Apr 26, 2008

ಗೊಂದಲದ ಗೂಡಿನೊಳಗೆ

ದಟ್ಟ ಕಾಡಿನ ಮಧ್ಯೆ ಎತ್ತರದ ಮರದಲ್ಲಿ
ಗೊಂದಲದ ಗೂಡಿನೊಳಗೆ ನಿದ್ರಿಸುವ
ನಟನೆಯಲಿ ಹಗಲುಗನಸು ಕಾಣುತ್ತಿರೆ
ಸುತ್ತಲಿನ ಹಸಿರು ಹೊರ ಜಗಕೆ ಹಣತೆ

ನಿಟ್ಟುಸಿರನಿಟ್ಟು ಮತ್ತದೇ ಸಾಗರದಲಿ
ದಿಕ್ಕೆಟ್ಟ ಹಕ್ಕಿಯಂತೆ ದುಗುಡದಿಂದಿರೆ
ಚಟ ಪಟನೆ ರೆಕ್ಕೆ ಹೊಡೆದು ಮೋಹಕ
ಮೊಗದವಳು ಪಟ ಪಟನೆ ಹಾರುತಲಿ

ರೆಂಬೆ ಕೊಂಬೆಗಳಲಿ ನಿಂತು ನಿಲ್ಲದೆ
ಹಾಗೆ ನಗುವ ಕಾರಂಜಿ ಹೊಮ್ಮಿಸಿತ್ತು
ಕ್ಷಣದಲೇ ಮರೆತೆ ನೋಡುತ ಬೆರಗಾದೆ
ನಿತ್ಯ ಸೌಂದರ್ಯವತಿ ರೋಮಾಂಚನ

ಅಂಬೆಗಾಲಿಡುತ ತೊದಲ ಮಾತಿನಲಿ
ಮೆಲ್ಲ ಮೆಲ್ಲಗೆ ಹಾಗೆ ಹತ್ತಿರ ಹೋಗಲು
ಎದೆಯ ಏರಿಳಿತದ ವೇಗ ಕೇಳಿಸಿತ್ತು
ಮೈ ಬೆವರಿದರು ಸಹಜತೆ ಬಯಸಿತ್ತು

ದಟ್ಟ ಕಾಡಲ್ಲಿ ಗೊಂದಲದ ಗೂಡಿನಲಿ
ಕಳೆದು ಹೋಗುವ ಭಯ ಕಾಡುತ್ತಿತ್ತು
ಎದುರಾದ ಅಡತಡೆಗಳ ದಾಟದಲೆ
ನೂರೆಂಟು ನೆವಗಳನು ಹುಡುಕುತ್ತಿತ್ತು

ಎದುರಿದ್ದ ಚಂಚಲೆ ಮಿಂಚಂತೆ ಬಂದಳೆ
ಕಳೆದುಕೊಂಡರೆ ಮತ್ತೆ ನೆನಪಾಗುವಳೆ
ದಿಕ್ಕೆಟ್ಟ ಬದುಕಿಗೆ ಬೆಳಕಾಗಿ ಬಂದವಳು
ಆಗಲೇ ಸ್ಪಷ್ಟ ಗುರಿಯೊಂದ ಮುಂದಿಟ್ಟಳೆ

No comments: