ನನ್ನೊಳಗೆ ನಾನೊತ್ತ ಲೋಕ
ಅಲ್ಲಿರುವುದು ನಾಕ, ನರಕ
ಇರದಿಲ್ಲಿ ಬಾಕಿ ಯಾವ ಲೆಕ್ಕ
ಎಲ್ಲವ ಸರಿದೂಗಿಸುವ ಚಂದಿರ
ನಸುಕು ಬೆಳಕಲ್ಲಿ ಹಕ್ಕಿಗಳ ಕಲರವ
ಸಂಜೆಗೆ ಸೂರ್ಯನ ತಿಳಿಗೆಂಪು ಚೆಲುವ
ಕೇಳುವ, ಕಾಣುವ ನಿತ್ಯ ಸತ್ಯಕೆ
ತಂಪು ಬೆಳಕರಿಸುವನೊ ಚಂದಿರ
ಸಂಪ್ರದಾಯಗಳು ಸುಳ್ಳಾಗಬಹುದು
ಪೂರ್ವಾಗ್ರಹಗಳು ಹುಸಿಯಾಗಬಹುದು
ರಾಗ, ದ್ವೇಷಗಳನು ಕಳಚದಿರಬಹುದು
ಒಲವು ಎಲ್ಲವನು ಗೆಲ್ಲುವುದೊ ಚಂದಿರ
ಕಾಣಿಸುವುದೆಲ್ಲಾ ನಿಜವಲ್ಲವೊ
ಆಗುತಿರುವುದೆಲ್ಲಾ ಸುಳ್ಳಲ್ಲವೊ
ಬದುಕಿಗೆ ಉಸಿರೊಂದೆ ಒಲವು
ಎಲ್ಲವೂ ಅದರ ಹಿಂದೆ ಚಂದಿರ
ಭಾವ ಬದುಕಿನ ನೆನಪು ಜೀವಂತ
ಅನುಭೂತಿ ತೋರಿದ ಜಗವು ಏಕಾಂತ
ಎಟುಕದುದನೇ ಹುಡುಕುವ ಛಲವೇಕೊ
ನಿರಂತರ ಸಾಗುವೆ ನಾ ಚಂದಿರ
ದುಃಖಪಡುವ ಸನ್ನಿವೇಶದಲಿ
ಕಳವಳಪಡುವ ಅಗತ್ಯ ತರವೆ
ಆಪ್ತರಿಗೆ ತೆರೆದಿಡು ಸುಪ್ತ ಮನವನು
ಹೊಸ ಜಗವ ಕಾಣುವೆ ಚಂದಿರ
ಎಲೆಗಳ ನಡುವೆ ನುಸುಳುವ ತಂಗಾಳಿ
ಕಡಲ ಮೇಲೆ ಅಲೆಗಳಾಡುವ ಲಾಲಿ
ಹಾರೊ ಹಕ್ಕಿಗಳು ಬಿಡಿಸುವ ರಂಗೋಲಿ
ಹಾಡುವೆ ನಾನಕ್ಷರಮಾಲೆ ಚಂದಿರ
ಅಳು ಬಂದಾಗ ಅತ್ತುಬಿಡು
ನಗು ಬಂದಾಗ ನಕ್ಕಿಬಿಡು
ಅದುಮಿಟ್ಟು ಎಲ್ಲ ಭಾರವನು
ಹೊರೆಯಾಗಿಸದಿರು ನೀ ಚಂದಿರ
ಕಾಣದ ದೇವರಿಗೆ ಕೊರಗದಿರು
ಹೊತ್ತಿರುವ ಭಾರಕೆ ನಲುಗದಿರು
ದಿಟ್ಟ ಹೆಜ್ಜೆ ಮುಂದಿಟ್ಟು ನಡೆ ನುಗ್ಗಿ
ಸುಗಮ ಪಯಣವು ನಿನಗೆ ಚಂದಿರ
ಕಾಲದ ಆದಿಯ ಪಯಣದಲಿ
ಬರುವ ಹಾದಿಯ ಜನನ,
ಕುತೂಹಲವಿರೆ ಅನುಕ್ಷಣವು
ನವನವೀನ ಪ್ರತಿದಿನವು ಚಂದಿರ
No comments:
Post a Comment