Jan 11, 2008

ಅಂಬರದೆತ್ತರ

ಎತ್ತರ ಎತ್ತರ ಅಂಬರದ ಎತ್ತರ
ನಿಲ್ಲದೆ ಏರಿದೆ ನೆಲದ ಬೆಲೆ
ಏನಿದೆ, ಎಲ್ಲಿದೆ, ಎಷ್ಟಿದೆ ಚದರ
ಲೆಕ್ಕವಿಡಲು ಇವರ ಕಾತುರ

ಹಗಲು ವೇಷ, ಹಲವು ಮುಖ
ಆದಷ್ಟು ಬೇಗ, ಅಧಿಕ ಲಾಭ
ಬೆವರು ಸುರಿಸದೆ ಮಾಡಿ ಸುಳಿಗೆ
ಸಾಮಾನ್ಯರಿಗೆ ಮಂಕು ಬಡಿದಂತಿದೆ

ವೇಗದಲಿ ಎತ್ತರಕ್ಕೆ ಏರಿದವರು
ಪ್ರದರ್ಶನಕ್ಕಿಡುವರು ಜಗತ್ತು
ಮೋಜಿಗೆ ಹಲವು ದಾರಿ
ಬಡವರಿಗೆ ಎಟುಕದ ದಾಕ್ಷಿ ಹುಳಿ

ಸದಾ ನಮಗಿರಲಿ

ದಿನವು ಹೊಸತು ಹೊಸತು ಬರಲಿ
ಹಳೆಯ ನೆನಪುಗಳ ಸುಳಿಯದೆ
ಉಲ್ಲಾಸ, ಉತ್ಸಾಹ ಕುಂದದೆ
ಹುಡುಕಾಟ ಕೊನೆವರೆಗು ಸಾಗಲಿ

ಕಲ್ಪನಾ ಲಹರಿ ಕೊನೆಯಾಗದೆ
ಸೃಜನಶೀಲ ಮನ ಮಟುಕಾಗದೆ
ಕಂಡ ಕನಸುಗಳು ಕಾಣದಾಗದೆ
ಅವತರಿಪ ಆಸೆಗಳಿಗೆ ಕಡಿವಾಣವಿಟ್ಟು

ಅರಿವಿನ ಹಸಿವು ಹುಚ್ಚೆದ್ದು ಕುಣಿದು
ಒಲ್ಲದ ವಿಷಯಗಳು ತಲೆ ಕೆಡಸದೆ
ಬಲ್ಲವರ ಬಳಿಗೆ ಬಾಗಿಲು ತೆರೆದು
ಕೇಡುಗರ ಕಣ್ಣೋಟ ಬೀರದಿರಲಿ

ಅಧಿಕ ಐಶ್ವರ್ಯ ಎಂದಿಗೂ ಸಿಗದೆ
ಮಾನವೀಯತೆ ಸದಾ ಬೆಳಗುತ್ತಾ
ಸರಳತೆ ಬೇರುಗಳು ಸಡಿಲವಾಗದೆ
ಆರೋಗ್ಯದ ಐಶ್ವರ್ಯ ಸದಾ ನಮಗಿರಲಿ
****

Jan 10, 2008

ಕೆಸರಿನ ಕಮಲ

ಕೆಸರಿನಲ್ಲಿ ಹೊಳೆವ ಕಮಲ
ಕೆಸರಿಗಂಜಿ ಅಳುವುದೇ
ಕೆಸರಿನಿಂದ ಬರುವುದೆಂದು
ಯಾರು ಅದನು ಬಗೆವರು

ಕೆಂಪು, ಬಿಳುಪು, ಹಳದಿ
ಬಣ್ಣ ಧರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು

ಹಾಲು, ಮೊಸರು, ಬೆಣ್ಣೆ ,ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು

ಒಂದು, ಎರಡು, ಮೂರು, ನಾಕು
ಮಗುವಿಗಿಷ್ಟು ಹೆಸರು ಸಾಕೆ
ಒಂದು, ಎರಡು ಮಾಡಿತೆಂದು
ಯಾರು ಅದಕೆ ಸಿಡಿವರು

Jan 9, 2008

ಜನುಮ ಜನುಮವೀ ಬಂಧ

ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಲಿಸುವಾನಂದ
ಇರಲಿ ಜನುಮ ಜನುಮವೀ ಬಂಧ

ಮಾತಿನ ಉಯ್ಯಾಲೆಯಲಿ
ತೂಗಿ ತೇಲಿಸುವವಳಿವಳು
ಮಾತೆಯ ಮಮತೆ ತೋರಿ
ನನ್ನ ಮನವ ಗೆದ್ದವಳು

ಓರೆ ನೋಟಗಳಲ್ಲಿ
ಎಲ್ಲ ತಿಳಿಸುವವಳಿವಳು
ಪ್ರೀತಿಯ ಹೂಬಾಣವ ಬಿಟ್ಟು
ನನ್ನ ಒಲವ ಸೆರೆಹಿಡಿದವಳು

ಹೊಸ ಹೊಸ ಪರಿಯ ತಿಂಡಿ
ಮನೆಯ ಮಂದಿಗೆ ಬಡಿಸಿ
ಮಕ್ಕಳಿಗೆ ಸಕ್ಕರೆಯ ಸಿಹಿಯುಣಿಸಿ
ನನ್ನಾಕೆ ಎಲ್ಲರಲಿ ಒಂದಾದವಳು

ವಾರ ವಾರದ ಪೂಜೆಗೆ
ಮಾತೆ ಬಯಸಿದ ಗುಡಿಗೆ
ಜೊತೆಯಾಗಿ ನನ್ನವಳು
ಅಮ್ಮನ ಮಗುವೆಂದು ಭಾವಿಸುವಳು

ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಲಿಸುವಾನಂದ
ಇರಲಿ ಜನುಮ ಜನುಮವೀ ಬಂಧ

Jan 8, 2008

ಹೊಸ ಅರಿವು

ದಿನಕೆ ನೂರು ನರರ ಮರಣ
ಕ್ಷಣಕೆ ನೂರು ಕುಡಿಯ ಜನನ
ಜನನ ಮರಣ ನಿತ್ಯದೂರಣ
ಬೇಕೆ ಇದಕೆ ಕಾಲಹರಣ

ಯಾರ ಚಿಂತೆ ಯಾವ ಕಂತೆ
ಚಿಂತೆ ಕಂತೆ ದಿನದ ಸಂತೆ
ದೂಡು ದೂರ ಪರರ ತರವ
ಸರಸವಾಡು ಸರಿಗಮಪದವ

ಇಹದ ಪರಿವು ಇರದು ಆಗ
ಹೊರ ಜಗವು ಕಾಣದು ಆಗ
ಕಾವ್ಯವನ್ನು ಸವಿಯುವಾಗ
ಹೊಸ ಅರಿವು ಮೊಡುವುದಾಗ

ಕೊಡುವ ಕಾಣಿಕೆ

ರವಿಯ ಕಿರಣ ಸೋಲುತಿದೆ
ಪೂರ್ಣ ಚಂದ್ರ ಕರಗುತಿದೆ
ಸ್ಥಬ್ಧ ನಿತ್ಯ ಹಸಿರು ವನ
ಸುಪ್ತ ಸೋನೆ ಮಳೆಯ ಜನನ

ಹರಿಯುವ ನದಿ ಮಾಯವಾಗಿ
ಬೀಸುವ ತಂಗಾಳಿ ಬಿಸಿಯಾಗಿ
ಕಲ್ಲಾಗಿ ಕೊರೆವ ಕುಡಿವ ಜಲ
ದಿಗ್ಗನೆ ಬಾಯ್ತೆರೆದು ಕುಸಿದ ನೆಲ

ಆದಿ ಅಂತ್ಯ ಯಾವುದಿಲ್ಲಿ
ಸಕಲ ಶೂನ್ಯವೆಲ್ಲ ಇಲ್ಲಿ
ನಶ್ವರವಾಗುತಿರಲು ಬದುಕು
ಬೆಳಗಳಿದೆಯೇ ಬಾಳ ಬೆಳಕು

ಹಸಿರು ಅಳಿಸಿ ಹಸಿವು ಬೆಳೆಸಿ
ರಸ ರಹಿತ ಜಗವ ಉಳಿಸಿ
ಇದುವೆ ನಾವು ಕೊಡುವ ಕಾಣಿಕೆ
ಮುಂದೆ ಜನ್ಮ ಪಡೆವ ಕೂಸಿಗೆ

Jan 6, 2008

ಹೆಸರು ಬೇಕು?

ಹೆಸರು ಬೇಕೇ ಬೇಕು
ಕೂಗಿ ಕರೆಯುವುದಕ್ಕೆ
ಜೀವಂತವಾಗಿರುವುದನ್ನು
ದೃಢೀಕರಿಸುವುದಕ್ಕೆ

ಗುರುತಿಸಬೇಕೆಂಬ
ನಮ್ಮ ಹಂಬಲಕ್ಕೆ
ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕು
ಎಂಬ ಚಪಲಕ್ಕೆ

ನಮಗೆ
ದಾರಿ ತೋರುವವರಿಗೆ
ತಪ್ಪುಗಳ ತಿದ್ದುವವರಿಗೆ
ವಿದ್ಯೆ ಕಲಿಸುವವರಿಗೆ
ಹೆಸರು ಬೇಕೆ ಬೇಕು

ದಿಟ್ಟ ಪರಿಶ್ರಮವಿಟ್ಟು
ಸಂದ ಪ್ರತಿಫಲವನ್ನು
ಸಾಧನೆಯ ಮುಖ ಎಂದು
ಜಗಕೆ ತಿಳಿಸುವುದಕ್ಕೆ

ನಮ್ಮ
ಪ್ರೀತಿಸುವವರಿಗೆ
ಧ್ವೇಷಿಸುವವರಿಗೆ
ಕಷ್ಟ ಕಾರ್ಪಣ್ಯಗಳ
ನೀಡುವವರಿಗೆ ಬೇಕು

ನಾವು
ಮೆಟ್ಟುವ ಮಜಲುಗಳ
ನಿಲುವುಗಳ, ಭಾವಗಳ
ಕಲ್ಪನೆಗಳ, ಕನಸುಗಳ
ಹಾದಿಗೆ ಬೇಡವೆ ಹೆಸರು

ಬೇಕು ಹೆಸರು
ಗುರುತಿಸಲು
ಜೀವಂತವಾಗಿರುವುದನ್ನು
ದೃಢೀಕರಿಸಲು.

Jan 3, 2008

ಬಾಲ್ಯದ ನೆನಪು

ಬೆಟ್ಟ ಗುಡ್ಡಗಳಲ್ಲಿ
ದಟ್ಟ ಕಾಡುಗಳಲ್ಲಿ
ಕಳೆದು ಹೋಗುವ
ಪುಟ್ಟ ಆಸೆ ನನಗೆ

ಆ ಕೊಬ್ಬಿದ ಎಮ್ಮೆಯನೇರಿ
ಊರು, ಕೇರಿಯೆಲ್ಲವೂ ಸುತ್ತಿ
ಪಕ್ಕದ ದೊಡ್ಡ ಕೆರೆಯಲ್ಲೊಮ್ಮೆ
ಜಗ್ಗಿ ಈಜುವ ಆಸೆ ನನಗೆ

ಚಡ್ಡಿ ಸ್ನೇಹಿತರ ಜೊತೆಗೆ
ವಂಗೆ ಟೊಂಗೆಗಳ ಹತ್ತಿ
ಅಂಗಿ, ಚಡ್ಡಿಗಳ ಅರಿದು
ಮರಳದಂಡೆಗೆ ಜಿಗಿಯುವಾಸೆ

ಗೋಲಿ ಆಟಗಳ ಆಡುತ್ತ
ಗೆಳೆಯರೊಂದಿದೆ ಜಗಳ
ಜೋರು ಮಳೆಯಲಿ ಮಿಂದು
ಬಿಸಿಲು ಕಾಯುವ ಆಸೆ

ಜಾತಿ ಕೋಳಿಯ ಕದ್ದು
ಹೊಲದ ಬಂಡೆಯ ಮೇಲೆ
ಉಪ್ಪು ಖಾರವ ಹರಿದು
ಸುಟ್ಟು ತಿನ್ನುವ ಆಸೆ

ಊರ ಹೈದರ ಜೊತೆಗೆ
ಓತಿಕ್ಯಾತವನು ಅಟ್ಟಿ
ಕಲ್ಲು ಮುಳ್ಳಗಳ ತುಳಿದು
ಕಲ್ಲು ಬೀಸುವ ಆಸೆ

ಗೆಳೆಯರಿಬ್ಬರು ಕೂಡಿ
ಬೀಡಿ ಕಟ್ಟನು ಹಿಡಿದು
ಗುಡಿಯ ಕದವ ಜಡಿದು
ಒಮ್ಮೆ ಸೇದಿ ಬಿಡುವಾಸೆ

ಆಡುವ ಆಟಗಳಲ್ಲಿ
ಎಷ್ಟೇ ಜಗಳಗಳಿರಲಿ
ಸಂಜೆ ಹೊತ್ತಿಗೆ ಮರೆತು
ಸಿನಿಮಾ ನೋಡುವ ಆಸೆ

ನೆನಪು ಬಂದಾಗೆಲ್ಲಾ
ತುಂಟ ಹುಡುಗರನು ಒಮ್ಮೆ
ನನ್ನ ಊರಿಗೆ ಹೋಗಿ
ನೋಡಿ ಬರುವಾಸೆ

ನಗರೀಕರಣದ ಲಗ್ಗೆ

ನೋಡಾ ನಗರೀಕರಣದ ಲಗ್ಗೆ
ಸೆಳೆಯುತಿದೆ ಎಲ್ಲರ ಜಗ್ಗಿ ಜಗ್ಗಿ
ಆಗಸದೆತ್ತರ ಏರಿದೆ ನೆಲದ ಬೆಲೆ
ಕಂಗಾಲಾಗಿಹರು ಜನ ಸಿಗದು ನೆಲೆ

ಶಬ್ದ ಮಾಲಿನ್ಯ, ವಾಯು ಮಾಲಿನ್ಯ,
ಜಲ ಮಾಲಿನ್ಯ, ಜನ ಮಾಲಿನ್ಯ
ಭೂಗಳ್ಳರ ಹಾವಳಿ, ಭೂಗತರ ಧಾಳಿ
ಎಲ್ಲವೂ ಅಸ್ಥವ್ಯಸ್ಥ, ಎಲ್ಲರೂ ತಟಸ್ಥ

ಜಗ್ಗಿ ನಡೆಯುತಿದೆ ಕಾರುಬಾರು
ಇದ್ದವರದ್ದೇ ಇಲ್ಲಿ ದರಬಾರು
ಸಾಮಾನ್ಯ ಜನತೆಯ ಕನಸುಗಳ
ಕೊಂದು ಮುಕ್ಕುವರು ರಸಗವಳ

ನಿಲ್ಲದೆ ಸಾಗಿದೆ ನಿತ್ಯ ಹರಣ
ಹಬ್ಬಿದೆ ಎಲ್ಲೆಡೆ ಅಸಮತೋಲನ
ಕುಣಿದಾಡುತಿದೆ ಪಾಪದ ಹಣ
ಕುರುಡಾಗಿಹರು ಇಲ್ಲಿ ಬಹಳ ಜನ

ಆಧುನಿಕತೆಯ ವರದಾನ

ಅವಸರದ ಜೀವನ
ಅತಿವೇಗದ ಪಯಣ
ತೀವ್ರ ಉದ್ವೇಗ, ಒತ್ತಡದ ಮನ
ಆಧುನಿಕತೆಯ ವರದಾನ

ಹತ್ತು ಹಲವು ಹೆದ್ದಾರಿಗಳು
ಕವಲೊಡೆದಿರುವ ಗುರಿ
ದ್ವಂದ್ವ ಮನಃಸ್ಥಿತಿಯಿಂದ
ಕಂಗೆಟ್ಟಿದೆ ಮತಿ ಜಾರಿ

ಮನಸು, ಮಾತುಗಳೆಲ್ಲವು ಮಲಿನ
ಮೌಲ್ಯಗಳು ಎಂದೊ ಪಲಾಯನ
ಸರಿದ ಸಾತ್ವಿಕ ಜೀವನ ಗೆಳೆಯ
ಕೊನೆ ಎಂದೊ ಈ ಪ್ರಳಯ

ಕನಸಿನ ಲೋಕ

ಕನಸಿನ ಲೋಕ ಅಮೇರಿಕಾ
ಹಂಗಂತಾರೆಲ್ಲರು ಯಾಕಾ
ಇದು ಐಶಾರಾಮಿ ಜೀವನಕಾ
ಭೂರಮೆಯೊಳಗಿನ ನಾಕ

ಕುಡಿಯೊಡೆದೊಡನೆ ಕಿವಿಹಿಂಡಿ
ಅಲ್ಲಿಯ ಕನಸನು ಬಿತ್ತುವರು
ಇಲ್ಲೇ ಹುಟ್ಟಿ ಇಲ್ಲೇ ಬೆಳೆದು
ಪಯಣವ ಅಲ್ಲಿಗೆ ಬೆಳೆಸುವರು

ಪಾಲಕರಿಗೆ ಸಾರ್ಥಕ ಮನೋಭಾವ
ಮಕ್ಕಳಿಗೆ ಸಾಧಿಸಿದ ಅನುಭವ
ಹೊಸ ಹುರುಪು ಹೊಸ ಉಲ್ಲಾಸ
ಅತಿ ಸುಂದರ ಆ ಕ್ಷಣ ಆ ದಿನ

ಆದಷ್ಟು ಕನಕ ಅತ್ಯಧಿಕ ಸುಖ
ಮತ್ತೆ ಬಂದಾರಾ ಇಲ್ಲಿಯ ತನಕ
ಮರೆಯಲಾಗದ ಹೆತ್ತವರ ತವಕ
ಕಾಣುವರು ಕೊನೆಗೆ ಮುಪ್ಪಿನಲಿ ನರಕ

( ಮರೆತವರಿಗಾಗಿ ಮಾತ್ರ )