ಮುದ್ದು ಮುಗವಿನ ಪುಟ್ಟ ಹಂಬಲ
ಹೊಸತು ಕಂಡರೆ ಪಡೆವ ಛಲ
ಹೇಗೆ ಹೇಳಲಿ ಸಿಗದು ಸಕಲವು
ಉಪಾಯ ನೀಡೊ ಚಂದಿರ
ಕುಣಿದು ಬರುವುದು ಕಂಡ ಕ್ಷಣವೆ
ಪಪ್ಪ ಕೊಡುವ ಸಿಹಿಮುತ್ತು ಬರವೆ
ಕಹಿಯ ಉಣಿಸುವ ಕೆಲಸವೇಕೊ
ಕಷ್ಟವಾಗಿದೆ ಚಂದಿರ
ಪುಟ್ಟ ಪುಟ್ಟ ಕನಸು ಕಾಣುತ
ನಕ್ಕು, ಅಳುವುದು ಯಾಕೊ ಸತತ
ಸುಪ್ತ ಜಗವಿದು ಮಗುವೆ ಸರಳವಲ್ಲ
ಜಡವಾಗದಿರಲೆಂದು ಹರಸೊ ಚಂದಿರ
ವಿಭಿನ್ನ ಒತ್ತಡಗಳೊಡನೆ ಜಗಳ
ಕಟ್ಟಿ ಎಸೆಯುವ ಎಲ್ಲ ಯತ್ನ ವಿಫಲ
ಬೆನ್ನಟ್ಟಿ ಬರುವವು ಯಾವ ಮೋಹಕೆ
ಮುಕ್ತಿ ದೊರೆವುದೇ ಚಂದಿರ
ಚಂಚಲ ಮನವಿದು ಹಿಡಿತಕೆ ಸಿಗದು
ಸೆಳೆದ ಬಣ್ಣದ ಬಲೆಗೆ ಸಿಲುಕುತ
ಮುಂದೆ ಸಾಗದೆ, ಹಿಂದೆ ಬಾರದೆ
ದಡಕೆಸೆದ ಮೀನಾಗಿದೆ ಚಂದಿರ
ಬಾ ಬಾರೊ ಭರತ ಚಕ್ರಿಯೇ
ಕ್ಷಮಿಸೆನ್ನಯ ನಡೆಯನೊಮ್ಮೆಗೆ
ಸಕಲ ನಿನ್ನದೆ, ಸೋಲನೊಪ್ಪಿದೆ
ಯಾರು ಗೆದ್ದರೋ ಚಂದಿರ
ಜಾತಿ, ಮತದ ಕರಾಳ ಮುಷ್ಠಿಗೆ
ಮರೆಯಾಗಿದೆ ಮಾನವೀಯತೆ
ವರ್ಣ, ವರ್ಗರಹಿತ ನಿರ್ಣಯಗಳಿಂದ
ಮನುಜರಾಗಿಸೆಮ್ಮನು ಚಂದಿರ
ವಿಷ ಬೀಜವನು ವಿಪರೀತ ಬಿತ್ತು
ಸಮಾನತೆಗೆ ಬಿತ್ತು ಕೊಡಲಿಪೆಟ್ಟು
ಭಗ್ನಗೊಳಿಸೊ ಭ್ರಷ್ಟ ಆಚಾರಗಳ
ವಿಚಾರಗಳ ಬೆಳೆಸುತ ಚಂದಿರ
ಶತ್ರು ಪಡೆಗೆ ಕುತಂತ್ರ ಕೊಡೆ
ನಿರ್ಭೀತಿಯೊಡನೆ ಅಬ್ಬರದ ನಡೆ
ಭರ ಭರನೆ ತಿರುಗಿ ಬರಲಿ ವಿಷ್ಣುಚಕ್ರ
ಅವರ ಕೊರಳ ಕಡಿಯಲು ಚಂದಿರ
ಶತಮಾನಗಳ ಇತಿಹಾಸ ನೋಡು
ಅಶಕ್ತರನು ತಣಿಸಿ, ತುಳಿದ ಜಾಡು
ಸತತ ಸೋತು ಸತ್ತ ಬಡವರಿಗೆ
ಸಾಂತ್ವನ ನುಡಿಯುವ ಚಂದಿರ
No comments:
Post a Comment