Jun 10, 2008

ಕ್ರಿಯೆ

ಕಳ್ಳಬಟ್ಟಿಗೆ ಕುಡುಕರ ಸಂಹಾರ
ಬಾಂಬ್ ಬ್ಲಾಸ್ಟ್ ಐವತ್ತು ಡೆತ್
ತಂದೆ ಮಗಳ ಕೊಂದ
ಪ್ರಿಯಕರನ ಜೊತೆ ನಟಿ
ಕತ್ತರಿಸಿದಳು ಅವನ ಮುನ್ನೂರು ಚೂರು
ಎಸೆದು ಸುಟ್ಟರು ಹಚ್ಚಿ ಪೆಟ್ರೋಲು
ಅಲ್ಲೊಬ್ಬ ಕುಡಿದು ಮಂದಿಯ ಮೇಲೆ
ಹತ್ತಿಸಿದ ಕಾರು
ಗುಂಡು ನಿರಾಕರಿಸಿದ ಕಾರಣ
ಮತ್ತೊಬ್ಬ ಗುಂಡ್ಹಾರಿಸಿ ಕೊಂದ ಅವಳ ,
ತಂಗಿಯ ಪ್ರೀತಿಸಿದವನ ಖೂನಿ
ಪ್ರೀತಿ ನಿರಾಕರಿಸಿದ್ದಕ್ಕೆ ಇಲ್ಲೊಬ್ಬ
ಎರಚಿದ ಆಸಿಡ್ ಅವಳ ಮುಖಕ್ಕೆ

ತರಕಾರಿ ಹಚ್ಚುತ್ತಿದ್ದಳು ಆಕೆ
ಹವಣಿಸುತ್ತಿದ್ದನವ ಅಲ್ಲೇ ಬೆಳಗಿನಿಂದ ಜೊತೆಗೆ
ಮಾಂಸದಂಗಡಿಯಾತ ಮೂಳೆಗಳ
ಕತ್ತರಿಸುತ್ತಿದ್ದ ಎಂದಿನಂತೆ ,
ಭಿನ್ನ ವ್ಯವಹಾರ, ನಿಗೂಢತೆಯ ಆಗರ
ನಡೆದದ್ದು, ನಡೆಯ ಬೇಕಾದುದು
ನಡೆಯುತ್ತಲೇ ಇತ್ತು

ಪಟ್ಟಿ ಬೆಳೆಯುತ್ತಲೇ ಇದೆ
ಆದಿ, ಅಂತ್ಯ ತಿಳಿಯದೆ
ಹಿನ್ನಲೆಗಳು ಹಲವಾರು
ಮನಸು ಸ್ಥಿಮಿತ ಕಳೆದುಕೊಂಡ ಕ್ಷಣ
ನಿರೀಕ್ಷೆ ಹುಸಿಯಾದಾಗ, ಗುಮಾನಿ ಯಾರಮೇಲೆ
ಬೇಲಿಯೆದ್ದು ತಿರುಗಿಬಿದ್ದಾಗ
ಕಾರಣ ಕ್ಷುಲ್ಲಕ, ಕ್ರಿಯೆ ಭಯಾನಕ
ಅನಾಯಾಸವಾಗಿ ಹಾಡ ಹಗಲೆ
ಜನರ ಸಮಕ್ಷಮದಲೆ ನಡೆದಿತ್ತಂದು ಕೊಲೆ
ಅಸಮಾಧಾನ, ಆತಂಕ ಗಿರಕಿ ಹೊಡೆಯುತ್ತಿವೆ
ಯಾರ ನೆತ್ತಿಯ ಮೇಲೆ, ಯಾವಾಗ ,
ಏಕೆ, ಹೇಗೆ ಬೀಳುತ್ತದೆ ಕತ್ತಿ
ಬಿದ್ದ ನಂತರ ಸುದ್ದಿ

ಪ್ರಕರಣ ದಾಖಲು, ಇನ್ವೆಸ್ಟಿಗೇಷನ್ ಮೊದಲು
ಸಾಕ್ಷಿಗಳ ಹುಡುಕಾಟ, ಆರೋಪಿಗಳ ಪತ್ತೆ ,
ಬಂಧನ, ಭೇಟಿ, ಬಿಡುಗಡೆ ಮತ್ತೆ
ಅದೇ ಆಟ ಶುರು ,
ಈಗ ದೊಡ್ಡ ಮಟ್ಟದಲ್ಲಿ
ಚದುರಂಗದಾಟಕೆ ಕಳೆದು ಹೋದವರೆಷ್ಟೋ
ಮಂದಿ, ಆಡಿಸುವವರ ಆಟ
ನಡೆಯುತ್ತಲೇ ಇದೆ ನಿಲ್ಲದೆ
ವ್ಯವಸ್ಥೆ ಜನರ ಅಣಕಿಸುತ್ತಲೇ

No comments: