Jun 4, 2008

ದೊಡ್ಡಾಟ - ದುಡ್ಡಾಟ

ಸಣ್ಣಾಟವಲ್ಲವೋ ಗೆಳೆಯ
ಘಟಾನುಘಟಿಗರು ಕಣದಲಿ
ದಶಕಗಳಿಂದ ಮೊಹರೊತ್ತಿ
ಪ್ರತಿಷ್ಠೆ ಪಣಕ್ಕಿಟ್ಟವರಿವರು

ವ್ಯಕ್ತಿತ್ವದ ದ್ವಂದ್ವತೆ ಬೆಟ್ಟದಷ್ಟು
ಅಷ್ಟೇ ಮಟ್ಟಕ್ಕೆ ಹಣವನಿಟ್ಟು
ಜಾತಿ ಧರ್ಮದ ನಶೆಯೇರಿಸಿ
ಬಿಟ್ಟಿ ಹೆಂಡ ಹಂಚಿದವರು

ಚಂದುರಂಗದಾಟವಲ್ಲವೋ
ಮೌಲ್ಯ, ಸಿದ್ಧಾಂತ, ಬದ್ಧತೆ
ಮುಖವಾಡ ಹೊತ್ತು
ಸ್ವರ್ಧೆಗೆ ಸೈ ಎಂದವರು

ಜನನಾಯಕರಿವರಲ್ಲವೋ
ಹಣವಿಟ್ಟು ಪಣತೊಟ್ಟು
ಜನರ ಮತ ಖರೀದಿಸಿ
ನರ ಭಕ್ಷಕರಾದವರು

ಜನ ಸೇವೆ ನೆಪವೊಡ್ಡಿ
ಜನಾರ್ಧನನಾಗುವವರೆಗೆ
ತಲೆಬಾಗಿ ದಾಹಕೆ
ತಾವಿರಲು ಮಾರಾಟಕೆ

ಶ್ರೀಮಂತಿಕೆ ವಿಕೃತ ಪ್ರದರ್ಶನ
ಹಣವೇ ಜನ ಗಣ ಮನ
ಲೆಕ್ಕಾಚಾರದ ವ್ಯವಹಾರ
ಗೆದ್ದವರೇ ಅಪಾರ

ದೇವ ದೇವತೆಯರ ದರ್ಶನ
ಜಾತಿ ಮಠಾದೀಶರಿಗೆ ನಮನ
ಜ್ಯೋತಿಷಿಗರಿಗೊಂದು ಸವಾಲು
ಒಳಗೊಳಗೇ ಎಲ್ಲ ಡೀಲು

ಚಿಕ್ಕವನಿದ್ದಾಗ ನೆನಪಿದೆ
ಆಕೆಯ ಕೈಗೆ ಹತ್ತು ರುಪಾಯಿ
ನನ್ನ ತಲೆಗೊಂದು ಕುಲಾಯಿ
ಮೇಲೆ ಕೈ, ಇಲ್ಲವೆ ನೇಗಿಲು

ಹಿರಿಯರಿಗೆ ಇತ್ತಲ್ಲ ಸರಾಯಿ
ಮಕ್ಕಳ ಜೋಬಿಗೆ ಕೈ ಪತ್ರ
ತಮ್ಮಟೆ ಜೊತೆಗೆ ಪ್ರಚಾರ
ಸದ್ಯಕೆ ಅಷ್ಟೇ ನೆನಪು

ಭಿನ್ನವಿಲ್ಲ ಈಗಲೂ ಅದೇ
ಹತ್ತು ರೂ ಸಾವಿರ ಆಗಿದೆ
ಸೀರೆ ಸೇರಿದೆ, ಪ್ಯಾಕೆಟ್
ಜೊತೆಗೆ ಬಾಟಲ್ ಬಂದಿದೆ

ಬದಲಾಗಿರುವುದು ಕೇವಲ
ನನ್ನ ವಯಸ್ಸಷ್ಟೆ, ಆಗ
ಹತ್ತು ಈಗ ನಲವತ್ತು
ಆಟದೊಳಗಾಟ ಮುನ್ನಡೆದಿತ್ತು

No comments: