ನೆಪಕೊಂದು ಪುಸ್ತಕ ಕೈಯೊಳಗೆ
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ ಯತ್ನ.
ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳ ಹುಡುಕುವ
ತವಕ.
ಬೇಸಿಗೆಯ ಮಧ್ಯಾಹ್ನ
ಆಗಸಕೆ ನೀರವ ಮೌನ
ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ
ಕಾಣುವ ಹಂಬಲ.
ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು.
ಮಲಗಿದ್ದ ದಿನಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳನ್ನೆಸೆದಾಗ
ಕಸದ ಬುಟ್ಟಿಗೆ ಸಮಾಧಾನ.
ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು.
ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿಯ ಸಮಯ.
ಹಗುರಾದ ಮನಸ್ಸಿಗೆ
ಯಾಕೋ ಕೃತಕ ಕೋಪ.
2 comments:
ಇತ್ತೀಚಿನ ಕವನ ಬೊಂಬಾಟ್
ನಿಮ್ಮ ಅನುಭವ ಕಾವ್ಯದ ತೆಕ್ಕೆಗೆ ಒಗ್ಗುತ್ತಿರುವುದನ್ನು ಇದು ಸಾರುತ್ತಿದೆ
ಕೀಪ್ ಗೋಯಿಂಗ್
-ಜಿ ಎನ್ ಮೋಹನ್
ಬೊಂಬಾಟ್ ಕಾಮೆಂಟ್ಗಾಗಿ
ಖುಷಿಯಾಗಿದೆ.
-ಚಂದಿನ
Post a Comment