May 31, 2009

ನೀ ನನ್ನ ಮರೆತರೆ

ನಿನಗೆ ಗೊತ್ತಿರಲೆಂದು ಬಯಸುವೆ
ಈ ವಿಷಯ.

ನಿನಗೆ ಗೊತ್ತಿದೆ ಅದು ಹೇಗೆಂದು:
ನಾನೇನಾದರು ನೋಡಿದರೆ
ಪಾರದರ್ಶಕ ಗಾಜಿನಂತೆ ಹೊಳೆವ ಚಂದ್ರನನ್ನು, ನನ್ನ ಕಿಟಕಿಯ ಹತ್ತಿರವಿರುವ
ದೀರ್ಘ ಶಿಶಿರದ ಕೊನೆಗೆ ಕೆಂಪಾಗಿರುವ ರೆಂಬೆಯನ್ನು,
ನಾನೇನಾದರು ಮುಟ್ಟಿದರೆ
ಬೆಂಕಿಯ ಹತ್ತಿರ
ಗ್ರಹಿಸಲಾಗದ ಬೂದಿಯನ್ನು
ಅಥವಾ ಬಿರುಕು ಬಿಟ್ಟ ಹೆಮ್ಮರದ ಕಾಂಡವನ್ನು,
ಎಲ್ಲವೂ ನನ್ನನ್ನು ಕೊಂಡೊಯ್ಯುತ್ತವೆ ನಿನ್ನಲ್ಲಿಗೆ,
ಸುಗಂಧ ದ್ರವ್ಯಗಳು, ಬೆಳಕು, ಲೋಹಗಳು,
ಆ ಪುಟ್ಟ ನಾವೆಗಳು
ತೇಲಿ ಬರುತ್ತಿವೆ
ನಿನ್ನ ಸಣ್ಣ ದ್ವೀಪಗಳೆಡೆಗೆ, ಅಲ್ಲಿ ಬಂದು ನನಗಾಗಿ ಕಾಯುತ್ತಿರುತ್ತವೆ.

ಇರಲಿ, ಈಗ,
ನೀನೇನಾದರೂ ಸ್ವಲ್ಪ ಸ್ವಲ್ಪವೇ ನನ್ನ ಪ್ರೀತಿಸುವುದನ್ನು ನಿಲ್ಲಿಸಿದರೆ
ನಾನೂ ಸಹ ಸ್ವಲ್ಪ ಸ್ವಲ್ಪವೇ ನಿನ್ನ ಪ್ರೀತಿಸುವುದನ್ನು ನಿಲ್ಲಿಸುತ್ತೇನೆ.

ಒಮ್ಮೆಗೇ ನೀನೇನಾದರೂ
ನನ್ನ ಮರೆತು ಬಿಟ್ಟರೆ
ಮತ್ತೆ ನನಗಾಗಿ ಹುಡುಕಾಡುವ ಅಗತ್ಯವಿಲ್ಲ
ಏಕೆಂದರೆ ನಾನಾಗಲೇ ನಿನ್ನನ್ನು ಮರೆತು ಬಿಟ್ಟಿರುತ್ತೇನೆ.

ಇದು ಬಹಳ ಅತಿಯಾಯ್ತು ಹಾಗೇ ಹುಚ್ಚೆಂದು ನೀನು ಭಾವಿಸಿದರೆ,
ಗಾಳಿಯಲ್ಲಿ ತೂಗಾಡುತ್ತಿರುವ ಬ್ಯಾನರುಗಳು
ನನ್ನ ಬದುಕಿನ ಮುಖಾಂತರ ನುಸುಳಿ ಮುನ್ನುಗ್ಗುತ್ತಿವೆ,
ಮತ್ತೆ ನೀನೇ ನಿರ್ಧರಿಸು
ನನ್ನ ದಡಕ್ಕೆ ತಂದು ಬಿಡಲು
ಆ ಹೃದಯದಲ್ಲೇ ನಾನು ಬೇರು ಬಿಟ್ಟಿದ್ದೇನೆ,
ನೆನಪಿರಲಿ
ಅಂದು ಆ ದಿನದಂದು,
ಆ ಘಳಿಗೆಯಲ್ಲಿ,
ನನ್ನ ತೋಳುಗಳನ್ನೆತ್ತಿ
ಮತ್ತು ನನ್ನ ಬೇರುಗಳನ್ನು ಮುಕ್ತಗೊಳಿಸಿ
ಮತ್ತೊಂದು ಪ್ರದೇಶಕ್ಕಾಗಿ ಬೇಡಿಕೊಂಡಾಗ.

ಆದರೆ
ಒಂದು ವೇಳೆ ಪ್ರತೀ ದಿನವೂ,
ಪ್ರತೀ ಘಳಿಗೆಯೂ,
ನಿನಗನ್ನಸಿದರೆ ನೀನು ನನಗಾಗಿಯೇ ಹುಟ್ಟಿ ಬಂದಿರುವುದೆಂದು
ಯಥೇಶ್ಚವಾದ ಕೋಮಲ ಸೊಗಸಿನಿಂದ,
ಪ್ರತಿ ದಿನ ಹೂವೊಂದೇನಾದರೂ
ನಿನ್ನ ಕೆಂದುಟಿಯೆಡೆಗೆ ಏರಿ ಬಂದು ನನಗಾಗಿ ಕೇಳಿದರೆ,
ಹಾ.. ನನ್ನ ಪ್ರೀತಿಯೆ, ಹಾ... ನನ್ನ ಸರ್ವಸ್ವವೆ,
ನನ್ನಲ್ಲಿ ಮತ್ತೆ ಆ ಎಲ್ಲಾ ಕಿಚ್ಚು ಮರುಕಳಿಸುತ್ತದೆ,
ನನ್ನೊಳಗೆ ಯಾವುದೂ ನಾಶವಾಗಲಿಲ್ಲ ಅಥವಾ ಮರೆತು ಹೋಗಲಿಲ್ಲ,
ನನ್ನ ಪ್ರೀತಿಯು ನಿನ್ನ ಪ್ರೀತಿಯಿಂದಲೇ ಜೀವಂತವಾಗಿದೆ, ನನ್ನ ಜೀವವೇ, ನನ್ನ ಆತ್ಮವೇ,
ಮತ್ತೆ ನಿನ್ನ ಕೊನೆಯುಸಿರು ಇರುವವರೆಗೂ ಅದು ನಿನ್ನ ತೋಳುಗಳಲ್ಲಿಯೇ ನೆಲೆಸಿರುತ್ತದೆ,
ನನ್ನ ತೋಳುಗಳನ್ನು ಬಿಡದೆ.

ಮೂಲ ಕವಿ: ಪ್ಯಾಬ್ಲೊ ನೆರುದ
ಕನ್ನಡಕ್ಕೆ : ಚಂದಿನ

No comments: