Jun 24, 2008

ನವೀನ ನರಕ*

ತೇಪೆ ಹಾಕಿದ ರಸ್ತೆಗೆ
ಅಲ್ಲಲ್ಲಿ ಕೆಂಪು, ಹಳದಿ ,
ಹಸಿರು ಲೈಟೊತ್ತ ಕಮಾನು
ವಿಚಿತ್ರ ಕೇಕೆಯೊಂದಿಗೆ
ಧೂಳೆಬ್ಬಿಸಿ ,
ಹೊಗೆ ಉಗುಳಿ ,
ಲಬೋ ಲಬೋ ಎಂದು
ಬಾಯಿ ಬಡಿದುಕೊಂಡು
ಇರುವೆಗಳಂತೆ ಸಾಲುಗಟ್ಟಿ
ಉಸಿರುಗಟ್ಟುವ ವಾಹನಗಳ ದಂಡು.
ಲಲನೆಯೊಬ್ಬಳು ನಿಂತು
ನಾಟಕದ ಪಾತ್ರಧಾರಿಯಂತೆ ಸಿಂಗರಿಸಿ
ಗ್ರಾಹಕರ ಸೆಳೆಯಳು ಯತ್ನಿಸುವಳು.

ಕುಡಿಯಲು ಕೆಟ್ಟ ನೀರು ,
ಚರಂಡಿ ವಾಸನೆ ,
ಕಸದ ಡಬ್ಬಿಗಳು ,
ಬೆನ್ನು ಮುರಿಯುವ ಆಟೊಗಳು
ಹುಬ್ಬೇರಿಸಿದರೂ ಇಳಿಯದ ಪೆಟ್ರೋಲ್ ಬೆಲೆ
ಆಯಾಸಗೊಂಡು ಮನೆ ಸೇರಿದರೆ
ತಡವಾಗಿ ಬಂದಿದಕ್ಕೆ ಮಂಗಳಾರತಿ
ವಿನಮ್ರವಾಗಿ ಸ್ವೀಕರಿಸಿ ,
ಕೈಗಿತ್ತ ಪಟ್ಟಿಯ ಗಂಭೀರ ಪರೀಕ್ಷೆಯ ನಂತರ
ಯುದ್ಧಕ್ಕೆ ತೆರಳಿದ ವೀರ ಸೈನಿಕನಂತೆ
ಚೌಕಾಸಿ ಮಾಡಿದರು ತೃಪ್ತಿಯಿಲ್ಲ;
ಪ್ರತಿಭೆ ಎಲ್ಲವೂ ವ್ಯರ್ಥ.
ತುಟ್ಟಿ ತರಕಾರಿ, ಹಣ್ಣು, ದಿನಸಿ ಸಾಮಾನು ಜೊತೆಗೆ
ಪೆಚ್ಚುಮೋರೆ ಹೊತ್ತು ತಿರುಗಿ ಮನೆಯತ್ತ.

ಮರುದಿನದ ಮುಖಾಮುಖಿಗೆ
ಮಾನಸಿಕ ತಯಾರಿ
ರಕ್ತ ಹೀರುವ ಶಾಲೆಗಳು
ಸದಾ ಕಿರುಚುವ ಬಾಸ್ ಗಳು
ಕರೆಂಟು, ಪೇಪರ್, ಹಾಲು ,
ಗ್ಯಾಸ್, ಕೇಬಲ್, ಮೊಬೈಲು ,
ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ,
ಎಲ್ ಐ ಸಿ ಪ್ರೀಮಿಯಮ್ ,
ಕ್ರೆಡಿಟ್ ಕಾರ್ಡ್ ಬಿಲ್ಲುಗಳ
ಪಟ್ಟಿ ಬೆಳೆಯುತ್ತಲೇ ಇದೆ
ಹನುಮಂತನ ಬಾಲದಂತೆ
ಕಾರ್ ಲೋನ್, ಪರ್ಸನಲ್ ಲೋನ್ ,
ಹೌಸಿಂಗ್ ಲೋನ್ ಇನ್ಸ್ಟಾಲ್ಮೆಂಟ್...

ಪುಂಡುಪೋಕರ ಪ್ರತಿಭೆ
ಪ್ರೋತ್ಸಾಹಿಸಲು ನಾಯಕರ ದಂಡು
ಒಳಗೆ ಹೋದಷ್ಟೇ ವೇಗವಾಗಿ
ಹೊರಬರುವ ಕಸರತ್ತು
ಇವರೆಲ್ಲರ ಸಾಧನೆಯ ಬಿತ್ತರಿಸಲು ,
ಪ್ರಚಾರಕ್ಕಾಗಿ ಕಾತುರದಿಂದ
ಕಾದಿರುವ ಮಾಧ್ಯಮದ ಮಿತ್ರರು
ಕೊಲೆ, ರೇಪ್, ದರೋಡೆ, ಸುಲಿಗೆ ,
ಮೋಸ, ವಂಚನೆಗಳ ಸುದ್ದಿ ಬಿತ್ತರಿಸಲು
ಪೈಪೋಟಿ, ಯಾರು
ಎಷ್ಟು ವೇಗವಾಗಿ ಬಿತ್ತರಿಸುವರೊ
ಅವರೇ ಇಲ್ಲಿ ಪ್ರಚಂಡರು.

ಬಿಡದೇ ಕೊರೆಯುವ ಡೈಲಿ ಸೀರಿಯಲ್ಲುಗಳು
ಪ್ರತಿಭಾ ಪ್ರದರ್ಶನಗಳಿಂದ
ಗೋಳಿಡುವ ಕಾರ್ಯಕ್ರಮಗಳು
ಅದೇ ಸುದ್ದಿಯನ್ನು ಸಿಂಗರಿಸಿ
ದಿನಪೂರ ಎಳೆದಾಡುವ
ಸುದ್ದಿ ಚಾನೆಲ್ಲುಗಳು.
ಇವೆಲ್ಲ ಸಹಿಸಿಕೊಂಡು ದಿನದೂಡಿ
ಬದುಕುಳಿದವರು ಅದೃಷ್ಟವಂತರು.
ಹೆಸರೇ ಗೊತ್ತಿರದ ಖಾಯಿಲೆಗಳಿಂದ
ನರಳಿ ನೋವುಂಡವರಿಗೆ
ಹಾಸ್ಪಿಟಲ್ಗೆ ಕಾಲಿಡಲು ಭಯ.
ಅಲ್ಲಿಂದ ಎದ್ದು ,
ಗೆದ್ದು ಬಂದರೆ
ಧೀರ್ಘ ನಿಟ್ಟುಸಿರು.

No comments: