Apr 4, 2008

ಎರಡೇ ಎರಡು ತುತ್ತು

ಕಾವೇರಿ ಮಳೆಯ ಕೃಪೆಯಿಂದ
ಈಗ ತಣ್ಣಗಿದ್ದಂತಿದೆ
ಜನತೆಗೆ, ಉಲ್ಲಾಸ, ಉತ್ಸಾಹ
ಹಾಗು ಕುತೂಹಲ ಭರಿತ
ಮನರಂಜನೆಯೊಂದಿಗೆ
ಟ್ವೆಂಟಿ ಟ್ವೆಂಟಿ ಸಿಎಂ ಕಪ್
ಅಮೋಘ ಪ್ರದರ್ಶನ ಕಂಡಿದೆ

ಅತ್ತ ಮೋದಿಯ ಮೋಡಿ
ಇತ್ತ ಮಯಾವತಿ ಮಾಯೆ
ರೈಲು ಲಾಲು ಬಿಟ್ಟ ರೀಲು
ಚಿದಂಬ “ರಂ” ಚಮತ್ಕಾರ
ರಾಜ್ ಠಾಕ್ರೆ ಬಿಹಾರಿ ಬಹಿಷ್ಕಾರ
ಗುಜರಾತ್ ಮಾದರಿ ಅಭಿವೃದ್ಧಿ
ಠಾಕ್ರೆ ಮಾದರಿ ಹೊರಾಟಕ್ಕೆ
ಸ್ಥಳೀಯ ತಳಿಗಳ ತಡಕಾಟ
ಅಲ್ಪವಿರಾಮ ಕಂಡಿದೆ

ಕಮರ್ಷಿಯಲ್ ಬ್ರೇಕ್ ನಂತರ
ಹೊಗೇನಕಲ್ ಜಲಪಾತಕ್ಕೆ
ಈಗ ಜಾತಕ ಕೂಡಿ ಬಂದಿದೆ
ಕೋರ್ಟು, ಕಛೇರಿ ಇದ್ದೇ ಇದೆ
ಎದ್ದು ಬಿದ್ದು, ಬಿದ್ದು ಎದ್ದು
ಸಿಕ್ಕ ಸುವರ್ಣಾವಕಾಶ
ಸುಮ್ಮನಿರಲಾದೀತೆ

ಹೋಟಲ್ ಬಂದ್, ಸಿನಿಮಾ ಬಂದ್
ತಮಿಲು ಚಾನೆಲ್ಲುಗಳು ಗಪ್ ಚುಪ್
ಬಸ್ಸು ಲಾರಿಗಳಿಗೆ ಸಾಕಷ್ಟು ಕಿಕ್
ಅತ್ತ ಮಚ್ಚು, ಇತ್ತ ಲಾಂಗ್
ಇನ್ನೇಕೆ ತಡ ಕೊಚ್ಚು ಮಗ
ಅಸಹಾಯಕ ಬಡವರ
ನೂರು ರೂಪಾಯಿಗೆ
ಸಿಕ್ಕೇ ಸಿಗ್ತಾರ

ಇದ್ದವರು ಜುಮ್... ಅಂಥ ಇರ್ತಾರ
ಬರ್ತಾರ, ಹೇಳ್ತಾರ, ಎದ್ದು ಹೋಗ್ತಾರ
ಇರದವರು ಅನಾಯಸವಾಗಿ,
ಇವರ ಬಲೆಗೆ ಸಿಗ್ತಾರ
ಗುಂಡೀಗೆ ಬೀಳ್ತಾರ
ಬದುಕಿದ್ರೆ ನಗ್ತಾರ
ಇಲ್ದಿದ್ರೆ ಅಟೇ
ಮರಿತ್ಬಿಡ್ತಾರ

ಅಯ್ಯೋ ಶಿವನೇ ಫ್ರೀ ಪಬ್ಲಿಸಿಟೀಗೆ ಇಟೆಲ್ಲಾ ಮಾಡ್ತಾರ
ಇದ್ದ ಬದ್ದ ಚಾನಲ್ಗಳೆಲ್ಲಾ ಇದೇ ತೋರಿಸ್ತಾರ
ಮುಂಜಾನೆ ಪೇಪರ್ನೋರು ಇದೇ ಬರೀತಾರ
ಸಾಲದ್ದಕ್ಕೆ ಬುದ್ಧಿಜೀವಿಗಳು ಸುಮ್ಮನಿರುವರೇ
ಇದನ್ನೇ ವಿಮರ್ಶೆ, ವಿಶ್ಲೇಷಣೆ ಮಾಡಿ
ಉಪ್ಪು, ಖಾರ ಹಾಕಿ ಅವರ
ಹೊಟ್ಟೆ ತುಂಬಿಸ್ಕೊತಾರ

ಮಧ್ಯಮ, ಮೇಲ್ಮಧ್ಯಮ ವರ್ಗದವರು ಇದನ್ನೇ
ಮನರಂಜನೆಗಾಗಿ ನೋಡಿ, ನೋಡಿ
ಅವರ ಕಷ್ಟಗಳ ಸ್ವಲ್ಪ ಮಟ್ಟಿಗೆ
ಸಮಾಧಾನ ಮಾಡ್ಕೊಂಡು
ಅದೇ ಮಾತಾಡ್ತಾ ಮತಾಡ್ತಾ
ದಿನ ದೂಡ್ತಾರ

ಹೆಸರು, ಟಿಕಟ್ಟು, ಮತಗಳು, ಅಧಿಕಾರ ಅವರಿಗೆ,
ಮಾಧ್ಯಮದವರಿಗೆ ಭರ್ಜರಿ ವ್ಯಾಪಾರ
ಜನ ಸಾಮಾನ್ಯರಿಗೆ ಮನರಂಜನೆ
ಮಿಕ್ಕವರಿಗೆ ಅದೃಷ್ಟ ಚೆನ್ನಾಗಿದ್ರೆ
ಎರಡೇ ಎರಡು ತುತ್ತು
ಅಟೇಯ

No comments: