ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಲಿಸುವಾನಂದ
ಇರಲಿ ಜನುಮ ಜನುಮವೀ ಬಂಧ
ಮಾತಿನ ಉಯ್ಯಾಲೆಯಲಿ
ತೂಗಿ ತೇಲಿಸುವವಳಿವಳು
ಮಾತೆಯ ಮಮತೆ ತೋರಿ
ನನ್ನ ಮನವ ಗೆದ್ದವಳು
ಓರೆ ನೋಟಗಳಲ್ಲಿ
ಎಲ್ಲ ತಿಳಿಸುವವಳಿವಳು
ಪ್ರೀತಿಯ ಹೂಬಾಣವ ಬಿಟ್ಟು
ನನ್ನ ಒಲವ ಸೆರೆಹಿಡಿದವಳು
ಹೊಸ ಹೊಸ ಪರಿಯ ತಿಂಡಿ
ಮನೆಯ ಮಂದಿಗೆ ಬಡಿಸಿ
ಮಕ್ಕಳಿಗೆ ಸಕ್ಕರೆಯ ಸಿಹಿಯುಣಿಸಿ
ನನ್ನಾಕೆ ಎಲ್ಲರಲಿ ಒಂದಾದವಳು
ವಾರ ವಾರದ ಪೂಜೆಗೆ
ಮಾತೆ ಬಯಸಿದ ಗುಡಿಗೆ
ಜೊತೆಯಾಗಿ ನನ್ನವಳು
ಅಮ್ಮನ ಮಗುವೆಂದು ಭಾವಿಸುವಳು
ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಲಿಸುವಾನಂದ
ಇರಲಿ ಜನುಮ ಜನುಮವೀ ಬಂಧ
No comments:
Post a Comment