ರವಿಯ ಜೊತೆಗೆ ನಿತ್ಯ ಪಯಣ
ಉರಿವ ಬಿಸಿಲು ಸುರಿದು ಸ್ನಾನ
ಬಿಸಿಲು ಹೀರಿ ಬೆಳಕು ಚೆಲ್ಲಿ
ಚದುರಂಗವಾಡೊ ಚಂದಿರ
ರಾಗ, ದ್ವೇಷ ಬಾಣ ಬೀಸಿ
ಚಾಕು ಚೂರಿ ಬೆನ್ನಿಗಿರಿಸಿ
ಮದ್ದುಗುಂಡು ಸಿಡಿಸಿದಾತ
ಸುಖಪಡುವನೆ ಚಂದಿರ
ಜಾತಿ, ಮತವ ಬಿತ್ತಿ ಬೆಳೆದು
ಶಾಂತಿ, ಸಹನೆ ಕೊಚ್ಚಿ ಕಡಿದು
ಸಾಧು, ಸಂತ, ಸಜ್ಜನನೆಂದರೆ
ಸಹಿಸುವನೆ ಚಂದಿರ
ಹಗಲು ಇರುಳು ದಿನದ ಸಾಲು
ಮುಗಿದ ಮೇಲೆ ಹೊಸತು ಬಾಳು
ತಿಳಿದು ತಿಳಿಯದೇಳು ಬೀಳು
ಸಹಜವೆಲ್ಲ ಚಂದಿರ
ದಿನಕೆ ನೂರು ಜನನ ಮರಣ
ಬೇಕೆ ಇದಕೆ ಕಾಲಹರಣ
ಇರುವ ಮೂರು ದಿನವು ಗೆಳೆಯ
ನಗುತ ನಗಿಸು ಚಂದಿರ
ಹಸಿರೆ ಉಸಿರು ಉಳಿಸು ಹೆಸರು
ಉಳಿಸು ಮಳೆ ಹನಿಯ ನೀರು
ಬೆಳೆಸಿ ಹಸಿರು, ಉಳಿಸಿ ನೀರು
ಉಸಿರು ನೀಡೊ ಚಂದಿರ
ನೆಟ್ಟು ನೋಟ ನೆರಳಿನಲ್ಲಿ
ಬೆಳಕು ಬಿಟ್ಟು ಇರುಳಿನಲ್ಲಿ
ಸತತ ಪಯಣ ನಿಲ್ಲದಿರಲಿ
ಜಯವು ನಿನದೆ ಚಂದಿರ
ಗೊಂದಲಗಳ ಗೂಡು ಕಟ್ಟಿ
ದ್ವಂದ್ವ ಮನದ ರೆಕ್ಕೆಬಿಚ್ಚಿ
ಹಾರಿ ಹೋದ ಹಕ್ಕಿ ನಿನ್ನ
ನೋಡಿ ನಗುವ ಚಂದಿರ
ಇಂಗುತಿಂದ ಮಂಗನಂತೆ
ರೆಂಬೆ ಕೊಂಬೆ ಜಿಗಿಯುತ
ಜಾರಿ ಬಿದ್ದು ಮುರಿದ ಕೈಗೆ
ಯಾರ ಜರಿವೆ ಚಂದಿರ
ಕಣ್ಣ ಮುಚ್ಚಿ ಕತ್ತಲೆಂದು
ಕುಣಿಯಲೇಕೆ ಆತುರ
ಕಳೆದುಕೊಂಡು ಕೊರಗಲೇಕೆ
ಕಣ್ಣ ತೆರೆಯೋ ಚಂದಿರ
No comments:
Post a Comment