Feb 26, 2009

ಸುಂದರವೀ ಬದುಕು

ನಾ ನದಿಯ ಬಳಿಬಂದು,
ದಡದಲ್ಲಿ ನಿಂತಿಹೆನು.
ವಿಚಾರ ಮಾಡಲೆತ್ನಿಸಿದೆ, ಆಗಲಿಲ್ಲ,
ಆದ್ದರಿಂದ ನದಿಗೆ ದುಮುಕಿ, ಮುಳುಗಿದೆ.

ಒಂದು ಸಾರಿ ಹೊರಬಂದು ಕಿರುಚಿದೆ!
ಎರಡನೇ ಬಾರಿ ಜೋರಾಗಿ ಅತ್ತುಬಿಟ್ಟೆ!
ಆ ನೀರು ಅಷ್ಟೊಂದು ತಣ್ಣಗಿರದಿದ್ದಲ್ಲಿ,
ನಾನು ಮುಳುಗಿ ಸಾಯುತ್ತಿದ್ದೆ.

ಆದರೆ ನೀರಲ್ಲಿ ಬಹಳ ತಣ್ಣಗಿತ್ತು! ತುಂಬಾ ತಣ್ಣಗೆ!

ನಾನು ಎಲಿವೇಟರ್ ಹತ್ತಿದೆ,
ಕೆಳಗಿಂದ ಹದಿನಾರು ಮಹಡಿ ಎತ್ತರಕ್ಕೆ.
ನನ್ನ ಮಗುವಿನ ಬಗ್ಗೆ ಯೋಚಿಸಿದೆ,
ಮತ್ತು ಜಿಗಿಯೋಣವೆಂದು ವಿಚಾರ ಮಾಡಿದೆ.

ಅಲ್ಲಿ ನಿಂತು ಮತ್ತೆ ಕಿರುಚಿದೆ!
ಅಲ್ಲೇ ನಿಂತು ಮತ್ತೆ ಅತ್ತುಬಿಟ್ಟೆ!
ನಾನು ಅಷ್ಟು ಎತ್ತರದಲ್ಲಿರದಿದ್ದಲ್ಲಿ,
ನಾನು ಜಿಗಿದು ಸಾಯುತ್ತಿದ್ದೆ.

ಆದರಲ್ಲಿ ಬಹಳ ಎತ್ತರವಾಗಿತ್ತು! ತುಂಬಾ ಎತ್ತರ!
ಆದ್ದರಿಂದಲೇ ನಾನಿಲ್ಲಿ ಜೀವಂತವಾಗಿರುವೆ,

ನನಗನ್ನಿಸುತ್ತೆ ನಾನು ಜೀವಂತವಾಗೇ ಇರುತ್ತೇನೆ!
ನಾನು ಪ್ರೀತಿಗಾಗಿ ಸಾಯಬಹುದಿತ್ತು--
ಆದರೆ ನಾನು ಬದುಕಲು ಜನ್ಮ ಪಡೆದಿರುವೆ.

ನಿಮಗೆ ನಾನು ಕಿರುಚುವುದು ಕೇಳಿಸಬಹುದು,
ಮತ್ತು ನಾನಳುವುದು ನೋಡಬಹುದು--
ಇದು ನನ್ನ ದೃಢಸಂಕಲ್ಪ, ಮುದ್ದು ಮಗುವೆ,
ನೀವೇನಾದರೂ ನಾನು ಸಾಯುವುದು ಕಂಡರೆ.

ಸುಂದರವೀ ಬದುಕು! ಮಧುಪಾನದಂತೆ! ಸುಂದರವೀ ಬದುಕು!

(ಮೂಲ ಕವಿ: ಲ್ಯಾಂಗ್ಸ್ಟನ್ ಹ್ಯೂಗ್ಸ್ )

No comments: