ನಾನೆಂಬುದು ನರಕ
ಹೆಸರಿಲ್ಲದ ಇರುವೆಗಿಲ್ಲವೆ?
ಸಖ, ಸುಖ
ನಮ್ಮದಾಗಿರುವಾಗ ಜಗ
ಹೆಸರಿಗಿರಬೇಕೆಂಬ ಜಾಡ್ಯ
ಕೋಟಿ ಕಸರತ್ತು ಕಣದಲಿ
ಬೇಕೆ ಸೋಲು, ಗೆಲುವುಗಳ ಆಟ,
ಭ್ರಾಂತಿ, ಭ್ರಮೆಗಳ ಕಾಟ?
ನಾನೆಂಬ ತೊಡಕಿಗೆ ಬೇಕೆ
ಕಪಟ, ಕಿರೀಟ?
ಕ್ಷುಲ್ಲಕ ನೆವಗಳಿಗೆ
ಬರಿದಾಗಬೇಕೆ ಯಾನ?
ಸಾಗರವ ಕಡೆಗಣಿಸಿ,
ಹನಿಗಳ ಅಟ್ಟಿಕೊಂಡು
ಸಾಧಿಸುವ ಧಾವಂತ
ಕಳೆದು ಹೋಗುವೆವು ಚಣದಿ
ಹೆಜ್ಜೆಗಳೂ ಹೇಸುವಂತೆ
ಹೆಸರಿಲ್ಲದೆಡೆಗೆ