ಎಂದೂ ಬೆಳಕರಿಯದ ಊರು
ಕಗ್ಗತ್ತಲದೇ ಕಾರುಬಾರು
ಎಲ್ಲವೂ ಹೊಂದಿಕೊಂಡಂತೆ
ಭಾಸವಾಗುವುದು ಸುಳ್ಳಲ್ಲ
ದೂರಲು ಕಾರಣಗಳಿದ್ದಂತೆ ತೋರದು
ಬೆಳಕುಂಡವರಲ್ಲ, ಕಂಡವರಲ್ಲ
ಮುಗ್ಧರೆಂದು ಕೈ ತೊಳೆದುಕೊಂಡರೆ ಎಡವಿದಂತೆ
ಹೊಂದಾಣಿಕೆ ಬಲವಾಗಿ ಬೇರೂರಿದೆ
ಒಮ್ಮೆ ಇಲ್ಲಿ ಬೆಳಗಾದರೆ
ಬೆರಗಾಗುವುದು ಖಂಡಿತ
ಏರುಪೇರಾದರೂ ಆಗಬಹುದು
ಒಲಿತು, ಕೆಡುಕಿನ ಪ್ರಶ್ನೆ ನಂತರ
ಆರೋಪ, ಪ್ರತ್ಯಾರೋಪಗಳ
ಜಾಗವಿದಲ್ಲ, ಎಲ್ಲ ಜಾಣ ಕುರುಡ, ಕಿವುಡರೆಂಬುದು
ನಿಜವಲ್ಲ, ನಡೆಸುವವರು ಕೆಲವರಾದರೆ
ನಡೆಸಿದಂತೆ ನಡೆವವರೇ ಎಲ್ಲರು
ಬೆಳಕು ಬೇಕೆಂದು ಕೇಳುವವರು ವಿರಳ
ಅದು ಯಾರ ಕಿವಿಗೂ ಬಿದ್ದಂತಿಲ್ಲ
ಅನುಕೂಲ ಸಿಂಧು ನಿಯಮವನ್ನು
ಕಟ್ಟುನಿಟ್ಟಾಗಿ ಪಾಲಿಸುವವರೆಲ್ಲ
ಇಲ್ಲಿ ಬೆಳದಿಂಗಳಿದೆ, ಅದು ಕ್ರಮೇಣ ಕರಗಿದಂತೆ
ಅಮಾವಸ್ಯೆಯ ಆಗಮನವೂ ನಡೆಯುತ್ತದೆ
ತಮ್ಮ ಸರದಿಯಂತೆ ಬಂದು ಹೋಗುತ್ತಿರತ್ತವೆ
ಆದರೆ ಬೆಳಗಾದಂತೆ ಎಂದೂ ಅನ್ನಿಸಲಿಲ್ಲ
No comments:
Post a Comment