Dec 24, 2008

ಈ ಕದನ

ಈ ಕದನ ಇತ್ತೀಚಿನದಲ್ಲ ಶೂರ
ತಿಳುವಳಿಕೆ ಮೂಡಿದಾಗಿಂದ ಶುರು
ತೀವ್ರ ಸೆಣಸಾಟದಲೇ ನಿರತ ಸತತ
ಅಂತ್ಯವಾಗುವ ಸೂಚನೆ ಸದ್ಯ ದೂರ

ಸಣ್ಣ ಮೊಳಕೆಯಾಗಿ ಟಿಸಿಲೊಡೆದ
ಆಸೆಗಳಿಂದು ಹೆಮ್ಮರವಾಗಿ
ಗಟ್ಟಿಯಾಗಿ ತಳವೂರಿದೆ, ಇಲ್ಲಿ
ಚಿಗುರಿ, ಉದುರುವ ಎಲೆಗಳ ಲೆಕ್ಕವಿಲ್ಲ

ಮಹತ್ವಾಕಾಂಕ್ಷೆಗಳ ಮೀರಿಸುವ ತವಕ
ವಾಸ್ತವಗಳರಿಯದ ಮೂರ್ಖ
ಹುಸಿ ನಿರೀಕ್ಷೆಗಳ ವಸಂತದಿಂದ
ಬೆತ್ತಲಾಗುವ ಭಯ ನಿರಂತರ

ಅಗೋ ಆ ಗಿರಿ ಶಿಖರ
ದಿಟ್ಟ ನೋಟದಿ ನಿತ್ಯ ಅಣಕಿಸುತ್ತಿದೆ
ಕಿಚ್ಚು, ಕಾಡ್ಗಿಚ್ಚಿನಂತೆ ಒಡಲತ್ತಿ
ಉರಿಯುತ್ತಿದೆ ಸುತ್ತಿ ಸುತ್ತಿ

ನಂಬಿಕೆ ಉಳಿಸಲಿಲ್ಲ ನೀರು, ನೆರಳು
ಮೋಡಗಳಿಗೂ ಬೇಕು ಕೃತಕ ಗರ್ಭ
ನೀಲಾಂಬರದಲಿ ನೀರವ ಮೌನ
ಧರೆಯತ್ತಲೇ ಅಲ್ಲವೇ ಅದರ ಪಯಣ

Dec 20, 2008

ಎಲ್ಲೆಮೀರಿ

ಹಲವು ಚಿಂತೆಗಳೆನ್ನ ಮನವನು
ಕಾಲುಚೆಂಡಾಗಿಸಿ ಸೆಣಸುತಿಹವು,
ಬಿಡದೆ ಕ್ಷಣವು ಮೈದಾನದೆಲ್ಲೆಡೆ
ತೀವ್ರಗತಿಯಲಿ ಸಿಡಿಯುತ

ಮನದ ಅಳಲು ಸುಪ್ತ ಕಡಲು
ಉರಿವ ಜ್ವಾಲೆಯೊಳಗೆ ಒಡಲು
ಉಕ್ಕಿ ಬರುತಿರೆ ಆವಿಯಾಗಿ
ಮೋಡವಾಗಲು ಮುಕ್ತಿಯೇ

ಸಿಡಿಲು, ಮಿಂಚಿನ ಆಟ ನೋಡಲು
ಕಿಕ್ಕಿರಿದ ಜನರು ಸಾವಿರಾರು
ಅಬ್ಬರದ ಕೇಕೆ ಮೊಳಗಿದೆ ಅಲ್ಲಿ
ಆಡಂಬರ, ಅಂಧಕಾರ ಮೆರೆದು

ಭೂತಕಾಲದ ಭೂತಹಿಡಿದಿದೆ
ಸಿಗದ ಉಜ್ವಲ ಭವಿಷ್ಯತ್ ಕಾಲ
ತೊಳಗಿ ಒಮ್ಮೆಗೆ ವರ್ತಮಾನದಿಂದ
ತಿಳಿಯಾಗಲಿ ಮನವು ಈ ದಿನ

ಹೊತ್ತ ಹೊರೆಯಿದು ಕಾಲದಿಂದ
ಕಲೆಯಾಕುವ ಉತ್ಕಟ ತವಕದಿ
ಬೇಡವೆಂದರು ಬಿಡದು ಜಡಜಗ
ಭಾರವಾಗಿ ಕುಸಿವ ಭಯವೀಗ

ಸೋತು, ಸೊರಗಿ ಬಾಡಿದ ಮನಸು
ಸತತ ಕಹಿಯನು ಸಹಿಸಲಾಗದೆ
ಕರುಣೆ ತೋರೊ ಕೊನೆಯ ಕ್ಷಣದಲಿ
ಕಳೆದು ಹೋಗುವ ಮುನ್ನವೇ

Dec 17, 2008

ಮತ್ತೆ ಬರುವನು ಚಂದಿರ - 9

ಸೂಕ್ಷ್ಮಸಂವೇದನೆಗಳ ತಳಪಾಯದಿಂದ
ಸ್ಪಂದನಗಳ ಗ್ರಹಿಸುವ ಸಾಮರ್ಥ್ಯದಿಂದ
ಬಿಂಬಗಳ ಕೆಡಹುವ ಉಪಾಯದಿಂದ
ರಸಾನುಭವ ಪಡೆಯೊ ನೀ ಚಂದಿರ

ಹೋಲಿಕೆಯೆಂಬ ದೊಡ್ಡ ರೋಗ
ತೀವ್ರವಾಗಿ ನಮಗೆ ಕಾಡುವಾಗ
ಮನ - ಮನೆಯಲಿ ನಿತ್ಯ ಸಮರ-
ದಿಂದ ವಿರಾಮವೆಂದೊ ಚಂದಿರ

ವಿದ್ಯಮಾನಗಳ ಎಲ್ಲೆ ಮೀರಿ
ಕವಲುದಾರಿಗಳ ಎಲ್ಲ ತೂರಿ
ಈ ಹುಚ್ಚು ಕುದುರೆ ಸವಾರಿಯ
ನೀ ತೊರೆದು ಬಾರೊ ಚಂದಿರ

ಸರಳತೆಯ ಹೆಸರಲ್ಲಿ ಸಂಕೀರ್ಣದತ್ತ
ಸ್ಪರ್ಧೆಯ ಹೆಸರಲ್ಲಿ ಸಮಾಧಿಯತ್ತ
ಸಮೃದ್ಧತೆಯೆಂದು ದುರ್ಬಲರ ತುಳಿಯುತ್ತ
ಇದು ಜನಸೇವೆಯೆನ್ನುವನಿವ ಚಂದಿರ

ಭಾಷೆಯ ಹೆಸರಿಗೆ ಬೇಕೆ ಬೀದಿ ರಂಪಾಟ
ಒಳಗೊಳಗೆ ನಡೆಯುತಿದೆ ಹಗ್ಗ-ಜಗ್ಗಾಟ
ಮುಗ್ಧರ ಮನಕೆಡಿಸಿ, ಮನೆಕಟ್ಟುವವರ
ಒಳಬಣ್ಣ ತೋರಿಸೊ ಚಂದಿರ

ಸೃಜನಶೀಲತೆಗೆ ಸಾಕ್ಷಿ ಸೃಷ್ಟಿಕರ್ತ
ಕ್ರೀಯಾಶೀಲತೆಗೆ ಇವನೆ ಆಪ್ತಮಿತ್ರ
ಪ್ರಕೃತಿಯೆಡೆಗೆ ಪಯಣ ಬೆಳೆಸುವ ಚಿತ್ತ
ಆತ್ಮ ಬೆಳಗುವುದಂದು ಚಂದಿರ

ಅಸಮಾನತೆಯೆ ತೀವ್ರ ಆತಂಕವಾದಿ
ಅಸಮಧಾನವೆ ಉರಿಯುವ ಉಗ್ರವಾದಿ
ಅತಿಯಾಸೆಯನ್ನೊಮ್ಮೆ ಅಂತ್ಯವಾಗಿಸಿ
ಕಣ್ಣು ತೆರೆಸೊ ನಮಗೆ ಚಂದಿರ

ವಸ್ತು ವ್ಯಾಮೋಹವಿದು ಯಾರದೊ ವ್ಯೂಹ
ಭಾವ ಬಂಧಗಳ ತೊರೆದ ಚಕ್ರವ್ಯೂಹ
ಯಾರ ಮೋಡಿಗೆ ನೀ ಮರುಳಾದೆ ಮುಗುದೆ
ಮುಕ್ತಿದೊರೆವುದೆಂದೊ ನಿನಗೆ ಚಂದಿರ

ಭಾವ ಜಗತ್ತಿನ ಪಯಣದ ಮಿಡಿತ
ಅರಿವಿನ ಪಾತಳಿಗಳಿಗೇರುವ ತುಡಿತ
ಸಂಯಮದ ನಡೆಯಿಂದ ಜಾಗೃತಿಯ
ಮೂಡಿಸುವ ಚತುರನಿವನೇ ಚಂದಿರ

ಅವತರಿಪ ಆಧ್ಯತೆಗಳ ಸ್ವೀಕರಿಸುತಾ,
ಸಮಸ್ಯೆಗಳ ಸಮರ್ಥವಾಗಿ ನಿರ್ವಹಿಸುತಾ
ಸಾಧಸಿದ ಅನನ್ಯ ಅನುಭವದ ಜೊತೆಗೆ
ಮನುಜತ್ವ ಮರೆಯದಿರೊ ಚಂದಿರ

Dec 10, 2008

ಮತ್ತೆ ಬರುವನು ಚಂದಿರ - 8

ಹಣದ ಮೇಲೆ ಹೊಳೆವ ಕಣ್ಣು
ಹೆಣದ ಮೇಲೆ ಧೂಳು ಮಣ್ಣು
ಗಂಧ, ನೀರು, ಹೂವು, ಹಣ್ಣು
ಗೌಣ ಗುಣವೊ ಚಂದಿರ

ಋತುಚಕ್ರ ತಿರುಗಿ ತರುವ
ನವ ನವೀನ ಪ್ರತಿ ದಿನವ
ಕಪ್ಪು ಬಿಳುಪು ನೆನಪು ಉಳಿಸಿ
ಮರೆಯಾಗುವ ಚಂದಿರ

ಕನ್ನಡಿಯೆದುರು ನೋಡಬೇಕು
ಜ್ಞಾನವಿದ್ದಕಡೆ ಹೋಗಬೇಕು
ನಿಜವ ನುಡಿವವರ ಬೆನ್ನುತಟ್ಟಿ
ನೀನಾಗು ಮನುಜ ಚಂದಿರ

ಎಳೆಬಿಸಿಲಿಗೆ ಮೈ ತೆರೆದಿಟ್ಟು
ತಂಗಾಳಿಗೆ ರೋಮಾಂಚನ
ತೆಳುವಾದ ಮನದ ನೋವು
ತೂಗಾಡುವ ಹೂವು ಚಂದಿರ

ಆದಿ ಶೂನ್ಯ, ಅಂತ್ಯ ಶೂನ್ಯ
ಶೂನ್ಯ ಜಗದ ಪಯಣವು
ಪಡೆದುದೆಲ್ಲ ಪಡೆದುದಲ್ಲ
ಶೂನ್ಯ ನಿಜವು ಚಂದಿರ

ಇತಿ ಮಿತಿಗಳ ಅರಿವಿರದೆ
ಆಳ, ಅಗಲ ತಿಳಿಯದೆ
ಬಲ್ಲೆನೆಂದು ನಟಿಸುವವಗೆ
ಭಯವು ಒಳಗೆ ಚಂದಿರ

ಹಾಲೊಳಗೆ ಬೆಣ್ಣೆ, ಕಾಯೊಳಗೆ ಎಣ್ಣೆ
ಅಡಗಿರುವುದು ನಿಜವು ತಾನೆ
ಹುಡುಕಿ ಪಡೆಯೊ ಉತ್ತರ
ದುಗುಡ ತೊರೆದು ಚಂದಿರ

ಹೊರಗೆ ಬೆಳಕು, ಒಳಗೆ ಕೊಳಕು
ಕಪ್ಪು ಬಿಳುಪು ಪ್ರತಿ ದಿನದ ಬದುಕು
ಕಪ್ಪ ಕೊಟ್ಟು ಬೆಪ್ಪನಾಗಿ,
ತುಪ್ಪ ಬೇಡುತಿರುವೆ ಚಂದಿರ

ಉದ್ದೇಶರಹಿತ ಸ್ನೇಹ ವಿರಳ
ಕಾಲಹರಣಕಿಂದು ಕಾಲವಿಲ್ಲ
ತಿರುಗಿನೋಡದೆ ಓಡುತಿಹರು
ಒಮ್ಮೆ ಕೂಗಿ ತಡೆಯೊ ಚಂದಿರ

ಗಮನಕೊಡದೆ ಕಳೆದ ಬಾಲ್ಯ
ಯಶಸ್ಸಿಗಾಗಿ ಮರೆತು ಮೌಲ್ಯ
ತೂಗು ತಕ್ಕಡಿಯಲ್ಲಿ ತತ್ತರಿಸಿ
ಬಿದ್ದು, ಉಸಿರು ಬಿಟ್ಟ ಚಂದಿರ

Dec 2, 2008

ಅಸಹಾಯಕತೆ

ಮತ್ತೆ ಅಸಹಾಯಕನ ಮಾಡದಿರು ತಂದೆ
ಕೈ ಕಾಲು ಕಟ್ಟಿ, ಕಣ್ಣು ತೆರೆಸಿ
ಬಲಹೀನನಾಗಿ ಬದುಕ ಬಿಡದಿರು
ಸ್ವಾಭಿಮಾನದ ಪ್ರಶ್ನೆ, ಕರುಣೆಯಿರಲಿ

ತಂದೆ, ತಾಯಿಯ ಬಿಡದೆ, ಅಳುವ ಕಂದನ ಕೊಂದು
ಅಕ್ಕ, ತಂಗಿಯ ಜೊತೆಗೆ ಅಣ್ಣ, ತಮ್ಮನ ಇರಿದು
ಒಲವಿನ ಮಡದಿಯನು ಕಣ್ಮುಂದೆ ಹರಿದು
ಗುಂಡಿಕ್ಕಿ ಗರ್ಜಿಸಿ, ತೊಡೆತಟ್ಟಿ ಕುಣಿಯುತಿಹರು

ಇಂಗಿ ಹೋಯಿತು ಶೌರ್ಯ, ಕುಸಿದು ಬಿದ್ದಿದೆ ಸ್ಧೈರ್ಯ
ಅಡಗಿಕೊಳ್ಳಲು ಸಹ ಕೊಡದೆ ಅವಕಾಶ
ಇಲಿಯೊಂದು ತನ್ನ ಸ್ವೇಚ್ಛತೆ ತೋರಿ ಅಣಕಿಸುತ್ತಿದೆ ಇಲ್ಲಿ
ನರಕ ಸದೃಶ ಬಾಳಿದು ಸತತ ಸುಡುವ ಬೆಂಕಿ

ಬದುಕಿಸಿ ಸಾಯಿಸುವ ಸೂತ್ರ ಪ್ರಯೋಗ
ಕೆರಳಿಸಿ, ಕೆಣಕುತಲೆ ಮೆರೆಯುತಿರೆ ಎದುರೇ
ಬರಡು ಭೂಮಿಯಿದು ಬಿಡು ಹಸಿರಿನ ಕನಸು
ಕರೆದುಕೋ ಈಗಲೇ ವ್ಯರ್ಥ ಈ ಉಸಿರು

ನಗ್ನ ದರ್ಶನವಿದು ಪರದೆ ಕಳಚಿದ ಮೇಲೆ
ಮತ್ತೆ ಪರೀಕ್ಷೆಗೆ ಇರುವುದೇ ಸಾಮರ್ಥ್ಯ
ಅಸಹಾಯಕತೆ ಎನ್ನ ಕಾಡುತಿದೆ ಕ್ಷಣಕ್ಷಣವು
ಸಹನೆ, ಸಂಯಮ ಬತ್ತಿಹೋಗಿದೆ ಎಂದೋ

ದಿಟ್ಟ ಉತ್ತರ ಕೊಡಲು ಹಾತೊರೆಯುತಿದೆ ಆತ್ಮ
ಅಲ್ಲಿ ಹೋಗುವ ಮುನ್ನ, ಕಸವ ಗುಡಿಸುವ ಕರ್ಮ
ಮತ್ತೆ ಬಾರದಿರಲಿ ಎಂದಿಗೂ, ಯಾರಿಗೂ
ಸ್ವಾಭಿಮಾನದ ಪ್ರಶ್ನೆ, ಕರುಣೆಯಿರಲಿ

ಕಲ್ಲುಹೃದಯ

ಹಾರಿಹೋಯಿತು ಜೀವ ಗೆಳೆಯ
ನೂರು ಕನಸನು ಕೊಚ್ಚಿಕಡಿದು
ನಿಲ್ಲದಾಯಿತೊ ರಕ್ತದೋಕುಳಿ
ಕುಣಿಯುತಿದೆಯೊ ಕಲ್ಲುಹೃದಯ

ತೊಟ್ಟತೊಡುಗೆ ಹರಿದುಹೋಗಿದೆ
ಮುಖವಾಡ ನೋಡು ಜಾರಿಬಿದ್ದಿದೆ
ಇರುವ ಪರದೆಗಳೆಲ್ಲ ಕಳಚಲು
ನಗ್ನ ದರ್ಶನ ಪಡೆದು ಪಾವನ

ಅದೇ ರಾಗ, ಅದೇ ವೇಗ,
ಅದೇ ಯಾಂತ್ರಿಕ ಸ್ಪಂದನೆ
ಹೃದಯಹೀನ ಈ ರಾಜಕಾರಣ
ಮುಕ್ತಿ ಕೊಡುವೆಯಾ ಆಪ್ತನೆ

ಸನ್ನಿವೇಶಕೆ ತಕ್ಕ ವೇಶ
ಮುಖದಲಿರಲು ಕೃತಕ ಆವೇಶ
ಇದು ಯಾವ ಸ್ತರದ ಆತ್ಮವಂಚನೆ
ಇಲ್ಲವಾಯಿತೇ ವಿವೇಚನೆ

ಲಾಭ ಪಡೆವ ಏಕೈಕ ತವಕ
ನಡೆ ನುಡಿಗಳದಕೆ ಪೂರಕ
ಉರಿವ ಬೆಂಕಿಗೆ ತೈಲವೆರೆದು
ಗಹಗಹಿಸಿ ನಗುತಿಹ ಕೀಚಕ

ಇದು ಯಾವ ಪರಿಯ ನಾಟಕ
ಘೋರ ಹೃದಯವಿದ್ರಾವಕ
ಪ್ರತಿಭೆಯ ಪ್ರದರ್ಶನ ತಾರಕ
ಧನ್ಯನಾದೆನೊ ನಾಯಕ

ಒಂದು, ಎರಡು, ಮೂರು ದಿನ
ಸಾಕು ಮರೆಯುವೆ ಮರುದಿನ
ಅಡಗಿ ಕುಳಿತಿಹ ಇಲಿಗಳೆಲ್ಲ
ಹೊರಗೆ ಬರಲದೆ ಶುಭದಿನ

ಮುಗ್ಧ ಜನರ ಮರಣಹೋಮ
ಸಾವು ಬದುಕು ಜನರ ಕರ್ಮ
ನಿತ್ಯ ನರಕ, ನಿತ್ಯ ಚರಕ
ನಿತ್ಯ ಹಸಿವಿಗೆ ಬೇಕು ಕಾಯಕ

Dec 1, 2008

ಮತ್ತೆ ಬರುವನು ಚಂದಿರ - 7

ಮುಗ್ಧತೆಯು ಮೊಗ್ಗಲ್ಲಿ ಮೈದುಂಬಿ,
ಅರಳಿದ ಸೌಂದರ್ಯಕೆ ಸಾರ್ಥಕ
ಕಾಯಾಗಿನ ಪ್ರೀತಿ ಹಣ್ಣಿಲ್ಲಿ ಮುಕ್ತಿ
ಇದೇ ಸಹಜ ನೀತಿ ಚಂದಿರ

ಪ್ರೀತಿಗಿರಲು ಹಲವು ಬಣ್ಣ
ಎಲ್ಲ ಅಡಗಿ ಶ್ವೇತವರ್ಣ
ಒಲವೇ ಕಡಲು ಜಗದ ನೆರಳು
ಜಡವ ತೊರೆಯೊ ಚಂದಿರ

ಹಣವಿದ್ದ ಕಡೆ ವಿಷ ಸರ್ಪದೆಡೆ
ಹಾಲುಂಡು ವಿಷಕಾರುವ ಆಪ್ತಪಡೆ
ಹಣದ ಗೊಬ್ಬರ ಹರಡು ಎಲ್ಲೆಡೆ
ಚಂದ ಫಸಲು ಪಡೆವೆ ಚಂದಿರ

ಮೌಲ್ಯಗಳಲಿ ನಂಬಿಕೆಯನಿರಿಸು
ಅಚಲ ಮನದ ಸ್ನೇಹಗಳಿಸು
ಕಠಿಣ ಕಲಹಗಳ ನಿದ್ದೆಗೆಡಿಸು
ಹತ್ತಿರವಾಗು ಎತ್ತರಕೆ ಚಂದಿರ

ಜ್ಞಾನದಸಿವನು ಇಂಗಿಸುವ ಕರ್ಮ
ಹರಡಿ ಹಸಿವನೆಚ್ಚಿಸುವ ಮರ್ಮ
ಮನುಜಗೆ ಮನುಷತ್ವ ಏಕೈಕ ಧರ್ಮ
ಆನಂದ ಜಗವಂದು ಚಂದಿರ

ಜ್ಞಾನ, ಹಣ ಗೊಬ್ಬರದಂತೆ ಹರಡಿ
ಬರಡು ನೆಲಕೆ ಉಸಿರು ನೀಡಿ
ಹಸಿರು ತುಂಬಿ ಹಸಿವ ನೀಗಿ
ಮುಕ್ತಿ ಪಡೆಯೊ ಚಂದಿರ

ಜಾತಿ, ಮತ ಮತಿಯ ಕೆಡಿಸದಿರಲಿ
ದೀನ, ದುರ್ಬಲರ ಸಹಿಸಿ ಸಲಹುತ
ಅವರಂತರಂಗದ ದೇವರ ಕಾಣುತಲಿ
ದಿಟ ಮನುಜನಾಗು ಚಂದಿರ

ಕೋಪವೆಂಬ ಶಾಪದಿಂದ
ಮುಕ್ತನಾಗು ಗೆಳೆಯನೆ
ಸಹನೆಯೆಂಬ ಸ್ನೇಹದಿಂದ
ಜಗವ ಬೆಳಗು ಚಂದಿರ

ತನು, ಮನವ ಪಳಗಿಸಿದಾಗ
ಬಾಳು ನಂದನವನವು
ಜಾರಿ ಹೋಗದ ಮನವು
ಸವಿಜೇನಿನಾಂಗ ಚಂದಿರ

ಇರುವವರೆಡೆಗೆ ಇರುವೆಗಳ ಸಾಲು
ಇರದವರೆಡೆಗೆ ಬರುವೆನೀಗ ತಾಳು
ನಿದರ್ಶನವಿದೇ ನಿಜವನರಿಯಲು
ಮುಖವಾಡ ತೆರೆಸಿದವನೇ ಚಂದಿರ

Nov 28, 2008

ರಕ್ತಪಾತ

ಹರಿಯುತಿದೆ ಬಿಸಿರಕ್ತ
ಅಳುವ ಕಂದನಕೆಳಗೆ ನುಸುಳಿ
ಅಂಗೈಯಲ್ಲಾ ಕೆಂಪು ಕೆಂಪು
ಕಂದನ ಕಣ್ಣಲ್ಲಿ ಆತಂಕ

ಅಮ್ಮ, ಅಪ್ಪನ ಸಾಂತ್ವನದ ಸಿಹಿಮಾತು ಮಾಯ,
ಎಂದಿನಂತೆ ಅತ್ತು ಕರೆದರು ಸಿಗದೇ ಉತ್ತರ,
ಇಂದೇಕೋ ಒಂದು ನಡೆಯುತ್ತಿಲ್ಲ
ಅಂದುಕೊಂಡಂತೆ, ಎಲ್ಲ ಯತ್ನವೂ ವ್ಯರ್ಥ

ನೀರಿನಲ್ಲಿ ನಲಿದಾಡುವ ಕಾತುರ
ಇಂದು ಕಂದನ ಸೆಳೆಯುವಲ್ಲಿ ಸೋತಿದೆ
ಭಯ ಮಿಶ್ರಿತ ದ್ವಂದ್ವ, ಮುಗ್ಧ ಮುಖಭಾವ
ಎಲ್ಲವೂ ಸ್ತಬ್ಧ, ತೊಟ್ಟಿಕ್ಕುವ ರಕ್ತ ನಾದ

ಮಗು ಒಂದೇ ಸಮ ಜೋರು ಅಳು
ಆದರೂ ಅಮ್ಮನಿಗೇಕೋ ಗಾಢನಿದ್ರೆ
ಅಪ್ಪನ ನೋಟ ಅದರತ್ತಲೇ ನೆಟ್ಟಿ,
ಅಪರಿಚಿತರಂತೆ ಭಾಸವಾಗುತ್ತಿದೆ

ಕೆಂಪು ಕಪ್ಪಾಗುವಂತೆಲ್ಲಾ,
ಮಗುವಿನ ಆಕ್ರಂದನ ಕ್ರಮೇಣ ಕ್ಷೀಣಿಸಿ,
ಧಣಿದ ದೇಹ ನಿದ್ರೆಗೆ ಜಾರುತಿದೆ
ಮಂಪರುಗಣ್ಣಲ್ಲಿ ನಿರೀಕ್ಷೆ ಇನ್ನೂ ಜೀವಂತ

Nov 24, 2008

ವಿವರ*

ಕೇಳಬೇಕೆಂದಿರುವೆ, ಮತ್ತೆ
ಹೇಳಬೇಕೆಂದಿರುವೆ ಸ್ವಲ್ಪ ವಿವರ
ಅಂತಃರಾಳದೊಳಗಿಳಿದು
ನೋಡಬೇಕಾಗಿಲ್ಲ ಒಳಶಹರ.

ಕಳೆದ ಸಾರಿಯ ಭೇಟಿ
ಆಕಸ್ಮಿಕವಾದರೂ ಅಚ್ಚರಿ,
ಆಗ ಮೌನದ್ದೇ ಮಾತು,
ನೋಟ ಮರುಭೇಟಿಯ ಆಹ್ವಾನ.

ಇತಿಹಾಸದ ಪುಟಗಳ ಹೊತ್ತು
ಬರುವುದಿಲ್ಲ ಈ ಸಾರಿ,
ಹಾಗೇ ತಿಳಿಯುವ ಹಂಬಲವೂ
ಉಳಿದಿಲ್ಲ ನೆಪಕೆ.

ಏರುಪೇರುಗಳಿಂದ ನಿಜವಾದ ಅರಿವು,
ಅದೇ ಬದುಕಿಗೆ ಹಿಡಿದ ಕನ್ನಡಿ
ಇಂದು, ನಾಳೆಗಳ ಪಯಣದಲಿ
ಬೆಳಕಾಗಿ ಉರಿಯುವ ದೀವಟಿಗೆ.

ಒಂದಾಗೋಣ ಇಂದು, ನಾಳೆಗೆ
ಉರಿಯೋಣ ಮೋಂಬತ್ತಿಯ ಹಾಗೆ
ಜೊತೆ, ಜೊತೆಗೆ ಬೆಳಕಾಗಿ, ಬೆಳಕಿನೆಡೆಗೆ
ಕತ್ತೆಲೆಯ ಜಗದಲ್ಲಿ ಕವಿಯ ಹಾಡಿನ ಹಾಗೆ.

Nov 12, 2008

ಮತ್ತೆ ಬರುವನು ಚಂದಿರ - 6

ಜ್ಞಾನದ ವಿಸ್ತಾರ ತಿಳಿದವರಾರಿಹರು
ಬ್ರಹ್ಮಾಂಡದೊಳಹೊರಗ ಬಲ್ಲವರಾರಿಹರು
ವಿಜ್ಞಾನದಿ ಉತ್ತರವ ಹುಡುಕುವ ಯತ್ನಕೆ
ಮೌನ ಬೆಂಬಲ ಕೊಡುವ ಚಂದಿರ

ಬುದ್ಧಿವಂತಿಕೆಗೆ ಧರ್ಮದ ಮೊಗವಿರೆ
ಮಂಗನಿಗೆ ಮಾಣಿಕ್ಯವಾಗದು ಹೊರೆ
ಹಿಡಿತವಿರುವ ಜ್ಞಾನ ಮನುಕುಲಕೆ
ವರದಾನ ಕಾಣೋ ಚಂದಿರ

ಅಂತರಂಗ ಬಹಿರಂಗದೊಳ ಹೊಕ್ಕು
ನಿತ್ಯ ಚಿತ್ರಗಳ ಸರಿದೂಗುವ ಶ್ರಮಕೆ
ತೆರೆ ತೆರೆಯಾಗಿ ಪದರುಗಳ ಕಳಚಲು
ಸತ್ಯ ಕಾಣುವುದಾಗ ಚಂದಿರ

ಅವಸರದ ನಡೆಯಿಂದ
ಕವಲೊಡೆದ ಗುರಿಯಿಂದ
ಬಾಡಿರುವ ಮೊಗದಲ್ಲಿ
ನಗುವಿರುವುದೇ ಚಂದಿರ

ಕನಸು ಕಲ್ಪನೆಗೆ ಹಿಡಿದ ಕನ್ನಡಿ
ಕ್ರಿಯಾಶೀಲತೆಗೆ ಕಲ್ಪನೆ ಮುನ್ನುಡಿ
ಕನಸು ನನಸಿಗೆ ಕ್ರಿಯೆಯ ಕೈಪಿಡಿ
ನುಡಿದಂತೆ ನಡೆಯುತಿರುವ ಚಂದಿರ

ಸಮಯಕೆ ಇಲ್ಲ ಯಾವ ರಿಯಾಯಿತಿ
ಸರಿ ತಪ್ಪುಗಳೆಲ್ಲ ನಮ್ಮದೇ ಕಿತಾಪತಿ
ಸದ್ಭಳಕೆಯೊಂದಿಗೆ ಹಿಡಿತ ಸಾಧಿಸು
ಜೊತೆಗೆ ಬರುವನೋ ಚಂದಿರ

ದಾನವರ ಸಂತತಿ ಸಾಗರದ ಹಿತಿಮಿತಿ
ಸಕಲ ಜೀವಕಣ ಕಾಣೆಯಾಗುವ ಸ್ಥಿತಿ
ಮೊರೆಯಿಡುವೆ ದೇವ ಮೌನಮುರಿಯೋ
ಕಾಣದಾದಾನು ಒಮ್ಮೆಗೇ ಚಂದಿರ

ಬಿಳಿಯ ಹಾಳೆಯಲ್ಲಿ ಬೆಳೆದು ನಿಂತ ಭಾವಗಳೆ
ಖಾಲಿ ಎದೆಯ ಗೂಡಲ್ಲಿ ಬೆಚ್ಚಗಿರುವ ನೀವುಗಳೆ
ಬಿರುಗಾಳಿಯ ನೆವವೊಡ್ಡಿ ತೇಲಿ ಹೋಗದಿರಿ ಮತ್ತೆ
ಕದವ ಜಡಿದಾನು ಹೇಳದೇ ಚಂದಿರ

ಸರ್ವ ರೋಗ ನಿವಾರಣ
ಸರಳ ಜೀವನ ಯಾನ
ಸತತ ಕಾಯಕ ಕರ್ಮಕೆ
ಮರಳಿ ಬಾರೋ ಚಂದಿರ

ಮುಗಿಲು, ನೆಲವನರಿವ ಛಲ
ಕ್ಷಣ ಕ್ಷಣವು ಕೆರಳಿ ಕುತೂಹಲ
ದಿಟ್ಟ ಹೆಜ್ಜೆ, ನೆಟ್ಟ ನೇರನೋಟಕೆ
ಸನಿಹ ಬರುವ ನಗುತ ಚಂದಿರ

Nov 10, 2008

ಸಾಲು - 4

- 1 -
ವಸಂತದಲ್ಲಿ ಚಿಗುರಿದ
ಮರಗಳ ತೋರಿಸಿ,
ಇದೂ ಸಹ ನನ್ನ ಸಾಧನೆಯೆ
ಅಂತಂದನೊಬ್ಬ ಹಿರಿಯ ನಾಯಕ

- 2 -
ವ್ಯಭಿಚಾರಿಯೊಬ್ಬಳನ್ನು
ಬಲವಂತವಾಗಿ ಕೂಡಿದ ನಂತರ,
ಇದು ನಿನ್ನ ಅದೃಷ್ಟವೆಂದ,
ಆ ಧೀಮಂತ ನಾಯಕ

- 3 -
ಅಸಹಾಯಕ ಹೆಣ್ಣೊಬ್ಬಳು
ವೇಶ್ಯಾವೃತ್ತಿಯಲ್ಲಿ ತೊಡಗಿದಾಗ,
ಅವಳಿಗೆ ಅಂಜಿಕೆ, ಕೀಳರಿಮೆ ಕಾಡದೆ,
ಸಮಾಜದಲ್ಲಿ ಸಮಾನತೆ ದೊರಕುವಂತಾದಾಗಲೇ
ಅವಳಿಗೆ ನಿಜವಾದ ಸ್ವಾತಂತ್ರ್ಯ

- 4 -
ಗುಲ್ಮೊಹರ್ ಮರಗಳು,
ಹೂಗಳಿಂದ ಮೈ ತುಂಬಿಕೊಂಡಾಗ,
ಆ ಸುಂದರ ಚಿತ್ತಾರವ ಸವಿಯುತ್ತಾ,
ತಂದೆ ಮಕ್ಕಳಿಗೆ ಅದನ್ನು ಬಣ್ಣಿಸುವುದೇ
ನಿಜವಾದ ಶಿಕ್ಷಣ

Nov 5, 2008

ನನಗೆ ನಾ ಹಿಡಿದ ಕನ್ನಡಿ*

ಯಾರದೋ ಕನಸಿನೊಳಗಿನ
ಪುಟ್ಟ ಪಾತ್ರ, ನನ್ನ ಕನಸು
ಯಾರದೋ ನಿರ್ದೇಶನದ ಕಲ್ಪನೆಗೆ
ನಾನಾಗುವೆ ನಿತ್ಯ ಉಸಿರು.

ಯಾವುದೋ ಬೃಂದಾವನ, ಯಾರದೋ ನಂದನವನ
ಕನಸಿನೊಳಗೊಂದು ಕನಸು
ಆ ಕನಸೇ ನನ್ನ ಕಲ್ಪನೆಯ ಕೂಸು,
ಅದೇ ನನಗೆ ನಾನು ಹಿಡಿದ ಕನ್ನಡಿ.

ಸುಳಿದಾಡುವ ಸುಂದರಿಯೆಡೆಗೆ
ಸಾವಿರಾರು ಕಣ್ಣು, ಆ ಹಂಬಲದ ತೇರು
ಎಳೆಯಲು ತುಂಟರ ಕಾತುರ,
ಕಲಹ, ಕೊಲೆ, ವಿಷಾದ.

ವಿಭಿನ್ನ ಕಲ್ಪನೆ, ವಿಶಿಷ್ಟ ಕನಸೆಂಬ ಭಂಡತನ
ನಡೆ, ನುಡಿ, ಹಾದಿ ಎಲ್ಲವೂ ಹಾಗೆ
ಅನುಕರಣೆ ಅಸ್ಧಿತ್ವದ ವಿನಾಶಕ್ಕೆ ಹೊಣೆ
ಇಲ್ಲ ಎಲ್ಲೂ ಸ್ಪಷ್ಟ ಮಾನದಂಡ.

Nov 3, 2008

ಮತ್ತೆ ಬರುವನು ಚಂದಿರ - 5

ಪ್ರತಿಫಲ ಬೇಡದ ಪರಿಶ್ರಮ ,
ನಿರೀಕ್ಷೆಯಿರದ ಮನಃಸ್ಥಿತಿಯತ್ತ
ನಿರಾಸೆ ಸುಳಿವುದೆ ಹತ್ತಿರ
ಮತ್ತೆ ಬರುವನು ಚಂದಿರ

ನಿಲುವು, ಒಲವು ಇರಲು ಚೆಲುವು
ಸ್ವಾಭಿಮಾನವೆ ಆತ್ಮ ಬಲವು
ದಿಟ್ಟ ನಡೆಗೆ ಬಿಟ್ಟು ಹೋದವರ
ತಂಟೆಯೇಕೆ ಚಂದಿರ

ನೀಲಿ ಬಾನಲಿ ನಗುವ ಚಂದಿರ
ಹೊಳೆವ ತಾರೆಗಳೊಡನೆ ಸುಂದರ
ಇವನಿರದ ಇರುಳು ಬಹಳ ಬೇಸರ
ಚತುರನಲ್ಲವೆ ಇವನು ಚಂದಿರ

ಭೂತಕಾಲದ ಭೂತ ಹಿಡಿದು
ಭವಿಷ್ಯತ್ತಿನ ಭಯಕೆ ಸಿಡಿದು
ವರ್ತಮಾನದ ವಿದ್ಯಮಾನ
ಮರೆತೆಯಲ್ಲೋ ಚಂದಿರ

ಒತ್ತಡಗಳಿಗೆ ತತ್ತರಿಸುತ
ವಿಚಿತ್ರ ವ್ಯಾಧಿಗೆ ತುತ್ತಾಗುತ
ಸುತ್ತ ಮುತ್ತ ಮಾಡಿ ಕಲುಷಿತ
ಬೆಪ್ಪನಾದೆಯೊ ಚಂದಿರ

ನೂರು ಹುಳಗಳು ಒಳಗೆ ತೂರಿ
ಭೂತ ಹಿಡಿದವನಂತೆ ಹಾರಿ
ಬುದ್ಧಿಭ್ರಮಣೆಗೆ ಮತಿಯು ಜಾರಿ
ಭೂತಗನ್ನಡಿ ಬೇಕೆ ಚಂದಿರ

ಎಲ್ಲ ತೊರೆದವನು ಎಲ್ಲರೊಳು ಉತ್ತಮನು
ಇತಿಮಿತಿಗಳ ಸುತ್ತಿಕೊಂಡವನು ಮಧ್ಯಮನು
ಪ್ರಯತ್ನಿಸದೆ ಪಠಿಸುವವನು ಅಧಮನು
ಎಲ್ಲರೊಳಗಿರುವವನು ಚಂದಿರ

ಧರ್ಮದೆಸರಲ್ಲಿ ವಿಷಬೀಜ ಬಿತ್ತಿ
ಬೆಳೆದ ಅಫೀಮಿಂದ ಮತ್ತೇರಿಸಿ
ಮನುಕುಲದ ಮತಿಗೆಡಿಸಿದ ಮತಿಹೀನ
ಮನುಜರ ಕಣ್ಣ ತೆರೆಸೋ ಚಂದಿರ

ಬಣ್ಣ ಬಣ್ಣದ ಮಾತುಗಳಾಡುತ
ಚಂಗ ಚಂಗನೆ ಜಿಗಿಯುವನೀತ
ಮರುಳು ಮಾಡಿ ಮಂದಿಯ ಸತತ
ಉದರನಿಮಿತ್ತ ಎಂದ ಚಂದಿರ

ಕತ್ತಲ ಕಳೆಯುತ ಬೆಳಕು ಕಾಣುವ
ಕಲಿತು ಕಲಿಸುವ ಕಾಯಕ ಕರ್ಮವ
ನಿತ್ಯ ನಿರ್ಮಲ ಮನಕೆ ಸ್ವರ್ಗದ
ಮಾರ್ಗ ತೋರುವ ಚಂದಿರ

Oct 30, 2008

ಸಾಲು – 3

ಸಾಲು ಸಾಲು ಸಾವಿರ ಸಾವಿರ
ಸಾಲು ಮರ ಬೆವರ ಹರಿಸಿ ನೆಟ್ಟವರು ,
ನೆರಳಿಗೆ ಹಾತೊರೆಯದೇ ,
ಪ್ರತಿಫಲಕ್ಕೆ ಕೈಯೊಡ್ಡದೇ ,
ಕಳೆದು ಹೋದವರ ನೆನಪು
ಬಾರದಿರುವುದು ಸೋಜಿಗ !

ದಣಿವು ಇಂಗಿಸುವ ಸಲುವಾಗಿ
ನೂರಾರು ಪದಗಳ ಹಾಡಿ ,
ತಮ್ಮ ಪರಂಪರೆಯ ಮೆರೆದವರು ,
ಇಂದಿಗೂ ಜೀವಂತವಾಗಿರಿಸಿ ,
ಜನಪದವಾಗಿಸಿ ಮರೆಯಾದವರ ,
ಇಂದು ನಕಲು ಮಾಡಿ ಮೆರೆಯುವುದೇ
ದೊಡ್ಡ ಅಚ್ಚರಿ !

ತಲತಲಾಂತರದಿಂದ ತಮ್ಮ ಪೌರುಷ ,
ಅಟ್ಟಹಾಸ, ಅಧಿಕಾರದಿಂದ ಭೇದಭಾವ
ಸೃಷ್ಟಿಸಿ ದರ್ಪದಿಂದ ಮೆರೆದವರು
ಆಳಿದ ಅರಸರ ಪಟ್ಟಿ ಮರೆಯದೆ ಉಳಿಸಿ ,
ಆಳಿಸಿಕೊಂಡವರ ಸುಖದುಃಖ ಗೌಣವಾಗಿಸಿ ,
ಇಂದು
ಸಾಮಾನ್ಯರಾಗಿರುವುದೊಂದು ವಿಪರ್ಯಾಸ ,
ವಿಸ್ಮಯ !

Oct 29, 2008

ಸಾಲು - 2

- 1 -

ಅದೃಷ್ಟವಂತರು, ಸಮರ್ಥರು, ಭ್ರಷ್ಟರು
ತಮ್ಮ ಸಾಧನೆಯ ಪ್ರದರ್ಶನಕ್ಕಿಡುವಾಗ ,
ವಿದ್ಯಾವಂತ ನಿರುದ್ಯೋಗಿಗಳು
ತಮ್ಮ ಅಸಹಾಯಕತೆ ಮರೆಯಲು
ಹಗಲುಗನಸು ಕಾಣುವುದು
ಅಪರಾಧವೆನ್ನಬೇಡಿ ?

- 2 –

ಎತ್ತರದಿಂದ ಒಮ್ಮೆಗೇ ಕುಸಿದವನಿಗೆ ,
ಮತ್ತೆ ಏರಲಾರನೆಂಬ ಅನುಮಾನ
ಸಹಜವಾದರೂ ಅಸಾಧ್ಯವಲ್ಲವೆಂಬುದ ಬಲ್ಲ .
ಎಡವಿ ಬಿದ್ದವನು ತಡಕಾಡುತ್ತಲೇ ಇದ್ದ ,
ಪ್ರತಿ ಹೆಜ್ಜೆ ಅನುಮಾನದಿಂದಲೇ
ಇಡುತ್ತಿದ್ದ .

-3 –
ಅದ್ಭುತ ಸೌಂದರ್ಯವತಿಯೊಬ್ಬಳು
ಯೌವನದಲಿದ್ದಾಗ ತಾನೇ ಶ್ರೇಷ್ಠಳೆಂದು ಬೀಗಿ
ಏಕಾಂಗಿಯಾಗಿಯೇ ಪಶ್ಚಾತಾಪದೊಂದಿಗೆ
ಮುದುಕಿಯಾದಳು .
ಸಾಧಾರಣ ಚೆಲುವೆಯೊಬ್ಬಳು ತನ್ನ ಯೌವನ ,
ಕ್ಷಣಿಕವೆಂದರಿತು ಸುಖದ ಶಿಖರವನ್ನೇರಿ ,
ನೆಮ್ಮದಿಯ ನಿಟ್ಟುಸಿರಿಟ್ಟಳು .

Oct 25, 2008

ಹುಳು ಮತ್ತು...*

ತಿಳಿಗೆಂಪಾದ
ತಿರುಗುಕುರ್ಚಿಯ ಮೇಲೆ ಕುಳಿತು
ವಿಶಾಲವಾದ ಮೃದು ಮೇಲ್ಪದರ ಹೊಂದಿರುವ ಮರದ
ಟೇಬಲ್ಲಿನ ಮೇಲೆ ಕೈಯೂರಿ ,
ಗಹನ ವಿಷಯದಲಿ ಮುಳುಗಿದ್ದರೆ.
ಸಣ್ಣ ಹುಳುವೊಂದು ರಭಸದಿಂದ ಮೇಲೇರುತ್ತಿತ್ತು ,
ಹಸಿವಿಂದಲೋ, ಜೀವ ಭಯದಿಂದಲೋ ,
ಹುಡುಕಾಟದಿಂದಲೋ ಎಂಬುದು ತಿಳಿಯದೆ
ಅದರ ವೇಗ, ಕಾತುರ, ಭಯದ ಚಲನೆಯನ್ನು
ಕುತೂಹಲದಿಂದ ಗಮನಿಸುತ್ತಿದ್ದೆ .

ಒಮ್ಮೆಗೇ ಹಾಳಾದ ಟೆಲಿಪೋನು
ಕೆಟ್ಟ ರಾಗದಲ್ಲಿ ಕಿರುಚಿ ರಸಭಂಗ ಮಾಡಿತ್ತು;
ಕರೆ ಮೇಲಧಿಕಾರಿಯದು.
ಅವರ ಮಾತಿನ ಧಾಟಿ
ಮೇಲೇರುತಿರುವ ಹುಳುವಿನಂತೆ ,
ವೇಗ, ಕಾತುರ, ಭಯದಿಂದ ಕೂಡಿದಂತ್ತಿತ್ತು.

ಆ ಹುಳು, ಮೇಲಧಿಕಾರಿ ಹಾಗು ನಾನು
ಎಲ್ಲರು ಒಂದೇ ಮನಸ್ಥಿತಿ, ಒಂದೇ ಹಾದಿ ,
ಒಂದೇ ವಾಹನದಲ್ಲಿ ಪಯಣಿಸುವ ಪಯಣಿಗರಂತೆ....

Oct 23, 2008

ವಿಸ್ಮಯ*

- 1 -
ಕ್ಲಾಸ್ ರೂಮಿನಲ್ಲಿ ಅಧ್ಯಾಪಕ
ಅಧ್ಯಾತ್ಮ ಅತ್ಯುತ್ತಮ
ಎಂದು ಪದೇ ಪದೇ ಸಾರಿ ಹೇಳುತ್ತಿದ್ದ.
ಗೆಳತಿ
ಅವನನ್ನೇ ದಿಟ್ಟಿಸಿ,
ತುಂಟ ನಗೆ ಬೀಸಿದ ನಂತರ
ರಸಭಂಗವಾದಂತಿದ್ದ.

- 2 -

ನೀನೆ ಸಕ್ಕರೆ, ಬೆಲ್ಲ ಎಂದು
ನಿನ್ನೆಯವರೆಗೆ
ಪುಳಕಿತಗೊಂಡಿದ್ದ
ನಲ್ಲ
ಇಂದೇಕೆ
ಅಪರಿಚಿತ ನೋಟ
ನನ್ನತ್ತ ಬೀರುವನಲ್ಲ?

- 3 -
ನೀನೆ ಎಲ್ಲಾ ಎಂದು,
ಚುಮು ಚುಮು ಚಳಿಯಲ್ಲಿ
ತಬ್ಬಿ ಮುದ್ದಾಡಿದ
ನಲ್ಲ
ಈಗ ಪ್ರತಿ ಮುಂಜಾನೆ
ಬಿಸಿ ಬಿಸಿ ಫಿಲ್ಟರ್ ಕಾಫಿ
ಬೇಕೆಬೇಕೆನ್ನುವನಲ್ಲ!

Oct 22, 2008

ಮತ್ತೆ ಬರುವನು ಚಂದಿರ - 4

ಹಗಲಲ್ಲಿ ರವಿತೇಜ, ಬೆಳ್ಳಕ್ಕಿ ಹಿಂಡು
ಬೆಳ್ಳಿಮೋಡಗಳ ಬೆನ್ನತ್ತಿ ನೆರಳು
ನೀಲಾಂಬರಕೆ ತಾರೆಗಳ ದಂಡು
ಇರುಳಲಿ ಹೊಳೆಯುವ ಚಂದಿರ

ನದಿ ದಡದಲಿ ನಲಿಯುತಿದೆ ನವಿಲು
ರೆಂಬೆ ಕೊಂಬೆಗಳೊಳಗೆ ಹಕ್ಕಿಹಾಡು
ಮನ್ವಂತರ ಮರಳಿ ಮುಕ್ತಿ ಪಡೆದಾಗ
ಹಾರುವ ಹಕ್ಕಿ ಮತ್ತೆ ನೀ ಚಂದಿರ

ಭಾವ ಬಂಧಗಳ ಪರಿಧಿಯಾಚೆಗೆ ಪಯಣ
ಏಕಾಂಗಿ ಹಾದಿಯಲಿ ಶೂನ್ಯ ದಿಗ್ದರ್ಶನ
ಮಟ್ಟಹಾಕಿದವರಾರು ನಿನ್ನ ಅಟ್ಟಹಾಸಕೆ
ಚಟಗಳ ಚಿತೆಗಿಟ್ಟು ಸುಮ್ಮನಿರು ಚಂದಿರ

ಧೀರೋದಾತ್ತ ಹೆಜ್ಜೆ ಸಹಜ ಬದುಕಿನತ್ತ
ಸುತ್ತಮುತ್ತ ಎತ್ತಿ ತೋರುವುದವರ ಚಿತ್ತ
ಸರಳ ಸಜ್ಜನಿಕೆ ಪರಿಚಯವಿರದವರ
ಸಂಗ ನಿನಗೇತಕೋ ಚಂದಿರ

ಒಳ ಹೊರಗೆ ಅಡಗಿರುವ ತಿರುಳೇಕೊ
ಸಾಕ್ಷಿ ಹುಡುಕುವ ಚಪಲ ನಿನಗೇಕೊ
ಅವರವರ ಆತ್ಮ ಅವರವರ ಕರ್ಮ
ಆತ್ಮಶೋಧನೆ ಬೇಕೊ ಚಂದಿರ

ಮೇಲು ಕೀಳೆಂಬುದೀ ಜಗದ ಗೋಳು
ತಲೆತಲಾಂತರದಿ ಬೆಂದಿರುವ ಬಾಳು
ಸಹನೆ, ಸಂಯಮ ಇಂಗಿ ಹತ್ತಿದೆ ಬೆಂಕಿ
ಉರಿಯುತಿದೆ ಒಳಹೊರಗೆ ಚಂದಿರ

ರವಿಯ ಕಿರಣದನನ್ಯ ಸ್ಪರ್ಶಕೆ
ಹೂವು ಅರಳಿದೆ ಮೆಲ್ಲಗೆ
ಬರುವ ದುಂಬಿಗೆ ತೆರೆದು ಹೃದಯ
ಮುಕ್ತಿ ಪಡೆಯಿತು ಚಂದಿರ

ಆಪ್ತಲೋಕವು ತೆರೆದು ಬಾಗಿಲು
ಆರ್ದೃಗೊಳಿಸಿದ ಹಿತಾನುಭವ
ಆನಂದಕರವೊ ಅಂತರಾತ್ಮಕೆ
ಹಸನ್ಮುಖಿ ನಿತ್ಯ ನೀ ಚಂದಿರ

ನೋವು, ನಲಿವು ಸಹಜ ಗೆಳೆಯನೆ
ಸೋಲು, ಗೆಲುವು ಗೌಣ ಆಪ್ತನೆ
ಸುಪ್ತ ಮನದಿ ಸ್ಪಷ್ಟ ಹಾದಿಗೆ
ಹೆಜ್ಜೆ ಇಡುವವ ಜಾಣ ಚಂದಿರ

ತರ್ಕ, ತತ್ವಗಳ ಎಲ್ಲೆ ಮೀರಿ
ನಿತ್ಯ ಹಸಿರಿಗೆ ಉಸಿರು ನೀಡಿ
ಬರುವ ನಾಳೆಯ ಹಸನು ಮಾಡೊ
ನಮ್ಮ ಕಂದ ನಗುವನು ಚಂದಿರ

Oct 4, 2008

ಹೇಗೆ ಹೇಳಲಿ?

ಅಲ್ಲಿ ಯಾರೂ ಇರುವುದಿಲ್ಲ
ಇಲ್ಲಿ ಯಾರೂ ಇರುವುದಿಲ್ಲ
ಯಾರಿಗೆ ಯಾರೂ ಇಲ್ಲ
ಯಾರೂ ಅನಿವಾರ್ಯವಲ್ಲ

ಬೆಳಕಿಗೆ ಬೆಳಕೆಂದರೆ ಸಾಕು
ಕತ್ತಲಿಗೆ ಕತ್ತಲೆಂದರೆ ಸಾಕು
ಎರಡು ಬೆರೆತಿರಲು ಸಾಧ್ಯವಿಲ್ಲ
ಏಕಾಂಗಿ, ಅದೇ ಕಠೋರ ಸತ್ಯ

ಅದಿದ್ದಲ್ಲಿ ಇದು ಇರುವುದಿಲ್ಲ
ಇದಿದ್ದಲ್ಲಿ ಅದು ಇರುವುದಿಲ್ಲ
ಎರಡು ಒಟ್ಟಿಗಿರಲು ಸಾಧ್ಯವಿಲ್ಲ
ಅದಕೆ ಇದು, ಇದಕೆ ಅದು ಅಷ್ಟೆ ನಿಜ

ಜನ್ಮ, ಸ್ಥಳ, ಹೆಸರು, ಜಾತಿ ,
ಧರ್ಮ, ಸಂಸ್ಕೃತಿ, ದೇಶ
ಎಲ್ಲವೂ ಅಂಟಿಸಿಕೊಂಡಿರುವುದಷ್ಟೆ
ಹುಳ, ಉಪ್ಪಟೆಗಳಂತೆ ಕಳಚಿ ಬಿಡಬಹುದು

ಒಂದರ ನಂತರ ಇನ್ನೊಂದು
ಬರುವುದು, ಇರುವುದು, ಹೋಗುವುದು
ಜಗದ ನಿಯಮ
ಕ್ರಿಯೆ, ಪ್ರತಿಕ್ರಿಯೆಯ ಪರಿಣಾಮ

ಎಲ್ಲ ಪ್ರಶ್ನೆಗಳಿಗೆ ಉತ್ತರ ಅನಿವಾರ್ಯವಲ್ಲ
ಪ್ರಶ್ನೆಗಳ ಒಲಿತು, ಕೆಡುಕಿನ ಪರಿಜ್ಞಾನ
ಅನಗತ್ಯ ಕುತೂಹಲ ಕೆರಳಿಸಿದ
ಪಿತಾಮಹನು ಯಾರು ಬಲ್ಲಿರೇನು ?

ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಂದ
ಸಾಧಿಸಿದ್ದಾದರೂ ಏನು ?
ಇವೆಲ್ಲ ಇರದುದರಿಂದ ಅವುಗಳು
ಕಳೆದುಕೊಂಡದ್ದಾದರೂ ಏನು ?

ಎಲ್ಲವು ಎಲ್ಲದರಂತೆ ಇರಲು ಬಿಡಿ
ಎಲ್ಲರಲಿ ಒಬ್ಬರಂತೆ ಜೊತೆಗಿರುವುದ ಕಲಿ
ಕಡಿದು ಹಾಕುವ ಕಾತುರ ಬೇಡ
ಈಗಲಾದರೂ ಮೂರ್ಖ ಪಾಠ ಕಲಿ

Oct 3, 2008

ಮತ್ತೆ ಬರುವನು ಚಂದಿರ - 3

ಅಸಹಾಯ ಅಪ್ರತಿಮ ಶೂರ
ದಾರಿ ಇರಲು ಬಹಳ ದೂರ
ಇರುವುದೆಲ್ಲವ ತೊರೆದು ಬಾರ
ನೀನಾಗುವೆ ಆಗ ಚಂದಿರ

ಕಾಲಗರ್ಭ ಖಾಲಿ ಕಾಗದವಲ್ಲ
ಬರೆದುದೆಲ್ಲವು ಅರ್ಥವಾಗಬೇಕಿಲ್ಲ
ಸಿಕ್ಕಿದಷ್ಟು ಸಾಕು ಸವಿದು
ಮುನ್ನಡೆಯಬೇಕೊ ಚಂದಿರ

ತಿಳುವು, ತಿರುಳು, ತಿರುವುಗಳು
ಹಿಡಿತಕೆ ಎಂದೂ ಸಿಗದವುಗಳು
ಅರಿವಿರುವವರ ಆಂತರ್ಯದಲ್ಲಿ
ಅಡಗಿರುವವೊ ಚಂದಿರ

ಅಸಿವಿಗೆ ಅನ್ನ, ದಾಹಕೆ ನೀರು
ಬಿಸಿಲು, ಗಾಳಿ, ಮಳೆಗೆ ಸೂರು
ಕತ್ತಲು ಕವಿದೆಡೆ ಇರಲು ಬೆಳಕು
ಸಾಕು ಬಾಳಿಗೆ ಚಂದಿರ

ಬೇಕುಗಳ ಬೆನ್ನಟ್ಟಿ ಹೊರಟಿರುವೆ
ಇತಿಹಾಸ ಪುಟಗಳ ಮರೆತಿರುವೆ
ಮತ್ತದೇ ಜಾಗಕ್ಕೆ ಮರಳಿ ಬರುವ
ಬಯಕೆ ಬಿತ್ತಿರುವೆ ಚಂದಿರ

ಮೂರ್ತ, ಅಮೂರ್ತಗಳ ಜೊತೆಗೂಡಿ
ಶಾಂತಿ, ನೆಮ್ಮದಿಗಾಗಿ ತಡಕಾಡಿ
ಬೆಟ್ಟ ಗುಡ್ಡಗಳೆಲ್ಲ ಅಲೆದಾಡಿ
ನಿನ್ನೊಳಗಿರುವವನವ ಚಂದಿರ

ಇರುವ ಪ್ರಶ್ನೆಗಳ ಎಸೆದು ಬಿಡು
ಚಿಂತೆ ಕಂತೆಗಳೊರಗೆ ತೂರಿಬಿಡು
ನಿರಾಳವಾದ ಪುಟ್ಟ ಹೃದಯವು
ನಲಿದಾಡುವುದಾಗ ಚಂದಿರ

ಪಡೆದುದೆಲ್ಲ ಪ್ರದರ್ಶಿಸುವ ಕಾತುರ
ಇರದುದನು ಪಡೆಯುವ ಅತ್ಯವಸರ
ಇರುವ, ಇರದವುಗಳ ಬಲೆಯಲ್ಲಿ
ನಗುವ ಮರೆತೆಯಲ್ಲೊ ಚಂದಿರ

ತನು ಮನ ತಣಿಸುತಲೇ ಅಭ್ಯಾಸ
ಕಲಿತು, ಕಲಿಸು ಕಾಣುವೆ ಕೈಲಾಸ
ವಿಳಾಸಿ ಜೀವನಕೆ ತೀಳಾಂಜಲಿಯಿಡುತ
ಸರಳ ಬದುಕು ಲೇಸೆಂದ ಚಂದಿರ

ಸ್ಪರ್ಧೆಯ ಜಗದಲ್ಲಿ ಸಹನೆಗೆ ಸ್ಥಳವೆಲ್ಲಿ
ಸಾಮರ್ಥ್ಯವೊಂದೆ ಇಲ್ಲಿ ಮಾನದಂಡ
ಇದ್ದವನು ಈಜುವ, ಇರದವನು ಸಾಯುವ
ಮನಃಶಾಂತಿ ಇನ್ನೆಲ್ಲಿ ಚಂದಿರ

Oct 1, 2008

ಅರಳಿಕಟ್ಟೆ*

ಮೋಟು ಬೀಡಿ ಹಚ್ಚಿ
ಅರಳಿಕಟ್ಟೆ ಮೇಲೆ ಕುಳಿತು
ಗೆಳೆಯರ ಮಿತಿಯಿಲ್ಲದ ಹರಟೆಗೆ
ದಿನದ ದಣಿವು ಮಾಯ.

ಮುಸ್ಸಂಜೆಯ ಹೊತ್ತಲ್ಲಿ
ಕುರಿ ಮೇಕೆಗಳ ಹಿಂಡು ಧೂಳೆಬ್ಬಿಸಿ, ಕೂಗಿ
ಮರಿಗಳ ಜೊತೆಸೇರುವ ಕಾತುರವ
ಕಾಣುವುದೇ ಅಚ್ಚರಿ.

ಬಿಸಿ ಬಿಸಿ ರಾಗಿ ಮುದ್ದೆ ,
ಹಸಿ ಅವರೆಕಾಳು ಸಾರುಂಡು
ಗಂಗಿಯ ಬೆವರಿನ ಘಮಲು ಸೆಳೆದಾಗ
ಅವಳ ಕೂಡುವುದೇ ಸಂಭ್ರಮ.

ಮುಂಜಾನೆ ಮುಸುಕಿನಲಿ
ಬೆಚ್ಚನ ಕಂಬಳಿ ಸರಿಸಿ, ಮೈಮುರಿದು ,
ತೆಳುವಾದ ಮೈ ಮನಕೆ
ಕೇಳಿಸುವುದೆಲ್ಲವು ಸಂಗೀತವೇ.

Sep 19, 2008

ಹತ್ತು ಛಾಯೆಗಳ ಗುರುತು*

ಹೃದಯವ ಆರ್ದ್ರಗೊಳಿಸಿ
ಕಣ್ಣು ಒದ್ದೆಯಾಗಿಸಿ
ಮೃದುವಾಗಿ ಗಾಯ ಸವರಿ
ಆತ್ಮರತಿ ಮೂಡಿಸಿದೆ.

ಚದುರಿದ್ದ ಬಿಂಬಗಳ
ಒಟ್ಟುಗೂಡಿಸಿ
ಹಲವು ಪ್ರತಿಬಿಂಬಗಳ
ಒಂದಾಗಿಸುವ ತರ್ಕ.

ಭಾವಗಳ ವಿವರ
ಬಿಡಿಸಿಡುವ ಹಂಬಲ
ಭಾವ ಸಂವೇದನೆಗೆ
ಸ್ಪಂದಿಸುವ ಛಲ.

ಆಳದಲಿ ಅದುಮಿಟ್ಟ
ಆಪ್ತ ಸ್ವರಗಳ ಕಲಕಿ
ಸುಪ್ತ ಆಸೆಗಳ ಅಲ್ಲಾಡಿಸಿ
ಹಿತವಾದ ಚಲನೆ ನೀಡಿದೆ.

ಹತ್ತು ಛಾಯೆಗಳ ಗುರುತು
ಹಲವು ಸ್ತರಗಳಲಿ ಅವಿತು
ಮರೆತ ಚಿತ್ರಗಳ ನೆನಪು
ಮತ್ತೆ ಕಣ್ಣುಗಳು ಒದ್ದೆ ಒದ್ದೆ.

Sep 18, 2008

ಬದುಕಲು ರೆಡಿಯಿದ್ದವರಿಗೆ ಒಂದಷ್ಟು ಸೂತ್ರಗಳು*

ಬೇರೊಬ್ಬರೊಂದಿಗೆ
ಹೋಲಿಕೆ ಏಕೆ ?
ಅವರ ಹಾದಿಯ ಬಗ್ಗೆ
ನಮಗರಿವಿಲ್ಲದಿದ್ದಾಗ.

ನಮ್ಮ ಸಂತೋಷಕ್ಕೆ ಯಾರೋ
ನಾಯಕರಲ್ಲ ?
ನಮ್ಮ ಹೊರತು .

ಅವರಿವರ ಅಭಿಪ್ರಾಯ,
ಅನಿಸಿಕೆಗಳು
ಆರೋಗ್ಯವಾಗಿ, ಸರಿಯಾಗಿದ್ದಲ್ಲಿ ಸ್ವೀಕರಿಸಿ ,
ಇಲ್ಲವಾದರೆ ನಿರಾಕರಿಸಿ.

ಪರಿಸ್ಥಿತಿ ಎಷ್ಟೇ ಚೆನ್ನಾಗಿ
ಅಥವ ಕೆಟ್ಟದಾಗಿದ್ದರು
ಅದು ಖಂಡಿತ ಬದಲಾಗುತ್ತದೆ

ಉಪಯೋಗಕ್ಕೆ ಬಾರದ ,
ಹಿತವೆನಿಸದ ಅಥವ
ಸಂತಸ ತರದವುಗಳಿಂದ ಆದಷ್ಟು
ದೂರವಿರಲು ಯತ್ನಿಸಿ

ಮನಸು ಹೇಗೇ ಇರಲಿ ,
ಎಲ್ಲೇ ಇರಲಿ, ನಮ್ಮ ಹತೋಟಿಯಲ್ಲಿರಲಿ

ಏಳಿ, ಎದ್ದೇಳಿ ಸಮಸ್ಯೆಗಳ
ಎದೆಗುಂದದೆ ಎದುರಿಸಿ

ಹತ್ತರಿಂದ ಮೂವತ್ತು ನಿಮಿಷವಾದರು
ಉಮ್ಮಸ್ಸಿನಿಂದ ದಿನ ನಡೆಯುವುದು
ಅಭ್ಯಾಸ ಮಾಡಿಕೊಳ್ಳಿ.

ಪ್ರತಿ ಮುಂಜಾನೆ ಏಳುವಾಗ
ಅಂದಿನ ಉದ್ದೇಶ ಸಂತೋಷವಾಗಿರಬೇಕು
ಎಂಬ ವಾಕ್ಯವನ್ನು ಮರೆಯದೆ ನೆನೆಸಿಕೊಳ್ಳಿ.

ನಮ್ಮ ಸಾಕಷ್ಟು ಸಮಯ
ಎಪ್ಪತ್ತು ವರ್ಷ ಮೇಲ್ಪಟ್ಟು
ಆರು ವರ್ಷದೊಳಗಿನವರೊಂದಿಗೆ
ಕಳೆದರೆ, ಹೆಚ್ಚು ನಗುವಿರುತ್ತದೆ

ಪ್ರತಿದಿನ ಕನಿಷ್ಟ ಮೂವರನ್ನಾದರು
ನಗಿಸುವ ಪ್ರಯತ್ನ ಆರೋಗ್ಯಕರ

ಉತ್ಸಾಹ, ಉಮ್ಮಸ್ಸು ಹಾಗು
ನಗುವಿನಿಂದಿರಲು ಯತ್ನಿಸಿದಾಗ
ನಕಾರಾತ್ಮಕ ವಿಷಯಗಳು
ತಾನಾಗಿಯೇ ದೂರವಿರುತ್ತವೆ.

ಬದುಕು ಅತ್ಯಲ್ಪ ಅವಧಿ ಮಾತ್ರ
ದ್ವೇಷಿಸುವುದಕ್ಕೆ ಕಾಲಹರಣ ಬೇಡ

ಎಲ್ಲ ವಾದಗಳು ಗೆಲ್ಲಬೇಕೆಂದಿಲ್ಲ
ಒಪ್ಪಿಗೆಯಿಲ್ಲವೆಂದು ಒಪ್ಪಿಕೊಳ್ಳುವುದು ಸೂಕ್ತ.

ಸಂಸಾರದೊಂದಿಗೆ ಹೆಚ್ಚು ಸಂಪರ್ಕ
ಹಾಗು ಸಮಯ ಕೊಡುವುದು ಅಗತ್ಯ

ನೆನಪಿರಲಿ ಮನುಜರು ತುಂಬಾ
ಅದೃಷ್ಟವಂತರು, ಸಮಸ್ಯೆಗಳಿಂದ
ಕಲಿಯಲು ಅವರಿಗೆ ಮಾತ್ರ ಸಾಧ್ಯ

ಪಯಣ ಸಂತಸಕರವಾಗಿರಲಿ,
ಅತಿಯಾದ ಅವಸರ ಬೇಡ
ವೇಗ, ಉದ್ವೇಗ ಕೊನೆಯಾಗುವವು ಬೇಗ.

ಪ್ರತಿರಾತ್ರಿ ಮಲಗುವ ಮುನ್ನ
ದಿನದ ಸಂತಸ, ಸಾಧನೆ ನೆನಪಿನಲ್ಲಿರಲಿ.

ಸರಿಯಾದ ಮಾರ್ಗ, ಸರಿಯಾದ ಮಾತು
ಸರಿಯಾದ ಮನಸು, ಸರಿಯಾದ ಕ್ರಿಯೆಯಲ್ಲಿ
ವಿಶ್ವಾಸವಿರಲಿ.

ಅತ್ಯುತ್ತಮವಾದುದು
ಇನ್ನೂ ಬರಬೇಕಿದೆ ಎಂಬ
ನಂಬಿಕೆಯಿರಲಿ.

ಅನಾರೋಗ್ಯದಲ್ಲಿ ನಮ್ಮ ಉದ್ಯೋಗ
ನಮ್ಮನ್ನು ರಕ್ಷಿಸುವುದಿಲ್ಲ
ಸ್ನೇಹಿತರು ನೆರವಾಗುತ್ತಾರೆ
ಸ್ನೇಹಿತರಿರಲಿ ,
ಮುಖ್ಯವಾಗಿ ಅವರೊಂದಿಗೆ ಸಂಪರ್ಕವಿರಲಿ

ಕಾಲ ಎಲ್ಲವನ್ನು ವಾಸಿ ಮಾಡುತ್ತದೆ ,
ಮರೆಸುತ್ತದೆ ಅದಕ್ಕೆ ಅವಕಾಶವಿರಲಿ.

ಎಲ್ಲರನ್ನು ಎಲ್ಲ ತಪ್ಪುಗಳಿಗಾಗಿ ಕ್ಷಮಿಸುವುದರಿಂದ
ಮನಸು ಹಗುರ, ಆರೋಗ್ಯಕರವಾಗಿರುವುದು.

ಹಣತೆ ಬೆಳಗಿ ಕತ್ತಲೋಡಿಸಿ
ಒಳ್ಳೆಯದು, ಇಷ್ಟವಾಗುವುದು ತಪ್ಪದೆ ಬಳಸಿ
ಯಾವುದನ್ನೂ ಶುಭಘಳಿಗೆಗಾಗಿ ಮೀಸಲಿಡಬೇಡಿ

ಹಿಂದಿನ ಕಹಿನೆನಪುಗಳಿಂದ ,
ಈ ದಿನವನ್ನು ಕೆಡಿಸಿಕೊಳ್ಳುವುದು
ಮೂರ್ಖತನ.

ನಿಮ್ಮನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ
ಯಾರು ಅವರವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ

ಜೀವನದಲ್ಲಿ ಎಲ್ಲವೂ ಸರಿಯಿಲ್ಲ,
ಆದರೂ ಸೊಗಸಾಗಿಯೆ ಇದೆ;
ಆಸಕ್ತಿ ಇದ್ದರೆ ಮಾತ್ರ.

ಬದುಕೊಂದು ಪಾಠಶಾಲೆ
ಕಲಿಯಲು ಬಂದಿದ್ದೇವೆ
ಪರೀಕ್ಷೆಯಲ್ಲಿ ಪ್ರಯತ್ನಿಸುತ್ತೇವೆ
ಸಮಸ್ಯೆಗಳು ಪಠ್ಯಕ್ರಮದ ಒಂದು ಭಾಗ
ಬರುತ್ತವೆ, ಹೋಗುತ್ತವೆ ಕೂಡಿ ಕಳೆವ ಲೆಕ್ಕದ ಹಾಗೆ
ಕಲಿತದ್ದು ಕೊನೆಯವರೆಗೂ ಉಳಿಯುತ್ತದೆ.

ಎಚ್ಚರವಿದ್ದಾಗಲೇ ಹೆಚ್ಚು
ಕನಸು ಕಾಣುವುದು ಲೇಸು.

ಉಲ್ಲಾಸ, ಉತ್ಸಾಹ, ಉಮ್ಮಸ್ಸು
ಹಾಗು ಸ್ನೇಹಿತರು, ಸಂಸಾರ ,
ನಂಬಿಕೆಯಿರಲು ಬಾಳು ಸುಂದರ.

ನಿಶ್ಯಬ್ದ ವಾತಾವರಣದಲ್ಲಿ
ಕನಿಷ್ಟ ಹತ್ತು ನಿಮಿಷವಾದರು
ಕಳೆಯುವುದು ಆರೋಗ್ಯಕ್ಕೆ ಅಗತ್ಯ.

(ಹತ್ತು ದಿಕ್ಕುಗಳಿಂದ ಓದಿದ್ದರ ಪದ್ಯರೂಪಗಳು)

Sep 17, 2008

ಆಕೆ

ಮೋಹಕ ಕಣ್ಣಿನ ಕವಿತೆಗೆ
ಮೋಸ ಹೋಗದಿರು ಓ ಮನಸೆ
ಮತ್ತೆ ಕಾಣುವ ಹಂಬಲಕೆ
ಮತ್ತೆ ಸೋಲದಿರು ನೀ ಕೂಸೆ

ಕನಿಕರವಿಲ್ಲದ ಆ ನೋಟ
ಕಟ್ಟುತ ಕನಸಿನ ತೋಟ
ಎಲ್ಲೆಡೆ ಹಸಿರನು ತುಂಬುತ
ಹಸಿವಿನ ಮೂಲಕ ಸೆಳೆತ

ಚಂಚಲ ಮನಸಿನ ಓ ಚೆಲುವೆ
ಮಿಂಚುಳ್ಳಿಯಂತೆ ಮಿನುಗುವೆ
ಕಾಮನಬಿಲ್ಲು ಬಿಡಿಸುತ ನೀನು
ಮೊನಚಾದ ಕೊಕ್ಕಿಂದ ಕುಕ್ಕುವೆ

ಒಮ್ಮೆಗೆ ಪ್ರಳಯದ ಅನುಭೂತಿ
ಒಳಗಡಗಿದೆ ಹಿಡಿಸುವ ಭೀತಿ
ಹೇಳಲಾಗದ ಮನಮಿಡಿತ
ಹಿಡಿತಕೆ ಸಿಗದಿಹ ಈ ತುಡಿತ

ಏನು ಸಮಾಚಾರ?

ಪಶ್ಚಿಮದಲ್ಲಿ ದೊಡ್ಡಾನೆಗಳಿಗೆ
ದೊಡ್ಡ ಪೆಟ್ಟು
ಏಳಲಾಗದ ಕುಸಿತ
ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ
ನೌಕರರ ಕೆಲಸಕ್ಕೆ ಕುತ್ತು
ಕಚ್ಛಾತೈಲ ಬೆಲೆ ಇಳಿಕೆ

ಇತ್ತ ಷೇರುಪೇಟೆ ಸೂಶ್ಚ್ಯಂಕ ದಕ್ಷಿಣದತ್ತ
ಮರಿ ಆನೆಗಳ ಮೊಗದಲ್ಲಿ ಕಳವಳ
ನಲ್ವತ್ತಾರು ದಾಟಿದ ರುಪಾಯಿ
ತೈಲ ಇಳಿಕೆ, ರುಪಾಯಿ ಏರಿಕೆ
ಪ್ರಯೋಜನವಿಲ್ಲ
ಬೆಕ್ಕಿಗೆ ಸಂಕಟ ,
ಇಲಿಗೆ ಪ್ರಾಣ ಸಂಕಟ

ಮತ್ತೊಂದು ಕಡೆ ಸರಣಿ
ಬಾಂಬ್ ಬ್ಲಾಸ್ಟ್ಸ್
ಮೂವತ್ತು ಮರಣ ,
ಅದೇ ಸಮಾಧಾನ
ಬಿ ಎಮ್ ಡಬ್ಲ್ಯೂ ಆರೋಪಿಗೆ ಶಿಕ್ಷೆ
ಆರುಷಿ ಕೊಲೆ ಆರೋಪಿಗಳಿಗೆ
ಬಂಧನ ಬಿಡುಗಡೆ

ಅಣು ಒಪ್ಪಂದ ಆಲ್ಮೋಸ್ಟ್ ಕ್ಲಿಯರ್
ಆಪರೇಶನ್ ಕಮಲ ಸಿಕ್ಸರ್
ಶಾಲಾ ವಿದ್ಯಾರ್ಥಿಗಳಿಗೆ
ಉಚಿತ ಬಸ್ ಪಾಸ್
ಜೊತೆಗೆ ಬೈಸಿಕಲ್
ಮತಾಂತರದ ವಿರುದ್ಧ
ಗಲಬೆ, ಗೊಂದಲ, ಇರಿತ
ಅವರು ರಾಜೀನಾಮೆಗೆ ಆಗ್ರಹ
ಮುಖ್ಯಮಂತ್ರಿಗಳ ನಕಾರ

ಇದೇ ಸುದ್ದಿ ಪೇಪರ್ನಲ್ಲಿ ,
ಟೀವಿಗಳಲ್ಲಿ, ಇಂಟರ್ನೆಟ್ಟಲ್ಲಿ ,
ಬಸ್ಸಲ್ಲಿ, ಟ್ರೈನಲ್ಲಿ, ಶಾಪಿಂಗ್
ಮಾಲ್ನಲ್ಲಿ, ಗೆಳೆಯರ ಹರಟೆಯಲ್ಲಿ
ಹ್ಹೆ...ತ್ತೇರಿ ತಲೆ ಎಕ್ಕುಟ್ಟೋಗಿದೆ
ಮಗಳೆ, ತೇಜಸ್ವಿ ಕರ್ವಾಲೋ
ಪುಸ್ತಕ ಕೊಡಮ್ಮ ಓದ್ಕೊಡ್ತೀನಿ

Sep 15, 2008

ಕನ್ನಡಪ್ರಭದಲ್ಲಿ - ಕೂಗು...ಎನ್ನ ಮನುಕುಲಕೆ!!!

ಕನ್ನಡ ಪ್ರಭ - ಸೆಪ್ಟಂಬರ್ 16, 2008,

ಕೂಗು ಕವನಗಳ ಲೋಕ. ಮನಸ್ಸಿಗೆ ತೋಚಿದ್ದನ್ನು ಒಂದಿಷ್ಟೂ ಮುಚ್ಚಿಡದ ಬ್ಲಾಗ್ ಅಂಗಣದಲ್ಲಿ ಬ್ಲಾಗಿಗ 'ಏನೆಂದು ಅರಿಯದೆ ಏನನ್ನೋ ಹುಡುಕುತ್ತಾ' ಕನ್ನಡದ ಕಂಪನ್ನು ಬೀರುತ್ತಾ ಸಾಗುತ್ತಾರೆ.....

ಬ್ಲಾಗಾಯಣ ಅಂಕಣದಲ್ಲಿ ನನ್ನ ಕೂಗು ಬ್ಲಾಗನ್ನು 'ದಡ' ಕವನದೊಂದಿಗೆ ಓದುಗರಿಗೆ ಪರಿಚಯಿಸಿದ ನಿಮಗೆ ವಿನಮ್ರ ವಂದನೆಗಳು.

-ಚಂದಿನ

ಎನ್ನ ಕೂಗಿನಲ್ಲಿ ದಡದ ನೆನಪು

ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ

ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ

ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ

ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು

ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ

Sep 13, 2008

ಮಳೆ

ಮಳೆ ಬಂತು ಮಳೆ, ಧೋ ಅಂತ ಮಳೆ
ನಿಲ್ಲದ, ಲಯ ಬಿಡಲೊಲ್ಲದ ಮಳೆ
ರಸ್ತೆ ಗುಂಡಿಗಳ ಕೊಂಡಿಯ ಸೇರಿಸಿ
ಹುಚ್ಚಾಪಟ್ಟೆ ಚಚ್ಚುವ ಮಳೆ

ಅರ್ಧ ತಾಸಿನ ಬರಗಾಲದ ನಂತರ
ತನು ಮನ ತಣಿಸುವ ಮೋಹಕ ಮಳೆ
ಕುತೂಹಲ ಕೆರಳಿಸಿ, ಕಲರವ ಮೂಡಿಸಿ
ಸುರಿಯುತ ಸುರಿಯುವ ಸೋನೆಮಳೆ

ಮಾರನೆ ದಿನಕೆ ಅಲ್ಪವಿರಾಮ
ಆಗಸಕಾಗ ತುಸು ಆರಾಮ
ಗೆಳೆಯರೊಂದಿಗೆ ಹರಟೆಗೆ ಕೂತರೆ
ತರಾಟೆಗೆ ಶುರುವಿಟ್ಟ ಜೋರು ಮಳೆ

( ಮೂಲ ಆಂಗ್ಲ ಭಾಷೆ – ಮೊದಲ ಪ್ರಯತ್ನ ಕ್ಷಮೆಯಿರಲಿ )

ಸಾಕಾಗಿದೆ*

ಸಾಕಾಗಿದೆ
ಉದ್ಯೋಗ
ಉದ್ವೇಗ
ಉದ್ರೇಕ.

ಸಾಕಾಗಿದೆ
ಮಡದಿ
ಮಗು
ಮನೆ.

ಸಾಕಾಗಿದೆ
ಸ್ನೇಹ
ಬಂಧು
ಬಳಗ.

ಸಾಕಾಗಿದೆ
ಗುದ್ದಾಟ
ಒದ್ದಾಟ
ಹುಡುಕಾಟ.

ಸಾಕಾಗಿದೆ
ಸ್ಪರ್ಧೆ
ವೇಗ
ಒತ್ತಡ.

ಸಾಕಾಗಿದೆ
ಸೋಲು
ಸೆಳೆತ
ಸವಾಲು.

ಸಾಕಾಗಿದೆ
ನಿರಾಸೆ
ನೀರಸ
ನಿರುತ್ಸಾಹ.

ಸಾಕಾಗಿದೆ
ನಗರ
ಸದ್ದು
ಗದ್ದಲ.

ಬೇಕಾಗಿದೆ
ಮೌನ
ಮೌನ
ಮೌನ.

Sep 12, 2008

ಮತ್ತೆ ಬರುವನು ಚಂದಿರ - 2

ರವಿಯ ಜೊತೆಗೆ ನಿತ್ಯ ಪಯಣ
ಉರಿವ ಬಿಸಿಲು ಸುರಿದು ಸ್ನಾನ
ಬಿಸಿಲು ಹೀರಿ ಬೆಳಕು ಚೆಲ್ಲಿ
ಚದುರಂಗವಾಡೊ ಚಂದಿರ

ರಾಗ, ದ್ವೇಷ ಬಾಣ ಬೀಸಿ
ಚಾಕು ಚೂರಿ ಬೆನ್ನಿಗಿರಿಸಿ
ಮದ್ದುಗುಂಡು ಸಿಡಿಸಿದಾತ
ಸುಖಪಡುವನೆ ಚಂದಿರ

ಜಾತಿ, ಮತವ ಬಿತ್ತಿ ಬೆಳೆದು
ಶಾಂತಿ, ಸಹನೆ ಕೊಚ್ಚಿ ಕಡಿದು
ಸಾಧು, ಸಂತ, ಸಜ್ಜನನೆಂದರೆ
ಸಹಿಸುವನೆ ಚಂದಿರ

ಹಗಲು ಇರುಳು ದಿನದ ಸಾಲು
ಮುಗಿದ ಮೇಲೆ ಹೊಸತು ಬಾಳು
ತಿಳಿದು ತಿಳಿಯದೇಳು ಬೀಳು
ಸಹಜವೆಲ್ಲ ಚಂದಿರ

ದಿನಕೆ ನೂರು ಜನನ ಮರಣ
ಬೇಕೆ ಇದಕೆ ಕಾಲಹರಣ
ಇರುವ ಮೂರು ದಿನವು ಗೆಳೆಯ
ನಗುತ ನಗಿಸು ಚಂದಿರ

ಹಸಿರೆ ಉಸಿರು ಉಳಿಸು ಹೆಸರು
ಉಳಿಸು ಮಳೆ ಹನಿಯ ನೀರು
ಬೆಳೆಸಿ ಹಸಿರು, ಉಳಿಸಿ ನೀರು
ಉಸಿರು ನೀಡೊ ಚಂದಿರ

ನೆಟ್ಟು ನೋಟ ನೆರಳಿನಲ್ಲಿ
ಬೆಳಕು ಬಿಟ್ಟು ಇರುಳಿನಲ್ಲಿ
ಸತತ ಪಯಣ ನಿಲ್ಲದಿರಲಿ
ಜಯವು ನಿನದೆ ಚಂದಿರ

ಗೊಂದಲಗಳ ಗೂಡು ಕಟ್ಟಿ
ದ್ವಂದ್ವ ಮನದ ರೆಕ್ಕೆಬಿಚ್ಚಿ
ಹಾರಿ ಹೋದ ಹಕ್ಕಿ ನಿನ್ನ
ನೋಡಿ ನಗುವ ಚಂದಿರ

ಇಂಗುತಿಂದ ಮಂಗನಂತೆ
ರೆಂಬೆ ಕೊಂಬೆ ಜಿಗಿಯುತ
ಜಾರಿ ಬಿದ್ದು ಮುರಿದ ಕೈಗೆ
ಯಾರ ಜರಿವೆ ಚಂದಿರ

ಕಣ್ಣ ಮುಚ್ಚಿ ಕತ್ತಲೆಂದು
ಕುಣಿಯಲೇಕೆ ಆತುರ
ಕಳೆದುಕೊಂಡು ಕೊರಗಲೇಕೆ
ಕಣ್ಣ ತೆರೆಯೋ ಚಂದಿರ

Sep 5, 2008

ಸಿಗುವುದೇನು ಉತ್ತರ?*

ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ.

ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಬಳಿಗೆ
ಬರುವುದೇ ಅಚ್ಚರಿ.

ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು.

ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗೂ
ಸಿಗುವುದೇನೇ ಉತ್ತರ?

Sep 3, 2008

ಮತ್ತೆ ಬರುವನು ಚಂದಿರ - 1

ಕೂಡಿ, ಕಳೆವ ಆಟ ತರವೆ
ತಂದ ಗಂಟು ಮರೆತು ಬಿಡುವೆ
ಬೇಡ ಆಸೆ ಬೆಟ್ಟದಷ್ಟು
ಏರಲಾರೆ ಚಂದಿರ

ಸಾಕು ದಿನಕೆ ಮೂರು ತುತ್ತು
ಮಾತೆ ಕೊಟ್ಟ ಹತ್ತು ಮುತ್ತು
ಉಳಿದುದೆಲ್ಲ ಊರು ಪಾಲು
ನಮ್ಮ ಪಾಲಿಗಿರುವ ಚಂದಿರ

ಕತ್ತಲಿರುವ ಜಾಗದಲ್ಲಿ
ಹಣತೆ ಬೆಳಗಿ ಆಪ್ತನಾಗು
ಬಳಲಿ ಬಂದ ಬಂಧುಗಳಿಗೆ
ಬದುಕು ನೀಡು ಚಂದಿರ

ಸ್ವಚ್ಛ ಮನಕೆ ಶ್ವೇತ ವರ್ಣ
ಒಳಗಡಗಿದೆ ಏಳು ಬಣ್ಣ
ಬಿಗಿದಿಡುವ ಬಯಕೆ ತರವೆ
ಬೆಳಗುತಿರುವ ಚಂದಿರ

ಕುತೂಹಲ ಕೆರಳಿದಾಕ್ಷಣ
ಕುಂತಿಗಾಗ ಚಿರಯೌವನ
ದಾನ ವೀರ ಶೂರ ಕರ್ಣ
ವರವಾದನೆ ಚಂದಿರ

ಯಾವ ದಾಹ ಯಾವ ಮೋಹ
ಬಿಡಿಸಿ ಸುತ್ತ ಚಕ್ರವ್ಯೂಹ
ಇರುವ ತನಕ ಸುತ್ತಿ ಸುತ್ತಿ
ಸುಳಿಗೆ ಸಿಕ್ಕ ಚಂದಿರ

ಅರಿವಿಲ್ಲದ ಆಳದಲ್ಲಿ ಆಟವಾಡಬೇಡ
ಬಯಸಿದ್ದು ಸಿಕ್ಕಿದಷ್ಟು ಅತಿಯಾಸೆಬೇಡ
ಹಿಂದಿರುಗಿ ನೋಡೊ ಗೆಳೆಯ
ನೆನಪು ತರುವ ಚಂದಿರ

ಬೆಳಕರಿಯದ ಊರಿನಲ್ಲಿ
ಕತ್ತಲೆಂದು ಕದಲದು
ಹಸಿವಿಲ್ಲದ ಮನುಜನಲ್ಲಿ
ಬೆಳಕು ಬರದು ಚಂದಿರ

ಹುಚ್ಚು ಕುದುರೆ ಓಟದಲ್ಲಿ
ಕುರುಡಾಗಿದೆ ಪಯಣವು
ಎಡವಿಬಿದ್ದ ಸ್ಥಳದ ಸುಳಿವು
ಸಿಗಲಾರದೆ ಚಂದಿರ

ಇತಿಮಿತಿಗಳ ಇತಿಹಾಸ
ಬಲ್ಲವನೆ ಸಂತನು
ಎಲ್ಲೆ ಇರದ ಸಾಹಸಕೆ
ಸೈ ಎನ್ನುವ ಚಂದಿರ

Sep 2, 2008

ಗದ್ದಲ*

ಅದುಮಿಟ್ಟ ಹಂಬಲಗಳು ಒಟ್ಟಾಗಿ
ತತ್ತರಿಸಿದ ಚಿತ್ತ
ಸಿಡಿದ ಸದ್ದಿನ ಗದ್ದಲ
ಸುತ್ತ ಗಡಿಬಿಡಿ ಕೋಲಾಹಲ.

ಘಟಿಸಿದ ಅನಾಹುತ
ತಟಸ್ಥ ಒಮ್ಮೆಗೆ
ನೀರವ ಮೌನ
ಅಲೆ ಅಲೆಯಾಗಿ ಪಯಣ.

ಸ್ಧಿತ್ಯಂತರ ಕ್ಷಣದಲಿ
ದಿಗ್ಭ್ರಮೆ, ರೋದನ
ಸಾಂತ್ವನ ಸಾಲು ಸಾಲು
ಸಂದಿಗ್ಧ ಪರಿಸ್ಥಿತಿ

ಅಸಹಾಯ ಸನ್ನಿವೇಶ
ಸತ್ಯದ ದಿಗ್ದರ್ಶನ
ಇನ್ನು -
ಹೊಸ ಅಧ್ಯಾಯದಾರಂಭ.

Aug 25, 2008

ಆಗ

ವೇಗದ ಮನವಿಡಿದು
ಜೋರು ಉಸಿರೆಳೆದು
ನಿಧಾನಗತಿಯಲ್ಲಿ ಹೊರಬಿಡಲು
ನಿರಾಳ ಅಂತರಾಳ

ಮನೆತುಂಬ ನೆಂಟರು
ಜೋರು ಗಲಾಟೆ, ಮಂಡೆ ಬಿಸಿ ,
ಹೋದ ನಂತರ
ಮನಸು ಹಗುರ - ಭಾರ

ಒಂದೇ ಸಮನೆ ಟೀವಿ ಹಚ್ಚಿ
ಧಾರಾವಾಹಿ ನೋಡುವ ಛಟ
ಕೃತಕ ಭಾವೋದ್ರೇಕ
ನಿಂತರೆ ಮನಃಶಾಂತಿ

ನಿಮಿಷಗಟ್ಟಲೆ ಕಾಯಿಸುವ
ಟ್ರಾಫಿಕ್ ಸಿಗ್ನಲ್ಸ್
ಕ್ಷಣ ಕ್ಷಣ ರಕ್ತದೊತ್ತಡ ಏರುಪೇರು
ಗ್ರೀನ್ ಲೈಟಿಂದ ಬದುಕಿದ ತೃಪ್ತಿ

ಬಂಪರ್- ಟು - ಬಂಪರ್
ಟ್ರಾಫಿಕ್ ಜಾ...ಮ್ !
ಶೃತಿ, ಲಯ ತಪ್ಪಿದರೆ ಧರ್ಮದೇಟು, ದಂಡ
ಗೆದ್ದರೆ ದೊಡ್ಡ ನಿಟ್ಟುಸಿರು

Aug 22, 2008

ದಿನಚರಿ*

ಪ್ರತಿದಿನ ಮೂರು ಹೊತ್ತಿನ ಊಟ
ಹಗಲೆಲ್ಲ ಕೆಲಸ ,
ಗೆಳೆಯರೊಂದಿಗೆ ಹರಟೆ
ದಿನದ ವಿಶೇಷವೆ?

ಮಡದಿಯೊಂದಿಗೆ ಜಗಳ, ಮುನಿಸು ,
ಪಿಸುಮಾತು, ಸಿಹಿಮುತ್ತು ,
ಎದುಸಿರು, ನಿಟ್ಟುಸಿರು
ಸಮರ್ಥ ನಿರ್ವಹಣೆಯೆ?

ಮಗುವೆಬ್ಬಿಸಿ, ಹಲ್ಲುಜ್ಜಿ
ಹಾಲುಣಿಸಿ, ಸ್ನಾನ ,
ಶಾಲೆಯ ತಯಾರಿಯೊಂದಿಗೆ
ದಿನದ ಜವಾಬ್ದಾರಿ ಮುಗಿಯಿತೆ?

ಹೇಗಿತ್ತು ದಿನ, ಊಟವಾಯಿತೆ ,
ಆರೋಗ್ಯ ಹೇಗಿದೆ, ಇನ್ನೇನು ಸಮಾಚಾರ ,
ಪ್ರಶ್ನೆಗಳೊಂದಿಗೆ ,
ಅಮ್ಮನ ಆರೈಕೆ ಸಾಕೆ?

ದಿನಸಿ, ತರಕಾರಿ, ಕರೆಂಟು ಬಿಲ್ಲು
ಸಂಜೆ ಮಡದಿ ಮಗುವಿನ ಜೊತೆ
ಸಿನಿಮಾ, ತಿಂಡಿ, ತಿರುಗಾಟ...
ಬದುಕಿಗಿಷ್ಟು ಸಾಕೆ?

Aug 19, 2008

ಮತ್ತೆ ಬರುವನು ಚಂದಿರ

ಆರೋಹ, ಅವರೋಹವದ್ಭುತ
ಶೃತಿ, ಲಯವ ಬಿಡದ ಸುತ
ಜಗದ ನಿಯಮ ಪಾಲಿಸುವ
ವಿನಯವಂತ ಚಂದಿರ

ಸುರಿವ ಮಳೆಯೆ ಸಂಗೀತ
ಜಾರಿ ಬರುವ ಸ್ವರದ ಹಿತ
ರಾಗ ಯಾವುದಾದರೇನು
ಕೇಳಿ ಕುಣಿವ ಚಂದಿರ

ಅವನ ಅವಳ ನಡುವೆ ಜಗಳ
ನೋಡಿ ನಲಿವ ಕುತೂಹಳ
ವಿರಸ ಕಳೆದು ಸರಸ ಸೆಳೆದ
ಕ್ಷಣಕೆ ಮಾಯ ಚಂದಿರ

ಕಳೆದ ನಿನ್ನೆ, ಸಿಗದ ನಾಳೆ
ಬೇಕೆ ನಮಗೆ ಅವರ ರಗಳೆ
ಇರುವ ಇಂದು ಈಗಲೇ
ನಿಜವು ನಮಗೆ ಚಂದಿರ

ಜಾರಿ ಬಿದ್ದರೇನು ಚಿಂತೆ
ಎದ್ದು ಬರುವ ಎಂದಿನಂತೆ
ಬಿದ್ದು ಎದ್ದು ನಿಂತ ಮೇಲೆ
ಗೆದ್ದು ಬರುವ ಚಂದಿರ

ಬಿಳಿಯ ಹಾಳೆಯ ಮೇಲೆ
ಬೆಳೆದು ನಿಂತ ಭಾವಗಳೆ
ಭಾರವಾಗದಿರಿ ಎಚ್ಚರ
ಹೊರಲಾರನು ಚಂದಿರ

ಬಿಸಿಲು, ಮಳೆ, ಚಳಿಯ ಹಾಗೆ
ಬದಲಾಗುವ ಬಯಕೆ ಏಕೆ
ಹಣ್ಣಾಗುವ ಮೊದಲೇ ಮಣ್ಣಾಗ
ಬೇಕೆ ಚಂದಿರ

ಗಂಡು ಹೆಣ್ಣು ಜಗದ ಕಣ್ಣು
ಧರೆಗೆ ದೇಹ ಹಸಿರು, ಮಣ್ಣು
ಉಸಿರಿಗಿರಲು ಗಾಳಿ, ನೀರು
ಬೇರೆ ಬೇಕೆ ಚಂದಿರ

ಆದಿ, ಅಂತ್ಯ ನೆಪಕೆ ಮಾತ್ರ
ಮರಳಿ ಬರಲು ಬೇರೆ ಪಾತ್ರ
ಇರುವ ಮೂರು ದಿನವು ನಟಿಸಿ
ಇಹವ ತೊರೆಯೋ ಚಂದಿರ

ಒಂದು, ಎರಡು, ಮೂರು, ನಾಕು
ದಾರಿ, ನೆರಳು, ಬೆಳಕು ಬೇಕು
ಬಯಸಿ ಬಂದ ಭಾಗ್ಯ ಸವಿದು
ವಂದಿಸುವೆನೋ ಚಂದಿರ

Aug 12, 2008

ಅಳುತ್ತಿರುವ ಮಗುವೇ*

ಮಗು ಅಳುತ್ತಿದೆ ಬೆಳಗಿನಿಂದ;
ರೆಪ್ಪೆ ಒತ್ತಿದಷ್ಟೂ ಹೊಮ್ಮುವ
ಕಣ್ಣೀರ ಕಾಲುವೆ
ಕೆನ್ನೆಮೇಲೆ ಕಾಲುದಾರಿ.

ಅರಿವಿರದ ಮಗುವು
ಅಳುವಿಂದ ಎಲ್ಲ ತಿಳಿಸುವುದೆ?

ಸಜ್ಜನರ ಚಿತ್ತ
ಅವರವರ ಹಾದಿಯತ್ತ
ನೋಡಿಯು ನೋಡದಂತೆ
ನಿರ್ಲಿಪ್ತ ನೋಟ ಮಗುವಿನತ್ತ.

ಇದ್ದರು ಇಲ್ಲದ ಬದುಕು;
ಆದರೂ ಬದುಕುವಾಸೆ ಆಗಸದಷ್ಟು
ಕಂದ ಅಳುತ್ತಲೇ ಇರು ಅರಿಯುವವರೆಗೆ
ಸಂತೈಸಲು ಯಾರಾದರೂ ಬರುವವರೆಗೆ.

Aug 4, 2008

ಮತ್ತೆ ಮೂಡಿ ಬರುವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

ದೇವ, ದಾನವನಿವನೆ ಮಾನವ
ಮತದ ಹೆಸರಲಿ ಮತಿಯ ಕೆಡಿಸುವ
ಮತಕೆ ಮತಿಗೆ ಹಣತೆ ಬೆಳಗುತ
ನಗುತಲಿರುವನು ಚಂದಿರ

ದೇಶಕಾಲದ ಪರಿಗೆ ಮಾಗದೆ
ಹಲವು ಋತುಗಳ ಕೈಗೆ ಸಿಗದೆ
ಅವನ ಕಾಯಕ ಕರ್ಮ ನಿಷ್ಠೆಗೆ
ಬದ್ಧನಾಗಿ ನಡೆವ ಚಂದಿರ

ಸೃಷ್ಠಿಕರ್ತನೆ ಸೂತ್ರಧಾರಿ
ಜಗವೆ ಅವನಿಗೆ ಪಾತ್ರಧಾರಿ
ಎಲ್ಲೆ ಮೀರದೆ ನಡೆದ ದಾರಿ
ಪರಿಧಿಯೊಳಗೆ ಚಂದಿರ

ನೋವು ನಲಿವುಗಳೆಲ್ಲ ಸಹಜ
ಬೆಳಕು ಕತ್ತಲು ಖಚಿತ ಮನುಜ
ಚಿಂತೆ ಮಾಡುತ ಸಂತೆ ಕಂತೆಯ
ನಿಶ್ಚಿಂತೆ ಸಿಗುವುದೆ ಚಂದಿರ

ವಿವಿಧ ಒತ್ತಡ ಬಿತ್ತಿ ದಿನವು
ಹೊರೆಗೆ ಬತ್ತಿದಂತೆ ಜಗವು
ಸರಳ ಜೀವನ ಮಂತ್ರ ಜಪಿಸಿ
ಮುಕ್ತಿ ಕೊಡುವನು ಚಂದಿರ

ಕತ್ತಲಲ್ಲಿ ಕದವ ಕದಲಿಸಿ
ಕಾದ ಕಾವಲಿಗೆ ಕಾವ ಕರಗಿಸಿ
ಬೆಳಗಾದ ನಂತರ ಸಂತನೆಂದರೆ
ಸುಮ್ಮನಿರುವನೆ ಚಂದಿರ

ರಾಗ, ದ್ವೇಷಗಳಲವು ಒಳಗೆ
ಕುಣಿಯುತಿರಲು ಕೊನೆಯವರೆಗೆ
ಸಾಧು ಸಂತನ ಮುಖವಾಡವಿಟ್ಟರೆ
ಕ್ಷಮೆಯು ಕೊಡುವನೆ ಚಂದಿರ

ಎದೆಯ ಮೇಲೆ ಒದೆವ ಕಂದನ
ಮನೆಯಲಿರಳು ಬಾಳು ನಂದನ
ಮುಗ್ಧ ಮನಸಿಗೆ ಮಾರು ಹೋದವ
ನಿಂತು ನಗಿಸುವ ಚಂದಿರ

ಇರುವುದೆಲ್ಲವ ಮರೆತು ಹಿಂದೆ
ನಡೆದು ಹೋಗಲು ಹಾದಿ ಮುಂದೆ
ಹೊಸತು ಜಗವ ದಿನವು ತೆರೆವ
ಸಾಕ್ಷಿ ಅವನೇ ಚಂದಿರ

ಸಪ್ತ ಸ್ವರಗಳ ರಾಗಲಹರಿ
ಸುಪ್ತ ಭಾವದ ನವಿಲ ಗರಿ
ಶಾಂತಿ ಚಿತ್ತದಿ ಹರಿವ ನದಿಗೆ
ತೃಪ್ತನಾಗುವ ಚಂದಿರ

ಆಸೆ ಕುದುರೆಯನೇರಿ ಬರುವ
ನಿರಾಸೆಯಾದರೆ ಖಿನ್ನನಾಗುವ
ಅವತರಿಪ ಆಸೆಗೆ ಕಡಿವಾಣವಿರಿಸಿ
ಸರಸ ಕಲಿಸುವ ಚಂದಿರ

ಉರಿವ ಬೆಂಕಿಗೆ ತೈಲವೆರೆಯುತ
ಮದ, ಮತ್ಸರಗಳಿಂದ ನರಳುತ
ಇರುವ ಕ್ಷಣಗಳ ಮರೆತ ಜನರ
ಕಣ್ಣು ತೆರೆಸುವ ಚಂದಿರ

ಮೋಡ ಕವಿದರು ನುಸುಳುವವನು
ಅಮ್ಮನಿಗೆ ಇವ ಆಪ್ತ ಗೆಳೆಯನು
ಅಳುವ ಕಂದನ ನಗಿಸುವವನು
ಅಡಗಿರುವನೆಲ್ಲಿ ಚಂದಿರ

ದಿನವು ಹಲವು ವೇಶ ಧರಿಸಿ
ದೇಶ ದೇಶಗಳೆಲ್ಲ ಪಯಣಿಸಿ
ದಣಿದ ದೇಹವ ತಣ್ಣಗಿರಿಸಿ
ಹಾರಿ ಹೋಗುವ ಚಂದಿರ

ಒಳಿತು ಕೆಡುಕು ನೋಡುತಿರುವ
ಬಿಸಿಲು ಮಳೆಗೆ ತಣಿಯದಿರುವ
ಆಗಸಕೆ ಅಂದ ನೀಡಿದ
ಚತುರ ಇವನೆ ಚಂದಿರ

ಕೋಪವೆಂಬ ಧೂರ್ತನನ್ನು
ಕಂಡ ಕ್ಷಣವೆ ಕರಗಿಸುವನು
ಸಂಯಮದಿ ಸಹಿಸುತ ಎಲ್ಲವ
ಹಿತವ ನುಡಿಯುವ ಚಂದಿರ

ಸಪ್ತ ಸಾಗರದಾಚೆಗೆಲ್ಲೋ
ನಿತ್ಯ ಹಸಿರಿನ ದಟ್ಟ ಕಾಡಲಿ
ಕಳೆದು ಹೋಗುವ ಹಂಬಲಕ್ಕೆ
ಬೆಂಬಲ ನೀಡುವ ಚಂದಿರ

ತಾನು ತನ್ನದೆ ಎಲ್ಲ ಎಂದರು
ತಾನೆ ಎಲ್ಲವ ಬಲ್ಲೆನೆಂದರು
ನಿಜವನರಿಯುವ ಸುಖದ ಸಿಹಿಯ
ನೀಡಿ ನಲಿವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

Aug 2, 2008

ದಿವ್ಯ ಮಿಲನ

ಕದವ ತೆರೆದು ಹೊಳೆವ ಮೊಗದಿ
ಅರಳಿ ನಿಂತಿದೆ ಸಂಪಿಗೆ
ಬರುವುದೆಂತೋ ದುಂಬಿ ಹಾರಿ
ದಿವ್ಯ ಮಿಲನದಂಚಿಗೆ

ವಿರಹ ವೇದನೆ ಉಕ್ಕಿ ಬರಲು
ಸುಗಂಧ ಪರಿಮಳ ಸೆಳೆದು ತರಲಿ
ಒಳಗೆ ಮಿಂದು ತೇಲಿ ಹಾರಲಿ
ಎದೆಯಾಳದ ಕಡಲ ತೀರದಲ್ಲಿ

ಗೆಳೆಯ ಬರುವನು ಈಗಲೇ
ತೇಲಿ ಬಿಡುವೆನಾಕ್ಷಣದಲೇ
ದಾರಿ ತಪ್ಪಿ ತಡವಾಗದಿರಲಿ
ಕಾದಿರುವೆ ನಲ್ಲ ತುದಿಗಾಲಲಿ

ಸುರಿವ ಮಳೆಯೇ ಸುಪ್ರಭಾತ
ಬೆಳಗಿ ತಾರೆಗಳಿಂದ ಸ್ವಾಗತ
ಮರೆತಾಗ ಕರೆಯುವ ಚಂದಿರ
ನೀನೋಡಿ ಬಾರೋ ಹತ್ತಿರ

ಕೆರಳಿರುವ ಕುತೂಹಲ ಕರಗದಿರಲಿ
ಅರಳಿರುವ ನಗುವು ಬಾಡದಿರಲಿ
ಕಳೆದ ಕ್ಷಣಗಳು ಕಾಡದಿರಲಿ
ಈ ನಿರೀಕ್ಷೆ ಹುಸಿಯಾಗದಿರಲಿ

Jul 31, 2008

ಏಕೆ ಹೀಗೆ?*

ಈ ನಗರಕ್ಕೇಕೆ -
ಬೇಸರ
ನಿರಾಸೆ
ನಿರುತ್ಸಾಹ.

ಈ ನಗರಕ್ಕೇಕೆ -
ಒತ್ತಡ
ಹೊರೆ
ವೇಗ.

ಈ ನಗರಕ್ಕೇಕೆ -
ಶಬ್ದ ಮಾಲಿನ್ಯ
ವಾಯು ಮಾಲಿನ್ಯ
ತ್ಯಾಜ್ಯ ಮಾಲಿನ್ಯ.

ಈ ನಗರಕ್ಕೇಕೆ -
ನೀರಿನ ಅಭಾವ
ಬೆಳಕಿನ ಅಭಾವ
ಹಸಿರಿನ ಅಭಾವ.

ಈ ನಗರಕ್ಕೇಕೆ -
ತರಕಾರಿ ತುಟ್ಟಿ
ಬಾಡಿಗೆ ತುಟ್ಟಿ
ದಿನಸಿ ತುಟ್ಟಿ.

ಈ ನಗರಕ್ಕೇಕೆ -
ಕೋಮು ಗಲಭೆ
ಉಗ್ರರ ಧಾಳಿ
ಹಿಂಸೆ, ದ್ವೇಷ.

ಈ ನಗರಕ್ಕೇಕೆ -
ಅನಾರೋಗ್ಯ
ಅಯಾಸ
ಅಶಾಂತಿ

ಈ ನಗರಕ್ಕೇಕೆ?
ಏಕೆ ?
ಏಕೆ ?
ಏಕೆ ?

Jul 29, 2008

ಮತ್ತೆ ಮೂಡಿ ಬರುವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ

ಉರಿವ ಬಿಸಿಲಿಗೆ ಸುಡುವ ಒಡಲ
ಬೆವರು ಇಂಗಿಸಿ ನಗಿಸೊ ಚೋರ
ನೊಂದ ಮನದಿ ಬೆಂದ ಬಾಳನು
ಹಸನು ಮಾಡುವ ಚಂದಿರ

ಗುಡುಗು ಮಿಂಚು ಸಿಡಿಲ ಸಾಲು
ಧರೆಗೆ ಧಾರೆ ಮೋಡ ಕರಗಲು
ಕವಿದ ಕತ್ತಲು ಬೆತ್ತಲಾದರೆ
ಹಣತೆ ಬೆಳಗುವ ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ

ಅಂತರಾಳದಿ ಅಡಗಿಸಿರುವ
ಸತತ ಸೋಲಿನ ಕಹಿಯ ಭಾವ
ಬೆಳದಿಂಗಳ ವಿಸ್ಮಯದ ಮೋಡಿಗೆ
ತಂಗಾಳಿಯಂತೆ ನಗುವ ಚಂದಿರ

ದಣಿದು ದಾಹಕೆ ಬಿರುಕು ಬಿಟ್ಟಿದೆ
ಮೊಗ್ಗು ಅರಳದೆ ಜಾರಿ ಬಿದ್ದಿದೆ
ಹಸಿರು ಹೊದಿಸಿ ಹೊಸತು ಚಿಗುರಿಗೆ
ಉಸಿರು ನೀಡುವ ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ

Jul 28, 2008

ಹೊತ್ತ ಭಾರವ ನೆನೆದು...*

ಅಬ್ಬಾ! ಇಲ್ಲಿಯವರೆಗೂ ಬಂದಾಯಿತು
ಎಷ್ಟೊಂದು ಭಾರ ಹೊತ್ತು
ದ್ವೇಷ, ಅಸೂಹೆ, ಅತೃಪ್ತಿ,ಅಸಹಾಯಕತೆ ,
ಅಸಮಧಾನ, ಕೋಪ, ಅಬ್ಬಬ್ಬಾ ...

ಒಂದೇ, ಎರಡೇ ಲೆಕ್ಕವಿಲ್ಲದಷ್ಟು
ಎಲ್ಲವೂ ಅನಗತ್ಯ, ಅನಾರೋಗ್ಯ, ಬೇಸರ
ನೆನೆದರೆ ಮತ್ತಷ್ಟು ಖಿನ್ನತೆ
ಮತ್ತೆ ಕೃತಕ ಅಮಲಿಗೆ ಶರಣು

ಮುಖಾಮುಖಿಗೆ ಧೈರ್ಯವೆಲ್ಲಿದೆ ?
ಎಲ್ಲವೂ ಅಸ್ಪಷ್ಟ
ಇನ್ನುಳಿದ ಹಾದಿ ಎಲ್ಲಿಯವರೆಗೆ
ಖಚಿತ ನಿರ್ಧಾರ ಕಷ್ಟ.

ಬೆರಳು ತೋರುವುದು ಸುಲಭ
ದೂರಲು ನೂರಾರು ಕಾರಣಗಳುಂಟು
ಹೊರಗೆ ಹುಡುಕಿದ್ದೇ ಸತತ;
ಒಳನೋಟ ಅಪರಿಚಿತ.

ಮೇಲ್ಪದರದಲ್ಲೇ ಪಯಣ
ಹಾದಿಯ ಎರಡು ಬದಿ ಬಣ್ಣ, ಬಣ್ಣ
ರುಚಿ ನೋಡುವ ಅಭ್ಯಾಸ
ಯಾಕೋ ತಿಳಿಯದು ಈ ಧಾವಂತ ?

ಅಂತರಂಗದ ಅರಿವು
ಬಹಿರಂಗ ಮಾರ್ಗದ ನೆರವು
ಸೂಕ್ಷ್ಮಗಳ ಸೆಳವಿನ ಅನುಭೂತಿ
ಪಡೆಯದೇ ದೊರಕುವುದೇ ಮುಕ್ತಿ ?

Jul 26, 2008

ನಿತ್ಯ ಪಯಣವ ಕಟ್ಟಿ ಕಾಣೆಯಾದವಳು*

ಕಣ್ಸನ್ನೆಯಲೇ ಕುಶಲವ ಕೇಳಿ
ತುಟಿಯಂಚಿನಲಿ ಪ್ರಶ್ನೆಗಳ ಸೆರೆಹಿಡಿದು ,
ಬಿರುಗಾಳಿ ಎಬ್ಬಿಸಿ ,
ಮಿಂಚಂತೆ ಮಾಯವಾದಳು ಎಲ್ಲಿಗೆ ?

ಪಾರದರ್ಷಕ ಪ್ರತಿಬಿಂಬ ,
ನಿಶ್ಚಲ ನೀರಿನಂತಿದ್ದ ಮನಕೆ ,
ಹಿತವಾದ ಅನುಭವ ,
ಕಂಪಿಸುವ ಕಂಪನಗಳ ರೋಮಾಂಚನ !

ಅಸ್ಪಷ್ಟದ ಅಲೆಗಳ ಅಬ್ಬರಕೆ
ಲೀನವಾಗಿ, ಮರೆಯಾಗಿ ಜೊತೆಗೆ ,
ಹಿಡಿದಿಟ್ಟ ಪ್ರಶ್ನೆಗಳ ಎಸೆಯಲಿಲ್ಲವೇಕೆ ?

ಅಂತರಂಗದಾಳದಲಿ, ಅವಳ
ಮನದ ತಳಮಳಗಳಲಿ ತುಂಟ ಕಚಗುಳಿ
ಇಟ್ಟವನು ನಾನೇನು ?

ಕ್ಷಣಕೆ ಸೆರೆಸಿಕ್ಕ ಅದ್ಭುತ ಕಲಾಕೃತಿ ,
ಸ್ಥಿರವಾಗಿ ಮನಸ್ಪುಟದಲ್ಲಿ ನೆಲೆಸಿ
ಮರೆಯುವ ಯತ್ನ ಮತ್ತೆ ಮತ್ತೆ ಸೋತಿದೆಯೆ ?
ಊಹೆಗಳು ದುಂಬಿಗಳಾಗಿ ಗಿರಕಿ ಹೊಡಿಯುತ್ತಿವೆಯೆ ?

ಕಾಣದ ನದಿಯಲ್ಲಿ ಮುಳುಗಿರುವೆನೇಕೆ ?
ಬೇರೆಡೆಗೆ ಮನವ ಸೆಳೆಯಲಾರೆನೇಕೆ ?
ಹೊರ ಜಗವು ಬತ್ತಿ ಬರಿದಾಯಿತೇಕೆ ?
ಇವಳ ಜೊತೆಗಿರುವ ಬಯಕೆ ನನಗೇಕೆ ?
ಹೇಗಿರುವಳೋ, ಎಲ್ಲಿರುವಳೋ,
ಮಾತಿಲ್ಲ, ಸುಳಿವಿಲ್ಲ, ಹೆಸರು ಗೊತ್ತಿಲ್ಲ ?
ನನ್ನ ನಿತ್ಯ ಪಯಣವ ಕಟ್ಟಿ ಕಾಣೆಯಾದವಳು;
ಈ ಒಗಟು ಬಿಡಿಸಳು ಅವಳೆಂದು ಬರುವಳು ?

Jul 23, 2008

ಅನಂತ ಮೌನ

ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ.

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ ರುದ್ರನರ್ತನ.

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ.

ಈ ಹಾದಿಯಲ್ಲೆಲ್ಲಾ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು.

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು.

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ
ಮತ್ತದೇ ಮೌನ.

ಇಲ್ಲಿ ಕವಿಗೂ ಉಂಟು ಸ್ಧಾನ

ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ.

ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ?
ತಡೆಗೋಡೆ ವಿರಳ.

ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕ್ಕೇನು ಲಾಭ?

ಆದರೂ ಅದಕ್ಕೆ
ನಿಶ್ಚಿಂತೆ
ಇಲ್ಲ ಕಿಂಚಿತ್ತು
ಹಸಿರಿನ ಕೊರತೆ.

ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಕಲ್ಲುಗುಂಡುಗಳಡಿ
ಬೀಸುವ ತಂಗಾಳಿ.

ಇಲ್ಲಿ ಜಾರುವ ಕವಿಗೂ
ಉಂಟು ಒಂದು ಸ್ಧಾನ.

Jul 11, 2008

ಟಗರು

ಊರಬ್ಬದ ಸಲುವಾಗಿ
ಬೆಳೆಸಿದ್ದ ಸಿದ್ದ
ಕೊಬ್ಬಿದ ಐನಾತಿ
ಟಗರೊಂದ

ಬೆಳಗಿಂದ ಸಂಜೆ
ಅದರದೇ ಖದರು
ಸ್ನಾನ, ಮಸಾಜು ,
ಹಸಿ ಹಸಿ ಮೇವು

ಸಿದ್ದನೆಂಡತಿ ಸುಬ್ಬಿ
ಇದರ ಕಂಡಾಗವಳ
ಕಣ್ಣು, ಮೂಗು, ಮಖವೆಲ್ಲ
ಕೆಂಪು ಕೆಂಪು

ಇವಯ್ಯಂಗೆ ಹೊಟ್ಟೆಗಿಟ್ಟಿಲ್ಲ
ಜುಟ್ಟಿಗೆ ಮಲ್ಲಿಗಿ ಹೂ
ಹೆಂಡ್ತಿ ಯ್ಯಾಕ
ಟಗರನ್ನೆ ಆಗಬೇಕಿತ್ತು

ಉರಿದು ಬೀಳುವಳು
ಲಬ ಲಬ ಲಬ ಲಬ
ಕಿವಿಮುಚ್ಚಿ ಕುಂತ ಸಿದ್ದ
ಬೀಡಿ ಹಚ್ಚುವಾಸೆ ತೊರೆದು

ಟಗರಿನ ಇಚಾರ
ಊರ ಮಂದೀಗೆ ಕರೆದೇಳ್ತಾನ
ನನ್ನ ಇಸ್ಯ ಇವನ
ಬಾಯಿಗ್ಬರಂಗೇಯಿಲ್ಲ

ಹಬ್ಬ ಹತ್ತಿರವಾದಂತೆ
ಸಿದ್ದ ಸಪ್ಪಗಿದ್ದ
ಅಂದು ಟಗರೆಳೆದೊಯ್ದಾಗ
ಅಂವ ಬಿಕ್ಕಿ ಬಿಕ್ಕಿ ಅತ್ತಿದ್ದ

ಸುಬ್ಬಿ ಕಣ್ಣಂಚು ಒದ್ದೆ ಒದ್ದೆ
ಕೈಹಿಡಿದು ಒಳಗೊಯ್ದು
ಮಮತೆ ಮಾಗಿದ ಕ್ಷಣ
ಎದೆಗೊತ್ತಿ ಮಲಗಿ ಸಮಾಧಾನ

Jul 9, 2008

ಆಸ್ತಿ

ಆಳದಲಿ ಅಡಗಿಸಿಟ್ಟ
ಅಮೂಲ್ಯ ಆಸ್ತಿ
ಸುತ್ತಲೂ ಸುತ್ತಿ ಸುತ್ತಿ
ಬ್ಯಾಂಡ್ಯೇಜು ಸುತ್ತುವಂತೆ
ಒಂದರ ಮೇಲೊಂದು ಪೇರಿಸಿ
ಎಷ್ಟೋ ಲೆಕ್ಕವಿಲ್ಲದಷ್ಟು ಸಲ
ಭಾರೀ ಮಜಬೂತು
ಆಗ ಒಂದಷ್ಟು ತೃಪ್ತಿ.

ಬಿಡಿಸಲು ಅಸಾಧ್ಯ
ನೂರೆಂಟು ಬ್ರಹ್ಮಗಂಟು
ಆದಿ, ಅಂತ್ಯದ
ಸುಳಿವಿಲ್ಲ
ಕೈ ಕಾಲು ನೆಟ್ಟಗಿದ್ದರು
ಪ್ರಯತ್ನ ಫಲಕಾರಿಯಾಗುವ
ಭರವಸೆಯಿಲ್ಲ
ಪೆಟ್ಟು ಹೆಚ್ಚಾದಂತೆ
ನೆನಪುಳಿಸಿ ,
ಉಮ್ಮಸ್ಸು ಕರಗುವುದು ನಿಜ.

ಎಲ್ಲರ ಕಣ್ತಪ್ಪಿಸಿ
ತೀವ್ರ ನಿಗಾವಹಿಸಿ
ನಿಶಬ್ಧ ವಾತಾವರಣದೆಡೆಗೆ
ಸುಳಿವು ಸಿಗದ
ನಿಗೂಢ ಸ್ಥಳದಲ್ಲಿ
ಸುಲಭ ಕಾರ್ಯದಲ್ಲಿ
ಕೃತಕ ವಿಶ್ರಾಂತಿ
ನೆನಪುಗಳು ಮಾಗಿದಷ್ಟೂ
ಭರಿಸಲಾಗದೆ ಬೆನ್ನು ಹತ್ತುವ ರುಚಿ.

ಕದಲಿಸುವ ಮುನ್ನ
ಕರುಣೆಯಿರಲಿ
ಉರಿವ ಉಲ್ಕೆಗಳು
ಬೀಳುವವು ಮೈ ಮೇಲೆ
ಭಯ ಸಹಜ
ಭಾರವಿಳಿಸುವ ಬಯಕೆ
ಸ್ವಾಭಾವಿಕ
ನೀತಿ, ನಿಯಮ ಪಾಲನೆ
ಇಲ್ಲಿ ಕಡ್ಡಾಯವೇನಲ್ಲ.

Jul 7, 2008

ಸೆರೆ ಸಿಕ್ಕ ಹಕ್ಕಿ

ಹಕ್ಕಿಯೊಡಳೊಳಗೆ ಅಡಗಿ
ಪಿಸುಗುಡುವ ಹತ್ತಾರು ಚುಕ್ಕಿ
ಗರ್ಭದೊಳಗಿನ ಬ್ರಹ್ಮಾಂಡ ಹೊಕ್ಕಂತೆ
ಬಿಗುವಾದ ಮುಖ ಸಡಿಲಿಸುವ ಹಂಬಲ

ಕೃತಕ ನಗುವಿಂದ ಕರೆವ
ಲಲನೆಯರ ಪ್ರತ್ಯಕ್ಷ ,
ಕಿರುನಗು, ಪಿಸು ಮಾತು, ಇಲ್ಲಿ
ಕಿರಿಕಿರಿಗಿಲ್ಲ ಅವಕಾಶ

ವಿಶೇಷ ಸೂಚನೆಗಳ ಜೊತೆ
ಸೂಕ್ತ ಸವಲತ್ತು ಲಭ್ಯ
ಸೆರೆಸಿಕ್ಕ ಹಕ್ಕಿಗಳ ಭಯಮಿಶ್ರಿತ ಮುಖಭಾವ
ನಿಟ್ಟುಸಿರಿಡುವ ತವಕ ನಿಮಿಷದ ಲೆಕ್ಕ

ಚಲನೆ ಶುರುವಿಟ್ಟ ಕ್ಷಣ
ರಭಸದೆದೆಬಡಿತ,
ಆಗಸದೆಡೆಗೆ ಒಮ್ಮೆಗೆ ಹಾರಿ ಮೋಡಗಳಲಿ
ತೂರುವ ತವಕ.

ಅಲ್ಲಲ್ಲಿ ಹಸಿರ ತೇಪೆ, ಕೆರೆಗಳ ತಿಲಕ ,
ಬೆಟ್ಟ, ಗುಡ್ಡದ ಮೊಡವೆ, ರಸ್ತೆ ಓಡಾಡುವ ಹಾವು
ಮನೆಗಳು ಬೆಂಕಿಪೊಟ್ಟಣ ಜೋಡಿಸಿಟ್ಟಂತೆ
ಬಿಳಿ, ಹಳದಿ, ಕೆಂಪು ಕಂಡು ಮರೆಯಾದವು

ಮೋಡಗಳ ನುಸುಳಿ ಹೊಕ್ಕಂತೆ
ಎತ್ತಿನಗಾಡಿ ಸವಾರಿ ನೆನಪು
ದಾಟಿ ಹಾರಲು ಹೊರಗೆ
ಆಗಸದಲ್ಲಿ ಅಲೆವ ನಾರದನ ನೆನಪು.

ಹಗಲು ಕರಗಿದಂತೆಲ್ಲಾ ಮಿಂಚುವ ಹಣತೆಗಳ ಸಾಲು
ಅಲ್ಲಲ್ಲಿ ಬೆಳಗುವ ತಾರೆಗಳ ಹಿಂಡು, ಹಿಂಡು
ಉಯ್ಯಾಲೆ ತೂಗಿ ಆರತಿಯ ಬೆಳಗಿ
ಅತ್ತಿತ್ತ ಕಣ್ಣಾಡಿಸಿ ದಾರಿ ಹುಡುಕುವ ದೀಪ

ಜಾರಿ ಬಿದ್ದಂತೆ, ತಡೆದು ನಿಂತಂತೆ
ಧರೆಗೆ ಮುತ್ತಿಡುವ ಆತುರ
ಭೂಕಂಪವಾದಂತೆ ಕ್ಷಣ ಉಸಿರು ನಿಂತು
ನಿಟ್ಟುಸಿರಿಡುವ ಸಮಯ, ಅಂತೂ ಗೆದ್ದ ಭಾವ.

Jul 5, 2008

ಸಾಲ

ಸಾಲ ಕೊಡುವವನಿವ
ಬೇಕಾದವರೆಲ್ಲ
ಸಾಲಲ್ಲಿ ನಿಲ್ಲಿ, ನಿಯಮ
ಪಾಲನೆ ಅಗತ್ಯ

ಸರದಿ ಬರುವವರೆಗೆ
ಕಾಯಬೇಕು
ಕಾಯೋ, ಹಣ್ಣೋ
ನಂತರ ನಿರ್ಧಾರ

ಅದೃಷ್ಟದೊಂದಿಗೆ ,
ಸಾಮರ್ಥ್ಯ ಪರೀಕ್ಷೆ
ಅನಿವಾರ್ಯತೆಯ ಪಾತ್ರ
ಬಹಳ ಪ್ರಮುಖ

ಕೊಡುವವನಿಗೆ ಕೊಟ್ಟವನ್ಯಾರು
ಇರಬಹುದೇ ಇವನಿಗೂ
ನೀತಿ,ನಿಯಮ ,
ಹಲವು ಶರತ್ತು

ಕೊಡುವವನ್ಯಾರೋ ,
ಪಡೆದವನ್ಯಾರೋ ,
ಕೊಡುವ, ಪಡೆಯುವ
ಲೆಕ್ಕಕೆ ಬೇಕೆ ವಿವರ

ಪೂರ್ವ ನಿಯೋಜಿತವೋ ,
ಪರಿಶ್ರಮಕ್ಕೆ ತಕ್ಕ
ಪ್ರತಿಫಲವೋ
ಸಿಗದು ಯಾವ ಉತ್ತರ

Jun 27, 2008

ಹಾದಿಯಿರದವನ ಹಾದಿ

ಹಾದಿ ಇರದವನಿಗೆ
ನಡೆದದ್ದೇ ಹಾದಿ
ನಿರೀಕ್ಷೆ ಇರದವನಿಗೆ ಇದ್ದೇ ಇದೆ
ಹಾದಿಯ ಎರಡೂ ಬದಿ

ನಡೆದ ಹಾದಿಯಲಿ ಉಳಿದಿಲ್ಲ
ಯಾವ ಹೆಜ್ಜೆ ಗುರುತು
ಅಲ್ಲಿ ಹುಲಿ, ಸಿಂಹ, ನರಿ ,
ತೋಳಗಳ ಸಾಥ್.

ಹುಡುಕಾಟವೇನೋ ,
ಏಕೋ, ಹೇಗೋ,ಎಲ್ಲೋ ?

ಇರದುದೇನೆಂಬುದರ ಕಲ್ಪನೆ ,
ಗಾಳಿ ಗಂಧವಿಲ್ಲ
ಇರುವುದೆಲ್ಲವ ತೊರೆದು ನಿಂತರೆ
ಕ್ಯಾರೆ ಎಂಬುವವರಿಲ್ಲ

ಲಗೇಜು ಲೈಟಾಗಿರಲು
ಪಯಣ ಸುಗಮವೆಂಬುದು ನಿಜ
ಹಾದೀಲಿ ಸಿಕ್ಕವರ
ಬೇಕು ಬೇಡಗಳು ಭಾರ, ಸಹಜ.

ಬಯಕೆ ಹೆಚ್ಚಾದಾಗ
ಮೂಡಿದ ಮಾತುಗಳೀಗ
ನಿಜಕ್ಕೂ ಮುಕ್ತಿ ಮಾರ್ಗ.

ಉರಿವ ಉಲ್ಕೆಯ ಹಾಗೆ

ಕೈ ಹಿಡಿದ ಕಾಯಕ
ಆಯ್ಕೆಯಲ್ಲ
ಅನಿವಾರ್ಯತೆ ಹಾಗೂ
ಬೀಸಿದ ಬಲೆ

ದಟ್ಟಡವಿಯಲಿ ಕಳೆದು
ಹೋಗುವುದು ಸುಲಭ
ಎಲ್ಲಿರುವ ಸುಳಿವಿರದ
ಸನ್ನಿವೇಶ.

ಬೇಡುವುದರ ಬೆನ್ನತ್ತಿ
ಬೆತ್ತಲೆ ಬೆವರು
ಕತ್ತಲಲಿ ತಡಕಾಡಿ
ಕಣ್ಣಲ್ಲಿ ಧೂಳು

ಅವಕಾಶಗಳ ಕೊರತೆ
ದೂರುವುದು ಸರಿಯೆ
ಅದೃಷ್ಟ ಪರೀಕ್ಷೆ
ಕೈಕೊಟ್ಟರೂ ಸರಿಯೆ

ಉರಿವ ಉಲ್ಕೆಗಳಂತೆ
ಉರಿಯುವ ಹಂಬಲ.

Jun 25, 2008

ಮುಸ್ಸಂಜೆಯ ಮುಖಾಮುಖಿ

ನೆಪಕೊಂದು ಪುಸ್ತಕ ಕೈಯೊಳಗೆ
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ ಯತ್ನ.

ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳ ಹುಡುಕುವ
ತವಕ.

ಬೇಸಿಗೆಯ ಮಧ್ಯಾಹ್ನ
ಆಗಸಕೆ ನೀರವ ಮೌನ
ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ
ಕಾಣುವ ಹಂಬಲ.

ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು.

ಮಲಗಿದ್ದ ದಿನಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳನ್ನೆಸೆದಾಗ
ಕಸದ ಬುಟ್ಟಿಗೆ ಸಮಾಧಾನ.

ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು.

ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿಯ ಸಮಯ.
ಹಗುರಾದ ಮನಸ್ಸಿಗೆ
ಯಾಕೋ ಕೃತಕ ಕೋಪ.

Jun 24, 2008

ತಡವಾಗಿ ಬಂದ ಅರಿವು*

ಅರೆ ಬೆಂದ ಅನ್ನ
ಅರೆ ತುಂಬಿದ ಕೊಡದಲ್ಲಿ
ಕುತ ಕುತ ಕುತ ಕುತ
ಕುದಿಯುತ್ತಿದೆ
ಸುರಿದ ನೀರು
ಆವಿಯಾದಷ್ಟೂ
ಬೆಂದಿರುವುದೆಂಬ ತರ್ಕ.

ಭುಸುಗುಡುವ ರಭಸ
ಹೆಚ್ಚಾದಂತೆಲ್ಲ
ಅದೇ ವೇಗಕೆ
ಸಂಯಮ ಬತ್ತಿ ಹೋಗುತ್ತಿದೆ
ಅರೆ ಬೆಂದ ಅನ್ನ ,
ಇಲ್ಲವೆ ಅಕ್ಕಿ
ಇಲ್ಲಿ ಸುಖವಿಲ್ಲ.

ಉರಿಯ ಬಿಸಿಯೇರಿ
ತನ್ನೊಡಲ ಸುಡುತ್ತಿದ್ದರೆ
ಸಹಿಸಲಾಗದ ಸ್ಥಿತಿ;
ಸುಮ್ಮನಿರಲಾಗದು
ಸುರಿವವರು ಯಾರಿಲ್ಲಿ ನೀರು?

ಧಿಗ್ಗನೆದ್ದು ಧಗ ಧಗನುರಿವ ಬೆಂಕಿ
ಎಲ್ಲವೂ ಕರಗಿ ಕರಕಲಾಗುವ
ಸಮಯ ಹತ್ತಿರವಾದಂತೆ
ಜೀವ ಹಾರಿ ಹೋಗುವ ಕ್ಷಣ
ಪಾಪ ಪ್ರಜ್ಞೆ ಕಾಡುತ್ತಿದೆ
ಪ್ರಾಣ ಭಯಕೊ ,
ಇಲ್ಲ ಮನುಷ್ಯತ್ವದ ನೆನಪಿಗೋ
ಇದೀಗ ಬಹಳ ತಡವಾಗಿದೆ.

ನವೀನ ನರಕ*

ತೇಪೆ ಹಾಕಿದ ರಸ್ತೆಗೆ
ಅಲ್ಲಲ್ಲಿ ಕೆಂಪು, ಹಳದಿ ,
ಹಸಿರು ಲೈಟೊತ್ತ ಕಮಾನು
ವಿಚಿತ್ರ ಕೇಕೆಯೊಂದಿಗೆ
ಧೂಳೆಬ್ಬಿಸಿ ,
ಹೊಗೆ ಉಗುಳಿ ,
ಲಬೋ ಲಬೋ ಎಂದು
ಬಾಯಿ ಬಡಿದುಕೊಂಡು
ಇರುವೆಗಳಂತೆ ಸಾಲುಗಟ್ಟಿ
ಉಸಿರುಗಟ್ಟುವ ವಾಹನಗಳ ದಂಡು.
ಲಲನೆಯೊಬ್ಬಳು ನಿಂತು
ನಾಟಕದ ಪಾತ್ರಧಾರಿಯಂತೆ ಸಿಂಗರಿಸಿ
ಗ್ರಾಹಕರ ಸೆಳೆಯಳು ಯತ್ನಿಸುವಳು.

ಕುಡಿಯಲು ಕೆಟ್ಟ ನೀರು ,
ಚರಂಡಿ ವಾಸನೆ ,
ಕಸದ ಡಬ್ಬಿಗಳು ,
ಬೆನ್ನು ಮುರಿಯುವ ಆಟೊಗಳು
ಹುಬ್ಬೇರಿಸಿದರೂ ಇಳಿಯದ ಪೆಟ್ರೋಲ್ ಬೆಲೆ
ಆಯಾಸಗೊಂಡು ಮನೆ ಸೇರಿದರೆ
ತಡವಾಗಿ ಬಂದಿದಕ್ಕೆ ಮಂಗಳಾರತಿ
ವಿನಮ್ರವಾಗಿ ಸ್ವೀಕರಿಸಿ ,
ಕೈಗಿತ್ತ ಪಟ್ಟಿಯ ಗಂಭೀರ ಪರೀಕ್ಷೆಯ ನಂತರ
ಯುದ್ಧಕ್ಕೆ ತೆರಳಿದ ವೀರ ಸೈನಿಕನಂತೆ
ಚೌಕಾಸಿ ಮಾಡಿದರು ತೃಪ್ತಿಯಿಲ್ಲ;
ಪ್ರತಿಭೆ ಎಲ್ಲವೂ ವ್ಯರ್ಥ.
ತುಟ್ಟಿ ತರಕಾರಿ, ಹಣ್ಣು, ದಿನಸಿ ಸಾಮಾನು ಜೊತೆಗೆ
ಪೆಚ್ಚುಮೋರೆ ಹೊತ್ತು ತಿರುಗಿ ಮನೆಯತ್ತ.

ಮರುದಿನದ ಮುಖಾಮುಖಿಗೆ
ಮಾನಸಿಕ ತಯಾರಿ
ರಕ್ತ ಹೀರುವ ಶಾಲೆಗಳು
ಸದಾ ಕಿರುಚುವ ಬಾಸ್ ಗಳು
ಕರೆಂಟು, ಪೇಪರ್, ಹಾಲು ,
ಗ್ಯಾಸ್, ಕೇಬಲ್, ಮೊಬೈಲು ,
ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ,
ಎಲ್ ಐ ಸಿ ಪ್ರೀಮಿಯಮ್ ,
ಕ್ರೆಡಿಟ್ ಕಾರ್ಡ್ ಬಿಲ್ಲುಗಳ
ಪಟ್ಟಿ ಬೆಳೆಯುತ್ತಲೇ ಇದೆ
ಹನುಮಂತನ ಬಾಲದಂತೆ
ಕಾರ್ ಲೋನ್, ಪರ್ಸನಲ್ ಲೋನ್ ,
ಹೌಸಿಂಗ್ ಲೋನ್ ಇನ್ಸ್ಟಾಲ್ಮೆಂಟ್...

ಪುಂಡುಪೋಕರ ಪ್ರತಿಭೆ
ಪ್ರೋತ್ಸಾಹಿಸಲು ನಾಯಕರ ದಂಡು
ಒಳಗೆ ಹೋದಷ್ಟೇ ವೇಗವಾಗಿ
ಹೊರಬರುವ ಕಸರತ್ತು
ಇವರೆಲ್ಲರ ಸಾಧನೆಯ ಬಿತ್ತರಿಸಲು ,
ಪ್ರಚಾರಕ್ಕಾಗಿ ಕಾತುರದಿಂದ
ಕಾದಿರುವ ಮಾಧ್ಯಮದ ಮಿತ್ರರು
ಕೊಲೆ, ರೇಪ್, ದರೋಡೆ, ಸುಲಿಗೆ ,
ಮೋಸ, ವಂಚನೆಗಳ ಸುದ್ದಿ ಬಿತ್ತರಿಸಲು
ಪೈಪೋಟಿ, ಯಾರು
ಎಷ್ಟು ವೇಗವಾಗಿ ಬಿತ್ತರಿಸುವರೊ
ಅವರೇ ಇಲ್ಲಿ ಪ್ರಚಂಡರು.

ಬಿಡದೇ ಕೊರೆಯುವ ಡೈಲಿ ಸೀರಿಯಲ್ಲುಗಳು
ಪ್ರತಿಭಾ ಪ್ರದರ್ಶನಗಳಿಂದ
ಗೋಳಿಡುವ ಕಾರ್ಯಕ್ರಮಗಳು
ಅದೇ ಸುದ್ದಿಯನ್ನು ಸಿಂಗರಿಸಿ
ದಿನಪೂರ ಎಳೆದಾಡುವ
ಸುದ್ದಿ ಚಾನೆಲ್ಲುಗಳು.
ಇವೆಲ್ಲ ಸಹಿಸಿಕೊಂಡು ದಿನದೂಡಿ
ಬದುಕುಳಿದವರು ಅದೃಷ್ಟವಂತರು.
ಹೆಸರೇ ಗೊತ್ತಿರದ ಖಾಯಿಲೆಗಳಿಂದ
ನರಳಿ ನೋವುಂಡವರಿಗೆ
ಹಾಸ್ಪಿಟಲ್ಗೆ ಕಾಲಿಡಲು ಭಯ.
ಅಲ್ಲಿಂದ ಎದ್ದು ,
ಗೆದ್ದು ಬಂದರೆ
ಧೀರ್ಘ ನಿಟ್ಟುಸಿರು.

Jun 23, 2008

ಮಾತು ಮೌನ*

ಮೊದಮೊದಲು ಮಾತು ಮೌನ
ಕ್ಷಣ ಕ್ಷಣವು ಕುತೂಹಲದ ಕದನ
ಹಂಬಲಿಸುತಿರುವೆ ಯಾವುದಕ್ಕೆ.
ಮನವ ಮೌನವಾಗಿಸಲಾಗದೆ?

ತಳಮಳಗಳ ತಡವರಿಕೆಯ ಬೇಗೆ
ಏನನೋ ಕಾಣುವ ಕಾತುರ ಕಣ್ಣಿಗೆ
ಕದಡಿದ ಹನಿ ಗೆರೆಯಂಚಿಗೆ ನೂಕಿ
ಮೊಗದಲ್ಲಿ ತನ್ನ ಹಾದಿ ಹುಡುಕಿತ್ತು

ಕಂಡ ಪ್ರತಿಬಿಂಬ ಅದೇ ಹೇಳಿರಲು
ದಿಟವನೇಕೊ ಒಪ್ಪದೀ ಮನಸು
ತುಟಿತೆರೆದು ತಡುಕಿದರು ಸಿಗದ
ಮಾತು, ಮೌನವೇ ಹಿತವೆನಿಸಿತು.

ಸದ್ದಿಲ್ಲದ ನಡೆನುಡಿಯ ಮರೆತಂತೆ
ಬಂದ ಕರೆಗಳೆಲ್ಲವ ಆಲಿಸುವ ಬಯಕೆ
ತನ್ನದಲ್ಲವೆಂಬ ಭಯ ಕಾಡಿದ್ದು ಸಹಜ
ಪರಿಚಯವಿರದ ಎಚ್ಚರಿಕೆಯ ಜೊತೆಗೆ.

ಹೊಸತು ಹಳೆತಾಗುವುದು ಖಚಿತ
ಯೌವನದ ಕಾಲ ಕರಗುವುದು ನಿಶ್ಚಿತ
ಬೆರಗಾಗುವ ವಿಷಯವಿದಲ್ಲ ಅಪರಿಚಿತ
ನಿಟ್ಟುಸಿರಿಡಲೂ ಸಹ ಕಾಯಬೇಕು.

Jun 21, 2008

ಮುತ್ತಿಟ್ಟ ಹನಿ*

ಮುತ್ತಿಟ್ಟ ಹನಿ ಎಲೆಯ ಮೇಲಿನ ಮುತ್ತು
ಮೆತ್ತಗೊತ್ತಿದರು ಭಯವು ಬೀಳುವ ಕುತ್ತು
ಪಾರದರ್ಶಕದೊಡಲು ಹೊಳೆಯುತಿರಲು
ಗಾಳಿ ಬೀಸಿದೆಡೆಗೆ ಎಲೆಯು ತಲೆದೂಗಿತು.

ಮುಂಜಾನೆ ರವಿಕಿರಣ ನುಸುಳಿ ಬರಲಲ್ಲಿ
ಮಿಂಚುಗಳ ತೇರು ಮೈತುಂಬಿ ಮಿಂಚಿತ್ತು
ಹಣತೆಗಳ ಆರತಿ ನಯವಾಗಿ ಬೀಸುತಿರೆ
ಬಿರುಗಾಳಿಯ ಶಾಪಕೆ ಆರದಿರಲಿ ಬೆಳಕು.

ಬೆಳಕಿತ್ತ ಕಿರಣಗಳು ಬಿಸಿಯೇರಿದಂತೆ
ಮೆಲ್ಲಗೆ ಹನಿಗಳು ಕರಗಿ ಕಾಣೆಯಾಗುವವು
ನೆರಳಲ್ಲಿ ಅಡಗಿದ್ದ ಹನಿಗಳುರುಳಿ ಬಿದ್ದವು
ಮತ್ತದೇ ಹನಿಗಳಿಗೆ ಎಲೆಗಳು ಕಾದಿದ್ದವು.

ಧನ್ಯತಾಭಾವ ಮೈತುಂಬಿಕೊಂಡಾಗ
ಅಂತರಾಳಕೆ ಹಬ್ಬದನುಭವದ ಕ್ಷಣವಾಗ
ಮತ್ತೆ ಬರುವನೆಂದೋ ಅತಿಥಿ ಮನೆಗೆ
ಮುತ್ತಿಟ್ಟು ಮೈ ಮೇಲೆ ಮಿಂಚಿ ಬೆಳಗಲು?

Jun 20, 2008

ಹನಿಗಳು – 2*

- 1 –
ಎದುರು ಮನೆ ಹುಡುಗಿಗೆ
ಹೊಡೆದರೆ Sight ?
ಖಂಡಿತ ಸಿಗುವುದೊಂದು
Site!

- 2 –
ಹಗಲಲ್ಲಿ ನಡೆಯುತ್ತೆ
ಬೈಟು
ಸಂಜೆಗೆ ಆಗಲೇ ಬೇಕು
ಟೈಟು.

- 3 –
ಗೆಳತಿಯಾದರೆ
ಗರುಡ ಮಾಲ್
ಗೆಳೆಯನಾದರೆ
ದರ್ಶಿನಿ ಹೋಟೆಲ್

- 4 –
ಕಾಸಿದ್ದರೆ ಫೋರಮ್
ಇರದಿದ್ದರೆ ಬರೀ ರಮ್

- 5 –
ಗೆದ್ದವರಿಗೆ ಗದ್ದುಗೆ
ಬಿದ್ದವರು ಬೀದಿಗೆ.

- 6 –
ಮನೆಯಲ್ಲಿ ಅವಳದೇ
ಕಾರುಬಾರು
ನನಗುಳಿದಿರುವುದು
ಬರೀ ಕಾರು, ಬಾರು.

Jun 17, 2008

ಇಂತಿ

ಇಂತಿ ನಿನ್ನವಳೆನ್ನುವ ಉಸಿರೆ
ಕಹಿಯಾದರು, ಸಿಹಿಯಾದರು
ಇತಿಮಿತಿಗಳೇ ನಿತ್ಯದುಸಿರು
ಹಸಿರಾಗುವ ಹಂಬಲ ಸಹಜವೆ

ಭಾರವಾದುದೇನೋ ಆ ಹೊರೆ
ಸ್ಥಿಮಿತ ಹಿಡಿತದಲ್ಲಿರುವವರೆಗೆ
ಬಿಡಿಸಲಾಗದ ಗಂಟುಗಳೆಷ್ಟೋ
ಅದುಮಿಟ್ಟುಕೊಳ್ಳುವ ಬಯಕೆಗೆ

ದೂರ ಪಯಣವಿದು ನಲ್ಲೆ ನಡೆದೇ
ಸಾಗಬೇಕು ಜೊತೆಗಿದ್ದವರೆಲ್ಲರು
ಇರುವವರೆಗೆ ಮಾತ್ರ ಸೀಮಿತ
ಊಹೆಗೂ ಎಟುಕದ ಹಾದಿಯಲ್ಲಿ

ಕಟುಕರಿಗೇನೂ ಕೊರತೆ ಇರದಿಲ್ಲಿ
ಮುಗ್ಧರಾದವರು ಬೀಳುವರು ನೇರ
ಹೊಂಚುತಿಹ ಹೆಬ್ಬುಲಿಯ ಬಾಯಿಗೆ
ತರತರದ ರುಚಿ ನೋಡುವ ಚಪಲಕೆ

ನೀನು ನನ್ನವಳಾಗುವುದಕೆ ಮುನ್ನ
ಮುಖ್ಯ ನೀನು ನಿನ್ನವಳಾಗುವುದು
ನೀನು ನಿನ್ನವಳಾಗಿ ನನ್ನವಳಾಗು
ಆಗ ಹಸನಾಗುವ ಪಯಣ ನಮ್ಮದು

Jun 16, 2008

ಅಲಾರಮ್ ಬೆಲ್ಲು

ಮೊಬೈಲ್ನಲ್ಲಿ ಅಲಾರಮ್ ಬೆಲ್ಲು ನಿರೀಕ್ಷಿಸಿದಂತೆ
ರಿಯಾಯಿತಿ ತೋರದೆ ಸದ್ದು ಶುರು ಮಾಡಿ
ಪ್ರತಿ ಹತ್ತು ನಿಮಿಷಕ್ಕೊಮ್ಮೆ ಸರದಿಯಂತೆ
ಬಾರಿಸುವುದು ಮುಂದುವರೆಸಿತ್ತು

ಸೋಮವಾರದಿಂದ ಶನಿವಾರದವರೆಗೆ
ಸೂಚಿಸಿದ ಸಮಯಕ್ಕೆ ಸರಿಯಾಗಿ
ದಿನವು ಎಬ್ಬಿಸುವ ಜವಾಬ್ದಾರಿ ಹೊತ್ತು
ಪ್ರತಿವಾದ, ಪ್ರತಿರೋಧವ ತೋರದೆ

ಇಂದೇಕೋ ಪ್ರತಿಕಕ್ಷಿಯಂತೆ ಗುಡುಗುತ್ತಿದೆ
ಪ್ರತಿಕಾರ ಪಡೆದಂತೆ ಬೀಗುತ್ತಿದೆ
ಪ್ರತಿಕೂಲ ಪರಿಣಾಮ ಬೀರಿ
ತನ್ನ ಪ್ರತಾಪ ಪ್ರಕಟಿಸುತ್ತಿದೆ

ನಿನ್ನೆ ಮುಂಜಾನೆ ಶುರುವಾದ ಕದನವಿದು
ಸಂಜೆ ತಾರಕಕ್ಕೇರಿ ಕುದಿಯುತ್ತಲೇ ಇತ್ತು
ಅಲ್ಪವಿರಾಮ ವಿಶ್ರಾಂತಿಗೆ ಮೀಸಲಿಟ್ಟು
ಮತ್ತದೇ ವೇಗಕ್ಕೆ ಚಾಲನೆ ನೀಡುತ್ತಿತ್ತು

ಇಂದು, ಎಂದಿನಂತೆ ಅದೇ ಆರು ಘಂಟೆಗೆ
ತೆರೆದ ಬಾಯಿಗೆ ಮುಚ್ಚುವ ಸೂಚನೆಯಿಲ್ಲ
ತಾಳ್ಮೆ ಪರೀಕ್ಷೆ ಮಾಡುತ್ತಿದೆ ಮಾಡಲಿ
ಇದೊಂದು ಅವಕಾಶವೇ ಸರಿ ನೋಡೋಣ

ಅದರ ಬಾಯಿ ಮುಚ್ಚುವ ಸ್ಥಿತಿಯಲ್ಲಿರಲ್ಲಿಲ್ಲ
ಜೊತೆಗೆ ಸ್ವಾಭಿಮಾನ ಅಡ್ಡಗಾಲಾಕಿತ್ತು
ಏಕೆಂದರೆ ಆ ಬಡ್ಡಿ ಮಗಂದು ಮೊಬೈಲು
ಆವಳ ದಿಂಬಿನಡಿಯಲ್ಲಿ ಬೆಚ್ಚಗೆ ಅಡಗಿತ್ತು

Jun 15, 2008

ಬೆಳಕರಿಯದ ಊರು

ಎಂದೂ ಬೆಳಕರಿಯದ ಊರು
ಕಗ್ಗತ್ತಲದೇ ಕಾರುಬಾರು
ಎಲ್ಲವೂ ಹೊಂದಿಕೊಂಡಂತೆ
ಭಾಸವಾಗುವುದು ಸುಳ್ಳಲ್ಲ

ದೂರಲು ಕಾರಣಗಳಿದ್ದಂತೆ ತೋರದು
ಬೆಳಕುಂಡವರಲ್ಲ, ಕಂಡವರಲ್ಲ
ಮುಗ್ಧರೆಂದು ಕೈ ತೊಳೆದುಕೊಂಡರೆ ಎಡವಿದಂತೆ
ಹೊಂದಾಣಿಕೆ ಬಲವಾಗಿ ಬೇರೂರಿದೆ

ಒಮ್ಮೆ ಇಲ್ಲಿ ಬೆಳಗಾದರೆ
ಬೆರಗಾಗುವುದು ಖಂಡಿತ
ಏರುಪೇರಾದರೂ ಆಗಬಹುದು
ಒಲಿತು, ಕೆಡುಕಿನ ಪ್ರಶ್ನೆ ನಂತರ

ಆರೋಪ, ಪ್ರತ್ಯಾರೋಪಗಳ
ಜಾಗವಿದಲ್ಲ, ಎಲ್ಲ ಜಾಣ ಕುರುಡ, ಕಿವುಡರೆಂಬುದು
ನಿಜವಲ್ಲ, ನಡೆಸುವವರು ಕೆಲವರಾದರೆ
ನಡೆಸಿದಂತೆ ನಡೆವವರೇ ಎಲ್ಲರು

ಬೆಳಕು ಬೇಕೆಂದು ಕೇಳುವವರು ವಿರಳ
ಅದು ಯಾರ ಕಿವಿಗೂ ಬಿದ್ದಂತಿಲ್ಲ
ಅನುಕೂಲ ಸಿಂಧು ನಿಯಮವನ್ನು
ಕಟ್ಟುನಿಟ್ಟಾಗಿ ಪಾಲಿಸುವವರೆಲ್ಲ

ಇಲ್ಲಿ ಬೆಳದಿಂಗಳಿದೆ, ಅದು ಕ್ರಮೇಣ ಕರಗಿದಂತೆ
ಅಮಾವಸ್ಯೆಯ ಆಗಮನವೂ ನಡೆಯುತ್ತದೆ
ತಮ್ಮ ಸರದಿಯಂತೆ ಬಂದು ಹೋಗುತ್ತಿರತ್ತವೆ
ಆದರೆ ಬೆಳಗಾದಂತೆ ಎಂದೂ ಅನ್ನಿಸಲಿಲ್ಲ

Jun 13, 2008

ಬೇಸರದ ಕಾಣಿಕೆ

ಅಂದು ತಡರಾತ್ರಿ
ಬಿದ್ದ ಆ ಸುಂದರ ಕನಸು
ತಡವಾಗಿದ್ದರೂ ತಡೆದಿತ್ತು
ಆರು ಘಂಟೆಗೆ ಅಲಾರಮ್ ಬೆಲ್ಲು

ಒಂದಿರುಳು, ಹಗಲು
ಜೊತೆಗಿರಲು ಅವಳು
ಅವಳಾಳದ ಇರುಳು, ಹಗಲು
ಸಾಧ್ಯವೆ ಅರಿಯಲು

ಆ ಕನಸು, ಆ ನನಸು
ಕನಸೋ, ಇಲ್ಲ ನನಸೋ
ಅವಳು ಬರಲಿಲ್ಲ ಮತ್ತೆ
ಆ ಕನಸಿನಂತೆಯೇ

ಅವರ ನೆನಪು ಮಾತ್ರ
ಕಾಡುತಾ ಕಾಯುತ್ತಿದೆ
ಅವರಿಗಾಗಿ ಮತ್ತೆ ಮತ್ತೆ
ಇದಕ್ಯಾವುದೋ ನಂಬಿಕೆ

ಆ ಮಧುರ ಕ್ಷಣಗಳು
ಅತ್ಯಮೂಲ್ಯ ಜೀವಕೆ
ಅನುಭವಿಸಿದ ಮನವು
ಮತ್ತೆ ಹಂಬಲಿಸಿತ್ತು ಅದಕೆ

ಆ ಇರುಳು, ಹಗಲು
ಆ ಕನಸು, ನನಸು
ದಿನ ಕಾಣುವ ಬಯಕೆಗೆ
ಬೇಸರದ ಕಾಣಿಕೆ

Jun 12, 2008

ಅಂತರಾಳದಲ್ಲೊಂದು

ಅಂತರಾಳದಲ್ಲೊಂದು ಮನೆ
ಆಗಲೇ ಕಟ್ಟಿದೆ
ನಂತರ ನಾನೊಂದು
ನಿವೇಶನ ಹುಡುಕಿದೆ

ತಳಪಾಯ ಬೇಕಲ್ಲವೆ
ಒಂದು ಕಡೆ
ಗಟ್ಟಿಗೆ ತಳವೂರಲು
ಅಲ್ಲಲ್ಲಿ ಅಲೆಯದಿರಲು

ಇಟ್ಟಿಗೆ ಬೇಕೇ ಬೇಕು
ಮನೆ ಕಟ್ಟಲು
ಅದಕೆ ಕಟ್ಟಿಗೆಯ
ಕಿಟಕಿ, ಬಾಗಿಲು

ಹಿಡಿದಿಡಲು ಅಲುಗಾಡದೆ
ಅವರಿಗೆ ಬೇಕಲ್ಲವೆ
ಸಿಮೆಂಟು, ಮರಳು
ಇವರಿಗೆ ಸಾಕಷ್ಟು ನೀರು

ತದನಂತರವಲ್ಲವೆ
ಒಳ, ಹೊರ ವಿನ್ಯಾಸ
ಅಭಿರುಚಿಗೆ ತಕ್ಕ ಬಣ್ಣ
ಒಳನೋಟ, ಹೊರನೋಟ

ಅವಸರ, ಆವೇಶದಿಂದ
ಆಡುವ ಆಟ ಇದಲ್ಲವಲ್ಲ
ಮುದ್ದು ಮಗುವಿಗೆ ಒಂಬತ್ತು
ತಿಂಗಳು ಕಾಯಲೇ ಬೇಕಲ್ಲ

Jun 11, 2008

ಅಲ್ಲಿಗೆ ಹತ್ತಿರ

ಅಲ್ಲಿಗೆ ಹತ್ತಿರ ಇಲ್ಲಿಗೆ ದೂರ
ಬಂದು ಹೋಗುವ ನಡುವಿನ ಅಂತರ
ನಾನಾ ಅವತಾರ
ಇದುವೇ ಇಲ್ಲಿನ ಚಮತ್ಕಾರ

ಬಿದ್ದ ಕ್ಷಣದಿಂದ
ಬಿಡುವ ಕ್ಷಣದವರೆಗೂ
ತಿಳಿಯದಾಗಿದೇ ಈ ಸಾಗರ
ತಿಳಿಸಲಾಗದೇ ಶಂಕರ

ಪಡೆದುದೆಲ್ಲಾ ಪಡೆಯುವವರೆಗೆ
ಪಡೆದ ಮೇಲೆ ಬೇರೆಯೆಡೆಗೆ ,
ಬಿಟ್ಟಮೇಲೆ ಬೇರೆಯವರಿಗೆ
ಪಡೆದು ಪಡೆಯದೆ ಪಡೆದೆನೆಂಬುವೆ
ಪಡೆದುದೇನೋ ನರಹರ

ದಿನವು ಹತ್ತಿರ ದಿನವು ದೂರ
ದೈತ್ಯನಾಗುವ ಬಯಕೆ ಭಾರ
ನಾಳೆ ನಾಳೆಗಳಾಚೆ ಬಾರ
ಇರುವುದಿಂದೇ ನಿಜವೊ ಶೂರ

ದೀನ ದಾನವ ದೇವನಾಗು
ದಣಿದ ದೇಹಕೆ ದಾಸನಾಗು
ಇಹದ ಪರಿಗಳ ಅರಿತು ಅರಸನಾಗು
ಅಗು ನೀನು, ನೀನು ನೀನಾಗು

Jun 10, 2008

ಕ್ರಿಯೆ

ಕಳ್ಳಬಟ್ಟಿಗೆ ಕುಡುಕರ ಸಂಹಾರ
ಬಾಂಬ್ ಬ್ಲಾಸ್ಟ್ ಐವತ್ತು ಡೆತ್
ತಂದೆ ಮಗಳ ಕೊಂದ
ಪ್ರಿಯಕರನ ಜೊತೆ ನಟಿ
ಕತ್ತರಿಸಿದಳು ಅವನ ಮುನ್ನೂರು ಚೂರು
ಎಸೆದು ಸುಟ್ಟರು ಹಚ್ಚಿ ಪೆಟ್ರೋಲು
ಅಲ್ಲೊಬ್ಬ ಕುಡಿದು ಮಂದಿಯ ಮೇಲೆ
ಹತ್ತಿಸಿದ ಕಾರು
ಗುಂಡು ನಿರಾಕರಿಸಿದ ಕಾರಣ
ಮತ್ತೊಬ್ಬ ಗುಂಡ್ಹಾರಿಸಿ ಕೊಂದ ಅವಳ ,
ತಂಗಿಯ ಪ್ರೀತಿಸಿದವನ ಖೂನಿ
ಪ್ರೀತಿ ನಿರಾಕರಿಸಿದ್ದಕ್ಕೆ ಇಲ್ಲೊಬ್ಬ
ಎರಚಿದ ಆಸಿಡ್ ಅವಳ ಮುಖಕ್ಕೆ

ತರಕಾರಿ ಹಚ್ಚುತ್ತಿದ್ದಳು ಆಕೆ
ಹವಣಿಸುತ್ತಿದ್ದನವ ಅಲ್ಲೇ ಬೆಳಗಿನಿಂದ ಜೊತೆಗೆ
ಮಾಂಸದಂಗಡಿಯಾತ ಮೂಳೆಗಳ
ಕತ್ತರಿಸುತ್ತಿದ್ದ ಎಂದಿನಂತೆ ,
ಭಿನ್ನ ವ್ಯವಹಾರ, ನಿಗೂಢತೆಯ ಆಗರ
ನಡೆದದ್ದು, ನಡೆಯ ಬೇಕಾದುದು
ನಡೆಯುತ್ತಲೇ ಇತ್ತು

ಪಟ್ಟಿ ಬೆಳೆಯುತ್ತಲೇ ಇದೆ
ಆದಿ, ಅಂತ್ಯ ತಿಳಿಯದೆ
ಹಿನ್ನಲೆಗಳು ಹಲವಾರು
ಮನಸು ಸ್ಥಿಮಿತ ಕಳೆದುಕೊಂಡ ಕ್ಷಣ
ನಿರೀಕ್ಷೆ ಹುಸಿಯಾದಾಗ, ಗುಮಾನಿ ಯಾರಮೇಲೆ
ಬೇಲಿಯೆದ್ದು ತಿರುಗಿಬಿದ್ದಾಗ
ಕಾರಣ ಕ್ಷುಲ್ಲಕ, ಕ್ರಿಯೆ ಭಯಾನಕ
ಅನಾಯಾಸವಾಗಿ ಹಾಡ ಹಗಲೆ
ಜನರ ಸಮಕ್ಷಮದಲೆ ನಡೆದಿತ್ತಂದು ಕೊಲೆ
ಅಸಮಾಧಾನ, ಆತಂಕ ಗಿರಕಿ ಹೊಡೆಯುತ್ತಿವೆ
ಯಾರ ನೆತ್ತಿಯ ಮೇಲೆ, ಯಾವಾಗ ,
ಏಕೆ, ಹೇಗೆ ಬೀಳುತ್ತದೆ ಕತ್ತಿ
ಬಿದ್ದ ನಂತರ ಸುದ್ದಿ

ಪ್ರಕರಣ ದಾಖಲು, ಇನ್ವೆಸ್ಟಿಗೇಷನ್ ಮೊದಲು
ಸಾಕ್ಷಿಗಳ ಹುಡುಕಾಟ, ಆರೋಪಿಗಳ ಪತ್ತೆ ,
ಬಂಧನ, ಭೇಟಿ, ಬಿಡುಗಡೆ ಮತ್ತೆ
ಅದೇ ಆಟ ಶುರು ,
ಈಗ ದೊಡ್ಡ ಮಟ್ಟದಲ್ಲಿ
ಚದುರಂಗದಾಟಕೆ ಕಳೆದು ಹೋದವರೆಷ್ಟೋ
ಮಂದಿ, ಆಡಿಸುವವರ ಆಟ
ನಡೆಯುತ್ತಲೇ ಇದೆ ನಿಲ್ಲದೆ
ವ್ಯವಸ್ಥೆ ಜನರ ಅಣಕಿಸುತ್ತಲೇ

Jun 6, 2008

ಚಕ್ರ

ಚಕ್ರ ತಿರುಗುತ್ತಲೇ ಇತ್ತು
ತದೇಕಚಿತ್ತವಾಗಿ ನಿಲ್ಲದಂತೆ
ಅದುವೇ ಅದಕೆ ಗೊತ್ತಿದ್ದ
ಕಾರ್ಯ, ಕರ್ಮ, ತತ್ವ ,
ತರ್ಕ, ತಪಸ್ಸು ಎಲ್ಲವೂ ,
ದಣಿವು, ದಾಹವೇನೂ
ಇದ್ದಂತಿರಲಿಲ್ಲ ,
ಮುಖಭಾವ ನಿರ್ಲಿಪ್ತ, ನಿಶ್ಚಲವಾಗಿ
ಊಹೆಗಳಿಗೆ ಮೀಸಲಿಟ್ಟಂತೆ
ಇತಿಹಾಸಕಾರನಿಗೊಂದು ,
ಕವಿಗೊಂದು ಮುಖ ,
ವಿಜ್ಞಾನಿಗೊಂದು, ಧರ್ಮದರ್ಶಿಗೆ ,
ಹೀಗೆ ಕ್ಷೇತ್ರಾವಾರು ಅವರವರ
ಸಾಮರ್ಥ್ಯಕ್ಕೆ ತಕ್ಕಂತೆ
ಭಿನ್ನ ಉತ್ತರಗಳಿದ್ದರೂ
ಇನ್ನೂ ಪ್ರಶ್ನೆಗಳು ಬಹಳ ಉಳಿಸಿ
ಅದಕಿರಲಿಲ್ಲ ಯಾವ ಚಿಂತೆ
ಎಲ್ಲವೂ ನಮಗೇ ಬಿಟ್ಟಂತೆ
ಉದಾರ ಮನೋಭಾವವೋ ,
ಉದಾಸೀನವೋ ಗೊತ್ತಿಲ್ಲ
ನೆಗೆಯುತ್ತಿದ್ದರು ಕಪ್ಪೆಗಳಂತೆ ,
ನಾಯಿ, ನರಿಗಳಂತೆ ಬೊಗಳುತ್ತ
ಕರುಣೆ, ಸಹನೆ, ಸಂಯಮ
ಮರೆತಂತೆ ,
ಅಗಾಧ ಭಾರ ಹೊತ್ತು
ಇಳಿಸಲೂ, ಹೊರಲೂ
ಆಗದಂತೆ
ಚಕ್ರ ಸುತ್ತುತ್ತಲೇ ಇದೆ
ನಿಶ್ಚಿಂತನಾಗಿ, ನಿರಾಳವಾಗಿ ,
ನಿರಮ್ಮಳವಾಗಿ ಹಾಗೇ ...
ತಂತ್ರಜ್ಞಾನ, ವಿಜ್ಞಾನ ,
ವೈಚಾರಿಕತೆ, ಪುರಾವೆ ,
ಚಿಂತನೆ, ಮಂಥನ ,
ತರ್ಕ, ವಾದ-ವಿವಾದಗಳ
ಸೃಷ್ಠಿಸಿದವರು ಯಾರೋ
ತನಗರಿವಿಲ್ಲದಂತೆಯೇ
ಮುಂದುವರೆಸಿದೆ ಹಾಗೇ ...
ಅದೇ ಶೃತಿ ಲಯದಲ್ಲಿ
ರಾಗ ತಾಳಗಳರಿವಿರದೆ
ಯೋಗ ಭೋಗಗಳ ನೋಡುತ
ಹಸಿವು, ನಲಿವುಗಳಿಗೆ ಪ್ರತಿಕ್ರಿಯಿಸದೆ
ಬಡವ, ಬಲ್ಲಿದರಿಗೆ ,
ಜಾತಿ, ಮತಗಳಿಗೆ
ಯಾವುದೇ ಉತ್ತರ ನೀಡದೆ
ತನ್ನಷ್ಟಕ್ಕೆ ತಾನೇ ಜೊತೆಯಾಗಿ
ಚಕ್ರ ಸುತ್ತುತ್ತಲೇ ಇದೆ
ನಿಲ್ಲದೆ ಎಂದಿನಂತೆ

Jun 4, 2008

ದೊಡ್ಡಾಟ - ದುಡ್ಡಾಟ

ಸಣ್ಣಾಟವಲ್ಲವೋ ಗೆಳೆಯ
ಘಟಾನುಘಟಿಗರು ಕಣದಲಿ
ದಶಕಗಳಿಂದ ಮೊಹರೊತ್ತಿ
ಪ್ರತಿಷ್ಠೆ ಪಣಕ್ಕಿಟ್ಟವರಿವರು

ವ್ಯಕ್ತಿತ್ವದ ದ್ವಂದ್ವತೆ ಬೆಟ್ಟದಷ್ಟು
ಅಷ್ಟೇ ಮಟ್ಟಕ್ಕೆ ಹಣವನಿಟ್ಟು
ಜಾತಿ ಧರ್ಮದ ನಶೆಯೇರಿಸಿ
ಬಿಟ್ಟಿ ಹೆಂಡ ಹಂಚಿದವರು

ಚಂದುರಂಗದಾಟವಲ್ಲವೋ
ಮೌಲ್ಯ, ಸಿದ್ಧಾಂತ, ಬದ್ಧತೆ
ಮುಖವಾಡ ಹೊತ್ತು
ಸ್ವರ್ಧೆಗೆ ಸೈ ಎಂದವರು

ಜನನಾಯಕರಿವರಲ್ಲವೋ
ಹಣವಿಟ್ಟು ಪಣತೊಟ್ಟು
ಜನರ ಮತ ಖರೀದಿಸಿ
ನರ ಭಕ್ಷಕರಾದವರು

ಜನ ಸೇವೆ ನೆಪವೊಡ್ಡಿ
ಜನಾರ್ಧನನಾಗುವವರೆಗೆ
ತಲೆಬಾಗಿ ದಾಹಕೆ
ತಾವಿರಲು ಮಾರಾಟಕೆ

ಶ್ರೀಮಂತಿಕೆ ವಿಕೃತ ಪ್ರದರ್ಶನ
ಹಣವೇ ಜನ ಗಣ ಮನ
ಲೆಕ್ಕಾಚಾರದ ವ್ಯವಹಾರ
ಗೆದ್ದವರೇ ಅಪಾರ

ದೇವ ದೇವತೆಯರ ದರ್ಶನ
ಜಾತಿ ಮಠಾದೀಶರಿಗೆ ನಮನ
ಜ್ಯೋತಿಷಿಗರಿಗೊಂದು ಸವಾಲು
ಒಳಗೊಳಗೇ ಎಲ್ಲ ಡೀಲು

ಚಿಕ್ಕವನಿದ್ದಾಗ ನೆನಪಿದೆ
ಆಕೆಯ ಕೈಗೆ ಹತ್ತು ರುಪಾಯಿ
ನನ್ನ ತಲೆಗೊಂದು ಕುಲಾಯಿ
ಮೇಲೆ ಕೈ, ಇಲ್ಲವೆ ನೇಗಿಲು

ಹಿರಿಯರಿಗೆ ಇತ್ತಲ್ಲ ಸರಾಯಿ
ಮಕ್ಕಳ ಜೋಬಿಗೆ ಕೈ ಪತ್ರ
ತಮ್ಮಟೆ ಜೊತೆಗೆ ಪ್ರಚಾರ
ಸದ್ಯಕೆ ಅಷ್ಟೇ ನೆನಪು

ಭಿನ್ನವಿಲ್ಲ ಈಗಲೂ ಅದೇ
ಹತ್ತು ರೂ ಸಾವಿರ ಆಗಿದೆ
ಸೀರೆ ಸೇರಿದೆ, ಪ್ಯಾಕೆಟ್
ಜೊತೆಗೆ ಬಾಟಲ್ ಬಂದಿದೆ

ಬದಲಾಗಿರುವುದು ಕೇವಲ
ನನ್ನ ವಯಸ್ಸಷ್ಟೆ, ಆಗ
ಹತ್ತು ಈಗ ನಲವತ್ತು
ಆಟದೊಳಗಾಟ ಮುನ್ನಡೆದಿತ್ತು

ಸ್ಪರ್ಧೆ

ಭಾರಿ ಉದ್ದಗಲದ ಸ್ಪರ್ಧೆ
ಕದ್ದೆಲ್ಲರ ನಿದ್ದೆ
ಹಳ್ಳಿಗೂ, ಡೆಲ್ಲಿಗೂ
ಕೊಟ್ಟೊಂದು ಒದೆ

ವಿಲ ವಿಲ ವಿಲ ಒದ್ದಾಡುತ
ಇದೀಗ ದಡಕೆಸದ ಮೀನಂತೆ
ನೆಗೆದು ಬಿದ್ದರೇನಂತೆ
ನಗದು ಸಿಗುವುದಾದರೆ

ಯಾವ ಪರಿ ರಿಯಾಯಿತಿ
ಇಲ್ಲಿ ಸಲ್ಲದು
ಸಾಲ ಬೇಕೆ ಸಿಗುವುದು
ಸುಲಿಗೆ ಆನಂತರವಷ್ಟೆ

ಮಾಹಿತಿಗಷ್ಟೇ, ಖಂಡಿತ
ಇಲ್ಲಾ ಇಲ್ಲಿ ಸಾಲಮನ್ನಾ
ಕೇವಲ ರಾಜಕೀಯ
ಆಟವಷ್ಟೇ

ಸುಳಿಗೆ ಸಿಕ್ಕವರೆಷ್ಟೋ
ಲೆಕ್ಕಕೆ ಸಿಗದವರು
ಮುಖಭಾವದಿಂದೇನು
ತಿಳಿಸದವರು

ಕಾಲಹರಣ ಕಾಲದಲ್ಲಿ
ಆಗ ಕನಸು ಕಾಣಲು
ಸಹ ಸಮಯವಿತ್ತು
ಸ್ಪರ್ಧೆಗೂ ಸೀಮಿತ

ಕಾರ್ಯಕ್ರಮಗಳ ಮಂಥನ
ಕಾರ್ಯರೂಪದಲಿ ಮಗ್ನ
ಕನಸಿಗೆಲ್ಲಿ ಸಮಯ
ನಿದ್ದೆ ಕಾಣೆಯಾಗಲು

ವೇಗ ಹೆಚ್ಚಾದಂತೆಯೆ
ನಾಡಿ ಮಿಡಿತ ಕೂಡ
ಹೇಗೆ, ಎಲ್ಲಿ, ಏಕೆ ಎಂಬ
ಪ್ರಶ್ನೆಗಳು ಮೌನ

May 31, 2008

ಯಾರಿವ?

ಸೂಜಿಗೆ ಸಣ್ಣ ರಂಧ್ರ ಕೊರೆವ
ಸೂಕ್ತ ಶಕ್ತ ದಾರ ಹೆಣೆವ
ಸೂಕ್ಷ್ಮದಿ ಸೇರಿಸಿ ಎಳೆವ
ಸೊಗಸಾದ ಧಿರಿಸು ಹೊಲಿವ

ಕಣ ಕಣವ ಸೇರಿಸಿದವ
ಜೀವವದಕೆ ನೀಡಿದವ
ವಿಸ್ಮಯಗಳ ಸೃಷ್ಟಿಸುವ
ವಿನಯ ವಿಜಯ ಕಾಣುವ

ಶೃತಿ ಲಯವ ಮೀರದವ
ಒಲವನಿತ್ತು ವಿರಹ ನೀತಿ
ಕಲಹವಿರಿಸಿ ಕುಶಲ ಕೇಳಿ
ಬೇಡಿದರು ಕಾಣದವನೆ

ಆಸೆಯಿತ್ತ ಅರಸು ಇವನೆ
ಹಸಿವನಿತ್ತ ಚತುರನಿವನೆ
ಅರಿವುಕೊಟ್ಟು ಆಳುವವನೆ
ಬೇರೆ ವರವ ಕೊಡುವನೆ

ಭೂರಮೆಗೆ ಹಸಿರ ಉಡುಗೆ
ಸಾಗರವೇ ಅದರ ನೆರಿಗೆ
ಆಗಸಕೇಕೆ ನೀಲಿ ಹೊದಿಕೆ
ಸೂರ್ಯ ಚಂದ್ರರಲ್ಲಿ ಬೇಕೆ

ಮೋಡಕಟ್ಟಿ ಮಳೆ ಸುರಿಸಿ
ಗುಡುಗು ಮಿಂಚು ನೆಪಕಿರಿಸಿ
ಹರಡಿ ಸಾವಿರ ಜೀವರಾಶಿ
ಮನುಜನವರ ನಾಯಕನೆ ?

ಅವನು ಯಾರು ಬಲ್ಲಿರೇನು ?
ಅವನ, ಅವಳ ಕಂಡಿರೇನು ?
ಇಟ್ಟವರಾರು ಹೆಸರವರಿಗೆ ?
ದೇವರೆಂದೇ ಹೇಳಬೇಕೇ ?

ಮನಸೇ

ಮರೆಯಲೇಗೆ ಮನಸೇ
ನೀನಿಟ್ಟ ಪುಟ್ಟ ಪುಟ್ಟ
ಹೆಜ್ಜೆ ಪಳೆಯುಳಿಕೆ
ಹಾಗೇ ನಗುತಿದೆ

ಹನಿಯುತಿಹ ಮಳೆಗೆ
ಸೋಕಿ ಬೆವರ ಹನಿಯ
ಜೊತೆಗೆ ಕರಗಿ ತುಟಿಗೆ
ತಾಗಿತಲ್ಲ ನೆನಪಿದೆ

ಬಂಡೆ ಮೇಲೆ ಕೆತ್ತ ಹೆಸರು
ಉಸಿರಿಡಿದು ಒತ್ತಿ ಮೊಹರು
ಇಳಿಸಂಜೆ ಹೊಳೆವ ತಾರೆ
ಸಾಕ್ಷಿಯಾಗಿ ಉಳಿದಿದೆ

ದಿನಕೊಂದು ನೆವವ ಹೂಡಿ
ಅತ್ತ ಇತ್ತ ಮತ್ತೆ ನೋಡಿ
ಇತ್ತಲಿಂದ ಓಡಿ ಬಂದ
ಛಲವೇಕೆ ಇಂಗಿದೆ

ಮುನಿಸಿಂದ ಮುಷ್ಠಿ ಹಿಡಿದು
ಎದೆಯ ಮೇಲೆರಡು ಬಿಗಿದು
ಮೆಲ್ಲಗೆ ಅದಕೆ ಒರಗಿದೆ
ಮೆತ್ತಗೆ ಕಣ್ಣೀರ ಒರಸಿದೆ

ಮೌನವಾಗಿ ತಲೆಯ ತೂಗಿ
ನೂರು ಕನಸ ಕರೆಸಿದೆ
ಜಾಣೆ ನೀನು ಜರಿದರೇನು
ಮರೆಯಲೆಂದು ತಿಳಿಸಿದೆ

May 30, 2008

ಬಸ್ಸು

ಬಸ್ಸು ಮಿಸ್ಸಾಗಿ, ಮುಂದಿನ
ನಿಲ್ದಾಣ ಬಹಳ ದೂರದಲ್ಲಿ
ಬರುವ ಬಸ್ಸಿನ ವಿವರವಿಲ್ಲ
ಸಹ ಪಯಣಿಗರು ಜೊತೆಗಿಲ್ಲ

ಪಯಣ ಸಾಗಲೇ ಬೇಕು
ನಿಲ್ಲಿಸುವಂತಿಲ್ಲ ,
ಕಾಯುವ ಮನಸಿದ್ದರೂ
ಕೂರುವಂತಿಲ್ಲ

ಅಗೋ ಆ ದಟ್ಟ ಕಾಡಿನ
ಮಧ್ಯೆ ನಾ ನಡೆಯ ಬೇಕು
ಅ ಪಕ್ಕದ ಬೆಟ್ಟವ ನಾ
ಹತ್ತಬೇಕು, ಹಾದಿಯಿಲ್ಲ

ಮತ್ತೆ ಬಸ್ಸು ಹೋಗಲು
ಅಲ್ಲಿಗೆ ಹೇಗೆ ಸಾಧ್ಯ
ಎಲ್ಲರ ಪಯಣ ಅಲ್ಲಿಗೆ
ಎಂಬುದು ಊಹೆ ಅಷ್ಟೇ

ಸದ್ಯ, ಮೊದಲಿಗೆ ರಸ್ತೆನೇ
ಇಲ್ಲ, ಮತ್ತದಕೆ ಕಾಯಬೇಕೆ
ಬೇರೆ ಮಾರ್ಗವೇನಾದರೂ
ಇರಹಬಹುದೇನೋ ಗೊತ್ತಿಲ್ಲ

ಮೂಲ ಪ್ರಶ್ನೆ ಮರೆತಂದಿದೆ
ಮೊದಲು ನಾನೇಕೆ ಬಂದೆ
ಇಲ್ಲಿಗೆ, ಮಿಸ್ಸಾದ ಬಸ್ಸು
ಹತ್ತಿ ಹೊರಡಬೇಕಿತ್ತಲ್ಲವೆ

ಸರಿ ಆ ಬಸ್ಸು ಎಲ್ಲಿಗೆ ಹೋಗುತ್ತೆ
ಅಂತಾದರೂ ತಿಳಿದಿತ್ತೆ, ಇಲ್ಲ
ನಾನು ಹೋಗ ಬೇಕಾದ ಸ್ಥಳ -
ವಾದರೂ ಇಲ್ಲ, ಪಯಣವೆಲ್ಲಿಗೆ

ಬಂದಿದ್ದಾಗಿದೆ, ಎಲ್ಲಿಯಾದರೂ
ಹೋಗೋಣವೆನ್ನುವ ತರ್ಕವೆ ,
ಇಲ್ಲ ಭಂಡತನವೆ, ಏನಾದರೂ
ಆಗಲಿ ಮೊದಲು ಇಲ್ಲಿರಬಾರದು

ಅಬ್ಬಾ! ಎಷ್ಟೊಂದು ಪ್ರಶ್ನೆಗಳು
ನನ್ನ ಬಳಿ ಉತ್ತರವೊಂದೂ ಇಲ್ಲ
ಯೋಚಿಸುತ್ತಾ ಇಲ್ಲೇ ಕೂರಬೇಕೆ
ಪಯಣದಲಿ ಯೋಚಿಸಬಹುದಲ್ಲ

ಬಸ್ಸು ಮಿಸ್ಸಾದುದರಿಂದಲೇ ತೊಂದರೆ
ಈ ಪ್ರಶ್ನೆಗಳ ಗೊಡವೆಯಿರುತ್ತಿಲ್ಲ
ಆದದ್ದಾಯಿತು, ಬಸ್ಸಿಗಾಗಿ ಕಾಯಲೇ ,
ಜೊತೆ ಪಯಣಿಗರಿಗಾಗಿ ಕಾಯಲೇ

ಆ ಬೆಟ್ಟದ ಹಾದಿಗಾಗಿ, ಬರುವ
ಬಸ್ಸಿಗಾಗಿ, ನನ್ನ ಪ್ರಶ್ನೆಗಳ
ಉತ್ತರಕ್ಕಾಗಿ, ಸ್ಪಷ್ಟ ಗುರಿಯ
ನಿರ್ಧರಿಸುವವರೆಗೆ ಕಾಯಲೇ

ಏನೂ ಇರದವನಿಗೆ, ಯಾರೂ
ಇರದವನಿಗೆ, ಯಾವ ಕಡೆಗೆ ,
ಯಾರ ಕಡೆಗೆ ಹೋದರೇನು
ಸದ್ಯ ಇಲ್ಲಿರದಿದ್ದರೆ ಸಾಕಷ್ಟೆ

ಇರದವನಿಗೆ ಇಷ್ಟು ಕಷ್ಟವಾದರೆ
ಇನ್ನು ಇರುವವರ ಗತಿ ಏನು ?
ಕಲ್ಪನೆಗೂ ಮೀರಿದ ವಿಷಯ ಬಿಡಿ
ಈ ಸ್ಥಳ ಮಹಿಮೆ ಸರಿಯಿಲ್ಲವಷ್ಟೇ

May 29, 2008

ಅಪರಿಚಿತ

ಮಖವನೇಕೆ ಮುಚ್ಚಲೆತ್ನಿಸುವಿರಿ
ಚಡಪಡಿಸುವಿರೇಕೆ ತೊಂದರೆಯೆ
ಸಹಾಯವಾಗುವುದಾದರೆ ಹೇಳಿ
ಸುಮ್ಮನಿರಲು ಸಹ ಸಿದ್ಧನಿರುವೆ ,
ಮುಜುಗರ ಬೇಡ, ಏನು ಸಮಸ್ಯೆ ?

ಅರೇ ಏನೂ ಇಲ್ಲ, ನಿಮಗೆಲ್ಲ
ಸಮಸ್ಯೆಯಾಗಬಾರದು ಅಂತಲೇ
ಇದೆಲ್ಲ ಅವಸ್ಥೆ, ಅಭ್ಯಾಸವಾಗಿದೆ ಬಿಡಿ

ಹೇಗೆ ಸಾಧ್ಯ, ನಿಮ್ಮ ಮುಖ ಕಂಡರೆ
ನಮಗೇನು ಸಮಸ್ಯೆ, ಅದು ಕೆಟ್ಟದಾಗಿದೆಯೆ ,
ವಿಕಾರವಾಗಿದೆಯೇ, ಭಯಂಕರವಾಗಿದೆಯೇ ,
ನೋಡಿದರೆ ನಮಗೆ ಭಯವಾಗುವುದೇ ?

ಛೆ, ಅದೇನು ಇಲ್ಲ, ಬಹಳ ಸುಂದರನು ,
ಚತುರನು, ಶ್ರೀಮಂತನು, ಈ ಪ್ರಾಂತ್ಯಕ್ಕೆ
ನಾನು ಚಿರಪರಿಚಿತನು ಹಾಗಾಗಿ ಎಲ್ಲರು
ಸುತ್ತ ಮುತ್ತಿಕೊಳ್ಳುತ್ತಾರೆ ಅದರಿಂದ
ಜನ ಸಾಮಾನ್ಯರಿಗೇಕೆ ತೊಂದರೆ ಅಂತ
ಅದಿರಲಿ, ನಿಮ್ಮ ಪರಿಚಯ ಆಗಲಿಲ್ಲ ,
ಎಲ್ಲಿಯವರು ನೀವು ?

ನನ್ನದೇನೂ ವಿಶೇಷ ಇಲ್ಲ ಬಿಡಿ
ನನಗ್ಯಾವ ಊರಿಲ್ಲ, ನನ್ನವರಾರಿಲ್ಲ ,
ನನ್ನವರೇ ಎಲ್ಲ, ಎಲ್ಲವೂ ನನ್ನದಿದ್ದಂತೆ
ನಿಮ್ಮ ಸಮಸ್ಯೆಗಳು, ಸದ್ಯ ನನಗಿಲ್ಲ
ಇದ್ದಕಡೆ ಇರುವವನಲ್ಲ, ಮತ್ತೆ ಬರುವ
ನಂಬಿಕೆ ನನಗಿಲ್ಲ, ಸುಮ್ಮನೆ ನೋಡುವೆ ,
ಕೇಳುವೆ, ಆನಂದಿಸುವೆ, ನಗುವೆ, ಅಳುವೆ ,
ಇಷ್ಟ ಬಂದಂತೆ ಇದ್ದು ಬಿಡುವೆ ಅಷ್ಟೇ

ಯಾರು ಇಲ್ಲ ಅಂತೀರಿ, ಎಲ್ಲ ನನ್ನವರೆನ್ನುವಿರಿ
ಸ್ಪಷ್ಟವಾಗಿ ಹೇಳಿ ಮಾರಾಯರೇ ನೀವ್ಯಾರು ?

ಹೌದು, ಎಲ್ಲರೂ ನನ್ನವರೇ, ಎಲ್ಲವೂ ನನ್ನದೇ ,
ಆದರೂ ನನಗ್ಯಾರೂ ಇಲ್ಲ, ನನಗೇನೂ ಬೇಡ

ನಿವೇನು ಸ್ವಾಮೀಜಿಗಳೇ, ಇಲ್ಲ ಸಂತರೇ ?

ಅಲ್ಲ ನಾನು ಸಾಮಾನ್ಯನು, ನಾ ಬಯಸಿದಂತೆ
ಇರುವವನು, ನನಗ್ಯಾವ ಹೆಸರು, ಊರು ,
ಕ್ಷೇತ್ರ ಬೇಕಾಗಿಲ್ಲ, ಆದರೂ ಸುಖವುಳ್ಳವನು ,
ಸ್ವೇಚ್ಛೆಯುಳ್ಳವನು, ಚಿಂತೆಯಿರದವನು ,
ಸ್ವಂತಕೆ ಏನನೂ ಬಯಸದವನು ,
ಅಲ್ಪಸುಖಿ ಎಂದರೂ ಸರಿಯೆ, ಶಾಂತನು ,
ಸರಳನು, ವಿದ್ಯೆ, ಬುದ್ಧಿಯಿರುವವನು ನಾನು

ಅಯ್ಯೋ, ಮಂಡೆ ಬಿಸಿ ಮಾಡಬೇಡಿ
ಈಗಲೇ ನನಗೆ ಸಾಕಷ್ಟು ಸಮಸ್ಯೆಗಳಿವೆ ,
ನನ್ನ ಬಳಿ ಹಣ, ಆಸ್ತಿ, ಅಂತಸ್ತು, ಅಧಿಕಾರ ,
ಸಂಸಾರ, ಸ್ನೇಹಿತರು, ಬಂಧುಗಳು ಎಲ್ಲಾ ಇದ್ದರೂ
ನೆಮ್ಮದಿಯಿಲ್ಲ, ಸುಖ, ಶಾಂತಿ ಇಲ್ಲ ,
ನಿಮ್ಮಹಾಗೆ ನನಗಿರಲು ಆಸೆಯಿದ್ದರೂ ಸಾಧ್ಯವಾಗುತ್ತಿಲ್ಲ ,
ಅದೆಲ್ಲ ಪಡೆಯಲೆಂದೇ ಇಷ್ಟೆಲ್ಲಾ ಮಾಡಿದೆ, ಪ್ರಯೋಜನವಿಲ್ಲ ,
ದಯವಿಟ್ಟು ಹೇಳಿ ನೀವು ಯಾರು, ಏನು ಮಾಡುವಿರಿ ?

ನಾನು ಇಂದು, ನೀವು ನಾಳೆ.

May 28, 2008

ಭೂಪ

ಆಗಸಕೆ ಲಗ್ಗೆ ಇಟ್ಟಂತೆ
ಮೂಡಣದಿ ದಟ್ಟ ಕೆಂಪು
ಹಳದಿಯಾಗುವ ಪರಿ
ನೋಡಲೇನಚ್ಚರಿ

ಬೆಳಕು ಬೆರೆಸಿ ಕೆಂಪು
ಕರಗಿಸಿದಾತ
ಭೂಪ ಇವನ್ಯಾರೋ
ಭೂಪಟವನಾಳುವವ

ಭೂಭುಜನಿಗೆ ಇದೇ
ಕಿರೀಟ ಆ ಗಿರಿಶಿಖರ
ಅಷ್ಟು ಎತ್ತರದವನು
ಭೂತಗನ್ನಡಿಗೆ ದೊಡ್ಡವ

ಇವನ್ಯಾರೋ ಕದಲದವ ,
ಕರಗದವ, ನೋಡುಗರಿಗೆ
ಒಂದುಕಡೆ ಕಾಣದವ ,
ಕಂಡರೂ ಬದಲಾದವ

ಇದ್ದರೇ ಇವನಂತಿರಬೇಕು
ಗುಂಡಗೆ, ಗುಂಡಿಗೆ, ಕೆಂಪಗೆ
ಅಲುಗಾಡದಂತೆ, ಚಿಂತೆ
ಇಲ್ಲದೆ ಚಿತೆಯೇರುವವರೆಗೆ

ಬೆಳಕಿಗೆ ಕತ್ತಲ ತಂದವನು
ಕತ್ತಲಲಿ ಚುಕ್ಕಿ ಚಂದ್ರಮ
ತೋರಿದವನು, ಬೇಡಿದರೂ
ಬದಲಾಗದೆ ಕಿರಿದಾಗಿ ಕಾಣುವ

ಬೆಳ್ಳಿಮೋಡ ಕಾರ್ಮೋಡವಾಗಿಸಿ
ಅವರವರ ಮಧ್ಯೆ ಜಗಳವಿರಿಸಿ
ಗುಡುಗು, ಮಿಂಚುಗಳ ಸೃಷ್ಟಿಸಿ
ಮಳೆಯಾಗಿ ಧರೆಗೆ ಜಳಕ ಮಾಡಿಸಿ

ಬಣ್ಣಗಳ ಸರದಾರ ಬಾಗಿಲನು
ತೆರೆದಾನು ಬೆಳಕು ಹರಿಸಿ
ಪಡುವಣ, ಮೂಡಣಗಳ
ನಮಗಾಗಿ ಮೀಸಲಿರಿಸಿ

ಪರದೆ

ಆತ್ಮೀಯರಿಗೆ ಹಲವು
ಪರದೆಗಳೆಳೆದು
ದೂರ ಅಡಗಿ ಕುಲಿತು
ಭಾರಿ ರಿಯಾಯಿತಿ
ನೀಡಿದಂತೆ

ಆಗಾಗ ಹೊರಬಂದು
ದರ್ಶನ ಭಾಗ್ಯ
ಲಭ್ಯವಾದವರಿಗೆ
ಅದೃಷ್ಟ ಪರೀಕ್ಷೆ
ನೆನಪಿರಲಿ

ಮುಚ್ಚಿಡುವ ಅಭ್ಯಾಸ ಎಲ್ಲವನು
ಹತ್ತಿರವಿರುವವರಿಗೆ ,
ಆತ್ಮೀಯರಿಗೆ
ಸುಖದುಃಖ ಹಂಚಿ
ಕೊಳ್ಳುವವರಿಗೆ

ಹೊರಗಿನವರೊಂದಿಗೆ
ಅಪರಿಚಿತರೊಂದಿಗೆ
ಆಯ್ಕೆ ಮಾಡಿದಷ್ಟು
ತೆರೆದಿಟ್ಟು, ಮುಖಃಭಂಗ
ಸಹಿಸುತ ಅತ್ತಿತ್ತ ನೋಡಿ

ಈ ದ್ವಂದ್ವಕೆ ಸೋತು
ಸ್ವಂತಿಕೆ ಹೂತು
ಸಾಧಿಸುವುದೇನು ಲೇಸು
ಆಪ್ತರ ಹತ್ತಿರವಿದ್ದೂ
ಜೊತೆಗಿರದೆ

ಅನಗತ್ಯದಷ್ಟು ಸ್ವಾಭಿಮಾನ
ಬಿಡದ ಬಿಗುಮಾನ
ತೊರೆದು ಆಪ್ತರಿಗೆ
ಅರಿಯಲು ಸಹಕರಿಸಿ
ಕೃತಜ್ಞತೆ ಪಡೆವನೆ

May 27, 2008

ಸಿಗ್ನಲ್ಸ್

ಸಿಗ್ನಲ್ಸ್ ವೀಕಾದಂತೆ
ಮಾತಿನ ಸ್ಪಷ್ಟತೆ
ಕ್ಷೀಣಿಸುತ್ತಿದೆ
ಕಮರ್ಶಿಯಲ್ ಬ್ರೇಕಂತೆ
ಸಂಪರ್ಕ ಲಭ್ಯವಿರದೆ

ಕರೆ ಕಟ್ಟಾಗುವ ಸಾಧ್ಯತೆ
ತಂತ್ರಜ್ಞಾನದ ತೊಡಕಿಂದ
ವಿಷಯ ಮುಖ್ಯ
ತಿಳಿಸಬೇಕು, ಸಿಗದಿದ್ದರೆ
ಅನಾಹುತ ಖಂಡಿತ

ನೆಪವಲ್ಲ ನಿಜ
ನಂಬಲು ತಯಾರಿಲ್ಲ
ಹೇಳಲು ಸಾಧ್ಯವಾಗುತ್ತಿಲ್ಲ
ಸಿಗ್ನಲ್ಸ್ ವೀಕಾದಂತೆ
ಮಾತು, ಮನಸು ಕೂಡ

ಹೇಳಿ ಹೋಗಲು
ಹಲವು ಕಾರಣ
ಇಷ್ಟವಿಲ್ಲದಾಗ
ಬೇಕೊಂದು ಕಾರಣ
ಹೇಳು, ಇಲ್ಲಾ ಕೇಳು
ಮೌನವಲ್ಲ ಲಕ್ಷಣ

May 21, 2008

ಕನವರಿಸಿ

ಕನವರಿಸಿ ಕತ್ತಲಲಿ ಹಿತ್ತಲ ಮಾವಿನ ಮರದಡಿ
ಎಚ್ಚರವಾಯಿತು ಕ್ಷಣಕೆ ರಸಭಂಗದ ರಭಸಕೆ
ಜೇನ ಹನಿ ಸವಿಯುವ ಆತುರಕೆ ತಿಳಿಯದೆ
ಜೇನಹುಳ ಕೊಟ್ಟಿತ್ತು ಚುಂಬನ ನನ್ನ ತುಟಿಗೆ

ದಿನವೆಲ್ಲ ಉರಿ ಬಿಸಿಲನುಂಡು ದಣಿದ ದೇಹ
ಇಳಿಸಂಜೆಗೇ ಉಂಡು ವಿಶ್ರಾಂತಿ ಬಯಸಿತ್ತು
ತಂಗಾಳಿ ಸುಳಿಯುತಿರೆ ಲಾಲಿಹಾಡಿನ ಹಾಗೆ
ಮನವು ಜಾರಿತು ತಿಳಿಸದೆ ಸುದೀರ್ಘ ನಿದ್ದೆಗೆ

ಸವಿಗನಸು ಹೊಸತಾಗಿ ಆಗಲೇ ಹೆಜ್ಜೆ ಇಟ್ಟಿತ್ತು
ರಸಹೀರುವ ಕ್ಷಣವು ತುಟಿಯಂಚಿಗೆ ತಲುಪಿತ್ತು
ಮನವು ಮಂದಹಾಸವ ಹೊಮ್ಮಿ ಬೀಗುತಿರಲು
ಧಿಗ್ಗನೆ ಎಚ್ಚರಿಸಿ ಕನಸೆಂದು ಮತ್ತೆ ಸಾರಿ ಹೇಳಿತು

ಹಾಯಾಗಿ ಆಯಾಸವ ನೀಗಲು ಇತ್ತೊಂದೆ ಮದ್ದು
ಅನುಭವಿಸುವ ಆಸೆ, ಹವ್ಯಾಸ ಎನಗೆ ದಿನಾ ಹಾಗೆ
ಬೇಸಿಗೆಯ ತಣಿಸಲೆನಗೆ ಇರುವುದೊಂದೇ ಮಾರ್ಗ
ಮರದ ನೆರಳಡಿ ನಿದ್ರೆಯ ಸುಖದೊಳಗಿದೆ ಸ್ವರ್ಗ

May 20, 2008

ಏಕೋ ಎನೋ

ಏಕೋ ಎನೋ ಈ ಏಕಾಂತ ಹಬ್ಬಿ
ಸುತ್ತಲಿರುವ ಸನ್ನಿವೇಶ ಸಪ್ಪೆಯಾಗಿ
ಮೌನವೇ ಮಾತಾಗಿದೆ ಇಂದೇಕೋ
ಕೋಪಕೆ ಕಾರಣವೇನೆಂದು ತಿಳಿಸದೆ

ಮುನಿಸು ಮೂರು ನಿಮಿಷಕೆ ಮರೆತಿಹೆ
ನಮ್ಮಿಬ್ಬರ ಒಪ್ಪಂದ ಮೊದಲಿನಿಂದ
ಇಲ್ಲಿರುವುದೆಲ್ಲ ಇಹವು ಬಯಸಿದಂತೆ
ನೀನು, ಏಕಾಂತದಿ ಏಕಾಂಗಿ ನಾನು

ಪರಿಚಯದ ದಿನದಿಂದಲೇ ಪರಿಚಿತರ
ಜೊತೆಗಿರುವುದು ನನಗೆ ಬಹಳ ವಿರಳ
ಪರಿಸ್ಥಿತಿ ಅರಿವಾಯಿತಾದರೂ ವಿಷಯ
ಹೊರಗೆ ತೋರುವಂತೆ ಇರಲಿಲ್ಲ ಸರಳ

ಉತ್ಸಾಹದ ಕೊರತೆ ಕಾಡುತಿರಲೆನ್ನ
ಚೈತನ್ಯವೆಲ್ಲವೂ ಹಿಡಿದಿಟ್ಟು ನಿನ್ನಲ್ಲಿಯೆ
ಸೋಲು ಗೆಲುವಿನ ಪ್ರಶ್ನೆ ಇದಲ್ಲ ಗೆಳತಿ
ಮುಂದೆ ಜೊತೆಗೇ ಸಾಗುವ ಯತ್ನ

ಎಲ್ಲ ಇದ್ದರೂ ನನಗೆ ಏನೂ ಇರದಂತೆ
ನೀನಿದ್ದರೆ ಸಾಕೆನಗೆ ಎಲ್ಲವೂ ಇದ್ದಂತೆ
ಏಕಾಂತದಲಿ ಕಾಂತ ಕಾದು ಕುಳಿತಿರೆ
ಬಿಡು ಬಿಂಕ ಬೆಡಗಿ ಬೆಳಗಾಗುವ ಮುನ್ನ

ಬಿಗುಮಾನ ನಮ್ಮೊಳಗೆ ನಮಗೇಕೆ
ಅವತರಿಪ ಅನುಮಾನ ಹೊರಗಿಟ್ಟು
ಒಲವೆಂಬ ಹಣತೆಯ ಬೆಳಗು ನೀನು
ಜಗವೆಂಬುದನು ಮರೆತು ಬರುವೆನು

May 19, 2008

ಗುರಿಯೊಂದಿತ್ತು

ಹಕ್ಕಿ ಹಾರುತಾ ಅಲ್ಲಲ್ಲಿ ಏನನೋ ಹುಡುಕುತಿತ್ತು
ನಾನೂ ಹುಡುಕುತಲೇ ಇರುವೆ ಏನೆಂದರಿಯದೆ
ಹೊಸ ಹುರುಪಿಂದ ಹಕ್ಕಿ ಹಾರಾಡುತಲೇ ನನ್ನತ್ತ
ಬಂದಿತ್ತು, ಆಗಲೇ ಅದಕೆ ಬೇಕಾದುದು ಸಿಕ್ಕಂತ್ತಿತ್ತು

ನನಗೆ ತಿಳಿಯ ಬೇಕಿತ್ತು ನನ್ನ ಹಾದಿ ಯಾವುದೆಂದು
ಹಕ್ಕಿ ಆರಿಸುತ್ತಿತ್ತು ಅಲ್ಲಲ್ಲಿ ಬಿದ್ದಿರುವ ಹುಲ್ಲು ಕಡ್ಡಿಗಳ
ನನ್ನ ಗುರಿಯಾಗಿತ್ತು ಬೆಟ್ಟದ ತುದಿಯ ಮುಟ್ಟಲೆಂದು
ಒಂದೊಂದನು ಹೆಕ್ಕಿ ತಂದು ಪೇರಿಸುತ್ತಿತ್ತು ಮರದಲಿ

ತುದಿಯ ಮುಟ್ಟಲು ಕಾರ್ಯತಂತ್ರ ರೂಪಿಸಲೆತ್ನಿಸುತ್ತಿದ್ದೆ
ಉತ್ಸಾಹ ಬೆಟ್ಟದಷ್ಟಿತ್ತದಕೆ ಅದರ ಕೆಲಸದಲೇ ತಲ್ಲೀನತೆ
ಹತ್ತಾರು ಸ್ವರೂಪಗಳ ತಯಾರಿಯಲ್ಲೇ ನಿರತನಾಗಿದ್ದೆ
ಹತ್ತರಷ್ಟಾಗಲೇ ಕಾರ್ಯ ಮುಗಿಸಿ ಮುಂದುವರೆಸಿತ್ತು

ಯಾವ ಹಾದಿಯಲಿ, ಎಷ್ಟು ಬೇಗನೆ ತಲುಪಬಹುದು ಗುರಿ
ಈ ವಿಷಯವೇ ನನ್ನ ಬುದ್ಧಿಶಕ್ತಿಯ ಕೇಂದ್ರಬಿಂದುವಾಗಿತ್ತು
ತಂತ್ರ ಯಂತ್ರಗಳ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿರಲು
ಇದ್ದಲ್ಲಿಯೇ ಇವೆಲ್ಲದರ ಪರಿಕಲ್ಪನೆ, ಪರಿಶೀಲನೆ ಹೊಸದಿತ್ತು

ಹಕ್ಕಿ ನನ್ನೆದುರಲೇ ತನ್ನ ಗೂಡಾಗಲೇ ಕಟ್ಟಿ ಮಗಿಸಿತ್ತು
ತನ್ನ ಪ್ರಿಯಕರನ ಹುಡುಕಾಟವನಾಗಲೇ ಶುರುಮಾಡಿತ್ತು
ನನ್ನ ಗುರಿಯು ಗುರಿಯಾಗಿಯೇ ತುಂಬಾ ಎತ್ತರದಲ್ಲಿತ್ತು
ಕಾರ್ಯತಂತ್ರಗಳು ಪುಸ್ತಕಕ್ಕೇ ಮೀಸಲಾಗಿ ಧೂಳೇರಿಸಿತ್ತು

ಅತಿಜಾಗರೂಕತೆಯಿಂದ, ಆಯ್ಕೆಗಳು ಅತಿಯಾದಾಗ
ನಿರ್ಧಾರ ವಿಳಂಬವಾದಾಗ, ಕಾರ್ಯರೂಪವಾಗದೇ
ಪ್ರತಿಕೂಲ ಪರಿಣಾಮಗಳನೆದುರಿಸುವ ಹುಮ್ಮಸ್ಸಿನ
ಕೊರತೆ ಕಾಡಿದಾಗ ನನ್ನ ಗುರಿ ಎತ್ತರದಿಂದ ನಗುತ್ತಿತ್ತು

ಹೊರಟಿರುವೆ

ಬಿಟ್ಟು ಹೊರಟಿರುವೆ ಎಲ್ಲ ಪ್ರಶ್ನೆಗಳನು
ಉತ್ತರಗಳಿರದವೆಲ್ಲವು ನಿಮಗಾಗಿಯೆ
ಎತ್ತರವನೆಂದೂ ನಾನು ಬಲ್ಲವನಲ್ಲ
ಅಂತರಾಳ ಹೇಳಿದಂತೆ ನಡೆದವನು

ಒತ್ತಡಕೆ ಮಣಿದದ್ದು ಆಗಾಗ ನಿಜವೆ
ತತ್ತರಿಸಿ ಹೋದವನು ನಾನಲ್ಲವಲ್ಲ
ಇತ್ತವರು ಇರದವರೆನ್ನ ಸ್ನೇಹಿತರು
ಇದ್ದಲ್ಲಿಯೇ ಇದ್ದು ಸುಖವನುಂಡವರು

ತಡವಾದುದಕಿಲ್ಲ ಬೇಸರ, ಕೊನೆಯ
ಪುಟದಲೂ ನನಗೆ ತಿಳಿಯಲಾಗಲಿಲ್ಲ
ಜಾಣರ ಮಧ್ಯೆ ನಾನಿದ್ದದ್ದು ನಿಜವೇ
ಅವರಂತೆ ಹರಿಸುವುದು ತಪ್ಪಲ್ಲವೆ

ನೀಳಾಕಾಶದಾಚೆಗೆ ಏನಿದ್ದಿರಬಹುದು
ಕುತೂಹಲಕ್ಕಾದರೂ ಒಮ್ಮೆ ಕೇಳುವೆ
ಇತಿಮಿತಿಗಳ ಹಿತದಲ್ಲೇ ಮುಗಿಸಿದೆ
ನನ್ನಾಟ, ಪ್ರಶ್ನೆಗಳೇ ತಡವಾದವೆ

ತೂಕಡಿಸಿ, ತೂಕಡಿಸಿ ತೂಕಬೆಳೆಸಿ
ಹೊರಗಿದ್ದ ತಿರುಳೆಲ್ಲವೂ ಅಡಗಿಸಿ
ಮತ್ತೆ ಇತಿಮಿತಿಗಳ ಜಗದಲ್ಲಿ ಮಿಂದು
ಎದ್ದು ಬರಲಾಗದೇ ಸದ್ದು ಮಾಡದೆ

ಆಳ, ಅಗಲಗಳನಂಟು ಇಷ್ಟವಾಗಿದೆ
ಈಗ, ನಾನಲ್ಲಿ ಇಲ್ಲದಿರುವಾಗ ಗೊತ್ತೆ
ಗೆಳೆಯ ಹೇಳಬೇಕೆಂದಿರುವೆ ನಿನಗೆ
ಬಿಟ್ಟು ಬರಬೇಡ ನೀ ಪ್ರಶ್ನಗಳ ಗಂಟು

ಕರೆ

ಕರೆ ಬಂದೆಡೆಗೆ ಕಣ್ಣೊರಡುವುದು ಸಹಜ
ಯಾವ ದಿಕ್ಕಿಂದ ಬಂದಿರುವ ಕರೆ
ಎಂದು ತಿಳಿಯದಾದಾಗ
ಗೊತ್ತಿತ್ತು ಒಬ್ಬನಿಗೇ
ನಿಜ

ಕರೆಗಾಗಿ ಕಾಯುವುದು ಲೇಸಲ್ಲ ಸರಿಯೆ
ಆದರೂ ಏಕೋ ಕರೆಗಾಗಿಯೇ
ನಿರೀಕ್ಷೆಯಿಟ್ಟು ಕಾದಿದ್ದಂತೂ
ನಾನು ಖಂಡಿತ
ನಿಜ


ಯಾರದು, ಎಲ್ಲಿಂದ, ಏಕೆ, ಹೇಗೆ
ಎಂಬ ಪ್ರಶ್ನೆಗಳು ಬಹಳ
ಅದಕೆ ಉತ್ತರವಿಲ್ಲ
ಸರಳ, ಅದರೂ
ಕುತೂಹಲ

ಬಿಂಕ ಬಿಡುವವರು ನೀವಲ್ಲ ಅರಿತಿರುವೆ
ಅನುಸರಣೆ ಸರಿಯಲ್ಲ ಎಂಬ ನಂಬಿಕೆ
ಆದರೂ ಸುಮ್ಮನಿರಲಾರೆನೇಕೆ
ಮತ್ತೆ ನಾನು ಮೌನಕೆ
ಶರಣಾಗಬೇಕೆ

ತುಂಬ ಕಷ್ಟಕರವಾದುದು ಕಾಯುವುದಲ್ಲವೇ
ನಿಮಗೂ ಹಾಗೆಯೇ ಇದ್ದಿರಲೂಬಹುದು
ಹಲವಾರು ಊಹೆಗಳು ಒಳಹೊಕ್ಕು
ಚುರುಕು ಮುಟ್ಟಿಸಿ ಮತಿಗೆ
ಮತಿಹೀನ ಮನಕೆ

ಸಂಯಮದ ಪರೀಕ್ಷೆಯೆಂದು ತಿಳಿಯುವೆ ನಾನು
ಅಂತಿಮ ಘಟ್ಟ ತಲುಪುವವರೆಗೂ
ನನ್ನಲ್ಲಿ ಸಹನೆ ಇರುವುದು
ಸಹ ಇದೇ ನನಗೆ
ತಿಳಿಸಿದ್ದು

ಕಾಯುವುದು ಕಲಿಸಿದ್ದು ಇನ್ನೂ ಬಹಳ ಇದೆಯಲ್ಲ
ಕರೆಗಾಗಿ ಕಾದಿರುವುದು ನೆಪ ಮಾತ್ರಕೆ
ಕ್ರಿಯೆ ಮರೆತು ಕಾದಿದ್ದು ತಪ್ಪಲ್ಲವೇ
ಗೊತ್ತಾಗಿದೆ, ಅದರೆ ಬಹಳ
ತಡವಾಗಿದೆ

ಸಂಯಮ, ಸಹನೆ ಇದ್ದರೇ ಸಾಕಾಗುವುದಿಲ್ಲ
ಒಂದು ಕ್ಷೇತ್ರವ ಹರಸಿ, ಆ ಹಾದಿಯಲ್ಲೇ
ಪಯಣಿಸಿ, ಪರಿಶ್ರಮಕ್ಕೆ ಒತ್ತು ನೀಡಿ
ಪ್ರತಿಫಲವ ಅಪೇಕ್ಷಿಸುವುದು
ಸಮಂಜಸವೇ

ಅದೃಷ್ಟದ ಪರೀಕ್ಷೆಯ ಜೊತೆಗೆ ಅತಿಯಾದ ನಿರೀಕ್ಷೆ
ಅತೃಪ್ತಿ, ಅಸಮಾಧಾನ, ಅಸಂತೋಷಗಳ
ಜೊತೆ ನಾ ನರಳಿದ್ದೆ ಸತತ
ಹೊರಬಂದ ನಂತರವೇ
ಸಿಕ್ಕಿದ್ದು ವಿವರ

May 17, 2008

ನೆರಳು

ಹುಡುಕುತಿರುವೆ ಮತ್ತೆ ಮತ್ತೆ
ಯಾರ ನೆರಳು ಬಯಸುತಾ
ದೈವವಿತ್ತ ವರವ ಒಪ್ಪಿ ನೀನು
ಇರುವ ನೆರಳಲಿ ಸುಖವಕಾಣು

ನೇರವಲ್ಲ ನೀನಿರುವ ಜಗವು
ಸಿಗುವುದಿಲ್ಲ ನಿನಗೆ ನೆರವು
ಬಿಡದೆ ಬೀಸೋ ಬಲೆಗಳಲ್ಲಿ
ಸಿಗದೆ ಸಾಗು ಸಂಯಮದಲಿ

ಹಿಂದೆ ಎಂದೂ ನೋಡಬೇಡ
ಮುಂದೆ ಬರುವುದ ಬಿಡಬೇಡ
ಅಕ್ಕ ಪಕ್ಕ ಇರುವ ಹಸಿರನು
ನಿನ್ನದೆಂದು ತಿಳಿಯ ಬೇಡ

ಮೆತ್ತಗಿರುವ ಹೂವ ಹಾಸಿನ
ಕೆಳಗೆ ಮುಳ್ಳಿರಬಹುದು ಎಚ್ಚರ
ಜಡ ಮೊಗದವರೊಳಗೊಂದು
ಮಗುವಿರಬಹದು ತಿಳಿಯದರ

ದಿಕ್ಕುಗೆಟ್ಟವರಂತೆ ತೋರದಿರು
ಭಯವನೊಳಗೆ ಗಟ್ಟಿ ಕಟ್ಟಿಬಿಡು
ಉದ್ವೇಗಕೆ ಎಡೆ ಮಾಡಿಕೊಡದೆ
ನಡೆವ ಹಾದಿಯೆಂದು ಬಿಡದಿರು

ಪಟ್ಣದ್ ಜೀವ್ನ

ಕೆಲಸಕ್ಕೋಗ್ಬೇಕ್ ನನ್ನಾಕಿ
ಮನೇಲ್ ಮಗೂನ್ ಕೂಡಾಕಿ
ಗಡಿಬಿಡೀಲ್ ಮುಂಜಾನೇಳ್ತಾಳೆ
ಪಟಾಪಟ್ ತಯಾರಾಗ್ತಾಳೆ

ಬ್ರೆಡ್ ಟೋಸ್ಟ್, ಅಮ್ಲೆಟ್, ಹನಿ ,
ಜಾಮ್, ಚೀಸ್, ಬಟರ್ ಕೊಟ್ಟು
ಮಗೂಗ್ ಹಾರ್ಲಿಕ್ಸ್ ಮರೀಬೇಡಿ
ಸ್ಕೂಲಿಗ್ ಡಬ್ಬಿ ತಯಾರ್ ಮಾಡಿ

ಇಡ್ಲಿ ಚಟ್ನಿ, ದೋಸೆ, ಅಕ್ಕಿರೊಟ್ಟಿ
ನನ್ನಮ್ಮಾಗಿಷ್ಟ, ಸಿಗೋದ್ ಕಷ್ಟ
ರಾತ್ರಿ ಮಾಡಿದ್ ಸಾಂಬಾರನ್ನೇ
ಮಧ್ಯಾಹ್ನ ಅಡ್ಜಸ್ಟ್ ಮಾಡ್ಕೊಮ್ಮ

ಟಾಟಾ ಬೈ ಬೈ ಚಿನ್ನೂಗ್ಹೇಳಿ
ಬಸ್ಸ್ಟಾಪಿಗೆ ಡ್ರಾಪ್ ಕೊಡಕ್ಹೇಳಿ
ದಾರೀಲ್ ಎಳ್ನೀರ್ ಕುಡಿದ್ಬಿಟ್ಟು
ಬಂದಿದ್ ಬಸ್ಸಿಗೆ ಹತ್ತಿಸಿ ರೈಟು

ಸಿಕ್ಕಿದ್ ತಿಂದ್ಬಿಟ್ ಅಮ್ಮಾಗ್
ಹೇಳ್ಬಿಟ್ ಆಪೀಸ್ಗೆ ಹೊರಟ್ರೆ ನಾ
ಪೋನ್ಮಾಡಿ ಮಗು ಸ್ಕೂಲಿಂದ್
ಬಂದ್ಮೇಲೆ ಮನಸೀಗ್ ಒಸಿ ಸಮಾಧಾನ

ಮತ್ತೆ ಭೇಟಿ ಸಂಜೇಗ್ ಏಳಕ್ಕೆ
ಆಯಾಸ್ಸಕ್ಕೆ ಕಪ್ ಚಾ ಬಿಸ್ಕತ್ತ
ಮಗೂನ್ ಆಡ್ಸೋದ್ ನನ್ಗಿಷ್ಟ
ಊಟದ್ ತಯಾರಿಗೆ ಸ್ವಲ್ಪ ಕಸರತ್ತ

ಸಿಕ್ಸಿಕ್ ಟೈಮ್ನಾಗ್ ಟೀವಿ ಹಚ್ಚಿ
ಸೀರಿಯಲ್ ನೋಡೋಕ್ಕುಂತ್ರೆ
ಇರೋರ್ ಪಕ್ಕ, ಬಂದಿದ್ ಬಳ್ಗ
ಯಾರೀಗ್ ಬೇಕ್ ಆ ತೊಂದ್ರೆ

ಒಂದೇ ಗೂಡಲ್ಲಿದ್ದರೂ ನಾವು
ಕೊಂಡಿ ಕಳಚಿದ ಅಪರಿಚಿತರಂತೆ
ಪಟ್ನದ್ ಜೀವ್ನ ಪರಿ ಪರಿ ಬಣ್ಣ
ಯಾರಿಗ್ ಬೇಕ್ ನೀವ್ ಹೇಳ್ರಣ್ಣ

ದಿನ ದಿನ ಹೀಗೇ ಇದ್ಬುಟ್ರೆ
ಬದುಕೊಂದು ಮಶಿನಂಗಾಗ್ಬುಟ್ರೆ
ಮಾತಿಗೆ ಸಮಯ ಸಿಗದಣ್ಣ
ಜಗಮಗ ಜಗದಲಿ ನಗುವೆಲ್ಲಣ್ಣ

ಅಮ್ಮ ಅಪ್ಪ ಮಗೂಗ್ ಸಿಗೋದ್ ಕಷ್ಟ
ನನ್ನಮ್ಮನಿಗೆ ಇದೇನೂ ಇಲ್ಲ ಇಷ್ಟ
ಇಬ್ಬರು ದುಡೀದೆ ಮನೆ ನಡೆಯೋದ್ ಕಷ್ಟ
ಹಳ್ಳೀಗ್ ಹೋಗೋಕೆ ಯಾರ್ಗಿಲ್ಲ ಇಷ್ಟ

ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲೂ
ಮನಸೀಗ್ ಒಸಿ ನೆಮ್ದಿ ಸಿಗೋಲ್ಲ
ಏನು ಮಾಡಲಿ ಕೂಡಲ ಸಂಗಮ
ನಾನಾಗ್ಬಿಡಲೇ ಈಗಲೇ ಜಂಗಮ

May 15, 2008

ನೀನಿದ್ದಂತೆ

ನೀನಿದ್ದಂತೆ ಇದ್ದುಬಿಡು ಶಿವನೆ
ನಿಶ್ಚಿಂತನಾಗಲು ಯತ್ನಿಸುತ
ಕುರುಡು ಅನುಸರಣೆ ತರವಲ್ಲ
ಗೆಳೆಯ ಇದು ಸೃಷ್ಠಿಕರ್ತನ ಆಜ್ಞೆ

ಯಾವುದೋ ಕಾರಣ ಬಂದಿರುವೆ
ಅರಿಯುವ ಪ್ರಯತ್ನದಲೇ ಇರುವೆ
ಜಯವು ನಿಶ್ಚಿತ ನಿನಗೆ ದೇವರಾಣೆ
ಸುಲಭವಲ್ಲ ನಿಜ ಹಾದಿ ಬಿಡಬೇಡ

ಮಗುವಾಗು, ಯುವಕ ನೀನಾಗು
ಮಧುಮಗನಾಗು ನೀ ಪತಿಯಾಗು ,
ಪಿತನಾಗು ಜೊತೆಗೆ ಮರೆಯದೇ
ಗೆಳೆಯ ನೀನಾಗು, ನೀನು ನೀನಾಗು

ಈ ದಿಶೆಯ ಪ್ರಗತಿಯಲೇ ಹಣತೆ
ಇಟ್ಟಂತೆ ಇದ್ದಕಡೆಯೆಲ್ಲಾ ಬೆಳಗುತ
ನೀನು ನೀನಾಗಿ ಕಷ್ಟಸಾಧ್ಯ ಆದರೂ
ಬೆಂಬಿಡದೆ ಮಾನವನಾಗಲು ಬಯಸಿ

ಇತಿಮಿತಿಗಳೊಂದಿಗೆ ಸ್ಪಷ್ಟನೋಟದ
ನೆರವಿಂದ ಅಡೆತಡೆಗಳನೋಡಿಸುತ
ದಿಟ್ಟ ಪರಿಶ್ರಮವಿರಲು ಪ್ರತಿಫಲದ
ಗೋಜೇಕೆ ಕಲಿತ ಪಾಠವಿದೆ ಯತ್ನಕೆ

ನೀನು ನೀನಾಗದಿರೆ ಎಂದೆಂದಿಗೂ
ಆ ಜಾಗ ಖಾಲಿಯಾಗಿಯೇ ಖಚಿತ
ನೀನಿಲ್ಲಿರುವ ಉದ್ದೇಶ ಸೋತಂತೆ
ಬಂಧು ನೀನಾಗು, ನೀನು ನೀನಾಗು

ನೀನೇಕೆ

ಚಡಪಡಿಸುವೆ ಚೆಲುವೆ ನೀನೇಕೆ
ಅಮೂರ್ತಗಳ ಭಯವು ನಿನಗೇಕೆ
ಮೂರ್ತನಾಗಿ ನಾ ಎದುರಿಗಿರಲು
ಸ್ಥಾಪಿಸೆನ್ನನು ಎದೆಯಗೂಡೊಳಗೆ

ಯಾವುದೋ ಕೊರತೆ ನಿನಗಿದ್ದಂತೆ
ಯಾವ ನೋವೋ ನಿನ್ನ ಕಾಡಿದಂತೆ
ನಿನ್ನ ಮೊಗವದಕೆ ಕನ್ನಡಿಯಾಗಿದೆ
ನನಗೀಗಲೇ ಸರಿಉತ್ತರ ಬೇಕಾಗಿದೆ

ಭಾವಗಳ ಅಡಗಿಸಿರುವೆ ನಿನ್ನೊಳಗೆ
ಹುಸಿ ನಗುವ ತೋರುತಲೇ ಹೊರಗೆ
ಏಕಾಂಗಿಯಾಗಿರಲು ನೀ ಬಯಸುವೆ
ನಿನಗೇ ಎಲ್ಲ ಪ್ರಶ್ನೆಗಳನು ಮೀಸಲಿಟ್ಟು

ಒಡೆದ ಕನ್ನಡಿ ತೋರುವ ಅಷ್ಟೂ
ಚಿತ್ರಗಳು ಹೇಳುತಿರುವುದೊಂದೇ
ಬಿರುಕು ಬಿಟ್ಟಂತೆ ಭಯಾನಕ ಶಬ್ದ
ನಿಶಬ್ದ ಮರುಕ್ಷಣಕೇ ಮೌನ ಹರಡಿ

ನನಗಿಲ್ಲ ಬೇಸರ ಯಾವ ಅಭ್ಯಂತರ
ಇಲ್ಲ ಆತುರ ಸಿಗುವುದಾದರೆ ಉತ್ತರ
ಸಹಕರಿಸುವೆ ಸಂಯಮದಿ ಕಾಯುವೆ
ನೆರವಾಗುವುದಾದರೆ ಮಾತ್ರ ಬರುವೆ

May 14, 2008

ಕವನ ನೀನು

ಕಥೆಯು ನೀನು ಕವನ ನೀನು
ಜೀವ ನೀನು ಜಗವು ನೀನು
ನನ್ನಾಸೆ ನೀನು ಭಾಷೆ ನೀನು
ಕನಸು ನೀನು ಮನಸು ನೀನು

ಗೆಳತಿ ನೀನು ಗೆಳೆಯ ನಾನು
ಜೊತೆ ನೀನಿರೆ ಬೇರೆ ಬೇಕೇನು
ಸುಖನಿದ್ರೆಯನು ಹೆದರಿಸಿರುವೆ
ಮುಗ್ಧ ಮುಖದಿ ಸುಮ್ಮನಿರುವೆ

ನೂರಾರು ಪ್ರಶ್ನೆ ಎಸೆದು ನೀನು
ಮೌನದಲೇ ಉತ್ತರವ ಕೊಡುವೆ
ಬೆಳಕಿದ್ದ ಕಡೆ ಕತ್ತಲು, ಕತ್ತಲಿದ್ದೆಡೆ
ಬೆಳಗೋ ಬಾಳಜ್ಯೋತಿ ನೀನು

ದಿನವು ಜಗಳ ಇರಲು ಬಹಳ
ಸರಳ ನುಡಿಯ ಸರಸ ಗಾಳ
ನಿನ್ನ ನಗುವಲ್ಲೇ ಬೆಳದಿಂಗಳ
ಮನ ಮನೆಯ ಬೆಳಗುವವಳ

ಸಂಸಾರ ಸಾಗರದಿ ತೇಲುತಲೇ
ಬಿರುಗಾಳಿಗೆ ಎದೆಯೊಡ್ಡಿ ನಿಲ್ಲುತ
ತಂಗಾಳಿಯ ಸುಖ ನನಗೆ ನೀಡುತ
ಸದಾ ನಿಲ್ಲದೇ ಸಾಗುವ ನದಿ ನೀನು

ಪರಿಮಳ ಭರಿತ ಪುಷ್ಪಗಳ ರಸವೀರಿ
ಗೂಡಾಗಿಸಿ ಜೇನಾಗಿಸಿ ಅದರಲಿರಿಸಿ
ರಸಭರಿತ ಫಲಗಳ ಕಾದಿರಿಸಿ ವಾರೆ
ನೋಟದಿ ಎಲ್ಲ ತಿಳಿಸೊ ಜಾಣೆ ನೀನು

ಬೆಳಕು ನೀನು ಬದುಕು ನೀನು
ಸುರಿವ ಮಳೆ ಹನಿಯು ನೀನು
ಬಿಸಿಲು ನಾನು ಬೆವರು ನೀನು
ಇರಲು ಜೊತೆಗೆ ನಾನು ನೀನು

ಜಯವಾಗಲಿ

ಜಯವಾಗಲಿ ಜಯವಾಗಲಿ ಜಾಣ ಜಾಣೆಯರಿಗೆ
ತುದಿಗಾಲಲ್ಲಿ ನಿಂತು ನಿಲ್ಲದೇ ಮಾತಾಡುವವರಿಗೆ
ಜಗದ ನಿಯಮದಂತೆ ಜಾರುತಿರಲಿ ಆಗಸದಿಂದ
ಬೆಳಕು ಬೆಳದಿಂಗಳು ಕಗ್ಗತ್ತಲು ಹೊಳೆವ ತಾರೆಗಳು
ಹಾಗೆ ಎಂದಿನಂತೆ ಮುಂಗೋಪ ತರವೇ ಅವರಿಗೆ
ನಿಲ್ಲದಿರಲಿ ಬೆಳ್ಳಿಮೋಡ ಕರಗಿ ಹನಿಯಾಗಿ ಇಳೆಗೆ
ಮುಂಗಾರು ಹಿಂಗಾರು ಸೋನೆ ಮಳೆಯಾಗಿ ಧರೆಗೆ
ಇಟ್ಟವರಾರಿದಕೆ ಮನಬಂದಂತೆ ಹೆಸರುಗಳನೆಷ್ಟೋ
ಅರ್ಥವಾಗದ ನಿಗೂಢ, ಮೂಢ, ಮರ್ಮಗಳೆಷ್ಟೋ
ಬಲ್ಲವರು ಬಲ್ಲಿದರು ಬದುಕಲಿ ಇಲ್ಲಿಯೇ ಕೊನೆವರೆಗೆ
ಎಂದಿನಂತೆ ಚಿಂತೆಮಾಡದೇ ನಾಳೆ ನಾಳಿನ ಕಂತೆ
ದಿನವೂ ದೂಡುವುದು ಹೊಸತಲ್ಲ ತಿಳಿದಿದೆ ನಮಗೆ
ಇದ್ದರೇನಂತೆ, ಬಿದ್ದರೇನಂತೆ, ಎದ್ದರೇನಂತೆ ಚಿಂತೆ
ಜಗವು ನಡೆಯುತಿರೆ ದಿನವು ಅದರ ನಿಯಮದಂತೆ
ಕೂಡುವುದು ಕೂಡಿಡುವುದು ಬಡವನಿಗೆ ಕೊಡದಂತೆ
ಅವರವರ ಕರ್ಮವಷ್ಟೇ ದೇವರ ನಿರ್ಧಾರ ಸೌಜನ್ಯಕೆ
ಅವರವರ ಪಾಲು ಅವರವರ ಹೇಳಿಗೆ ತಕ್ಕ ಪ್ರಯತ್ನಕೆ
ಕೊಡಬಲ್ಲೆ ದೇವರಿಗೆ, ದೇಗುಲಕೆ ನಿತ್ಯ ನೈವೇಧ್ಯಕೆ
ಅವನ ಕೊಳೆ ತೊಳೆದು ನಿತ್ಯ ನಿರ್ಮಲ ಕೋಮಲನ ,
ಕೇಶವನ ಪೂಜಿಸುವವರಿಗೆ, ನಿತ್ಯ ಸುಮಂಗಳಿ
ಮುಂದೊಂದು ಬೇಡಿಕೆಯಿಟ್ಟು ಪಾಪ ಕರ್ಮಗಳ
ತೊಳೆದು ಆರೋಗ್ಯ ಐಶ್ವರ್ಯ ಸಂತಾನ ಪ್ರಾಪ್ತಿಗೆ
ಇರಲಿ ಜಗ ಎಂದಿನಂತೆ ಹಾಗಿದ್ದಲ್ಲಿ ಸುಖ ನಮಗೆ
ತಿಳಿವು ತಿರುವುಗಳು ಎಲ್ಲರ ಸ್ವತ್ತಾಗಲು ಬಿಡದೆ
ಸಕಲ ಯತ್ನವು ಸಹ ಸಾಧ್ಯವಾಗದಿರಲೆಂಬ ಬಯಕೆ
ಜಯವಾಗಲಿ ಜಯವಾಗಲಿ ಜಾಣ ಜಾಣೆಯರಿಗೆ
ತುದಿಗಾಲಲ್ಲಿ ನಿಂತು ನಿಲ್ಲದೇ ಮಾತಾಡುವವರಿಗೆ

May 13, 2008

ನಮಗೆಲ್ಲಿ ನೆಲೆ

ಬರಿ ಬಿಸಿಲಲ್ಲವೋ ಅಣ್ಣ ಇದು ಉರಿವ ಬೆಂಕಿ
ಉಳಿಗಾಲವೆಲ್ಲಿ ಬರಗಾಲವೇ ಮತ್ತೆ ಹುಡುಕಿ
ಉಸಿರುಗಟ್ಟಿರಲು ಉಸಿರಾಡಲಿಲ್ಲ ಶುದ್ಧ ಗಾಳಿ
ನೆಲೆಗೆ ನೆಲೆ ಇಲ್ಲದಿರೆ ಇನ್ನು ನಮಗೆಲ್ಲಿ ನೆಲೆ

ಸ್ಪರ್ಧೆ ಏಕೋ ಮರುಳೆ ಮತಿಗೆಟ್ಟ ಮನಸಿಗೆ
ಹುಸಿ ಬದುಕು ನಡೆಸಿ ಕೃತಕ ನಗುವೆ ಹೊರಗೆ
ಯಾರ ಮೆಚ್ಚಿಸಲು ಈ ಪರಿಯ ಆವೇಶ, ವೇಷ
ಖಾಲಿ ಕೊಡಕೆ ಕಾವು ಕೊಡುವುದೇನು ವಿಶೇಷ

ನೋಟವೆಲ್ಲಾ ಮನೆ ಒಳಗೆ ಮನೆಯ ಮಂದಿಗೆ
ಒಡನಾಟ, ಆ ಆಟ, ಈ ಮಾಟ ಸಹ ಸ್ವಹಿತಕೆ
ಸಹಜವಾದರೂ ಸರಿದಾರಿಯ ಸ್ನೇಹದ ಬಯಕೆ
ಕೈಗೊಂಡ ಕಾರ್ಯದಿಂದ ಪ್ರತಿಕೂಲ ಪ್ರತಿಫಲಕೆ

ಬೆಟ್ಟ ಹೊತ್ತಂತೆ ಮುಖ ಬಾಡಿಹುದು ಗೆಳೆಯ
ಬೇಕಿತ್ತೇ ನಮಗಿದು ನಾವೇ ತಂದ ಪ್ರಳಯ
ಕೃತಕ ಬೆಳಕಿನ ಸರಸ ಸರಿಯಲ್ಲ ಜೀವಭಯ
ಇರುವುದೂಂದೇ ಈಗ ನಮಗಿರುವ ಉಪಾಯ

ಇಂದಿಟ್ಟ ಬೀಜ ನಾಳೆ ಸಸಿಯಾಗಿ, ಗಿಡವಾಗಿ ,
ಮರವಾಗಿ, ಹೆಮ್ಮರವಾಗಿ, ಹಸಿರು ನೀಡುತ
ನೆರಳಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿ
ನಾಳೆ ಬರುವ ನಮ್ಮವರ ಬದುಕು ಹಸನಾಗಿ

ಹಣವಲ್ಲವೋ ಹೆಣವೇ ನಮ್ಮ ನಾಳೆಗೆ ನೆರವು
ಹಸಿರೇ ನಮಗೆ ಉಸಿರು ತಡ ಮಾಡಬೇಡವೋ
ಪುಟ್ಟ ಕಂದಮ್ಮನ ನಗು ಹೊಮ್ಮಲಿ ಬೆಳದಿಂಗಳು
ಚಂದದ ಹೆಸರಿಟ್ಟವರಿಗೆ ಜಗವು ಹಸಿರಾಗಿರಲು

ಗೆರೆ ಎಳೆದು

ಗೆರೆ ಎಳೆದು ಆ ಪರಿಧಿಯೊಳಗೆ
ನನ್ನ ನಾ ಹುಡುಕುವುದರೊಳಗೆ
ನಿನ್ನೆ ಸರಿದಾಗಿತ್ತು ಆಗಲೇ
ಈ ದಿನ ಪರಿಚಯವಾಗುವಲ್ಲೇ

ಗೆರೆಯಾಚೆಗೊಮ್ಮೆ ದಿಟ್ಟಿಸುವ
ಹಂಬಲ ಆಗಾಗ ಹೊಮ್ಮಿ
ಹೊರಟಿತ್ತು ನನಗದರ
ಅರಿವು ಮೂಡುವ ಮೊದಲೇ

ನಾನೇನು ಸುಮ್ಮನೆ ನಿಂತವನಲ್ಲ
ಎಲ್ಲರಂತೆ ಗೊಂದಲಗಳಿದ್ದವಲ್ಲಾ
ಅವರ ನೋಡಿಯೇ ನನಗೆ
ಪಾಠ ಕಲಿಯಬೇಕಿರಲಿಲ್ಲ ನಿಜವೇ

ಅವರಂತೆ ನಾನಾಗಲೂ ಸಾಧ್ಯವೆ
ಆದರೂ ಅದು ನ್ಯಾಯವೇ
ನನ್ನ ಹಾದಿಯ ಪರಿ ಹುಡುಕುವ
ಯತ್ನದಲೇ ನಾ ಕಳೆದು ಹೋಗಲೇ

ಇದ್ದ ಕ್ಷಣವನು ಒದ್ದು ಇರದ ನಾಳೆಯ
ಬಗ್ಗೆ ಕುರಿಯ ಮಂದೆಯ ಹಾಗೆ
ಮುಗ್ಗರಿಸಿ ಬಿದ್ದು ಎದ್ದು ಮತ್ತದೇ
ಜಾಗಕ್ಕೆ ಸಂಜೆ ಮರಳಿ ಬರಲೇ

ಎಲ್ಲ ಧಿಕ್ಕರಿಸಿ ಕಣ್ಮುಚ್ಚಿ ಒಮ್ಮೆಗೆ
ಗೆರೆಯ ದಾಟಿ ನಾ ಹೊರಟು ಬಿಡಲೇ
ಇರುವಲ್ಲಿ ಮತ್ತೆ ಮರಳಿ ಬರದ ಹಾಗೆ
ಇನ್ನೆಲ್ಲೋ ನನ್ನ ನಾ ಕಂಡುಕೊಳ್ಳಲೇ

ಇದ್ದಲ್ಲೇ ಇದ್ದು ನರಳಿ ನಾರಾಗುವ ಮುನ್ನ
ಕೊನೆಯ ಪುಟವೂ ಓದಿ ಮುಗಿಸುವ ಮುನ್ನ
ಕತ್ತಲ್ಲಲ್ಲೇ ಬದುಕು ಕಳೆದು ಹೋಗುವ ಮುನ್ನ
ಬೆಳಕು ಇರುವಲ್ಲಿಗೇ ಗೆರೆಯಾಚೆಗೊಮ್ಮೆ ನಾ ಓಡಲೇ

May 12, 2008

ನಿನ್ನ ಮನದಂಗಳದಿ

ನಿನ್ನ ಮನದಂಗಳದಿ ನಲಿಯಬೇಕೆಂದಿರುವೆ
ನಿನ್ನ ಕಣ್ಣಿನಾಳದಿ ಜಗವ ಕಾಣಬೇಕೆಂದಿರುವೆ
ನಿನ್ನ ನಗುವಿನಲೇ ಮಗುವಾಗಬೇಕೆಂದಿರುವೆ
ನಿನ್ನ ನೋವಿಗೆ ನಾ ಕಣ್ಣೀರ ಹರಿಸಬೇಕೆಂದಿರುವೆ

ನನ್ನ ಜಡಮನಕೆ ನೀನು ಚಲನ ತಂದಿರುವೆ
ಭಾವವರಿಯದ ನನಗೆ ಬದುಕು ಕಲಿಸಿರುವೆ
ಕಥೆಯು ಮುಗಿಯುವ ಮುನ್ನ ಜೊತೆಗಿರುವೆ
ನೀನನ್ನ ಕತ್ತಲ ಪಯಣಕೆ ಬೆಳಕ ತಂದಿರುವೆ

ಭರಪೂರ ನಾನಿನ್ನ ನೋಡಬೇಕೆಂದಿರುವೆ
ನಿನ್ನ ಮಾತಿನ ಸಿಹಿ ಸವಿಯಬೇಕೆಂದಿರುವೆ
ಮುಂಜಾವಿಗೆ ಕಾದು ಬೆಳಗಾಗಲು ನಾನೆದ್ದು
ಗಡಿಬಿಡಿಗೆ ಬೆರಗಾಗಿ ಅಮ್ಮ ನೋಡಲು ಕದ್ದು

ನನ್ನ ಬದಲಾದ ನಡತೆಗೆ ಉತ್ತರ ನೀನಲ್ಲವೆ
ಒಮ್ಮೆ ನಿನ್ನ ಅಮ್ಮನಿಗೆ ಪರಿಚಯಿಸಿ ಬಿಡುವೆ
ಆಗಲೇ ನನಗೆ ನೆಮ್ಮದಿ, ನಿಟ್ಟುಸಿರು ಚೆಲುವೆ
ಧೈರ್ಯದಿ ದಿನವು ನಿನ್ನ ನೋಡಲು ಬರುವೆ

ನವಿರಾದ ನೂರು ಕಣ್ಣಿನ ನವಿಲಗರಿಯ ಕಾಣಿಕೆ
ಮೃದು ನುಡಿಯ ಮಲ್ಲಿಗೆಗೊಂದು ಮತ್ತಿನಸರ
ನೆನಪಿಗೆ ನಿನ್ನ ಬೆರಳಿಗೊಂದು ಪ್ರೀತಿಯುಂಗುರ
ಜೋಪಾನ ಜಾಣೆ ನನ್ನ ಹೃದಯ ಬಲು ಹಗುರ

May 2, 2008

ಗಾಜಿನರಮನೆಯಲ್ಲಿ*

ಗಾಜಿನರಮನೆ ಕಟ್ಟಿ
ದೃಷ್ಟಿಬೊಂಬೆ ನೆಟ್ಟು
ಹಾದುಹೋಗುವರ ತಟ್ಟಿ
ನೆರೆಹೊರೆ ಮನ ಮುಟ್ಟಿದೆ.

ಸನಿಹ ಬಂದವರನೆಲ್ಲ
ದೂರ ದೂರಕೆ ಸರಿಸಿ
ಮನೆಮಂದಿ ನಡುವೆ
ಅಡ್ಡ ಗೋಡೆಯನಿರಿಸಿದೆ

ನಿಶ್ಚಿಂತನಾಗಲು ಬಯಸಿ
ನಿಶ್ಚಲ ಮನಸ್ಥಿತಿಯನರಸಿ
ನಿಶಾಚರನಾಗಿ ನಿಶೆಯಲಿ
ನಡೆದೆ.

ನೆಮ್ಮದಿ ಹೊರಗಟ್ಟಿ
ಚಿಂತೆ ಒಳಗೇ ಕಟ್ಟಿ
ಸಂತಸವ ಕೊಂಡು
ಕೃತಕ ನಗುವುಂಡೆನು.

ಲೆಕ್ಕಾಚಾರವೆಲ್ಲ
ಅದಲು ಬದಲಾಗಿ
ಒಬ್ಬಂಟಿ ತಾನಾಗಿ
ತನ್ನವರು ಇರದಾಗಿ...

ಮುಂಜಾನೆ ಮುಗಿಬಿದ್ದು
ಮಧ್ಯಾಹ್ನಕೆ ಮೇಲೆದ್ದು ನಿಂತರೆ
ಸಂಜೆ ಸರದಿಯಂತೆ
ಮತ್ತೆ ಅದೇ ಚಿಂತೆ.

Apr 30, 2008

ಭವತೀ ಭಿಕ್ಷಾಂದೇಹಿ

ಭವತೀ ಭಿಕ್ಷಾಂದೇಹಿ ಅಂದ ರಾವಣ
ಸೀತೆಯ ಅಪಹರಿಸಿದ ಲಂಕೆಗೆ
ಅಶೋಕವನದಲಿರಿಸಿದ ಅವಳ
ಬೇಟಿಯಾದ ಹನುಮಂತ
ಕಂಡು ಬಾರಯ್ಯ ಎಂದ
ಮಾತ್ರಕೆ ಸುಟ್ಟು ಬಂದ

ಕಲಿಯುಗವೇನು ಭಿನ್ನವೇ
ಇಲ್ಲಿಹರು ರಾಮ, ಹನುಮ ,
ರಾವಣ, ಸೀತೆಯರು
ಯಂತ್ರ ಮಂತ್ರ ತಂತ್ರ
ಕಲಿತ ಕಿರಾತಕರು
ನಿನ್ನೆ ಇಂದು ನಾಳೆ
ಬಲ್ಲ ಬಲಾಢ್ಯರು

ಕ್ಷಣಕೆ ಇಲ್ಲಿ ಮರುಕ್ಷಣಕೆ ಅಲ್ಲಿ
ಅಲ್ಲಿ ಇಲ್ಲಿ ಎಲ್ಲೆಲ್ಲೂ ಇಹರು
ಇವರ ಮುಂದೆ ಬೇರೆ
ಎಲ್ಲ ಸಪ್ಪೆ, ಇವರಿಂದ
ತಿಳಿಯಬೇಕು ಬೆಟ್ಟದಷ್ಟು
ಇವರು ಯಾರಿಗೇನು
ಕಡಿಮೆ ಬಲ್ಲೆಯೇನು

ರಾಮಾಯಣದೊಳಗೇನಿದೆ
ಕಲಿಯುಗದಲೆಲ್ಲ ಅಡಗಿದೆ
ಶಾಂತಿ, ಸುಖ, ಸಂತಸಕೆ
ಹಣ ಸಾಕಷ್ಟು ಬಳಿಯಿದೆ
ಹಣದ ಮುಂದೆ ಎಲ್ಲ ಗೌಣ
ಧನವೇ ಮೂಲ ಮಂತ್ರ ಜಾಣ
ಮೌಲ್ಯಗಳ ಮೊದಲು ಹಣ
ನೆಮ್ಮದಿಗೆ ಬೇರೇನು ಬೇಕಣ್ಣ

ಏಕೆ ಹೇಗೆ ಎಂಬ ಪ್ರಶ್ನೆ ಬೇಕೆ
ಹಳೆಯ ಪುಟವು ನೆಪ ಮಾತ್ರಕೆ
ಸರಳ ಜೀವನ ಮಂತ್ರವೇಕೆ
ಮೌಲ್ಯದ ನೀತಿಪಾಠಗಳೇಕೆ
ಅದು ಮೀಸಲಿರಲಿ ರಾಮಾಯಣಕೆ
ಕಲಿಯುಗದ ಪಾಪದ ಜನಕೆ

Apr 29, 2008

ಕರುಣಿಸು

ಕರುಣಿಸು ಕಮಲಾಕ್ಷಿ ಕಾಲ ಕಳೆದಾಗಿದೆ
ನೆನಪಿಸು ನೆನ್ನೆಗಳ ಹೆಸರು ಹಸಿರಾಗಿದೆ

ನಿನ್ನೆ ನೆನ್ನೆಗಳ ಬೆಳದಿಂಗಳಿನ ಇರುಳ
ನನ್ನ ನಿನ್ನಯ ನಡುವೆ ನಡೆದ ಬಹಳ

ಮೂಕ ವೀಕ್ಷಕರೆಲ್ಲ, ಅಂಧ ರಕ್ಷಕರೆಲ್ಲ
ಜಾಣರೆಂಬುವರ ಜಗಕೆ ಉತ್ತರವಿಲ್ಲ

ನಿನ್ನೆಗೆ ನೆಲೆಯಿಲ್ಲ, ಇಂದು ನೀನೆ ಎಲ್ಲ
ಇನ್ನು ನಾಳೆ ನಾಳೆಗಳ ಚಿಂತೆ ನನಗಿಲ್ಲ

ಕೂಡಿ ಕಳೆಯುವ ಆಟವಾಡುವ ಜನರು
ಕೂಡಿ ಬಾಳುವ ಪಾಠ ಪಠಿಸುತಿಹರು

ಮುಗುದೆ ಮುನಿಸೇಕೆ ವಿರಸ ನಮಗೇಕೆ
ಬೇಹುಗಾರರ ತಂತ್ರಕೆ ಮಣಿಯಲೇಕೆ

ಇಂದಿರುವ ಕ್ಷಣಗಳು ಮತ್ತೆಂದು ಬಾರದು
ಮುಂಬರುವ ದಿನಗಳ ಲೆಕ್ಕವಿಡಬಾರದು

ಕರುಣಿಸು ಕಲ್ಪತರು ನಿನಗೆ ಕೋಪ ತರವಲ್ಲ
ಜಗದ ಜೊತೆಯಲೇ ಹೋಗುವ ನಿಯಮವಿಲ್ಲ

ಚುನಾವಣೆ ಬಿಸಿ

ಚುನಾವಣೆ ಬಿಸಿಯೇರುತಿದೆ
ಭರವಸೆಗಳ ಮಳೆ ಸುರಿಯುತಿದೆ
ರಾಷ್ಟ್ರೀಯ ಪಕ್ಷಗಳೊಂದಿಗೆ
ಪ್ರಾಂತೀಯ ಪಕ್ಷ ಕಣದಲ್ಲಿದೆ

ಭಿನ್ನ ವಿಭಿನ್ನ ಆಶ್ವಾಸನೆಗಳು
ಬಣ್ಣ ಬಣ್ಣದ ಟೀವಿ, ಸೈಕಲ್ಲುಗಳು
ಎರಡು ರೂಗೆ ಕಿಲೋ ಅಕ್ಕಿ
ಕಡಿಮೆ ಬಡ್ಡಿದರ, ಕೃಷಿ ಸಾಲಮನ್ನಾ

ಉಚಿತ ವಿದ್ಯುತ್ ಸರಬರಾಜು
ಶುದ್ಧ ಕುಡಿಯುವ ನೀರು
ಒಳ ಚಂರಂಡಿ ವ್ಯವಸ್ಥೆ
ನಮಗೆ ಅತ್ಯುತ್ತಮ ರಸ್ತೆ

ಆರೋಪ ಪ್ರತ್ಯಾರೋಪಗಳು
ಅವರ ಪ್ರಣಾಳಿಕೆ ನಮ್ಮದೆ
ನಮ್ಮ ಪ್ರಣಾಳಿಕೆ ಕದ್ದಂತಿದೆ
ಮತದಾತರಿಗೆ ಗೊಂದಲವಾಗಿದೆ

ರಾಜಕಾರಣಿಗಳ ಆಕಾಶವಾಣಿ
ಜ್ಯೋತಿಷಿಗಳ ಭವಿಷ್ಯವಾಣಿ
ಟಿಕೆಟ್ಟಿಗಾಗಿ ಮಾಟಮಂತ್ರ
ಓಲೈಸುವ ತಂತ್ರ ಯಂತ್ರ

ಅಧಿಕಾರದ ಲಾಲಸೆಗೆ
ಹಣದ ವ್ಯಾಮೋಹಕೆ
ಮುದುಕರು ಮತಿಗೆಟ್ಟು
ಕುಣಿವರು ಮೂರೂಬಿಟ್ಟು

ಬಂಡಾಯ ಭುಗಿಲೆದ್ದಿದೆ
ಅಟ್ಟಹಾಸ ಮೆರೆಯುತಿದೆ
ಹಣದ ಅಹಂಕಾರ ಕುಣಿದು
ವಿಕೃತ ಪ್ರದರ್ಶನ ನೀಡಿದೆ

ವಿಚಿತ್ರ ಘೋಷಣೆಗಳು
ವಿಶೇಷ ಸೂಚನೆಗಳು
ಗ್ರಾಮೀಣಪರ ನೀತಿಗಳು
ನಗರಪರ ಯೋಜನೆಗಳು

ಹೇಳುವುದೊಂದು ಮಾಡುವುದೊಂದು
ಹತ್ತುಕೋಟಿ ನಗದು, ಕೋಟಿಗಳ ಮದ್ಯ
ಇಪ್ಪತ್ತು ಲಕ್ಷ ಮೌಲ್ಯದ ಸೀರೆ ಸಿಕ್ಕಿತ್ತು
ಸಿಗದಿದ್ದು ಇನ್ನೂ ಎಷ್ಟೋ ಇದ್ದೀತು

ಬುಡಬುಡುಕೆ ಬೂಟಾಟಿಕೆ
ಜನ ನಂಬುವರೆಂಬ ನಂಬಿಕೆ
ನಾಚಿಕೆ ಪರಿಚಯವಿಲ್ಲದಕೆ
ನೈತಿಕತೆ ನೀತಿಪಾಠ ಬೇಕೆ

ಅಧಮರಲ್ಲಿ ಉತ್ತಮನಿಗೆ
ಮತನೀಡುವ ಅನಿವಾರ್ಯತೆ
ಹಣ ಚೆಲ್ಲುವ ಅಂಧರಿಗೆ
ಪಾಠ ಕಲಿಸವ ಅವಶ್ಯಕತೆ

ಮುದುಕರಲ್ಲಿ ಯುವಕರ
ಯುವಕರಲ್ಲಿ ಅರಿತವರ
ಅವಕಾಶವಿರೆ ಹೊಸಬರ
ಖಚಿತ ಕನ್ನಡಿಗರ ಆರಿಸಿ

Apr 28, 2008

ಹನಿಗಳು*

- 1 -

ಮುತ್ತಿಗಾಗಿ
ಮುತ್ತಿನಸರ
ಮತ್ತಿಗಾಗಿ
ಮದ್ಯಸಾರ.

- 2 -

ಒಲವಿಗಾಗಿ
ಬಾಲೆ
ಬಾಲೆಗಾಗಿ
ಬಲೆ.

- 3 -

ನೀರೆಗಾಗಿ
ಸೀರೆ
ಸೀರೆಗಾಗಿ
ಸೆರೆ.

- 4 -

ನಡೆಯುವಾಗ
ನವಾಬ
ನಡೆಯದಾಗ
ಗರೀಬ.

- 5 -

ನಲಿವಿನಾಗ
ಕಬಾಬು
ನೋವಿನಾಗ
ಶರಾಬು

- 6 -

ಗೆಳತಿಗಾಗಿ
ಗುಲಾಬಿ
ಮಡದಿಗಾಗಿ
ಗೋಬಿ

- 7 -

ಹೆಂಡತಿಯಿಂದಾಗಿ
ಹೆಂಡ
ಹೆಂಡದಿಂದಾಗಿ
ದಂಡ.

- 8 -

ಹುಡುಗಿಗಾಗಿ
ಹೂವಾಡಿಗ
ಮಡದಿಗಾಗಿ
ಹಾವಾಡಿಗ.


- 9 -

ನೀ ನಕ್ಕರೆ
ಬರುವೆ
ನೀ ನಗದಿದ್ದರೆ
ಬರವೆ.

- 10 -

ನೀ ಸಿಕ್ಕರೆ
ಸಕ್ಕರೆ
ನೀ ಸಿಗದಿದ್ದಾಗ
ಸಿಗಾರೇ.

- 11 -

ನೀ ಜೊತೆಗಿದ್ದರೆ
ಮೋಜು
ನೀನಿರದಿದ್ದರೆ
ಜೂಜು

- 12 -

ಸುಮ್ಮನಿದ್ದರೆ
ಸಿಗುವೆ
ಸಿಗದಿದ್ದರೆ
ಇರುವೆ.

ತವರೂರ ನೆನಪ

ತಂಗಾಳಿ ಬೀಸುತ ತಂದಿತು ತವರೂರ ನೆನಪ
ಸದಾ ಬೆಳಗುತಿರಲಿ ಆ ಮನೆಯ ನಂದಾದೀಪ

ಮನೆಯಂಗಳದಿ ಅಮ್ಮ ರಂಗೋಲಿಯ ಬಿಡಿಸಿ
ಒಳ ಹೊರಗೆ ನಿಲ್ಲದಲೇ ಎಲ್ಲರ ನಿದ್ದೆಯಿಂದೆಬ್ಬಿಸಿ

ನನ್ನಪ್ಪನಂದು ಪೇಟೆಗೆ ಹೊರಡುವ ಸಮಯ
ಪಟ್ಟಿ ಮರೆಯದಿರಿ ಎನುವ ಅಮ್ಮನ ವಿನಯ

ಆಕಳು ಬಿಡಿಸಿ ಹಾಲುಣಿಸುವುದು ತಮ್ಮನ ಕೆಲಸ
ಶಾಲೆಗೆ ಹೊರಡುವ ತಯಾರಿಗಿಲ್ಲ ಒಂದು ನಿಮಿಶ

ಕರಿಯ ಕಂಬಳಿಯೆಸೆದು ಹೊರಟ ಹಸುಗಳೊಂದಿಗೆ
ನೀರು ಹರಿಸಲು ತೋಟದ ಕಡೆಗೆ ಸನಿಕೆಯೊಂದಿಗೆ

ಬೆಲ್ಲದುಂಡೆಯ ಬಿಸಿ ಬಿಸಿ ಕಾಫಿ ನನ್ನಜ್ಜಿಯ ಕರೆದಿತ್ತು
ಹಗಲೆಲ್ಲ ಹಬ್ಬರಿಸಲು ಅವಳಿಗಿದರಿಂದ ಶಕ್ತಿ ಸಿಕ್ಕೀತು

Apr 26, 2008

ಛಲಗಾತಿ

ಛಲಗಾತಿ ನನ್ನೊಡತಿ ಮುನಿಸವಳ ಮೂಗುತಿ
ಕನವರಿಕೆ ನೆಪವಷ್ಟೇ ದಿಟ ನುಡಿದ ಮಾರುತಿ

ಮುಂಗೋಪ ಮುಖದವಳ ಸಿಡುಕು ಸಿಂಗಾರ
ಮಣಿಯುವೆನು ಜಾಣ ನನ್ನ ಬದುಕು ಬಂಗಾರ

ದೂರ ದೂರಕೇ ಇರಲಿ ಹಸಿರಾದರೇನಂತೆ
ಹತ್ತಿರವಿರುವ ಜಗವು ಅವಳ ನಿಯಮದಂತೆ

ದುಡುಕಿದರೆ ಮರುಕ್ಷಣವೇ ದಾರಿ ಕಾಣದಯ್ಯ
ಬಯಸಿ ಬೇಡಿದರು ಬಳಿಗೆ ಬೆಳಕರಿಯದಯ್ಯ

ಹುಲಿರಾಯ ನಾ ಹೊರಗೆ ಒಳಗೆ ಇಲಿಯಂತೆ
ಇದ್ದರಾಯಿತು ಗೆಳೆಯ ನನಗಿರದಾಗ ಚಿಂತೆ

ಶನಿವಾರ ಸಂತೆಗೆ ತಡಮಾಡಿದೆ ಬೇಕಂತೆ
ರವಿವಾರ ಖಚಿತ ನನ್ನ ಮುಖ ಬಾಡಿದಂತೆ

ಅಂದು ಮಂಗಳವಾರ ಮಡದಿ ಮನೆಯಲ್ಲಿಲ್ಲ
ಬಿಡದಿಯ ಬಸ್ಸತ್ತಿದವಳು ಮತ್ತೆ ಇಳಿದಿರಲಿಲ್ಲ

ಗೊಂದಲದ ಗೂಡಿನೊಳಗೆ

ದಟ್ಟ ಕಾಡಿನ ಮಧ್ಯೆ ಎತ್ತರದ ಮರದಲ್ಲಿ
ಗೊಂದಲದ ಗೂಡಿನೊಳಗೆ ನಿದ್ರಿಸುವ
ನಟನೆಯಲಿ ಹಗಲುಗನಸು ಕಾಣುತ್ತಿರೆ
ಸುತ್ತಲಿನ ಹಸಿರು ಹೊರ ಜಗಕೆ ಹಣತೆ

ನಿಟ್ಟುಸಿರನಿಟ್ಟು ಮತ್ತದೇ ಸಾಗರದಲಿ
ದಿಕ್ಕೆಟ್ಟ ಹಕ್ಕಿಯಂತೆ ದುಗುಡದಿಂದಿರೆ
ಚಟ ಪಟನೆ ರೆಕ್ಕೆ ಹೊಡೆದು ಮೋಹಕ
ಮೊಗದವಳು ಪಟ ಪಟನೆ ಹಾರುತಲಿ

ರೆಂಬೆ ಕೊಂಬೆಗಳಲಿ ನಿಂತು ನಿಲ್ಲದೆ
ಹಾಗೆ ನಗುವ ಕಾರಂಜಿ ಹೊಮ್ಮಿಸಿತ್ತು
ಕ್ಷಣದಲೇ ಮರೆತೆ ನೋಡುತ ಬೆರಗಾದೆ
ನಿತ್ಯ ಸೌಂದರ್ಯವತಿ ರೋಮಾಂಚನ

ಅಂಬೆಗಾಲಿಡುತ ತೊದಲ ಮಾತಿನಲಿ
ಮೆಲ್ಲ ಮೆಲ್ಲಗೆ ಹಾಗೆ ಹತ್ತಿರ ಹೋಗಲು
ಎದೆಯ ಏರಿಳಿತದ ವೇಗ ಕೇಳಿಸಿತ್ತು
ಮೈ ಬೆವರಿದರು ಸಹಜತೆ ಬಯಸಿತ್ತು

ದಟ್ಟ ಕಾಡಲ್ಲಿ ಗೊಂದಲದ ಗೂಡಿನಲಿ
ಕಳೆದು ಹೋಗುವ ಭಯ ಕಾಡುತ್ತಿತ್ತು
ಎದುರಾದ ಅಡತಡೆಗಳ ದಾಟದಲೆ
ನೂರೆಂಟು ನೆವಗಳನು ಹುಡುಕುತ್ತಿತ್ತು

ಎದುರಿದ್ದ ಚಂಚಲೆ ಮಿಂಚಂತೆ ಬಂದಳೆ
ಕಳೆದುಕೊಂಡರೆ ಮತ್ತೆ ನೆನಪಾಗುವಳೆ
ದಿಕ್ಕೆಟ್ಟ ಬದುಕಿಗೆ ಬೆಳಕಾಗಿ ಬಂದವಳು
ಆಗಲೇ ಸ್ಪಷ್ಟ ಗುರಿಯೊಂದ ಮುಂದಿಟ್ಟಳೆ

Apr 24, 2008

ನನ್ನದೇ...

ನನ್ನದೇ ...
ಈ ಭೂಮಿ, ಆ ಆಕಾಶ
ಆ ಸೂರ್ಯ, ಆ ಚಂದ್ರ
ಈ ಗಾಳಿ, ಈ ಬೆಳಕು
ಆ ಕತ್ತಲು, ಆ ಬೆಳದಿಂಗಳು

ನನ್ನದೇ... ಎಲ್ಲ ನನ್ನದೆ

ನನ್ನದೇ ...
ಈ ಕಣ್ಣು, ಈ ಬಣ್ಣ
ಈ ಸ್ಪರ್ಷ, ಈ ಹರ್ಷ
ಈ ನೋಟ, ಈ ಆಟ
ಈ ಉಸಿರು, ಈ ಹಸಿರು

ನನ್ನದೇ... ಎಲ್ಲ ನನ್ನದೆ

ನನ್ನದೇ ...
ಈ ಮನ, ಈ ಜನ
ಈ ರಸ್ತೆ, ಈ ಓಣಿ
ಈ ಊರು, ಈ ಭಾಷೆ
ಈ ನಾಡು, ಈ ದೇಶ
ನನ್ನದೇ... ಎಲ್ಲ ನನ್ನದೆ

ನನ್ನದೇ ...
ಆ ಹಣ್ಣು, ಆ ಹೂವು
ಆ ಚಿಗುರು, ಆ ನೆರಳು
ಆ ಹಕ್ಕಿ, ಆ ಚುಕ್ಕಿ
ಆ ಮಿಂಚು, ಮಳೆಬಿಲ್ಲು
ನನ್ನದೇ... ಎಲ್ಲ ನನ್ನದೆ

ನನ್ನದೇ ...
ಆ ಗುಡ್ಡ, ಆ ಕಾಡು
ಈ ನವಿಲು, ಆ ಮುಗಿಲು
ಈ ನದಿ, ಈ ಸಾಗರ
ಆ ಜಲಚರ, ಆ ವಿಸ್ಮಯ
ನನ್ನದೇ... ಎಲ್ಲ ನನ್ನದೆ

ನನ್ನದೇ... ಎಲ್ಲ ನನ್ನದೆ

ಇರುವುದನೆಲ್ಲಾ ಇದ್ದಂತಿರಿಸಿ
ಇರದುದಕೆಲ್ಲಾ ಆಸೆಗಳಿರಿಸಿ
ಇರುವುದು ನನ್ನದೇ,
ಇರದುದು ನನ್ನದೇ,

ನನ್ನದೇ... ಎಲ್ಲ ನನ್ನದೆ

ಓಡುತಿಹರು

ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ಮುಗಿಬಿದ್ದು
ಗುಳೆ ಎದ್ದು
ಅತ್ತಿತ್ತ ನೋಡದೆ
ತಿರುಗಿ ಮಾತಾಡದೆ
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ನೆಟ್ಟು ನೇರಕೆ ನೋಟ
ಬಿಟ್ಟು ಚಂದದ ತೋಟ
ಕೆಟ್ಟ ಮಂದಿಯ ಕಾಟ
ತಿಳಿಯದಾಗಿದೆ ಆಟ
ಆದರೂ ...
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ಅಂಕು ಡೊಂಕಿನ ಮೈಮಾಟ
ತಳಕು ಬಳುಕಿನ ಜೂಜಾಟ
ಬಣ್ಣ ಬಣ್ಣದ ಲೈಟು
ಅರ್ಥವಾಗದ ಬೀಟು
ಆಗಿ ಇದರಲೇ ಟೈಟು
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ಬಹಳ ವೇಗದ ಓಟ
ಎಡವಿ ಬಿದ್ದರೆ ಟಾಟಾ
ಸುಮ್ಮನಿದ್ದರೆ ಔಟು
ಬಾರದಿದ್ದರೆ ಏಟು
ದಿನವು ...
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ತಂದೆ ತಾಯಿಯ ಚಟ
ಮಡದಿ ಮಕ್ಕಳ ಕೂಟ
ಅಕ್ಕ ಪಕ್ಕದ ಸೈಟು
ನಿದ್ದೆ ಬಾರದ ನೈಟು
ನಿಲ್ಲದೆ ...
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

Apr 23, 2008

ಬದುಕು ಬೆತ್ತಲು

ಅಯ್ಯ ಕೇಳಾ ಬದುಕು ಬೆತ್ತಲು
ಸುತ್ತ ಮುತ್ತಿದೆ ಕುಹು ಕಗ್ಗತ್ತಲು
ಬೇಡ ಎನಗೆ ಮಹಡಿ ಮಹಲು
ಸಾಕು ಮೂರು ತುತ್ತು ತಿನ್ನಲು

ಕಾಸು, ಕನಸುಗಳಿರಲು ಲೇಸು
ಕಷ್ಟ ನಷ್ಟಗಳಿರಲು ಸೊಗಸು
ಇರುವುದೆಲ್ಲಾ ಇರಲಿ ನಿನಗೆ
ಇರದುದೆಲ್ಲಾ ಬರಲಿ ನನಗೆ

ಹಗಲುಗನಸು, ಹಗಲುವೇಶ
ಹೊತ್ತುಕೊಂಡು ನೂರು ಕಲಶ
ಪಾಪ ಕಾರ್ಯಗಳಲ್ಲಿ ಹರುಶ
ತೊದಲು ನುಡಿಗಳಿಗೆಲ್ಲಿ ಕೆಲಸ

ಸಿರಿಯ ಪೊಗರು ಸಹಜ ಜೋರು
ವ್ಯಗ್ರ ವರ್ತನೆ ದಿನವು ಅರ್ಪಣೆ
ಕಹಿಗೆ ಸೀಮಿತ ಸಿಹಿಯ ರಹಿತ
ಇರುವೆನಯ್ಯ ಮೌನ ಸಹಿಸುತ

ಧರೆಯು ನಿನ್ನದೆ, ಧನವು ನಿನ್ನದೆ
ದೊರೆಯು ನೀನೆ, ಧಣಿಯು ನೀನೆ
ಧಿಮಾಕು ನಿನ್ನದೆ, ಆರ್ಭಟ ನಿನ್ನದೆ
ದಣಿದಿರುವೆನಾದರು ಸುಮ್ಮನಿರುವೆ

ನನ್ನ ಬದುಕು ನನಗೆ ಬಿಟ್ಟುಬಿಡಿ
ನನ್ನ ಹಸಿವಿಗೆ ಹುಸಿ ಬೆಳಕ ನೀಡಿ
ನನ್ನ ನೆಮ್ಮದಿಗೆ ಭಂಗ ತರದಿರಿ
ನನ್ನ ನಗುವಲೇ ಎಲ್ಲ ಮರೆವೆನು

Apr 22, 2008

ಮುದ್ದು ಮಗುವೆ

ಮುದ್ದು ಮಗುವೆ ನನ್ನ ಜಗವೆ
ಸದ್ದು ಮಾಡಿ ಬಿದ್ದು ನಗುವೆ
ನಗುವ ನಲಿವ ತರವೆ ದಿನವು
ನೀನಿರುವ ಮನೆಯೆ ಸ್ವರ್ಗವು

ಎದ್ದು ಬಿದ್ದು, ಬಿದ್ದು ಎದ್ದು
ಮರಳು, ಮಣ್ಣು, ಜಲ್ಲಿಕಲ್ಲು
ಸಿಗುವ ನೀರಿನಲ್ಲಿ ನೆನೆದು
ಮೈ ಮುಖಕೆ ಬಣ್ಣದ ಓಕುಳಿ

ನಿನಗಿಲ್ಲ ಯಾವ ಬದ್ಧತೆ
ಇರುವುದೊಂದೇ ಮುಗ್ಧತೆ
ಮುಂಜಾಗ್ರತೆ ನಿನ್ನ ಕೊರತೆ
ಇದೇ ನನಗೆ ಬಿಡದ ಚಿಂತೆ

ನೇರ ಮುಖಾಮುಖಿಯೊಂದಿಗೆ
ಮುಖವಾಡ ಕಳಚಿಬಿತ್ತು ಮಂದಿಗೆ
ನೀನು ಸದಾ ನಗುವ ಕಾರಂಜಿ
ಈ ಬಾಳ ಅಪೂರ್ವ ಅಪರಂಜಿ

ಮುಗ್ಗರಿಸದಿರು ಮುದ್ದು ಮಗುವೆ
ನಿನ್ನ ನೋವು ಸಹಿಸಲು ಅಸಾಧ್ಯ
ನಿನಗೆ ತಿಳಿಹೇಳಲು ಕಷ್ಟಸಾಧ್ಯ
ಈ ಅಸಹಾಯಕತೆ ನನ್ನ ವ್ಯಥೆ

Apr 21, 2008

ಸೀಮಿತ

ಇತಿಮಿತಿಗಳ ಸೀಮಿತದಲೇ ನಡೆ
ಅಲ್ಲಿ ಕಾಣುವೆ ಪರದಾಡುವ ಪಡೆ
ಗೆರೆಯಾಚೆ ಈಚೆಗೆ ಜಗ ನೋಡೋ
ಕುತೂಹಲ ಸಹಜ ಎಲ್ಲರಿಗೆ

ಸುತ್ತಲೂ ಇಹವು ಎಷ್ಟೊಂದು ರೇಖೆ
ದಿಟ್ಟಸಿ ನೋಡಲು ಹೊಮ್ಮಿತ್ತು ಸೆಕೆ
ಮತಿಗೆಟ್ಟು ಎಡವಿ ಬಿದ್ದಿತ್ತು ಮನ
ನಿಲ್ಲದಂತಿತ್ತು ಇತಿಮಿತಿಗಳ ಜನನ

ಆತ್ಮಸ್ಥೈರ್ಯ, ದಿಟ್ಟ ಪರಿಶ್ರಮ
ಮರಳಿಯತ್ನ ಮಾಡುವ ಛಲ
ಪುಸ್ತಕದ ಬದನೇಕಾಯಿ
ಒಮ್ಮೆ ನೋಡು ಹೊರ ಜಗವ

ಮತಿಹೀನ ಬಲಹೀನ ಆದರೂ
ಬಹಳವೇ ಬೇಕಿತ್ತು ಅದಕಿಷ್ಟು ಜೇನು
ಇಷ್ಟಿಷ್ಟೇ ಎಲ್ಲದಕೂ ಇಡುತಲೇ ಕೊಕ್ಕು
ಮುಂದೆ ಸಾಗಲು ಹೇಗೆ ಇಲ್ಲವೇ ಕಿಕ್ಕು

ಮನೆಯಂಗಳದಿ ಹುಡುಕು ಸುಖ ಶಾಂತಿ
ಹೊರಗೇನಿಹುದು ಎಂಬ ತಾಕೀತು
ಆದರೂ ಹುಚ್ಚು ಮನ ಸುಮ್ಮನಿರಲೊಪ್ಪದು
ಧಿಮಾಕು ದೊಡ್ಡವರ ಭಯ ತಪ್ಪದು

ಹತ್ತರ ನಂತರ ಹನ್ನೊಂದು ಖಚಿತ
ಅಲ್ಲಿ ಏನೂ ಇಲ್ಲವೆಂಬುದೂ ನಿಶ್ಚಿತ
ಅನುಭವದ ಮಾತು ತಮ್ಮ ನಂಬು
ಇಲ್ಲವಾದರೇ ಖಂಡಿತ ನಿನಗೆ ಚಂಬು

ಗಣಪ ಸುತ್ತಿದ್ದು ಮಾತಾಪಿತರ ಸುತ್ತ
ಸುತ್ತೋಲೆ ಹೊರಡಿಸಿದ ಜಗದ ಸುತ್ತ
ಸುಬ್ರಮಣ್ಯನೇನು ಅಷ್ಟು ಮೂರ್ಖನೇ
ಅವನ ಅನುಭವಕ್ಕಿಲ್ಲವೇ ಸ್ವಲ್ಪ ಬೆಲೆ

ಇತಿಮಿತಿಗಳು ಸಹಜ ಒಪ್ಪುವೆನು ನಿಜ
ನೆಪವಲ್ಲ ಇಹವೊಂದು ದೊಡ್ಡ ಖನಿಜ
ಗೆರೆಯಾಚೆಗೊಮ್ಮೆ ಬಂದು ನೋಡಾ
ನಂತರ ಮಾತಾಡೋ ಮಹಾಶೂರ

ಮೌನವಾಗಿ ಜನನ

ಮೌನವಾಗಿ ಜನನ ಮರುಘಳಿಗೆ ಶುರು ಕದನ
ಮೂಲ ನೆಪವಷ್ಟೇ ಹಿಂದೆ ತಿರುಗದವಳ
ಇನ್ನು ಇರದ ಹಾದಿಯ ಬಗ್ಗೆ ಚಿಂತಿಸುವಳೇ
ಇದ್ದ ಇರದುದರ ಮೇಲೆದ್ದು ನಡೆಯುವವಳ
ಅಡತಡೆಗಳಿಗೆ ಎದೆಗೊಟ್ಟು ಗುಡುಗುವವಳ
ಹಿಂಬಾಲಕರಿಗೆ ಹಿತವ ಬಯಸುತಲೇ
ನಿಲ್ಲದಲೇ ಎಲ್ಲೂ ನಲಿದಾಡುವವಳು

ಜಡಿಮಳೆ ಸದ್ದಿಗೆ ಜಗ್ಗುವವಳಿವಳಲ್ಲ
ಕವಿದ ಕಾರ್ಮೋಡಗಳ ಗುಡುಗು
ಮಿಂಚುಗಳಿವಳಿಗೆ ಹೊಸತಲ್ಲ
ಹಗಲಿರಲಿ ಇರುಳಿರಲಿ ಅದರ ಪರಿವಿಲ್ಲ
ನಿತ್ಯ ನುಸುಳುವ ಛಲವ ಬಿಡಲೊಲ್ಲದೆ
ಬಿಸಿಲಿರಲಿ ನೆರಳಿರಲಿ ನಿರ್ಲಿಪ್ತವೇ ಮುಖದಲ್ಲಿ
ಸಿಕ್ಕ ಸನ್ನಿವೇಶಗಳಿಂದ ಸ್ಪೂರ್ತಿ ಪಡೆಯುತಲೇ
ನೇರ ಮುಖಾಮುಖಿ ಇವಳ ಜಗದ ನಿಯಮ

ಸಿಡುಕು, ಸಿಂಗಾರಗಳ ಕೊರತೆ ಇರದವಳು
ಸರಳ ಸಜ್ಜನಿಕೆಯಿಂದ ನವರಸಗಳ
ರುಚಿಯ ನೀಡುವವಳು
ಬಿಂಕ ಬಿನ್ನಾಣಗಳ ಜೊತೆ ಜೋರು
ಹುಳಿ ಒಗರಿನ ಪೊಗರು ನೆನಪಿರಲಿ
ಸುಳಿಗೆ ಸಿಕ್ಕಿದವರ ಸೆರಗಿನಿಂದ
ಸುತ್ತಿ ಸೆಳೆಯುವಳು ಜೋಕೆ
ಜಾರು ಮನವನು ಬಿಗಿದಿಟ್ಟು
ಎಚ್ಚರದಿ ನಡೆ ನೀನದರ ಬಳಿಗೆ

Apr 4, 2008

ಎರಡೇ ಎರಡು ತುತ್ತು

ಕಾವೇರಿ ಮಳೆಯ ಕೃಪೆಯಿಂದ
ಈಗ ತಣ್ಣಗಿದ್ದಂತಿದೆ
ಜನತೆಗೆ, ಉಲ್ಲಾಸ, ಉತ್ಸಾಹ
ಹಾಗು ಕುತೂಹಲ ಭರಿತ
ಮನರಂಜನೆಯೊಂದಿಗೆ
ಟ್ವೆಂಟಿ ಟ್ವೆಂಟಿ ಸಿಎಂ ಕಪ್
ಅಮೋಘ ಪ್ರದರ್ಶನ ಕಂಡಿದೆ

ಅತ್ತ ಮೋದಿಯ ಮೋಡಿ
ಇತ್ತ ಮಯಾವತಿ ಮಾಯೆ
ರೈಲು ಲಾಲು ಬಿಟ್ಟ ರೀಲು
ಚಿದಂಬ “ರಂ” ಚಮತ್ಕಾರ
ರಾಜ್ ಠಾಕ್ರೆ ಬಿಹಾರಿ ಬಹಿಷ್ಕಾರ
ಗುಜರಾತ್ ಮಾದರಿ ಅಭಿವೃದ್ಧಿ
ಠಾಕ್ರೆ ಮಾದರಿ ಹೊರಾಟಕ್ಕೆ
ಸ್ಥಳೀಯ ತಳಿಗಳ ತಡಕಾಟ
ಅಲ್ಪವಿರಾಮ ಕಂಡಿದೆ

ಕಮರ್ಷಿಯಲ್ ಬ್ರೇಕ್ ನಂತರ
ಹೊಗೇನಕಲ್ ಜಲಪಾತಕ್ಕೆ
ಈಗ ಜಾತಕ ಕೂಡಿ ಬಂದಿದೆ
ಕೋರ್ಟು, ಕಛೇರಿ ಇದ್ದೇ ಇದೆ
ಎದ್ದು ಬಿದ್ದು, ಬಿದ್ದು ಎದ್ದು
ಸಿಕ್ಕ ಸುವರ್ಣಾವಕಾಶ
ಸುಮ್ಮನಿರಲಾದೀತೆ

ಹೋಟಲ್ ಬಂದ್, ಸಿನಿಮಾ ಬಂದ್
ತಮಿಲು ಚಾನೆಲ್ಲುಗಳು ಗಪ್ ಚುಪ್
ಬಸ್ಸು ಲಾರಿಗಳಿಗೆ ಸಾಕಷ್ಟು ಕಿಕ್
ಅತ್ತ ಮಚ್ಚು, ಇತ್ತ ಲಾಂಗ್
ಇನ್ನೇಕೆ ತಡ ಕೊಚ್ಚು ಮಗ
ಅಸಹಾಯಕ ಬಡವರ
ನೂರು ರೂಪಾಯಿಗೆ
ಸಿಕ್ಕೇ ಸಿಗ್ತಾರ

ಇದ್ದವರು ಜುಮ್... ಅಂಥ ಇರ್ತಾರ
ಬರ್ತಾರ, ಹೇಳ್ತಾರ, ಎದ್ದು ಹೋಗ್ತಾರ
ಇರದವರು ಅನಾಯಸವಾಗಿ,
ಇವರ ಬಲೆಗೆ ಸಿಗ್ತಾರ
ಗುಂಡೀಗೆ ಬೀಳ್ತಾರ
ಬದುಕಿದ್ರೆ ನಗ್ತಾರ
ಇಲ್ದಿದ್ರೆ ಅಟೇ
ಮರಿತ್ಬಿಡ್ತಾರ

ಅಯ್ಯೋ ಶಿವನೇ ಫ್ರೀ ಪಬ್ಲಿಸಿಟೀಗೆ ಇಟೆಲ್ಲಾ ಮಾಡ್ತಾರ
ಇದ್ದ ಬದ್ದ ಚಾನಲ್ಗಳೆಲ್ಲಾ ಇದೇ ತೋರಿಸ್ತಾರ
ಮುಂಜಾನೆ ಪೇಪರ್ನೋರು ಇದೇ ಬರೀತಾರ
ಸಾಲದ್ದಕ್ಕೆ ಬುದ್ಧಿಜೀವಿಗಳು ಸುಮ್ಮನಿರುವರೇ
ಇದನ್ನೇ ವಿಮರ್ಶೆ, ವಿಶ್ಲೇಷಣೆ ಮಾಡಿ
ಉಪ್ಪು, ಖಾರ ಹಾಕಿ ಅವರ
ಹೊಟ್ಟೆ ತುಂಬಿಸ್ಕೊತಾರ

ಮಧ್ಯಮ, ಮೇಲ್ಮಧ್ಯಮ ವರ್ಗದವರು ಇದನ್ನೇ
ಮನರಂಜನೆಗಾಗಿ ನೋಡಿ, ನೋಡಿ
ಅವರ ಕಷ್ಟಗಳ ಸ್ವಲ್ಪ ಮಟ್ಟಿಗೆ
ಸಮಾಧಾನ ಮಾಡ್ಕೊಂಡು
ಅದೇ ಮಾತಾಡ್ತಾ ಮತಾಡ್ತಾ
ದಿನ ದೂಡ್ತಾರ

ಹೆಸರು, ಟಿಕಟ್ಟು, ಮತಗಳು, ಅಧಿಕಾರ ಅವರಿಗೆ,
ಮಾಧ್ಯಮದವರಿಗೆ ಭರ್ಜರಿ ವ್ಯಾಪಾರ
ಜನ ಸಾಮಾನ್ಯರಿಗೆ ಮನರಂಜನೆ
ಮಿಕ್ಕವರಿಗೆ ಅದೃಷ್ಟ ಚೆನ್ನಾಗಿದ್ರೆ
ಎರಡೇ ಎರಡು ತುತ್ತು
ಅಟೇಯ

ಗೆಳೆಯ

ಹೊರಡ ಬೇಡವೋ ಗೆಳೆಯ
ಹೊರೆಟೆಯಾದರೂ ಎಲ್ಲಿಗೆ
ಕಳೆದ ನೆನ್ನೆಯ ನೆನಪುಗಳು
ಬೆನ್ನತ್ತಿ ಬರುವವು ನಿನ್ನಲ್ಲಿಗೆ

ಸ್ನೇಹದಿಂದ ಕೊಡ ತುಂಬಿತ್ತು
ಇಟ್ಟವರಾರದಕೆ ಸಣ್ಣ ತೂತು
ಸೋರುತಿದೆ, ಸಹಜ ಕೊಡಕೆ
ಖಾಲಿಯಾದೀತೆಂಬ ಭಯಕೆ

ಮನಸಿಗೇನೋ ಕೊರತೆ ಇದೆ
ಪ್ರಶ್ನೆಗಳೆಷ್ಟೋ ಕೇಳುವುದಿದೆ
ತಕ್ಷಣಕೇ ಉತ್ತರ ಸಿಗದಂತಿದೆ
ಮೌನವಾಗೇ ಪರೀಕ್ಷೆ ಬರೆದಿದೆ

ದುಗುಡವೇಕೊ ಒಳ ಹೊಕ್ಕಿದೆ
ತಿಳಿಯದುದನೇ ಹುಡುಕುತಿದೆ
ಸಹನೆ ಎಲ್ಲೆ ಮೀರಿ ಸಹಕರಿಸದೆ
ಕಾದ ಕಾವಲಿಯಾಗಿ ಕಾಯುತಿದೆ

ಸೋರುತಿಹ ಕೊಡ ತುಂಬಿಸಲೇ
ಸಣ್ಣ ತೂತನು ಮುಚ್ಚಲೆತ್ನಿಸಲೇ
ಸನ್ನಿವೇಶ ನೋಡಿ ಸುಮ್ಮನಿರಲೇ
ಕಾಲಚಕ್ರದಲಿ ಕಳೆದು ಹೋಗಲೇ

ನಿನ್ನ ಅಗಲಿಕೆಗೆ ದುಃಖ ನನಗೇಕೆ
ಅತ್ತಿತ್ತ ಉತ್ತರಕೆ ನಾ ಹುಡುಕಲೇಕೆ
ಭಾವಗಳನೆಲ್ಲ ಬಿಗಿದಿಡಲಿ ಹೇಗೆ
ಎನ್ನ ಭವದ ಕೇಡಿಗೆ ದೂರಲೇಕೆ

ನಿನ್ನ ದಾರಿ ಯಾವುದಾದರೇನು
ನೀನಿದ್ದ ಮನೆಯ ಬಿಟ್ಟರೇನು
ಹೋಗು ಗೆಳೆಯ ನೆಲೆಯ ತಿಳಿಸಿ
ಬರುವೆ ನಾನು ಜೊತೆಯ ಬಯಸಿ

Apr 3, 2008

ಹಿಲರಿ ಒಬಾಮ

ಅಮೇರಿಕದಲ್ಲಿ ಹಿಲರಿ, ಬರಾಕ್ ಒಬಾಮ
ಕರಿಯರ ಬಿಳಿಯರ ನಡುವೆ ಸಂಗ್ರಾಮ
ಇಲ್ಲಿ ಯಡ್ಯೂರಿ, ಕೃಷ್ಣ, ಕುಮಾರ ರಾಮ
ಕುಲಗಳ ಕಣದಲಿ ಗೆದ್ದವನಿಗೇ ಸಂಭ್ರಮ

ಜಾತಿ ಲೆಕ್ಕಾಚಾರ ಮಾಡುವರು ಅಪಾರ
ಭ್ರಷ್ಟಾಚಾರದ ಆರೋಪಗಳು ಅವರಿವರ
ರೈತರ ಸಾಲಮನ್ನಾ, ಕಡಿಮೆ ಬಡ್ಡಿದರ
ಅಭಿವೃದ್ಧಿ ಮಂತ್ರ, ಚಂದದ ಮುಂಗಡಪತ್ರ

ಬದಲಾವಣೆಗಾಗಿ ಬರಾಕ್ ಒಬಾಮ
ಮೊದಲ ಮಹಿಳಾ ಅಮೇರಿಕ ಅಧ್ಯಕ್ಷೆ
ಸ್ಥಾನಕೆ ಹಿಲರಿ ಕ್ಲಿಂಟನ್ ದಿಟ್ಟ ಪರಿಶ್ರಮ
ಕಾದುನೋಡುವುದೇ ನಮ್ಮ ಸದ್ಯದ ಕ್ರಮ

ಅಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ
ಅಧ್ಯಕ್ಷಗಿರಿಗೆ ಅವರಿಬ್ಬರ ಮಧ್ಯೆ ಹೋರಾಟ
ಇಲ್ಲಿ ಪಕ್ಷ ಪಕ್ಷಗಳ ನಡುವೆ ಭಾರಿ ಗುದ್ದಾಟ
ಸಿಎಂ ಕುರ್ಚಿಗೆ ಈ ಗಣ್ಯರೆಲ್ಲರ ಕಿರುಚಾಟ

ಇರಲಿ ಅದು ಅಮೇರಿಕ, ಇದು ಕರ್ನಾಟಕ
ಅವರಿಗೆ ವರ್ಣಭೇದ, ನಮಗೆ ಜಾತಿಭೇದ,
ಸ್ಥಳೀಯ, ಜಾಗತಿಕ ಸಮಸ್ಯೆಗೆ ಜೀವಂತಿಕೆ
ಬೇಕಲ್ಲವೇ ವಿಷಯ ಚುನಾವಣೆ ಸಮಯಕೆ

Apr 1, 2008

ಕೆಂಡಸಂಪಿಗೆ

ವ್ಹಾ.ವ್ಹಾ.. ಕೆಂಡಸಂಪಿಗೆ!
ಮೊದಲ ನೋಟಕೇ ಬಿದ್ದೆ
ನಾ ನಿನ್ನ ಬುಟ್ಟಿಗೆ

ಮತ್ತೆ ನಿನ್ನ ಪರಿಮಳದ ಮಾತೇಕೆ
ನಾನೊಬ್ಬನೇ ಸವಿಯುವೆ
ಮೆಲ್ಲಗೆ

ಇನ್ನು ನಾಚಿಕೆ ಏಕೆ?
ನಾ ಬರುವೆ ದಿನವು
ನಿನ್ನ ಬಳಿಗೆ

ಅತ್ತಿತ್ತ ನೋಡದಿರು ಸುಮ್ಮನೆ
ಈಗ ಇಲ್ಲಿರುವವನು
ನಾನೊಬ್ಬನೆ

ಸದ್ದು ಮಾಡದೆ ಸಂಪಿಗೆ
ಸರಸವಾಡೋಣ
ಒಟ್ಟಿಗೆ

ನೆಲಕೆ ನೆಲೆ

ನೆಲಕೆ ನೆಲೆಯಿಲ್ಲದೆ ನರಳುತಿದೆ
ಅತಿಯಾಗಿ ರಸಗೊಬ್ಬರ ಸುರಿದು
ಸಾರವನ್ನೆಲ್ಲಾ ಹೀರಿ ಬೆಂಡಾಗಿ
ಬಾಡಿ ಬರಡಾಗಿ ಬಾಯಿ ಬಿಟ್ಟಿದೆ

ಅವ್ವನ ಹಸಿವ ಬಲ್ಲವರು ಎಲ್ಲಿ
ಕೊರಳಿನ ಕೂಗು ಕೇಳಿದವರೆಲ್ಲಿ
ನೋವಿನ ತಿರುಳು ತಿಳಿದವರೆಲ್ಲಿ
ಮೌನವಾಗಿ ಮರುಗುತಿಹಳು

ಬೋರು ಕೊರೆದು ರಕ್ತ ಎಳೆದು
ಕೃತಕ ಹಸಿರು ಹರಡಿ ಹರುಷಕೆ
ಮತ್ತೆ ಹರಡಿ ಮತ್ತೆ ಅಳಿಸಿ ಅದೇ
ಅಮಾನುಷ ಅಮಾನವೀಯತೆ

ಅಸ್ತಿತ್ವದ ಆಳಕೆ ಹಾನಿಯಾಗಿ
ದಾಹ ನೀಗಲು ಸಿಗದು ನೀರು
ಧಣಿದ ದೇಹಕಿಲ್ಲ ಹನಿ ಬೆವರು
ಭಾರವಾಗಿ ಎಳೆದೆಳೆದು ಉಸಿರು

Mar 31, 2008

ಕೂಡಲ ಸಂಗಮ ದೇವ

ಇದ್ದವರು ದೇಶ ವಿದೇಶಗಳ ಸುತ್ತುವರು
ಸುಂದರ ಪ್ರವಾಸಿ ತಾಣಗಳ ಮುತ್ತುವರು
ವಿಶ್ವ ಪ್ರಸಿದ್ಧ ಅದ್ಭುತಗಳ ಕಂಡು ಬರುವರು
ನಾನೇನು ಮಾಡಲಿ ಕೂಡಲ ಸಂಗಮ ದೇವ

ಐಶಾರಾಮಿ ಕಾರುಗಳೇ ಬೇಕು ಸುತ್ತಿ ಬರಲು
ರುಚಿಗೆ ಬಗೆ ಬಗೆ ತಿಂಡಿಗಳು ಸಾಕು ಮುಕ್ಕಲು
ಬೇಡವೆಂದರೂ ಬರುವ ಬೊಜ್ಜಿಗೆ ಕುಗ್ಗುವರು
ನಾನೇನು ಮಾಡಲಿ ಕೂಡಲ ಸಂಗಮ ದೇವ

ಎಲ್ಲಾ ಮಾದರಿಯ ವಸ್ತುಗಳ ಖರೀದಿಸುವರು
ವಸ್ತ್ರ ವಿನ್ಯಾಸಗಳ ಮೋಡಿಗೆ ಲಗ್ಗೆಯಿಡುವರು
ಕೊಳ್ಳುಬಾಕುತನ ಧಾಳಿಗೆ ಕಳೆದು ಹೋಗುವರು
ನಾನೇನು ಮಾಡಲಿ ಕೂಡಲ ಸಂಗಮ ದೇವ

ಎಲ್ಲೆಲ್ಲೋ ಹುಡುಕುವರು ಗುಡಿ ಗೋಪುರಗಳ,
ಭವ್ಯ ಅರಮನೆಗಳ, ವಾಣಿಜ್ಯ ಮಳಿಗೆಗಳ,
ಕಟ್ಟಿಸುವರು ಮಸೀದಿ, ಮಂದಿರಗಳು ಬಹಳ
ನಾನೇನು ಮಾಡಲಿ ಕೂಡಲ ಸಂಗಮ ದೇವ

ಒಮ್ಮೆ ಬಳಿ ಬಾರಯ್ಯ ನನ್ನಸ್ಥಿತಿ ನೋಡಯ್ಯ
ಪ್ರತಿದಿನವು ಹೊಲ ಗದ್ದೆಗಳಲಿ ದುಡಿವೆನಯ್ಯ
ಬರುವ ಹಣವೆಲ್ಲ ಸಂಜೆಗೆ ಮುಗಿಸುವವನಯ್ಯ
ನಾನೇನು ಮಾಡಲಿ ಕೂಡಲ ಸಂಗಮ ದೇವ

ದುಡಿಮೆಯ ಫಲವಷ್ಟೇ ದೂರುವವನು ನಾನಲ್ಲ
ಕೂಡಿಟ್ಟು ಕಳೆಯಲೆಂದೂ ನಾನು ಕೂಡಿಡಲಿಲ್ಲ
ಆಸೆಗಳ ಬಿಗಿದಿಟ್ಟು, ಕನಸುಗಳ ನಾ ಕೊಲೆಗೈದು
ಹುಸಿ ನುಡಿಯ ಮೆಚ್ಚನೇ ಕೂಡಲ ಸಂಗಮ ದೇವ

ನಾ ಕಂಡ ಅದ್ಭುತಗಳು

ದೇಹವೇ ನಾ ಕಂಡ ಅತಿದೊಡ್ಡ ಅದ್ಭುತ
ನಾನುಸಿರಾಡುವ ಪರಿಯೇ ನನಗದ್ಭುತ
ಕಣ್ಣೋಟ, ಮೈಮಾಟ, ಮನದ ಹಾರಾಟ,
ಕಲ್ಪನೆ, ಕನಸುಗಳಲಿ ಕಂಡೆನಾ ಅದ್ಭುತ

ಹಾರುವ ಹಕ್ಕಿ, ಕೋಗಿಲೆ ಹಾಡಿನ ಮೋಡಿ,
ಕುಣಿವ ನವಿಲಿನ ಪರಿ, ಕಾನನಗಳ ಕಲರವ
ಬೆಳದಿಂಗಳ ಚಂದಿರ, ತಂಗಾಳಿಯ ಸಡಗರ
ತಾರೆಗಳು ಬಿಡಿಸಿಡುವ ರಂಗೋಲಿ ಅದ್ಭುತ

ಗೋಸುಂಬೆ ಬದಲಿಸುವ ಬಣ್ಣಗಳಲಿ
ವನ್ಯಜೀವಿಗಳ ಜೀವನ ವಿಧಾನದಲಿ
ಸಾಕು ಪ್ರಾಣಿಗಳ ಮುಗ್ದ ಮನಸಿನಲಿ
ಮಗುವ ನಗುವಲ್ಲಿ ಕಂಡೆ ನಾನದ್ಭುತ

ಹರಿವ ನದಿ, ಸುರಿವ ಮಳೆ, ಹಸಿರು ಬೆಳೆ
ಸಖಿಯ ಬಳೆ, ಕಿರುನಗೆಯ ಹೊಳೆ, ತುಟಿ
ಅಂಚಿನ ಸೆಳೆ, ಮಾದಕ ಕಣ್ಣಿನ ಕಲೆ, ಒಲವು
ಸವಿಯುತಾ ನನ್ನ ನಾ ಮರೆವುದೇನದ್ಭುತ

Mar 28, 2008

ಸೂರ್ಯ ಚಂದ್ರ

ಸೂರ್ಯ ಚಂದ್ರ ಆಗಸಕೆ
ನಾನು ನೀನು ಭೂರಮೆಗೆ
ನಾವು ಅವರಿಬ್ಬರ ಒಟ್ಟಿಗೆ
ಇದ್ದರೂ ಇರದ ಹಾಗೆ

ರವಿ ಮೂಡಿ ಬರಲು ಕರಗುವ
ಚಂದಿರನ ಒಡಲು ಹಗಲಿನಲಿ
ಬೆಳದಿಂಗಳ ತಂಪಿನಲಿ ನಲಿವ
ಸುಖನಿದ್ರೆಗೆ ಅವನು ಜಾರುವ

ಹೊಂದಾಣಿಕೆಯ ಸೂತ್ರದಿಂದ
ಮುರಿವ ಮಾತೇಕೆ ಅನವರತ
ವರುಷ ನಿಮಿಷಗಳಷ್ಟೇ ಇವಕೆ
ಭಿನ್ನತೆಗಳಿಗೆ ಗೌರವದ ಒಪ್ಪಿಗೆ

ಹೆಜ್ಜೆ ಹೆಜ್ಜೆಗೂ ನಡೆದು ಜೊತೆಗೆ
ಮುಂಚೂಣಿ ಮಾತ್ರ ಒಬ್ಬರಿಗೇ
ಅವರವರ ಕ್ಷೇತ್ರಗಳ ಅರಿವಿರಲು
ಒಬ್ಬರು ಹಿಂದೆ ಒಬ್ಬರು ಮುಂದೆ

Mar 27, 2008

ನಲ್ದಾಣಗಳ ಸುತ್ತೋಣ

ಪದಗಳ ಜಗದಲಿ ಗಾಳಿ ಬೆಳಕು
ನವಿಲುಗರಿಯ ಕಣ್ಣಿನ ನೆನಪು
ಭಾಮಿನಿ ಷಟ್ಪದಿಯ ದೇಶ ಕೋಶ
ಬಾ ಕವಿತಾ ಬ್ಲಾಗಮಂಡಲಕೆ
ಚಿನ್ನದ ಪುಟಗಳ ಬುಕ್ ಬಝಾರಿಗೆ
ಟೈಂಪಾಸ್ ಕಡ್ಲೆಕಾಯ್ ಜೊತೆ
ಮಹಮ್ಮದ್ ಮ್ಯಾಜಿಕ್ ನೋಡೋಕೆ
ರಾಗಿ ರೊಟ್ಟಿ ವೆಂಕಿ ಬರ್ಗರ್ ರುಚಿಗೆ

ಕನ್ನಡ ಟೈಮ್ಸ್ ಜೋನ್ ಕ್ಯಾನ್ವಾಸ್
ಹಾಯ್ ರೇಖಾ ಕಾಮೆಂಟ್ಸ್ ಪ್ಲೀಸ್
ಅಲ್ಲಿದೆ ನಮ್ಮಮನೆ ಸುಮ್ಮನೆ ಜೋಗಿ ಮನೆ
ಹೈವೇ 7, ಡೋರ್ ನಂ.142
ಫ್ರೆಂಡ್ಸ್ ಕಾಲೋನಿಯಲ್ಲಿ ಅವಲೋಕನ
ಆಲದಮರದಡಿ ನವಿಲಗರಿಯ ಝೂಮ್
ಅಗಸೆಯ ಅಂಗಳ ಅಮೃತ ಸಿಂಚನ
ಅಲೆಮಾರಿಯ ಅನುಭವ ಅಪಾರ ಕಣಾ

ಒಂಟಿ ಹಕ್ಕಿಯ ಹಾಡು ಕಲರವ ಕೂಗು
ಓ ನನ್ನ ಚೇತನಾ ಒಳಗೂ ಹೊರಗೂ
ಕವನ ರಸಾಯನ ಕಾಲಹರಣ
ಕಾವ್ಯಸುಧೆಗೆ ಕುಂಚ ಪ್ರಪಂಚ
ಕುಂಟಿನಿ ಕಾವ್ಯಕೃಷಿ ಚಂದನ
ಚಂಡೆಮದ್ದಳೆ ಚಂಪಕಾವತಿ ಚಿತ್ರಕವನ
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ

ತಿರುಕನೋರ್ವನ ದೃಷ್ಟಿಯಲ್ಲಿ
ತುಂತುರ ಹನಿಗಳ ತುಳಸೀವನ
ಜೀವ ಸಂಶಯದ ತೊದಲ ಮಾತು
ನೂರಾರು ಮಾತು ನನ್ನ ಮಾತು
ನೂರಾರು ಕನಸು ನನ್ನ ಹಾಡು
ನೆನಪು ಕನಸುಗಳ ನಡುವೆ ನೆಟ್ಟ ನೋಟ
ನೆನಪಿನಂಗಳದಿಂದ ಒಂದಿಷ್ಟು ಬಯಲು
ಮಂಜು ಮುಸುಕಿದ ದಾರಿಯಲ್ಲಿ ಮನದ ಮಾತು
ಮನದ ಪುಟಗಳ ನಡುವೆ ಮನದಾಳದ ಮಾತು

ಗಂಡಭೇರುಂಡ ಉವಾಚ ಕ್ಷಿತಿಜದೆಡೆಗೆ
ಬದಲಾವಣೆಯೇ ಜಗದ ನಿಯಮ
ಬ್ಲಾಗಾವತಾರ ಭಾವತೀರ ಯಾನ
ಹುಚ್ಚು ಮನಸಿನ ಹತ್ತು ಮುಖಗಳು
ನನ್ನರಿವಿನಲಿ ಮಾವಿನ ಸರ ಮೌನಗಾಳ
ಅಂತರಂಗದ ಕಗ್ಗ ಪಾತರಗಿತ್ತಿಯ ಪಕ್ಕ
ಅದು ಇದು ಕಾಲಚಕ್ರದ ಗಹನ ತತ್ವ
ಹರಿವ ಲಹರಿಯ ಸೃಜನ ಹರಿಣಿ
ವಿಸ್ಮಯನಗರಿಯ ಋಜುವಾತು ಸಂಪದ
ಕೆಂಡಸಂಪಿಗೆಗೆ ಕನ್ನಡವೇ ನಿತ್ಯ ಉಸಿರು
ಕನ್ನಡ ಕಸ್ತೂರಿ ಪ್ಲಾನೆಟ್ ಕನ್ನಡ
ಕನ್ನಡ ಸಾರಥಿ ಅವಧಿ ಪದಗತಿ

Mar 26, 2008

ಸಂಗೀತ

ಜಡ ಜಗದ ಹಿಡಿತಕೆ ತತ್ತರಿಸಲೇಕೆ
ಸಂಸಾರ ಸಾಗರದ ಅಲೆಗಳ ಕೇಕೆ
ಬಂಧು ಮಿತ್ರರು ಬೇಡದ ಸಮಯಕೆ
ಮನದ ಚಿಂತೆಯ ಓಡಿಸುವ ಬಯಕೆ

ಸಂಗೀತವೇ ಈ ಬದುಕಿಗೆ ದೊಡ್ಡ ವರ
ಆರೋಹಣ, ಅವರೋಹಣದ ಸಡಗರ
ಸಪ್ತ ಸ್ವರಗಳೇ ದಿನನಿತ್ಯದ ಆಹಾರ
ಇಹದ ಪರಿವು ಏಕೆ ಜೊತೆಗಿದರ

ಸಕಲ ಕಲಹಗಳಿಗೆ ಇದೇ ಸುಮಬಾಣ
ಸರಳ ಮಾರ್ಗವಿದೇ ತಿಳಿಯೋ ಜಾಣ
ಆರೋಗ್ಯ ಐಶ್ವರ್ಯಕೆ ಬೇಕೆ ಕಾಂಚಾಣ
ಸಂಗೀತದ ಸರಸ ನಮಗಲ್ಲ ಕಾಲಹರಣ

ಸುಮತಿಯ ಕರುಣಿಸೋ ಕರುಣಾಕರ
ಸುಮನದಿಂದ ಪೂಜಿಸುವೇ ಶುಭಕರ
ಸುಮನೋಹರ ಸುಮಧುರವೀ ಚಂದಿರ
ಸರಾಗ ರಾಗಲಹರಿಯೇ ದಿವ್ಯ ಮಂದಿರ

Mar 25, 2008

ನಗುವ ಚೆಲ್ಲಿ

ಅಂದು ಬೆಳದಿಂಗಳಿನ ಇರುಳಿನಲಿ
ತಾರೆಗಳು ಹೊಳಪಿನ ನಗುವ ಚೆಲ್ಲಿ
ಇತ್ತ ಮಂದ ಬೆಳಕಿನ ಕೋಣೆಯಲಿ
ಪರಿಮಳ ಭರಿತ ಹೂಗಳನು ಹರಡಿ

ತರುಲತೆಗಳು ಮೌನದಲೇ ಇಣುಕಿ
ಕುತೂಹಲಕೆ ಕಾತುರದಿ ಕಾದಿರುವವು
ಸುಪ್ತ ಸುಗಂಧ ಭರಿತ ಸುಮಬಾಲೆ
ಮಂದಹಾಸದಲಿ ಇಹವ ಮರೆತಿಹಳು

ಮುಡಿದ ಮಲ್ಲಿಗೆ ಮುಂಗೋಪ ತೋರಿ
ಗುಲಾಬಿ ಜೊತೆಗೆ ಜೋರು ಜರಿದಿತ್ತು
ಕ್ಷಣಕೆ ಮೀಸಲು ಯೌವನದಿರುಳು ಬಾಡಿ
ಬಾಗುವ ಮುನ್ನ ಅದಕೆ ನೋಡಬೇಕಿತ್ತು

ಸುಯ್ಯನೇ ಸುಳಿಗಾಳಿ ಸುಸ್ವರ ಸುವ್ವಾಲೆ
ಹಾಡುತಾ ಮೆಲ್ಲಗೆ ಸುವಾಸನೆ ಹೀರುತಿತ್ತು
ಸುಹಾಸಿನಿಯ ಸುಸ್ಥಿತಿ, ಸುವ್ಯವಸ್ಥೆ ಪರಿಯ
ಸುತ್ತಮುತ್ತಲೂ ಸುತ್ತೋಲೆ ಹೊರಡಿಸಿತ್ತು

ರಸ ಭರಿತ ಫಲಗಳ ಒಳಗೊಳಗೆ ಜಗಳ
ಮೊದಲ್ಯಾರು ಅವಳ ತುಟಿಯ ತಾಗುವರು
ನಾಲಿಗೆಯಲಿ ನಾಟ್ಯವಾಡುತಾ ಕರಗಿ
ಅವಳ ಅಂತರಂಗದ ಹಸಿವನೀಗುವವರು

ಬಿದ್ದ ಕೂಸು

ಎಡವಿ ಬಿದ್ದ ಕೂಸು ಕಿರುಚುತಾ
ಪರಚಿದ ನೋವಿಗೆ, ರಕ್ತ ತಿಲಕ
ವಿಟ್ಟಿದೆ ಮಗುವ ಮೊಣಕಾಲಿಗೆ
ಸಂತೈಸುವ ಕ್ಷಣದಲಿ ಅಮ್ಮನಿಲ್ಲ

ಕರುಳು ಕಿತ್ತಂತೆ ಅವಳಿಗೆ, ಓಡಿ
ಬರುವಳು ಎತ್ತಿ ಮುದ್ದಾಡುವಳು
ಹರಿಷಿಣ, ಕಾಫಿ ಪುಡಿ ಹಚ್ಚುವಳು
ನೋವಿನಲೇ ನಗಿಸಲೆತ್ನಿಸುವಳು

ನಿರ್ಲಿಪ್ತತೆಯೋ ಇಲ್ಲ, ನಿರೀಕ್ಷೆ
ಇಲ್ಲದರ ಸ್ಥಿತಿಯೋ ಊಹೆಗಷ್ಟೇ
ಅದರ ಅನುಭವಿಸುವ ಭಾಗ್ಯವಿಲ್ಲ
ನೆನಪಿನ ನೆರಳಿಗೆ ಅಮ್ಮನಿರಲಿಲ್ಲ

ಅವಳಿದ್ದರೇ ತಾನೆ ಎಲ್ಲ ದೌಲತ್ತು,
ಸಿಹಿ ಮುತ್ತು, ಹೊತ್ತೊತ್ತಿಗೇ ತುತ್ತು
ಎದೆಯಮೇಲೆ ನಿದ್ರಿಸುವ ಸಂಪತ್ತು
ತೊದಲ ಮಾತನಾಡಿಸುವ ಗಮ್ಮತ್ತು

ಅದಕೆ ಎಲ್ಲದರ ಅರಿಯುವ ಸವಲತ್ತು
ಹಾಡುತ, ನಲಿಯುತಲೇ, ಪದಗಳ,
ಬಣ್ಣಗಳ, ದಿನಗಳ, ಪ್ರಾಣಿ ಪಕ್ಷಿಗಳ
ಜಗದಲಿ ಸುತ್ತಿ ಬರುವ ತಾಕತ್ತು

ಊರಿಲ್ಲ, ಹೆಸರಿಲ್ಲ, ಅಪ್ಪ ಅಮ್ಮನ
ಸುಳಿವಿಲ್ಲ, ಇದ್ದರೂ ಅದಕೆ ಗೊತ್ತಿಲ್ಲ
ಯಾರೋ ಮಾಡಿದ ಪಾಪ ಕರ್ಮಕೆ
ಯಾವ ತಪ್ಪಿಗೆ ಎಡವಿ ಬಿದ್ದಿದೆ ಕೂಸು

Mar 24, 2008

ಸರಿಯ ಬೇಡ

ಸರಿ ಸರಿ ಸರಿ ಎಂದು ಸರಿಯ ಬೇಡ ಚೆಲುವೇ
ರಸಭಂಗವೇಕೆ ಚದುರಂಗಕೆ ತರವಲ್ಲ ಹೂವೇ

ಮೌನದಲೇ ಮುಂದಿಡುವೆ ಹಲವು ಚಮತ್ಕಾರ
ಕಿರುನಗೆಯಿಂದ ಸೋಲಿಸಿದೇ ನೆಪಕೆ ಛಲಗಾರ

ಅವತರಿಪ ಅಡೆತಡೆಗಳಿಗೆ ನೇರ ಮುಖಾಮುಖಿ
ಭಿನ್ನ ಉತ್ತರ ಹುಡುಕಿ ಸರಿದೂಗುವ ಚಂದ್ರಮುಖಿ

ಹದ ಮಾಡಿ ಮನ ಮನೆಗೆ ಮಕರಂದವ ಹರಡಿ
ಝಗಮಗದ ಜಗದಲಿ ನೀ ನೆಲೆಯೂರಿ ನಲಿದಾಡಿ

ಹಣೆಬರಹ ಹಸನಾಗಿಸುವ ದಿನಚರಿಗೆ ಮರಳಿ
ಹುಸಿ ಭಾವವೆಸೆದಾಗ ಹಲುಬುವಳು ಮರುಗಿ

ಹಳಹಳಿಸುವಳಿವಳು ತವರಿನ ನೆನಪು ಬರಲು
ಹಂಬಲಿಸಿ ಹುರುಪಿನಿಂದ ಹಬ್ಬಕೆ ಹೊರಡುವಳು

ಕೃತಕ ಜಗವಿದು

ಕೃತಕ ಜಗವಿದು ಜರಿದರೇನು ಸುಖ
ಕಂಡದ್ದು ಕಾಣದ್ದರ ಕಲ್ಪನೆಯ ಮುಖ
ಜಾರದಿರು ಬೇಗನೇ ಕತ್ತಲಿಗೆ ಹೆದರಿ
ಹಣತೆಗಿರುವ ಅನಿವಾರ್ಯ ಬಲ್ಲೆ ಏನು?

ಹರಿಯುತಿಹ ನದಿಗೆ ಅವಸರದ ಅರಿವು
ಕ್ರಿಯೆ ಪ್ರತಿಕ್ರಿಯೆಗಳ ಹಸಿವಿರುವುದೇ?
ಹಸಿರೊತ್ತ ಭೂರಮೆಗೆ ಬರಡಾಗುವ ಭಯವೇ?
ನಿರ್ಲಿಪ್ತ ಮನಕೇಕೆ ನೋವು ನಲಿವುಗಳ ಗ್ರಹಣ.

ಮೌನದಲೇ ಉತ್ತರ ಅದಕ್ಕಿಲ್ಲ ಯಾವ ಕಾತುರ
ಇಹದ ಪರಿಯ ಜೊತೆಗೆ ಪಿರಿಪಿರಿ ನಿನ್ನದೇ ಜ್ವರ
ತಟಸ್ಥ ಮುಖಭಾವ ಚಂಚಲತೆಯ ಅಂತರಾಳ
ಹಿಡಿದಿಡುವ ಯತ್ನ ಕ್ಷಣಕೆ ಮೀಸಲು ತಿಳಿಯದೇ?

ಮತ್ತೆ ತೃಪ್ತಿಗೆ ಕ್ರಿಯೆ ಯಾವುದಾದರೇನು?
ಅದರ ಹಿಂದೆ, ಮುಂದೆ, ಮೇಲೆ, ಕೆಳಗೆ, ಒಳಗೆ,
ಹೊರಗೆ, ಅಳತೆ, ಭಾರ, ಎತ್ತರ, ಆಳ, ಅಗಲದ
ಊಹೆಗಳು, ಪ್ರಶ್ನೆಗಳು ನಿಮಗೆ ಸೀಮಿತವಷ್ಟೇ?

ಪುಡಿ ಪುಡಿಯಾಗಿ ಹೊಡೆದು ಹಿಡಿಯಲೆತ್ನಿಸುವೆ
ಜಾಣನೇ ಹಲವಾರು ವರಷ ಕೆಳೆದಿರಲಾಗಲೇ?
ಹಿಡಿ ಹಿಡಿಯಾಗಿ ಒಮ್ಮೆಗೆ ಕಾಣುವ ಬಯಕೆ ಹೊತ್ತು
ಉತ್ತರ ಹುಡುಕುತಾ ಕರಗುವ ನಿನ್ನ ಕರ್ಮಕೆ?

ಕಲಿತವ ನಾನೆಂದು ಬೀಗುವ ಅಂಟು ರೋಗಕೆ
ಸಾಧಿಸಿದೆ ಅಪಾರ ಹಾರುತಾ ಚಪ್ಪಾಳೆ ಸದ್ದಿಗೆ
ನೆಮ್ಮದಿ, ಆರೋಗ್ಯ, ಸರಳ ಜೀವನ ಕ್ರಮಗಳ
ನೆರವು ಸಿಗುವುದು ಮತ್ತೆ ಅದೇ ವನ್ಯ ಮೃಗಗಳ

ಹಸಿರ ಪರಿಸರದಲ್ಲಿ, ಸುರಿವ ಮಳೆಯಲ್ಲಿ,
ಋತುಮಾನ ಕರುಣಿಸುವ ಕೃಪೆಯಲ್ಲಿ.
ನೀ ನುಡಿದ, ನಡೆದ ದಾರಿ ಯಾರಿಗೆ, ಹೇಗೆ
ನೆರವಾಯಿತೋ ಕಾಣೆ ಈ ಜಗಕೆ?