Nov 4, 2017

ಮೌನ


ಮೌನ -
ಯಾರಿಗೂ ಎಟುಕದ ಅಂಬರ
ತೆರೆದಿಟ್ಟು ಸಾಧ್ಯಾಸಾಧ್ಯತೆಗಳ ಆಗರ
ಎಲ್ಲಾ ಆಯಾಮಗಳ ಲೆಕ್ಕಕ್ಕೆ ಕೊಲ್ಲಿಯಿಟ್ಟು,
ಸಕಲರ ಸಾಮರ್ಥ್ಯಕ್ಕೆ ಸೆಡ್ಡೊಡೆದು, ಸೋಲಿಸಿ,
ಸೇಡು ತೀರಿಸಿಕೊಂಡ ಅಗಾಧ ತೃಪ್ತಿ ತೋರಿ
ಗುಮ್ಮನಂತೆ ಸುಮ್ಮನಿರುವೆ.

ಮೌನ -
ನಿರಾಳಕ್ಕೆ ಭಂಗ ತರದಿರು
ದಯವಿಟ್ಟು ತುಸು ಕರುಣಿಸು
ಮನುಜನಿಗೆ ಮಾನವೀಯತೆಯ ರಿಯಾಯಿತಿ ಅಗತ್ಯ
ಪ್ರತಿಷ್ಠೆಗೆ ದಕ್ಕೆಯಾಗದಂತೆ ಸಹಕರಿಸು
ವಾಸ್ತವದ ಅರಿವಿದ್ದರೂ,
ಒಳಗೊಳಗೆ ಅದನ್ನೊಪ್ಪಿಕೊಳ್ಳುವ ಇರಾದೆಯಿದ್ದರೂ
ಸಹ ಸದ್ಯ ಸಿದ್ದನಿಲ್ಲ.
ಬಲ್ಲೆ ನಿನ್ನ ಎಲ್ಲಾ ಎಲ್ಲೆಗಳ ಆಳ, ಅಗಲಗಳ
ಎಂದು ಹೇಳುವ ಸ್ಥೈರ್ಯವಿನ್ನೂ ಎನಗಿಲ್ಲ.

ಮೌನ -
ನಿನ್ನೊಳಗೆ ಅನಂತಾನಂತ ನಕ್ಷತ್ರಗಳ ಸಂಗಮ,
ಆದರೂ ನೀನು ಎಲ್ಲರೊಳಗಿನ ಬುದ್ಧ.
ಅವರವರ ಭಾವ, ಭಕ್ತಿ, ಬುದ್ಧಿಗೆ ಸಿದ್ದಿಸುವ ಸೂತ್ರಕ್ಕೆ ಬದ್ಧ.
ಸತ್ಯಾಸತ್ಯತೆಗಳ ಕಲಕುವ ಕುಲ ನಿನ್ನದಲ್ಲ
ಕ್ಷುಲ್ಲಕ ಕಲಹ, ಕ್ಷುದ್ರ ವಿದ್ಯೆಯ ತಂತ್ರಗಳ
ಸಹವಾಸ ಬೇಕಿಲ್ಲ.
ಸುಮ್ಮನಿರುವೆ, ಸೂರ್ಯ, ಚಂದ್ರ ಬದಲಾದರೂ
ಅಲುಗಾಡದಂತೆ ತಟಸ್ತನಾಗಿ.

ಮೌನ -
ಕೈಮುಗಿದು ಮಂಡಿಯೂರಿದೆ
ನಿನ್ನ ಮುಂದೆ ಎಲ್ಲಾ ದೇಶ-ಕಾಲ
ಬೇಷರತ್ ಶರಣಾಗತಿ ಘೋಷಿಸಿ ವಿನಮ್ರ ಸೈನಿಕ, ಸೇವಕನಾಗಿ
ತನ್ನ ಗ್ರಹಗತಿಗಳ, ಗದ್ಯ-ಪದ್ಯಗಳ, ಸಾಧನೆ, ಸಂಪತ್ತುಗಳ 
ಅಸಹಾಯಕನಾಗಿ ಉಳಿಸಿಕೊಳ್ಳುವ ಅನಿವಾರ್ಯತೆ.
ಇನ್ನೂ ಬರಲಿ ಸಹಸ್ರ ಶತಮಾನಗಳು
ನಿನ್ನ ಗೆಲ್ಲುವ ಶೂರನಿಗೆ ಸಾಧ್ಯತೆ ಶೂನ್ಯ
ಇಂತಿರಲು ನಿನ್ನ ಇತಿಹಾಸ
ಉಳಿದೆಲ್ಲವೂ ನಗಣ್ಯ.


-  ಚಂದಿನ

Nov 1, 2016

ಗಡಿಯಿಲ್ಲದ ಗುಡಿಯತ್ತ, ಗುರಿಯತ್ತ...

ರೂಪ-ಪ್ರತಿರೂಪ, ಬಿಂಬ-ಪ್ರತಿಬಿಂಬಗಳ,
ಬಾಳ, ಒಡಲಿನ ಕಣಿ ಕೇಳದೆ.
ಕಲ್ಪನಾವಿಲಾಸಿಗೆ ವಿಳಾಸದ ಮೊಹರೂ ನೀಡದೆ.
ಎಲ್ಲ ಗಡಿಗಳ ಕೆಡವಿ, ಮೂರ್ತಗಳ ಮದವಿಳಿಸಿ,
ಗಡಿಯಿಲ್ಲದ ಗುಡಿಯತ್ತ, ಗುರಿಯತ್ತ ನೂಕಿ,
ತಾನೇ ತಾನಾಗಿ ನಿನ್ನ ಖಾಯಂ ಠಾಣೆಯ ಕೋಣೆಯೊಳಗೆ ಸೆರೆಯಾದೆ.
ಜ್ಞಾನ, ತಂತ್ರಜ್ಞಾನ, ವಿಜ್ಞಾನಗಳ ಜೊತೆಗೆ
ಸೃಜನಶೀಲತೆಗೂ ಸವಾಲೊಡ್ಡಿ,
ಕ್ರಿಯಾಶೀಲತೆಗೆ ಕಾಲುದಾರಿಯ ಕುರುಹು ಉಳಿಸಿ,
ಕತ್ತಲು-ಬೆಳಕಿನ ಛಾಯೆಯೊಳಗೆ ಜರಿ-ತೊರೆ, ಹಳ್ಳ-ದಿನ್ನೆಗಳ ದಾಟಿ,
ಕಾನನದ ಇಂಪನ-ಕಂಪನಗಳಿಗೆ ಕಿವಿಗೊಡುವಂತೆ ಪಟ್ಟು ಹಿಡಿದು,
ಸೂಕ್ಷ್ಮಾತಿ-ಸೂಕ್ಷ್ಮಗಳ ಪರಿಚಯಿಸಿ,
ಪ್ರಶ್ನೆ, ಪರೀಕ್ಷೆಗಳ ಪರಿಷೆಗೆ ಕರೆದು,
ಕದಡಿ, ಕೆಣಕಿ, ಕಟ್ಟಿ, ಬಿಟ್ಟುಕೊಟ್ಟು
ಬಿಡುಗಡೆಯ ಸುಖ, ಸಾರ್ಥಕತೆಗೆ ಸಾಕ್ಷಿಯಾಗಿ,
ಏಕಾಂಗಿಯಲ್ಲವೆಂದ ನಲ್ಲೆ.
ನಿನ್ನ ಎಲ್ಲಾ ಎಲ್ಲೆಗಳ ಪರಿ ತುಸು ತೋರೆ.
ನೆಲ-ಜಲದ ಜಗಳಕ್ಕೆ
ಬಗೆಬಗೆಯ ಬೀಜಗಳ ಭಿತ್ತಿ, ಬೆಳಸಿ, ಬೆರಗಾಗಿಸುವ
ನಿನ್ನ ಅಗಾಧ ಶಕ್ತಿ, ಚೇತನದ ಮೂಲವೆಲ್ಲಿ?
ತಳ, ವಿತಳ, ಪಾತಾಳಗಳ ಆಳ, ಅಗಲವ
ಬಲ್ಲ ನಲ್ಲ ನಾನಲ್ಲ.
ರೂಪಕಗಳ ರಾಶಿಯಲ್ಲಿ ಬಹುರೂಪಿ.
ಸಾವಿರ ಪ್ರಶ್ನೆಗಳೆಸೆದು ಮೌನವಾಗಿರುವ ನಿನ್ನ ಗುಟ್ಟಾದರೂ ಏನು?
ಮೂರ್ತ, ಅಮೂರ್ತ ಚಲನ-ವಲನಗಳ
ಸ್ನೇಹ, ಸ್ಪರ್ಶ, ಸಾಂಗತ್ಯದ ಸಿರಿಯಿಂದ
ಸೋಲು-ಗೆಲುವುಗಳ ಸೊಲ್ಲೆತ್ತದೆ,
ಸತ್ಯ-ವಿಥ್ಯಗಳ ನಿತ್ಯ ಕದನಕ್ಕಿಟ್ಟು ಪೂರ್ಣವಿರಾಮ,
ನಾನಾಗ ಬಯಸುವೆ -
ಕ್ಷಣಗಳ ತಾಗುವ, ತೇಲುವ, ತಲುಪುವ ಕಣ.
ಪ್ರತೀಕ್ಷಣ.


Jan 17, 2016

ಚಳಿಗಾಲದ ತೀವ್ರತೆ..!ಚಳಿಗಾಲದ ತೀವ್ರತೆ -
ನಡುವಯಸ್ಸಿನ ನಾರಿ ನಸುಕಿನ ವಿಹಾರಕ್ಕೆ ಗೈರು;
ಗಂಡನ ಅಚ್ಚರಿ ಪ್ರಣಯ ಸೂಚನೆಗೆ ಖುಷಿಯಾಗಿ.

ಚಳಿಗಾಲದ ತೀವ್ರತೆ –
ಪತಿಯ ಅನಿರೀಕ್ಷಿತ ಹೊಗಳುವಿಕೆಗೆ ಕರಗಿದಂತೆ ನಟಿಸಿದ;
ಸಧಾರಣ ಸತಿ.

ಚಳಿಗಾಲದ ತೀವ್ರತೆ –
ಕಂಜೂಸು ಗೆಳೆಯ ಹಠಾತ್ತನೆ ಉದಾರ ಹೃದಯವಂತನಾದದ್ದು ಕಂಡು;
ಗುಮಾನಿಯಿಂದ ನಸುನಕ್ಕಳು.

ಚಳಿಗಾಲದ ತೀವ್ರತೆ –
ಶಾಲು, ಸ್ವೆಟರ್, ಕಡೆಗೆ ಕಂಬಳಿ ಕೂಡ ಪರಿಪರಿಯಾಗಿ ಬೇಡಿದ್ದು;
ಮುನಿದ ಮಡದಿಯ ಸನಿಹ.

ಚಳಿಗಾಲದ ತೀವ್ರತೆ –
ಕಂಡರಾಗದ ದಂಪತಿ ಜೊತೆಯಾಗಿ ಸಮ್ಮತಿಸಿದರು ಮುಂದೂಡಲು;
ತಮ್ಮ ವಿವಾಹ ವಿಚ್ಛೇದನ.

ಚಳಿಗಾಲದ ತೀವ್ರತೆ –
ಹದಿ ಹರೆಯದ ಹೆಂಗೆಳೆಯರ ಹೊಸ ಹುರುಪಿನ ವರಸೆಗೆ;
ಯುವಕರು ಕುಸಿದು ಕಂಗಾಲು.
Aug 28, 2015

ನಮಗಿಲ್ಲ ಯಾವ ಊರು, ಯಾವ ಸೂರು.


ನಿತ್ಯ ಶೋಷಣೆಯ ನೊಗವೊತ್ತು  ಹತಾಶೆ,  ಅಭದ್ರತೆಯ ನೆರಳಲ್ಲಿ ನೊಂದು ನಂಬಿಕೆ ಕಳೆದುಕೊಂಡ ನಿರ್ಗತಿಕ, ಕೂಲಿ ಕಾರ್ಮಿಕಬಡ ರೈತ ಹಾಗು ದೀನ ದಲಿತನ ಪಾಡು:


ಸಿವಿಗೆ ಅನ್ನ, ತೊಡಲು ಬಟ್ಟೆ,
ಗುಡಿಸಿ, ಸಾರಿಸಿ, ರಂಗೋಲೆಯಿಡಲು ಸೂರು,
ನಮ್ಮ ಕತ್ತಲಿಗೆ ಬೆಳಕು,
ಇಲ್ಲಾ, ಇಲ್ಲಾ, ಇಲ್ಲ.
ಉಳುವ ಭೂಮಿ ಕಸಿದ,
ಕೈಯಲ್ಲಿನ ಕೂಲಿ ಕದ್ದ,
ಎಲ್ಲ ಕನಸುಗಳ ಕೊಂದ,
ನಮ್ಮವನೆಂದ, ಸೇವಕನೆಂದ,
ಸ್ನೇಹಿತನೆಂದ, ನಾಯಕನಾದ
ಕಸಿದ, ಕದ್ದ, ಕೊಂದ.

ಕೆಲವರು,
ಮುಟ್ಟಸಿಕೊಳ್ಳಲೊಲ್ಲರು,
ಜೊತೆಗೆ ಕೂತು ಉಣ್ಣಲೊಲ್ಲರು,
ಎಂಜಲೆಲೆಗಳ ಮೇಲೆ ಉರುಳಿಸಿ, ಪಾದ ತೊಳೆಸಿ, ಆ ಕಲುಷಿತ ನೀರನ್ನು ಕುಡಿಸಿ,
ನಮ್ಮ ಎಲ್ಲಾ ಪಾಪ ಕರ್ಮಗಳ, ದಟ್ಟ ದಾರಿದ್ರ್ಯಗಳ, ರೋಗ-ರುಜಿನಗಳ ತೊಳೆದು
ಕೃತಾರ್ಥರಾಗಿ ಎಂದು ದೂರದಿಂದಲೇ ಅರಚಿದರು.

ಕೆಲವರ ನಯವಾದ ಸಲಹೆ ಹೇಗಿದೆ ನೋಡಿ;
ಸಾಲ-ಸೋಲ ಮಾಡಿ ಹಬ್ಬ- ಹರಿದಿನ ತಪ್ಪದೇ ಆಚರಿಸಿ.
ಮದುವೆ-ಮುಂಜಿ, ಗೃಹ ಪ್ರವೇಶ, ಪೂಜೆ-ಪುನಸ್ಕಾರ, ಪುಣ್ಯತಿಥಿ, ಎಲ್ಲಾ ಶುಭ ಕಾರ್ಯ
ಅಬ್ಬರ, ಆಡಂಬರದಿಂದ ತಮ್ಮ ಸಮಕ್ಷಮದಲ್ಲೇ,
ನಾವು ಹೇಳಿದಂತೆ ನಡೆಯಬೇಕು ಎಂದು ಪಟ್ಟು ಹಿಡಿವರು.

ಜೊತೆಗೆ,
ರಾಹು, ಗುಳಿಕಕಾಲ ನೋಡಿಕೋ ಹುಷಾರು,
ಜೋತಿಷ್ಯ,  ವಾಸ್ತುಗಳು ಶ್ರೇಷ್ಠ ನಂಬು,
ಹೋಮ, ಹವನ ಪವಿತ್ರ-ಪಾವನ,
ವಾರದ ಎಲ್ಲಾ ದಿನ ಅಲ್ಲಿ – ಇಲ್ಲಿ, ಎಲ್ಲೆಲ್ಲೋ ಹೋಗು
ವಿಶೇಷ ಪೂಜೆ ಅರ್ಚನೆ ಟಿಕೇಟು ಖರೀದಿಸಿ,
ಅರ್ಚಕರಿಗೆ ಕಾಣಿಕೆ ನೀಡಿ ಅಡ್ಡಬಿದ್ದಾಗಲೇ
ನಮಗೆ ಮನೆ, ಮದುವೆ, ಮಕ್ಕಳ ಭಾಗ್ಯ ಎಂದು ಬೊಗಳೆ ಬಿಟ್ಟು,
ಇರುವುದೆಲ್ಲವ ದೋಚಿ, ಸಿಕ್ಕಿದ್ದನ್ನೆಲ್ಲಾ  ಉಂಡು,
ತಮ್ಮ ಮೂತಿ ಒರೆಸಿಕೊಂಡು,
ಅಂಡು ತೋರಿಸಿ ಹೊರಟೇ ಹೋದರು.

ಜಾತಕ,  ಸೂತಕ ಮಹಾ ಪಾತಕ,
ಮಂಗಳ, ಶನಿ ಗ್ರಹಗಳ ಪ್ರಭಾವಕ್ಕೆ ಬಲಿಯಾಗಿರುವೆ,
ನಾಮ ಬಲ ಎಂದೋ ಎಕ್ಕುಟ್ಟೋಗಿದೆ ಎಂದು,
ಇನ್ನಿಲ್ಲದಂತೆ ಭಯಪಡಿಸಿ, ಕಾಡಿಸಿ, ಪೀಡಿಸಿ, ಓಡಿಸಿ,
ಮನಸ್ಸು ಕಲಕಿ, ಕದಡಿ ಅವರ ಬದುಕಲ್ಲಿ ಚದುರಂಗವಾಡಿ,
ಅಂದು ಬೀದಿಗೆ ಬಿದ್ದವರು ಕಳೆದುಕೊಂಡಿದ್ದು ಇನ್ನೂ ಹುಡುಕುತ್ತಿದ್ದಾರೆ.

ಇವರು ಧೀಮಂತರಂತೆ, ಸಕಲ ಸಾಧಕರಂತೆ,
ಸರ್ವಗುಣ ಸಂಪನ್ನರಂತೆ, ಸಜ್ಜನ ಸರ್ವಜ್ಞರಂತೆ,
ಎಲ್ಲಾ ಟೀವಿ-ಪತ್ರಿಕೆಗಳಲ್ಲಿ, ಸಿಕ್ಕ ಸಿಕ್ಕ ಸಭೆ-ಸಮಾರಂಭಗಳಲ್ಲಿ
ಧರ್ಮ ಶ್ರೇಷ್ಠತೆಯ ಬಗ್ಗೆ, ಒಗ್ಗಟ್ಟಿನ ಶಕ್ತಿ-ಯುಕ್ತಿಗಳ ಬಗ್ಗೆ,
ಸರಳ ಜೀವನ ಮಾರ್ಗದ ಬಗ್ಗೆ,  ಸಮ-ಸಮಾಜದ ನಿರ್ಮಾಣದ ಬಗ್ಗೆ,
ನೀತಿಪಾಠಗಳ ಬಗ್ಗೆ ನಿರರ್ಗಳವಾಗಿ ಪುಂಗಿ,
ಸವಿ ಮಾತಿನ ಲೇಪನವೆರಚಿ,
ಸಾರ್ವಜನಿಕರ ನಂಬಿಸಿ ನಾಮಗಳಿಟ್ಟು
ತಮ್ಮ ಹೊಟ್ಟೆ ಇನ್ನೂ ದುಂಡಗಾಗಿಸಿಕೊಂಡವರು.

ಇವರ ಬಂಡವಾಳ ಮತ್ತು ಜೀವಾಳ:
ಸದಾ ನಗುಮುಖ, ನಡೆ-ನುಡಿಯಲ್ಲಿ ಅತಿ ವಿನಯ-ವಿನಮ್ರತೆ,
ಹಿತನುಡಿಗಳ ಸನಿಹ, ಸಾಂಗತ್ಯ ಸವರಿ,
ಭುಜದಲ್ಲಿ ಕೈಯಿರಿಸಿ,  ಬೆನ್ನಿಗೆ ಚೂರಿ ಹಾಕಿ  
ಸದ್ದಿಲ್ಲದೇ ಪರಾರಿಯಾಗುವ ಮಹಾನ್ ನಿಪುಣರು!

ಕೊನೆಗೆ ನಮ್ಮ ಹೆಸರುಗಳೂ ಬಿಡದೆ,
ನಮ್ಮ ದೇವರ ಆಕಾರಗಳ ವಿಕಾರಗೊಳಿಸಿ
ತಮ್ಮ ವಿಕೃತ ಮನಸ್ಥಿತಿಯ ಮಟ್ಟ ಪ್ರದರ್ಶಿಸಿದವರು.

ಅವಿದ್ಯಾವಂತ, ಅಮಾಯಕ, ಅಸಹಾಯಕರ
ಮನಗಳ ಹೊಲದಲ್ಲಿ ಮೂಢನಂಬಿಕೆಯ ಬಿತ್ತನೆ ಬಿತ್ತು,
ಅಂಧಃಕಾರ, ಭಯಬೀತಿ, ಮೌಢ್ಯತೆಗಳ ಭಾರಿ ಫಸಲಿಂದ
ಭರ್ಜರಿ ಭೋಜನಮಾಡುವ  ಅನಾಗರೀಕರನ್ನು,
ಧರ್ಮ, ಪರಂಪರೆ, ಸಂಸ್ಕೃತಿ, ಆಚರಣೆಗಳ ಹೆಸರಲ್ಲಿ
ನಿತ್ಯ ಕೊಳ್ಳೆ ಹೊಡೆಯುವ ಕಾಯಕದಲ್ಲಿ ಮಗ್ನರಾದ ಭಂಡರನ್ನು,
ಸ್ವಜನ ಪಕ್ಷಪಾತಿಗಳನ್ನು,  ಕ್ರೂರ ಹಿತ ಶತ್ರುಗಳನ್ನು,
ನಿಕೃಷ್ಟ ನಯವಂಚಕರನ್ನು,  ಹಗಲು ದರೋಡೆಕೋರರನ್ನು,
ವಿಕೃತ ಪಿಶಾಚಿಗಳನ್ನು, ನಂಬಿಕೆ ದ್ರೋಹಿಗಳನ್ನು,
ಮುಗ್ಧ, ಮಹಿಳೆ, ಮಕ್ಕಳ ಶೋಷಕರನ್ನು,
ಇಡೀ ಮನುಕುಲ ಪೀಡಕರನ್ನು,
ಶತಮಾನಗಳ ಸತತ ಶ್ರಮವೂ ಸರಿಪಡಿಸಲಾಗದೆ ಸೋತು,
ಸಾಯುವ ಮುನ್ನವಾದರೂ,
ಯೇಸು, ಅಲ್ಲಾಹು, ಬುದ್ಧನಲ್ಲಿಗೆ ಓಡಿ
ಮುಕ್ತಿ ಪಡೆಯೋಣವೆಂದು ಬಯಸಿದರೆ,
ಅಲ್ಲಿಯೂ ನೆಮ್ಮದಿಯಾಗಿ ಬಿಡಲೊಲ್ಲದ ಪುಂಡರು,
ಘರ್ ವಾಪಸಿ ಎಂದು ಮತ್ತೆ ಬೊಬ್ಬಿಡುವರು,
ಭಯಪಡಿಸುವರು, ಸಾವಿರ ಸುಳ್ಳು ಭರವಸೆಗಳ ನೀಡುವರು,
ಅಯಯ್ಯೋ ಶಿವ, ಶಿವಾ ಶರಣು ಶರಣೆಂದರೆ,
ನೀವು ವೀರ ಶೈವರಲ್ಲವೆಂದು ಜರಿವರು.

ಏನು ಮಾಡಲಿ ಶಿವನೆ, ಎತ್ತ ಹೋಗಲಿ ಹರನೆ,
ಬೆತ್ತಲಾಗಿದ್ದೇನೆ, ಇನ್ನಾದರೂ ಬಿಟ್ಟುಬಿಡು ಸುಮ್ಮನೆ,
ನಮ್ಮ ಪಾಡಿಗೆನಮ್ಮ ಹಾಡಿಗೆ,
ನಾವು ಅಲ್ಪರು, ನಾವು ಅಂಧರು,
ನಾವು ಮಹಾ ಮೂರ್ಖರು, ನಾವು ಶತದಡ್ಡರು,
ನಾವು ಕಡುಬಡವರು, ನಾವು ಬಹಳ ತುಚ್ಛರು,
ನಮಗೆ ಬೇಕಿಲ್ಲ ಯಾವ ಧರ್ಮಗುರು,
ನಮಗಿಲ್ಲ ಯಾವ ಊರು, ಯಾವ ಸೂರು.
Aug 4, 2015

ನಿನಗೆ ಯಾರೆ ಮಾದರಿ?


ನೀನೇ ಆರಿಸಿದ
ಕೊತ್ತೊಂಬರಿ ಕಟ್ಟು, ತಾಜಾ ಹಣ್ಣು, ತರಕಾರಿ
ಕೊಳೆತಿದೆ ಎಂದು
ದಿನವಿಡೀ ಅವನಿಗೆ ಶಪಿಸುವೆ.
ಮನೆಗೆಲಸದವಳನ್ನು ಬೆಂಬಿಡದೆ ಇನ್ನಿಲ್ಲದಂತೆ ಕಾಡುವೆ,
ಯಾವುದೋ ಹಳೇ ಸೇಡು ತೀರಿಸಿಕೊಳ್ಳುವವಳಂತೆ. 
ಮಮ್ಮೊಕ್ಕಳಾದರೂ ನಿನ್ನ ಮಕ್ಕಳ ಕಾಳಜಿಯಲ್ಲಿ
ಇಂದಿಗೂ ತುಸು ಕರಗದ ನಿನ್ನ ಧಾವಂತ,
ಹೇಗೆ ಇನ್ನೂ ಜೀವಂತ?

ನಮಗಾಗಿ ಇಡೀ ಜಗವನ್ನೇ ಯುದ್ಧಕ್ಕೆ ಕರೆಯುವ
ನಿನ್ನ ಭಂಡ ಧೈರ್ಯಕ್ಕೊಂದು ಸಲಾಮು.
ನಿರ್ಲಜ್ಜೆಯ ಪರಾಕಾಷ್ಠೆಯ ಪ್ರಚಂಡ ಪ್ರದರ್ಶನ
ನಿನ್ನ ಮಕ್ಕಳ ಬಗ್ಗೆ ಸುಖಾಸುಮ್ಮನೆ ಕೊಚ್ಚಿಕೊಳ್ಳುವಾಗ.
ಮೈಮನಸಿನ ಕಿಂಚಿತ್ ಗಾಯಕ್ಕೂ
ಬೇಕೇ ಬೇಕು ಇಂದಿಗೂ ನಮಗೆ
ನಿನ್ನ ಪ್ರೀತಿಯ ಮುಲಾಮು.

ನಮಗಾಗಿ ಏನೆಲ್ಲಾ ಆದೆ ಕಣೇ
ಸುಳ್ಳಿಯಾದೆ, ಕಳ್ಳಿಯಾದೆ,
ಮಾತಿನ ಮಳ್ಳಿಯಾದೆ,
ಮಾರಿ-ಹೆಮ್ಮಾರಿಯಾದೆ.
ಮಾನ, ಸ್ವಾಭಿಮಾನ
ಎಲ್ಲವೂ ಅಡವಿಟ್ಟೆ.
ನೀ ಕೋಪಗೊಂಡ ಕರಾಳ ಸನ್ನವೇಶಗಳಲ್ಲಿ,
ನಮಗೆ ದನಕ್ಕೆ ಬಡಿದಂಗೆ ಬಡಿದು,
ನೆರೆಹೊರೆಯವರಿಗೆ ವಿಚಿತ್ರ ಭಯ ಕೊಟ್ಟು,
ಊರಿನವರೆಲ್ಲರನ್ನೂ ಬೆಚ್ಚಿಬೀಳಿಸಿದೆ.
ಚಂಡಿ-ಚಾಮುಂಡಿಯೂ ಆ ಘಳಿಗೆಯಲ್ಲಿ
ನಿನ್ನ ಮುಂದೆ ಮಂಡಿಯೂರಲೇಬೇಕಿತ್ತು.

ನಿನ್ನ ಆಸೆ, ಆಶಯಗಳಿಗೆ,
ಎಲ್ಲಾ ಕನಸುಗಳಿಗೆ ಕೊಲ್ಲಿಯಿಟ್ಟು,
ನಮ್ಮ ಕನಸುಗಳಿಗೆ ನಿರಂತರ ನೀರು-ಗೊಬ್ಬರವೆರೆದು,
ಜಾಗರೂಕತೆಯಿಂದ ಸಲುಹಿ, ಬೆಳೆಸಿ
ನಮಗಿಂತ ಹೆಚ್ಚಾಗಿ ನೀನೇ ಖುಷಿಪಟ್ಟೆ.

ಎಂದೂ ಅಳಿಸಲಾಗದ ಘಟನೆಗಳು;
ಅಂದು ಅವರಿತ್ತ ಮುದ್ದೆಸಾರು ನಮಗಿಟ್ಟು
ನಾವು ಅದರೊಂದಿಗೆ ಕಾಳಗವಿಟ್ಟು,
ಕ್ಷಣದಿ ಕರಗಿಸಿದ ಚಣಗಳನ್ನು,
ಆಸ್ಥೆಯಿಂದ ಆಸ್ವಾಧಿಸಿ,
ಚಂಬು ನೀರು ಕುಡಿದು ಮಲಗಿದ
ನಿನ್ನ ಎಷ್ಟೋ ರಾತ್ರಿಗಳಿಗೆ ಲೆಕ್ಕವುಂಟೇನೆ?
ದಟ್ಟ-ದಾರಿದ್ರ್ಯದ ಅಟ್ಟಹಾಸವ
ನಸು ನಗೆಯಿಂದಲೇ ಮಣಿಸಿದ
ನಿನ್ನ ಸಾಹಸಕ್ಕೆ ಶರಣು, ಶರಣು.
ಹಸಿವು,
ಅದೆಂಥಹ ಮಹಾಕ್ರೂರಿ, ನಿರ್ದಯಿ, ಕಡುಪಾಪಿ!
ನಮ್ಮ ಹಸಿವಲ್ಲಿ ನಿನ್ನ ಹಸಿವಿಗೆ 
ಆಗ ಜಾಗವೆಲ್ಲಿ.

ಆದರೂ ನೀನು ಮಾಹನ್ ಸ್ವಾರ್ಥಿ!
ಕುಡುಕ ಅಪ್ಪನ ಸಾವು ಸಹಿಸಿಕೊಂಡು,
ಒಮ್ಮೆಯಾದರೂ ಅದರ ನೋವು,
ಇಲ್ಲಾ ಅವನ ನೆನಪು ಸುಳಿಯದಂತೆ ನೋಡಿಕೊಂಡ
ನಿನಗೆ ಯಾರೆ ಮಾದರಿ?

ಅಮ್ಮ,
ಎಷ್ಟೋ ಸಲ ನಿನ್ನೊಂದಿಗೆ ಬಹಳ ಕಠುವಾಗಿ ವರ್ತಿಸಿರುವೆ,
ಕೈಮುಗಿವೆ ಒಮ್ಮೆ ಎನ್ನ ಕ್ಷಮಿಸಿಬಿಡೆ.

ಇನ್ನಾದರೂ ನೆಮ್ಮದಿಯಾಗಿ, ಆರೋಗ್ಯದಿಂದ,
ನಗುನಗುತ್ತಾ ನಮ್ಮೊಂದಿಗೆ ನೂರ್ಕಾಲ ನೂಕಿಬಿಡು.
ನೀನೆಂದೆಂದಿಗೂ ನಮಗೆ,
ಸ್ಪೂರ್ತಿಯ ಚಿಲುಮೆ,
ಸಹನೆಯ ಚಂದಿರ,
ಸ್ಥೈರ್ಯದ ಸೂರ್ಯ.