Dec 14, 2009

ಹಿತವರು...

ನನ್ನ ನೆರಳಿಗೆ ಮುಪ್ಪಿಲ್ಲ,
ನೆನಪುಗಳಂತೆ
ಇವರು ನನ್ನ ಎಂದೂ ತೊರೆಯಲೊಲ್ಲದ,
ತಕರಾರಿಲ್ಲದ ಜೊತೆಗಾರರು.
ಇವರೊಂದಿಗೆ ನಿತ್ಯ ಬಂದು ಹೋಗುವ
ಆತ್ಮೀಯ ಅತಿಥಿ
ಕನಸು.
ಹಗಲಿಗೆ ನೆರಳು, ನೆನಪು
ಇರುಳಿಗೊಂದು ಕನಸು.
ಇವರೆ,
ನನ್ನೊಂದಿಗೆ ಹುಟ್ಟಿಸಾಯುವ
ಅಸಹಾಯಕರೊ, ಅದೃಷ್ಟವಂತರೊ
ಇಲ್ಲಾ ಯಾವದೋ ಅನಿವಾರ್ಯತೆಯ ಸೃಷ್ಟಿ
ಅವರಂತೆ ನಾನು...

Dec 11, 2009

ಬಿಂಬ : 46 – 50

ಬಿಂಬ – 46
ಕಲ್ಲು ಬೀಸಿದ್ದು ಕಾಯಿಗೆ
ಬಿದ್ದದ್ದು ಹಣ್ಣು
ನಂತರ ಪಾಪ ಪಶ್ಚಾತ್ತಾಪ...

ಬಿಂಬ – 47
ಎಲ್ಲರನ್ನೂ ನಿರಂತರ
ಕಾಡುವುದು ಯಾವುದಾದರೂ
ಒಂದು ಹಸಿವು...

ಬಿಂಬ – 48
ನಲ್ಲೆ
ಚಳಿಗಾಲದಲ್ಲಿ
ಎಲ್ಲದಕ್ಕೂ ಮಿಗಿಲು
ನಿನ್ನ ಆಲಿಂಗನ

ಬಿಂಬ – 49
ಒಮ್ಮೆಗೆ,
ಸ್ವರ್ಗವನ್ನೂ ಸಹ ಮರೆಯಬಹುದು,
ಕಾವ್ಯ, ಮದ್ಯ, ಇಲ್ಲಾ ಮಹಿಳೆ
ಸದಾ ಇವರ ನಶೆಯಲ್ಲಿರುವವರು.
ಮತ್ತೆ ಇವರನ್ನು ಕಂಡಾಗ
ಬಹಳ ಸಭ್ಯರೂ ಕೂಡ ತೀವ್ರ ಅಸೂಯೆಯಿಂದ,
ತಮ್ಮ ಅಸಹಾಯಕತೆಗೆ ಮರುಗುತ್ತಾರೆ.

ಬಿಂಬ – 50
ಕ್ಷಮಿಸಿ...
ಕಾಫಿ, ಸಿಗರೇಟ್, ಗರ್ಭನಿರೋಧಕಗಳು
ಮತ್ತೆ ಎಲ್ಲಕ್ಕಿಂತಲೂ ಮುಖ್ಯವಾಗಿ ಮದ್ಯಸಾರ!
ಪ್ರತಿ ಚಳಿಗಾಲದಲ್ಲಿ ತಮ್ಮ ನಿರಂಕುಶ ಅಧಿಕಾರ ಚಲಾಯಿಸುತ್ತವೆ.