ಕರುಣಿಸು ಕಮಲಾಕ್ಷಿ ಕಾಲ ಕಳೆದಾಗಿದೆ
ನೆನಪಿಸು ನೆನ್ನೆಗಳ ಹೆಸರು ಹಸಿರಾಗಿದೆ
ನಿನ್ನೆ ನೆನ್ನೆಗಳ ಬೆಳದಿಂಗಳಿನ ಇರುಳ
ನನ್ನ ನಿನ್ನಯ ನಡುವೆ ನಡೆದ ಬಹಳ
ಮೂಕ ವೀಕ್ಷಕರೆಲ್ಲ, ಅಂಧ ರಕ್ಷಕರೆಲ್ಲ
ಜಾಣರೆಂಬುವರ ಜಗಕೆ ಉತ್ತರವಿಲ್ಲ
ನಿನ್ನೆಗೆ ನೆಲೆಯಿಲ್ಲ, ಇಂದು ನೀನೆ ಎಲ್ಲ
ಇನ್ನು ನಾಳೆ ನಾಳೆಗಳ ಚಿಂತೆ ನನಗಿಲ್ಲ
ಕೂಡಿ ಕಳೆಯುವ ಆಟವಾಡುವ ಜನರು
ಕೂಡಿ ಬಾಳುವ ಪಾಠ ಪಠಿಸುತಿಹರು
ಮುಗುದೆ ಮುನಿಸೇಕೆ ವಿರಸ ನಮಗೇಕೆ
ಬೇಹುಗಾರರ ತಂತ್ರಕೆ ಮಣಿಯಲೇಕೆ
ಇಂದಿರುವ ಕ್ಷಣಗಳು ಮತ್ತೆಂದು ಬಾರದು
ಮುಂಬರುವ ದಿನಗಳ ಲೆಕ್ಕವಿಡಬಾರದು
ಕರುಣಿಸು ಕಲ್ಪತರು ನಿನಗೆ ಕೋಪ ತರವಲ್ಲ
ಜಗದ ಜೊತೆಯಲೇ ಹೋಗುವ ನಿಯಮವಿಲ್ಲ
No comments:
Post a Comment