Jun 28, 2010

ಹೀಗೇಕೆ?

ಮುಸ್ಸಂಜೆ
ಬಾಡಿದ ಮೊಗಗಳ ಸಂತೆಯಲಿ
ಉಮ್ಮಸ್ಸಿನ ಕಿಚ್ಚೊತ್ತವರು
ಕುಡುಕರು ಮತ್ತೆ ...

ನಡುರಾತ್ರಿಯಲ್ಲೂ
ಸೆಳೆಯುವ ಸವತಿಯರು
ಬೆಳಕೊಮ್ಮಿಸಿ ಬಾಯ್ತೆರೆದ ಬಾರುಗಳು...

ಕತ್ತಲೊಳಗೆ ಕಿಂದರಜೋಗಿಯ
ಹಾಡು ಕೇಳುವ ಧಾವಂತ
ಏಕಾಂಗಿ,
ಆದರೂ ಅಂಗಾಂಗ ಪುಳಕ...

ಸೋತರು ಸರಿಯೆ
ಹೋಗುವ ಮೊದಲೊಮ್ಮೆ
ಎಲ್ಲಬದಿಗಳೂ ತಡಕುವ ತವಕ...

Apr 5, 2010

ಕೊಲೆ!

ಇಂದು...

ಕನಸುಗಳ ಕೊಲೆ,

ಅಂತಃಕರಣದ ಕೊಲೆ

ಆತ್ಮಸಾಕ್ಷಿ, ಆಸ್ಮಿತೆಯ ಕೊಲೆ

ಅಭಿಮಾನ, ಸ್ವಾಭಿಮಾನದ ಕೊಲೆ

ಸ್ನೇಹ, ಸಂಬಂಧಗಳ ಕೊಲೆ

ಪ್ರೀತಿ, ವಿಶ್ವಾಸಗಳ ಕಗ್ಗೊಲೆ

ನಂಬಿಕೆ, ನಿರೀಕ್ಷೆಗಳ ಕೊಲೆ

ನೀತಿ, ನಿಯಮಗಳ ಕೊಲೆ

ಮೌಲ್ಯಗಳ, ಮಾನವತ್ವದ ಕೊಲೆ

ಪ್ರಕೃತಿ, ಪರಿಸರದ ಕೊಲೆ

ನಾಳೆ...

ಮನುಕುಲದ ಕೊಲೆ

ಕೊಲೆ, ಕೊಲೆ, ಕೊಲೆ!



Mar 27, 2010

ಹಾಯ್ಕು – 15

ಮಾಗಿಯ ಎಲೆಗಳು
ಅಜ್ಜನ ಬಾಲ್ಯದ ಕಥೆಗಳನ್ನು
ಬಹಳ ಆಸ್ಥೆಯಿಂದ ಕೇಳಿಸಿಕೊಳ್ಳುತ್ತವೆ...

Mar 16, 2010

ಹಾಯ್ಕು - 14

ಅಂಗೈತುಂಬ ಮಲ್ಲಿಗೆ ಹಿಡಿದು
ಪೂರ್ಣಚಂದ್ರನು ಇವನೆ ಎನ್ನುವ
ಅವಳ ಪ್ರಖರ ಮುಗ್ಧತೆಗೆ ಬೆರಗಾದೆ...

Mar 8, 2010

ಹತಾಶೆಯ ಕಣ್ಣು...

ರೆಕ್ಕೆ ಮುರಿದ ಹಕ್ಕಿಗೆ
ಹಾರುವ ಹಂಬಲ
ನಿಲ್ಲದ ಯತ್ನ
ಅತೀವ ಹತಾಶೆ

ಬದಿಯಲ್ಲೊಂದು
ಕುಂಟ ಬೆಕ್ಕಿನ
ಸೋತ ಕಣ್ಣುಗಳಿಂದ
ಸಾಂತ್ವನ

ಕಾಫಿ ಕಪ್ಪಿನ
ಸುಳಿಗೆ ಸಿಲುಕಿ
ತಳ ತಾಕಿದ
ದುರ್ದೈವದ ಇರುವೆ

ಪಾಪದ ಸೊಳ್ಳೆ
ಬ್ಯಾಟರಿ ಬ್ಯಾಟಿಗೆ
ಸಿಕ್ಕಿ ಚಿನಕುರಳಿ ಸದ್ದು
ಅದರ ಸತ್ತ ಸಂದೇಶ

ಮನೆಯೊಡತಿಗೆ
ಗ್ಯಾಸು
ಮುಗಿದೇ ಹೋಯಿತೆನ್ನುವ
ಎಂದಿನ ಆತಂಕ

ಇವರಿಗೆ ಮಾವಿನೆಲೆಯ
ರೆಂಬೆ ಕಡಿದು
ಮನೆಗೆ ತೋರಣ
ಕಟ್ಟುವ ಧಾವಂತ

Mar 7, 2010

ಹಾಯ್ಕು - 13

ಹೆಜ್ಜೆಯ ಗುರುತುಗಳೆಲ್ಲಾ
ಅಲೆಗಳು ಅಳಿಸಿ ಹಾಕಿದರೂ ಸಹ
ತಪ್ಪುಗಳಿನ್ನೂ ತೀವ್ರವಾಗಿ ಕಾಡುತ್ತಿವೆ ...

Mar 1, 2010

ಇಂದು ಮತ್ತೆ ನಾಳೆ...

ಇಂದು, ಈ ಜಗತ್ತು ಅಧಿಕಾರಿಶಾಹಿ ಶ್ರೀಮಂತರ ಪಾಲಾಗಿದೆ
ಯೋಚಿಸಬೇಡಿ ಪ್ರಿಯ ಬಂಧುಗಳೆ,
ಬನ್ನಿ ನಾವೆಲ್ಲ ಒಂದಾಗಿ ಹಾರೈಸೋಣ
ಅವರಿಗೆ “ಶುಭವಾಗಲಿ” ಎಂದು!

ನಿಮಗೆ ಇನ್ನೊಂದು ಬಹಳ ಕುತೂಹಲಕಾರಿ ಮತ್ತು ಅಚ್ಚರಿಯ ಸಂಗತಿ ಏನೆಂದು ಗೊತ್ತೆ?
ಮತ್ತೊಂದು ದಿಸೆಯಲ್ಲಿ;
ನಮ್ಮ ಅಂದರೆ ಅಸಹಾಯಕ ನಿರ್ಗತಿಕರ ಸಂಖ್ಯೆ
ನಿರಂತರವಾಗಿ ಹೆಚ್ಚಾಗುತ್ತಿರುವುದು ತುಂಬಾ ಒಳ್ಳೆಯದಲ್ಲವೆ?
ಏಕೆಂದರೆ, ಇಂತಹ ಸನ್ನಿವೇಶದಲ್ಲಿ
ನಾವು ದ್ರುತಿಗೆಡದೆ, ಸಹನೆ, ಸಂಯಮದಿಂದ ಮಾನವತ್ವ ಮೆರೆಯೋಣ
ನಾಳೆ ಎಂಬುದು ನಿಸ್ಸಂಶಯವಾಗಿ ನಮ್ಮದಾಗಲಿದೆ!

Feb 12, 2010

ಬಿಂಬ : 51 - 55

ಬಿಂಬ - 51
ಜಗವೆಲ್ಲಾ ಮಾಯೆ
ನನ್ನವಳು ಅದರ ಛಾಯೆ...

ಬಿಂಬ - 52
ಅವಳ ತವಕ ತಲ್ಲಣಗಳೂ
ಸಹ ಪ್ರೀತಿಯ ಬಾಣಗಳು...

ಬಿಂಬ - 53
ಮದಿರೆಯೆ ದಾಹ
ನಿಯಂತ್ರಿಸುವುದು, ಅವಳ ಕಾಡುವ ಮೋಹ...

ಬಿಂಬ – 54
ಅವಳ ಮೌನ ರಾಗಗಳಗೆ,
ಹಾರುವ ಹಕ್ಕಿ ಉತ್ತರ ನೀಡಿದೆ...

ಬಿಂಬ – 55
ಅವಳ ನಗುವಲ್ಲೂ ನೋವನ್ನು
ಬಿಂಬಿಸುವ ಪರಿ, ಕಳವಳ ಮೂಡಿಸುತ್ತದೆ...

Feb 10, 2010

ಹಾಯ್ಕು - 12

ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದೆ
ಗಡಿಯಾರದ ಪೆಂಡುಲಮ್ ಲಯದೊಂದಿಗೆ,
ಜಾಗತಿಕ ತಾಪಮಾನದ ಮುನ್ಸೂಚನೆ ನೀಡುತ್ತಾ...

Jan 24, 2010

ಹಾಯ್ಕು - 11

ಮಂಜು ಮುಸುಕಿದ ನಸುಕಿನಲ್ಲಿ
ನುಗ್ಗುವ ಬೆಚ್ಚಗಿನ ರವಿಕಿರಣ
ಅವಳ ಕಿರುನಗು ...

Jan 21, 2010

ಶ್ರೇಷ್ಠತೆಯ ಹುಡುಕಾಟದಲ್ಲಿ...

ಓ ನನ್ನ ಗೆಳೆಯನೆ!
ಆ ಅತ್ಯದ್ಭುತ ಕಾವ್ಯವೇ
ನನ್ನ ಏಕೈಕ ಸ್ವರ್ಗ
ಮತ್ತೆ ಆ ಮಾದಕ ಸೌಂದರ್ಯ
ಅದೇ ಈ ಜಗದ ಚಿರಂತನ ಸತ್ಯ...
ಅಲ್ಲಿರುವುದು ನನ್ನ ಶ್ರೇಷ್ಠತೆಯ ಹುಡುಕಾಟದ
ಐಕ್ಯ ಮಂಟಪ.

ಓ ನನ್ನ ಆಪ್ತನೆ!
ಇಲ್ಲಿ ನೋಡು ಮನಮೋಹಕ ಸಂಗೀತ
ನನಗೆ ದೈವವಿತ್ತ ಅತಿದೊಡ್ಡ ಕೊಡುಗೆ
ಮತ್ತೆ ಆ ನಿಶಬ್ಧ ಮೀಟುವ ಅನನ್ಯ ರಾಗಗಳು
ಮೂಕವಿಸ್ಮಿತನನ್ನಾಗಿಸುತ್ತವೆ
ಅದರಲ್ಲಡಗಿದೆ ನನ್ನ ನೆಚ್ಚಿನ ನೆಲೆ
ಆ ಭಾವಲಹರಿಯ ನರ್ತನದಲ್ಲಿ...

ಓ ನನ್ನ ಸ್ನೇಹಿತನೆ!
ಇನ್ನೂ ಇದೆ, ಅದೇ ಆ ನಿಸರ್ಗದ ಹಸಿರಿನ ಸಿರಿ
ನನ್ನ ಮತ್ತೊಂದು ಸುಂದರ ಸಂಗಾತಿ
ಮತ್ತಲ್ಲಿ ಕೇಳುವ ದುಂಬಿಗಳ ನಿನಾದ,
ಹಕ್ಕಿಗಳಿಂಚರ ವಾಹ್...ಏನದ್ಭುತ!
ಆ ಪ್ರಕ್ರಿಯೆಯಲ್ಲಿದೆ ನನ್ನ ಉತ್ಸಾಹದ ಚಿಲುಮೆ
ಆತ್ಮರತಿ ಸಿದ್ಧಿಸುವ ಕ್ಷಣದ ಸನಿಹದಲ್ಲಿ...

Jan 14, 2010

ಇಂದು ವಿವೇಚನೆ ಮಸುಕಾಗಿದೆ...

ಕಾಮ,
ಐಷಾರಾಮಿತನ,
ಜನಪ್ರಿಯತೆಯ ಬೆನ್ನತ್ತಿ
ತಮ್ಮ ಸಭ್ಯತೆಯನ್ನು ತೊರೆದಿದ್ದೇವೆ.

ಅಧಿಕಾರ,
ಅಭಿವೃದ್ಧಿ,
ಐಶ್ವರ್ಯದ ಹುಚ್ಚಿಂದ
ತಮ್ಮ ಅತಃಕರಣವನ್ನು ಕಡಿದಿದ್ದೇವೆ.

ಗಡಿ,
ಧರ್ಮ,
ಭಾಷೆಯ ಹೆಸರಲ್ಲಿ
ತಮ್ಮ ವ್ಯಕ್ತಿತ್ವಗಳನ್ನು ಹೂತಿದ್ದೇವೆ.

ಜಾತಿ,
ಬಣ್ಣ,
ಧಾರ್ಮಿಕ ನಂಬಿಕೆಗಳ ಹೆಸರಲ್ಲಿ
ನಾವು ಮನುಷ್ಯತ್ವವನ್ನೇ ಕೊಂದಿದ್ದೇವೆ.

Jan 8, 2010

ಹಾಯ್ಕು - 10

ಮುಸ್ಸಂಜೆಯ ನಂತರ
ಹೊಳೆವ ತಾರೆಗಳು,
ಅವಳ ಕಣ್ಣುಗಳು...

Jan 6, 2010

ಹಾಯ್ಕು – 9

ತುಂತುರು ಮಳೆಯಲ್ಲಿ
ನಶೆಯೇರಿಸುವ ಮಣ್ಣಿನ ಸುಗಂಧ,
ಅವಳ ಬೆವರು.

ಹಾಯ್ಕು – 8

ನಲ್ಲೆ, ನನ್ನ ಯೌವನ
ಮುಳುಗಿ ಹೋಯಿತು ನಿನ್ನಲ್ಲಿ
ಮುಗಿಲೆತ್ತರದ ಕಡಲಲ್ಲಿ ಮುರಿದ ದೋಣಿಯಂತೆ...