Feb 19, 2009

ಅತ್ಯದ್ಭುತ ಮಹಿಳೆ

ನನ್ನಲ್ಲಿರುವ ಗುಟ್ಟೇನೆಂದು ಸುಂದರಿಯರು ಆಶ್ಚರ್ಯಪಡುತ್ತಾರೆ,
ನಾನು ಆಕರ್ಶಕವಾಗಿಲ್ಲ, ಅಥವಾ ಈ ದೇಹವನ್ನು ರೂಪದರ್ಶಿಯರಂತೆ ತಯಾರಿಸಿಲ್ಲ.
ಆದರೆ ನಾನು ಹೇಳಬೇಕೆಂದು ಹೊರಟಾಗ,
ಅವರು ಸುಳ್ಳು ಹೇಳುತ್ತಿದ್ದೇನೆಂದುಕೊಳ್ಳುತ್ತಾರೆ.

ಆದರೂ ಹೇಳುವೆ,
ಅದು ನನ್ನ ಕೈಗಳ ಮೃದು ಸ್ಪರ್ಶದಲ್ಲಿದೆ,
ನನ್ನ ನಿಂತಬಗಳ ವಿಸ್ತಾರದಲ್ಲಿದೆ,
ನಾ ನಡೆವ ಭಂಗಿಯಲ್ಲಿದೆ,
ಅಮಲೇರಿಸುವ ಕೆಂದುಟಿಗಳಲ್ಲಿದೆ,
ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.


ನಾನು ಕೋಣೆಯೊಳಗೆ ಪ್ರವೇಶಿಸಿದಾಗ,
ಹಿತವಾದ ತಂಗಾಳಿ ಬಯಸಿದಂತೆ ಬೀಸುತ್ತದೆ,
ಮತ್ತೆ ಆ ಪುರುಷನಿಗೆ,
ಅವರು ಎದ್ದು ನಿಲ್ಲುತ್ತಾರೆ, ಅಥವಾ
ಮುಂಗಾಲುಗಳ ಮೇಲೆ ಕುಸಿಯುತ್ತಾರೆ.
ನಂತರ ರಾಣಿಜೇನಿಗೆ ಜೇನುಹುಳಗಳು ಮುತ್ತುವಂತೆ,
ನನಗೆ ಮುತ್ತಿಕೊಳ್ಳುತ್ತಾರೆ.

ನಾ ಹೇಳುವೆ,
ಅದು ನನ್ನ ಮಿಂಚಿನ ಕಣ್ಣುಗಳಲ್ಲಿದೆ,
ಮತ್ತು ಹೊಳೆಯುವ ಹಲ್ಲುಗಳಲ್ಲಿದೆ,
ಬಳಕುವ ಸೊಂಟದಲ್ಲಿದೆ,
ಮತ್ತೆ ನಾ ನಲಿವ ಪರಿಯಲ್ಲಿದೆ,
ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.

ನನ್ನಲ್ಲಿರುವುದನ್ನು ಕಂಡಾಗ ಪುರುಷರಿಗೇ ಆಶ್ಚರ್ಯವಾಗುತ್ತದೆ.
ಅವರು ಬಹಳ ಪ್ರಯತ್ನಿಸುತ್ತಾರೆ
ಆದರೂ ನನ್ನೊಳಗಿನ ನಿಗೂಢತೆಯನ್ನು
ಮುಟ್ಟಲು ಅವರಿಗೆ ಅಸಾಧ್ಯ.
ನಾನವರಿಗೆ ತೋರಲೆತ್ನಿಸಿದಾಗ,
ಏನೂ ಕಾಣಲಿಲ್ಲವೆನ್ನುತ್ತಾರೆ.

ನಾ ಹೇಳುವೆ,
ಅದು ನನ್ನ ಬೆನ್ನತೋರಣದಲ್ಲಿದೆ,
ನಾನಗುವ ಸೂರ್ಯನಲ್ಲಿದೆ,
ನನ್ನ ಸ್ತನಗಳ ಸವಾರಿಯಲ್ಲಿದೆ,
ಸೆಳೆವ ನಡೆನುಡಿಯ ಪರಿಯಲ್ಲಿದೆ,
ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.

ಈಗ ಅರ್ಥವಾಯಿತೆ,
ಏಕೆ ನಾನು ತಲೆತಗ್ಗಿಸುವುದಿಲ್ಲವೆಂದು.
ಕಿರುಚಾಡುವುದಿಲ್ಲವೆಂದು, ಅಥವಾ ಜಿಗಿದಾಡುವುದಿಲ್ಲವೆಂದು,
ಅಥವಾ ಜೋರಾಗಿ ಮಾತಾಡುವುದಿಲ್ಲವೆಂದು.
ನೀವು ನಾನೋಡಾಡುವುದನ್ನು ಕಂಡಾಗ,
ಖಂಡಿತ ನಿಮಗೆ ಹೆಮ್ಮೆಯೆನಿಸುತ್ತದೆ.

ನಾ ಹೇಳುವೆ,
ಅದು ನನ್ನ ಕಾಲ್ಸದ್ದಿನ ಲಯದಲ್ಲಿದೆ,
ಮುಂಗುರುಳ ಸುರುಳಿಗಳಲ್ಲಿದೆ,
ನನ್ನ ಅಂಗೈಯ ಆಕರ್ಶಣೆಯಲ್ಲಿದೆ,
ಪ್ರೀತಿಯಿಂದ ಸಲಹುವ ಅಗತ್ಯತೆಯಲ್ಲಿದೆ,
ಏಕೆಂದರೆ, ನಾನು ಅತ್ಯದ್ಭುತ ಮಹಿಳೆ.
ಆ ಅತ್ಯದ್ಭುತ ಮಹಿಳೆ,
ನಾನೇ.

ಮೂಲ ಕವಿಯತ್ರಿ: ಮಾಯಾ ಏಂಜೆಲೌ

No comments: