರವಾಗಿದೆಯೇ, ಭಯಂಕರವಾಗಿದೆಯೇ ,
ನೋಡಿದರೆ ನಮಗೆ ಭಯವಾಗುವುದೇ ?

ಛೆ, ಅದೇನು ಇಲ್ಲ, ಬಹಳ ಸುಂದರನು ,
ಚತುರನು, ಶ್ರೀಮಂತನು, ಈ ಪ್ರಾಂತ್ಯಕ್ಕೆ
ನಾನು ಚಿರಪರಿಚಿತನು ಹಾಗಾಗಿ ಎಲ್ಲರು
ಸುತ್ತ ಮುತ್ತಿಕೊಳ್ಳುತ್ತಾರೆ ಅದರಿಂದ
ಜನ ಸಾಮಾನ್ಯರಿಗೇಕೆ ತೊಂದರೆ ಅಂತ
ಅದಿರಲಿ, ನಿಮ್ಮ ಪರಿಚಯ ಆಗಲಿಲ್ಲ ,
ಎಲ್ಲಿಯವರು ನೀವು ?

ನನ್ನದೇನೂ ವಿಶೇಷ ಇಲ್ಲ ಬಿಡಿ
ನನಗ್ಯಾವ ಊರಿಲ್ಲ, ನನ್ನವರಾರಿಲ್ಲ ,
ನನ್ನವರೇ ಎಲ್ಲ, ಎಲ್ಲವೂ ನನ್ನದಿದ್ದಂತೆ
ನಿಮ್ಮ ಸಮಸ್ಯೆಗಳು, ಸದ್ಯ ನನಗಿಲ್ಲ
ಇದ್ದಕಡೆ ಇರುವವನಲ್ಲ, ಮತ್ತೆ ಬರುವ
ನಂಬಿಕೆ ನನಗಿಲ್ಲ, ಸುಮ್ಮನೆ ನೋಡುವೆ ,
ಕೇಳುವೆ, ಆನಂದಿಸುವೆ, ನಗುವೆ, ಅಳುವೆ ,
ಇಷ್ಟ ಬಂದಂತೆ ಇದ್ದು ಬಿಡುವೆ ಅಷ್ಟೇ

ಯಾರು ಇಲ್ಲ ಅಂತೀರಿ, ಎಲ್ಲ ನನ್ನವರೆನ್ನುವಿರಿ
ಸ್ಪಷ್ಟವಾಗಿ ಹೇಳಿ ಮಾರಾಯರೇ ನೀವ್ಯಾರು ?

ಹೌದು, ಎಲ್ಲರೂ ನನ್ನವರೇ, ಎಲ್ಲವೂ ನನ್ನದೇ ,
ಆದರೂ ನನಗ್ಯಾರೂ ಇಲ್ಲ, ನನಗೇನೂ ಬೇಡ

ನಿವೇನು ಸ್ವಾಮೀಜಿಗಳೇ, ಇಲ್ಲ ಸಂತರೇ ?

ಅಲ್ಲ ನಾನು ಸಾಮಾನ್ಯನು, ನಾ ಬಯಸಿದಂತೆ
ಇರುವವನು, ನನಗ್ಯಾವ ಹೆಸರು, ಊರು ,
ಕ್ಷೇತ್ರ ಬೇಕಾಗಿಲ್ಲ, ಆದರೂ ಸುಖವುಳ್ಳವನು ,
ಸ್ವೇಚ್ಛೆಯುಳ್ಳವನು, ಚಿಂತೆಯಿರದವನು ,
ಸ್ವಂತಕೆ ಏನನೂ ಬಯಸದವನು ,
ಅಲ್ಪಸುಖಿ ಎಂದರೂ ಸರಿಯೆ, ಶಾಂತನು ,
ಸರಳನು, ವಿದ್ಯೆ, ಬುದ್ಧಿಯಿರುವವನು ನಾನು

ಅಯ್ಯೋ, ಮಂಡೆ ಬಿಸಿ ಮಾಡಬೇಡಿ
ಈಗಲೇ ನನಗೆ ಸಾಕಷ್ಟು ಸಮಸ್ಯೆಗಳಿವೆ ,
ನನ್ನ ಬಳಿ ಹಣ, ಆಸ್ತಿ, ಅಂತಸ್ತು, ಅಧಿಕಾರ ,
ಸಂಸಾರ, ಸ್ನೇಹಿತರು, ಬಂಧುಗಳು ಎಲ್ಲಾ ಇದ್ದರೂ
ನೆಮ್ಮದಿಯಿಲ್ಲ, ಸುಖ, ಶಾಂತಿ ಇಲ್ಲ ,
ನಿಮ್ಮಹಾಗೆ ನನಗಿರಲು ಆಸೆಯಿದ್ದರೂ ಸಾಧ್ಯವಾಗುತ್ತಿಲ್ಲ ,
ಅದೆಲ್ಲ ಪಡೆಯಲೆಂದೇ ಇಷ್ಟೆಲ್ಲಾ ಮಾಡಿದೆ, ಪ್ರಯೋಜನವಿಲ್ಲ ,
ದಯವಿಟ್ಟು ಹೇಳಿ ನೀವು ಯಾರು, ಏನು ಮಾಡುವಿರಿ ?

ನಾನು ಇಂದು, ನೀವು ನಾಳೆ.

May 28, 2008

ಭೂಪ

ಆಗಸಕೆ ಲಗ್ಗೆ ಇಟ್ಟಂತೆ
ಮೂಡಣದಿ ದಟ್ಟ ಕೆಂಪು
ಹಳದಿಯಾಗುವ ಪರಿ
ನೋಡಲೇನಚ್ಚರಿ

ಬೆಳಕು ಬೆರೆಸಿ ಕೆಂಪು
ಕರಗಿಸಿದಾತ
ಭೂಪ ಇವನ್ಯಾರೋ
ಭೂಪಟವನಾಳುವವ

ಭೂಭುಜನಿಗೆ ಇದೇ
ಕಿರೀಟ ಆ ಗಿರಿಶಿಖರ
ಅಷ್ಟು ಎತ್ತರದವನು
ಭೂತಗನ್ನಡಿಗೆ ದೊಡ್ಡವ

ಇವನ್ಯಾರೋ ಕದಲದವ ,
ಕರಗದವ, ನೋಡುಗರಿಗೆ
ಒಂದುಕಡೆ ಕಾಣದವ ,
ಕಂಡರೂ ಬದಲಾದವ

ಇದ್ದರೇ ಇವನಂತಿರಬೇಕು
ಗುಂಡಗೆ, ಗುಂಡಿಗೆ, ಕೆಂಪಗೆ
ಅಲುಗಾಡದಂತೆ, ಚಿಂತೆ
ಇಲ್ಲದೆ ಚಿತೆಯೇರುವವರೆಗೆ

ಬೆಳಕಿಗೆ ಕತ್ತಲ ತಂದವನು
ಕತ್ತಲಲಿ ಚುಕ್ಕಿ ಚಂದ್ರಮ
ತೋರಿದವನು, ಬೇಡಿದರೂ
ಬದಲಾಗದೆ ಕಿರಿದಾಗಿ ಕಾಣುವ

ಬೆಳ್ಳಿಮೋಡ ಕಾರ್ಮೋಡವಾಗಿಸಿ
ಅವರವರ ಮಧ್ಯೆ ಜಗಳವಿರಿಸಿ
ಗುಡುಗು, ಮಿಂಚುಗಳ ಸೃಷ್ಟಿಸಿ
ಮಳೆಯಾಗಿ ಧರೆಗೆ ಜಳಕ ಮಾಡಿಸಿ

ಬಣ್ಣಗಳ ಸರದಾರ ಬಾಗಿಲನು
ತೆರೆದಾನು ಬೆಳಕು ಹರಿಸಿ
ಪಡುವಣ, ಮೂಡಣಗಳ
ನಮಗಾಗಿ ಮೀಸಲಿರಿಸಿ

ಪರದೆ

ಆತ್ಮೀಯರಿಗೆ ಹಲವು
ಪರದೆಗಳೆಳೆದು
ದೂರ ಅಡಗಿ ಕುಲಿತು
ಭಾರಿ ರಿಯಾಯಿತಿ
ನೀಡಿದಂತೆ

ಆಗಾಗ ಹೊರಬಂದು
ದರ್ಶನ ಭಾಗ್ಯ
ಲಭ್ಯವಾದವರಿಗೆ
ಅದೃಷ್ಟ ಪರೀಕ್ಷೆ
ನೆನಪಿರಲಿ

ಮುಚ್ಚಿಡುವ ಅಭ್ಯಾಸ ಎಲ್ಲವನು
ಹತ್ತಿರವಿರುವವರಿಗೆ ,
ಆತ್ಮೀಯರಿಗೆ
ಸುಖದುಃಖ ಹಂಚಿ
ಕೊಳ್ಳುವವರಿಗೆ

ಹೊರಗಿನವರೊಂದಿಗೆ
ಅಪರಿಚಿತರೊಂದಿಗೆ
ಆಯ್ಕೆ ಮಾಡಿದಷ್ಟು
ತೆರೆದಿಟ್ಟು, ಮುಖಃಭಂಗ
ಸಹಿಸುತ ಅತ್ತಿತ್ತ ನೋಡಿ

ಈ ದ್ವಂದ್ವಕೆ ಸೋತು
ಸ್ವಂತಿಕೆ ಹೂತು
ಸಾಧಿಸುವುದೇನು ಲೇಸು
ಆಪ್ತರ ಹತ್ತಿರವಿದ್ದೂ
ಜೊತೆಗಿರದೆ

ಅನಗತ್ಯದಷ್ಟು ಸ್ವಾಭಿಮಾನ
ಬಿಡದ ಬಿಗುಮಾನ
ತೊರೆದು ಆಪ್ತರಿಗೆ
ಅರಿಯಲು ಸಹಕರಿಸಿ
ಕೃತಜ್ಞತೆ ಪಡೆವನೆ

May 27, 2008

ಸಿಗ್ನಲ್ಸ್

ಸಿಗ್ನಲ್ಸ್ ವೀಕಾದಂತೆ
ಮಾತಿನ ಸ್ಪಷ್ಟತೆ
ಕ್ಷೀಣಿಸುತ್ತಿದೆ
ಕಮರ್ಶಿಯಲ್ ಬ್ರೇಕಂತೆ
ಸಂಪರ್ಕ ಲಭ್ಯವಿರದೆ

ಕರೆ ಕಟ್ಟಾಗುವ ಸಾಧ್ಯತೆ
ತಂತ್ರಜ್ಞಾನದ ತೊಡಕಿಂದ
ವಿಷಯ ಮುಖ್ಯ
ತಿಳಿಸಬೇಕು, ಸಿಗದಿದ್ದರೆ
ಅನಾಹುತ ಖಂಡಿತ

ನೆಪವಲ್ಲ ನಿಜ
ನಂಬಲು ತಯಾರಿಲ್ಲ
ಹೇಳಲು ಸಾಧ್ಯವಾಗುತ್ತಿಲ್ಲ
ಸಿಗ್ನಲ್ಸ್ ವೀಕಾದಂತೆ
ಮಾತು, ಮನಸು ಕೂಡ

ಹೇಳಿ ಹೋಗಲು
ಹಲವು ಕಾರಣ
ಇಷ್ಟವಿಲ್ಲದಾಗ
ಬೇಕೊಂದು ಕಾರಣ
ಹೇಳು, ಇಲ್ಲಾ ಕೇಳು
ಮೌನವಲ್ಲ ಲಕ್ಷಣ

May 21, 2008

ಕನವರಿಸಿ

ಕನವರಿಸಿ ಕತ್ತಲಲಿ ಹಿತ್ತಲ ಮಾವಿನ ಮರದಡಿ
ಎಚ್ಚರವಾಯಿತು ಕ್ಷಣಕೆ ರಸಭಂಗದ ರಭಸಕೆ
ಜೇನ ಹನಿ ಸವಿಯುವ ಆತುರಕೆ ತಿಳಿಯದೆ
ಜೇನಹುಳ ಕೊಟ್ಟಿತ್ತು ಚುಂಬನ ನನ್ನ ತುಟಿಗೆ

ದಿನವೆಲ್ಲ ಉರಿ ಬಿಸಿಲನುಂಡು ದಣಿದ ದೇಹ
ಇಳಿಸಂಜೆಗೇ ಉಂಡು ವಿಶ್ರಾಂತಿ ಬಯಸಿತ್ತು
ತಂಗಾಳಿ ಸುಳಿಯುತಿರೆ ಲಾಲಿಹಾಡಿನ ಹಾಗೆ
ಮನವು ಜಾರಿತು ತಿಳಿಸದೆ ಸುದೀರ್ಘ ನಿದ್ದೆಗೆ

ಸವಿಗನಸು ಹೊಸತಾಗಿ ಆಗಲೇ ಹೆಜ್ಜೆ ಇಟ್ಟಿತ್ತು
ರಸಹೀರುವ ಕ್ಷಣವು ತುಟಿಯಂಚಿಗೆ ತಲುಪಿತ್ತು
ಮನವು ಮಂದಹಾಸವ ಹೊಮ್ಮಿ ಬೀಗುತಿರಲು
ಧಿಗ್ಗನೆ ಎಚ್ಚರಿಸಿ ಕನಸೆಂದು ಮತ್ತೆ ಸಾರಿ ಹೇಳಿತು

ಹಾಯಾಗಿ ಆಯಾಸವ ನೀಗಲು ಇತ್ತೊಂದೆ ಮದ್ದು
ಅನುಭವಿಸುವ ಆಸೆ, ಹವ್ಯಾಸ ಎನಗೆ ದಿನಾ ಹಾಗೆ
ಬೇಸಿಗೆಯ ತಣಿಸಲೆನಗೆ ಇರುವುದೊಂದೇ ಮಾರ್ಗ
ಮರದ ನೆರಳಡಿ ನಿದ್ರೆಯ ಸುಖದೊಳಗಿದೆ ಸ್ವರ್ಗ

May 20, 2008

ಏಕೋ ಎನೋ

ಏಕೋ ಎನೋ ಈ ಏಕಾಂತ ಹಬ್ಬಿ
ಸುತ್ತಲಿರುವ ಸನ್ನಿವೇಶ ಸಪ್ಪೆಯಾಗಿ
ಮೌನವೇ ಮಾತಾಗಿದೆ ಇಂದೇಕೋ
ಕೋಪಕೆ ಕಾರಣವೇನೆಂದು ತಿಳಿಸದೆ

ಮುನಿಸು ಮೂರು ನಿಮಿಷಕೆ ಮರೆತಿಹೆ
ನಮ್ಮಿಬ್ಬರ ಒಪ್ಪಂದ ಮೊದಲಿನಿಂದ
ಇಲ್ಲಿರುವುದೆಲ್ಲ ಇಹವು ಬಯಸಿದಂತೆ
ನೀನು, ಏಕಾಂತದಿ ಏಕಾಂಗಿ ನಾನು

ಪರಿಚಯದ ದಿನದಿಂದಲೇ ಪರಿಚಿತರ
ಜೊತೆಗಿರುವುದು ನನಗೆ ಬಹಳ ವಿರಳ
ಪರಿಸ್ಥಿತಿ ಅರಿವಾಯಿತಾದರೂ ವಿಷಯ
ಹೊರಗೆ ತೋರುವಂತೆ ಇರಲಿಲ್ಲ ಸರಳ

ಉತ್ಸಾಹದ ಕೊರತೆ ಕಾಡುತಿರಲೆನ್ನ
ಚೈತನ್ಯವೆಲ್ಲವೂ ಹಿಡಿದಿಟ್ಟು ನಿನ್ನಲ್ಲಿಯೆ
ಸೋಲು ಗೆಲುವಿನ ಪ್ರಶ್ನೆ ಇದಲ್ಲ ಗೆಳತಿ
ಮುಂದೆ ಜೊತೆಗೇ ಸಾಗುವ ಯತ್ನ

ಎಲ್ಲ ಇದ್ದರೂ ನನಗೆ ಏನೂ ಇರದಂತೆ
ನೀನಿದ್ದರೆ ಸಾಕೆನಗೆ ಎಲ್ಲವೂ ಇದ್ದಂತೆ
ಏಕಾಂತದಲಿ ಕಾಂತ ಕಾದು ಕುಳಿತಿರೆ
ಬಿಡು ಬಿಂಕ ಬೆಡಗಿ ಬೆಳಗಾಗುವ ಮುನ್ನ

ಬಿಗುಮಾನ ನಮ್ಮೊಳಗೆ ನಮಗೇಕೆ
ಅವತರಿಪ ಅನುಮಾನ ಹೊರಗಿಟ್ಟು
ಒಲವೆಂಬ ಹಣತೆಯ ಬೆಳಗು ನೀನು
ಜಗವೆಂಬುದನು ಮರೆತು ಬರುವೆನು

May 19, 2008

ಗುರಿಯೊಂದಿತ್ತು

ಹಕ್ಕಿ ಹಾರುತಾ ಅಲ್ಲಲ್ಲಿ ಏನನೋ ಹುಡುಕುತಿತ್ತು
ನಾನೂ ಹುಡುಕುತಲೇ ಇರುವೆ ಏನೆಂದರಿಯದೆ
ಹೊಸ ಹುರುಪಿಂದ ಹಕ್ಕಿ ಹಾರಾಡುತಲೇ ನನ್ನತ್ತ
ಬಂದಿತ್ತು, ಆಗಲೇ ಅದಕೆ ಬೇಕಾದುದು ಸಿಕ್ಕಂತ್ತಿತ್ತು

ನನಗೆ ತಿಳಿಯ ಬೇಕಿತ್ತು ನನ್ನ ಹಾದಿ ಯಾವುದೆಂದು
ಹಕ್ಕಿ ಆರಿಸುತ್ತಿತ್ತು ಅಲ್ಲಲ್ಲಿ ಬಿದ್ದಿರುವ ಹುಲ್ಲು ಕಡ್ಡಿಗಳ
ನನ್ನ ಗುರಿಯಾಗಿತ್ತು ಬೆಟ್ಟದ ತುದಿಯ ಮುಟ್ಟಲೆಂದು
ಒಂದೊಂದನು ಹೆಕ್ಕಿ ತಂದು ಪೇರಿಸುತ್ತಿತ್ತು ಮರದಲಿ

ತುದಿಯ ಮುಟ್ಟಲು ಕಾರ್ಯತಂತ್ರ ರೂಪಿಸಲೆತ್ನಿಸುತ್ತಿದ್ದೆ
ಉತ್ಸಾಹ ಬೆಟ್ಟದಷ್ಟಿತ್ತದಕೆ ಅದರ ಕೆಲಸದಲೇ ತಲ್ಲೀನತೆ
ಹತ್ತಾರು ಸ್ವರೂಪಗಳ ತಯಾರಿಯಲ್ಲೇ ನಿರತನಾಗಿದ್ದೆ
ಹತ್ತರಷ್ಟಾಗಲೇ ಕಾರ್ಯ ಮುಗಿಸಿ ಮುಂದುವರೆಸಿತ್ತು

ಯಾವ ಹಾದಿಯಲಿ, ಎಷ್ಟು ಬೇಗನೆ ತಲುಪಬಹುದು ಗುರಿ
ಈ ವಿಷಯವೇ ನನ್ನ ಬುದ್ಧಿಶಕ್ತಿಯ ಕೇಂದ್ರಬಿಂದುವಾಗಿತ್ತು
ತಂತ್ರ ಯಂತ್ರಗಳ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿರಲು
ಇದ್ದಲ್ಲಿಯೇ ಇವೆಲ್ಲದರ ಪರಿಕಲ್ಪನೆ, ಪರಿಶೀಲನೆ ಹೊಸದಿತ್ತು

ಹಕ್ಕಿ ನನ್ನೆದುರಲೇ ತನ್ನ ಗೂಡಾಗಲೇ ಕಟ್ಟಿ ಮಗಿಸಿತ್ತು
ತನ್ನ ಪ್ರಿಯಕರನ ಹುಡುಕಾಟವನಾಗಲೇ ಶುರುಮಾಡಿತ್ತು
ನನ್ನ ಗುರಿಯು ಗುರಿಯಾಗಿಯೇ ತುಂಬಾ ಎತ್ತರದಲ್ಲಿತ್ತು
ಕಾರ್ಯತಂತ್ರಗಳು ಪುಸ್ತಕಕ್ಕೇ ಮೀಸಲಾಗಿ ಧೂಳೇರಿಸಿತ್ತು

ಅತಿಜಾಗರೂಕತೆಯಿಂದ, ಆಯ್ಕೆಗಳು ಅತಿಯಾದಾಗ
ನಿರ್ಧಾರ ವಿಳಂಬವಾದಾಗ, ಕಾರ್ಯರೂಪವಾಗದೇ
ಪ್ರತಿಕೂಲ ಪರಿಣಾಮಗಳನೆದುರಿಸುವ ಹುಮ್ಮಸ್ಸಿನ
ಕೊರತೆ ಕಾಡಿದಾಗ ನನ್ನ ಗುರಿ ಎತ್ತರದಿಂದ ನಗುತ್ತಿತ್ತು

ಹೊರಟಿರುವೆ

ಬಿಟ್ಟು ಹೊರಟಿರುವೆ ಎಲ್ಲ ಪ್ರಶ್ನೆಗಳನು
ಉತ್ತರಗಳಿರದವೆಲ್ಲವು ನಿಮಗಾಗಿಯೆ
ಎತ್ತರವನೆಂದೂ ನಾನು ಬಲ್ಲವನಲ್ಲ
ಅಂತರಾಳ ಹೇಳಿದಂತೆ ನಡೆದವನು

ಒತ್ತಡಕೆ ಮಣಿದದ್ದು ಆಗಾಗ ನಿಜವೆ
ತತ್ತರಿಸಿ ಹೋದವನು ನಾನಲ್ಲವಲ್ಲ
ಇತ್ತವರು ಇರದವರೆನ್ನ ಸ್ನೇಹಿತರು
ಇದ್ದಲ್ಲಿಯೇ ಇದ್ದು ಸುಖವನುಂಡವರು

ತಡವಾದುದಕಿಲ್ಲ ಬೇಸರ, ಕೊನೆಯ
ಪುಟದಲೂ ನನಗೆ ತಿಳಿಯಲಾಗಲಿಲ್ಲ
ಜಾಣರ ಮಧ್ಯೆ ನಾನಿದ್ದದ್ದು ನಿಜವೇ
ಅವರಂತೆ ಹರಿಸುವುದು ತಪ್ಪಲ್ಲವೆ

ನೀಳಾಕಾಶದಾಚೆಗೆ ಏನಿದ್ದಿರಬಹುದು
ಕುತೂಹಲಕ್ಕಾದರೂ ಒಮ್ಮೆ ಕೇಳುವೆ
ಇತಿಮಿತಿಗಳ ಹಿತದಲ್ಲೇ ಮುಗಿಸಿದೆ
ನನ್ನಾಟ, ಪ್ರಶ್ನೆಗಳೇ ತಡವಾದವೆ

ತೂಕಡಿಸಿ, ತೂಕಡಿಸಿ ತೂಕಬೆಳೆಸಿ
ಹೊರಗಿದ್ದ ತಿರುಳೆಲ್ಲವೂ ಅಡಗಿಸಿ
ಮತ್ತೆ ಇತಿಮಿತಿಗಳ ಜಗದಲ್ಲಿ ಮಿಂದು
ಎದ್ದು ಬರಲಾಗದೇ ಸದ್ದು ಮಾಡದೆ

ಆಳ, ಅಗಲಗಳನಂಟು ಇಷ್ಟವಾಗಿದೆ
ಈಗ, ನಾನಲ್ಲಿ ಇಲ್ಲದಿರುವಾಗ ಗೊತ್ತೆ
ಗೆಳೆಯ ಹೇಳಬೇಕೆಂದಿರುವೆ ನಿನಗೆ
ಬಿಟ್ಟು ಬರಬೇಡ ನೀ ಪ್ರಶ್ನಗಳ ಗಂಟು

ಕರೆ

ಕರೆ ಬಂದೆಡೆಗೆ ಕಣ್ಣೊರಡುವುದು ಸಹಜ
ಯಾವ ದಿಕ್ಕಿಂದ ಬಂದಿರುವ ಕರೆ
ಎಂದು ತಿಳಿಯದಾದಾಗ
ಗೊತ್ತಿತ್ತು ಒಬ್ಬನಿಗೇ
ನಿಜ

ಕರೆಗಾಗಿ ಕಾಯುವುದು ಲೇಸಲ್ಲ ಸರಿಯೆ
ಆದರೂ ಏಕೋ ಕರೆಗಾಗಿಯೇ
ನಿರೀಕ್ಷೆಯಿಟ್ಟು ಕಾದಿದ್ದಂತೂ
ನಾನು ಖಂಡಿತ
ನಿಜ


ಯಾರದು, ಎಲ್ಲಿಂದ, ಏಕೆ, ಹೇಗೆ
ಎಂಬ ಪ್ರಶ್ನೆಗಳು ಬಹಳ
ಅದಕೆ ಉತ್ತರವಿಲ್ಲ
ಸರಳ, ಅದರೂ
ಕುತೂಹಲ

ಬಿಂಕ ಬಿಡುವವರು ನೀವಲ್ಲ ಅರಿತಿರುವೆ
ಅನುಸರಣೆ ಸರಿಯಲ್ಲ ಎಂಬ ನಂಬಿಕೆ
ಆದರೂ ಸುಮ್ಮನಿರಲಾರೆನೇಕೆ
ಮತ್ತೆ ನಾನು ಮೌನಕೆ
ಶರಣಾಗಬೇಕೆ

ತುಂಬ ಕಷ್ಟಕರವಾದುದು ಕಾಯುವುದಲ್ಲವೇ
ನಿಮಗೂ ಹಾಗೆಯೇ ಇದ್ದಿರಲೂಬಹುದು
ಹಲವಾರು ಊಹೆಗಳು ಒಳಹೊಕ್ಕು
ಚುರುಕು ಮುಟ್ಟಿಸಿ ಮತಿಗೆ
ಮತಿಹೀನ ಮನಕೆ

ಸಂಯಮದ ಪರೀಕ್ಷೆಯೆಂದು ತಿಳಿಯುವೆ ನಾನು
ಅಂತಿಮ ಘಟ್ಟ ತಲುಪುವವರೆಗೂ
ನನ್ನಲ್ಲಿ ಸಹನೆ ಇರುವುದು
ಸಹ ಇದೇ ನನಗೆ
ತಿಳಿಸಿದ್ದು

ಕಾಯುವುದು ಕಲಿಸಿದ್ದು ಇನ್ನೂ ಬಹಳ ಇದೆಯಲ್ಲ
ಕರೆಗಾಗಿ ಕಾದಿರುವುದು ನೆಪ ಮಾತ್ರಕೆ
ಕ್ರಿಯೆ ಮರೆತು ಕಾದಿದ್ದು ತಪ್ಪಲ್ಲವೇ
ಗೊತ್ತಾಗಿದೆ, ಅದರೆ ಬಹಳ
ತಡವಾಗಿದೆ

ಸಂಯಮ, ಸಹನೆ ಇದ್ದರೇ ಸಾಕಾಗುವುದಿಲ್ಲ
ಒಂದು ಕ್ಷೇತ್ರವ ಹರಸಿ, ಆ ಹಾದಿಯಲ್ಲೇ
ಪಯಣಿಸಿ, ಪರಿಶ್ರಮಕ್ಕೆ ಒತ್ತು ನೀಡಿ
ಪ್ರತಿಫಲವ ಅಪೇಕ್ಷಿಸುವುದು
ಸಮಂಜಸವೇ

ಅದೃಷ್ಟದ ಪರೀಕ್ಷೆಯ ಜೊತೆಗೆ ಅತಿಯಾದ ನಿರೀಕ್ಷೆ
ಅತೃಪ್ತಿ, ಅಸಮಾಧಾನ, ಅಸಂತೋಷಗಳ
ಜೊತೆ ನಾ ನರಳಿದ್ದೆ ಸತತ
ಹೊರಬಂದ ನಂತರವೇ
ಸಿಕ್ಕಿದ್ದು ವಿವರ

May 17, 2008

ನೆರಳು

ಹುಡುಕುತಿರುವೆ ಮತ್ತೆ ಮತ್ತೆ
ಯಾರ ನೆರಳು ಬಯಸುತಾ
ದೈವವಿತ್ತ ವರವ ಒಪ್ಪಿ ನೀನು
ಇರುವ ನೆರಳಲಿ ಸುಖವಕಾಣು

ನೇರವಲ್ಲ ನೀನಿರುವ ಜಗವು
ಸಿಗುವುದಿಲ್ಲ ನಿನಗೆ ನೆರವು
ಬಿಡದೆ ಬೀಸೋ ಬಲೆಗಳಲ್ಲಿ
ಸಿಗದೆ ಸಾಗು ಸಂಯಮದಲಿ

ಹಿಂದೆ ಎಂದೂ ನೋಡಬೇಡ
ಮುಂದೆ ಬರುವುದ ಬಿಡಬೇಡ
ಅಕ್ಕ ಪಕ್ಕ ಇರುವ ಹಸಿರನು
ನಿನ್ನದೆಂದು ತಿಳಿಯ ಬೇಡ

ಮೆತ್ತಗಿರುವ ಹೂವ ಹಾಸಿನ
ಕೆಳಗೆ ಮುಳ್ಳಿರಬಹುದು ಎಚ್ಚರ
ಜಡ ಮೊಗದವರೊಳಗೊಂದು
ಮಗುವಿರಬಹದು ತಿಳಿಯದರ

ದಿಕ್ಕುಗೆಟ್ಟವರಂತೆ ತೋರದಿರು
ಭಯವನೊಳಗೆ ಗಟ್ಟಿ ಕಟ್ಟಿಬಿಡು
ಉದ್ವೇಗಕೆ ಎಡೆ ಮಾಡಿಕೊಡದೆ
ನಡೆವ ಹಾದಿಯೆಂದು ಬಿಡದಿರು

ಪಟ್ಣದ್ ಜೀವ್ನ

ಕೆಲಸಕ್ಕೋಗ್ಬೇಕ್ ನನ್ನಾಕಿ
ಮನೇಲ್ ಮಗೂನ್ ಕೂಡಾಕಿ
ಗಡಿಬಿಡೀಲ್ ಮುಂಜಾನೇಳ್ತಾಳೆ
ಪಟಾಪಟ್ ತಯಾರಾಗ್ತಾಳೆ

ಬ್ರೆಡ್ ಟೋಸ್ಟ್, ಅಮ್ಲೆಟ್, ಹನಿ ,
ಜಾಮ್, ಚೀಸ್, ಬಟರ್ ಕೊಟ್ಟು
ಮಗೂಗ್ ಹಾರ್ಲಿಕ್ಸ್ ಮರೀಬೇಡಿ
ಸ್ಕೂಲಿಗ್ ಡಬ್ಬಿ ತಯಾರ್ ಮಾಡಿ

ಇಡ್ಲಿ ಚಟ್ನಿ, ದೋಸೆ, ಅಕ್ಕಿರೊಟ್ಟಿ
ನನ್ನಮ್ಮಾಗಿಷ್ಟ, ಸಿಗೋದ್ ಕಷ್ಟ
ರಾತ್ರಿ ಮಾಡಿದ್ ಸಾಂಬಾರನ್ನೇ
ಮಧ್ಯಾಹ್ನ ಅಡ್ಜಸ್ಟ್ ಮಾಡ್ಕೊಮ್ಮ

ಟಾಟಾ ಬೈ ಬೈ ಚಿನ್ನೂಗ್ಹೇಳಿ
ಬಸ್ಸ್ಟಾಪಿಗೆ ಡ್ರಾಪ್ ಕೊಡಕ್ಹೇಳಿ
ದಾರೀಲ್ ಎಳ್ನೀರ್ ಕುಡಿದ್ಬಿಟ್ಟು
ಬಂದಿದ್ ಬಸ್ಸಿಗೆ ಹತ್ತಿಸಿ ರೈಟು

ಸಿಕ್ಕಿದ್ ತಿಂದ್ಬಿಟ್ ಅಮ್ಮಾಗ್
ಹೇಳ್ಬಿಟ್ ಆಪೀಸ್ಗೆ ಹೊರಟ್ರೆ ನಾ
ಪೋನ್ಮಾಡಿ ಮಗು ಸ್ಕೂಲಿಂದ್
ಬಂದ್ಮೇಲೆ ಮನಸೀಗ್ ಒಸಿ ಸಮಾಧಾನ

ಮತ್ತೆ ಭೇಟಿ ಸಂಜೇಗ್ ಏಳಕ್ಕೆ
ಆಯಾಸ್ಸಕ್ಕೆ ಕಪ್ ಚಾ ಬಿಸ್ಕತ್ತ
ಮಗೂನ್ ಆಡ್ಸೋದ್ ನನ್ಗಿಷ್ಟ
ಊಟದ್ ತಯಾರಿಗೆ ಸ್ವಲ್ಪ ಕಸರತ್ತ

ಸಿಕ್ಸಿಕ್ ಟೈಮ್ನಾಗ್ ಟೀವಿ ಹಚ್ಚಿ
ಸೀರಿಯಲ್ ನೋಡೋಕ್ಕುಂತ್ರೆ
ಇರೋರ್ ಪಕ್ಕ, ಬಂದಿದ್ ಬಳ್ಗ
ಯಾರೀಗ್ ಬೇಕ್ ಆ ತೊಂದ್ರೆ

ಒಂದೇ ಗೂಡಲ್ಲಿದ್ದರೂ ನಾವು
ಕೊಂಡಿ ಕಳಚಿದ ಅಪರಿಚಿತರಂತೆ
ಪಟ್ನದ್ ಜೀವ್ನ ಪರಿ ಪರಿ ಬಣ್ಣ
ಯಾರಿಗ್ ಬೇಕ್ ನೀವ್ ಹೇಳ್ರಣ್ಣ

ದಿನ ದಿನ ಹೀಗೇ ಇದ್ಬುಟ್ರೆ
ಬದುಕೊಂದು ಮಶಿನಂಗಾಗ್ಬುಟ್ರೆ
ಮಾತಿಗೆ ಸಮಯ ಸಿಗದಣ್ಣ
ಜಗಮಗ ಜಗದಲಿ ನಗುವೆಲ್ಲಣ್ಣ

ಅಮ್ಮ ಅಪ್ಪ ಮಗೂಗ್ ಸಿಗೋದ್ ಕಷ್ಟ
ನನ್ನಮ್ಮನಿಗೆ ಇದೇನೂ ಇಲ್ಲ ಇಷ್ಟ
ಇಬ್ಬರು ದುಡೀದೆ ಮನೆ ನಡೆಯೋದ್ ಕಷ್ಟ
ಹಳ್ಳೀಗ್ ಹೋಗೋಕೆ ಯಾರ್ಗಿಲ್ಲ ಇಷ್ಟ

ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲೂ
ಮನಸೀಗ್ ಒಸಿ ನೆಮ್ದಿ ಸಿಗೋಲ್ಲ
ಏನು ಮಾಡಲಿ ಕೂಡಲ ಸಂಗಮ
ನಾನಾಗ್ಬಿಡಲೇ ಈಗಲೇ ಜಂಗಮ

May 15, 2008

ನೀನಿದ್ದಂತೆ

ನೀನಿದ್ದಂತೆ ಇದ್ದುಬಿಡು ಶಿವನೆ
ನಿಶ್ಚಿಂತನಾಗಲು ಯತ್ನಿಸುತ
ಕುರುಡು ಅನುಸರಣೆ ತರವಲ್ಲ
ಗೆಳೆಯ ಇದು ಸೃಷ್ಠಿಕರ್ತನ ಆಜ್ಞೆ

ಯಾವುದೋ ಕಾರಣ ಬಂದಿರುವೆ
ಅರಿಯುವ ಪ್ರಯತ್ನದಲೇ ಇರುವೆ
ಜಯವು ನಿಶ್ಚಿತ ನಿನಗೆ ದೇವರಾಣೆ
ಸುಲಭವಲ್ಲ ನಿಜ ಹಾದಿ ಬಿಡಬೇಡ

ಮಗುವಾಗು, ಯುವಕ ನೀನಾಗು
ಮಧುಮಗನಾಗು ನೀ ಪತಿಯಾಗು ,
ಪಿತನಾಗು ಜೊತೆಗೆ ಮರೆಯದೇ
ಗೆಳೆಯ ನೀನಾಗು, ನೀನು ನೀನಾಗು

ಈ ದಿಶೆಯ ಪ್ರಗತಿಯಲೇ ಹಣತೆ
ಇಟ್ಟಂತೆ ಇದ್ದಕಡೆಯೆಲ್ಲಾ ಬೆಳಗುತ
ನೀನು ನೀನಾಗಿ ಕಷ್ಟಸಾಧ್ಯ ಆದರೂ
ಬೆಂಬಿಡದೆ ಮಾನವನಾಗಲು ಬಯಸಿ

ಇತಿಮಿತಿಗಳೊಂದಿಗೆ ಸ್ಪಷ್ಟನೋಟದ
ನೆರವಿಂದ ಅಡೆತಡೆಗಳನೋಡಿಸುತ
ದಿಟ್ಟ ಪರಿಶ್ರಮವಿರಲು ಪ್ರತಿಫಲದ
ಗೋಜೇಕೆ ಕಲಿತ ಪಾಠವಿದೆ ಯತ್ನಕೆ

ನೀನು ನೀನಾಗದಿರೆ ಎಂದೆಂದಿಗೂ
ಆ ಜಾಗ ಖಾಲಿಯಾಗಿಯೇ ಖಚಿತ
ನೀನಿಲ್ಲಿರುವ ಉದ್ದೇಶ ಸೋತಂತೆ
ಬಂಧು ನೀನಾಗು, ನೀನು ನೀನಾಗು

ನೀನೇಕೆ

ಚಡಪಡಿಸುವೆ ಚೆಲುವೆ ನೀನೇಕೆ
ಅಮೂರ್ತಗಳ ಭಯವು ನಿನಗೇಕೆ
ಮೂರ್ತನಾಗಿ ನಾ ಎದುರಿಗಿರಲು
ಸ್ಥಾಪಿಸೆನ್ನನು ಎದೆಯಗೂಡೊಳಗೆ

ಯಾವುದೋ ಕೊರತೆ ನಿನಗಿದ್ದಂತೆ
ಯಾವ ನೋವೋ ನಿನ್ನ ಕಾಡಿದಂತೆ
ನಿನ್ನ ಮೊಗವದಕೆ ಕನ್ನಡಿಯಾಗಿದೆ
ನನಗೀಗಲೇ ಸರಿಉತ್ತರ ಬೇಕಾಗಿದೆ

ಭಾವಗಳ ಅಡಗಿಸಿರುವೆ ನಿನ್ನೊಳಗೆ
ಹುಸಿ ನಗುವ ತೋರುತಲೇ ಹೊರಗೆ
ಏಕಾಂಗಿಯಾಗಿರಲು ನೀ ಬಯಸುವೆ
ನಿನಗೇ ಎಲ್ಲ ಪ್ರಶ್ನೆಗಳನು ಮೀಸಲಿಟ್ಟು

ಒಡೆದ ಕನ್ನಡಿ ತೋರುವ ಅಷ್ಟೂ
ಚಿತ್ರಗಳು ಹೇಳುತಿರುವುದೊಂದೇ
ಬಿರುಕು ಬಿಟ್ಟಂತೆ ಭಯಾನಕ ಶಬ್ದ
ನಿಶಬ್ದ ಮರುಕ್ಷಣಕೇ ಮೌನ ಹರಡಿ

ನನಗಿಲ್ಲ ಬೇಸರ ಯಾವ ಅಭ್ಯಂತರ
ಇಲ್ಲ ಆತುರ ಸಿಗುವುದಾದರೆ ಉತ್ತರ
ಸಹಕರಿಸುವೆ ಸಂಯಮದಿ ಕಾಯುವೆ
ನೆರವಾಗುವುದಾದರೆ ಮಾತ್ರ ಬರುವೆ

May 14, 2008

ಕವನ ನೀನು

ಕಥೆಯು ನೀನು ಕವನ ನೀನು
ಜೀವ ನೀನು ಜಗವು ನೀನು
ನನ್ನಾಸೆ ನೀನು ಭಾಷೆ ನೀನು
ಕನಸು ನೀನು ಮನಸು ನೀನು

ಗೆಳತಿ ನೀನು ಗೆಳೆಯ ನಾನು
ಜೊತೆ ನೀನಿರೆ ಬೇರೆ ಬೇಕೇನು
ಸುಖನಿದ್ರೆಯನು ಹೆದರಿಸಿರುವೆ
ಮುಗ್ಧ ಮುಖದಿ ಸುಮ್ಮನಿರುವೆ

ನೂರಾರು ಪ್ರಶ್ನೆ ಎಸೆದು ನೀನು
ಮೌನದಲೇ ಉತ್ತರವ ಕೊಡುವೆ
ಬೆಳಕಿದ್ದ ಕಡೆ ಕತ್ತಲು, ಕತ್ತಲಿದ್ದೆಡೆ
ಬೆಳಗೋ ಬಾಳಜ್ಯೋತಿ ನೀನು

ದಿನವು ಜಗಳ ಇರಲು ಬಹಳ
ಸರಳ ನುಡಿಯ ಸರಸ ಗಾಳ
ನಿನ್ನ ನಗುವಲ್ಲೇ ಬೆಳದಿಂಗಳ
ಮನ ಮನೆಯ ಬೆಳಗುವವಳ

ಸಂಸಾರ ಸಾಗರದಿ ತೇಲುತಲೇ
ಬಿರುಗಾಳಿಗೆ ಎದೆಯೊಡ್ಡಿ ನಿಲ್ಲುತ
ತಂಗಾಳಿಯ ಸುಖ ನನಗೆ ನೀಡುತ
ಸದಾ ನಿಲ್ಲದೇ ಸಾಗುವ ನದಿ ನೀನು

ಪರಿಮಳ ಭರಿತ ಪುಷ್ಪಗಳ ರಸವೀರಿ
ಗೂಡಾಗಿಸಿ ಜೇನಾಗಿಸಿ ಅದರಲಿರಿಸಿ
ರಸಭರಿತ ಫಲಗಳ ಕಾದಿರಿಸಿ ವಾರೆ
ನೋಟದಿ ಎಲ್ಲ ತಿಳಿಸೊ ಜಾಣೆ ನೀನು

ಬೆಳಕು ನೀನು ಬದುಕು ನೀನು
ಸುರಿವ ಮಳೆ ಹನಿಯು ನೀನು
ಬಿಸಿಲು ನಾನು ಬೆವರು ನೀನು
ಇರಲು ಜೊತೆಗೆ ನಾನು ನೀನು

ಜಯವಾಗಲಿ

ಜಯವಾಗಲಿ ಜಯವಾಗಲಿ ಜಾಣ ಜಾಣೆಯರಿಗೆ
ತುದಿಗಾಲಲ್ಲಿ ನಿಂತು ನಿಲ್ಲದೇ ಮಾತಾಡುವವರಿಗೆ
ಜಗದ ನಿಯಮದಂತೆ ಜಾರುತಿರಲಿ ಆಗಸದಿಂದ
ಬೆಳಕು ಬೆಳದಿಂಗಳು ಕಗ್ಗತ್ತಲು ಹೊಳೆವ ತಾರೆಗಳು
ಹಾಗೆ ಎಂದಿನಂತೆ ಮುಂಗೋಪ ತರವೇ ಅವರಿಗೆ
ನಿಲ್ಲದಿರಲಿ ಬೆಳ್ಳಿಮೋಡ ಕರಗಿ ಹನಿಯಾಗಿ ಇಳೆಗೆ
ಮುಂಗಾರು ಹಿಂಗಾರು ಸೋನೆ ಮಳೆಯಾಗಿ ಧರೆಗೆ
ಇಟ್ಟವರಾರಿದಕೆ ಮನಬಂದಂತೆ ಹೆಸರುಗಳನೆಷ್ಟೋ
ಅರ್ಥವಾಗದ ನಿಗೂಢ, ಮೂಢ, ಮರ್ಮಗಳೆಷ್ಟೋ
ಬಲ್ಲವರು ಬಲ್ಲಿದರು ಬದುಕಲಿ ಇಲ್ಲಿಯೇ ಕೊನೆವರೆಗೆ
ಎಂದಿನಂತೆ ಚಿಂತೆಮಾಡದೇ ನಾಳೆ ನಾಳಿನ ಕಂತೆ
ದಿನವೂ ದೂಡುವುದು ಹೊಸತಲ್ಲ ತಿಳಿದಿದೆ ನಮಗೆ
ಇದ್ದರೇನಂತೆ, ಬಿದ್ದರೇನಂತೆ, ಎದ್ದರೇನಂತೆ ಚಿಂತೆ
ಜಗವು ನಡೆಯುತಿರೆ ದಿನವು ಅದರ ನಿಯಮದಂತೆ
ಕೂಡುವುದು ಕೂಡಿಡುವುದು ಬಡವನಿಗೆ ಕೊಡದಂತೆ
ಅವರವರ ಕರ್ಮವಷ್ಟೇ ದೇವರ ನಿರ್ಧಾರ ಸೌಜನ್ಯಕೆ
ಅವರವರ ಪಾಲು ಅವರವರ ಹೇಳಿಗೆ ತಕ್ಕ ಪ್ರಯತ್ನಕೆ
ಕೊಡಬಲ್ಲೆ ದೇವರಿಗೆ, ದೇಗುಲಕೆ ನಿತ್ಯ ನೈವೇಧ್ಯಕೆ
ಅವನ ಕೊಳೆ ತೊಳೆದು ನಿತ್ಯ ನಿರ್ಮಲ ಕೋಮಲನ ,
ಕೇಶವನ ಪೂಜಿಸುವವರಿಗೆ, ನಿತ್ಯ ಸುಮಂಗಳಿ
ಮುಂದೊಂದು ಬೇಡಿಕೆಯಿಟ್ಟು ಪಾಪ ಕರ್ಮಗಳ
ತೊಳೆದು ಆರೋಗ್ಯ ಐಶ್ವರ್ಯ ಸಂತಾನ ಪ್ರಾಪ್ತಿಗೆ
ಇರಲಿ ಜಗ ಎಂದಿನಂತೆ ಹಾಗಿದ್ದಲ್ಲಿ ಸುಖ ನಮಗೆ
ತಿಳಿವು ತಿರುವುಗಳು ಎಲ್ಲರ ಸ್ವತ್ತಾಗಲು ಬಿಡದೆ
ಸಕಲ ಯತ್ನವು ಸಹ ಸಾಧ್ಯವಾಗದಿರಲೆಂಬ ಬಯಕೆ
ಜಯವಾಗಲಿ ಜಯವಾಗಲಿ ಜಾಣ ಜಾಣೆಯರಿಗೆ
ತುದಿಗಾಲಲ್ಲಿ ನಿಂತು ನಿಲ್ಲದೇ ಮಾತಾಡುವವರಿಗೆ

May 13, 2008

ನಮಗೆಲ್ಲಿ ನೆಲೆ

ಬರಿ ಬಿಸಿಲಲ್ಲವೋ ಅಣ್ಣ ಇದು ಉರಿವ ಬೆಂಕಿ
ಉಳಿಗಾಲವೆಲ್ಲಿ ಬರಗಾಲವೇ ಮತ್ತೆ ಹುಡುಕಿ
ಉಸಿರುಗಟ್ಟಿರಲು ಉಸಿರಾಡಲಿಲ್ಲ ಶುದ್ಧ ಗಾಳಿ
ನೆಲೆಗೆ ನೆಲೆ ಇಲ್ಲದಿರೆ ಇನ್ನು ನಮಗೆಲ್ಲಿ ನೆಲೆ

ಸ್ಪರ್ಧೆ ಏಕೋ ಮರುಳೆ ಮತಿಗೆಟ್ಟ ಮನಸಿಗೆ
ಹುಸಿ ಬದುಕು ನಡೆಸಿ ಕೃತಕ ನಗುವೆ ಹೊರಗೆ
ಯಾರ ಮೆಚ್ಚಿಸಲು ಈ ಪರಿಯ ಆವೇಶ, ವೇಷ
ಖಾಲಿ ಕೊಡಕೆ ಕಾವು ಕೊಡುವುದೇನು ವಿಶೇಷ

ನೋಟವೆಲ್ಲಾ ಮನೆ ಒಳಗೆ ಮನೆಯ ಮಂದಿಗೆ
ಒಡನಾಟ, ಆ ಆಟ, ಈ ಮಾಟ ಸಹ ಸ್ವಹಿತಕೆ
ಸಹಜವಾದರೂ ಸರಿದಾರಿಯ ಸ್ನೇಹದ ಬಯಕೆ
ಕೈಗೊಂಡ ಕಾರ್ಯದಿಂದ ಪ್ರತಿಕೂಲ ಪ್ರತಿಫಲಕೆ

ಬೆಟ್ಟ ಹೊತ್ತಂತೆ ಮುಖ ಬಾಡಿಹುದು ಗೆಳೆಯ
ಬೇಕಿತ್ತೇ ನಮಗಿದು ನಾವೇ ತಂದ ಪ್ರಳಯ
ಕೃತಕ ಬೆಳಕಿನ ಸರಸ ಸರಿಯಲ್ಲ ಜೀವಭಯ
ಇರುವುದೂಂದೇ ಈಗ ನಮಗಿರುವ ಉಪಾಯ

ಇಂದಿಟ್ಟ ಬೀಜ ನಾಳೆ ಸಸಿಯಾಗಿ, ಗಿಡವಾಗಿ ,
ಮರವಾಗಿ, ಹೆಮ್ಮರವಾಗಿ, ಹಸಿರು ನೀಡುತ
ನೆರಳಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿ
ನಾಳೆ ಬರುವ ನಮ್ಮವರ ಬದುಕು ಹಸನಾಗಿ

ಹಣವಲ್ಲವೋ ಹೆಣವೇ ನಮ್ಮ ನಾಳೆಗೆ ನೆರವು
ಹಸಿರೇ ನಮಗೆ ಉಸಿರು ತಡ ಮಾಡಬೇಡವೋ
ಪುಟ್ಟ ಕಂದಮ್ಮನ ನಗು ಹೊಮ್ಮಲಿ ಬೆಳದಿಂಗಳು
ಚಂದದ ಹೆಸರಿಟ್ಟವರಿಗೆ ಜಗವು ಹಸಿರಾಗಿರಲು

ಗೆರೆ ಎಳೆದು

ಗೆರೆ ಎಳೆದು ಆ ಪರಿಧಿಯೊಳಗೆ
ನನ್ನ ನಾ ಹುಡುಕುವುದರೊಳಗೆ
ನಿನ್ನೆ ಸರಿದಾಗಿತ್ತು ಆಗಲೇ
ಈ ದಿನ ಪರಿಚಯವಾಗುವಲ್ಲೇ

ಗೆರೆಯಾಚೆಗೊಮ್ಮೆ ದಿಟ್ಟಿಸುವ
ಹಂಬಲ ಆಗಾಗ ಹೊಮ್ಮಿ
ಹೊರಟಿತ್ತು ನನಗದರ
ಅರಿವು ಮೂಡುವ ಮೊದಲೇ

ನಾನೇನು ಸುಮ್ಮನೆ ನಿಂತವನಲ್ಲ
ಎಲ್ಲರಂತೆ ಗೊಂದಲಗಳಿದ್ದವಲ್ಲಾ
ಅವರ ನೋಡಿಯೇ ನನಗೆ
ಪಾಠ ಕಲಿಯಬೇಕಿರಲಿಲ್ಲ ನಿಜವೇ

ಅವರಂತೆ ನಾನಾಗಲೂ ಸಾಧ್ಯವೆ
ಆದರೂ ಅದು ನ್ಯಾಯವೇ
ನನ್ನ ಹಾದಿಯ ಪರಿ ಹುಡುಕುವ
ಯತ್ನದಲೇ ನಾ ಕಳೆದು ಹೋಗಲೇ

ಇದ್ದ ಕ್ಷಣವನು ಒದ್ದು ಇರದ ನಾಳೆಯ
ಬಗ್ಗೆ ಕುರಿಯ ಮಂದೆಯ ಹಾಗೆ
ಮುಗ್ಗರಿಸಿ ಬಿದ್ದು ಎದ್ದು ಮತ್ತದೇ
ಜಾಗಕ್ಕೆ ಸಂಜೆ ಮರಳಿ ಬರಲೇ

ಎಲ್ಲ ಧಿಕ್ಕರಿಸಿ ಕಣ್ಮುಚ್ಚಿ ಒಮ್ಮೆಗೆ
ಗೆರೆಯ ದಾಟಿ ನಾ ಹೊರಟು ಬಿಡಲೇ
ಇರುವಲ್ಲಿ ಮತ್ತೆ ಮರಳಿ ಬರದ ಹಾಗೆ
ಇನ್ನೆಲ್ಲೋ ನನ್ನ ನಾ ಕಂಡುಕೊಳ್ಳಲೇ

ಇದ್ದಲ್ಲೇ ಇದ್ದು ನರಳಿ ನಾರಾಗುವ ಮುನ್ನ
ಕೊನೆಯ ಪುಟವೂ ಓದಿ ಮುಗಿಸುವ ಮುನ್ನ
ಕತ್ತಲ್ಲಲ್ಲೇ ಬದುಕು ಕಳೆದು ಹೋಗುವ ಮುನ್ನ
ಬೆಳಕು ಇರುವಲ್ಲಿಗೇ ಗೆರೆಯಾಚೆಗೊಮ್ಮೆ ನಾ ಓಡಲೇ

May 12, 2008

ನಿನ್ನ ಮನದಂಗಳದಿ

ನಿನ್ನ ಮನದಂಗಳದಿ ನಲಿಯಬೇಕೆಂದಿರುವೆ
ನಿನ್ನ ಕಣ್ಣಿನಾಳದಿ ಜಗವ ಕಾಣಬೇಕೆಂದಿರುವೆ
ನಿನ್ನ ನಗುವಿನಲೇ ಮಗುವಾಗಬೇಕೆಂದಿರುವೆ
ನಿನ್ನ ನೋವಿಗೆ ನಾ ಕಣ್ಣೀರ ಹರಿಸಬೇಕೆಂದಿರುವೆ

ನನ್ನ ಜಡಮನಕೆ ನೀನು ಚಲನ ತಂದಿರುವೆ
ಭಾವವರಿಯದ ನನಗೆ ಬದುಕು ಕಲಿಸಿರುವೆ
ಕಥೆಯು ಮುಗಿಯುವ ಮುನ್ನ ಜೊತೆಗಿರುವೆ
ನೀನನ್ನ ಕತ್ತಲ ಪಯಣಕೆ ಬೆಳಕ ತಂದಿರುವೆ

ಭರಪೂರ ನಾನಿನ್ನ ನೋಡಬೇಕೆಂದಿರುವೆ
ನಿನ್ನ ಮಾತಿನ ಸಿಹಿ ಸವಿಯಬೇಕೆಂದಿರುವೆ
ಮುಂಜಾವಿಗೆ ಕಾದು ಬೆಳಗಾಗಲು ನಾನೆದ್ದು
ಗಡಿಬಿಡಿಗೆ ಬೆರಗಾಗಿ ಅಮ್ಮ ನೋಡಲು ಕದ್ದು

ನನ್ನ ಬದಲಾದ ನಡತೆಗೆ ಉತ್ತರ ನೀನಲ್ಲವೆ
ಒಮ್ಮೆ ನಿನ್ನ ಅಮ್ಮನಿಗೆ ಪರಿಚಯಿಸಿ ಬಿಡುವೆ
ಆಗಲೇ ನನಗೆ ನೆಮ್ಮದಿ, ನಿಟ್ಟುಸಿರು ಚೆಲುವೆ
ಧೈರ್ಯದಿ ದಿನವು ನಿನ್ನ ನೋಡಲು ಬರುವೆ

ನವಿರಾದ ನೂರು ಕಣ್ಣಿನ ನವಿಲಗರಿಯ ಕಾಣಿಕೆ
ಮೃದು ನುಡಿಯ ಮಲ್ಲಿಗೆಗೊಂದು ಮತ್ತಿನಸರ
ನೆನಪಿಗೆ ನಿನ್ನ ಬೆರಳಿಗೊಂದು ಪ್ರೀತಿಯುಂಗುರ
ಜೋಪಾನ ಜಾಣೆ ನನ್ನ ಹೃದಯ ಬಲು ಹಗುರ

May 2, 2008

ಗಾಜಿನರಮನೆಯಲ್ಲಿ*

ಗಾಜಿನರಮನೆ ಕಟ್ಟಿ
ದೃಷ್ಟಿಬೊಂಬೆ ನೆಟ್ಟು
ಹಾದುಹೋಗುವರ ತಟ್ಟಿ
ನೆರೆಹೊರೆ ಮನ ಮುಟ್ಟಿದೆ.

ಸನಿಹ ಬಂದವರನೆಲ್ಲ
ದೂರ ದೂರಕೆ ಸರಿಸಿ
ಮನೆಮಂದಿ ನಡುವೆ
ಅಡ್ಡ ಗೋಡೆಯನಿರಿಸಿದೆ

ನಿಶ್ಚಿಂತನಾಗಲು ಬಯಸಿ
ನಿಶ್ಚಲ ಮನಸ್ಥಿತಿಯನರಸಿ
ನಿಶಾಚರನಾಗಿ ನಿಶೆಯಲಿ
ನಡೆದೆ.

ನೆಮ್ಮದಿ ಹೊರಗಟ್ಟಿ
ಚಿಂತೆ ಒಳಗೇ ಕಟ್ಟಿ
ಸಂತಸವ ಕೊಂಡು
ಕೃತಕ ನಗುವುಂಡೆನು.

ಲೆಕ್ಕಾಚಾರವೆಲ್ಲ
ಅದಲು ಬದಲಾಗಿ
ಒಬ್ಬಂಟಿ ತಾನಾಗಿ
ತನ್ನವರು ಇರದಾಗಿ...

ಮುಂಜಾನೆ ಮುಗಿಬಿದ್ದು
ಮಧ್ಯಾಹ್ನಕೆ ಮೇಲೆದ್ದು ನಿಂತರೆ
ಸಂಜೆ ಸರದಿಯಂತೆ
ಮತ್ತೆ ಅದೇ ಚಿಂತೆ.