ಇಂತಿ ನಿನ್ನವಳೆನ್ನುವ ಉಸಿರೆ
ಕಹಿಯಾದರು, ಸಿಹಿಯಾದರು
ಇತಿಮಿತಿಗಳೇ ನಿತ್ಯದುಸಿರು
ಹಸಿರಾಗುವ ಹಂಬಲ ಸಹಜವೆ
ಭಾರವಾದುದೇನೋ ಆ ಹೊರೆ
ಸ್ಥಿಮಿತ ಹಿಡಿತದಲ್ಲಿರುವವರೆಗೆ
ಬಿಡಿಸಲಾಗದ ಗಂಟುಗಳೆಷ್ಟೋ
ಅದುಮಿಟ್ಟುಕೊಳ್ಳುವ ಬಯಕೆಗೆ
ದೂರ ಪಯಣವಿದು ನಲ್ಲೆ ನಡೆದೇ
ಸಾಗಬೇಕು ಜೊತೆಗಿದ್ದವರೆಲ್ಲರು
ಇರುವವರೆಗೆ ಮಾತ್ರ ಸೀಮಿತ
ಊಹೆಗೂ ಎಟುಕದ ಹಾದಿಯಲ್ಲಿ
ಕಟುಕರಿಗೇನೂ ಕೊರತೆ ಇರದಿಲ್ಲಿ
ಮುಗ್ಧರಾದವರು ಬೀಳುವರು ನೇರ
ಹೊಂಚುತಿಹ ಹೆಬ್ಬುಲಿಯ ಬಾಯಿಗೆ
ತರತರದ ರುಚಿ ನೋಡುವ ಚಪಲಕೆ
ನೀನು ನನ್ನವಳಾಗುವುದಕೆ ಮುನ್ನ
ಮುಖ್ಯ ನೀನು ನಿನ್ನವಳಾಗುವುದು
ನೀನು ನಿನ್ನವಳಾಗಿ ನನ್ನವಳಾಗು
ಆಗ ಹಸನಾಗುವ ಪಯಣ ನಮ್ಮದು
No comments:
Post a Comment