Sep 19, 2008

ಹತ್ತು ಛಾಯೆಗಳ ಗುರುತು*

ಹೃದಯವ ಆರ್ದ್ರಗೊಳಿಸಿ
ಕಣ್ಣು ಒದ್ದೆಯಾಗಿಸಿ
ಮೃದುವಾಗಿ ಗಾಯ ಸವರಿ
ಆತ್ಮರತಿ ಮೂಡಿಸಿದೆ.

ಚದುರಿದ್ದ ಬಿಂಬಗಳ
ಒಟ್ಟುಗೂಡಿಸಿ
ಹಲವು ಪ್ರತಿಬಿಂಬಗಳ
ಒಂದಾಗಿಸುವ ತರ್ಕ.

ಭಾವಗಳ ವಿವರ
ಬಿಡಿಸಿಡುವ ಹಂಬಲ
ಭಾವ ಸಂವೇದನೆಗೆ
ಸ್ಪಂದಿಸುವ ಛಲ.

ಆಳದಲಿ ಅದುಮಿಟ್ಟ
ಆಪ್ತ ಸ್ವರಗಳ ಕಲಕಿ
ಸುಪ್ತ ಆಸೆಗಳ ಅಲ್ಲಾಡಿಸಿ
ಹಿತವಾದ ಚಲನೆ ನೀಡಿದೆ.

ಹತ್ತು ಛಾಯೆಗಳ ಗುರುತು
ಹಲವು ಸ್ತರಗಳಲಿ ಅವಿತು
ಮರೆತ ಚಿತ್ರಗಳ ನೆನಪು
ಮತ್ತೆ ಕಣ್ಣುಗಳು ಒದ್ದೆ ಒದ್ದೆ.

Sep 18, 2008

ಬದುಕಲು ರೆಡಿಯಿದ್ದವರಿಗೆ ಒಂದಷ್ಟು ಸೂತ್ರಗಳು*

ಬೇರೊಬ್ಬರೊಂದಿಗೆ
ಹೋಲಿಕೆ ಏಕೆ ?
ಅವರ ಹಾದಿಯ ಬಗ್ಗೆ
ನಮಗರಿವಿಲ್ಲದಿದ್ದಾಗ.

ನಮ್ಮ ಸಂತೋಷಕ್ಕೆ ಯಾರೋ
ನಾಯಕರಲ್ಲ ?
ನಮ್ಮ ಹೊರತು .

ಅವರಿವರ ಅಭಿಪ್ರಾಯ,
ಅನಿಸಿಕೆಗಳು
ಆರೋಗ್ಯವಾಗಿ, ಸರಿಯಾಗಿದ್ದಲ್ಲಿ ಸ್ವೀಕರಿಸಿ ,
ಇಲ್ಲವಾದರೆ ನಿರಾಕರಿಸಿ.

ಪರಿಸ್ಥಿತಿ ಎಷ್ಟೇ ಚೆನ್ನಾಗಿ
ಅಥವ ಕೆಟ್ಟದಾಗಿದ್ದರು
ಅದು ಖಂಡಿತ ಬದಲಾಗುತ್ತದೆ

ಉಪಯೋಗಕ್ಕೆ ಬಾರದ ,
ಹಿತವೆನಿಸದ ಅಥವ
ಸಂತಸ ತರದವುಗಳಿಂದ ಆದಷ್ಟು
ದೂರವಿರಲು ಯತ್ನಿಸಿ

ಮನಸು ಹೇಗೇ ಇರಲಿ ,
ಎಲ್ಲೇ ಇರಲಿ, ನಮ್ಮ ಹತೋಟಿಯಲ್ಲಿರಲಿ

ಏಳಿ, ಎದ್ದೇಳಿ ಸಮಸ್ಯೆಗಳ
ಎದೆಗುಂದದೆ ಎದುರಿಸಿ

ಹತ್ತರಿಂದ ಮೂವತ್ತು ನಿಮಿಷವಾದರು
ಉಮ್ಮಸ್ಸಿನಿಂದ ದಿನ ನಡೆಯುವುದು
ಅಭ್ಯಾಸ ಮಾಡಿಕೊಳ್ಳಿ.

ಪ್ರತಿ ಮುಂಜಾನೆ ಏಳುವಾಗ
ಅಂದಿನ ಉದ್ದೇಶ ಸಂತೋಷವಾಗಿರಬೇಕು
ಎಂಬ ವಾಕ್ಯವನ್ನು ಮರೆಯದೆ ನೆನೆಸಿಕೊಳ್ಳಿ.

ನಮ್ಮ ಸಾಕಷ್ಟು ಸಮಯ
ಎಪ್ಪತ್ತು ವರ್ಷ ಮೇಲ್ಪಟ್ಟು
ಆರು ವರ್ಷದೊಳಗಿನವರೊಂದಿಗೆ
ಕಳೆದರೆ, ಹೆಚ್ಚು ನಗುವಿರುತ್ತದೆ

ಪ್ರತಿದಿನ ಕನಿಷ್ಟ ಮೂವರನ್ನಾದರು
ನಗಿಸುವ ಪ್ರಯತ್ನ ಆರೋಗ್ಯಕರ

ಉತ್ಸಾಹ, ಉಮ್ಮಸ್ಸು ಹಾಗು
ನಗುವಿನಿಂದಿರಲು ಯತ್ನಿಸಿದಾಗ
ನಕಾರಾತ್ಮಕ ವಿಷಯಗಳು
ತಾನಾಗಿಯೇ ದೂರವಿರುತ್ತವೆ.

ಬದುಕು ಅತ್ಯಲ್ಪ ಅವಧಿ ಮಾತ್ರ
ದ್ವೇಷಿಸುವುದಕ್ಕೆ ಕಾಲಹರಣ ಬೇಡ

ಎಲ್ಲ ವಾದಗಳು ಗೆಲ್ಲಬೇಕೆಂದಿಲ್ಲ
ಒಪ್ಪಿಗೆಯಿಲ್ಲವೆಂದು ಒಪ್ಪಿಕೊಳ್ಳುವುದು ಸೂಕ್ತ.

ಸಂಸಾರದೊಂದಿಗೆ ಹೆಚ್ಚು ಸಂಪರ್ಕ
ಹಾಗು ಸಮಯ ಕೊಡುವುದು ಅಗತ್ಯ

ನೆನಪಿರಲಿ ಮನುಜರು ತುಂಬಾ
ಅದೃಷ್ಟವಂತರು, ಸಮಸ್ಯೆಗಳಿಂದ
ಕಲಿಯಲು ಅವರಿಗೆ ಮಾತ್ರ ಸಾಧ್ಯ

ಪಯಣ ಸಂತಸಕರವಾಗಿರಲಿ,
ಅತಿಯಾದ ಅವಸರ ಬೇಡ
ವೇಗ, ಉದ್ವೇಗ ಕೊನೆಯಾಗುವವು ಬೇಗ.

ಪ್ರತಿರಾತ್ರಿ ಮಲಗುವ ಮುನ್ನ
ದಿನದ ಸಂತಸ, ಸಾಧನೆ ನೆನಪಿನಲ್ಲಿರಲಿ.

ಸರಿಯಾದ ಮಾರ್ಗ, ಸರಿಯಾದ ಮಾತು
ಸರಿಯಾದ ಮನಸು, ಸರಿಯಾದ ಕ್ರಿಯೆಯಲ್ಲಿ
ವಿಶ್ವಾಸವಿರಲಿ.

ಅತ್ಯುತ್ತಮವಾದುದು
ಇನ್ನೂ ಬರಬೇಕಿದೆ ಎಂಬ
ನಂಬಿಕೆಯಿರಲಿ.

ಅನಾರೋಗ್ಯದಲ್ಲಿ ನಮ್ಮ ಉದ್ಯೋಗ
ನಮ್ಮನ್ನು ರಕ್ಷಿಸುವುದಿಲ್ಲ
ಸ್ನೇಹಿತರು ನೆರವಾಗುತ್ತಾರೆ
ಸ್ನೇಹಿತರಿರಲಿ ,
ಮುಖ್ಯವಾಗಿ ಅವರೊಂದಿಗೆ ಸಂಪರ್ಕವಿರಲಿ

ಕಾಲ ಎಲ್ಲವನ್ನು ವಾಸಿ ಮಾಡುತ್ತದೆ ,
ಮರೆಸುತ್ತದೆ ಅದಕ್ಕೆ ಅವಕಾಶವಿರಲಿ.

ಎಲ್ಲರನ್ನು ಎಲ್ಲ ತಪ್ಪುಗಳಿಗಾಗಿ ಕ್ಷಮಿಸುವುದರಿಂದ
ಮನಸು ಹಗುರ, ಆರೋಗ್ಯಕರವಾಗಿರುವುದು.

ಹಣತೆ ಬೆಳಗಿ ಕತ್ತಲೋಡಿಸಿ
ಒಳ್ಳೆಯದು, ಇಷ್ಟವಾಗುವುದು ತಪ್ಪದೆ ಬಳಸಿ
ಯಾವುದನ್ನೂ ಶುಭಘಳಿಗೆಗಾಗಿ ಮೀಸಲಿಡಬೇಡಿ

ಹಿಂದಿನ ಕಹಿನೆನಪುಗಳಿಂದ ,
ಈ ದಿನವನ್ನು ಕೆಡಿಸಿಕೊಳ್ಳುವುದು
ಮೂರ್ಖತನ.

ನಿಮ್ಮನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ
ಯಾರು ಅವರವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ

ಜೀವನದಲ್ಲಿ ಎಲ್ಲವೂ ಸರಿಯಿಲ್ಲ,
ಆದರೂ ಸೊಗಸಾಗಿಯೆ ಇದೆ;
ಆಸಕ್ತಿ ಇದ್ದರೆ ಮಾತ್ರ.

ಬದುಕೊಂದು ಪಾಠಶಾಲೆ
ಕಲಿಯಲು ಬಂದಿದ್ದೇವೆ
ಪರೀಕ್ಷೆಯಲ್ಲಿ ಪ್ರಯತ್ನಿಸುತ್ತೇವೆ
ಸಮಸ್ಯೆಗಳು ಪಠ್ಯಕ್ರಮದ ಒಂದು ಭಾಗ
ಬರುತ್ತವೆ, ಹೋಗುತ್ತವೆ ಕೂಡಿ ಕಳೆವ ಲೆಕ್ಕದ ಹಾಗೆ
ಕಲಿತದ್ದು ಕೊನೆಯವರೆಗೂ ಉಳಿಯುತ್ತದೆ.

ಎಚ್ಚರವಿದ್ದಾಗಲೇ ಹೆಚ್ಚು
ಕನಸು ಕಾಣುವುದು ಲೇಸು.

ಉಲ್ಲಾಸ, ಉತ್ಸಾಹ, ಉಮ್ಮಸ್ಸು
ಹಾಗು ಸ್ನೇಹಿತರು, ಸಂಸಾರ ,
ನಂಬಿಕೆಯಿರಲು ಬಾಳು ಸುಂದರ.

ನಿಶ್ಯಬ್ದ ವಾತಾವರಣದಲ್ಲಿ
ಕನಿಷ್ಟ ಹತ್ತು ನಿಮಿಷವಾದರು
ಕಳೆಯುವುದು ಆರೋಗ್ಯಕ್ಕೆ ಅಗತ್ಯ.

(ಹತ್ತು ದಿಕ್ಕುಗಳಿಂದ ಓದಿದ್ದರ ಪದ್ಯರೂಪಗಳು)

Sep 17, 2008

ಆಕೆ

ಮೋಹಕ ಕಣ್ಣಿನ ಕವಿತೆಗೆ
ಮೋಸ ಹೋಗದಿರು ಓ ಮನಸೆ
ಮತ್ತೆ ಕಾಣುವ ಹಂಬಲಕೆ
ಮತ್ತೆ ಸೋಲದಿರು ನೀ ಕೂಸೆ

ಕನಿಕರವಿಲ್ಲದ ಆ ನೋಟ
ಕಟ್ಟುತ ಕನಸಿನ ತೋಟ
ಎಲ್ಲೆಡೆ ಹಸಿರನು ತುಂಬುತ
ಹಸಿವಿನ ಮೂಲಕ ಸೆಳೆತ

ಚಂಚಲ ಮನಸಿನ ಓ ಚೆಲುವೆ
ಮಿಂಚುಳ್ಳಿಯಂತೆ ಮಿನುಗುವೆ
ಕಾಮನಬಿಲ್ಲು ಬಿಡಿಸುತ ನೀನು
ಮೊನಚಾದ ಕೊಕ್ಕಿಂದ ಕುಕ್ಕುವೆ

ಒಮ್ಮೆಗೆ ಪ್ರಳಯದ ಅನುಭೂತಿ
ಒಳಗಡಗಿದೆ ಹಿಡಿಸುವ ಭೀತಿ
ಹೇಳಲಾಗದ ಮನಮಿಡಿತ
ಹಿಡಿತಕೆ ಸಿಗದಿಹ ಈ ತುಡಿತ

ಏನು ಸಮಾಚಾರ?

ಪಶ್ಚಿಮದಲ್ಲಿ ದೊಡ್ಡಾನೆಗಳಿಗೆ
ದೊಡ್ಡ ಪೆಟ್ಟು
ಏಳಲಾಗದ ಕುಸಿತ
ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ
ನೌಕರರ ಕೆಲಸಕ್ಕೆ ಕುತ್ತು
ಕಚ್ಛಾತೈಲ ಬೆಲೆ ಇಳಿಕೆ

ಇತ್ತ ಷೇರುಪೇಟೆ ಸೂಶ್ಚ್ಯಂಕ ದಕ್ಷಿಣದತ್ತ
ಮರಿ ಆನೆಗಳ ಮೊಗದಲ್ಲಿ ಕಳವಳ
ನಲ್ವತ್ತಾರು ದಾಟಿದ ರುಪಾಯಿ
ತೈಲ ಇಳಿಕೆ, ರುಪಾಯಿ ಏರಿಕೆ
ಪ್ರಯೋಜನವಿಲ್ಲ
ಬೆಕ್ಕಿಗೆ ಸಂಕಟ ,
ಇಲಿಗೆ ಪ್ರಾಣ ಸಂಕಟ

ಮತ್ತೊಂದು ಕಡೆ ಸರಣಿ
ಬಾಂಬ್ ಬ್ಲಾಸ್ಟ್ಸ್
ಮೂವತ್ತು ಮರಣ ,
ಅದೇ ಸಮಾಧಾನ
ಬಿ ಎಮ್ ಡಬ್ಲ್ಯೂ ಆರೋಪಿಗೆ ಶಿಕ್ಷೆ
ಆರುಷಿ ಕೊಲೆ ಆರೋಪಿಗಳಿಗೆ
ಬಂಧನ ಬಿಡುಗಡೆ

ಅಣು ಒಪ್ಪಂದ ಆಲ್ಮೋಸ್ಟ್ ಕ್ಲಿಯರ್
ಆಪರೇಶನ್ ಕಮಲ ಸಿಕ್ಸರ್
ಶಾಲಾ ವಿದ್ಯಾರ್ಥಿಗಳಿಗೆ
ಉಚಿತ ಬಸ್ ಪಾಸ್
ಜೊತೆಗೆ ಬೈಸಿಕಲ್
ಮತಾಂತರದ ವಿರುದ್ಧ
ಗಲಬೆ, ಗೊಂದಲ, ಇರಿತ
ಅವರು ರಾಜೀನಾಮೆಗೆ ಆಗ್ರಹ
ಮುಖ್ಯಮಂತ್ರಿಗಳ ನಕಾರ

ಇದೇ ಸುದ್ದಿ ಪೇಪರ್ನಲ್ಲಿ ,
ಟೀವಿಗಳಲ್ಲಿ, ಇಂಟರ್ನೆಟ್ಟಲ್ಲಿ ,
ಬಸ್ಸಲ್ಲಿ, ಟ್ರೈನಲ್ಲಿ, ಶಾಪಿಂಗ್
ಮಾಲ್ನಲ್ಲಿ, ಗೆಳೆಯರ ಹರಟೆಯಲ್ಲಿ
ಹ್ಹೆ...ತ್ತೇರಿ ತಲೆ ಎಕ್ಕುಟ್ಟೋಗಿದೆ
ಮಗಳೆ, ತೇಜಸ್ವಿ ಕರ್ವಾಲೋ
ಪುಸ್ತಕ ಕೊಡಮ್ಮ ಓದ್ಕೊಡ್ತೀನಿ

Sep 15, 2008

ಕನ್ನಡಪ್ರಭದಲ್ಲಿ - ಕೂಗು...ಎನ್ನ ಮನುಕುಲಕೆ!!!

ಕನ್ನಡ ಪ್ರಭ - ಸೆಪ್ಟಂಬರ್ 16, 2008,

ಕೂಗು ಕವನಗಳ ಲೋಕ. ಮನಸ್ಸಿಗೆ ತೋಚಿದ್ದನ್ನು ಒಂದಿಷ್ಟೂ ಮುಚ್ಚಿಡದ ಬ್ಲಾಗ್ ಅಂಗಣದಲ್ಲಿ ಬ್ಲಾಗಿಗ 'ಏನೆಂದು ಅರಿಯದೆ ಏನನ್ನೋ ಹುಡುಕುತ್ತಾ' ಕನ್ನಡದ ಕಂಪನ್ನು ಬೀರುತ್ತಾ ಸಾಗುತ್ತಾರೆ.....

ಬ್ಲಾಗಾಯಣ ಅಂಕಣದಲ್ಲಿ ನನ್ನ ಕೂಗು ಬ್ಲಾಗನ್ನು 'ದಡ' ಕವನದೊಂದಿಗೆ ಓದುಗರಿಗೆ ಪರಿಚಯಿಸಿದ ನಿಮಗೆ ವಿನಮ್ರ ವಂದನೆಗಳು.

-ಚಂದಿನ

ಎನ್ನ ಕೂಗಿನಲ್ಲಿ ದಡದ ನೆನಪು

ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ

ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ

ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ

ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು

ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ

Sep 13, 2008

ಮಳೆ

ಮಳೆ ಬಂತು ಮಳೆ, ಧೋ ಅಂತ ಮಳೆ
ನಿಲ್ಲದ, ಲಯ ಬಿಡಲೊಲ್ಲದ ಮಳೆ
ರಸ್ತೆ ಗುಂಡಿಗಳ ಕೊಂಡಿಯ ಸೇರಿಸಿ
ಹುಚ್ಚಾಪಟ್ಟೆ ಚಚ್ಚುವ ಮಳೆ

ಅರ್ಧ ತಾಸಿನ ಬರಗಾಲದ ನಂತರ
ತನು ಮನ ತಣಿಸುವ ಮೋಹಕ ಮಳೆ
ಕುತೂಹಲ ಕೆರಳಿಸಿ, ಕಲರವ ಮೂಡಿಸಿ
ಸುರಿಯುತ ಸುರಿಯುವ ಸೋನೆಮಳೆ

ಮಾರನೆ ದಿನಕೆ ಅಲ್ಪವಿರಾಮ
ಆಗಸಕಾಗ ತುಸು ಆರಾಮ
ಗೆಳೆಯರೊಂದಿಗೆ ಹರಟೆಗೆ ಕೂತರೆ
ತರಾಟೆಗೆ ಶುರುವಿಟ್ಟ ಜೋರು ಮಳೆ

( ಮೂಲ ಆಂಗ್ಲ ಭಾಷೆ – ಮೊದಲ ಪ್ರಯತ್ನ ಕ್ಷಮೆಯಿರಲಿ )

ಸಾಕಾಗಿದೆ*

ಸಾಕಾಗಿದೆ
ಉದ್ಯೋಗ
ಉದ್ವೇಗ
ಉದ್ರೇಕ.

ಸಾಕಾಗಿದೆ
ಮಡದಿ
ಮಗು
ಮನೆ.

ಸಾಕಾಗಿದೆ
ಸ್ನೇಹ
ಬಂಧು
ಬಳಗ.

ಸಾಕಾಗಿದೆ
ಗುದ್ದಾಟ
ಒದ್ದಾಟ
ಹುಡುಕಾಟ.

ಸಾಕಾಗಿದೆ
ಸ್ಪರ್ಧೆ
ವೇಗ
ಒತ್ತಡ.

ಸಾಕಾಗಿದೆ
ಸೋಲು
ಸೆಳೆತ
ಸವಾಲು.

ಸಾಕಾಗಿದೆ
ನಿರಾಸೆ
ನೀರಸ
ನಿರುತ್ಸಾಹ.

ಸಾಕಾಗಿದೆ
ನಗರ
ಸದ್ದು
ಗದ್ದಲ.

ಬೇಕಾಗಿದೆ
ಮೌನ
ಮೌನ
ಮೌನ.

Sep 12, 2008

ಮತ್ತೆ ಬರುವನು ಚಂದಿರ - 2

ರವಿಯ ಜೊತೆಗೆ ನಿತ್ಯ ಪಯಣ
ಉರಿವ ಬಿಸಿಲು ಸುರಿದು ಸ್ನಾನ
ಬಿಸಿಲು ಹೀರಿ ಬೆಳಕು ಚೆಲ್ಲಿ
ಚದುರಂಗವಾಡೊ ಚಂದಿರ

ರಾಗ, ದ್ವೇಷ ಬಾಣ ಬೀಸಿ
ಚಾಕು ಚೂರಿ ಬೆನ್ನಿಗಿರಿಸಿ
ಮದ್ದುಗುಂಡು ಸಿಡಿಸಿದಾತ
ಸುಖಪಡುವನೆ ಚಂದಿರ

ಜಾತಿ, ಮತವ ಬಿತ್ತಿ ಬೆಳೆದು
ಶಾಂತಿ, ಸಹನೆ ಕೊಚ್ಚಿ ಕಡಿದು
ಸಾಧು, ಸಂತ, ಸಜ್ಜನನೆಂದರೆ
ಸಹಿಸುವನೆ ಚಂದಿರ

ಹಗಲು ಇರುಳು ದಿನದ ಸಾಲು
ಮುಗಿದ ಮೇಲೆ ಹೊಸತು ಬಾಳು
ತಿಳಿದು ತಿಳಿಯದೇಳು ಬೀಳು
ಸಹಜವೆಲ್ಲ ಚಂದಿರ

ದಿನಕೆ ನೂರು ಜನನ ಮರಣ
ಬೇಕೆ ಇದಕೆ ಕಾಲಹರಣ
ಇರುವ ಮೂರು ದಿನವು ಗೆಳೆಯ
ನಗುತ ನಗಿಸು ಚಂದಿರ

ಹಸಿರೆ ಉಸಿರು ಉಳಿಸು ಹೆಸರು
ಉಳಿಸು ಮಳೆ ಹನಿಯ ನೀರು
ಬೆಳೆಸಿ ಹಸಿರು, ಉಳಿಸಿ ನೀರು
ಉಸಿರು ನೀಡೊ ಚಂದಿರ

ನೆಟ್ಟು ನೋಟ ನೆರಳಿನಲ್ಲಿ
ಬೆಳಕು ಬಿಟ್ಟು ಇರುಳಿನಲ್ಲಿ
ಸತತ ಪಯಣ ನಿಲ್ಲದಿರಲಿ
ಜಯವು ನಿನದೆ ಚಂದಿರ

ಗೊಂದಲಗಳ ಗೂಡು ಕಟ್ಟಿ
ದ್ವಂದ್ವ ಮನದ ರೆಕ್ಕೆಬಿಚ್ಚಿ
ಹಾರಿ ಹೋದ ಹಕ್ಕಿ ನಿನ್ನ
ನೋಡಿ ನಗುವ ಚಂದಿರ

ಇಂಗುತಿಂದ ಮಂಗನಂತೆ
ರೆಂಬೆ ಕೊಂಬೆ ಜಿಗಿಯುತ
ಜಾರಿ ಬಿದ್ದು ಮುರಿದ ಕೈಗೆ
ಯಾರ ಜರಿವೆ ಚಂದಿರ

ಕಣ್ಣ ಮುಚ್ಚಿ ಕತ್ತಲೆಂದು
ಕುಣಿಯಲೇಕೆ ಆತುರ
ಕಳೆದುಕೊಂಡು ಕೊರಗಲೇಕೆ
ಕಣ್ಣ ತೆರೆಯೋ ಚಂದಿರ

Sep 5, 2008

ಸಿಗುವುದೇನು ಉತ್ತರ?*

ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ.

ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಬಳಿಗೆ
ಬರುವುದೇ ಅಚ್ಚರಿ.

ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು.

ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗೂ
ಸಿಗುವುದೇನೇ ಉತ್ತರ?

Sep 3, 2008

ಮತ್ತೆ ಬರುವನು ಚಂದಿರ - 1

ಕೂಡಿ, ಕಳೆವ ಆಟ ತರವೆ
ತಂದ ಗಂಟು ಮರೆತು ಬಿಡುವೆ
ಬೇಡ ಆಸೆ ಬೆಟ್ಟದಷ್ಟು
ಏರಲಾರೆ ಚಂದಿರ

ಸಾಕು ದಿನಕೆ ಮೂರು ತುತ್ತು
ಮಾತೆ ಕೊಟ್ಟ ಹತ್ತು ಮುತ್ತು
ಉಳಿದುದೆಲ್ಲ ಊರು ಪಾಲು
ನಮ್ಮ ಪಾಲಿಗಿರುವ ಚಂದಿರ

ಕತ್ತಲಿರುವ ಜಾಗದಲ್ಲಿ
ಹಣತೆ ಬೆಳಗಿ ಆಪ್ತನಾಗು
ಬಳಲಿ ಬಂದ ಬಂಧುಗಳಿಗೆ
ಬದುಕು ನೀಡು ಚಂದಿರ

ಸ್ವಚ್ಛ ಮನಕೆ ಶ್ವೇತ ವರ್ಣ
ಒಳಗಡಗಿದೆ ಏಳು ಬಣ್ಣ
ಬಿಗಿದಿಡುವ ಬಯಕೆ ತರವೆ
ಬೆಳಗುತಿರುವ ಚಂದಿರ

ಕುತೂಹಲ ಕೆರಳಿದಾಕ್ಷಣ
ಕುಂತಿಗಾಗ ಚಿರಯೌವನ
ದಾನ ವೀರ ಶೂರ ಕರ್ಣ
ವರವಾದನೆ ಚಂದಿರ

ಯಾವ ದಾಹ ಯಾವ ಮೋಹ
ಬಿಡಿಸಿ ಸುತ್ತ ಚಕ್ರವ್ಯೂಹ
ಇರುವ ತನಕ ಸುತ್ತಿ ಸುತ್ತಿ
ಸುಳಿಗೆ ಸಿಕ್ಕ ಚಂದಿರ

ಅರಿವಿಲ್ಲದ ಆಳದಲ್ಲಿ ಆಟವಾಡಬೇಡ
ಬಯಸಿದ್ದು ಸಿಕ್ಕಿದಷ್ಟು ಅತಿಯಾಸೆಬೇಡ
ಹಿಂದಿರುಗಿ ನೋಡೊ ಗೆಳೆಯ
ನೆನಪು ತರುವ ಚಂದಿರ

ಬೆಳಕರಿಯದ ಊರಿನಲ್ಲಿ
ಕತ್ತಲೆಂದು ಕದಲದು
ಹಸಿವಿಲ್ಲದ ಮನುಜನಲ್ಲಿ
ಬೆಳಕು ಬರದು ಚಂದಿರ

ಹುಚ್ಚು ಕುದುರೆ ಓಟದಲ್ಲಿ
ಕುರುಡಾಗಿದೆ ಪಯಣವು
ಎಡವಿಬಿದ್ದ ಸ್ಥಳದ ಸುಳಿವು
ಸಿಗಲಾರದೆ ಚಂದಿರ

ಇತಿಮಿತಿಗಳ ಇತಿಹಾಸ
ಬಲ್ಲವನೆ ಸಂತನು
ಎಲ್ಲೆ ಇರದ ಸಾಹಸಕೆ
ಸೈ ಎನ್ನುವ ಚಂದಿರ

Sep 2, 2008

ಗದ್ದಲ*

ಅದುಮಿಟ್ಟ ಹಂಬಲಗಳು ಒಟ್ಟಾಗಿ
ತತ್ತರಿಸಿದ ಚಿತ್ತ
ಸಿಡಿದ ಸದ್ದಿನ ಗದ್ದಲ
ಸುತ್ತ ಗಡಿಬಿಡಿ ಕೋಲಾಹಲ.

ಘಟಿಸಿದ ಅನಾಹುತ
ತಟಸ್ಥ ಒಮ್ಮೆಗೆ
ನೀರವ ಮೌನ
ಅಲೆ ಅಲೆಯಾಗಿ ಪಯಣ.

ಸ್ಧಿತ್ಯಂತರ ಕ್ಷಣದಲಿ
ದಿಗ್ಭ್ರಮೆ, ರೋದನ
ಸಾಂತ್ವನ ಸಾಲು ಸಾಲು
ಸಂದಿಗ್ಧ ಪರಿಸ್ಥಿತಿ

ಅಸಹಾಯ ಸನ್ನಿವೇಶ
ಸತ್ಯದ ದಿಗ್ದರ್ಶನ
ಇನ್ನು -
ಹೊಸ ಅಧ್ಯಾಯದಾರಂಭ.