ಅಯ್ಯ ಕೇಳಾ ಬದುಕು ಬೆತ್ತಲು
ಸುತ್ತ ಮುತ್ತಿದೆ ಕುಹು ಕಗ್ಗತ್ತಲು
ಬೇಡ ಎನಗೆ ಮಹಡಿ ಮಹಲು
ಸಾಕು ಮೂರು ತುತ್ತು ತಿನ್ನಲು
ಕಾಸು, ಕನಸುಗಳಿರಲು ಲೇಸು
ಕಷ್ಟ ನಷ್ಟಗಳಿರಲು ಸೊಗಸು
ಇರುವುದೆಲ್ಲಾ ಇರಲಿ ನಿನಗೆ
ಇರದುದೆಲ್ಲಾ ಬರಲಿ ನನಗೆ
ಹಗಲುಗನಸು, ಹಗಲುವೇಶ
ಹೊತ್ತುಕೊಂಡು ನೂರು ಕಲಶ
ಪಾಪ ಕಾರ್ಯಗಳಲ್ಲಿ ಹರುಶ
ತೊದಲು ನುಡಿಗಳಿಗೆಲ್ಲಿ ಕೆಲಸ
ಸಿರಿಯ ಪೊಗರು ಸಹಜ ಜೋರು
ವ್ಯಗ್ರ ವರ್ತನೆ ದಿನವು ಅರ್ಪಣೆ
ಕಹಿಗೆ ಸೀಮಿತ ಸಿಹಿಯ ರಹಿತ
ಇರುವೆನಯ್ಯ ಮೌನ ಸಹಿಸುತ
ಧರೆಯು ನಿನ್ನದೆ, ಧನವು ನಿನ್ನದೆ
ದೊರೆಯು ನೀನೆ, ಧಣಿಯು ನೀನೆ
ಧಿಮಾಕು ನಿನ್ನದೆ, ಆರ್ಭಟ ನಿನ್ನದೆ
ದಣಿದಿರುವೆನಾದರು ಸುಮ್ಮನಿರುವೆ
ನನ್ನ ಬದುಕು ನನಗೆ ಬಿಟ್ಟುಬಿಡಿ
ನನ್ನ ಹಸಿವಿಗೆ ಹುಸಿ ಬೆಳಕ ನೀಡಿ
ನನ್ನ ನೆಮ್ಮದಿಗೆ ಭಂಗ ತರದಿರಿ
ನನ್ನ ನಗುವಲೇ ಎಲ್ಲ ಮರೆವೆನು
No comments:
Post a Comment