Nov 1, 2016

ಗಡಿಯಿಲ್ಲದ ಗುಡಿಯತ್ತ, ಗುರಿಯತ್ತ...

ರೂಪ-ಪ್ರತಿರೂಪ, ಬಿಂಬ-ಪ್ರತಿಬಿಂಬಗಳ,
ಬಾಳ, ಒಡಲಿನ ಕಣಿ ಕೇಳದೆ.
ಕಲ್ಪನಾವಿಲಾಸಿಗೆ ವಿಳಾಸದ ಮೊಹರೂ ನೀಡದೆ.
ಎಲ್ಲ ಗಡಿಗಳ ಕೆಡವಿ, ಮೂರ್ತಗಳ ಮದವಿಳಿಸಿ,
ಗಡಿಯಿಲ್ಲದ ಗುಡಿಯತ್ತ, ಗುರಿಯತ್ತ ನೂಕಿ,
ತಾನೇ ತಾನಾಗಿ ನಿನ್ನ ಖಾಯಂ ಠಾಣೆಯ ಕೋಣೆಯೊಳಗೆ ಸೆರೆಯಾದೆ.
ಜ್ಞಾನ, ತಂತ್ರಜ್ಞಾನ, ವಿಜ್ಞಾನಗಳ ಜೊತೆಗೆ
ಸೃಜನಶೀಲತೆಗೂ ಸವಾಲೊಡ್ಡಿ,
ಕ್ರಿಯಾಶೀಲತೆಗೆ ಕಾಲುದಾರಿಯ ಕುರುಹು ಉಳಿಸಿ,
ಕತ್ತಲು-ಬೆಳಕಿನ ಛಾಯೆಯೊಳಗೆ ಜರಿ-ತೊರೆ, ಹಳ್ಳ-ದಿನ್ನೆಗಳ ದಾಟಿ,
ಕಾನನದ ಇಂಪನ-ಕಂಪನಗಳಿಗೆ ಕಿವಿಗೊಡುವಂತೆ ಪಟ್ಟು ಹಿಡಿದು,
ಸೂಕ್ಷ್ಮಾತಿ-ಸೂಕ್ಷ್ಮಗಳ ಪರಿಚಯಿಸಿ,
ಪ್ರಶ್ನೆ, ಪರೀಕ್ಷೆಗಳ ಪರಿಷೆಗೆ ಕರೆದು,
ಕದಡಿ, ಕೆಣಕಿ, ಕಟ್ಟಿ, ಬಿಟ್ಟುಕೊಟ್ಟು
ಬಿಡುಗಡೆಯ ಸುಖ, ಸಾರ್ಥಕತೆಗೆ ಸಾಕ್ಷಿಯಾಗಿ,
ಏಕಾಂಗಿಯಲ್ಲವೆಂದ ನಲ್ಲೆ.
ನಿನ್ನ ಎಲ್ಲಾ ಎಲ್ಲೆಗಳ ಪರಿ ತುಸು ತೋರೆ.
ನೆಲ-ಜಲದ ಜಗಳಕ್ಕೆ
ಬಗೆಬಗೆಯ ಬೀಜಗಳ ಭಿತ್ತಿ, ಬೆಳಸಿ, ಬೆರಗಾಗಿಸುವ
ನಿನ್ನ ಅಗಾಧ ಶಕ್ತಿ, ಚೇತನದ ಮೂಲವೆಲ್ಲಿ?
ತಳ, ವಿತಳ, ಪಾತಾಳಗಳ ಆಳ, ಅಗಲವ
ಬಲ್ಲ ನಲ್ಲ ನಾನಲ್ಲ.
ರೂಪಕಗಳ ರಾಶಿಯಲ್ಲಿ ಬಹುರೂಪಿ.
ಸಾವಿರ ಪ್ರಶ್ನೆಗಳೆಸೆದು ಮೌನವಾಗಿರುವ ನಿನ್ನ ಗುಟ್ಟಾದರೂ ಏನು?
ಮೂರ್ತ, ಅಮೂರ್ತ ಚಲನ-ವಲನಗಳ
ಸ್ನೇಹ, ಸ್ಪರ್ಶ, ಸಾಂಗತ್ಯದ ಸಿರಿಯಿಂದ
ಸೋಲು-ಗೆಲುವುಗಳ ಸೊಲ್ಲೆತ್ತದೆ,
ಸತ್ಯ-ವಿಥ್ಯಗಳ ನಿತ್ಯ ಕದನಕ್ಕಿಟ್ಟು ಪೂರ್ಣವಿರಾಮ,
ನಾನಾಗ ಬಯಸುವೆ -
ಕ್ಷಣಗಳ ತಾಗುವ, ತೇಲುವ, ತಲುಪುವ ಕಣ.
ಪ್ರತೀಕ್ಷಣ.


Jan 17, 2016

ಚಳಿಗಾಲದ ತೀವ್ರತೆ..!



ಚಳಿಗಾಲದ ತೀವ್ರತೆ -
ನಡುವಯಸ್ಸಿನ ನಾರಿ ನಸುಕಿನ ವಿಹಾರಕ್ಕೆ ಗೈರು;
ಗಂಡನ ಅಚ್ಚರಿ ಪ್ರಣಯ ಸೂಚನೆಗೆ ಖುಷಿಯಾಗಿ.

ಚಳಿಗಾಲದ ತೀವ್ರತೆ –
ಪತಿಯ ಅನಿರೀಕ್ಷಿತ ಹೊಗಳುವಿಕೆಗೆ ಕರಗಿದಂತೆ ನಟಿಸಿದ;
ಸಧಾರಣ ಸತಿ.

ಚಳಿಗಾಲದ ತೀವ್ರತೆ –
ಕಂಜೂಸು ಗೆಳೆಯ ಹಠಾತ್ತನೆ ಉದಾರ ಹೃದಯವಂತನಾದದ್ದು ಕಂಡು;
ಗುಮಾನಿಯಿಂದ ನಸುನಕ್ಕಳು.

ಚಳಿಗಾಲದ ತೀವ್ರತೆ –
ಶಾಲು, ಸ್ವೆಟರ್, ಕಡೆಗೆ ಕಂಬಳಿ ಕೂಡ ಪರಿಪರಿಯಾಗಿ ಬೇಡಿದ್ದು;
ಮುನಿದ ಮಡದಿಯ ಸನಿಹ.

ಚಳಿಗಾಲದ ತೀವ್ರತೆ –
ಕಂಡರಾಗದ ದಂಪತಿ ಜೊತೆಯಾಗಿ ಸಮ್ಮತಿಸಿದರು ಮುಂದೂಡಲು;
ತಮ್ಮ ವಿವಾಹ ವಿಚ್ಛೇದನ.

ಚಳಿಗಾಲದ ತೀವ್ರತೆ –
ಹದಿ ಹರೆಯದ ಹೆಂಗೆಳೆಯರ ಹೊಸ ಹುರುಪಿನ ವರಸೆಗೆ;
ಯುವಕರು ಕುಸಿದು ಕಂಗಾಲು.