Aug 4, 2008

ಮತ್ತೆ ಮೂಡಿ ಬರುವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

ದೇವ, ದಾನವನಿವನೆ ಮಾನವ
ಮತದ ಹೆಸರಲಿ ಮತಿಯ ಕೆಡಿಸುವ
ಮತಕೆ ಮತಿಗೆ ಹಣತೆ ಬೆಳಗುತ
ನಗುತಲಿರುವನು ಚಂದಿರ

ದೇಶಕಾಲದ ಪರಿಗೆ ಮಾಗದೆ
ಹಲವು ಋತುಗಳ ಕೈಗೆ ಸಿಗದೆ
ಅವನ ಕಾಯಕ ಕರ್ಮ ನಿಷ್ಠೆಗೆ
ಬದ್ಧನಾಗಿ ನಡೆವ ಚಂದಿರ

ಸೃಷ್ಠಿಕರ್ತನೆ ಸೂತ್ರಧಾರಿ
ಜಗವೆ ಅವನಿಗೆ ಪಾತ್ರಧಾರಿ
ಎಲ್ಲೆ ಮೀರದೆ ನಡೆದ ದಾರಿ
ಪರಿಧಿಯೊಳಗೆ ಚಂದಿರ

ನೋವು ನಲಿವುಗಳೆಲ್ಲ ಸಹಜ
ಬೆಳಕು ಕತ್ತಲು ಖಚಿತ ಮನುಜ
ಚಿಂತೆ ಮಾಡುತ ಸಂತೆ ಕಂತೆಯ
ನಿಶ್ಚಿಂತೆ ಸಿಗುವುದೆ ಚಂದಿರ

ವಿವಿಧ ಒತ್ತಡ ಬಿತ್ತಿ ದಿನವು
ಹೊರೆಗೆ ಬತ್ತಿದಂತೆ ಜಗವು
ಸರಳ ಜೀವನ ಮಂತ್ರ ಜಪಿಸಿ
ಮುಕ್ತಿ ಕೊಡುವನು ಚಂದಿರ

ಕತ್ತಲಲ್ಲಿ ಕದವ ಕದಲಿಸಿ
ಕಾದ ಕಾವಲಿಗೆ ಕಾವ ಕರಗಿಸಿ
ಬೆಳಗಾದ ನಂತರ ಸಂತನೆಂದರೆ
ಸುಮ್ಮನಿರುವನೆ ಚಂದಿರ

ರಾಗ, ದ್ವೇಷಗಳಲವು ಒಳಗೆ
ಕುಣಿಯುತಿರಲು ಕೊನೆಯವರೆಗೆ
ಸಾಧು ಸಂತನ ಮುಖವಾಡವಿಟ್ಟರೆ
ಕ್ಷಮೆಯು ಕೊಡುವನೆ ಚಂದಿರ

ಎದೆಯ ಮೇಲೆ ಒದೆವ ಕಂದನ
ಮನೆಯಲಿರಳು ಬಾಳು ನಂದನ
ಮುಗ್ಧ ಮನಸಿಗೆ ಮಾರು ಹೋದವ
ನಿಂತು ನಗಿಸುವ ಚಂದಿರ

ಇರುವುದೆಲ್ಲವ ಮರೆತು ಹಿಂದೆ
ನಡೆದು ಹೋಗಲು ಹಾದಿ ಮುಂದೆ
ಹೊಸತು ಜಗವ ದಿನವು ತೆರೆವ
ಸಾಕ್ಷಿ ಅವನೇ ಚಂದಿರ

ಸಪ್ತ ಸ್ವರಗಳ ರಾಗಲಹರಿ
ಸುಪ್ತ ಭಾವದ ನವಿಲ ಗರಿ
ಶಾಂತಿ ಚಿತ್ತದಿ ಹರಿವ ನದಿಗೆ
ತೃಪ್ತನಾಗುವ ಚಂದಿರ

ಆಸೆ ಕುದುರೆಯನೇರಿ ಬರುವ
ನಿರಾಸೆಯಾದರೆ ಖಿನ್ನನಾಗುವ
ಅವತರಿಪ ಆಸೆಗೆ ಕಡಿವಾಣವಿರಿಸಿ
ಸರಸ ಕಲಿಸುವ ಚಂದಿರ

ಉರಿವ ಬೆಂಕಿಗೆ ತೈಲವೆರೆಯುತ
ಮದ, ಮತ್ಸರಗಳಿಂದ ನರಳುತ
ಇರುವ ಕ್ಷಣಗಳ ಮರೆತ ಜನರ
ಕಣ್ಣು ತೆರೆಸುವ ಚಂದಿರ

ಮೋಡ ಕವಿದರು ನುಸುಳುವವನು
ಅಮ್ಮನಿಗೆ ಇವ ಆಪ್ತ ಗೆಳೆಯನು
ಅಳುವ ಕಂದನ ನಗಿಸುವವನು
ಅಡಗಿರುವನೆಲ್ಲಿ ಚಂದಿರ

ದಿನವು ಹಲವು ವೇಶ ಧರಿಸಿ
ದೇಶ ದೇಶಗಳೆಲ್ಲ ಪಯಣಿಸಿ
ದಣಿದ ದೇಹವ ತಣ್ಣಗಿರಿಸಿ
ಹಾರಿ ಹೋಗುವ ಚಂದಿರ

ಒಳಿತು ಕೆಡುಕು ನೋಡುತಿರುವ
ಬಿಸಿಲು ಮಳೆಗೆ ತಣಿಯದಿರುವ
ಆಗಸಕೆ ಅಂದ ನೀಡಿದ
ಚತುರ ಇವನೆ ಚಂದಿರ

ಕೋಪವೆಂಬ ಧೂರ್ತನನ್ನು
ಕಂಡ ಕ್ಷಣವೆ ಕರಗಿಸುವನು
ಸಂಯಮದಿ ಸಹಿಸುತ ಎಲ್ಲವ
ಹಿತವ ನುಡಿಯುವ ಚಂದಿರ

ಸಪ್ತ ಸಾಗರದಾಚೆಗೆಲ್ಲೋ
ನಿತ್ಯ ಹಸಿರಿನ ದಟ್ಟ ಕಾಡಲಿ
ಕಳೆದು ಹೋಗುವ ಹಂಬಲಕ್ಕೆ
ಬೆಂಬಲ ನೀಡುವ ಚಂದಿರ

ತಾನು ತನ್ನದೆ ಎಲ್ಲ ಎಂದರು
ತಾನೆ ಎಲ್ಲವ ಬಲ್ಲೆನೆಂದರು
ನಿಜವನರಿಯುವ ಸುಖದ ಸಿಹಿಯ
ನೀಡಿ ನಲಿವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

No comments: