ಮೌನವಾಗಿ ಜನನ ಮರುಘಳಿಗೆ ಶುರು ಕದನ
ಮೂಲ ನೆಪವಷ್ಟೇ ಹಿಂದೆ ತಿರುಗದವಳ
ಇನ್ನು ಇರದ ಹಾದಿಯ ಬಗ್ಗೆ ಚಿಂತಿಸುವಳೇ
ಇದ್ದ ಇರದುದರ ಮೇಲೆದ್ದು ನಡೆಯುವವಳ
ಅಡತಡೆಗಳಿಗೆ ಎದೆಗೊಟ್ಟು ಗುಡುಗುವವಳ
ಹಿಂಬಾಲಕರಿಗೆ ಹಿತವ ಬಯಸುತಲೇ
ನಿಲ್ಲದಲೇ ಎಲ್ಲೂ ನಲಿದಾಡುವವಳು
ಜಡಿಮಳೆ ಸದ್ದಿಗೆ ಜಗ್ಗುವವಳಿವಳಲ್ಲ
ಕವಿದ ಕಾರ್ಮೋಡಗಳ ಗುಡುಗು
ಮಿಂಚುಗಳಿವಳಿಗೆ ಹೊಸತಲ್ಲ
ಹಗಲಿರಲಿ ಇರುಳಿರಲಿ ಅದರ ಪರಿವಿಲ್ಲ
ನಿತ್ಯ ನುಸುಳುವ ಛಲವ ಬಿಡಲೊಲ್ಲದೆ
ಬಿಸಿಲಿರಲಿ ನೆರಳಿರಲಿ ನಿರ್ಲಿಪ್ತವೇ ಮುಖದಲ್ಲಿ
ಸಿಕ್ಕ ಸನ್ನಿವೇಶಗಳಿಂದ ಸ್ಪೂರ್ತಿ ಪಡೆಯುತಲೇ
ನೇರ ಮುಖಾಮುಖಿ ಇವಳ ಜಗದ ನಿಯಮ
ಸಿಡುಕು, ಸಿಂಗಾರಗಳ ಕೊರತೆ ಇರದವಳು
ಸರಳ ಸಜ್ಜನಿಕೆಯಿಂದ ನವರಸಗಳ
ರುಚಿಯ ನೀಡುವವಳು
ಬಿಂಕ ಬಿನ್ನಾಣಗಳ ಜೊತೆ ಜೋರು
ಹುಳಿ ಒಗರಿನ ಪೊಗರು ನೆನಪಿರಲಿ
ಸುಳಿಗೆ ಸಿಕ್ಕಿದವರ ಸೆರಗಿನಿಂದ
ಸುತ್ತಿ ಸೆಳೆಯುವಳು ಜೋಕೆ
ಜಾರು ಮನವನು ಬಿಗಿದಿಟ್ಟು
ಎಚ್ಚರದಿ ನಡೆ ನೀನದರ ಬಳಿಗೆ
No comments:
Post a Comment