Apr 17, 2009

ನೀನಲ್ಲಿರುವೆಯಾ?

ನೀನಲ್ಲಿರುವೆ,
ಆಗಷ್ಟೇ ಜನಿಸಿದ ಅತಿಮೃದುವಾಗಿರುವ ಮಗುವಿನ ನಗುವಿನಲ್ಲಿ,
ನಿಶ್ಛಲವಾಗಿರುವ ಬಾವಿಯ ನೀರಿನಲ್ಲಿ,
ನಸುಕಿನ ಪಿಸುಮಾತಿನಲ್ಲಿ,
ಚಂದ್ರ, ತಾರೆಗಳ ನೀರವ ಮೌನದಲ್ಲಿ,
ಅನನ್ಯ ಅನುಬಂಧಗಳ ಸುತ್ತಿಕೊಂಡು.

ಹೌದು, ನನಗೆ ಗೊತ್ತಿದೆ ನೀನಲ್ಲಿರುವೆಯೆಂದು,
ಸರಳತೆಯೆಂಬ ಏಕಾಂಗಿ ಗೂಡಲ್ಲಿ,
ನನ್ನ ಮನದೊಳಗಿನ ಕ್ಲಿಷ್ಟತೆಯಲ್ಲಿ,
ಸುರಿಯುವ ಮಳೆಯ ಸಭ್ಯತೆಯಲ್ಲಿ,
ನಿನ್ನ ಅಮೋಘ ದೃಶ್ಯ ಆ ಶಿಖರದ ತುಟ್ಟತುದಿಯಲ್ಲಿ,
ಗುಡುಗು, ಮಿಂಚುಗಳು ಸಿಡಿಯುವುದರಲ್ಲಿ,
ನಿನ್ನ ಅತೀವ ಸಂತಸ ವ್ಯಕ್ತವಾಗುವುದು.

ಆದರೆ,

ನೀನೆಲ್ಲಿರುವೆ?
ನಿನ್ನ ಹೆಸರಿನಲ್ಲಿ,
ಸೋದರ ಸೋದರನ ಬರ್ಬರವಾಗಿ ಕೊಲೆಗೈದಾಗ,
ಭೂಮಿ ಬಾಯ್ತೆರೆದು,
ತಾಯಿಯನ್ನೇ ನುಂಗುವಾಗ, ತಂಗಿಯ ಮಾನಹರಣ ನಡೆಸುವಾಗ.
ಮಾನಸಿಕವಾಗಿ, ದೈಯಿಕವಾಗಿ ನಿರಂತರವಾಗಿ ಹಿಂಸಿಸುವಾಗ,
ಧಾರ್ಮಿಕ ನಿಯಮಾನುಸಾರದ ಹೆಸರಲ್ಲಿ
ಗೌರವ ಕೊಲೆಗಳು ಮಾಡಿ ಅಬ್ಬಿರಿಸುವಾಗ.

ಆದರೆ ನೀನೆಲ್ಲಿರುವೆ?
ಯಾವಾಗ ನಿನ್ನ ಸೃಷ್ಠಿಯಲ್ಲಿ,
ನಾನು ಹಸಿವನ್ನು ಕಾಣುತ್ತಿದ್ದೇನೆ,
ರೋಗ, ರುಜನುಗಳಿಂದ ನಾಶವಾಗುವುದು ನೋಡುತ್ತಿದ್ದೇನೆ,
ಗಂಡು ಹೆಣ್ಣಿಗೆ ಅಗೌರವ ತೋರುವುದು ಕಂಡು ನೊಂದಿದ್ದೇನೆ,
ಅನಾಥ ಮಕ್ಕಳು, ಹಾಗೇ ಯಾರಿಗೂ ಬೇಡವಾದ
ತಂದೆ-ತಾಯಿಗಳನೇಕರನ್ನು ಎದುರಲ್ಲೇ ಕಾಣುತ್ತಿದ್ದೇನೆ,
ನಿಬಂಧನೆಗಳೊಂದಿಗೆ ಪ್ರೀತಿಯನ್ನು,
ಪ್ರೀತಿ ಕೇವಲ ಹಣಕ್ಕಾಗಿ, ಮೋಜಿಗಾಗಿ ಹಾಗು ಕೇವಲ
ದೈಹಿಕ ಸಂಪರ್ಕಕ್ಕಾಗಿ ಬಳಸುವುದನ್ನು ಕಂಡು ತಳಮಳಗೊಂಡಿದ್ದೇನೆ.

ಆದರೆ, ನಾನು ಸಹ ಮನುಷ್ಯಳು,
ನಿಮ್ಮಂತೆ ಸ್ವಾಭಾವಿಕವಾಗಿ ಜನಿಸಿದವಳು,
ದಯವಿಟ್ಟು ನನ್ನನ್ನು ಹಾಗೇ ಕಾಣಿರಿ,
ಬನ್ನಿ ನೆರವಾಗಿ,
ನನಗೆ ಅನ್ಯ ಮಾರ್ಗವಿಲ್ಲ,
ಆದರೆ ನಿಮ್ಮನ್ನು ಪಡೆಯಲು ಇನ್ನೂ ಎತ್ತರಕ್ಕೇರಬೇಕು ಎಂಬುದಾದರೆ;
ದಯವಿಟ್ಟು ಒಮ್ಮೆಗೆ ಒಂದೇ ದಿನವನ್ನು ಪಡೆಯುವ ವಿಧಾನವನ್ನು ಕಲಿಸಿ ಕೊಡಿ.

ಮೂಲ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

No comments: