Apr 4, 2008

ಗೆಳೆಯ

ಹೊರಡ ಬೇಡವೋ ಗೆಳೆಯ
ಹೊರೆಟೆಯಾದರೂ ಎಲ್ಲಿಗೆ
ಕಳೆದ ನೆನ್ನೆಯ ನೆನಪುಗಳು
ಬೆನ್ನತ್ತಿ ಬರುವವು ನಿನ್ನಲ್ಲಿಗೆ

ಸ್ನೇಹದಿಂದ ಕೊಡ ತುಂಬಿತ್ತು
ಇಟ್ಟವರಾರದಕೆ ಸಣ್ಣ ತೂತು
ಸೋರುತಿದೆ, ಸಹಜ ಕೊಡಕೆ
ಖಾಲಿಯಾದೀತೆಂಬ ಭಯಕೆ

ಮನಸಿಗೇನೋ ಕೊರತೆ ಇದೆ
ಪ್ರಶ್ನೆಗಳೆಷ್ಟೋ ಕೇಳುವುದಿದೆ
ತಕ್ಷಣಕೇ ಉತ್ತರ ಸಿಗದಂತಿದೆ
ಮೌನವಾಗೇ ಪರೀಕ್ಷೆ ಬರೆದಿದೆ

ದುಗುಡವೇಕೊ ಒಳ ಹೊಕ್ಕಿದೆ
ತಿಳಿಯದುದನೇ ಹುಡುಕುತಿದೆ
ಸಹನೆ ಎಲ್ಲೆ ಮೀರಿ ಸಹಕರಿಸದೆ
ಕಾದ ಕಾವಲಿಯಾಗಿ ಕಾಯುತಿದೆ

ಸೋರುತಿಹ ಕೊಡ ತುಂಬಿಸಲೇ
ಸಣ್ಣ ತೂತನು ಮುಚ್ಚಲೆತ್ನಿಸಲೇ
ಸನ್ನಿವೇಶ ನೋಡಿ ಸುಮ್ಮನಿರಲೇ
ಕಾಲಚಕ್ರದಲಿ ಕಳೆದು ಹೋಗಲೇ

ನಿನ್ನ ಅಗಲಿಕೆಗೆ ದುಃಖ ನನಗೇಕೆ
ಅತ್ತಿತ್ತ ಉತ್ತರಕೆ ನಾ ಹುಡುಕಲೇಕೆ
ಭಾವಗಳನೆಲ್ಲ ಬಿಗಿದಿಡಲಿ ಹೇಗೆ
ಎನ್ನ ಭವದ ಕೇಡಿಗೆ ದೂರಲೇಕೆ

ನಿನ್ನ ದಾರಿ ಯಾವುದಾದರೇನು
ನೀನಿದ್ದ ಮನೆಯ ಬಿಟ್ಟರೇನು
ಹೋಗು ಗೆಳೆಯ ನೆಲೆಯ ತಿಳಿಸಿ
ಬರುವೆ ನಾನು ಜೊತೆಯ ಬಯಸಿ

No comments: