ಕೆಸರಿನಲ್ಲಿ ಹೊಳೆವ ಕಮಲ
ಕೆಸರಿಗಂಜಿ ಅಳುವುದೇ
ಕೆಸರಿನಿಂದ ಬರುವುದೆಂದು
ಯಾರು ಅದನು ಬಗೆವರು
ಕೆಂಪು, ಬಿಳುಪು, ಹಳದಿ
ಬಣ್ಣ ಧರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು
ಹಾಲು, ಮೊಸರು, ಬೆಣ್ಣೆ ,ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು
ಒಂದು, ಎರಡು, ಮೂರು, ನಾಕು
ಮಗುವಿಗಿಷ್ಟು ಹೆಸರು ಸಾಕೆ
ಒಂದು, ಎರಡು ಮಾಡಿತೆಂದು
ಯಾರು ಅದಕೆ ಸಿಡಿವರು
No comments:
Post a Comment