ಜ್ವಾಲಾಮುಖಿಯ ಗರ್ಜನೆಗೆ ಲಾವಾರಸ ಉಕ್ಕುತ್ತಿದೆ
ಚದುರಿ ಬಿದ್ದಿವೆ ಎಲ್ಲೆಡೆ ಸ್ಥಳೀಯರ ಶವಗಳು
ಹುಲ್ಲು ಕುಪ್ಪೆಗಳಿನ್ನು ಅನವಶ್ಯಕ
ಅಪಾರ ಆಸ್ತಿ, ಜೀವರಾಶಿಗಳೆಲ್ಲವೂ ಸರ್ವನಾಶ
ನಾನು ರೆಕ್ಕೆಯಂತೆ ತೇಲಾಡಬಹುದಿತ್ತು
ಆದರೆ, ನಿನ್ನ ಗಾಢ ಆರಾಧನೆಯ ತಳಪಾಯಕ್ಕೆ ಬಿದ್ದಿರುವೆ
ನಿರಂತರ ಗೊಣಗಾಡುವ ಬಾವಿಯಲ್ಲಿ ಮುಳುಗಿ,
ಮಂದಗತಿಯಲ್ಲಿ ತಳಕ್ಕೆ ತಲುಪುತ್ತಿರುವೆ
ನಿನ್ನ ಹೊಡೆತ ಜ್ವಾಲಾಮುಖಿ ಅಪ್ಪಳಿಸುವಷ್ಟೇ ಭಯಾನಕ
ನನ್ನನ್ನು ಲಕ್ಷೋಪಲಕ್ಷ ಚೂರುಗಳನ್ನಾಗಿಸಿದೆ
ಆದರೆ ನಿನ್ನ ಮಧ್ಯಭಾಗದಲ್ಲಿಯೇ ನಿಂತಿರುವೆ
ಆ ನಿನ್ನ ಭೀಕರ ಭೂತದ ದರ್ಶನಕ್ಕಾಗಿ
ನಿನ್ನ ಹಿಮಗಟ್ಟಿದ ಪುಟ್ಟ ಹೃದಯ
ನಿನ್ನ ಮಾತಿನಷ್ಟೇ ತಂಪಾಗಿರುವುದು
ಹೇಗಾದರೂ ಇರಲಿ, ಏನಾದರೂ ಆಗಲಿ
ನಾ ನಿನ್ನಲ್ಲಿಗೇ ಬರುವೆ, ಅಲ್ಲೇ ಹೋಡಾಡುವೆ
ನನ್ನಿಂದ ದಯವಿಟ್ಟು ದೂರ ಹೋಗಬೇಡ
ನಾನೇನಾದರು ನೋವುಂಟು ಮಾಡಿದರೆ
ನಿನ್ನ ಕ್ಷಮೆಯ ಬಿಕ್ಷೆ ಬೇಡಲೇ?
ನನ್ನ ಪ್ರೀತಿ ಸತ್ಯವಲ್ಲವಾದ್ದರಿಂದ
ಎಂದಾದರೂ ನನ್ನನ್ನು ಕ್ಲಿಷ್ಟ ಪರಿಸ್ಥಿತಿಯಲ್ಲಿ ಕಂಡಾಗ
ಹಾದಿಯು ಬುದ್ಧಿಭ್ರಮಣೆಯೆಡೆಗೆ ಕೊಂಡೊಯ್ಯುವಾಗ
ಯಾರಿಗೂ ಬೇಡವಾಗಿ, ದಿಕ್ಕಿಲ್ಲದವನಂತೆ ಪರದಾಡುವಾಗ
ಅದೇ ದಿನವೇ ನನ್ನ ಪ್ರೀತಿಯೂ ಸಹ ಹಾದಿ ತಪ್ಪುತ್ತದೆ
ನನ್ನ ಹೃದಯವು ಕಡುನೀಲಿಯಾದಾಗ, ಗುಲಾಬಿಯಂತಲ್ಲ
ಹೊಳಪಿನ ಕೆಂಪು, ಆಗಿನ ನಮ್ಮ ಅತೀವ ಅಪೇಕ್ಷೆಯಂತೆ
ನಿಲುಗಡೆಗಳು ಮತ್ತು ವಿರಾಮಗಳು ಇನ್ನೇಕೆ?
ಆ ವ್ಯಾಮೋಹದ ತೀವ್ರತೆ ಇನ್ನು ನೆನಪು ಮಾತ್ರ
ನಮ್ಮ ಒಲವಿನ ಕವನ ನೆನಪಿಸುತ್ತಿದೆ
ಮನುಷ್ಯರಿಗಿದು ಅತಿದೊಡ್ಡ ದುರಂತವೆಂದು
ನನ್ನ ರಕ್ತ ನೀರಿನಂತೆ ಹರಿಯುತ್ತಿದೆ
ನಿನ್ನ ಹಿಂಸಾತ್ಮಕ ಕೃತ್ಯಕ್ಕೆ ಸಾಕ್ಷಿಯಂತೆ
ವೈವಾಹಿಕ ಸಂಬಂಧ ನಾಶವಾಗಿದೆ
ಆ ಮಧುರ ಕನಸುಗಳು
ನಿನ್ನ ತೇವದ ಸಿಹಿ ಮುತ್ತುಗಳು
ಕಾಣುವಷ್ಟೂ ಸುಂದರವೆನಿಸುತ್ತವೆ
ನಾನು ಮರಳಿ ಮಣ್ಣಿಗೆ ತೆರಳುವಾಗ
ನಿನ್ನ ಹೃದಯವನ್ನು ಖಂಡಿತ ಜೊತೆಗೊಯ್ಯುವೆ
ಅಮೂಲ್ಯ ಆಸ್ತಿಯಂತೆ ಆ ಮೋಹಕ ಕ್ಷಣಗಳನ್ನು
ಮತ್ತು ನಮ್ಮ ಎಲ್ಲ ಮನಸ್ತಾಪಗಳನ್ನು
ಆ ಘಳಿಗೆಯಿಂದ ಅನನ್ಯತೆಯೆಡೆಗೆ
ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ
2 comments:
ಸರ್,
ನನಗೆ ಕವನ ತುಂಬಾ ಇಷ್ಟವಾಯಿತು, ಆ ಕವಿಯ ಬಗ್ಗೆ ಅಸ್ಟು ತಿಳಿದಿಲ್ಲ ಯಾವ ಭಾಷೆಯಲ್ಲಿದೆ ಹಾಗೆ ಅವರ ಬಗ್ಗೆಯೊ ತಿಳಿಸಿ.
ನಿಮ್ಮ ಅನುವಾದದ ಅಕ್ಷರಳು ಮನತುಂಬಿ ಬಂದಿವೆ ನಿಮಗೆ ವಂದನೆಗಳು
ಧನ್ಯವಾದಗಳು
ಮನಸು
ತುಂಬಾ ಸಂತೋಷ ಮೇಡಮ್.
ಅವರು ನನ್ನ ಗೆಳೆಯರು, ಹಾಂಕಾಂಗ್ ನಲ್ಲಿರುತ್ತಾರೆ.
- ಚಂದಿನ
Post a Comment