Apr 29, 2009

"ಮುಸ್ಸಂಜೆ ಮುಖಾಮುಖಿ" ಬಿಡುಗಡೆಗೆ - ನಿಮ್ಮ ಆಗಮನದ ನಿರೀಕ್ಷೆ..


ಆತ್ಮೀಯರೇ,
ಹೈದರಾಬಾದಿನಲ್ಲಿರುವ ಕಾರಣ ನಿಮ್ಮನ್ನು ಇದುವರೆಗೂ ಪ್ರತ್ಯಕ್ಷವಾಗಿ ಭೇಟಿಯಾಗುವ
ಅವಕಾಶ ಕೂಡಿ ಬರಲಿಲ್ಲ.
ಆದರೆ, ಇದೇ ಸೋಮವಾರ ಮೇ 04, 2009 ರ ಸಂಜೆ 5.30 ರಿಂದ 7.30 ರವರೆಗೆ ಯವನಿಕಾ, II ಮಹಡಿ, ಕಾನ್ಪರೆನ್ಸ್ ಹಾಲ್,
ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ಒಂದು ಸಣ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮನ್ನು ಭೇಟಿಯಾಗಲು ಇದೊಂದು
ಉತ್ತಮ ಅವಕಾಶವೆಂದು ಭಾವಿಸುತ್ತೇನೆ.
ಯಾವುದೇ ಕೆಲಸವಿದ್ದರೂ ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ, ನಿಮ್ಮನ್ನು ಭೇಟಿಯಾಗುವ
ಅವಕಾಶವನ್ನು ತಪ್ಪದೇ ಕಲ್ಪಿಸಿಕೊಡುವಿರೆಂಬ ಒತ್ತಾಸೆಯೊಂದಿಗೆ ನಿಮಗಾಗಿ ಕಾತುರ ಹಾಗು ಕೂತೂಹಲದಿಂದ ಕಾದಿರುತ್ತೇನೆ.
ಅದೇ ಸಮಯದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಯನ್ನು
ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಬಿಡುಗಡೆ ಮಾಡಲಿದ್ದಾರೆ
ಹಾಗು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್, ಹೆಸರಾಂತ ವಿಮರ್ಶಕರು ಹಾಗು ಲೇಖಕರು ಬರಲಿದ್ದಾರೆ.
ಅಧ್ಯಕ್ಷತೆಯನ್ನು ಡಾ.ನಲ್ಲೂರು ಪ್ರಸಾದ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅವರು ವಹಿಸಿಕೊಳ್ಳಲಿದ್ದಾರೆ.
ಈ ಸಮಯದಲ್ಲಿ ನೀವು ಜೊತೆಯಾದರೆ ನನಗೆ ಬಹಳ ಸಂತೋಷವಾಗುತ್ತದೆ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಧನ್ಯವಾದಗಳೊಂದಿಗೆ,
- ಚಂದಿನ
( ಚಂದ್ರಶೇಖರ್, ಈಟೀವಿ ಕನ್ನಡ, ಹೈದರಾಬಾದ್ )
09391041932
email:chandinais@gmail.com

Apr 27, 2009

ಮತ್ತೆ ಬರುವನು ಚಂದಿರ - 21

ಹೆಣ್ಣು, ಹೊನ್ನು, ಮಣ್ಣು ಮಿಥ್ಯೆ
ಮಾಯಾಜಾಲದ ಮರ್ಮವಿದು
ನಿಯಂತ್ರಣ ತೊರೆದ ಕ್ಷಣವೆ
ಲೀನವಾಗಿಬಿಡುವೆ ಚಂದಿರ

ಇತಿಮಿತಿಗಳ ಹಿಡಿತದೊಳಗೆ
ಪಕ್ವವಾಗಿ ನೀನು ಮಾಗಬೇಕು
ಅನುಭವಿಸಿದ ಅದೃಷ್ಟ ಸಾಕು
ಹೊರಗೆ ಬಾರೊ ಚಂದಿರ

ಧರ್ಮ, ಅರ್ಥ, ಕಾಮ, ಮೋಕ್ಷ
ಇವು ಯಾವ ಪರಿಯ ಪುರುಷಾರ್ಥ
ನಿಯಂತ್ರಣವೆ ಮೂಲ ಮಂತ್ರ
ಬದುಕು ಬೆಳಕಿನತ್ತ ಚಂದಿರ

ಪ್ರಕೃತಿಯ ಆರಾಧಕನಾಗು
ನಿತ್ಯ ಸಂತಸ ಸವಿಸಿ ಸವಿಯುತ
ಆಧ್ಯಾತ್ಮಿಕ ಮಾರ್ಗದಿಂದ
ಧರೆಯೆ ಸ್ವರ್ಗ ಚಂದಿರ

ಮನದಲಿ ಮನೆಮಾಡಿ ಕಾಡುವ
ದ್ವಂದ್ವ ದುಂಬಿಗಳ ಹೊರಗಟ್ಟು
ಕರ್ಮ ಧರ್ಮ ಇದುವೆ ಮರ್ಮ
ಸವಿಜೇನಿನಂತೆ ಚಂದಿರ

ನವರಸಗಳ ಮಿತ ಬಳಕೆಯಿಂದ
ಸಿಗುವ ಸುಖ, ಶಾಂತಿ ಸುಂದರ
ಸರಳ ಹಾದಿ ಸಂಕೀರ್ಣವಾಗಿದೆ
ಸುರುಳಿಗಳ ಕಡಿದು ಬಾರೊ ಚಂದಿರ

ಸಮಾನಾಂತರ ರೇಖೆಗಳ ಪಯಣ
ಎಂದಾದರು ಒಂದಾಗಲು ಸಾಧ್ಯವೆ
ಸಮತೋಲನದಿಂದ ಸರಿದೂಗುವ
ಸೂಕ್ಷ್ಮತೆಯ ಅಗತ್ಯವಿದೆ ಚಂದಿರ

ಲೋಲುಪತೆಯ ನಡುವೆ ಸಾಕ್ಷಿಪ್ರಜ್ಞೆ
ಉನ್ಮಾದ, ಉದ್ವೇಗವರಿವ ಸೂಕ್ಷಜ್ಞತೆ
ಸದಾ ಎಚ್ಚರದ ಮನೋಭಾವವಿರಲು
ಸನ್ನಿವೇಶ ಸರಳವಾಗ ಚಂದಿರ

ಆಳದ ತಳಪಾಯದಿಂದ
ರೀತಿ, ನೀತಿ, ತತ್ವ, ತರ್ಕ
ವಿಸ್ತಾರವಾಗಿರಲು ನೋಟ
ನಿಲುವು ಸ್ಪಷ್ಟವಾಗ ಚಂದಿರ

ಸತ್ವವಿರದ ನಿತ್ಯ ಕಲಹಕೆ
ಬಲಿಯಾಗಬೇಡ ಗೆಳೆಯನೆ
ಸುಂದರವೊ ಜಗದ ಹರವು
ಒಮ್ಮೆ ಇಣುಕಿ ನೋಡು ಚಂದಿರ

ಮುಸ್ಸಂಜೆಯ ಮುಖಾಮುಖಿ - ನನ್ನ ಮೊದಲ ಕವನ ಸಂಕಲನ ಶೀಘ್ರದಲ್ಲಿ...


Apr 21, 2009

ಮತ್ತೆ ಬರುವನು ಚಂದಿರ - 20

ಮನವ ಕಾಡುವ ಕೆಣಕುವ ಸಂಗತಿಗಳೆ
ಕರುಣೆಯಿರಲಿ ಕಾಲ ಕಲುಷಿತಗೊಂಡಿದೆ
ಮನೆಯೊಡಯನಿಗೇ ಮತಿಗೆಟ್ಟಿರಲು
ಮತ ನೀಡುವುದು ಯಾರಿಗೊ ಚಂದಿರ

ಪರಧಿಯಾಚೆಗೂ ಹರಹು ಚಾಚಿದೆ
ಯಾರ ಪಾತ್ರವೂ ಪೂರ್ಣವಾಗದೆ
ಸುಳಿವು ಸರಳವಾಗಿ ದೊರೆಯದಾಗ
ಸರಿಪಡಿಸುವುದೇಗೆ ಹೋಳೊ ಚಂದಿರ

ಗೋಜಲುಗಳನು ಗುಡಿಸಬೇಕೆ
ನೋವುಗಳನು ಮರೆಯಬೇಕೆ
ಸುತ್ತಿರುವ ಸುರಳಿ ಬಿಡಿಸಬೇಕೆ
ಜೊತೆಗಿರುವನು ಚಂದಿರ

ಬಿಸಿಲುಗುದುರೆ ಏರಿ ಬಂದೆ
ಬತ್ತಲಾರದ ಬಯಕೆಯಿಂದ
ಭಾರವಾಗಿವೆ ಭಾವನೆಗಳು
ಭರಿಸಲಾರೆನೊ ಚಂದಿರ

ಭಾವ ಸ್ತರದ ಮೂಲ ಸೆಳೆವಿದು
ಆಪ್ತವಾಗಿದೆ ಸುಪ್ತ ಆಕರ್ಷಣೆ
ಸವಿಯುವಷ್ಟು ಸಿಹಿಯನಿತ್ತು
ಸುಖವ ನೀಡಿತೊ ಚಂದಿರ

ಭವಬಂಧನದಲಿ ಸಿಲುಕಿತಾನು
ಭಾವಲೋಕದಿ ತಡಕುತಿರುವೆ
ಬಿಡಿಸಲಾಗದ ಒಗಟು ಗೆಳೆಯ
ಹುಸಿನಗುವ ಬೀರುವ ಚಂದಿರ

ಯಾಂತ್ರಿಕ ಬದುಕಿಗೆ ಬಡವನಾಗದೆ
ಪ್ರಕೃತಿ ಮಡಿಲಿಗೆ ಮರಳಿ ಬಾರೊ
ಗುಡುಗು ಮಿಂಚು ಸಿಡಿಲ ಸಾಲು
ಕೂಗಿ ಕರೆಯುತಿದೆ ಚಂದಿರ

ಸಂದಿಗ್ಧ ಸನ್ನಿವೇಶ ಎಚ್ಚರವಿರಲಿ
ಸಂಯಮವಿರಲು ಗೆಲುವು ಖಚಿತ
ಸಮಯಪ್ರಜ್ಞೆ ಸೂಕ್ತ ಮದ್ದು
ಎಂದು ಸಳಹೆ ಕೊಟ್ಟು ಚಂದಿರ

ಅತಿಯಾಸೆಗೆ ಬಲಿಯಾಗ ಬೇಡ
ಸರಳವಿಹುದು ಬದುಕು ಬಹಳ
ಎಲ್ಲೆಮೀರದೆ ಪಯಣ ಸಾಗಲಿ
ಸುಖವ ನೀಡುವ ಚಂದಿರ

ನಾಟಕೀಯ ವರ್ತನೆ ಅತಿರೇಕವಾಗಿದೆ
ಆತ್ಮವಂಚನೆ ದಿನವು ಸಾಮಾನ್ಯವಾಗಿದೆ
ಸಿಡಿಲು ಬಡಿಯುವ ಮುನ್ನ ಎಚ್ಚೆತ್ತುಕೊ
ಸಹಾಯ ಮಾಡುವ ಚಂದಿರ

Apr 20, 2009

ಪ್ರೀತಿ ಅಥವಾ ಕಾಮ

ಬರಗಾಲ ದಾಹವನ್ನು ಕೊಲ್ಲುತ್ತದೆ
ಫಸಲು ಸಿಗುವುದು ಬಹಳ ವಿರಳ
ಒಣಗಾಳಿಯು ನರ್ತಿಸುತ್ತಿದೆ ಮೈಸುಡುವ ಬಿಸಿಲಿನಲ್ಲಿ
ಎಳೆಗಳೆಲ್ಲಾ ಮರಗಳನ್ನು ತೊರೆಯುತ್ತಿವೆ
ಭೂಮಿ ಬಿರುಕು ಬಿಟ್ಟಿದೆ
ನಾನು ವಿಷಾದಿಂದ ನಡೆಯುತ್ತಿದ್ದೇನೆ
ಮುಳ್ಳು ಕಾಲನ್ನೇರಿದಾಗ
ಅಂಗಾಂಗಗಳು ನಡುಗುತ್ತವೆ ಬತ್ತಿಹೋಗಿ
ನನ್ನ ಹೃದಯ ಬಡಿತ ಡಂಗುರ ಬಾರಿಸಿದಂತಿದೆ
ಮಸುಕಾದ ಆಗಸದಡಿಯಲ್ಲೆಲ್ಲೋ ಮೃದುವಾಗಿ
ತೆಳುವಸ್ತ್ರವನ್ನಿಡಿದು ಮಹಿಳೆಯೋರ್ವಳು ನನ್ನತ್ತ ಬೀಸುತ್ತಿದ್ದಾಳೆ
ಅವಳ ಪಕ್ಷಕ್ಕೆ ಸೇರಿಸಿ ಕೊಳ್ಳುವುದಕ್ಕಾಗಿ
ಗುಣಿ ಅಗೆದು, ಮುಚ್ಚುತ್ತಿದ್ದಾರೆ
ಒಂದು ಭಯಾನಕ ಆಟದಂತೆ
ಸಾಕಷ್ಟು ಅಭದ್ರತೆ
ಆತಂಕ ಸೃಷ್ಟಿಸುವ ಅಪ್ರಬುದ್ಧತೆ
ನೀವು ಪರಿಶೀಲಿಸಿದಾಗ
ಗುಲಾಬಿ ಇನ್ನೂ ಉಸಿರಾಡುತ್ತಿತ್ತು
ಆದರೆ ನೀವು ಅವುಗಳ ಬೆಳೆಸಬೇಕಾದರೆ
ಆ ರುದ್ರಭೂಮಿಯಲ್ಲಿ
ಎಲ್ಲಿ ಪ್ರೀತಿ ಮತ್ತು ಕಾಮ
ಕದನಕ್ಕಿಳಿದಿರುವ ಸಂದರ್ಭದಲ್ಲಿ.

ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ

ಪವಿತ್ರ ಕೋಣೆ

ಆ ಕೋಣೆಯು ಸಂಪೂರ್ಣವಾಗಿ ಅತೀವ
ಬೇಸರ, ನಿರಾಸೆ, ನೀರಸ, ಜಿಗುಪ್ಸೆಗಳಿಂದ ತುಂಬಿ ಹೋಗಿದೆ
ಮುಂದೆ ಏನೇನೂ ತೋಚದಂತಾಗಿದೆ
ಆ ನಾಲ್ಕೂ ಗೋಡೆಗಳು ಸಾಕ್ಷಿಯಾಗಿ ನಿಂತಿವೆ
ವೀರ್ಯ, ರಕ್ತ, ಬೆವರು ಮತ್ತು ಸುರಿಸಿದ ಕಣ್ಣೀರಿಗೆ
ನಡುವೆ ಉಸಿರುಗಟ್ಟಿಸುವ ಹೀನಸ್ಥಿತಿ
ಹಾಸಿಗೆ ಕಲೆಗಳಿಂದ ಕುಲಗೆಟ್ಟು ಸತ್ತೇ ಹೋಗಿದೆ
ಬಿರುಸು ನುಡಿ, ಪಿಸುನುಡಿಗಳೆಲ್ಲವೂ
ಭೂತಕಾಲದ ಐಶಾರಾಮಿ ವಸ್ತುಗಳಾಗಿವೆ
ಹೊರಗೆ ಹೋಗುವ ಬಾಗಿಲು ಇತಿಹಾಸವಾಗಿದೆ
ನಮ್ಮ ಸ್ಮಶಾನದೆಡೆಗೆ ಕರೆದೊಯ್ಯುತ್ತಿದೆ

ಬಂಧನದಿಂದ ಮುಕ್ತಿ ಪಡೆಯಲು
ಸ್ವಚ್ಛಂದವಾಗಿ ಹಾರುವ ಮೊದಲು
ಒಂದೇ ಒಂದು ಪದ ಸಾಕು
ಆ ಕೋಣೆಯನ್ನು
ಬುಡ ಸಮೇತ ಕಿತ್ತೆಸೆಯಲು
ಅದುವೇ ಭೂಕಂಪ

ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ

Apr 19, 2009

ಗರ್ಭಪಾತ

ನಾಳೆಯೆಂಬುದು ಮುಗ್ಧತೆಯ
ಪಟ್ಟಿಯನ್ನು ಸುತ್ತಿಕೊಂಡಿರುವಾಗ
ನಾನು ಬಂದೆ
ನಿನ್ನ ಬೆಚ್ಚಗಿನ ಗರ್ಭದೊಳಗೆ
ತಾಯಿ....
ನಿನ್ನ ಆಯ್ಕೆಯೊಂದಿಗೆ ಅಲ್ಲ
ಅಥವಾ ನನ್ನದೂ ಅಲ್ಲ
ಸಮಯದೊಂದಿಗೆ
ನಿಶ್ಚಯಿಸಿದಂತೆ ಬದುಕಲು
ನಮ್ಮ ಮನುಕುಲದ ಮರದಲ್ಲಿ
ಆದರೆ ಪ್ರೀತಿಯು
ಶರೀರ ಮತ್ತು ಮಾತುಗಳಾಗಿ ಬೆಳೆಯುವ ಮುನ್ನವೇ
ಸಂಪೂರ್ಣವಾಗಿ ರೂಪಗೊಳ್ಳುವುದರೊಳಗೇ
ತೀವ್ರ ರಕ್ತಸ್ರಾವವು ನನ್ನ
ಪಂಚಭೂತಗಳಲ್ಲಿ ಲೀನವಾಗಿಸಿತು.

ಮೂಲ ಕವಿ : ಯೂನೂಸ್ ಪೀರ್ಬೊಕಸ್
ಕನ್ನಡಕ್ಕೆ : ಚಂದಿನ

ಸೌಂದರ್ಯ?

ಎಲ್ಲೆಮೀರಿದವರಿಗಾಗಿ
ಕೃತಜ್ಞತೆಗಳೊಂದಿಗೆ
ಧನ್ಯವಾದಗಳನ್ನು
ಅರ್ಪಿಸುವುದೇ ಸೊಗಸು

ತನ್ನ ಹಾದಿಯನ್ನೇ ಮರೆತು
ಅಲ್ಲ, ತನ್ನ ಬದುಕನ್ನೇ ಬದಿಗಿಟ್ಟು,
ಕುಂಟ ನಾಯಿಯನ್ನು ದುರಂತದಿಂದ
ಪಾರು ಮಾಡುವವನೇ ಸುಂದರ

ನಾಳೆ ಇದ್ದರೂ ಇಲ್ಲದಂತೆ
ಈ ಕ್ಷಣವನ್ನು ಆಸ್ವಾದಿಸುವುದನ್ನು,
ಅಥವಾ ವಿಧಿಯ ಕ್ರೂರ ನೋಟಕ್ಕೆ
ಎದೆಗುಂದದಿರುವುದನ್ನು ಕಲಿತಾಗ
ಹಿತವಾದ ಭಾವನೆಗಳು ಮೂಡುತ್ತವೆ

ಅತೀವ ಸಂಕಷ್ಟದಲ್ಲಿರುವಾಗ,
ಪ್ರತಿಕ್ಷಣವೂ ಅಮೂಲ್ಯವಾದಾಗ
ಅವನು ಕೊನೆಯುಸಿರೆಳೆಯುವ ಕ್ಷಣದಲ್ಲಿದ್ದರೂ
ಬೀಕರ ಯುದ್ಧದಲ್ಲಿ ನೊಂದವರ ಶುಶ್ರೂಷೆ
ಮಾಡುವವನೇ ಅತಿ ಸುಂದರ

ತೀವ್ರ ರಕ್ತದಾಹವಿರುವ ಪ್ರಪಂಚದಲ್ಲಿ
ಮೌನವಾಗಿ, ವಿನಯವಂತನಾಗಿ
ಮಾನವತ್ವವನ್ನು ಜೊತೆಗೊಯ್ಯುತ್ತಿದ್ದಾನೆ.

ಮೂಲ ಕವಿ : ಯೂನೂಸ್ ಪೀರ್ಬೊಕಸ್
ಕನ್ನಡಕ್ಕೆ : ಚಂದಿನ

Apr 18, 2009

“ನಂಬಿಕೆ” ಎಂಬುದೊಂದು ಅತ್ಯುತ್ತಮ ಆವಿಷ್ಕಾರ

“ನಂಬಿಕೆ” ಎಂಬುದೊಂದು ಅತ್ಯುತ್ತಮ ಆವಿಷ್ಕಾರ
ಸಭ್ಯ ಮಹನೀಯರು ನೋಡ ಬಹುದಾದಾಗ---
ಆದರೂ, ತುರ್ತು ಪರಿಸ್ಥಿತಿಯಲ್ಲಿ ಭೂತಗನ್ನಡಿ
ಜೊತೆಗಿರುವುದು ಬಹಳ ಕ್ಷೇಮ.

ಮೂಲ ಕವಿಯತ್ರಿ : ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

ಸರ್ “ನಿಮ್ಮನೇಕೆ ಪ್ರೀತಿಸುವೆ”

ಸರ್ “ನಿಮ್ಮನೇಕೆ ಪ್ರೀತಿಸುವೆ”
ಏಕೆಂದರೆ,
ಬೀಸುವ ಗಾಳಿಗೆ ಉತ್ತರ ನೀಡಲು
ಹಸಿರು ಹುಲ್ಲಿನ ಅಗತ್ಯವಿಲ್ಲ
ಆಲ್ಲಿಂದ ಅವನು ಸುಳಿದಾಗ
ಅವಳಿಗೆ ಅವಳ ಜಾಗವನ್ನು ರಕ್ಷಿಸಿಕೊಳ್ಳಲಾಗುತ್ತಿಲ್ಲ.

ಏಕೆಂದರೆ, ಅವನಿಗೆ ಗೊತ್ತಿತ್ತು
ಆದರೆ ನಿನಗೆ ಗೊತ್ತಿಲ್ಲ
ಹಾಗೇ ನಮಗೆ ಬೇಕಾದಷ್ಟು
ತಿಳುವಳಿಕೆಯೂ ಇರಲಿಲ್ಲ
ಜ್ಞಾನ ಎಂಬುದು ಹಾಗೇ ಅಲ್ಲವೇ

ಮಿಂಚು ಎಂದಿಗೂ ಕಣ್ಣನ್ನು ಕೇಳಲಿಲ್ಲ
ಆದುದರಿಂದಲೇ ಅವನು ಹತ್ತಿರವಿದ್ದರೂ
ಅವು ಮುಚ್ಚಿದ್ದವು
ಏಕೆಂದರೆ, ಅವನಿಗೆ ಗೊತ್ತು ಅವುಗಳು ಮಾತನಾಡಲಾರವೆಂದು
ಮಾತನಾಡಲು,
ಮತ್ತೆ ವಿಶೇಷ ಕಾರಣಗಳೇನೂ ಇರಲಿಲ್ಲ
ಅಲ್ಲಿ ಎಲ್ಲರನ್ನೂ ಆಕರ್ಷಿಸುವ ಸೂಕ್ಷ್ಮ ಸೌಂದರ್ಯವಿದೆ

ರವಿ ಮೂಡುವಾಗ, ಪ್ರಭುವೆ, ನನ್ನನ್ನು ಒತ್ತಾಯಿಸಬೇಡಿ
ಏಕೆಂದರೆ, ಅವನು ನನಗೆ ರವಿ ಮೂಡುವಂತೆ ಕಾಣುತ್ತೇನೆ
ಆದ್ದರಿಂದಲೇ,
ಅವನನ್ನು ಆಗ ಪ್ರೀತಿಸುತ್ತೇನೆ.

ಮೂಲ ಕವಿಯತ್ರಿ : ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

ನಂಬಿಕೆ ಎಂಬುದು ರೆಕ್ಕೆಗಳೊಂದಿಗೆ

ನಂಬಿಕೆ ಎಂಬುದು ರೆಕ್ಕೆಗಳೊಂದಿಗೆ ಇರುತ್ತದೆ
ಆತ್ಮದೊಳಗೆ ದೃಢವಾಗಿ ನೆಲೆಯೂರಿ
ಶಬ್ದಗಳಿಲ್ಲದ ರಾಗದಲ್ಲಿ ಹಾಡುತ್ತಿರುತ್ತದೆ
ನಿರಂತರ......

ವೇಗವಾಗಿ ಬೀಸುವ ಗಾಳಿ ಹಿತವಾಗಿ ಕಂಡರೂ
ಒಮ್ಮೆಗೇ ಅಪ್ಪಳಿಸುವ ಬಿರುಗಾಳಿ ಅತೀವ ಹಾನಿಯ
ಜೊತೆಗೆ ನೋವುಂಟುಮಾಡುತ್ತದೆ,
ಎಷ್ಟೋ ಹಕ್ಕಿಗಳಿಗೆ ನೆಮ್ಮದಿ ನೀಡಿದ
ಆ ಪುಟ್ಟ ಹಕ್ಕಿಗೆ ತೊಂದರೆ ಉಂಟುಮಾಡಬಹುದು

ಹಿಮಪ್ರದೇಶದಲ್ಲಿ ನಾನದನ್ನು ಕೇಳಿದ್ದೇನೆ
ಹಾಗೇ ಅಪರಿಚಿತ ಸಾಗರದ ಮೇಲೆ
ಅದು ಅಂತಿಮ ಘಟ್ಟದಲ್ಲಿದ್ದರೂ ಸಹ
ನನ್ನಿಂದ ಒಂದು ತುತ್ತನ್ನೂ ಬೇಡಲಿಲ್ಲ.

ಮೂಲ ಕವಿಯತ್ರಿ : ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

Apr 17, 2009

ನೀನಲ್ಲಿರುವೆಯಾ?

ನೀನಲ್ಲಿರುವೆ,
ಆಗಷ್ಟೇ ಜನಿಸಿದ ಅತಿಮೃದುವಾಗಿರುವ ಮಗುವಿನ ನಗುವಿನಲ್ಲಿ,
ನಿಶ್ಛಲವಾಗಿರುವ ಬಾವಿಯ ನೀರಿನಲ್ಲಿ,
ನಸುಕಿನ ಪಿಸುಮಾತಿನಲ್ಲಿ,
ಚಂದ್ರ, ತಾರೆಗಳ ನೀರವ ಮೌನದಲ್ಲಿ,
ಅನನ್ಯ ಅನುಬಂಧಗಳ ಸುತ್ತಿಕೊಂಡು.

ಹೌದು, ನನಗೆ ಗೊತ್ತಿದೆ ನೀನಲ್ಲಿರುವೆಯೆಂದು,
ಸರಳತೆಯೆಂಬ ಏಕಾಂಗಿ ಗೂಡಲ್ಲಿ,
ನನ್ನ ಮನದೊಳಗಿನ ಕ್ಲಿಷ್ಟತೆಯಲ್ಲಿ,
ಸುರಿಯುವ ಮಳೆಯ ಸಭ್ಯತೆಯಲ್ಲಿ,
ನಿನ್ನ ಅಮೋಘ ದೃಶ್ಯ ಆ ಶಿಖರದ ತುಟ್ಟತುದಿಯಲ್ಲಿ,
ಗುಡುಗು, ಮಿಂಚುಗಳು ಸಿಡಿಯುವುದರಲ್ಲಿ,
ನಿನ್ನ ಅತೀವ ಸಂತಸ ವ್ಯಕ್ತವಾಗುವುದು.

ಆದರೆ,

ನೀನೆಲ್ಲಿರುವೆ?
ನಿನ್ನ ಹೆಸರಿನಲ್ಲಿ,
ಸೋದರ ಸೋದರನ ಬರ್ಬರವಾಗಿ ಕೊಲೆಗೈದಾಗ,
ಭೂಮಿ ಬಾಯ್ತೆರೆದು,
ತಾಯಿಯನ್ನೇ ನುಂಗುವಾಗ, ತಂಗಿಯ ಮಾನಹರಣ ನಡೆಸುವಾಗ.
ಮಾನಸಿಕವಾಗಿ, ದೈಯಿಕವಾಗಿ ನಿರಂತರವಾಗಿ ಹಿಂಸಿಸುವಾಗ,
ಧಾರ್ಮಿಕ ನಿಯಮಾನುಸಾರದ ಹೆಸರಲ್ಲಿ
ಗೌರವ ಕೊಲೆಗಳು ಮಾಡಿ ಅಬ್ಬಿರಿಸುವಾಗ.

ಆದರೆ ನೀನೆಲ್ಲಿರುವೆ?
ಯಾವಾಗ ನಿನ್ನ ಸೃಷ್ಠಿಯಲ್ಲಿ,
ನಾನು ಹಸಿವನ್ನು ಕಾಣುತ್ತಿದ್ದೇನೆ,
ರೋಗ, ರುಜನುಗಳಿಂದ ನಾಶವಾಗುವುದು ನೋಡುತ್ತಿದ್ದೇನೆ,
ಗಂಡು ಹೆಣ್ಣಿಗೆ ಅಗೌರವ ತೋರುವುದು ಕಂಡು ನೊಂದಿದ್ದೇನೆ,
ಅನಾಥ ಮಕ್ಕಳು, ಹಾಗೇ ಯಾರಿಗೂ ಬೇಡವಾದ
ತಂದೆ-ತಾಯಿಗಳನೇಕರನ್ನು ಎದುರಲ್ಲೇ ಕಾಣುತ್ತಿದ್ದೇನೆ,
ನಿಬಂಧನೆಗಳೊಂದಿಗೆ ಪ್ರೀತಿಯನ್ನು,
ಪ್ರೀತಿ ಕೇವಲ ಹಣಕ್ಕಾಗಿ, ಮೋಜಿಗಾಗಿ ಹಾಗು ಕೇವಲ
ದೈಹಿಕ ಸಂಪರ್ಕಕ್ಕಾಗಿ ಬಳಸುವುದನ್ನು ಕಂಡು ತಳಮಳಗೊಂಡಿದ್ದೇನೆ.

ಆದರೆ, ನಾನು ಸಹ ಮನುಷ್ಯಳು,
ನಿಮ್ಮಂತೆ ಸ್ವಾಭಾವಿಕವಾಗಿ ಜನಿಸಿದವಳು,
ದಯವಿಟ್ಟು ನನ್ನನ್ನು ಹಾಗೇ ಕಾಣಿರಿ,
ಬನ್ನಿ ನೆರವಾಗಿ,
ನನಗೆ ಅನ್ಯ ಮಾರ್ಗವಿಲ್ಲ,
ಆದರೆ ನಿಮ್ಮನ್ನು ಪಡೆಯಲು ಇನ್ನೂ ಎತ್ತರಕ್ಕೇರಬೇಕು ಎಂಬುದಾದರೆ;
ದಯವಿಟ್ಟು ಒಮ್ಮೆಗೆ ಒಂದೇ ದಿನವನ್ನು ಪಡೆಯುವ ವಿಧಾನವನ್ನು ಕಲಿಸಿ ಕೊಡಿ.

ಮೂಲ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

Apr 15, 2009

ನಾನು ನೋಡುವುದೆಲ್ಲಾ ನಿನ್ನನ್ನೇ...

ನೀನು ನಿತ್ಯ ಬಳಸುವ ಸುಗಂಧದ್ರವ್ಯವಾಗಬಯಸುವೆ,
ನಿನ್ನಾತ್ಮವನ್ನು ಹಿತವಾಗಿ ತಾಗುವ ತಂಗಾಳಿಯಾಗಲಿಚ್ಛಿಸುವೆ,
ನಿನ್ನ ಹೃದಯವನ್ನಾವರಿಸಿರುವ ಜ್ವಾಲೆಯಾಗಲು ಹಾತೊರೆಯುವೆ,
ನಿನ್ನ ಉತ್ಕಟಾಕಾಂಕ್ಷೆಗಳ ಸಾಗರದಲ್ಲಿ ಮಿಂದು ಬರಲು ತವಕಿಸುವೆ,
ಆಗ, ನಿನ್ನ ಒಲವಿನ ಅಲೆಗಳ ಅನನ್ಯ ಅನುಭೂತಿ ನಾ ಪಡೆಯುವೆ.

ನನ್ನ ಅನ್ನ, ನೀರು, ನಿದ್ರೆ ಎಲ್ಲವೂ ನೀನೆ,
ಈ ಶಬ್ದಗಳು ನನಗೆ ರೋಮಾಂಚನಕಾರಿಯಾಗಿವೆ;
“ಎಂದಿಗೂ ನಿನ್ನವಳಾಗುವಂತೆ ನನ್ನ ಹರಸು”,
ನನ್ನಾಸೆ ಏನೆಂಬುದನ್ನು ಮೇಲಿರುವ ಆ ಭಗವಂತನೊಬ್ಬನಿಗೇ ಗೊತ್ತಿದೆ,
ನಾನು ಮುಳುಗುತ್ತಿದ್ದೇನೆ, ಹೌದು ನಾನು ಮುಳುಗುತ್ತಿದ್ದೇನೆ
ಆ ಪ್ರೀತಿಯೆಂಬ ನಿಗೂಢ ವ್ಯೂಹದೊಳಗೆ.

ನಿನ್ನ ಮೋಡಿಗೆ ಮರುಳಾಗಿದ್ದೇನೆ,
ನನ್ನ ತಾರ್ಕಿಕ ಚಿತ್ತ ಸ್ತಬ್ಧವಾಗಿದೆ,
ನನ್ನ ಬುದ್ಧಿಶಕ್ತಿ ಎಂದೋ ಕಳೆದು ಹೋಗಿದೆ,
ಸಹಜ ಜೀವನವು ನನ್ನಿಂದ ಬಹಳ ದೂರವಾಗಿದೆ,
ನಿನ್ನ ಪರಿಮಳಭರಿತ ಸುವಾಸನೆಯಿಂದ ನನ್ನನ್ನು ಸಂಪೂರ್ಣ ಆವರಿಸಿರುವೆ,
ನೀನು ಎಲ್ಲೋ ಸಾಗರದಾಚೆಗಿದ್ದರೂ,
ಆ ಶಕ್ತಿಶಾಲಿ ಸುಗಂಧವು ತನ್ನೆಡೆಗೆ ತೀವ್ರವಾಗಿ ಸೆಳೆಯುತ್ತದೆ,
ನನ್ನ ಹೃದಯವು ನಿನ್ನ ಪ್ರೀತಿಯ ಬಂಧನದೊಳಗೆಂದೋ ಸೆರೆಯಾಗಿದೆ,
ಮುಸ್ಸಂಜೆಯು ಕರಗಿ ಕತ್ತಲಾವರಿಸಿದಂತೆ..
ಆಗಲೂ ಸಹ ನಾನು ನೋಡುವುದು ಕೇವಲ ನಿನ್ನನ್ನೇ...ನಿನ್ನನ್ನೇ...


ಮೂಲ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

ಮೌನ ಗೀತೆ

ಮೆಲ್ಲನೆ ಮುಂಜಾವು ಕಣ್ತೆರೆದಿದೆ,
ಪಾರದರ್ಶಕ ತಿಳಿಗೆಂಪು ಗುಲಾಬಿ ಮೊಗ್ಗುಗಳಲಿ,
ತಂಗಾಳಿ ತನ್ನ ಮೃದು ಸ್ಪರ್ಶದಿಂದ ಹಕ್ಕಿ, ದುಂಬಿಗಳನ್ನೆಚ್ಚರಿಸುತ್ತದೆ.
ಹಾಗೇ ಮದ್ಯಾಹ್ನದ ಆಗಮನವಾಗುತ್ತದೆ,
ತನ್ನ ಲೆಕ್ಕವಿಲ್ಲದ ಚಿನ್ನದ ಮಿಂಚುಗಳ ಹೊಮ್ಮಿಸಿ ಹಸಿರೆಳೆಗಳಲ್ಲಿ,
ಮಲಗಿದ್ದ ನನ್ನ ಮುದ್ದಿನ ಮೊಗ್ಗುಗಳೆಲ್ಲಾ ಆಗ ಸಂಪೂರ್ಣ ತೆರೆದು ಕಂಗೊಳಿಸುತ್ತವೆ.

ಕಲ್ಪನಾ ಲಹರಿ ಮಂಕಾಗುವಂತೆ ತೋರುತ್ತಿದೆ,
ಪ್ರಕಾಶಮಾನ ರವಿ ಮಂದಗತಿಯಲ್ಲಿ ಜಾರುತ್ತಿದ್ದಾನೆ
ಅದನ್ನು ಕಂಡ ಚೋರ ಚಂದಿರ ಎಚ್ಚರಗೊಂಡು
ಮೆಲ್ಲಗೆ ಇಣಕಿ ನೋಡುತ್ತಿದ್ದಾನೆ,
ಹಾಗೇ ಹೊಳೆವ ತಾರೆಗಳು ಸಾಲುಗಟ್ಟಿ ಹೊರಹೊಮ್ಮುತ್ತಿವೆ.

ಆಲಿಸಿಕೊ,
ಹಕ್ಕಿಗಳು ಪಿಸುಗುಡುತ್ತಾ, ಹಾಡುತ್ತಾ ಕಲರವ ಮೂಡಿಸಿ
ತಮ್ಮ ಗೂಡುಗಳೆಡೆಗೆ ಮರಳುವುದನ್ನು,
ಕೇಳಿಸಿಕೊ,
ತದೇಕಚಿತ್ತದಿಂದ ಸಣ್ಣಗೆ ಇಳಿಜಾರಿನಲಿ ಹರಿಯುತ್ತಿರುವ
ನೀರು ತಿರುತಿರುಗಿ ತಿರುತಿರುಗಿ ನರ್ತಿಸುತ್ತಿರುವುದನ್ನು.

ನಂತರ,
ಕ್ರಮೇಣ ಕರಗುತ್ತಿರುವ ಬೆಳಕು
ತನ್ನ ಅದ್ಭುತ ಚಿತ್ರಕಲೆಗೆ ಹಾಗೇ ತೆರೆಯೆಳೆಯುತ್ತದೆ,
ತನ್ನ ನಿಶ್ಚಲ, ಪ್ರಶಾಂತ ಮೌನ ಗೀತೆಯೊಂದಿಗೆ.

ಮೂಲ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

Apr 14, 2009

ನನ್ನ ಚಿತ್ರಿಸು, ಇಲ್ಲಾ ಛಿದ್ರಿಸು

ಹೌದು,
ಸಾವಿರಾರು ಮೈಲಿಯಾಚೆಗೆ
ನಿನ್ನ ಮಾತು ಖಂಡಿತ
ಎಷ್ಟೇ ದೂರದಲ್ಲಿದ್ದರೂ
ಸ್ಪಷ್ಟವಾಗಿ ಕೇಳಿಸುತ್ತದೆ.
ರಾತ್ರಿಯಲ್ಲಿ ಕೊರೆಯುವ ಚಳಿಯು
ನಿನ್ನನ್ನು ಒತ್ತಾಸೆಯಿಂದ ಕರೆಯುತ್ತಿದೆ
ನನ್ನ ಜೊತೆಗಿರಲು.

ಮರಳುಗಾಡಿನ,
ಮರುಭೂಮಿಗಳಲ್ಲಿ
ತಿರುತಿರುಗಿ ಸೋತಿದ್ದೇನೆ.
ನಿನ್ನ ಒಲವೆಂಬ ಶರಾಬು
ಅದೆಷ್ಟೋ ಗ್ಲಾಸುಗಳು
ನಿನ್ನ ಪವಿತ್ರ ಕಣ್ಣುಗಳಿಂದ
ತುಂಬಿಸಿ ಕುಡಿದಿದ್ದೇನೆ.
ಸ್ವರ್ಗವು ಮೂಕ ಪ್ರೇಕ್ಷಕನಂತಾಗಿದೆ ಇಂದು,
ಮುಸ್ಸಂಜೆಯ ಮೌನ ನೀಲಾಕಾಶವ ಕಂಡು
ಹೊಳೆಯುವ ಪೂರ್ಣಚಂದ್ರನನು ಕಂಡು
ಹಸಿರು ಹುಲ್ಲಿನಲಿ ಮಿಂಚುವ ಇಬ್ಬನಿಯ ಕಂಡು.

ನಿನ್ನ ಹೆಸರಿನ ಪ್ರತಿ ಅಕ್ಷರವೂ
ನನಗೆ ರೋಮಾಂಚಕಾರಿ,
ರುದ್ರಾಕ್ಷಿ ಹಿಡಿದು ಪ್ರತಿದಿನವು ಜಪಿಸುವ
ಆ ಮಂತ್ರವೂ ಸಹ ನಿನ್ನದೇ ಹೆಸರು
ತಿಳಿಯಾಗಿ ತೇವವಾಗಿರುವ ನಿನ್ನ ತುಟಿಗಳು
ನನ್ನನ್ನು ಕೆಣಕಿ ಅತಿಯಾಗಿ ಕಾಡುತ್ತಿವೆ.
ನಿನ್ನ ಬೆವರಿನ ಉಸಿರಾಟದಿಂದ
ನನಗೆ ಮೈ ಮರೆತಂತಾಗುತ್ತದೆ.
ಆ ನಿನ್ನ ದಿಟ್ಟ ನೋಟ ನನಗೆ ಅಮಲೇರಿಸುತ್ತದೆ.
ನಿನ್ನ ಜಾದುವಿಗೆಂದೋ ನಾನು ಮರುಳಾಗಿದ್ದೇನೆ.
ಹಗಲು-ಇರುಳು ನಿನ್ನ ಯೋಚನೆಗಳಲ್ಲೇ
ಕಳೆದು ಹೋಗಿದ್ದೇನೆ.

ನಿನ್ನ ಚಾತುರ್ಯ,
ನನ್ನನ್ನು ಪರಿಪರಿಯಾಗಿ ಸೆಳೆಯುತ್ತದೆ.
ನಿನ್ನ ಉತ್ಕಟಾಕಾಂಕ್ಷೆ,
ನನ್ನಲ್ಲಿ ದಿಗ್ಭ್ರಮೆ ಮೂಡಿಸುತ್ತದೆ.
ನಿನ್ನ ದಿಟ್ಟ ಏಕಾಗ್ರತೆ,
ನನಗೆ ಅತೀವ ಆಶ್ಚರ್ಯ ಉಂಟುಮಾಡುತ್ತದೆ.
ನಿನ್ನ ಸಮಯ ಪ್ರಜ್ಞೆಗೆ
ವಿನಮ್ರ ಭಕ್ತಳಂತೆ ಬೆರಗಾಗಿದ್ದೇನೆ.
ನಿನ್ನ ಆಕರ್ಷಕ ವ್ಯಕ್ತಿತ್ವವು
ನನ್ನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದೆ.

ನೀನನ್ನ ಹೃದಯವನ್ನು ಕದ್ದಾಗ
ನಾನೇನು ಮಾಡುತ್ತಿದ್ದೆನೊ ನಾನರಿಯೆ?
ನನಗೆ ಗೊತ್ತಿಲ್ಲದಂತೆ,
ನಿನಗೆ ಮನಸೋತಿದ್ದೇನೆ.
ನಾನು ನಿನ್ನವಳಾಗುವುದೊಂದೇ
ಈಗ ನನ್ನ ಧ್ಯೇಯೋದ್ದೇಶ.
ನಿನ್ನ ಪ್ರೀತಿಸುವುದನ್ನು ನಿಯಂತ್ರಿಸುವುದು
ನನಗೆ ಕಷ್ಟಸಾಧ್ಯ.
ಹಣೆಬರಹವು,
ನಮ್ಮನ್ನು ಇಂದು ಒಂದಾಗಿಸಿದೆ,
ಎಂದಿಗೂ ಬೇರಯಾಗುವುದಿಲ್ಲ ಎಂಬ
ನಂಬಿಕೆಯಿಂದ.

ನಿನ್ನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ
ವಜ್ರವನ್ನಾಗಿಸು ನನ್ನ,
ನಿನ್ನ ಆಗಸದಲ್ಲಿನ ಚಂದ್ರಮನನ್ನಾಗಿಸು,
ನಿನ್ನ ಹೃದಯದ ರಾಣಿಯನ್ನಾಗಿಸು,
ನಿನ್ನ ಬದುಕಿನ ಪ್ರೀತಿಯನ್ನಾಗಿಸು,
ನಿನ್ನ ಸರ್ವಸ್ವವನ್ನಾಗಿಸು,
ನಿನ್ನಲ್ಲಿ ನನ್ನನ್ನು ಒಂದಾಗಿಸು,
ನನ್ನನ್ನು ನಿನ್ನಲ್ಲಿ ನಿನ್ನನ್ನಾಗಿಸು.

ನನ್ನ ಚಿತ್ರಿಸು, ಇಲ್ಲಾ ಛಿದ್ರಿಸು
ಅದು ನಿನಗೆ ಬಿಟ್ಟದ್ದು.

ಮೂಲ ಕವಿಯತ್ರಿ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

Apr 11, 2009

ಒಪ್ಪಿಕೊಳ್ಳುವೆ

ಕೊನೆಗೂ... ಒಪ್ಪಿಕೊಳ್ಳುವೆ
ತಪ್ಪಿತಸ್ಥನೆಂದು
ಕ್ಷಮೆಯಾಚನೆಯೊಂದಿಗೆ.
ಬಗೆ ಬಗೆಯ ಮುಖವಾಡಗಳ
ಧರಿಸಿದ್ದೆನೆಂದು
ಸ್ನೇಹಿತರಿಗೊಂದು,
ಸಂಬಂಧಿಕರಿಗೊಂದು,
ಸಮಾಜಕ್ಕೊಂದು,
ಸಹೋದ್ಯೋಗಿಗಳಿಗೊಂದು,
ಮೇಲಧಿಕಾರಿಗೊಂದು,
ನಿನಗೊಂದು...
ಹಾಗೇ,
ನಾನು ಸಂಪರ್ಕಿಸಿದ
ಪ್ರತಿ ಆಕರ್ಷಕ ಬೆಡಗಿಗಾಗಿ ಒಂದು.
ಕೆಲವೊಮ್ಮೆ ದ್ರೋಹವೆಸಗಿದ್ದು ನಿಜ
ಆದರೆ ನನ್ನ ಆತ್ಮಸಾಕ್ಷಿಗೆ ದ್ರೋಹವೆಸಗಲಾಗದೆ
ಸಂಪೂರ್ಣ ಸೋತಿದ್ದೇನೆ.
ವಿಶ್ವಾಸಕ್ಕೆ ಅರ್ಹನಲ್ಲವಾದರೂ ಗೆಳತಿ
ದೈರ್ಯಮಾಡಿ ನನ್ನೊಳಗಿದ್ದ
ಕೆಟ್ಟ ಭೂತವನ್ನು ಈಗಷ್ಟೇ
ಹೊರಗಟ್ಟಿ, ನಿಟ್ಟುಸಿರಿಟ್ಟಿದ್ದೇನೆ!
ಸಾಧ್ಯವಾಗುವುದಾದರೆ ಕ್ಷಮಿಸು
ಇಷ್ಟವಾಗುವುದಾದರೆ ಶಿಕ್ಷಿಸು
ಆದರೆ,
ಆ ದೇವರನ್ನು ಮತ್ತು ನಿನ್ನನ್ನು ಬೇಡುವುದಿಷ್ಟೇ
ದಯವಿಟ್ಟು,
ನನ್ನಿಂದ ದೂರ ಹೋಗಬೇಡ.

Apr 5, 2009

ಮತ್ತೆ ಬರುವನು ಚಂದಿರ - 19

ಜೀವಂತಿಕೆ ತೊರೆದ ದೈನಂದಿನ
ಸತತ ಕಾಡುತಿಹುದು ಒಂಟಿತನ
ಬರಡಾಗಿದೆ ಬದುಕು ಪ್ರತಿದಿನ
ಹಸಿರಾಗುವ ಬಯಕೆ ಚಂದಿರ

ಯಾಂತ್ರಿಕ ಬದುಕಿಗೆ ಬಲಿಯಾಗದೆ
ಬೆತ್ತಲೆ ಮರವು ಚಿಗುರುವಂತೆ
ಮೂಡಿ ಬರಲಿ ಭಾವ ಬೆಸುಗೆ
ಅನುರಕ್ತನಾಗುವೆ ಚಂದಿರ

ಅರಳಿದಾಗ ಭಾವಕೋಶ
ಹಾತೊರೆಯುವ ವಿಶೇಷ
ಪರಿಮಳಸೂಸಿ ಕಾಯುತಿದೆ
ಹೂವು ದುಂಬಿಗಾಗಿ ಚಂದಿರ

ತಲ್ಲಣಿಸದಿರು ಮುಗ್ಧ ಮನವೆ
ಉತ್ಕಟ ಒಲವು ನಿನ್ನ ಬಲವೆ
ಹುಚ್ಚುತನಕೆ ಪೆಚ್ಚಾಗದಿರು
ಸರಿದೂಗುವನು ಚಂದಿರ

ಬಿಸಿಲುಗುದುರೆಯ ಬೆನ್ನತ್ತಿ
ಗೊಂದಲಗಳ ಗೂಡು ಕಟ್ಟಿ
ತವಕ ತಲ್ಲಣಗಳ ತಣಿಸಲಾಗದೆ
ಮಣ್ಣು ಸೇರಿದೆ ಚಂದಿರ

ವರ್ತಮಾನದ ಕಟು ವಾಸ್ತವದಿಂದ
ಪಲಾಯನಗೈಯದಿರು ಗೆಳೆಯನೆ
ಮುಖಾಮುಖಿಯ ಸಮಯವಿದು
ಸಮರಕೆ ಸಿದ್ಧನಾಗು ಚಂದಿರ

ಪುಟ್ಟ ಪುಟ್ಟ ವಿವರ ಚತುರ
ಸರಳ ಹಾದಿಗೆ ಸೂಕ್ತ ಚೋರ
ಮರೆಯದಿರು ಮಾಯೆ ಬದುಕು
ಮರಳಿ ಬರುವನು ಚಂದಿರ

ಭೂಗೋಳ, ಚರಿತ್ರೆ, ಸಂಸ್ಕೃತಿಯ
ತಳಪಾಯದಿಂದ ಬೆಳೆದುನಿಂತು
ಸಾಧ್ಯತೆಗಳ ಅಸಾಧ್ಯತೆಯೆಡೆಗೆ
ಅಗಾಧ ಪಯಣವೊ ಚಂದಿರ

ಕುತಂತ್ರಗಳ ಕೃತಕ ಗೆಲುವು
ಹತಾಶೆಗಳ ಸಹಜ ಸೃಷ್ಠಿ
ವಿಲಕ್ಷಣ ಮನಸ್ಧಿತಿಗೆ ನಲುಗಿ
ಜಡವಾಗದಿರೊ ಚಂದಿರ

ಕಲ್ಪನಾಲೋಕದಿ ಕನಸು ಕಾಣುತ
ಕೇಡಿನ ಕಲ್ಪನೆ ಸತತ ಕಾಡುತ
ಮಾನಸಿಕ ತುಮುಲದಿ ತತ್ತರಿಸಿ
ಬೀದಿಗೆ ಬಂದಿಹನೊ ಚಂದಿರ