May 31, 2009

ನೀ ನನ್ನ ಮರೆತರೆ

ನಿನಗೆ ಗೊತ್ತಿರಲೆಂದು ಬಯಸುವೆ
ಈ ವಿಷಯ.

ನಿನಗೆ ಗೊತ್ತಿದೆ ಅದು ಹೇಗೆಂದು:
ನಾನೇನಾದರು ನೋಡಿದರೆ
ಪಾರದರ್ಶಕ ಗಾಜಿನಂತೆ ಹೊಳೆವ ಚಂದ್ರನನ್ನು, ನನ್ನ ಕಿಟಕಿಯ ಹತ್ತಿರವಿರುವ
ದೀರ್ಘ ಶಿಶಿರದ ಕೊನೆಗೆ ಕೆಂಪಾಗಿರುವ ರೆಂಬೆಯನ್ನು,
ನಾನೇನಾದರು ಮುಟ್ಟಿದರೆ
ಬೆಂಕಿಯ ಹತ್ತಿರ
ಗ್ರಹಿಸಲಾಗದ ಬೂದಿಯನ್ನು
ಅಥವಾ ಬಿರುಕು ಬಿಟ್ಟ ಹೆಮ್ಮರದ ಕಾಂಡವನ್ನು,
ಎಲ್ಲವೂ ನನ್ನನ್ನು ಕೊಂಡೊಯ್ಯುತ್ತವೆ ನಿನ್ನಲ್ಲಿಗೆ,
ಸುಗಂಧ ದ್ರವ್ಯಗಳು, ಬೆಳಕು, ಲೋಹಗಳು,
ಆ ಪುಟ್ಟ ನಾವೆಗಳು
ತೇಲಿ ಬರುತ್ತಿವೆ
ನಿನ್ನ ಸಣ್ಣ ದ್ವೀಪಗಳೆಡೆಗೆ, ಅಲ್ಲಿ ಬಂದು ನನಗಾಗಿ ಕಾಯುತ್ತಿರುತ್ತವೆ.

ಇರಲಿ, ಈಗ,
ನೀನೇನಾದರೂ ಸ್ವಲ್ಪ ಸ್ವಲ್ಪವೇ ನನ್ನ ಪ್ರೀತಿಸುವುದನ್ನು ನಿಲ್ಲಿಸಿದರೆ
ನಾನೂ ಸಹ ಸ್ವಲ್ಪ ಸ್ವಲ್ಪವೇ ನಿನ್ನ ಪ್ರೀತಿಸುವುದನ್ನು ನಿಲ್ಲಿಸುತ್ತೇನೆ.

ಒಮ್ಮೆಗೇ ನೀನೇನಾದರೂ
ನನ್ನ ಮರೆತು ಬಿಟ್ಟರೆ
ಮತ್ತೆ ನನಗಾಗಿ ಹುಡುಕಾಡುವ ಅಗತ್ಯವಿಲ್ಲ
ಏಕೆಂದರೆ ನಾನಾಗಲೇ ನಿನ್ನನ್ನು ಮರೆತು ಬಿಟ್ಟಿರುತ್ತೇನೆ.

ಇದು ಬಹಳ ಅತಿಯಾಯ್ತು ಹಾಗೇ ಹುಚ್ಚೆಂದು ನೀನು ಭಾವಿಸಿದರೆ,
ಗಾಳಿಯಲ್ಲಿ ತೂಗಾಡುತ್ತಿರುವ ಬ್ಯಾನರುಗಳು
ನನ್ನ ಬದುಕಿನ ಮುಖಾಂತರ ನುಸುಳಿ ಮುನ್ನುಗ್ಗುತ್ತಿವೆ,
ಮತ್ತೆ ನೀನೇ ನಿರ್ಧರಿಸು
ನನ್ನ ದಡಕ್ಕೆ ತಂದು ಬಿಡಲು
ಆ ಹೃದಯದಲ್ಲೇ ನಾನು ಬೇರು ಬಿಟ್ಟಿದ್ದೇನೆ,
ನೆನಪಿರಲಿ
ಅಂದು ಆ ದಿನದಂದು,
ಆ ಘಳಿಗೆಯಲ್ಲಿ,
ನನ್ನ ತೋಳುಗಳನ್ನೆತ್ತಿ
ಮತ್ತು ನನ್ನ ಬೇರುಗಳನ್ನು ಮುಕ್ತಗೊಳಿಸಿ
ಮತ್ತೊಂದು ಪ್ರದೇಶಕ್ಕಾಗಿ ಬೇಡಿಕೊಂಡಾಗ.

ಆದರೆ
ಒಂದು ವೇಳೆ ಪ್ರತೀ ದಿನವೂ,
ಪ್ರತೀ ಘಳಿಗೆಯೂ,
ನಿನಗನ್ನಸಿದರೆ ನೀನು ನನಗಾಗಿಯೇ ಹುಟ್ಟಿ ಬಂದಿರುವುದೆಂದು
ಯಥೇಶ್ಚವಾದ ಕೋಮಲ ಸೊಗಸಿನಿಂದ,
ಪ್ರತಿ ದಿನ ಹೂವೊಂದೇನಾದರೂ
ನಿನ್ನ ಕೆಂದುಟಿಯೆಡೆಗೆ ಏರಿ ಬಂದು ನನಗಾಗಿ ಕೇಳಿದರೆ,
ಹಾ.. ನನ್ನ ಪ್ರೀತಿಯೆ, ಹಾ... ನನ್ನ ಸರ್ವಸ್ವವೆ,
ನನ್ನಲ್ಲಿ ಮತ್ತೆ ಆ ಎಲ್ಲಾ ಕಿಚ್ಚು ಮರುಕಳಿಸುತ್ತದೆ,
ನನ್ನೊಳಗೆ ಯಾವುದೂ ನಾಶವಾಗಲಿಲ್ಲ ಅಥವಾ ಮರೆತು ಹೋಗಲಿಲ್ಲ,
ನನ್ನ ಪ್ರೀತಿಯು ನಿನ್ನ ಪ್ರೀತಿಯಿಂದಲೇ ಜೀವಂತವಾಗಿದೆ, ನನ್ನ ಜೀವವೇ, ನನ್ನ ಆತ್ಮವೇ,
ಮತ್ತೆ ನಿನ್ನ ಕೊನೆಯುಸಿರು ಇರುವವರೆಗೂ ಅದು ನಿನ್ನ ತೋಳುಗಳಲ್ಲಿಯೇ ನೆಲೆಸಿರುತ್ತದೆ,
ನನ್ನ ತೋಳುಗಳನ್ನು ಬಿಡದೆ.

ಮೂಲ ಕವಿ: ಪ್ಯಾಬ್ಲೊ ನೆರುದ
ಕನ್ನಡಕ್ಕೆ : ಚಂದಿನ

May 29, 2009

ಬಿಂಬ – 7

ನ್ಯೂನತೆಗಳು
ಮಾನವನಿಗೆ
ಸಹಜ
ಹಾಗು
ಸ್ವಾಭಾವಿಕ.
ಅವುಗಳ
ನಿಯಂತ್ರಣ
ಸಾಧ್ಯ,
ನಿಷೇಧ
ಅಸಾಧ್ಯ.

ಬಿಂಬ – 6

ಮಾನವ
ಮಾನವೀಯತೆಯ
ಜೊತೆಗೆ
ಸಾಮಾನ್ಯ
ಮಾನವನಾಗಿ
ಬದುಕುವುದೇ
ಅತಿದೊಡ್ಡ
ಸಾಧನೆ.

ಬಿಂಬ – 5

ಬದುಕಿಗೆ
ಅತಿಮುಖ್ಯ,
ಅತ್ಯಗತ್ಯ,
ಅನಿವಾರ್ಯ
ಎಂಬುದು
ಎಲ್ಲರಿಗೂ
ನಿಷ್ಪಕ್ಷಪಾತವಾಗಿ
ಲಭ್ಯ.

ಬಿಂಬ – 4

ಬದುಕಲ್ಲಿ
ಸೋಲು,
ಗೆಲುವಿಗೆ
ಖಚಿತ
ಅರ್ಥವಿಲ್ಲ
ಅದು
ಅವರವರ
ಊಹೆಗೆ,
ಹೋಲಿಕೆಗೆ,
ಸಾಮರ್ಥ್ಯಕ್ಕೆ
ಸೀಮಿತ.

ಬಿಂಬ – 3

ಪರಿಶುದ್ಧ
ಪ್ರೀತಿ
ಎಂಬುದು
ಕೇವಲ
ಒಂದು
ಸುಂದರ
ಪರಿಕಲ್ಪನೆ.

ಬಿಂಬ - 2

ಶ್ರೇಷ್ಠತೆ
ಎಂಬುದು
ಮಾನವ
ಎಂದಿಗೂ
ತಲುಪದ
ಅಂತಿಮ
ಘಟ್ಟ

May 28, 2009

ವಿಪರ್ಯಾಸ

ನೋಡಿ,
ಎಷ್ಟು ಸಹಜವಾಗಿ ಮುಸ್ಸಂಜೆಯ ನಂತರ
ಮುಂಜಾವು ಹಾಗೇ ಜಾರಿ ಹೋಗುತ್ತಿರುತ್ತದೆ.
ಆದರೆ,
ನಾನು ತುಂಬಾ ಇಷ್ಟ ಪಡುವುದು ಇನ್ನೂ ಸಿಗಲೇ ಇಲ್ಲ,
ಹಾಗೇ ಬಹಳ ದ್ವೇಷಿಸುವುದು ಇನ್ನೂ ತೊಲಗಲೂ ಇಲ್ಲ.

ನೊಣ

ದೇವರು ಅವನ ಬುದ್ಧಿವಂತಿಕೆಯಿಂದ
ನೊಣವನ್ನು ಸೃಷ್ಟಿಸಿದ
ತದನಂತರ,
ಏಕೆಂದು
ನಮಗೆ ಹೇಳುವುದ
ಮರೆತ

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಕೆಡುಕು ಮಾಡುವವರ ಸೂಕ್ಷ್ಮ ಅವಗಾಹನೆಗೆ

ಆತ್ಮಸಾಕ್ಷಿಯ ಪ್ರಖರ ಪ್ರಭಾವವೊಂದಿದವನು
ಅವೈಜ್ಞಾನಿಕತೆಯ ಬಗ್ಗೆ ಬಹುವಾಗಿ ಚಿಂತಿಸುತ್ತಾನೆ;
ಯಾವುದೇ ಮೌಲ್ಯಗಳ ಅಥವಾ ನೈತಿಕತೆಯ
ಪ್ರಭಾವದ ಲಾಭ ಪಡೆಯದಂಥವನ
ತುಂಟತನ ಮತ್ತು ಅವನ ವರಮಾನ
ಬಹುಬೇಗ ನಾಲ್ಕುಪಟ್ಟು ಬೆಳೆದಿರುತ್ತದೆ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಬಿಂಬ - 1

ಶುದ್ಧತೆ
ಎಂಬುದು
ಮಾನವ
ಶೋಧನೆ
ಮಾಡಲಾಗದ್ದು.

ದುಷ್ಟ ಪ್ರಪಂಚಕ್ಕೊಂದು ಪ್ರತಿಬಿಂಬ

ಪರಿಶುದ್ಧತೆ ಎಂಬುದು
ತಿಳುವಳಿಕೆಗೆ ನಿಲುಕದ್ದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ನನ್ನ ಕನಸು

ಇದು ನನ್ನ ಕನಸು,
ಇದು ನನ್ನ ಸ್ವಂತದ ಕನಸು,
ನಾನೇ ಅ ಕನಸು ಕಂಡದ್ದು.
ನಾ ಕನಸು ಕಂಡೆ, ನನ್ನ ಕಾಂತಿಯುಕ್ತ ಕೂದಲನ್ನು ಸೊಗಸಾಗಿ, ಸ್ವಚ್ಛವಾಗಿ ಬಾಚಿದ್ದೇನೆಂದು.
ನಂತರ, ಮತ್ತೊಂದು ಕನಸು ಕಂಡೆ ನನ್ನ ನಿಜವಾದ ಪ್ರೀತಿ
ನನ್ನ ಕೂದಲನ್ನು ಯದ್ವಾತದ್ವಾ ಕೆಡಿಸಿ, ಯರ್ರಾಬಿರ್ರಿ ಉದುರಿಸಿ ಬಿಟ್ಟಿದ್ದಾಳೆಂದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಜನರ ಬಗ್ಗೆ ಮತ್ತಷ್ಟು

ಜನರು ಯಾವಾಗ ಪ್ರಶ್ನೆಗಳನ್ನು ಕೇಳುವುದಿಲ್ಲವೋ
ಆಗ ಅವರು ಸಲಹೆಗಳನ್ನು ನೀಡುತ್ತಿರುತ್ತಾರೆ
ಮತ್ತೆ ಇವೆರಡರಲ್ಲಿ ಯಾವುದನ್ನೂ ಮಾಡದಿದ್ದಾಗ
ಅವರು ನಿಮ್ಮ ಭುಜಗಳ ಮೇಲೆ ನೋಡುತ್ತಿರುತ್ತಾರೆ ಅಥವಾ ನಿಮ್ಮ ಹೆಬ್ಬೆರಳ ಮೇಲೆ ತುಳಿಯುತ್ತಿರುತ್ತಾರೆ
ಆಮೇಲೆ ನಿಮಗೆ ಕೋಪ ಬರಿಸಲು ಇದೆಲ್ಲ ಸಾಲದೆಂಬಂತೆ
ಅವರು ನಿಮ್ಮನ್ನು ಕೆಲಸಕ್ಕಿಟ್ಟುಕೊಳ್ಳುತ್ತಾರೆ.
ಯಾರಾದರೂ ಸುಮ್ಮನಿರುವಾಗ
ಎಲ್ಲರ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.
ಇದು ತುಂಬಾ ಮುಜುಗರ ಉಂಟುಮಾಡುವಂತೆ ತೋರಬಹುದು
ಕೆಲಸ ಮಾಡುವವರಿಗೆ, ಕೆಲಸ ಮಾಡದವರನ್ನು ಕಂಡಾಗ,
ಅದಕ್ಕೆ, ಅವರು ಹೇಳುತ್ತಾರೆ ಕೆಲಸವೆಂಬುದು ಅದ್ಭುತ ಔಷದಿಯೆಂದು,
ಒಂದು ಕ್ಷಣ ಇವರನ್ನು ನೋಡಿ ಫೈರ್ಸ್ಟೋನ್, ಫೋರ್ಡ್, ಎಡಿಸನ್,
ಮತ್ತೆ ಅವರು ಉಪದೇಶ ನೀಡುತ್ತಲೇ ಇರುತ್ತಾರೆ ಉಸಿರು ನಿಲ್ಲುವವರೆಗೂ, ಅಥವಾ ಏನಾದರೂ
ನೀವೇನಾದರೂ ಅವರಿಗೆ ಬಗ್ಗದಿದ್ದರೆ, ನಿಮಗೆ ಹಸಿವಿನಿಂದ ಸಾಯಿಸುತ್ತಾರೆ, ಅಥವಾ ಇನ್ನೇನಾದರು.
ಇವೆಲ್ಲವೂ ಬಹಳ ಕೊಳಕು ಅಸಭ್ಯನಡತೆಯಲ್ಲಿ ಕೊನೆಯಾಗುತ್ತದೆ:
ಒಂದುವೇಳೆ ನೀವೇನಾದರೂ ಉದ್ಯೋಗ ಮಾಡಲೇ ಬಾರದೆಂದಿದ್ದರೆ,
ನೀವು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ, ಬೇಕಾದಷ್ಟು ಹಣ ಗಳಿಸಿ ಮತ್ತೆ ಎಂದೂ ಕೆಲಸ ಮಾಡದಿರಲು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಕೇಳಿಸಿಕೊ...

ತಲೆ ಬುರುಡೆಯಲ್ಲೇನೋ ಬಡಿಯುತ್ತಲೇ ಇದೆ
ಕೊನೆಯಿಲ್ಲದ ಮೌನ ಚೀತ್ಕಾರ
ಏನೋ ಗೋಡೆಯ ಮೇಲೆ ಹೊಡೆಯುತ್ತಾ,
ಮತ್ತೆ ಅಳುತ್ತಾ ಇದೆ, “ನನ್ನ ಹೊರಗೆ ಬಿಡಿ!” ಎಂದು

ಅದು ಏಕಾಂಗಿ ಸೆರೆಯಾಳು
ಜವಾಬನ್ನು ಎಂದೂ ಕೇಳಿಸಿಕೊಳ್ಳುವುದಿಲ್ಲ.
ಕಾಲಾತೀತದಲ್ಲಿ ಯಾವ ಜೊತೆಗಾರನೂ
ಆ ತೀವ್ರ ವೇದನೆಯನ್ನು ಕೇಳಿಸಿಕೊಳ್ಳಲಿಲ್ಲ.

ಆ ಉಗ್ರ ಹಿಂಸೆಯನ್ನು ಯಾವ ಹೃದಯವು ಹಂಚಿಕೊಳ್ಳಲಿಲ್ಲ
ಅವನ ಭಯಾನಕ ಕತ್ತಲಲ್ಲಿ, ಭೂತದಂತೆ ಪದೇ ಪದೇ ಕಾಣಿಸಿಕೊಳ್ಳುತ್ತದೆ.
ಯಾವುದೋ ಲೋಹದ ಸದ್ದಿನ ಮೂಲಕ ಬೆಳಕು ಹರಿಯುತ್ತದೆ
ಬೇರೆ ಯಾವ ಕಣ್ಣೂ ಗುರುತಿಸದಂತೆ.

ಮಾಂಸಖಂಡಗಳನ್ನು, ತೀವ್ರ ಬಯಕೆಯ ಮಾಂಸಖಂಡಗಳೊಡನೆ ಸೇರಿಸಿದಾಗ
ಮತ್ತು ಶಬ್ದಗಳೆಲ್ಲವೂ ಸರಾಗವಾಗಿ, ಬೆಚ್ಚಗೆ ಹಾಯಾಗಿ ಓಡುವಾಗ,
ನನಗನ್ನಿಸುತ್ತದೆ, ಅವನು ಆಗ ಒಬ್ಬಂಟಿ ಎಂದು
ತಲೆ ಬುರುಡೆಯಲ್ಲಿ ಸೆರೆಯಾದವನೆಂದು.

ಜಾಲರಿಯಲ್ಲಿ ಹಿಡಿಯಲಾದ ರಕ್ತನಾಳಗಳು
ಮೃದು ಹೊದಿಕೆಯ ಕಣಗಳಿಂದ ಕೂಡಿದ ಎಲುಬುಗಳು,
ಅವನು ಏಕಾಂಗಿಯಾಗುತ್ತಾನೆ, ಯಾವಾಗ
ಅವನು ಏಕಾಂಗಿಯಲ್ಲವೆಂದು ನಟಿಸುತ್ತಾನೋ ಆಗ.

ನಾವು ಅವರನ್ನು ಬಂಧಮುಕ್ತರನ್ನಾಗಿಸುತ್ತೇವೆ
ಆ ದುರಂತವನ್ನು ಸಂಯಮದಿಂದ ಸಹಿಸಿಕೊಳ್ಳಬಹುದು
ನೀನು ಮಾತ್ರ ನನ್ನ ತಲೆ ಬುರುಡೆಯನ್ನು ತೆರೆದಿಟ್ಟಾಗ,
ಅಥವಾ ನಾನು ನಿಧಾನವಾಗಿ ನಿನ್ನ ತಲೆ ಬುರುಡೆಗೆ ಪ್ರವೇಶಿಸುತ್ತೇನೆ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

May 27, 2009

ಆತ್ಮಾವಲೋಕನದ ಪ್ರತಿಬಿಂಬ

ನನ್ನ ಜೀವನದುದ್ದಕ್ಕೂ ಬೇಜವಾಬ್ದಾರಿಯಾಗಿ, ಜುಮ್ಮಂಥ ನಿಶ್ಚಿಂತೆಯಾಗಿ ಇರಬಹುದಿತ್ತು
ಬದುಕಿ ಉಳಿಯುದಕ್ಕಾಗಿಯೇ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ,
ನಿಜವಾಗಲೂ ಇದೊಂದು ಅನಗತ್ಯ ಕಿರುಕುಳ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ

ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ,
ದೇವರು, ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆಂದು ನಂಬಿದ್ದೇನೆ
ಕಡಲಕಿನಾರೆಯಲ್ಲಿ ನೀಲಿ ಹಾಗು ಬಿಳಿ ಬಣ್ಣದ ಅಲೆಗಳು ನೊರೆಯೆಬ್ಬಿಸಿ ಸುತ್ತುತ್ತಿವೆ,
ಮಕ್ಕಳು ಸುತ್ತಾಡುತ್ತಿದ್ದಾರೆ ಯಥೇಚ್ಛವಾದ ಮರಳ ದಂಡೆಗಳಲ್ಲಿ.
ಅವನಿಗೆ ಗೊತ್ತಿದೆ, ನಿಜವಾಗಲೂ ಅವನಿಗೆ ಗೊತ್ತಿದೆ
ನಾನಿಲ್ಲಿರುವುದು ಬಹಳ ಕಡಿಮೆ ಸಮಯಕ್ಕೆ ಮಾತ್ರ ಸೀಮಿತವೆಂದು,
ಬೇಸಿಗೆ ವಿರಾಮದ ವಿಶ್ರಾಂತಿಯೂ ಸಹ ಸ್ವಲ್ಪ ಸಮಯದಲ್ಲೇ ಹೇಗೆ ಮುಗಿದೇ ಹೋಯಿತಲ್ಲಾ,
ಅವನಿಗೆ ತಿಳಿದಿದೆ, ನಾನು ಎಲ್ಲವೂ ಹೇಳಿ, ಮುಗಿಸಿದ ನಂತರ
ನಮಗೆ ಜೊತೆಯಲ್ಲೇ ಇರಲು ಸಾಕಷ್ಟು ಸಮಯ ಸಿಗುವುದೆಂದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಜ್ಞಾನ

ನನ್ನ ರೆಕ್ಕೆಗಳ ಮುರಿಯುವುದನ್ನು ನಿಲ್ಲಿಸಿದಾಗ
ದೋಷಪೂರಿತ ವಸ್ತುಗಳ ಎದುರಲ್ಲಿ,
ಹಾಗೇ ತಿಳಿದುಕೊಂಡೆ, ಒಪ್ಪಂದಗಳು ಕಾದಿರುವುದನ್ನು
ಯಾವಾಗಲೋ ತೆರೆದುಕೊಳ್ಳುವ ಪ್ರತಿ ಬಾಗಿಲ ಹಿಂದೆ,
ನಾನು ನೋಡಿದಾಗ ಬದುಕನ್ನು ಕಣ್ಣುಗಳಿಂದ,
ಪ್ರಶಾಂತವಾಗಿ ಬೆಳೆದು, ಬಹಳ ಬುದ್ಧಿವಂತಿಕೆಯೊಂದಿಗೆ,
ಬದುಕು ನನಗೆ ಸತ್ಯವನ್ನು ನೀಡಿರಬಹುದಾದರೂ,
ಅದು ಬದಲಾಗಿ ಪಡೆದುಕೊಂಡಿದೆ -- ನನ್ನ ಯೌವನವನ್ನು.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಯುದ್ಧಕಾಲದಲ್ಲಿ ವಸಂತ

ಎಲ್ಲೋ, ಬಹಳ ದೂರದಲ್ಲಿ ವಸಂತಕಾಲ ಇರುವಂತೆ ಅನ್ನಿಸುತ್ತಿದೆ ನನಗೆ,
ಎಲೆಗಳ, ಮೊಗ್ಗುಗಳ ಸುವಾಸನೆ ಎಷ್ಟೋ ಕಳೆಗುಂದಿದೆ—
ಓಹ್, ವಂಸತದ ಹೃದಯ ತಾನೆ ಹೇಗೆ ಬರಲೊಪ್ಪೀತು
ವೇದನೆಯಿಂದ ನರಳುತ್ತಿರುವ ಪ್ರಪಂಚಕ್ಕೆ,
ತೀವ್ರ ವೇದನೆ?

ಸೂರ್ಯ ಉತ್ತರಕ್ಕೆ ಮುಖ ಮಾಡಿದಾಗ, ದಿನಗಳು ಸುದೀರ್ಘವಾಗುತ್ತವೆ,
ನಂತರ ಸಂಜೆಯ ತಾರೆ ಪ್ರಾಕಾಶಮಾನವಾಗಿ ಬೆಳೆಯುತ್ತದೆ—
ದಿನದ ಬೆಳಕಿಗೆ ಹಾಗೇ ಇರಲು ಹೇಗೆ ಸಾಧ್ಯ
ಗಂಡಸರು ಯುದ್ಧದಲ್ಲಿ ಹೊಡೆದಾಡಲೆಂದು
ಹಾಗೇ ಹೊಡೆದಾಡುತ್ತಿರಲು?

ಹುಲ್ಲು ನಡೆದಾಡುತ್ತಿದೆ ನೆಲದಲ್ಲಿ,
ಬೇಗನೆ ಬೆಳೆದು ಅಲೆಗಳನ್ನು ಹೊಮ್ಮಿಸುತ್ತದೆ—
ಅದಕ್ಕೆ ಹೃದಯ ಇದ್ದೀತೇ ತೂಗಾಡಲು
ಸಮಾಧಿಗಳ ಮೇಲೆ,
ಹೊಸ ಸಮಾಧಿಗಳು?

ಮರದ ರೆಂಬೆಗಳಡಿಯಲ್ಲಿ ಪ್ರೇಮಿಗಳು ನಡೆಯುತ್ತಿದ್ದರು
ಪಕ್ವವಾದ ಸೇಬು ಸಹಜವಾಗಿ ಉಸಿರಾಟ ನಿಲ್ಲಿಸುತ್ತವೆ—
ಆದರೆ, ಈಗ ಆ ಪ್ರೇಮಿಗಳ ಗತಿಯೇನು
ಸಾವಿನಿಂದಾಗಿ ಬೇರೆಯಾದವರು,
ಅಸಹಜ, ಅನ್ಯಾಯ ಸಾವಿನಿಂದ?

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಯಥಾಸ್ಥಿತಿ

ಮೆಟ್ಟಿಲ ಮೇಲಿಂದ ಕೇಳಿಸಿದ್ದು ಅವನ ಹೆಜ್ಜೆಯ ಸದ್ದೇ?
ಬಾಗಿಲ ಬಡಿದ ಶಬ್ದ ಕೇಳಿಸಿತಲ್ಲಾ, ಅದು ಅವನು ಮಾಡಿದ್ದೇ?
ಈಗಾಗಲೇ ಬಹಳ ದಣಿದಿದ್ದೇನೆ, ಆ ಬಗ್ಗೆ ಯೋಚಿಸುವುದೂ ಕೂಡ ಬಹತೇಕ ನಿಲ್ಲಿಸಿದಂತೆ,
ಆದರೂ ಒಮ್ಮೊಮ್ಮೆ ನನಗನ್ನಿಸುತ್ತದೆ, ಅವನು ಮತ್ತೊಮ್ಮೆ ಬರಬಹುದೆಂದು.

ನನಗೆ ಕೇಳಿಸಿದ್ದು ಬೀಸುವ ಗಾಳಿಯ ಸದ್ದು, ಅದು ನನ್ನನ್ನು ಕಂಡು ಸದಾ ಅಣಕಿಸುತ್ತದೆ,
ಆ ಹಾಳಾದ ಗಾಳಿ ಅವನಿಗಿಂತಲೂ ಮಹಾಕ್ರೂರಿ;
ಬಾಗಿಲನ್ನು ಬಡಿದದ್ದೂ ಸಹ ಅದೇ ಗಾಳಿ,
ಆದರೆ ಅವನು ಮತ್ತೆಂದಿಗೂ ಬಾಗಿಲು ಬಡಿಯುವುದೂ ಇಲ್ಲ ಅಥವಾ ಒಳಗೆ ಬರುವುದೂ ಇಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 26, 2009

ನೆಮ್ಮದಿ

ನೆಮ್ಮದಿ ನನ್ನೊಳಗೆ ಹರಿಯುತ್ತದೆ
ಕಡಲ ಬದಿಗಿರುವ ಕೊಳದೊಳಗೆ ದೊಡ್ಡ ಅಲೆಗಳು ನುಸುಳುವಂತೆ;
ಅವು ಎಂದೆಂದಿಗೂ ನನ್ನದಾಗಿರುತ್ತವೆ,
ಅದು ಮತ್ತೆ ಸಮುದ್ರಕ್ಕೆ ಮರಳುವಂತೆ ಅಲ್ಲ.

ನಾನೊಂದು ಕಡುನೀಲಿ ಕೊಳ
ಕಂಗೊಳಿಸುವ ನೀಲಾಕಾಶವನ್ನು ಸದಾ ಧ್ಯಾನಿಸುವುದು;
ನನ್ನ ನಂಬಿಕೆಗಳು ಸ್ವರ್ಗದಂತೆ ಬಲು ಎತ್ತರ,
ಅವೆಲ್ಲವೂ ನಿನ್ನೊಳಗೆ ಪರಿಪೂರ್ಣಗೊಂಡಿವೆ.

ನಾನೊಂದು ಚಿನ್ನದ ಕೊಳ
ಸೂರ್ಯ ಮುಳುಗುವಾಗ ಉರಿದು ಸಾಯುವಂತೆ—
ನೀನು ನನಗೆ ಅಗಾಧ ಆಗಸದಂತೆ,
ನಿನ್ನ ನಕ್ಷತ್ರಗಳನ್ನು ಸೆರೆ ಹಿಡಿಯಲು ಬಿಡು

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಹುಡುಗಿಯ ಉಡುಗೊರೆ

ಹುಡುಗಿ, ಹುಡುಗಿ, ಮೊದಲಿಡಬೇಡ
ನಿನ್ನ ಹೃದಯದೆಡೆಗಿನ ಮಾತನ್ನು;
ಆ ಸಂದರ ಪದಗಳು ಹಾಗೇ ನಳನಳಿಸುತ್ತಿರಲಿ;
ಹೇಳಬೇಕಾಗಿರುವುದನ್ನು ಎಂದಿಗೂ ಮೆಲ್ಲಗೆ ಪಿಸುಗೊಡದೆ.
ಹಾಗೇ ಬಿಂಬಿಸಿಕೊ, ಒಂದು ಪದ, ಇಲ್ಲಾ ಒಂದು ನೋಟದಿಂದ,
ಮಿತಭಾಷಿಯಾಗಿ, ಆಳವಿಲ್ಲದ ಪುಟ್ಟ ಕೊಳದಂತೆ.
ಸಾಧ್ಯವಾದಷ್ಟು ತಂಪಾಗಿದ್ದು, ಬೇಗನೆ ಮಾಯವಾಗು
ಏಪ್ರಿಲ್ ತಿಂಗಳ ಮಂಜಿನ ಹನಿಯಂತೆ;
ಆದಷ್ಟು ಮೃದುವಾಗಿದ್ದು, ಉಲ್ಲಾಸದಿಂದಿರು
ಮೇ ತಿಂಗಳ ಚೆರ್ರಿ ಹೂವಿನಂತೆ.
ಹುಡುಗಿ, ಹುಡುಗಿ, ಮಾತನಾಡಲೇ ಬೇಡ
ನಿನ್ನ ಕೆನ್ನೆಗಳ ಸುಡುವ ಆ ಕಣ್ಣೀರಿನ ಬಗ್ಗೆ-
ಅವಳಿಗೆ ಖಂಡಿತ ಅವನನ್ನು ಜಯಿಸಲಾಗುವುದಿಲ್ಲ, ಯಾರ
ಮಾತಲ್ಲಿ ಕಳೆದುಕೊಳ್ಳುವ ಭಯ ಕಂಡುಬರುವುದೊ ಅವಳಿಗೆ.
ಸಾಧ್ಯವಾದಷ್ಟು ಎಚ್ಚರದಿಂದಿರು, ಮತ್ತೆ ದುಃಖದಿಂದಲ್ಲ,
ನಿನ್ನ ಪ್ರೀತಿಯ ಹುಡುಗ ಸಿಕ್ಕೇಸಿಕ್ಕುತ್ತಾನೆ.
ಗಂಭೀರವಾಗಿರಬೇಡ, ಅಥವಾ ಪ್ರಾಮಾಣಿಕವಾಗಿ,
ನಿನ್ನ ಬಯಕೆ ಖಚಿತವಾಗಿ ನೆರವೇರುತ್ತದೆ-
ಒಂದುವೇಳೆ ಅದು ನಿನ್ನನ್ನು ಸಂತಸವಾಗಿಟ್ಟರೆ, ಮಗಳೆ,
ನೀನೇ ಮೊಟ್ಟಮೊದಲಿಗಳೆಂಬ ಹೆಗ್ಗಳಿಕೆ ನಿನ್ನದಾಗುತ್ತದೆ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ನಾಸ್ತಿಕತೆಯೊಳಗಿನ ದೋಷ

ಕುಡಿಯಿರಿ, ಕುಣಿಯಿರಿ, ನಕ್ಕು ನಲಿಯಿರಿ ಹಾಗೇ ವಿಶ್ರಮಿಸಿ,
ಪ್ರೀತಿಸಿ, ಮಧ್ಯರಾತ್ರಿ ಮೀರುವವರೆಗೂ ಸದ್ದುಮಾಡುತ್ತಾ,
ನಾಳೆ ನಾವು ಖಂಡಿತ ಸಾಯುತ್ತೇವೆ!
( ಆದರೆ, ಕರ್ಮ, ನಾವ್ಯಾರು ಹಾಗೆ ಮಾಡುವುದೇ ಇಲ್ಲ )

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 25, 2009

ಗಂಡಸರು

ಅವರ ಮುಂಜಾವಿನ ತಾರೆ ನೀನೆಂದು ಹೊಗಳುತ್ತಾರೆ
ಏಕೆಂದರೆ ನೀನಿದ್ದ ಹಾಗೆಯೇ ನೀನಿರುವೆ.
ಒಂದುವೇಳೆ ಅವರ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ,
ಅವರು ನಿನ್ನನ್ನು ವಿಭಿನ್ನವಾಗಿ ಬಂಬಿಸಲು ಯತ್ನಿಸುತ್ತಾರೆ;
ಸುರಕ್ಷಿತ ಹಾಗು ಸಂತೃಪ್ತಿಯಾಗಿ ನಿನ್ನನ್ನು ಆಸ್ವಾದಿಸಿದ ನಂತರ,
ನಿನ್ನನ್ನು ಸಂಪೂರ್ಣವಾಗಿ ಬದಲಾಯಿಸಲು ಹಂಬಲಿಸುತ್ತಾರೆ.
ನಿನ್ನ ಮನಸ್ಥಿತಿ, ನಡೆ-ನುಡಿಗಳನ್ನು ಶಪಿಸಿ, ಹಿಂಸಿಸುತ್ತಾರೆ;
ಬೇರೆಯೇ ವ್ಯಕ್ತಿಯನ್ನಾಗಿ ನಿನ್ನನ್ನು ಪರಿವರ್ತಿಸುತ್ತಾರೆ.
ನಿನಿಗಿಷ್ಟ ಬಂದಂತೆ ಮಾಡಲು ಅವಕಾಶ ನೀಡದೆ;
ಅವರ ಪ್ರಭಾವ ಬಳಸಿ ತಿಳಿ ಹೇಳುತ್ತಾರೆ.
ಮೊದಲು ಇಷ್ಟಪಟ್ಟು ಹೊಗಳಿದ ಎಲ್ಲವನ್ನೂ ನಕಾರಾತ್ಮಕವಾಗಿ ತಿರುಚುತ್ತಾರೆ
ನಿಶಕ್ತಳನ್ನಾಗಿಸಿ, ನನ್ನ ನರಳುವ ರೋಗಿಯನ್ನಾಗಿಸುತ್ತಾರೆ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಒಂದು ವರದಿ

ಈ ನಾಲ್ಕೂ ವಿಷಯಗಳನ್ನು ಅರಿಯುವಷ್ಟು, ನನ್ನ ಬುದ್ದಿ ಎಚ್ಚರವಹಿಸಬೇಕು:
ಸುಮ್ಮನಿರುವುದು, ದುಃಖ, ಸ್ನೇಹಿತ ಹಾಗು ಶತ್ರು.

ಈ ನಾಲ್ಕು ಅಂಶಗಳು ಇಲ್ಲವಾದಲ್ಲಿ ನಾನು ಚೆನ್ನಾಗಿರಬಹುದಿತ್ತು:
ಪ್ರೀತಿ, ಕುತೂಹಲ, ಮೊಡವೆ ಮತ್ತು ಸಂಶಯ.

ಈ ಮೂರು ಅಂಶಗಳನ್ನು ನಾನೆಂದಿಗೂ ಪಡೆಯಬಾರದು:
ಅಸೂಹೆ, ಸಂತೃಪ್ತಿ ಮತ್ತು ಸಾಕಾಗುವಷ್ಟು ವೈನ್.

ಈ ಮೂರು ಅಂಶಗಳು ಸಾಯುವವರೆಗೂ ನನ್ನೊಂದಿಗಿರಬೇಕು:
ನಗು, ನಂಬಿಕೆ ಮತ್ತು ಕಣ್ಣೊಳಗಿನ ಪೊರೆ

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಮಲಗುವ ಕೋಣೆಯ ಮಾಳಿಗೆ ಕೆತ್ತನೆಗಾಗಿ

ಪ್ರತಿ ಮುಸ್ಸಂಜೆಗೂ ಮತ್ತೊಂದು ದಿನದ ಅಂತ್ಯ;
ನಾನು ಎದ್ದೇಳಲೇ ಬೇಕು, ಜವಾಬ್ದಾರಿಗಳ ನಿಭಾಯಿಸಲು.
ಒಳ್ಳೆಯ ಉಡುಪು ಧರಿಸಿ, ಕುಡಿದು, ತಿನ್ನುವುದು ಮಾಡಿದರೂ,
ಬೆರಳು, ಕಾಲುಗಳನ್ನು ಕ್ರೀಯಾಶೀಲವಾಗಿಸಿ,
ಹೀಗೇ ಅಲ್ಲಿ-ಇಲ್ಲಿ, ಅಲ್ಪ- ಸ್ವಲ್ಪ ಕಲಿತು
ಅಳುವುದು, ನಗುವುದು ಹಾಗೇ ಬೆವರು ಸುರಿಸುವುದು, ಶಪಥ ಮಾಡುವುದು
ಹಾಡಗಳ ಕೇಳುವುದು, ಇಲ್ಲಾ ಒಳ್ಳೆಯ ನಾಟಕ ನೋಡುವುದು
ಸಾಧ್ಯವಾದರೆ ಹಾಳೆಯಲ್ಲಿ ಪದಗಳ ತುಂಬಿಸುವುದು
ಶತ್ರುಗಳನ್ನು ಶಪಿಸಿ, ಸ್ನೇಹಿತನ ಹೊಗಳುವುದಾದರೂ-
ಕೊನೆಯಲ್ಲಿ, ಹಾಸಿಗೆ ನನಗಾಗಿ ಕಾದಿರುತ್ತದೆ.

ಹೆಮ್ಮೆ ಹಾಗು ಸಾಮರ್ಥ್ಯದಿಂದ ಮುನ್ನಡೆದರೂ
ದೀರ್ಘ ವಿಶ್ರಾಂತಿಗಾಗಿ ಹಾಸಿಗೆಗೆ ಮರಳುತ್ತೇನೆ.
ಅತೀವ ಕುರುಡು ನೋವಿನಿಂದ ನಡೆಯುತ್ತೇನಾದರೂ,
ಹಾಸಿಗೆಗೆ ಮತ್ತೆ ಖಂಡಿತ ಬಂದೇ ಬರುತ್ತೇನೆ.
ಎಷ್ಟೇ ಸಂತೋಷವಾಗಿದ್ದರೂ, ಇಲ್ಲಾ ತಲೆ ತಗ್ಗಿಸುವಂತಾದರೂ,
ನನ್ನ ಎಲ್ಲಾ ದಿನಗಳೂ ಹಾಸಿಗೆಯತ್ತಲೇ ಸೆಳೆಯುತ್ತವೆ.
ಎದ್ದು ಹೊರಡುವುದು ಮಾಡುತ್ತಲೇ ಇದ್ದರೂ; ಮತ್ತೆ
ಎಂದಿನಂತೆ ಹಾಸಿಗೆಗೆ ವಾಪಸ್ಸಾಗಿರುತ್ತೇನೆ,
ಬೇಸಿಗೆ, ಚಳಿ, ಮಳೆ, ವಸಂತ, ವೈಶಾಕ ಎಲ್ಲ ಕಾಲದಲ್ಲೂ-
ಮತ್ತೆ ಏಕಾದರೂ ಎದ್ದೇಳುವೆ; ನಿಜವಾಗಲೂ ನಾನು ಶತದಡ್ಡಿ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸುಡು ಬಿಸಿಲು

ಯೌವನದಲ್ಲಿ, ನಾನು ಹಾಗೇ ಇರುತ್ತಿದ್ದೆ
ಅವರನ್ನು ಖುಷಿ ಪಡಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಾ,
ಹಾಗೇ ನಾನೂ ಬದಲಾಗುತ್ತಿದ್ದೆ, ಹೋಡಾಡುವ ಪ್ರತಿ ಯುವಕನ ಆಶಯಗಳಿಗೆ,
ನಿರೀಕ್ಷೆಗಳಿಗೆ ಮತ್ತು ಅವನ ವ್ಯಾಕ್ಯಾನಕ್ಕೆ ಹೊಂದಿಕೊಳ್ಳುವಂತೆ.

ಆದರೆ, ಈಗ ನನಗೆ ತಿಳಿದಿರುವಷ್ಟೇ ತಿಳಿದಿರುವುದು,
ನನಗೆ ಇಷ್ಟವಾಗಿದನ್ನೇ ನಾನು ಮಾಡುವುದು;
ಒಂದುವೇಳೆ ನಾನು ಹಾಗಿರುವುದು ನಿನಗೆ ಇಷ್ಟವಾಗದಿದ್ದಲ್ಲಿ,
ನೀನು ಮತ್ತು ನಿನ್ನ ಪ್ರೀತಿ ಹಾಳಾಗಿ ಹೋಗಲಿ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸಂಭೋಗ ಸ್ಥಿತಿ-ಗತಿಯ ಅವಲೋಕನ

ಯಾವುದೇ ಸಮಯದಲ್ಲಿ ಹೆಂಗಸು ಒಬ್ಬರೊಂದಿಗೆ ಮಾತ್ರ ಸಂಬಂಧವಿಟ್ಟುಕೊಳ್ಳಲು ಬಹಯಸುತ್ತಾಳೆ;
ಗಂಡಸು ಸದಾ ಹೊಸತನ್ನು ಅನುಭವಿಸುವುದರಲ್ಲಿ ಅತೀವ ಸಂತಸಪಡುತ್ತಾನೆ.
ಪ್ರೀತಿಯೆಂಬುದು ಮಹಿಳೆಯ ಸೂರ್ಯ, ಚಂದ್ರಮರಂತೆ;
ಗಂಡಸಿಗೆ ಖುಷಿಯಾಗಿರಲು ಹಲವು ಪ್ರಕಾರಗಳಿವೆ.
ಮಹಿಳೆ ಬದುಕುತ್ತಾಳೆ, ಆದರೆ ಅವಳ ಭಂಗವಂತನಲ್ಲಿ;
ಹತ್ತರವರೆಗೆ ಎಣಿಸಿನೋಡಿ, ಅಷ್ಟರೊಳಗೇ ಗಂಡಸಿಗೆ ಬೋರೆನಿಸಿಬಿಟ್ಟಿರುತ್ತದೆ.
ಒಟ್ಟಾರೆ ಇದರ ಸಾರಾಂಶ ಮತ್ತು ಇದರ ಅಂತರಾಳದ ಸತ್ವ, ಸತ್ಯ ಇಷ್ಟೇ,
ಇದರಿಂದ ಇನ್ನೇನು ಮಹಾ ಅದ್ಭುತಗಳು ಉದ್ಭವಿಸಲು ಸಾಧ್ಯ?

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 23, 2009

ಬಡಾಯಿಕೊಚ್ಚುಕೊಳ್ಳುವವ

ದಿನಗಳು ಉರುಳುತ್ತಿರುತ್ತವೆ ಸುತ್ತಿಕೊಂಡು
ಅವುಗಳ ಹುಚ್ಚು ಕುಣಿತದೊಂದಿಗೆ;
ಮತ್ತೆ ನೀನು ಉಸಿರಾಡುತ್ತಲೇ ಇರಬೇಕು,
ಆದರೆ, ನಾನು ಸುರಕ್ಷಿತವಾಗಿರುತ್ತೇನೆ ನರಕದಲ್ಲಿ.

ಜನವರಿಯ ಹವಾಮಾನದಂತೆ,
ವರ್ಷಗಳು ಚುರುಕಾಗಿ ಕಚ್ಚುತ್ತವೆ,
ಮತ್ತೆ ನಿನ್ನ ಎಲುಬುಗಳನ್ನು ಒಟ್ಟಿಗೆ ಎಳೆಯುತ್ತವೆ,
ನಿರಂತರ ಒಟಗುಟ್ಟುವ ಹೃದಯ ಸುತ್ತಿಕೊಂಡು.

ನೀನು ಸೊಗಸಾಗಿರುವವುಗಳಿಂದ ರೂಪುಗೊಂಡಿರುವೆ
ಅವುಗಳು ಒಣಗಿ, ಮುದುಡಿ, ಬಿರುಕು ಬಿಡುತ್ತವೆ.
ಯಾವುದು ಕಂಡರೆ ನಿನಗೆ ತುಂಬಾ ಭಯವಾಗತ್ತದೆಯೋ,
ಅದೇ ನಿನಗೆ ಎಲ್ಲರ ಕಣ್ಣುಗಳಿಂದ ಕಾಣಿಸುತ್ತಿರುತ್ತದೆ.

ನಂತರ ನೀನು ತಪ್ಪು ಮಾಡುತ್ತಲೇ ಮುಂದುವರೆಯುವೆ
ತೀವ್ರ ದರ್ಪದ ಬಿರುಸು ನುಡಿಗಳ ಸಾಲು
ಕುಹಕ ನಗೆಯಿಂದ ನಿನ್ನ ಗಂಟಲು ಸೀಳುತ್ತದೆ
ಮತ್ತು ನಿನ್ನ ಕಣ್ಣುಗಳನ್ನು ಉಪ್ಪುನೀರಿಂದ ಸುಡುತ್ತದೆ.

ನೀನು ತೀರಾ ನಿಶಕ್ತನಾಗಿ, ಅಪ್ರಸ್ತುತನಾಗಿಬಿಡುವೆ
ಮಂದನೋಟದಿಂದ, ಎಲ್ಲವನ್ನೂ ಅಡಗಿಸಿಟ್ಟ ತಲೆಯೊಂದಿಗೆ,
ನಾನು ಮಾತ್ರ ಚಿರಯೌವನದೊಂದಿಗೆ, ಖುಷಿಯಾಗಿದ್ದೇನೆ
ಸತ್ತು ಗರ್ಜಿಸುತ್ತಿರುವವರ ಜೊತೆಯಲ್ಲಿ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸೃಜನಶೀಲರ ಒಕ್ಕೂಟ

ಸಾಹಿತಿಗಳು, ನಟರು, ಕಲಾವಿದರು ಹಾಗು ಅಂಥಹವರು
ಇತ್ತ ಏನೂ ಗೊತ್ತಿಲ್ಲದವರೂ ಅಲ್ಲ, ಅತ್ತ ಪ್ರಖರ ಪಂಡಿತರೂ ಅಲ್ಲ.
ಶಿಲ್ಪಕಲೆಗಾರರು, ಹಾಡುಗಾರರು ಹಾಗು ಅಂಥಹ ವರ್ಗದವರು
ಅವರವರ ವೈಯುಕ್ತಿಕ ವಿಷಯಗಳನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೇಳುತ್ತಾರೆ.
ನಾಟಕಕಾರರು, ಕವಿಗಳು ಹಾಗೇ ಅಂಥಹ ಕುದುರೆಗಳ ಕತ್ತುಗಳುಳ್ಳವರು
ಆರಂಭ ಎಲ್ಲಿಂದಾದರೂ ಮಾಡಲಿ, ಮುಗಿಸುವುದು ಮಾತ್ರ ಸಂಭೋಗದಲ್ಲಿ.
ಪತ್ರಕರ್ತರು, ವಿಮರ್ಶಕರು ಹಾಗೇ ಅವರ ಗುಂಪಿನವರು
ಹೇಳುವುದೇನೂ ಇರುವುದಿಲ್ಲ, ಮತ್ತೆ ಏನೂ ಇಲ್ಲವೆಂದು ಹೇಳುವುದೂ ಇಲ್ಲ
ನನ್ನ ಈ ಕ್ಲಿಷ್ಟ ಪರೀಕ್ಷೆಗಳನ್ನೂ ಮೀರಿದವರು ಏನಾದರೂ ಮಾಡಬಲ್ಲವರು
ದೇವರೇ, ಅಂಥಹ ವ್ಯಕ್ತಿಗಳಿಗೆ ಖಚಿತವಾಗಲೂ ಜೀವವಿಮೆ ಅತ್ಯಗತ್ಯ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 22, 2009

ನನಗಾಗಿ ಅಲ್ಲ

ಏಪ್ರಿಲ್ ರಾತ್ರಿಗಳು ನಿಶ್ಚಲ ಮತ್ತು ಸುಮಧುರ
ಎಲ್ಲಾ ಮರಗಳು ಹೂವುಗಳಿಂದ ಶೃಂಗಾರಗೊಂಡಿರುತ್ತವೆ
ನೆಮ್ಮದಿಯೆಂಬುದು ನಿಶಬ್ಧವಾಗಿ ಅವರ ಬಳಿಗೆ ನಡೆದು ಬರುತ್ತದೆ
ಆದರೆ ನನಗಾಗಿ ಅಲ್ಲ.

ನನ್ನ ನೆಮ್ಮದಿ ಅವಿತುಕೊಂಡಿದೆ ಅವನ ಹೃದಯದಲ್ಲಿ
ಅಲ್ಲಿಗೆ ಹೋಗಲು ನನಗೆ ಸಾಧ್ಯವಿಲ್ಲ,
ಈ ರಾತ್ರಿ ಎಲ್ಲರಿಗೂ ಪ್ರೀತಿ ಸಿಗುತ್ತದೆ
ಆದರೆ ನನಗಾಗಿ ಅಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಭಸ್ಮವಾದ ಪ್ರೀತಿ

ಸೊರಗಿದ ನನ್ನ ಪ್ರೀತಿಯನ್ನು ಬೂದಿಯಾಗಿಸುವೆ
ಆ ಮರದಡಿಯಲ್ಲಿ,
ಆಗಸವ ಚುಂಬಿಸಲು ಹಾತೊರೆಯುವ ದಟ್ಟ ಕಾಡಲ್ಲಿ
ಯಾರಿಗೂ ಕಾಣದಂತೆ.

ಅವನ ತಲೆಗೆ ಯಾವ ಹೂವುಗಳನ್ನೂ ಹಾಕುವುದಿಲ್ಲ,
ಪಾದದ ಬಳಿ ಕಲ್ಲನ್ನೂ ಸಹ ನೆಡುವುದಿಲ್ಲ,
ಅವು ತೀವ್ರವಾಗಿ ಪ್ರೀತಿಸಿದ ತುಟಿಗಳು
ಕಹಿಯಾದ ಸಿಹಿ.

ಅವನ ಸಮಾಧಿಯ ಹತ್ತಿರ ಇನ್ನೆಂದೂ ಸುಳಿಯುವುದಿಲ್ಲ,
ತೀಕ್ಷ್ಣವಾಗಿ ತಂಪಾಗಿರುವ ಮರಗಳಿರುವುದರಿಂದ.
ಸಾಧ್ಯವಾದಷ್ಟೂ ಸಂತಸ ಪಡೆಯಲೆತ್ನಿಸುವೆ
ನನ್ನ ಕೈಗಳು ಹಿಡಿಯುವಷ್ಟು.

ದಿನ ಪೂರ ಹೊರಗೇ ಕಳೆಯುತ್ತೇನೆ ಸೂರ್ಯನಿರುವಲ್ಲಿ,
ವಿಶಾಲವಾಗಿ ಬೀಸುತ್ತಿರುವ ಮುಕ್ತ ಗಾಳಿಯಲ್ಲಿ,
ಆದರೂ ಸಹ, ಪ್ರತೀರಾತ್ರಿ ಅಳುತ್ತಾ ಕಣ್ಣೀರಿಡುತ್ತೇನೆ
ಯಾರಿಗೂ ತಿಳಿಯದ ಸಮಯದಲ್ಲಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 21, 2009

ಪ್ರೀತಿಯ ನಂತರ

ಇನ್ನು ಅಲ್ಲಿ ಯಾವ ಮೋಡಿಯೂ ನಡೆಯುವುದಿಲ್ಲ
ಎಲ್ಲರಂತೆಯೇ ನಾವೂ ಸಹ ಭೇಟಿಯಾಗುತ್ತೇವೆ
ನೀನು ಯಾವ ವಿಸ್ಮಯವನ್ನೂ ನನ್ನಲ್ಲಿ ಸೃಷ್ಟಿಸಲು ಆಗುತ್ತಿಲ್ಲ,
ಹಾಗೇ ನಾನೂ ಸಹ ನಿನ್ನಲ್ಲಿ.

ನೀನು ಬೀಸುವ ಗಾಳಿಯಾಗಿದ್ದೆ ಮತ್ತೆ ನಾನು ಸಾಗರ---
ಅಲ್ಲಿ ಯಾವ ಅದ್ಭುತವೂ ಘಟಿಸುವುದಿಲ್ಲ
ನಾನು ಬೆಳೆದಿದ್ದೇನೆ ಲೆಕ್ಕವಿಲ್ಲದಷ್ಟು
ದಡದ ಪಕ್ಕದಲ್ಲಿರುವ ಹೊಂಡದಂತೆ.

ಆದರೆ, ಹೊಂಡವು ಭೋರ್ಗರೆವ ಅಲೆಗಳು ಅಪ್ಪಳಿಸುವುದರಿಂದ ಪಾರಾದರೂ
ಮತ್ತೆ ಅಲೆಗಳ ತೀವ್ರ ಏರಿಳಿತಗಳನ್ನು ಕ್ರಮೇಣ ಕ್ಷೀಣಿಸಿ ನಿಲ್ಲಿಸಿದರೂ
ಅದು ಸಾಗರಕ್ಕಿಂತಲೂ ಹೆಚ್ಚು ಕಹಿಯಾಗಿ ಬೆಳೆಯುತ್ತದೆ
ಎಲ್ಲಾ ಅದರ ನೆಮ್ಮದಿಗಾಗಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

“ನಿನಗೆ ಗೊತ್ತಾಗಲೇ ಇಲ್ಲವೇ?”

ನಿನಗೆ ಗೊತ್ತಾಗಲೇ ಇಲ್ಲವೇ, ತುಂಬಾ ಹಿಂದೆ, ನೀನೆಷ್ಟೊಂದು ನನ್ನ ಪ್ರೀತಿಸುತ್ತಿದ್ದೆ ಎಂದು---
ನಿನ್ನ ಪ್ರೀತಿ ಎಂದಿಗೂ ಕಡಿಮೆಯಾಗುವ, ಮತ್ತೆ ಕಳೆದು ಹೋಗುವ ಸಾಧ್ಯತೆ ಇಲ್ಲವೇ ಇಲ್ಲವೆಂದು?
ನೀನು ಆಗ ಯೌವನದಲ್ಲಿದ್ದೆ, ಹೆಮ್ಮೆಯಿಂದ ತಾಜಾ ಹೃದಯದೊಂದಿಗೆ,
ತಿಳಿದುಕೊಳ್ಳುವುದಕ್ಕೆ ನೀನು ಸಾಕಷ್ಟು ಚಿಕ್ಕವನಾಗಿದ್ದೆ.

ವಿಧಿ ಬಿರುಗಾಳಿಯಿದ್ದಂತೆ, ಅದರ ಮುಂದೆ ಕೆಂಪು ಎಲೆಗಳು ಹಾರುತ್ತವೆ
ತುಂಬಾ ಬಿರುಕುಂಟಾಗಿದೆ, ವರ್ಷದಲ್ಲಿ ಸಂಭವಿಸಿದ ತೀಕ್ಷ್ಣ ಕಲಹಗಳಿಂದ---
ಇತ್ತೀಚೆಗೆ ನಮ್ಮ ಭೇಟಿ ವಿರಳ, ಆದರೂ ನೀನು ಮಾತನಾಡುವುದು ಕೇಳಿಸಿಕೊಂಡಾಗ
ನಿನ್ನ ಗುಟ್ಟೇನೆಂದು ಗೊತ್ತಾಗುತ್ತದೆ, ನನ್ನ ಪ್ರಿಯನೆ, ನನ್ನ ಗೆಳೆಯನೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ನಿನ್ನ ನೆನಪಾದಾಗ

ನಿನ್ನ ಬಗ್ಗೆ ಯೋಚಿಸಿದೆ, ನೀನು ಹೇಗೆ ಈ ಸೌಂದರ್ಯವನ್ನು
ಇಷ್ಟಪಡಬಹುದೆಂಬ ಕುತೂಹಲದಿಂದ,
ಹಾಗೇ ಈ ಉದ್ದನೆಯ ಕಡಲತೀರದಲ್ಲಿ ಏಕಾಂಗಿ ನಡೆಯುತ್ತಾ
ನಾನು ಕೇಳಿಸಿಕೊಂಡೆ, ಅಲೆಗಳು ಲಯಬದ್ಧವಾಗಿ ಬಿರುಸಾಗಿ ಸೀಳುವ ಸದ್ದನ್ನು
ಒಮ್ಮೆ ನೀನು ನಾನು ಅವುಗಳ ಹಳೆಯರಾಗವನ್ನು ಕೇಳಿಸಿಕೊಂಡಂತೆ.

ನನ್ನ ಸುತ್ತಲೂ ಮಾರ್ದನಿಸುವ ಮರಳು ಗುಡ್ಡಗಳು, ಹಿಂದೆ ಎಲ್ಲೋ
ತಣ್ಣಗೆ ಹಾಯಾಗಿ ಬೆಳ್ಳಿಯಂತೆ ಮಿಂಚುತ್ತಿರುವ ಸಾಗರ---
ನಾವಿಬ್ಬರೂ ಸಾವಿನ ಮುಕಾಂತರ ಸಾಗುತ್ತೇವೆ, ಹಾಗೇ ವಯಸ್ಸು ಹೆಚ್ಚಾದಂತೆ
ಮತ್ತೆ ನೀನು ಆ ಶಬ್ಧವನ್ನು ನನ್ನೊಂದಿಗೆ ಕೇಳುವ ಮೊದಲೇ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಏಕಾಂಗಿ

ಪ್ರೀತಿಯಿದ್ದರೂ ಸಹ, ನಾನು ಏಕಾಂಗಿ
ನಾನು ಎಲ್ಲವನ್ನೂ ಪಡೆದಿದ್ದರೂ, ನೀಡಿದ್ದರೂ ಸಹ
ನಿನ್ನ ನವಿರಾದ ಹಾರೈಕೆಯ ಜೊತೆಗಿದ್ದರೂ,
ಒಮ್ಮೊಮ್ಮೆ ಬದುಕುವ ಹಂಬಲ ನನಗಿಲ್ಲ.

ನಾನು ಒಬ್ಬಂಟಿ, ಅತಿ ಎತ್ತರದ ಶಿಖರದ ತುದಿಯಲ್ಲಿ
ನಿಂತಂತೆ ಅನ್ನಿಸುತ್ತದೆ, ದಣಿದು ಬತ್ತಿರುವ ಬರಡು ಜಗದಲ್ಲಿ,
ಕೇವಲ ಹಿಮವೊಂದೇ ನನ್ನ ಸುತ್ತುಲೂ ಮುತ್ತಿಕೊಂಡಂತೆ,
ನನ್ನ ಮೇಲೆ ಕೊನೆಯಿಲ್ಲದ ನೆಲೆಯೊಂದು ತೆರೆದಿಟ್ಟಂತೆ

ಮರೆಯಾದ ಭೂರಮೆ ಮತ್ತು ಅವಿತುಕೊಂಡ ಸ್ವರ್ಗ
ಕೇವಲ ನನ್ನಲ್ಲಿರುವ ಚೈತನ್ಯದ ಹೆಮ್ಮೆಯಿಂದಲೇ
ನನಗೆ ನೆಮ್ಮದಿಯಿಂದಿರಲು ಸಾಧ್ಯವಾಗಿದೆ
ಸತ್ತು, ಏಕಾಂಗಿಯಾಗಿರದೆ ಇರುವವರಿಂದ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 20, 2009

ಸುಂದರ ಕಲ್ಪನೆ

ಅವಳ ನುಡಿಗಳು ಪಾರದರ್ಶಕ ನೀರಿನಂತೆ
ಕಲ್ಲಿನ ಮೇಲೆ ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ
ದೂರದ ದಟ್ಟಡವಿಯಲ್ಲಿ, ಆ ಸ್ತಬ್ಧ ದಿಗಂತದಲ್ಲಿ
ಮೌನವು ಏಕಾಂಗಿಯಾಗಿ ಆಟವಾಡುತ್ತದೆ.

ಅವಳ ಭಾವನೆಗಳು ತಾವರೆ ಹೂವಿನಂತೆ
ಪವಿತ್ರ ಸರೋವರದಲ್ಲಿ ಪೂರ್ಣವಾಗಿ ಅರಳಿದೆ
ಬದಿಯ ಮಂದಿರದ ಮಹಾದ್ವಾರದ ಅಡಿಯಲ್ಲಿ
ಮೌನವು ನೆಲೆಸಿ ಕನಸು ಕಾಣುತ್ತದೆ.

ಅವಳ ಮುತ್ತುಗಳು ನಗುವ ಗುಲಾಬಿಗಳಂತೆ
ಗಾಢ ಮುಸ್ಸಂಜೆಗೂ ಹೊಳಪು ತರುತ್ತವೆ
ಆ ಬೃಂದಾವನವು ಮುಚ್ಚುವ ಸಮಯಕ್ಕೆ
ಮೌನವು ಅಲ್ಲಿ ನಿದ್ದೆಗೆ ಜಾರುತ್ತದೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 19, 2009

ಕೂಗು

ಓಹ್, ಅಲ್ಲಿ ಎಷ್ಟೋ ಆಕರ್ಷಕ ಕಣ್ಣುಗಳಿವೆ, ಅವನಿಗೆ ಕಾಣಲು ಮತ್ತೆ ಕೆರಳಲು
ಹಾಗು ಸಾಕಷ್ಟು ಮಾಂತ್ರಿಕ ಕೈಗಳು ಹಾತೊರೆಯುತ್ತಿವೆ,
ಅವನ ಕೈಗಳನ್ನು ಮೃದುವಾಗಿ ಸವರಿ ಮಂತ್ರಮುಗ್ಧನನ್ನಾಗಿಸಲು
ಆದರೆ ನನ್ನ ಪ್ರಿಯಕರನಿಗೆ ಖಂಡಿತವಾಗಿಯೂ ನಾನೇ ಹಾಗು ನನ್ನದೇ
ಏಕೈಕ ಧ್ವನಿ.

ಓಹ್, ನೆಮ್ಮದಿಯ ವಿಶ್ರಾಂತಿಗಾಗಿ ಅವನ ತಲೆಯನ್ನೊರುವ ದಿಂಬಾಗಲು
ಅಲ್ಲಿ ಎಷ್ಟೋ ಮೋಹಕ ಬಗೆಬಗೆಯ ಕುಚಗಳು ಕುತೂಹಲದಿಂದ ಕಾದಿವೆ,
ಹಾಗೇ ತಮ್ಮ ಮಾದಕ ತುಟಿಗಳ ಮೇಲೆ ಅವನ ತುಟಿಗಳನ್ನಿಟ್ಟು ಅಮಲೇರಿಸಲು
ಅಲ್ಲಿ ಲೆಕ್ಕವಿಲ್ಲದಷ್ಟು ಕೆಂದುಟಿಗಳು ಕಾತುರದಿಂದ ತಳಮಳಗೊಂಡಿವೆ
ಆದರೆ, ನಾನು ಸಾಯುವವರೆಗೆ ಖಚಿತವಾಗಿ ನಾನೇ ಹಾಗು ನನ್ನದೇ
ಏಕೈಕ ಕೂಗು

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಕನಸಿನ ಚಿತ್ರಮಂದಿರ

ನಿನ್ನನ್ನು ಒಂದು ಸಿನಿಮಾದಲ್ಲಿ ನೋಡಿದೆ
ಪಕ್ಕದಲ್ಲಿ ನಿಂತ್ತಿದ್ದಾಗ... Lights, Camera
And Action…ನಂತರ ಎಲ್ಲವೂ ಕಪೋಲಕಲ್ಪಿತ
ಹೃದಯಗಳೇ ಅಲ್ಲಿ ನಿರ್ಮಾಪಕರು...
ಸವಿಮನಸುಗಳೇ ಅದರ ನಿರ್ದೇಶಕರು...

ದೃಶ್ಯ: 1

ನೀನು ನಿಲ್ಲದೇ ನಗುತ್ತಿದ್ದೆ
ತಂಗಾಳಿ ಏನನ್ನೋ ನಿನ್ನ ಕಿವಿಯಲ್ಲಿ ಪಿಸುಗುಡುತ್ತಿತ್ತು
“ಅವನು ನಿನ್ನನ್ನು ತುಂಬಾ ಬಯಸುತ್ತಿದ್ದಾನೆ, ಆದರೆ ಅದನ್ನು ತಿಳಿಯುವ ಆಸಕ್ತಿ ನಿನ್ನಲ್ಲಿಲ್ಲ”
ಬಾಯಿ ಹೇಳುತ್ತಿದೆ “ಅದು ತಂಬಾ ಸೊಗಸಾಗಿದೆ ” ಎಂದು
ಆಗ ದೇಹವೆಂದಿತು “ಒಲವೆಂಬ ಕಾಫಿ ಕುಡಿದ ನಂತರ ನನಗೆ ಬಹಳ ಹಿತವಾಗಿದೆ ” ಎಂದು
ನಿನ್ನ ಕಣ್ಣುಗಳು ಮಿಂಚುತ್ತಿವೆ, ಹಾಲಿವುಡ್ ನಕ್ಷತ್ರಗಳಂತೆ
ನರನಾಡಿಗಳು ಸಂಪೂರ್ಣವಾಗಿ ಚುರುಕುಗೊಂಡಿವೆ
ಪಾಪ ಊದಿಕೊಂಡ ಅಂಗಾಂಗಳೆಲ್ಲ ಮತ್ತೆ ಸಹಜವಾಗಿವೆ
ಪಿತ್ತಕೋಶದ ಒತ್ತಡವು ಕ್ರಮೇಣ ಕ್ಷೀಣಿಸುತ್ತಿದೆ
ನರಳುತ್ತಿದ್ದ ಹೃದಯ ಈಗ ನಳನಳಿಸುತ್ತಿದೆ
ಕಾಮ ಉದ್ರೇಕಿಸುವ ಕ್ಯಾನ್ಸರಸ್ ಕಣಗಳು ತೀವ್ರಗೊಂಡಿವೆ
ಕಾಡುತ್ತಿರುವ ಟ್ಯೂಮರ್ ಮೆದುಲಿನಲ್ಲಿ ಬೆಳೆಯುತ್ತಿದೆ
ಸಿಹಿ ಡೈಯಾಬಿಟಿಕ್ ಕೈಗಳು ಗಟ್ಟಿಯಾಗಿ ಮುಷ್ಟಿಯನ್ನಿಡಿದಿವೆ
ಹೌದು, ನನಗೆ ಜೇನು ಸಿಕ್ಕಂತಾಗಿದೆ. ಹಾಗಾಗಿ ಬಹಳ ಸಿಹಿಯಾಗಿದ್ದೇನೆ
ನಿನ್ನ adrenalin ತುಂಬಿಸಿದ blood sugar ನಿಂದಾಗಿ.

ದೃಶ್ಯ: 2

ನಾನೊಂದು ಸುಂದರ ತೋಟದಲ್ಲಿ ನೆಲೆಸಿದ್ದೇನೆ
ಸುಗಂಧ ಭರಿತ ಪರಿಮಳ ಎಲ್ಲೆಡೆ ಪಸರಿಸುತ್ತಿದೆ
ಹೂದೋಟವು ಅದ್ಭುತವಾಗಿ ಕಂಗೊಳಿಸುತ್ತಿದೆ
ನಾವು ಸಂತೃಪ್ತಿ ಹೊಂದುವ ಕ್ಷಣಕ್ಕೆ ಸನಿಹದಲ್ಲಿದ್ದೇವೆ... ಆದರೂ
ನೀನು ನನ್ನನ್ನು ಕಾಡುತ್ತಿರುವೆ, ನನ್ನ ಕಿಡ್ನಿಗಳನ್ನೇ ಕಬಳಿಸುತ್ತಾ...
ಹಿಗ್ಗಿದ ಕಿಡ್ನಿಗಳ (glomerulonephritis) ಕಾಯಿಲೆಯಂತೆ
ನಿನ್ನ ಮುತ್ತುಗಳು chemotherapy ಯಂತೆ
ಗುಣವಾಗುತ್ತಿವೆ ನನ್ನ ಗಾಢ ಹಂಬಲಗಳು
ನಿನಗಾಗಿ
ನಮ್ಮ ಕಣ್ಣೀರು insulin ಇದ್ದಂತೆ
Pancreas ಉದ್ವೇಗದಲ್ಲಿ ಈಜಾಡುತ್ತಿದೆ
ನೀನು ನನ್ನ painkiller ಆಗುವೆಯಾ?
Morphineನ ಮಳೆಸುರಿಸಿ ನನ್ನ ಸಂತಸದ ಶಿಖರವನ್ನೇರಿಸು
ನಾನು ನೋವಿನಲ್ಲಿದ್ದಾಗ
ನಾನು ನಿನ್ನ ಅಪ್ಪುಗೆಗಳ ಮತ್ತು ಮಾದಕ ಮೃದು ಸ್ಪರ್ಶದ
ದಾಸನಾಗಿಬಿಟ್ಟಿದ್ದೇನೆ
HIV virusಗಳಂತೆ
ನನ್ನ ಮತಿಯನ್ನು ಕೆಡಿಸಿಬಿಟ್ಟಿವೆ
ಮೃದುವಾಗಿ ಕೊಲ್ಲುತ್ತಾ
ನಿನ್ನ ಸಿಹಿ ಮಾತುಗಳೇ
ಆ ಕಿಡಿಗೇಡಿಗಳು
ನನ್ನಲ್ಲಿ ಅತಿಯಾದ ರಕ್ತದೊತ್ತಡ ಸೃಷ್ಟಿಸಿವೆ
ಈಗ ನನಗೆ ನೀನು ಬೇಕು
ರಕ್ತದೊತ್ತಡ ನಿಯಂತ್ರಿಸುವ
Beta-blocker ಔಷದಿಯಾಗಿ

ದೃಶ್ಯ:3

ಮುಸ್ಸಂಜೆ ಅಂಬೆಗಾಲಿಡುತ್ತಿದ್ದಾಗ
ನಾವು ಒಬ್ಬರ ಪಕ್ಕದಲ್ಲೊಬ್ಬರು ಅಂಗಾತ ಮಲಗಿರುತ್ತೇವೆ
Post-mortem ಹಾಸಿಗೆಯ ಮೇಲೆ
ಪೂರ್ಣ ನಗ್ನರಾಗಿ ಪರಮ ಶತ್ರುಗಳಂತೆ
ಯಾರಾದರೂ ಕತ್ತರಿಸಬಹುದು ನಮ್ಮ ದೇಹಗಳನ್ನು
ತುಂಡುತುಂಡು
ಮರಣೋತ್ತರ ಪರೀಕ್ಷೆಗಾಗಿ
ದೇವರಲ್ಲದಿದ್ದರೆ, ಯಾರಾದರೂ ಆ ಕ್ಷೇತ್ರದ ಪರಿಣತಿ ಪಡೆದವರು
ನಮ್ಮ ಪಾಪದ ಪ್ರೀತಿ
ಕಾಯಿಲೆಯ ಸೃಷ್ಟಿಗೆ, ಬೆಳವಣಿಗೆಗೆ, ಪರಿಣಾಮಗಳಿಗೆ ಕಾರಣಗಳನ್ನು
ಹುಡುಕಲು ಸಿಗಿದು ಪರಿಶೀಲಿಸಿ, ಹೃದಯದ ತೀವ್ರ ಬೇನೆಯೆಂಬ ತೀರ್ಮಾನ...
ಅದೊಂದು ಮುರಿದ ಬಾಣ...

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

May 18, 2009

ನಾವು ಬೇರೆಯಾದಾಗ

ಜ್ವಾಲಾಮುಖಿಯ ಗರ್ಜನೆಗೆ ಲಾವಾರಸ ಉಕ್ಕುತ್ತಿದೆ
ಚದುರಿ ಬಿದ್ದಿವೆ ಎಲ್ಲೆಡೆ ಸ್ಥಳೀಯರ ಶವಗಳು
ಹುಲ್ಲು ಕುಪ್ಪೆಗಳಿನ್ನು ಅನವಶ್ಯಕ
ಅಪಾರ ಆಸ್ತಿ, ಜೀವರಾಶಿಗಳೆಲ್ಲವೂ ಸರ್ವನಾಶ

ನಾನು ರೆಕ್ಕೆಯಂತೆ ತೇಲಾಡಬಹುದಿತ್ತು
ಆದರೆ, ನಿನ್ನ ಗಾಢ ಆರಾಧನೆಯ ತಳಪಾಯಕ್ಕೆ ಬಿದ್ದಿರುವೆ
ನಿರಂತರ ಗೊಣಗಾಡುವ ಬಾವಿಯಲ್ಲಿ ಮುಳುಗಿ,
ಮಂದಗತಿಯಲ್ಲಿ ತಳಕ್ಕೆ ತಲುಪುತ್ತಿರುವೆ

ನಿನ್ನ ಹೊಡೆತ ಜ್ವಾಲಾಮುಖಿ ಅಪ್ಪಳಿಸುವಷ್ಟೇ ಭಯಾನಕ
ನನ್ನನ್ನು ಲಕ್ಷೋಪಲಕ್ಷ ಚೂರುಗಳನ್ನಾಗಿಸಿದೆ
ಆದರೆ ನಿನ್ನ ಮಧ್ಯಭಾಗದಲ್ಲಿಯೇ ನಿಂತಿರುವೆ
ಆ ನಿನ್ನ ಭೀಕರ ಭೂತದ ದರ್ಶನಕ್ಕಾಗಿ

ನಿನ್ನ ಹಿಮಗಟ್ಟಿದ ಪುಟ್ಟ ಹೃದಯ
ನಿನ್ನ ಮಾತಿನಷ್ಟೇ ತಂಪಾಗಿರುವುದು
ಹೇಗಾದರೂ ಇರಲಿ, ಏನಾದರೂ ಆಗಲಿ
ನಾ ನಿನ್ನಲ್ಲಿಗೇ ಬರುವೆ, ಅಲ್ಲೇ ಹೋಡಾಡುವೆ

ನನ್ನಿಂದ ದಯವಿಟ್ಟು ದೂರ ಹೋಗಬೇಡ
ನಾನೇನಾದರು ನೋವುಂಟು ಮಾಡಿದರೆ
ನಿನ್ನ ಕ್ಷಮೆಯ ಬಿಕ್ಷೆ ಬೇಡಲೇ?
ನನ್ನ ಪ್ರೀತಿ ಸತ್ಯವಲ್ಲವಾದ್ದರಿಂದ

ಎಂದಾದರೂ ನನ್ನನ್ನು ಕ್ಲಿಷ್ಟ ಪರಿಸ್ಥಿತಿಯಲ್ಲಿ ಕಂಡಾಗ
ಹಾದಿಯು ಬುದ್ಧಿಭ್ರಮಣೆಯೆಡೆಗೆ ಕೊಂಡೊಯ್ಯುವಾಗ
ಯಾರಿಗೂ ಬೇಡವಾಗಿ, ದಿಕ್ಕಿಲ್ಲದವನಂತೆ ಪರದಾಡುವಾಗ
ಅದೇ ದಿನವೇ ನನ್ನ ಪ್ರೀತಿಯೂ ಸಹ ಹಾದಿ ತಪ್ಪುತ್ತದೆ

ನನ್ನ ಹೃದಯವು ಕಡುನೀಲಿಯಾದಾಗ, ಗುಲಾಬಿಯಂತಲ್ಲ
ಹೊಳಪಿನ ಕೆಂಪು, ಆಗಿನ ನಮ್ಮ ಅತೀವ ಅಪೇಕ್ಷೆಯಂತೆ
ನಿಲುಗಡೆಗಳು ಮತ್ತು ವಿರಾಮಗಳು ಇನ್ನೇಕೆ?
ಆ ವ್ಯಾಮೋಹದ ತೀವ್ರತೆ ಇನ್ನು ನೆನಪು ಮಾತ್ರ

ನಮ್ಮ ಒಲವಿನ ಕವನ ನೆನಪಿಸುತ್ತಿದೆ
ಮನುಷ್ಯರಿಗಿದು ಅತಿದೊಡ್ಡ ದುರಂತವೆಂದು
ನನ್ನ ರಕ್ತ ನೀರಿನಂತೆ ಹರಿಯುತ್ತಿದೆ
ನಿನ್ನ ಹಿಂಸಾತ್ಮಕ ಕೃತ್ಯಕ್ಕೆ ಸಾಕ್ಷಿಯಂತೆ

ವೈವಾಹಿಕ ಸಂಬಂಧ ನಾಶವಾಗಿದೆ
ಆ ಮಧುರ ಕನಸುಗಳು
ನಿನ್ನ ತೇವದ ಸಿಹಿ ಮುತ್ತುಗಳು
ಕಾಣುವಷ್ಟೂ ಸುಂದರವೆನಿಸುತ್ತವೆ

ನಾನು ಮರಳಿ ಮಣ್ಣಿಗೆ ತೆರಳುವಾಗ
ನಿನ್ನ ಹೃದಯವನ್ನು ಖಂಡಿತ ಜೊತೆಗೊಯ್ಯುವೆ
ಅಮೂಲ್ಯ ಆಸ್ತಿಯಂತೆ ಆ ಮೋಹಕ ಕ್ಷಣಗಳನ್ನು
ಮತ್ತು ನಮ್ಮ ಎಲ್ಲ ಮನಸ್ತಾಪಗಳನ್ನು
ಆ ಘಳಿಗೆಯಿಂದ ಅನನ್ಯತೆಯೆಡೆಗೆ

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

ಬಯಕೆ

ಬಯಕೆ ಒಂದಾಗಲು ಬಯಸುವುದು
ಅಭ್ಯಾಸ ಬಲದಿಂದ
ವಾದ-ವಿವಾದಗಳಲ್ಲಿ, ಮಹತ್ಕಾರ್ಯಗಳಲ್ಲಿ
ದೇಹ ನಿತ್ರಾಣಗೊಂಡಿದೆ...
ಮನವು ಹಾರಿದೆ ಮುಕ್ತ ಕೊಳದಲ್ಲಿ
ಜೇನು ಕರಗಿ ಹನಿಯಾಗಿ ತೊಟ್ಟಿಕ್ಕುತ್ತಿರಲು
ಜೀವ ಜೀವವನ್ನು ಅಪ್ಪಿಕೊಂಡು
ಮತ್ತೆ ಆತ್ಮರತಿಯ ಹಂಬಲ ತೀವ್ರವಾಗುತ್ತಿದೆ
ಆಗಾಧ ರಕ್ತದದಲೆಗಳು ಮುನ್ನುಗ್ಗುತ್ತಿವೆ
ಬಯಕೆ ರಕ್ತನಾಳಗಳಲ್ಲಿ ಪ್ರವಾಹವಿಟ್ಟಿದೆ
ಆ ತೀವ್ರತೆಯು ಸವಿಯನ್ನು ಆಕ್ರಮಿಸಿದೆ
ಸೂರ್ಯ ಬದುಕಿರುವವರೆಗೆ
ನಾನು ಪ್ರಕಾಶಿಸುವ ನಂಬಿಕೆಯನ್ನು ಕಾಣಬಲ್ಲೆ
ನೀಲಿ ಬಣ್ಣದಿಂದ ಚಿತ್ರಿಸಿದ ರಾತ್ರಿಗಳಿರುವವರೆಗೆ
ಈ ಬಂಧ ಸುತ್ತಿಕೊಂಡಿರುವುದನ್ನು ನಾನು ಕಾಣಬಲ್ಲೆ
ಓ ನನ್ನ ಆತ್ಮೀಯ ಗೆಳತಿ, ನನ್ನ ಒಡತಿ
ಅಪ್ಪಿಕೊ ನನ್ನನ್ನು...
ನಿನ್ನ ಕೊಳೆತ ಪ್ರೀತಿಯನ್ನು ಉಸಿರಾಡುವೆ
ಉಕ್ಕುವ ಕಾಮದ ಭಾರವನ್ನಿಳಿಸುವೆ
ನಿನ್ನ ಸ್ಮರಣೆಯ ಸಾಗರದಲ್ಲಿ ಈಜಾಡಲು ಅವಕಾಶ ಕೊಡು
ಅದರಲ್ಲಿ ನಗುನಗುತ್ತಲೇ ಮುಳುಗಿ... ಸಾಯುವೆ
ಬಯಕೆ ಬಯಕೆಯನ್ನು ಸೋಲಿಸಿದಾಗ
ಮಾದಕ ಸಂಗೀತ ಕೇಳಿಸುತ್ತದೆ

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

May 13, 2009

ಮತ್ತೆ ಬರುವನು ಚಂದಿರ - 22

ವೈರಾಗ್ಯ, ವ್ಯಾಮೋಹಗಳು
ಹೊಳೆವ ಮೊಣಚು ಕತ್ತಿಗಳು
ಇವರ ಜೊತೆಗೆ ಸರಸ ತರವೆ
ಸಂಯಮವಿರಲಿ ಚಂದಿರ

ಒಣ ವಿದ್ವತ್ತಿನ ಪ್ರದರ್ಶನ ಎಲ್ಲೆಡೆ
ಹಿಂಸಾತ್ಮಕ ಪ್ರವೃತ್ತಿ ಹರಡುತಿರೆ
ಸಹನೆ, ಸಂಯಮ ಬತ್ತಿ ಹೋಗಿದೆ
ಒಡಲು ಸತತ ಉರಿಯುತಿದೆ ಚಂದಿರ

ಅಂತಃಕಲಹಗಳ ತೊರೆಯುತ
ಅಂತಃಕರಣದ ಶುದ್ಧೀಕರಿಸಿ
ಆತ್ಮಾನುಸಂಧಾನ ಅಳವಡಿಸಿ
ಆತ್ಮ ವಿಮುಕ್ತಿ ಪಡೆಯೊ ಚಂದಿರ

ಅನುಭವದ ಮನನ ಬಲುಮುಖ್ಯ
ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ
ಪ್ರತಿಫಲದ ನಿರೀಕ್ಷೆ ತೊರೆದಾಗ
ಖಚಿತ ಪ್ರಗತಿ ಚಂದಿರ

ಭವಿಷ್ಯದ ಲೆಕ್ಕಾಚಾರ ತೊರೆದು
ದುಗುಡ, ಆತಂಕಗಳನು ದೂಡಿ
ಭಾವುಕ ಕ್ಷಣಗಳ ತೆಕ್ಕೆಯಿಂದ
ಹಾರುವ ಹಕ್ಕಿಯಾಗೊ ಚಂದಿರ

ಸಮೃದ್ಧ ಜ್ಞಾನ ತಳಹದಿಯಿಂದ
ಸಮಗ್ರ, ಸ್ಪಷ್ಟ ನಿಲುವು ಸಾಧ್ಯ
ವಿಚಿತ್ರ ವಿನ್ಯಾಸವೆ ವಿಶಿಷ್ಟವಲ್ಲ
ವಿಚಾರ ಮಾಡೊ ಚಂದಿರ

ಪರಿಪೂರ್ಣ ಪುರುಷೋತ್ತಮನ್ಯಾರು ಇಲ್ಲ
ಪರಿಶುದ್ಧ ಪಂಚಾಮೃತ ದೊರೆಯುವುದಿಲ್ಲ
ಕಲುಷಿತಗೊಂಡು ಕಲ್ಮಷವಾಗಿದೆ ಎಲ್ಲವು
ಸರಿಪಡಿಸುವ ದಾರಿ ತೋರೊ ಚಂದಿರ

ಆತ್ಮಜ್ಞಾನದ ಜೊತೆ ಸಂವಾದದಿಂದ
ಪರಿಜ್ಞಾನ ನೀಡುವ ಸರಳತೆಯಿಂದ
ಪರಿಶುದ್ಧತೆ, ಪ್ರಮಾಣಿಕತೆಗೆ ಹತ್ತಿರ-
ವಾಗುವ ಸಾಧ್ಯತೆಯಿದೆಯೊ ಚಂದಿರ

ಭ್ರಮಾಲೋಕದಿಂದಿಳಿದು ಬಾರ
ಬೇಡದ ಉಪದೇಶ ನೀಡಬೇಡ
ನೈಜ ನಡತೆ ಹಿತವೊ ಶೂರ
ನಿನ್ನ ಗೆಳೆಯನಾಗುವ ಚಂದಿರ

ಖಚಿತ ನಿಲುವು ಸುಲಭವಲ್ಲವೊ
ಪ್ರಖರ ಖ್ಯಾತಿ ಕುರುಡು, ಕೃತಕ
ವಿಷಯದ ಆಳಕಿಳಿದು ವಿಚಾರಮಾಡು
ವಿವೇಚನೆ ಪಡೆಯುವೆ ಚಂದಿರ