Feb 26, 2009

ಪತಿರಾಯರಿಗೊಂದು ಪಿಸುಮಾತು

ನಿಮ್ಮ ವೈವಾಹಿಕ ಜೀವನವು ಪ್ರೀತಿಯ ಬಟ್ಟಲ್ಲಲ್ಲಿ
ತುಂಬಿ ತುಳುಕಬೇಕಾದರೆ,
ನೀವು ತಪ್ಪು ಮಾಡಿದಾಗ, ತಕ್ಷಿಣ ಒಪ್ಪಿಕೊಳ್ಳಿ;
ನೀವು ಸರಿಯೆಂದೆನಿಸಿದಾಗ, ತೆಪ್ಪಗೆ ಬಾಯಿ ಮುಚ್ಚಿಕೊಂಡಿರಿ.

ಮೂಲಕವಿ: ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಅಂತ್ಯಕ್ರಿಯೆಯ ಆಕ್ರಂದನ

ಗಡಿಯಾರಗಳನ್ನು ನಿಲ್ಲಿಸಿ, ದೂರವಾಣಿಯನ್ನು ಕತ್ತರಿಸಿ,
ಜೊಳ್ಳುಸುರಿಸುತ್ತಾ ಬೊಗಳುವ ನಾಯಿಯ ಸುಮ್ಮನಿರಿಸಿ,
ಶಹನಾಹಿಯ ಮೌನವಾಗಿರಿಸಿ ಮತ್ತು ತಬಲವನ್ನು ಮುಚ್ಚಿಡಿ
ಶವವನ್ನು ಹೊರತೆಗೆಯಿರಿ, ಅಳುವವರನ್ನೆಲ್ಲಾ ಬರಲುಬಿಡಿ.

ಏರೋಪ್ಲೇನ್ಗಳು ಶೋಕತಪ್ತವಾಗಿ ಮೇಲೆ ಸುತ್ತುತ್ತಿರಲಿ,
ಆಗಸದಲ್ಲಿ ಅವನು ಸತ್ತ ಸುದ್ದಿಯನ್ನು ಬಿತ್ತರಿಸುತ್ತಾ.

ಬಾತುಕೋಳಿಯ ಬಿಳಿಕತ್ತಿಗೆ ಪಟ್ಟಿಯನ್ನು ಕಟ್ಟಿ,
ಸಂಚಾರಿ ಪೋಲೀಸ್ ಕಪ್ಪು ಖಾದಿ ಗ್ಲೋವ್ ಧರಿಸಲಿ.

ಅವನು ನನ್ನ ಉತ್ತರ, ನನ್ನ ದಕ್ಷಿಣ, ನನ್ನ ಪಶ್ಚಿಮ, ಮತ್ತು ನನ್ನ ಪೂರ್ವ,
ನನ್ನ ವಾರದ ಉದ್ಯೋಗ ಮತ್ತು ನನ್ನ ರವಿವಾರದ ವಿರಾಮ,
ನನ್ನ ಮದ್ಯಾಹ್ನ, ನನ್ನ ಮಧ್ಯರಾತ್ರಿ, ನನ್ನ ಮಾತು, ನನ್ನ ಹಾಡು;
ನಾನು ಪ್ರೀತಿ ಅಮರ ಎಂದು ಭಾವಿಸಿದ್ದೆ: ಅದು ತಪ್ಪಾಯಿತು.

ಆ ತಾರೆಗಳು ಈಗ ಬೇಡವಾಗಿವೆ; ಎಲ್ಲವೂ ಹೊರಹಾಕಿ,
ಚಂದ್ರನನ್ನು ಕಟ್ಟಿಡಿ ಮತ್ತು ಸೂರ್ಯನನ್ನು ಬಿಚ್ಚಿಡಿ,
ಸಾಗರವನ್ನು ಬರಿದಾಗಿಸಿ ಮತ್ತು ಕಾಡನ್ನು ಸ್ವಶ್ಚಗೊಳಿಸಿ;
ಇವುಗಳಿಂದ ಈಗ ಯಾವ ಪ್ರಯೋಜನವೂ ಇಲ್ಲ.

(ಮೂಲ ಕವಿ: ಡಬ್ಲ್ಯೂ. ಎಚ್. ಆಡೆನ್ )

ನವ ಕಾವ್ಯದ ಕೈಪಿಡಿ

1. ಒಬ್ಬ ವ್ಯಕ್ತಿ ಕಾವ್ಯವನ್ನರಿತಾಗ, ಅವನಿಗೆ ತೊಂದರೆಗಳು ಖಚಿತ.
2. ಅವನೊಂದು ಕವಿತೆಯೊಂದಿಗೆ ಬದುಕಿದಾಗ, ಅವನು ಒಬ್ಬಂಟಿಯಾಗಿ ಸಾಯುತ್ತಾನೆ.
3. ಅವನು ಎರಡು ಕವನಗಳೊಂದಿಗೆ ಬದುಕಿದರೆ, ಅವನೊಂದು ಕವನಕ್ಕೆ ನಂಬಿಕೆದ್ರೋಹವೆಸಗುತ್ತಾನೆ.
4. ಅವನೊಂದು ಕವನ ಕಲ್ಪಿಸಿಕೊಂಡರೆ, ಅವನೊಂದು ಮಗು ಕಡಿಮೆ ಹೊಂದುತ್ತಾನೆ.
5. ಅವನೆರಡು ಕವಿತೆಗಳ ಬಗ್ಗೆ ಯೋಚಿಸಿದರೆ, ಅವನೆರಡು ಮಕ್ಕಳು ಕಡಿಮೆ ಹೊಂದುತ್ತಾನೆ.
6. ಅವನು ಬರೆದ ಹಾಗೆ ತಲೆಗೆ ಕಿರೀಟ ಧರಿಸಿದರೆ, ಅವನನ್ನು ಗುರುತಿಸಬಹುದು.
7. ಅವನು ಬರೆದಂತೆ ಕಿರೀಟ ಧರಿಸದಿದ್ದರೆ, ಯಾರಿಗೂ ಅಲ್ಲ ಅವನಿಗೇ ಮೋಸಹೋಗುತ್ತಾನೆ.
8. ಅವನು ಕವಿತೆಯೊಂದಿಗೆ ಕೋಪಿಸಿಕೊಂಡರೆ, ಅವನು ಗಂಡಸರ ತಿರಸ್ಕಾರಕ್ಕೊಳಗಾಗುತ್ತಾನೆ.
9. ಅವನು ಕವಿತೆಯೊಂದಿಗಿನ ಕೋಪ ಮುಂದುವರೆಸಿದರೆ, ಅವನು ಹೆಂಗಸರಿಂದ ತಿರಸ್ಕಾರಕ್ಕೊಳಗಾಗುತ್ತಾನೆ.
10. ಅವನು ಜನರ ಮುಂದೆ ಕಾವ್ಯವನ್ನು ಜರಿದರೆ, ಅವನ ಶೂ ತುಂಬ ಹುಚ್ಚೆಯಿರುತ್ತದೆ.
11. ಅವನು ಅಧಿಕಾರಕ್ಕಾಗಿ ಕಾವ್ಯ ತೊರೆದರೆ, ಅವನಲ್ಲಿ ಬೇಕಾದಷ್ಟು ಅಧಿಕಾರವಿರುತ್ತದೆ.
12. ಅವನ ಕವಿತೆಗಳ ಹೊಗುಳು ಭಟ್ಟನಾದರೆ, ಅವನು ಮೂರ್ಖರು ಇಷ್ಟಪಡುವಂತಾಗುತ್ತಾನೆ.
13. ಅವನ ಕವಿತೆಗಳ ಹೊಗಳುತ್ತಾ, ಮೂರ್ಖರನ್ನು ಇಷ್ಟಪಟ್ಟರೆ, ಅವನು ಬರೆಯುವುದು ನಿಲ್ಲಿಸುತ್ತಾನೆ.
14. ಅವನ ಕವನಗಳಿಂದಾಗಿ ಅವನು ಗುರುತಿಸಿಕೊಳ್ಳಲು ಹಾತೊರೆದರೆ, ಅವನು ಬೆಳದಿಂಗಳಲ್ಲಿ ಕತ್ತೆಕಿರುಬನಂತಾಗುತ್ತಾನೆ.
15. ಅವನು ಕವಿತೆಗಳ ಬರೆಯುತ್ತಾ, ಸಹಚರನ ಕವಿತೆಗಳನ್ನು ಹೊಗಳಿದರೆ, ಅವನಿಗೆ ಸುಂದರ ಸಂಗಾತಿಯಿರುತ್ತಾಳೆ.
16. ಅವನು ಕವಿತೆಗಳ ಬರೆಯುತ್ತಾ, ಸಹಚರನ ಕವಿತೆಗಳನ್ನು ಬಹಳವಾಗಿ ಹೊಗಳಿದರೆ, ಅವನು ಸಹಚರನ ಸಂಗಾತಿಯನ್ನು ಸೆಳೆಯುತ್ತಾನೆ.
17. ಅವನು ಬೇರೆಯವರ ಕವಿತೆಯನ್ನು ತನ್ನದೆಂದರೆ, ಅವನ ಹೃದಯ ದ್ವಿಗುಣಗೊಳ್ಳುತ್ತದೆ.
18. ಅವನು ಅವನ ಕವಿತೆಗಳ ನಗ್ನವಾಗಿರಲು ಬಿಟ್ಟರೆ, ಅವನಿಗೆ ಸಾವಿನ ಭಯ ಕಾಡುತ್ತದೆ.
19. ಅವನಿಗೆ ಸಾವಿನ ಭಯ ಕಾಡಿದರೆ, ಅವನ ಕವನಗಳಿಂದಾಗಿ ಅವನು ಉಳಿಯುತ್ತಾನೆ.
20. ಅವನಿಗೆ ಸಾವಿನ ಭಯವಿರದಿದ್ದರೆ, ಅವನ ಕವನಗಳು ಅವನನ್ನು ಉಳಿಸಬಹುದು, ಇಲ್ಲಾ ಉಳಿಸದಿರಬಹುದು.
21. ಅವನು ಕವನ ಪೂರ್ಣಗೊಳಿಸದರೆ, ಅವನು ಸತ್ವವಿಲ್ಲದ ಉತ್ಕಟಾಕಾಂಕ್ಷೆಯೊಂದಿಗೆ ಮಿಂದು, ಬಿಳಿ ಹಾಳೆಗಳಿಂದ ಮುದ್ದಿಸಿಕೊಳ್ಳುತ್ತಾನೆ.

(ಮೂಲ ಕವಿ: ಮಾರ್ಕ್ ಸ್ಟ್ರಾಂಡ್ )

ಸುಂದರವೀ ಬದುಕು

ನಾ ನದಿಯ ಬಳಿಬಂದು,
ದಡದಲ್ಲಿ ನಿಂತಿಹೆನು.
ವಿಚಾರ ಮಾಡಲೆತ್ನಿಸಿದೆ, ಆಗಲಿಲ್ಲ,
ಆದ್ದರಿಂದ ನದಿಗೆ ದುಮುಕಿ, ಮುಳುಗಿದೆ.

ಒಂದು ಸಾರಿ ಹೊರಬಂದು ಕಿರುಚಿದೆ!
ಎರಡನೇ ಬಾರಿ ಜೋರಾಗಿ ಅತ್ತುಬಿಟ್ಟೆ!
ಆ ನೀರು ಅಷ್ಟೊಂದು ತಣ್ಣಗಿರದಿದ್ದಲ್ಲಿ,
ನಾನು ಮುಳುಗಿ ಸಾಯುತ್ತಿದ್ದೆ.

ಆದರೆ ನೀರಲ್ಲಿ ಬಹಳ ತಣ್ಣಗಿತ್ತು! ತುಂಬಾ ತಣ್ಣಗೆ!

ನಾನು ಎಲಿವೇಟರ್ ಹತ್ತಿದೆ,
ಕೆಳಗಿಂದ ಹದಿನಾರು ಮಹಡಿ ಎತ್ತರಕ್ಕೆ.
ನನ್ನ ಮಗುವಿನ ಬಗ್ಗೆ ಯೋಚಿಸಿದೆ,
ಮತ್ತು ಜಿಗಿಯೋಣವೆಂದು ವಿಚಾರ ಮಾಡಿದೆ.

ಅಲ್ಲಿ ನಿಂತು ಮತ್ತೆ ಕಿರುಚಿದೆ!
ಅಲ್ಲೇ ನಿಂತು ಮತ್ತೆ ಅತ್ತುಬಿಟ್ಟೆ!
ನಾನು ಅಷ್ಟು ಎತ್ತರದಲ್ಲಿರದಿದ್ದಲ್ಲಿ,
ನಾನು ಜಿಗಿದು ಸಾಯುತ್ತಿದ್ದೆ.

ಆದರಲ್ಲಿ ಬಹಳ ಎತ್ತರವಾಗಿತ್ತು! ತುಂಬಾ ಎತ್ತರ!
ಆದ್ದರಿಂದಲೇ ನಾನಿಲ್ಲಿ ಜೀವಂತವಾಗಿರುವೆ,

ನನಗನ್ನಿಸುತ್ತೆ ನಾನು ಜೀವಂತವಾಗೇ ಇರುತ್ತೇನೆ!
ನಾನು ಪ್ರೀತಿಗಾಗಿ ಸಾಯಬಹುದಿತ್ತು--
ಆದರೆ ನಾನು ಬದುಕಲು ಜನ್ಮ ಪಡೆದಿರುವೆ.

ನಿಮಗೆ ನಾನು ಕಿರುಚುವುದು ಕೇಳಿಸಬಹುದು,
ಮತ್ತು ನಾನಳುವುದು ನೋಡಬಹುದು--
ಇದು ನನ್ನ ದೃಢಸಂಕಲ್ಪ, ಮುದ್ದು ಮಗುವೆ,
ನೀವೇನಾದರೂ ನಾನು ಸಾಯುವುದು ಕಂಡರೆ.

ಸುಂದರವೀ ಬದುಕು! ಮಧುಪಾನದಂತೆ! ಸುಂದರವೀ ಬದುಕು!

(ಮೂಲ ಕವಿ: ಲ್ಯಾಂಗ್ಸ್ಟನ್ ಹ್ಯೂಗ್ಸ್ )

Feb 25, 2009

ಅಲ್ಲಿರುವುದು ಮತ್ತೊಂದು ನೀಲಾಕಾಶ

ಅಲ್ಲಿರುವುದು ಮತ್ತೊಂದು ನೀಲಾಕಾಶ
ಎಂದಿಗೂ ಪ್ರಶಾಂತವಾಗಿ ಮತ್ತು ಆಕರ್ಷಕವಾಗಿ,
ಮತ್ತೆ ಅಲ್ಲಿರುವುದೊಂದು ಪ್ರಕಾಶಮಾನ ರವಿಕಿರಣ
ಅಲ್ಲಿ ಕತ್ತಾಲಾಗಿದ್ದರೂ ಸರಿಯೆ;
ಮಾಸಿದ ಕಗ್ಗಾಡಾದರೂ ಪರವಾಗಿಲ್ಲ, ಆಸ್ಟಿನ್,
ನಿಶಬ್ಧವಾಗಿರುವ ಹೊಲ, ಗದ್ದೆಗಳಾದರೂ ಸರಿಯೆ –
ಇಲ್ಲಿರುವುದೊಂದು ಪುಟ್ಟ ಕಾಡು,
ನಿತ್ಯ ಹಸಿರೆಳೆಗಳನ್ನೊತ್ತುಕೊಂಡು;
ಇಲ್ಲಿರುವುದೊಂದು ಕಂಗೊಳಿಸುವ ಬೃಂದಾವನ,
ಮಂಜು ಮುಸುಕದಿರುವ ಸ್ಥಳದಲ್ಲಿ;
ಹೊಳೆವ ಹೂವುಗಳಲ್ಲಿ,
ಕೇಳಿಸಿಕೊಳ್ಳುವೆ ರಮಣೀಯ ದುಂಬಿಯ ನಿನಾದ:
ಪ್ರೀತಿಯ, ನನ್ನ ಸೋದರನೆ,
ನನ್ನ ಬೃಂದಾವನದೊಳಗೆ ಬಾ!

ಮೂಲ ಕವಿಯತ್ರಿ: ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

ಮತ್ತೆ ಅಮೇರಿಕಾ ಅಮೇರಿಕ ಹಾಗೇ ಇರಲಿ

ಮತ್ತೆ ಅಮೇರಿಕಾ ಅಮೇರಿಕ ಹಾಗೇ ಇರಲಿ.
ಮೊದಲಿನಂತೆ ಎಲ್ಲರ ಕನಸಿನ ಕನಸಾಗಿ.
ನಿರ್ಜೀವ ಬಯಲಲ್ಲಿ ಮೊದಲ ಸಸಿ ನೆಟ್ಟು,
ಸ್ವತಂತ್ರ ನೆಲೆಯಲ್ಲಿ ನೆಲೆಸಿ ಸ್ವಚ್ಛಂದವಾಗಿ.

(ಅಮೇರಿಕಾ ಎಂದಿಗೂ ನನಗೆ ಅಮೇರಿಕಾ ಹಾಗಿರಲಿಲ್ಲ)

ಅಮೇರಿಕಾ ಕನಸುಗಾರರ ಕನಸಿನ ಕನಸಾಗಲಿ--
ಅತೀ ಶಕ್ತಿಶಾಲಿಯಾದ ಒಲವಿನ ನಾಡಾಗಲಿ
ಇಲ್ಲಿ ಯಾವ ರಾಜರ ಪಿತೂರಿ, ಅಥವ ಸರ್ವಾಧಿಕಾರಿಯ ಕುತಂತ್ರಗಳಿಗೆ
ಖಂಡಿತ ಅವಕಾಶವಿರುವುದಿಲ್ಲ.
ಅಂಥವರನ್ನು ಒಬ್ಬರ ಮೇಲೊಬ್ಬರನ್ನಿಟ್ಟು ನುಚ್ಚುನೂರಾಗಿಸುವರು.

(ಅದು ಖಂಡಿತ ನನಗೆ ಅಮೇರಿಕಾ ಆಗಲಿಲ್ಲ)

ಓ, ನನ್ನ ಸ್ವ್ವತಂತ್ರ ನಾಡಿನ ಮುಡಿಗೆ ಹುಸಿ ದೇಶಭಕ್ತಿಯ ಹೂಗುಚ್ಚವನ್ನು
ಕಿರೀಟವಾಗಿರಿಸದಿರಲಿ,
ಆದರೆ ಅವಕಾಶಗಳು ನಿಜವಾಗಿ, ಜೀವನ ಮುಕ್ತವಾಗಿರಲಿ,
ನಾವು ಉಸಿರಾಡುವ ಗಾಳಿಯಲ್ಲಿ ಸಮಾನತೆಯಿರಲಿ.

(ನನಗೆಂದಿಗೂ ಸಮಾನತೆಯಾಗಲಿ, ಅಥವ ಸ್ವತಂತ್ರವಾಗಲಿ
"ಈ ಸ್ವತಂತ್ರ ನಾಡಲ್ಲಿ" ದೊರೆಯಲಿಲ್ಲ)

ಹೇಳಿ, ಯಾರು ನೀವು ಕತ್ತಲಲ್ಲಿ ತೊದಲುತ್ತಿರುವವರು?
ಮತ್ತೆ ಯಾರಲ್ಲಿ ತಮ್ಮ ಸೆರಗಿಂದ ತಾರೆಗಳ ಮುಚ್ಚಲೆತ್ನಿಸುತ್ತಿರುವವರು?

ನಾನೊಬ್ಬ ಬಿಳಿಯ ಬಡವನು, ಮೋಸಹೋಗಿ, ದೂರನೂಕಲ್ಪಟ್ಟವನು,
ನಾನೊಬ್ಬ ನೀಗ್ರೊ, ಜೀತದಾಳುವಿನ ಮಚ್ಚೆಯೊತ್ತವನು.
ನಾನೊಬ್ಬ ಕೆಂಪು ಮನುಷ್ಯ, ತನ್ನ ನೆಲೆಯಿಂದ ದೂಡಲ್ಪಟ್ಟವನು,
ನಾನೊಬ್ಬ ವಲಸಿಗ, ನಂಬಿಕೆಯ ಬಲವಾಗಿಡಿದಿಟ್ಟು, ನಾ ಕೋರುವೆ--
ಮತ್ತದೇ ನಿಷ್ಪ್ರಯೋಜಕ ಯೋಜನೆಗಳನ್ನು ಮಾತ್ರ ಕಾಣುತ್ತಾ,
ನಾಯಿಯು ನಾಯಿಯ ಕಬಳಿಸುವ, ಬಲ್ಲಿದರು ಬಡವರ ತುಳಿಯುವುದನ್ನು.

ನಾನೊಬ್ಬ ಶಕ್ತಿ, ಸಾಮರ್ಥ್ಯ ಮತ್ತು ಅಪಾರ ನಂಬಿಕೆಯುಳ್ಳ ಯುವಕ
ಪುರಾತನ ಕೊನೆಯಿಲ್ಲದ ಸರಪಳಿಯಲ್ಲಿ ಸಿಕ್ಕಿಕೊಂಡಿರುವವ,
ಲಾಭಕ್ಕಾಗಿ, ಅಧಿಕಾರಕ್ಕಾಗಿ, ಗಳಿಕೆಗಾಗಿ, ನೆಲವನ್ನು ಕಬಳಿಸಿದ್ದಾರೆ!
ಚಿನ್ನವನ್ನು ಕಬಳಿಸಿದ್ದಾರೆ! ಅವರ ಅಗತ್ಯಗಳ ಪೂರೈಸುವ ಎಲ್ಲ
ಹಾದಿಗಳನ್ನು ಕಬಳಿಸಿದ್ದಾರೆ!
ಕೆಲಸಗಾರರ ಕೆಲಸವನ್ನು! ಅವರ ವರಮಾನವನ್ನು!
ತನ್ನ ಸ್ವಾರ್ಥ ಹಾಗು ದುರಾಸೆಯಿಂದ ಎಲ್ಲವನ್ನೂ ತಮ್ಮದಾಗಿಸಿಕೊಂಡಿದ್ದಾರೆ!

ನಾನೊಬ್ಬ ರೈತ, ಈ ಮಣ್ಣನ್ನು ನಂಬಿರುವವನು.
ನಾನೊಬ್ಬ ಕಾರ್ಮಿಕ, ಯಂತ್ರಕ್ಕೆ ಮಾರಲ್ಪಟ್ಟವನು.
ನಾನೊಬ್ಬ ನೀಗ್ರೊ, ನಿಮ್ಮೆಲ್ಲರ ಸೇವಕನು.
ನಾನೊಬ್ಬ ಸಂಯಮವಿರುವ, ಹಸಿದಿರುವವರಲ್ಲೊಬ್ಬ, ಅಂದರೆ--
ಕನಸಿದ್ದರೂ ಇಂದಿಗೂ ಹಸಿದಿರುವವ.
ಇಂದಿಗೂ ಸಾಕಷ್ಟು ಪೆಟ್ಟು ತಿಂದವ-- ಓ, ಮೊದಲಿಗರು!
ನಾನೊಬ್ಬ ಎಂದಿಗೂ ಮುಂದುವರೆಯದ ವ್ಯಕ್ತಿ,
ಬಡ ಕಾರ್ಮಿಕ ಕಾಲದಿಂದ ಮಾರಿ-ಕೊಳ್ಳಲ್ಪಟ್ಟವನು.

ಆದರೂ ನಾನೊಬ್ಬ, ತಮ್ಮ ಕನಿಷ್ಟ ಕನಸು ಕಂಡವರಲ್ಲೊಬ್ಬ
ಹಳೆಯ ಕಾಲದ ಜಮೀನ್ದಾರರಿದ್ದರಲ್ಲಾ,
ಯಾರ ಕನಸು ಅಷ್ಟೊಂದು ಬಲವಾದ, ಧೈರ್ಯವಾದ, ನಿಜವಾದ ಕನಸಾಗಿತ್ತು,
ಅದು ಈಗಲೂ ತನ್ನ ಪೌರುಶದಿಂದ ನಿರ್ಭಯವಾಗಿ ಹಾಡುತ್ತಿದೆ
ಪ್ರತಿ ಇಟ್ಟಿಗೆ ಮತ್ತು ಕಲ್ಲಿನೊಳಗಿಂದ, ಹಣೆಯ ಪ್ರತಿ ತಿರುವಿನಲ್ಲೂ,
ಅಮೇರಿಕಾದ ಇಂದಿನ ಸ್ಥಿತಿಗೆ ಮೂಲ ಕಾರಣಕರ್ತರು.
ಓ, ನಾನು ಮೊದಲ ಸಮುದ್ರಯಾನದಲ್ಲಿ ಪಯಣಿಸಿದ ನಾವಿಕ
ನನ್ನ ನೆಲೆಗಾಗಿ, ಮನೆಗಾಗಿ ಹುಡುಕುತ್ತಾ--
ಕತ್ತಲ ಐರ್ಲ್ಯಾಂಡಿನ ಕಣಿವೆ, ಮತ್ತೆ ಪೊಲ್ಯಾಂಡಿನ ಬಯಲು, ಮತ್ತು
ಇಗ್ಲೆಂಡಿನ ಹುಲ್ಲುಗಾಡನ್ನು, ಮತ್ತೆ ಬಿರುಕು ಬಿಟ್ಟ ಕಪ್ಪು ಆಫ್ರಿಕಾ ಖಂಡವನ್ನು
ತೊರೆದು ಬಂದೆ "ಈ ಸ್ವತಂತ್ರ ನಾಡನ್ನು" ಕಟ್ಟಲು.

ಸ್ವತಂತ್ರ!

ಸ್ವತಂತ್ರವೆಂದು ಯಾರು ಹೇಳಿದರು? ನಾನಲ್ಲ?
ಖಂಡಿತ ನಾನಲ್ಲ? ನಿರಾಶ್ರಿತ ಶಿಬಿರಗಳಲ್ಲಿರುವ ಲಕ್ಷಾಂತರ ಮಂದಿ?
ಪ್ರತಿಭಟಿಸಿದಾಗ ಲಕ್ಷಾಂತರ ಜನರನ್ನು ಕೊಂದರಲ್ಲಾ ಅವರು?
ನಯಾಪೈಸೆಯಿರದ ಲಕ್ಷಾಂತರ ನಿರ್ಗತಿಕರು?
ನಾವು ಕಂಡ ಎಲ್ಲ ಕನಸುಗಳಿಗಾಗಿ,
ಮತ್ತೆ ನಾವಾಡಿದ ಎಲ್ಲ ಹಾಡುಗಳಿಗಾಗಿ,
ಮತ್ತೆ ನಾವಿಟ್ಟ ಎಲ್ಲ ನಂಬಿಕೆಗಳಿಗಾಗಿ,
ನಯಾಪೈಸೆಯಿರದ ಲಕ್ಷಾಂತರ ನಿರ್ಗತಿಕರು--
ನಾವು ಕಂಡ ಕನಸನ್ನು ಹೊರತುಪಡಿಸಿ,
ಆ ಕನಸೀಗ ಕೊನೆಯ ಉಸಿರಾಡುತ್ತಿದೆ.

ಓ, ಮತ್ತೆ ಅಮೇರಿಕಾ ಅಮೇರಿಕ ಹಾಗೇ ಇರಲಿ
ಯಾವ ನಾಡು ಎಂದಿಗೂ ಕಲ್ಮಶಗೊಳ್ಳದೆ--
ಮತ್ತೆ ಹಾಗೇ ಇರಲಿ--
ಯಾವ ನಾಡಲ್ಲಿ ಪ್ರತಿ ವ್ಯಕ್ತಿಯೂ ಸ್ವತಂತ್ರನಾಗಿರಬಲ್ಲನೊ.

ಆ ನಾಡು ನನ್ನದು-- ಕಡುಬಡವನದ್ದು, ಭಾರತೀಯನದ್ದು,
ನೀಗ್ರೊನದ್ದು, ನನ್ನದು--
ಯಾರು ಅಮೇರಿಕಾ ರೂಪಿಸಿದವರೊ ಅವರದು,
ಯಾರು ಬೆವರು ಹಾಗು ರಕ್ತ ಸುರಿಸಿದರೊ,
ಯಾರ ನಂಬಿಕೆ ಮತ್ತು ನೋವುಂಡರೊ,
ಯಾವ ಕೈಗಳು ಕುಲುಮೆಯಲ್ಲಿ, ಯಾರು ಮಳೆಯಲ್ಲಿ ನೇಗಿಲುತ್ತರೊ,
ಅವರು, ತಮ್ಮ ಸ್ವಾಭಿಮಾನದ ಕನಸನ್ನು ಮತ್ತೆ ಕಾಣುವಂತಾಬೇಕು.

ಖಂಡಿತ, ನೀವು ಬಯಸುವ ಯಾವ ಕೆಟ್ಟ ಹೆಸರಿಂದಾದರೂ ಕರೆಯಿರಿ--
ಉಕ್ಕಿನಂತಹ ಸ್ವತಂತ್ರ ಎಂದಿಗೂ ಕೊಳಕಾಗದು.
ಯಾರು ಜನರ ಜೀವಹಿಂಡಿ ತಿಗಣೆಗಳ ಹಾಗೆ ಬದುಕುತ್ತಿದ್ದಾರೆ,
ಅವರಿಂದ ನಮ್ಮ ನೆಲವನ್ನು ಮರಳಿ ಪಡೆಯಬೇಕು,
ಅಮೇರಿಕಾ!

ಓ, ಹೌದು,
ನಾನು ಸರಳವಾಗಿ ಹೇಳುತ್ತಿದ್ದೇನೆ,

ಅಮೇರಿಕಾ ಎಂದಿಗೂ ನನಗೆ ಅಮೇರಿಕಾ ಹಾಗಿರಲಿಲಲ್ಲ.
ಆದರೂ, ಪ್ರಮಾಣ ಮಾಡಿ ಹೇಳುವೆ--
ಅಮೇರಿಕಾ ಖಂಡಿತ ನನ್ನದಾಗುತ್ತದೆ!

ನಮ್ಮ ನಾಯಕನ ಸಾವಿನ ಕುರುಹುಗಳಿಂದ,
ಮಾನಭಂಗ ಮಾಡಿ, ಮೊಗ್ಗಿನಲ್ಲೇ ಕಿವುಚಿದ, ಗುಪ್ತ ಕಾರ್ಯಾಚರಣೆಗಳಿಂದ,
ಸುಳ್ಳುಗಳಿಂದ,
ನಾವೆಲ್ಲರೂ ಸುಧಾರಿಸಿಕೊಂಡು ಹೊರಬರಬೇಕು.
ಈ ನೆಲ, ಗಣಿಗಳು, ಅರಣ್ಯ, ನದಿಗಳು,
ಬೆಟ್ಟಗಳು, ಮತ್ತು ಕೊನೆಯಿಲ್ಲದ ಬಯಲು,
ಎಲ್ಲವೂ, ಅದ್ಭುತವಾಗಿ ಹಮ್ಮಿರುವ ಎಲ್ಲ ಹಸಿರು ರಾಜ್ಯಗಳೂಂದಿಗೆ--
ಮತ್ತೆ ಅಮೇರಿಕಾ ಕಟ್ಟೋಣ!


(ಮೂಲಕವಿ: ಲ್ಯಾಂಗ್ಸ್ಟನ್ ಹ್ಯೂಗ್ಸ್ )

Feb 23, 2009

ಆದರೂ ನಾನೆದ್ದು ನಿಲ್ಲುವೆ!

ನೀವು ನನ್ನನ್ನು ಇತಿಹಾಸದ ಪುಟದಗಳಲ್ಲಿ ಮುಚ್ಚಿಡಬಹುದು,
ನಿಮ್ಮ ಕೊಳಕು, ನಿಕೃಷ್ಟ, ತಿರುಚಿದ ಸುಳ್ಳುಗಳಿಂದ.
ನನ್ನನ್ನು ಆ ಕೊಳಕಿನಡಿಯಲ್ಲೇ ತುಳಿದದರೂ ಸಹ
ನಾನು ಧೂಳೆದ್ದು ನಿಲ್ಲುವಂತೆ ಎದ್ದು ನಿಲ್ಲುವೆ.

ನನ್ನೀ ಒರಟುತನ ನಿಮಗೆ ಕೋಪ ತರಿಸುವುದೇ?
ಎಲ್ಲಕಡೆಯಿಂದ ಬಿದ್ದ ಹೊಡೆತಗಳಿಗೇಕೆ ನೊಂದಿರುವಿರಿ?
ಏಕೆಂದರೆ, ನನ್ನ ನಡುಮನೆಯಲ್ಲಿ ತೈಲಹೊಮ್ಮುವ
ಕೊಳವೆ ಬಾವಿಗಳಿರುವಂತೆ ನಾನು ನಡೆಯುತ್ತೇನೆ.

ಹಾಗೇ ಆ ಚಂದ್ರ ಹಾಗು ಸೂರ್ಯರಿರುವಂತೆ,
ಭರದಿಂದ ಅಪ್ಪಳಿಸುವ ಭೀಕರ ಅಲೆಗಳಂತೆ,
ನಂಬಿಕೆಗಳು ಮೂಡಿ ಬಲವಾಗಿ ಬೆಳೆಯುವಂತೆ,
ನಾನೆದ್ದು ನಿಲ್ಲುವೆ.

ನೀವು ನನ್ನ ವಿನಾಶವನ್ನು ಕಾಣಲು ಬಯಸುವಿರಾ?
ನಾನು ತಲೆತಗ್ಗಿಸಿ, ಕಣ್ಣುಗಳ ಕೆಳಗಿಳಿಸುವುದನ್ನು,
ನನ್ನ ಭುಜಗಳು ಜೋತುಬಿದ್ದು ನೆಲಕ್ಕುರುಳುವುದನ್ನು,
ತೀವ್ರವೇದನೆಯಿಂದ ಬಳಲಿ ಎದೆಗುಂದುವುದನ್ನು.

ನನ್ನ ದರ್ಪ ನಿಮಗೆ ನೋವುಂಟುಮಾಡುವುದೇ?
ಅದನ್ನು ಅಷ್ಟೊಂದು ಕೆಟ್ಟದಾಗಿ ಪರಿಗಣಿಸಬೇಡಿ,
ಏಕೆಂದರೆ, ನನ್ನ ಮನೆಯ ಹಿತ್ತಲಿನಲ್ಲಿ
ಚಿನ್ನದಗಣಿಗಳಿರುವಂತೆ ನಾನು ನಗುತ್ತಿರುತ್ತೇನೆ.

ನೀವು ನಿಮ್ಮ ಶಬ್ಧಗಳಿಂದ ನನ್ನ ಕೊಲ್ಲಬಹುದು,
ನಿಮ್ಮ ಕಣ್ನೋಟದಿಂದ ನನ್ನ ಕತ್ತರಿಸಬಹುದು,
ನಿಮ್ಮ ದ್ವೇಷದಿಂದ ನನ್ನ ಸಾಯಿಸಲೂಬಹುದು,
ಆದರೂ ನಾನು ಬಿರುಗಾಳಿಯಂತೆ ಎದ್ದುನಿಲ್ಲುವೆ.

ನನ್ನ ಮಾದಕ ಸೌಂದರ್ಯ ನಿಮ್ಮನ್ನು ಕೆರಳಿಸುವುದೇ?
ನನ್ನ ತೊಡೆಗಳು ಸೇರುವಲ್ಲಿ ವಜ್ರಗಳಿರುವಂತೆ,
ಕುಣಿಯುವುದು ನಿಮ್ಮಲ್ಲಿ ಆಶ್ಚರ್ಯ ಮೂಡಿಸುವುದೇ?

ಇತಿಹಾಸದೊಳಗೆ ನಾಚಿಕೆಗೀಡಾದ ಗುಡಿಸಲುಗಳಿಂದ,
ಹೊರಬಂದು ನಾನೆದ್ದು ನಿಲ್ಲುವೆ.
ಭೂತಕಾಲದ ತೀವ್ರ ನೋವಿನ ತಳಪಾಯದಿಂದ
ಮೇಲೆದ್ದು ನಿಲ್ಲುವೆ.
ನಾನೊಂದು ಕಪ್ಪುಸಮುದ್ರ, ಇದ್ದಕ್ಕಿದ್ದಂತೆ ಮೇಲೆರಗುವೆ,
ವಿಶಾಲವಾಗುವೆ, ಸುರಂಗದಂತಾಗುವೆ, ಉಕ್ಕಿದಲೆಗಳನ್ನು
ಎದುರಿಸುವೆ, ಭಯಾನಕ ಭಯವನ್ನು ತೊರೆದು ನಿಲ್ಲುವೆ.
ಸ್ಪಷ್ಟವಾಗಿ ಅತ್ಯದ್ಭುತವಾದ ಮುಂಜಾವಿನಲ್ಲಿ ನಾನೆದ್ದು ನಿಲ್ಲುವೆ.

ನನ್ನ ಪೂರ್ವಜರಿತ್ತ ಬಳುವಳಿಗಳೊಂದಿಗೆ,
ನಾನು ಜೀತದಾಳುವಿನ ಕನಸು ಮತ್ತು ಆಶಾಕಿರಣ.
ನಾನೆದ್ದು ನಿಲ್ಲುವೆ
ನಾನೆದ್ದು ನಿಲ್ಲುವೆ
ನಾನೆದ್ದು ನಿಲ್ಲುವೆ.

ಮೂಲ ಕವಿಯತ್ರಿ: ಮಾಯಾ ಏಂಜೆಲೌ
ಕನ್ನಡಕ್ಕೆ: ಚಂದಿನ

ಅಮೇರಿಕಾ ಹಾಡು ನಾನು ಸಹ ಹಾಡಬಲ್ಲೆ!

ಅಮೇರಿಕಾ ಹಾಡು ನಾನು ಸಹ ಹಾಡಬಲ್ಲೆ!
ನಾನವರ ಕಪ್ಪು ಸಹೋದರ,
ಅವರು ನನಗೆ ಅಡುಗೆಮನೆಯಲ್ಲಿ
ಊಟಮಾಡು ಎಂದು ಹೇಳಿ ಕಳುಹಿಸುತ್ತಾರೆ
ಆದರೆ ನಾನು ಮುಗುಳ್ನಕ್ಕು,
ಚೆನ್ನಾಗಿ ಮುಕ್ಕುತ್ತೇನೆ,
ಆದ್ದರಿಂದಲೇ ಬಲಾಢ್ಯನಾಗಿದ್ದೇನೆ.

ನಾಳೆ,
ನನ್ನ ಜೊತೆಗೆ ಯಾರಾದರೂ ಸಿಕ್ಕಾಗ,
ನಾನು ಊಟದ ಟೇಬಲ್ಲಿನ ಬಳಿಯಿರುತ್ತೇನೆ.
ನನಗೆ “ಅಡುಗೆಮನೆಯಲ್ಲಿ ಊಟ ಮಾಡು”
ಎಂದೇಳುವ ಧೈರ್ಯ ಆಗ ಯಾರಿಗೂ ಇರುವುದಿಲ್ಲ.

ಅದರ ಜೊತೆಗೆ,
ಅವರು ನಾನೆಷ್ಟು ಸುಂದರನೆಂದು ಆಗ ಮನಗಾಣುತ್ತಾರೆ,
ಹಾಗು ಅದಕ್ಕಾಗಿ ಅವರು ನಾಚಿಕೆ ಪಟ್ಟುಕೊಳ್ಳುತ್ತಾರೆ--

ನಾನೂ ಸಹ ಅಮೇರಿಕಾ ಪ್ರಜೆ.

(ಮೂಲಕವಿ: ಲ್ಯಾಂಗ್ಸ್ಟನ್ ಹ್ಯೂಗ್ಸ್ )

Feb 21, 2009

ಪಂಜರದಕ್ಕಿ ಹಾಡುವುದೇಕೆಂದು ನಾ ಬಲ್ಲೆ

ಸ್ವಚ್ಛಂದ ಹಕ್ಕಿ ಗಾಳಿಯ ಜೊತೆ ಜಿಗಿಯುತಾ,
ಹಾಗೇ ತೇಲಾಡುತಾ ವೇಗ ಕ್ಷೀಣಿಸಿ ಕೆಳಜಾರುತ್ತದೆ
ಮತ್ತು ತನ್ನ ರೆಕ್ಕೆಗಳ ತಿಳಿಗೆಂಪು ರವಿಕಿರಣಗಳಲ್ಲಿ ಅದ್ದಿ
ಮತ್ತೆ ಇಡೀ ಅಂಬರ ತನ್ನದೆನ್ನುವ ದೈರ್ಯ ತೋರುತ್ತದೆ.

ಆದರೆ, ಪಂಜರದಕ್ಕಿ ಇಕ್ಕಟ್ಟಿನ ಪಂಜರದೊಳಗೆ ಸಿಕ್ಕಿ
ಬೇಸರದಿಂದ ನಡೆಯುತ್ತದೆ, ಕ್ರೂರ ಕಂಬಿಗಳ ಮೂಲಕ
ಆಗಾಗ ಹೊರನೋಡುತ್ತಿರುತ್ತದೆ.
ಅದರ ರೆಕ್ಕೆಗಳ ಕತ್ತರಿಸಿ, ಕಾಲು ಕಟ್ಟಿದ್ದಾರೆ.
ಆದ್ದರಿಂದಲೇ, ಹಾಡಲು ತನ್ನ ಗಂಟಲು ತೆರೆಯುತ್ತದೆ.

ಪಂಜರದಕ್ಕಿ ಭಯದಿಂದ ನಡುಗುವ ದ್ವನಿಯಲ್ಲಿ ಹಾಡುತ್ತದೆ,
ತನಗರಿವಿರದ ವಸ್ತುಗಳ ಕಾಣುವ ಹಂಬಲಿದಿಂದ ಹಾತೊರೆಯುತ್ತದೆ.
ಅದರ ರಾಗ ದೂರದ ಬೆಟ್ಟದವರೆಗೂ ಕೇಳಿಸುತ್ತದೆ.
ಅದು, ತನ್ನ ಸ್ವಾತಂತ್ರ್ಯಕ್ಕಾಗಿ ಹಾಡುತ್ತದೆ.


ಸ್ವಚ್ಛಂದ ಹಕ್ಕಿ ಮುಂಬರುವ ತಂಗಾಳಿಯ ಬಗ್ಗೆ ಯೋಚಿಸುತ್ತದೆ
ಮತ್ತು ತೂಗಾಡುವ ಮರಗಳಿಂದ ಹೊಮ್ಮುವ ಅಹ್ಲಾದಕರ,
ಮೃದುವಾಗಿ ಬೀಸುವಗಾಳಿ
ಹಾಗೇ ಮುಸ್ಸಂಜೆಯಲಿ ಕೊಬ್ಬಿದ ಹುಳಗಳು ಹುಲ್ಲುಹಾಸಿಗೆಯಲಿ ಕಾದಿರುತ್ತವೆ.
ಮತ್ತು ನೀಳಾಕಾಶ ತನ್ನ ಹೆಸರಿಗೆಂದೇ ಸಾರುತ್ತದೆ.

ಆದರೆ ಪಂಜರದಕ್ಕಿ ತನ್ನ ಕನಸುಗಳ ಸಮಾಧಿಯ ಮೇಲೆ ನಿಂತು,
ಅದರ ನೆರಳು ಭಯಾನಕ ಕನಸಿನ ಕನವರಿಕೆಯಿಂದ
ಕಿರುಚುತ್ತದೆ.
ಅದರ ರೆಕ್ಕೆಗಳ ಕತ್ತರಿಸಿ, ಕಾಲು ಕಟ್ಟಿದ್ದಾರೆ.
ಆದ್ದರಿಂದಲೇ, ಹಾಡಲು ತನ್ನ ಗಂಟಲು ತೆರೆಯುತ್ತದೆ.


ಪಂಜರದಕ್ಕಿ ಭಯದಿಂದ ನಡುಗುವ ದ್ವನಿಯಲ್ಲಿ ಹಾಡುತ್ತದೆ,
ತನಗರಿವಿರದ ವಸ್ತುಗಳ ಕಾಣುವ ಹಂಬಲದಿಂದ ಹಾತೊರೆಯುತ್ತದೆ.
ಅದರ ರಾಗ ದೂರದ ಬೆಟ್ಟದವರೆಗೂ ಕೇಳಿಸುತ್ತದೆ.
ಅದು ತನ್ನ ಸ್ವಾತಂತ್ರ್ಯಕ್ಕಾಗಿ ಹಾಡುತ್ತದೆ.


ಮೂಲಕವಿಯತ್ರಿ: ಮಾಯಾ ಏಂಜೆಲೌ

Feb 20, 2009

ಕೊಳಕು ಕೋಣೆ

ಕೊಳಕು ಕೋಣೆ

ಈ ಕೋಣೆ ಯಾರದೇ ಆಗಿರಲಿ,
ಅವರಿಗೆ ನಾಚಿಕೆಯಾಗಬೇಕು!
ಅವನ ಕಾಚಾ ಲ್ಯಾಂಪಿನ ಮೇಲೆ ತೂಗಾಡುತ್ತಿದೆ,
ಅವನ ಕೋಟು ಆಗಲೇ ತುಂಬಿರುವ ಚೇರಿನಲ್ಲಿದೆ,
ಅದು ಸಾಕಷ್ಟು ಕೊಳಕಾಗಿ, ಕರೆಕಟ್ಟುತ್ತಿದೆ,
ಅವನ ದಿನನಿತ್ಯ ಬಳಸುವ ಪುಸ್ತಕ ಕಿಟಕಿಯಲ್ಲಿ ಸಿಕ್ಕಿಸಿದ್ದಾನೆ,
ಅವನ ಸ್ವೆಟರ್ ಪ್ಲೋರ್ ಮೇಲೆ ಎಸೆದಿದ್ದಾನೆ,
ಅವನ ಕರ್ಚೀಫ್ ಹಾಗು ಲೇಸನ್ನು ಟಿವಿ ಅಡಿಯಲ್ಲಿಟ್ಟಿದ್ದಾನೆ,
ಅವನ ಪ್ಯಾಂಟುಗಳನ್ನು ಬೇಜವಾಬ್ದಾರಿಯಿಂದ ಬಾಗಿಲ ಮೇಲೆ
ನೇತಾಕಿದ್ದಾನೆ.
ಅವನ ಎಲ್ಲ ಪುಸ್ತಕಗಳನ್ನು ಕಪ್ಬೋರ್ಡ್ ಒಳಗೆ ತುರುಕಿದ್ದಾನೆ,
ಅವನ ವೆಸ್ಟಕೋಟನ್ನು ಹಾಲ್ ನಲ್ಲೇ ಬಿಟ್ಟಿದ್ದಾನೆ,
ಹರಿ ಎಂಬ ಹೆಸರಿನ ಹಲ್ಲಿ, ಅವನ ಹಾಸಿಗೆಯಲ್ಲಿ ಮಲಗಿದೆ,
ಮತ್ತು ಅವನ ದುರ್ನಾತ ಬೀರುವ ಹಳೆಯ ಸಾಕ್ಸ್ ಗೋಡೆಗೆ ಸಿಲುಕಿಸಿದ್ದಾನೆ.
ಈ ಕೋಣೆ ಯಾರದೇ ಆಗಿರಲಿ,
ಅವರಿಗೆ ನಾಚಿಕೆಯಾಗಬೇಕು!
ಚಂದು, ಚೆಲುವ, ಸಿದ್ದು ಅಥವಾ...ಹೋಯ್?
ನೀವು ನಂದೇ ಅಂತೀರಾ? ಓಹ್, ಗೆಳತಿ,
ಅದಕ್ಕೇ ಸಾಕಷ್ಟು ಪರಿಚಯವಿರೊ ಜಾಗದಂತೆ ಅನ್ನಿಸಿತ್ತು!

(ಮೂಲಕವಿ: ಶೆಲ್ ಸಿಲ್ವರ್ಸ್ಟೀನ್ )

ನಿನ್ನ ಹೃದಯ ಜೊತೆಗೊಯ್ಯುವೆ

ನಿನ್ನ ಹೃದಯ ಜೊತೆಗೊಯ್ಯುವೆ ( ನನ್ನ ಹೃದಯದಲ್ಲಿರಿಸಿ )
ಅದನ್ನು ಬಿಟ್ಟಿರಲು ಅಸಾಧ್ಯ ( ನನೋಗುವ ಕಡೆಯಲ್ಲಾ ನೀನೂ ಹೋಗುವೆ, ಗೆಳತಿ;
ನಾ ಮಾಡಿದ ಪ್ರತಿ ಕಾರ್ಯವೂ ನಿನ್ನ ಕಾರ್ಯವೆ, ನನ್ನ ಸಖಿ )
ಭಯಪಡುತ್ತೇನೆ
ವಿಧಿಯಿಲ್ಲ ( ನೀನೇ ನನ್ನ ವಿಧಿ, ಸಂಗಾತಿ )
ನನಗಾವ ಪ್ರಪಂಚವೂ ಬೇಡ ( ನೀನೇ ನನ್ನ ಸುಂದರ ಪ್ರಪಂಚ,
ನೀನೇ ಸತ್ಯ )
ಮತ್ತು ಆ ಪೂರ್ಣಚಂದ್ರನಿಗೆ ಯಾವುದೇ ಅರ್ಥವಿದ್ದರೂ ಅದು ನೀನೇ,
ಹಾಗೇ ಆ ಸೂರ್ಯನು ಯಾವಾಗಲೂ ಹಾಡುವ ಹಾಡು ಸಹ ನೀನೇ.

ಇಲ್ಲಿದೆ ಯಾರಿಗೂ ತಿಳಿಯದ ತಂಬಾ ಆಳವಾದ ಗುಟ್ಟು,
( ಇಲ್ಲಿದೆ ಬದುಕೆಂಬ ಮರದ ಬೇರಿನ ಬೇರು ಮತ್ತು ಮೊಗ್ಗಿನ ಮೊಗ್ಗು
ಮತ್ತು ಆಕಾಶದ ಆಕಾಶ; ಅದು ಆತ್ಮ ನಂಬುವುದಕ್ಕಿಂತಲೂ
ಅಥವಾ ಮನಸ್ಸು ಮುಚ್ಚಿಡುವುದಕ್ಕಿಂತಲೂ ಎತ್ತರಕ್ಕೆ ಬೆಳೆಯುತ್ತದೆ )
ಮತ್ತು ಇದೇ ಆ ಅದ್ಭುತ ಆ ತಾರೆಗಳನ್ನು ಬೇರೆ ಬೇರೆಯಾಗಿಸಿದ್ದು.
ನಿನ್ನ ಹೃದಯ ಜೊತೆಗೊಯ್ಯುವೆ ( ನನ್ನ ಹೃದಯದಲ್ಲಿರಿಸಿ )

( ಮೂಲಕವಿ: ಇ ಇ ಕುಮ್ಮಿಂಗ್ಸ್ )

Feb 19, 2009

ಅತ್ಯದ್ಭುತ ಮಹಿಳೆ

ನನ್ನಲ್ಲಿರುವ ಗುಟ್ಟೇನೆಂದು ಸುಂದರಿಯರು ಆಶ್ಚರ್ಯಪಡುತ್ತಾರೆ,
ನಾನು ಆಕರ್ಶಕವಾಗಿಲ್ಲ, ಅಥವಾ ಈ ದೇಹವನ್ನು ರೂಪದರ್ಶಿಯರಂತೆ ತಯಾರಿಸಿಲ್ಲ.
ಆದರೆ ನಾನು ಹೇಳಬೇಕೆಂದು ಹೊರಟಾಗ,
ಅವರು ಸುಳ್ಳು ಹೇಳುತ್ತಿದ್ದೇನೆಂದುಕೊಳ್ಳುತ್ತಾರೆ.

ಆದರೂ ಹೇಳುವೆ,
ಅದು ನನ್ನ ಕೈಗಳ ಮೃದು ಸ್ಪರ್ಶದಲ್ಲಿದೆ,
ನನ್ನ ನಿಂತಬಗಳ ವಿಸ್ತಾರದಲ್ಲಿದೆ,
ನಾ ನಡೆವ ಭಂಗಿಯಲ್ಲಿದೆ,
ಅಮಲೇರಿಸುವ ಕೆಂದುಟಿಗಳಲ್ಲಿದೆ,
ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.


ನಾನು ಕೋಣೆಯೊಳಗೆ ಪ್ರವೇಶಿಸಿದಾಗ,
ಹಿತವಾದ ತಂಗಾಳಿ ಬಯಸಿದಂತೆ ಬೀಸುತ್ತದೆ,
ಮತ್ತೆ ಆ ಪುರುಷನಿಗೆ,
ಅವರು ಎದ್ದು ನಿಲ್ಲುತ್ತಾರೆ, ಅಥವಾ
ಮುಂಗಾಲುಗಳ ಮೇಲೆ ಕುಸಿಯುತ್ತಾರೆ.
ನಂತರ ರಾಣಿಜೇನಿಗೆ ಜೇನುಹುಳಗಳು ಮುತ್ತುವಂತೆ,
ನನಗೆ ಮುತ್ತಿಕೊಳ್ಳುತ್ತಾರೆ.

ನಾ ಹೇಳುವೆ,
ಅದು ನನ್ನ ಮಿಂಚಿನ ಕಣ್ಣುಗಳಲ್ಲಿದೆ,
ಮತ್ತು ಹೊಳೆಯುವ ಹಲ್ಲುಗಳಲ್ಲಿದೆ,
ಬಳಕುವ ಸೊಂಟದಲ್ಲಿದೆ,
ಮತ್ತೆ ನಾ ನಲಿವ ಪರಿಯಲ್ಲಿದೆ,
ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.

ನನ್ನಲ್ಲಿರುವುದನ್ನು ಕಂಡಾಗ ಪುರುಷರಿಗೇ ಆಶ್ಚರ್ಯವಾಗುತ್ತದೆ.
ಅವರು ಬಹಳ ಪ್ರಯತ್ನಿಸುತ್ತಾರೆ
ಆದರೂ ನನ್ನೊಳಗಿನ ನಿಗೂಢತೆಯನ್ನು
ಮುಟ್ಟಲು ಅವರಿಗೆ ಅಸಾಧ್ಯ.
ನಾನವರಿಗೆ ತೋರಲೆತ್ನಿಸಿದಾಗ,
ಏನೂ ಕಾಣಲಿಲ್ಲವೆನ್ನುತ್ತಾರೆ.

ನಾ ಹೇಳುವೆ,
ಅದು ನನ್ನ ಬೆನ್ನತೋರಣದಲ್ಲಿದೆ,
ನಾನಗುವ ಸೂರ್ಯನಲ್ಲಿದೆ,
ನನ್ನ ಸ್ತನಗಳ ಸವಾರಿಯಲ್ಲಿದೆ,
ಸೆಳೆವ ನಡೆನುಡಿಯ ಪರಿಯಲ್ಲಿದೆ,
ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.

ಈಗ ಅರ್ಥವಾಯಿತೆ,
ಏಕೆ ನಾನು ತಲೆತಗ್ಗಿಸುವುದಿಲ್ಲವೆಂದು.
ಕಿರುಚಾಡುವುದಿಲ್ಲವೆಂದು, ಅಥವಾ ಜಿಗಿದಾಡುವುದಿಲ್ಲವೆಂದು,
ಅಥವಾ ಜೋರಾಗಿ ಮಾತಾಡುವುದಿಲ್ಲವೆಂದು.
ನೀವು ನಾನೋಡಾಡುವುದನ್ನು ಕಂಡಾಗ,
ಖಂಡಿತ ನಿಮಗೆ ಹೆಮ್ಮೆಯೆನಿಸುತ್ತದೆ.

ನಾ ಹೇಳುವೆ,
ಅದು ನನ್ನ ಕಾಲ್ಸದ್ದಿನ ಲಯದಲ್ಲಿದೆ,
ಮುಂಗುರುಳ ಸುರುಳಿಗಳಲ್ಲಿದೆ,
ನನ್ನ ಅಂಗೈಯ ಆಕರ್ಶಣೆಯಲ್ಲಿದೆ,
ಪ್ರೀತಿಯಿಂದ ಸಲಹುವ ಅಗತ್ಯತೆಯಲ್ಲಿದೆ,
ಏಕೆಂದರೆ, ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.

ಮೂಲ ಕವಿಯತ್ರಿ: ಮಾಯಾ ಏಂಜೆಲೌ

Feb 18, 2009

ಮತ್ತೆ ಬರುವನು ಚಂದಿರ - 16

ಮುದ್ದು ಮುಗವಿನ ಪುಟ್ಟ ಹಂಬಲ
ಹೊಸತು ಕಂಡರೆ ಪಡೆವ ಛಲ
ಹೇಗೆ ಹೇಳಲಿ ಸಿಗದು ಸಕಲವು
ಉಪಾಯ ನೀಡೊ ಚಂದಿರ

ಕುಣಿದು ಬರುವುದು ಕಂಡ ಕ್ಷಣವೆ
ಪಪ್ಪ ಕೊಡುವ ಸಿಹಿಮುತ್ತು ಬರವೆ
ಕಹಿಯ ಉಣಿಸುವ ಕೆಲಸವೇಕೊ
ಕಷ್ಟವಾಗಿದೆ ಚಂದಿರ

ಪುಟ್ಟ ಪುಟ್ಟ ಕನಸು ಕಾಣುತ
ನಕ್ಕು, ಅಳುವುದು ಯಾಕೊ ಸತತ
ಸುಪ್ತ ಜಗವಿದು ಮಗುವೆ ಸರಳವಲ್ಲ
ಜಡವಾಗದಿರಲೆಂದು ಹರಸೊ ಚಂದಿರ

ವಿಭಿನ್ನ ಒತ್ತಡಗಳೊಡನೆ ಜಗಳ
ಕಟ್ಟಿ ಎಸೆಯುವ ಎಲ್ಲ ಯತ್ನ ವಿಫಲ
ಬೆನ್ನಟ್ಟಿ ಬರುವವು ಯಾವ ಮೋಹಕೆ
ಮುಕ್ತಿ ದೊರೆವುದೇ ಚಂದಿರ

ಚಂಚಲ ಮನವಿದು ಹಿಡಿತಕೆ ಸಿಗದು
ಸೆಳೆದ ಬಣ್ಣದ ಬಲೆಗೆ ಸಿಲುಕುತ
ಮುಂದೆ ಸಾಗದೆ, ಹಿಂದೆ ಬಾರದೆ
ದಡಕೆಸೆದ ಮೀನಾಗಿದೆ ಚಂದಿರ

ಬಾ ಬಾರೊ ಭರತ ಚಕ್ರಿಯೇ
ಕ್ಷಮಿಸೆನ್ನಯ ನಡೆಯನೊಮ್ಮೆಗೆ
ಸಕಲ ನಿನ್ನದೆ, ಸೋಲನೊಪ್ಪಿದೆ
ಯಾರು ಗೆದ್ದರೋ ಚಂದಿರ

ಜಾತಿ, ಮತದ ಕರಾಳ ಮುಷ್ಠಿಗೆ
ಮರೆಯಾಗಿದೆ ಮಾನವೀಯತೆ
ವರ್ಣ, ವರ್ಗರಹಿತ ನಿರ್ಣಯಗಳಿಂದ
ಮನುಜರಾಗಿಸೆಮ್ಮನು ಚಂದಿರ

ವಿಷ ಬೀಜವನು ವಿಪರೀತ ಬಿತ್ತು
ಸಮಾನತೆಗೆ ಬಿತ್ತು ಕೊಡಲಿಪೆಟ್ಟು
ಭಗ್ನಗೊಳಿಸೊ ಭ್ರಷ್ಟ ಆಚಾರಗಳ
ವಿಚಾರಗಳ ಬೆಳೆಸುತ ಚಂದಿರ

ಶತ್ರು ಪಡೆಗೆ ಕುತಂತ್ರ ಕೊಡೆ
ನಿರ್ಭೀತಿಯೊಡನೆ ಅಬ್ಬರದ ನಡೆ
ಭರ ಭರನೆ ತಿರುಗಿ ಬರಲಿ ವಿಷ್ಣುಚಕ್ರ
ಅವರ ಕೊರಳ ಕಡಿಯಲು ಚಂದಿರ

ಶತಮಾನಗಳ ಇತಿಹಾಸ ನೋಡು
ಅಶಕ್ತರನು ತಣಿಸಿ, ತುಳಿದ ಜಾಡು
ಸತತ ಸೋತು ಸತ್ತ ಬಡವರಿಗೆ
ಸಾಂತ್ವನ ನುಡಿಯುವ ಚಂದಿರ

Feb 12, 2009

ಹೇಗೆ ಸಾಧ್ಯ?

ನನಗೆ ದಿಗ್ಭ್ರಮೆ ಮೂಡಿಸುತ್ತದೆ,
ತೀವ್ರ ನೋವುಂಟುಮಾಡುತ್ತದೆ,
ರೋಮಾಂಚನಗೊಳಿಸುತ್ತದೆ,
ಬಹಳ ಬೇಸರ ತರುತ್ತದೆ,
ಅನನ್ಯ ಅನುಭವದ ಅನುಭೂತಿ ನೀಡುತ್ತದೆ,
ನನ್ನ ಬದುಕಲ್ಲಿ ಆಶಾಭಾವನೆ ಮೂಡಿಸಿ
ಜೀವನೋತ್ಸಾಹ ತುಂಬುತ್ತದೆ,
ನಿಗೂಢ ಪಾತಳಿಗಳೆಡೆಗೆ ಕೊಂಡುಯ್ಯುತ್ತದೆ,
ವಿಭಿನ್ನ ಸ್ಥರದಲ್ಲಿ ಕಲಕುತ್ತದೆ,
ವಿಶೇಷ ಬಗೆಯಲ್ಲಿ ತಾಗುತ್ತದೆ,
ಉದ್ವೇಗಗೊಳಿಸುತ್ತದೆ, ಉದ್ರೇಕಗೊಳಿಸುತ್ತದೆ,
ಅತೀವ ಸಂತಸವುಂಟುಮಾಡುತ್ತದೆ,
ಬಹುವಾಗಿ ಸತಾಯಿಸುತ್ತದೆ,
ಕಲ್ಪನಾ ಲೋಕದೆಡೆಗೆ ಕೊಂಡೊಯ್ಯುತ್ತದೆ,
ಅಂತಃಸ್ಸತ್ವ ಕದಡಿ, ಕಾಡುತ್ತದೆ.
ಇದಾವ ಭಾವವೂ ನನ್ನಲ್ಲಿ ಮೂಡಿಸದಿದ್ದರೆ
ಅದು ನನ್ನ ನೆಚ್ಚಿನ ಕವನವಾಗಲು
ಹೇಗೆ ಸಾಧ್ಯ?

ಮತ್ತೆ ಬರುವನು ಚಂದಿರ - 15

ಹಣ್ಣೆಲೆಗಳು ಉದುರಿದಾಗ
ಹೊಸ ಚಿಗುರು ಮೂಡಿದಾಗ
ಚಿರಯೌವನ ಮೈದುಂಬಿತು
ಹೂವರಳಿದಾಗ ಚಂದಿರ

ಕಳೆದಾಯಿತು ಭೂತಕಾಲ
ಉಗಮಿಸಲಿದೆ ಭವಿಷ್ಯಕಾಲ
ಇರುವ ವರ್ತಮಾನ ಜಾರಲು
ಬಿಡಬೇಡವೊ ಚಂದಿರ

ಮತ್ತೆ ಮತ್ತೆ ಹೊಸತು ಜನುಮ
ಯಾವುದಿಲ್ಲ ಜಗಕೆ ಪರಮ
ಆದಿ ಅಂತ್ಯವೊಂದೆ ನಿಯಮ
ಒಲವೆ ಬದುಕು ಚಂದಿರ

ಸಿಹಿಯಾದುದ ಹಂಚಿಬಿಡು
ಕಹಿಯಾದುದ ನುಂಗಿಬಿಡು
ಸಿಹಿ ಕಹಿ ಈ ಬಾಳ ಸಹಿ
ಸರಿಯಬೇಡ ಚಂದಿರ

ಅಂತರಾಳದೊಳಗಿನಿಂದ
ಎದ್ದು ಬಂದ ಉಗ್ರವ್ಯಾಘ್ರ
ಹೊರೆಯಾಗಿ, ವಿಧಿಯಾಗಿ
ಕಾಡುತಿಹುದೊ ಚಂದಿರ

ಕಹಿಯಿರದ ಸಹನೆಯಿರಲು ಸಿರಿವಂತ
ಮೈದುಂಬಲು ಬಯಸಿದಾಗ ವಸಂತ
ಹಸಿರಿರಲು ಉಸಿರಿಗವನೆ ಭಗವಂತ
ಎಲ್ಲದಕು ಜೊತೆಗಿರುವವನೆ ಚಂದಿರ

Feb 11, 2009

ನಿನ್ನ ಮುಖ

ಮಿಡಿಗಾಯಿ ಉಪ್ಪಿನಕಾಯಿಯಂತೆ,
ನಿನ್ನ ಕೆಂದುಟಿಯ ಚಪ್ಪರಿಸಿದೆನೆಂದು
ತೋರುಮುನಿಸೇಕೆ?
ನಿನ್ನಸಿವ ಕೆರಳಿಸಿದ ಭೂಪನಿವನೆಂಬ
ಹೆಗ್ಗಳಿಕೆ ಅದುಮಿಟ್ಟು ನೆಪಕೆ.
ಬಾಹುಬಂಧನದ ಅಬ್ಬರದಲಿ,
ಮುಕ್ತಿ ಪಡೆದ ಸುಖದ ನೆನಪು ಅಮರ.
ಹದಗೊಳಿಸಿದ ಹಿಟ್ಟಿನಂತೆ ನಿನ್ನ ದೇಹ,
ಮೃದುವಾಗಿ ಅರಳಿ ಬಯಸಿದ ರೂಪ ಪಡೆದಾಗ,
ಮನವಿಗ್ಗಿ ಹೊಳೆವ ತಾರೆ, ನಿನ್ನ ಮುಖ.

Feb 9, 2009

ಮತ್ತೆ ಬರುವನು ಚಂದಿರ - 14

ನನ್ನೊಳಗೆ ನಾನೊತ್ತ ಲೋಕ
ಅಲ್ಲಿರುವುದು ನಾಕ, ನರಕ
ಇರದಿಲ್ಲಿ ಬಾಕಿ ಯಾವ ಲೆಕ್ಕ
ಎಲ್ಲವ ಸರಿದೂಗಿಸುವ ಚಂದಿರ

ನಸುಕು ಬೆಳಕಲ್ಲಿ ಹಕ್ಕಿಗಳ ಕಲರವ
ಸಂಜೆಗೆ ಸೂರ್ಯನ ತಿಳಿಗೆಂಪು ಚೆಲುವ
ಕೇಳುವ, ಕಾಣುವ ನಿತ್ಯ ಸತ್ಯಕೆ
ತಂಪು ಬೆಳಕರಿಸುವನೊ ಚಂದಿರ

ಸಂಪ್ರದಾಯಗಳು ಸುಳ್ಳಾಗಬಹುದು
ಪೂರ್ವಾಗ್ರಹಗಳು ಹುಸಿಯಾಗಬಹುದು
ರಾಗ, ದ್ವೇಷಗಳನು ಕಳಚದಿರಬಹುದು
ಒಲವು ಎಲ್ಲವನು ಗೆಲ್ಲುವುದೊ ಚಂದಿರ

ಕಾಣಿಸುವುದೆಲ್ಲಾ ನಿಜವಲ್ಲವೊ
ಆಗುತಿರುವುದೆಲ್ಲಾ ಸುಳ್ಳಲ್ಲವೊ
ಬದುಕಿಗೆ ಉಸಿರೊಂದೆ ಒಲವು
ಎಲ್ಲವೂ ಅದರ ಹಿಂದೆ ಚಂದಿರ

ಭಾವ ಬದುಕಿನ ನೆನಪು ಜೀವಂತ
ಅನುಭೂತಿ ತೋರಿದ ಜಗವು ಏಕಾಂತ
ಎಟುಕದುದನೇ ಹುಡುಕುವ ಛಲವೇಕೊ
ನಿರಂತರ ಸಾಗುವೆ ನಾ ಚಂದಿರ

ದುಃಖಪಡುವ ಸನ್ನಿವೇಶದಲಿ
ಕಳವಳಪಡುವ ಅಗತ್ಯ ತರವೆ
ಆಪ್ತರಿಗೆ ತೆರೆದಿಡು ಸುಪ್ತ ಮನವನು
ಹೊಸ ಜಗವ ಕಾಣುವೆ ಚಂದಿರ

ಎಲೆಗಳ ನಡುವೆ ನುಸುಳುವ ತಂಗಾಳಿ
ಕಡಲ ಮೇಲೆ ಅಲೆಗಳಾಡುವ ಲಾಲಿ
ಹಾರೊ ಹಕ್ಕಿಗಳು ಬಿಡಿಸುವ ರಂಗೋಲಿ
ಹಾಡುವೆ ನಾನಕ್ಷರಮಾಲೆ ಚಂದಿರ

ಅಳು ಬಂದಾಗ ಅತ್ತುಬಿಡು
ನಗು ಬಂದಾಗ ನಕ್ಕಿಬಿಡು
ಅದುಮಿಟ್ಟು ಎಲ್ಲ ಭಾರವನು
ಹೊರೆಯಾಗಿಸದಿರು ನೀ ಚಂದಿರ

ಕಾಣದ ದೇವರಿಗೆ ಕೊರಗದಿರು
ಹೊತ್ತಿರುವ ಭಾರಕೆ ನಲುಗದಿರು
ದಿಟ್ಟ ಹೆಜ್ಜೆ ಮುಂದಿಟ್ಟು ನಡೆ ನುಗ್ಗಿ
ಸುಗಮ ಪಯಣವು ನಿನಗೆ ಚಂದಿರ

ಕಾಲದ ಆದಿಯ ಪಯಣದಲಿ
ಬರುವ ಹಾದಿಯ ಜನನ,
ಕುತೂಹಲವಿರೆ ಅನುಕ್ಷಣವು
ನವನವೀನ ಪ್ರತಿದಿನವು ಚಂದಿರ