Apr 29, 2008

ಚುನಾವಣೆ ಬಿಸಿ

ಚುನಾವಣೆ ಬಿಸಿಯೇರುತಿದೆ
ಭರವಸೆಗಳ ಮಳೆ ಸುರಿಯುತಿದೆ
ರಾಷ್ಟ್ರೀಯ ಪಕ್ಷಗಳೊಂದಿಗೆ
ಪ್ರಾಂತೀಯ ಪಕ್ಷ ಕಣದಲ್ಲಿದೆ

ಭಿನ್ನ ವಿಭಿನ್ನ ಆಶ್ವಾಸನೆಗಳು
ಬಣ್ಣ ಬಣ್ಣದ ಟೀವಿ, ಸೈಕಲ್ಲುಗಳು
ಎರಡು ರೂಗೆ ಕಿಲೋ ಅಕ್ಕಿ
ಕಡಿಮೆ ಬಡ್ಡಿದರ, ಕೃಷಿ ಸಾಲಮನ್ನಾ

ಉಚಿತ ವಿದ್ಯುತ್ ಸರಬರಾಜು
ಶುದ್ಧ ಕುಡಿಯುವ ನೀರು
ಒಳ ಚಂರಂಡಿ ವ್ಯವಸ್ಥೆ
ನಮಗೆ ಅತ್ಯುತ್ತಮ ರಸ್ತೆ

ಆರೋಪ ಪ್ರತ್ಯಾರೋಪಗಳು
ಅವರ ಪ್ರಣಾಳಿಕೆ ನಮ್ಮದೆ
ನಮ್ಮ ಪ್ರಣಾಳಿಕೆ ಕದ್ದಂತಿದೆ
ಮತದಾತರಿಗೆ ಗೊಂದಲವಾಗಿದೆ

ರಾಜಕಾರಣಿಗಳ ಆಕಾಶವಾಣಿ
ಜ್ಯೋತಿಷಿಗಳ ಭವಿಷ್ಯವಾಣಿ
ಟಿಕೆಟ್ಟಿಗಾಗಿ ಮಾಟಮಂತ್ರ
ಓಲೈಸುವ ತಂತ್ರ ಯಂತ್ರ

ಅಧಿಕಾರದ ಲಾಲಸೆಗೆ
ಹಣದ ವ್ಯಾಮೋಹಕೆ
ಮುದುಕರು ಮತಿಗೆಟ್ಟು
ಕುಣಿವರು ಮೂರೂಬಿಟ್ಟು

ಬಂಡಾಯ ಭುಗಿಲೆದ್ದಿದೆ
ಅಟ್ಟಹಾಸ ಮೆರೆಯುತಿದೆ
ಹಣದ ಅಹಂಕಾರ ಕುಣಿದು
ವಿಕೃತ ಪ್ರದರ್ಶನ ನೀಡಿದೆ

ವಿಚಿತ್ರ ಘೋಷಣೆಗಳು
ವಿಶೇಷ ಸೂಚನೆಗಳು
ಗ್ರಾಮೀಣಪರ ನೀತಿಗಳು
ನಗರಪರ ಯೋಜನೆಗಳು

ಹೇಳುವುದೊಂದು ಮಾಡುವುದೊಂದು
ಹತ್ತುಕೋಟಿ ನಗದು, ಕೋಟಿಗಳ ಮದ್ಯ
ಇಪ್ಪತ್ತು ಲಕ್ಷ ಮೌಲ್ಯದ ಸೀರೆ ಸಿಕ್ಕಿತ್ತು
ಸಿಗದಿದ್ದು ಇನ್ನೂ ಎಷ್ಟೋ ಇದ್ದೀತು

ಬುಡಬುಡುಕೆ ಬೂಟಾಟಿಕೆ
ಜನ ನಂಬುವರೆಂಬ ನಂಬಿಕೆ
ನಾಚಿಕೆ ಪರಿಚಯವಿಲ್ಲದಕೆ
ನೈತಿಕತೆ ನೀತಿಪಾಠ ಬೇಕೆ

ಅಧಮರಲ್ಲಿ ಉತ್ತಮನಿಗೆ
ಮತನೀಡುವ ಅನಿವಾರ್ಯತೆ
ಹಣ ಚೆಲ್ಲುವ ಅಂಧರಿಗೆ
ಪಾಠ ಕಲಿಸವ ಅವಶ್ಯಕತೆ

ಮುದುಕರಲ್ಲಿ ಯುವಕರ
ಯುವಕರಲ್ಲಿ ಅರಿತವರ
ಅವಕಾಶವಿರೆ ಹೊಸಬರ
ಖಚಿತ ಕನ್ನಡಿಗರ ಆರಿಸಿ

No comments: