ಬೆಟ್ಟ ಗುಡ್ಡಗಳಲ್ಲಿ
ದಟ್ಟ ಕಾಡುಗಳಲ್ಲಿ
ಕಳೆದು ಹೋಗುವ
ಪುಟ್ಟ ಆಸೆ ನನಗೆ
ಆ ಕೊಬ್ಬಿದ ಎಮ್ಮೆಯನೇರಿ
ಊರು, ಕೇರಿಯೆಲ್ಲವೂ ಸುತ್ತಿ
ಪಕ್ಕದ ದೊಡ್ಡ ಕೆರೆಯಲ್ಲೊಮ್ಮೆ
ಜಗ್ಗಿ ಈಜುವ ಆಸೆ ನನಗೆ
ಚಡ್ಡಿ ಸ್ನೇಹಿತರ ಜೊತೆಗೆ
ವಂಗೆ ಟೊಂಗೆಗಳ ಹತ್ತಿ
ಅಂಗಿ, ಚಡ್ಡಿಗಳ ಅರಿದು
ಮರಳದಂಡೆಗೆ ಜಿಗಿಯುವಾಸೆ
ಗೋಲಿ ಆಟಗಳ ಆಡುತ್ತ
ಗೆಳೆಯರೊಂದಿದೆ ಜಗಳ
ಜೋರು ಮಳೆಯಲಿ ಮಿಂದು
ಬಿಸಿಲು ಕಾಯುವ ಆಸೆ
ಜಾತಿ ಕೋಳಿಯ ಕದ್ದು
ಹೊಲದ ಬಂಡೆಯ ಮೇಲೆ
ಉಪ್ಪು ಖಾರವ ಹರಿದು
ಸುಟ್ಟು ತಿನ್ನುವ ಆಸೆ
ಊರ ಹೈದರ ಜೊತೆಗೆ
ಓತಿಕ್ಯಾತವನು ಅಟ್ಟಿ
ಕಲ್ಲು ಮುಳ್ಳಗಳ ತುಳಿದು
ಕಲ್ಲು ಬೀಸುವ ಆಸೆ
ಗೆಳೆಯರಿಬ್ಬರು ಕೂಡಿ
ಬೀಡಿ ಕಟ್ಟನು ಹಿಡಿದು
ಗುಡಿಯ ಕದವ ಜಡಿದು
ಒಮ್ಮೆ ಸೇದಿ ಬಿಡುವಾಸೆ
ಆಡುವ ಆಟಗಳಲ್ಲಿ
ಎಷ್ಟೇ ಜಗಳಗಳಿರಲಿ
ಸಂಜೆ ಹೊತ್ತಿಗೆ ಮರೆತು
ಸಿನಿಮಾ ನೋಡುವ ಆಸೆ
ನೆನಪು ಬಂದಾಗೆಲ್ಲಾ
ತುಂಟ ಹುಡುಗರನು ಒಮ್ಮೆ
ನನ್ನ ಊರಿಗೆ ಹೋಗಿ
ನೋಡಿ ಬರುವಾಸೆ
No comments:
Post a Comment