ಚಕ್ರ ತಿರುಗುತ್ತಲೇ ಇತ್ತು
ತದೇಕಚಿತ್ತವಾಗಿ ನಿಲ್ಲದಂತೆ
ಅದುವೇ ಅದಕೆ ಗೊತ್ತಿದ್ದ
ಕಾರ್ಯ, ಕರ್ಮ, ತತ್ವ ,
ತರ್ಕ, ತಪಸ್ಸು ಎಲ್ಲವೂ ,
ದಣಿವು, ದಾಹವೇನೂ
ಇದ್ದಂತಿರಲಿಲ್ಲ ,
ಮುಖಭಾವ ನಿರ್ಲಿಪ್ತ, ನಿಶ್ಚಲವಾಗಿ
ಊಹೆಗಳಿಗೆ ಮೀಸಲಿಟ್ಟಂತೆ
ಇತಿಹಾಸಕಾರನಿಗೊಂದು ,
ಕವಿಗೊಂದು ಮುಖ ,
ವಿಜ್ಞಾನಿಗೊಂದು, ಧರ್ಮದರ್ಶಿಗೆ ,
ಹೀಗೆ ಕ್ಷೇತ್ರಾವಾರು ಅವರವರ
ಸಾಮರ್ಥ್ಯಕ್ಕೆ ತಕ್ಕಂತೆ
ಭಿನ್ನ ಉತ್ತರಗಳಿದ್ದರೂ
ಇನ್ನೂ ಪ್ರಶ್ನೆಗಳು ಬಹಳ ಉಳಿಸಿ
ಅದಕಿರಲಿಲ್ಲ ಯಾವ ಚಿಂತೆ
ಎಲ್ಲವೂ ನಮಗೇ ಬಿಟ್ಟಂತೆ
ಉದಾರ ಮನೋಭಾವವೋ ,
ಉದಾಸೀನವೋ ಗೊತ್ತಿಲ್ಲ
ನೆಗೆಯುತ್ತಿದ್ದರು ಕಪ್ಪೆಗಳಂತೆ ,
ನಾಯಿ, ನರಿಗಳಂತೆ ಬೊಗಳುತ್ತ
ಕರುಣೆ, ಸಹನೆ, ಸಂಯಮ
ಮರೆತಂತೆ ,
ಅಗಾಧ ಭಾರ ಹೊತ್ತು
ಇಳಿಸಲೂ, ಹೊರಲೂ
ಆಗದಂತೆ
ಚಕ್ರ ಸುತ್ತುತ್ತಲೇ ಇದೆ
ನಿಶ್ಚಿಂತನಾಗಿ, ನಿರಾಳವಾಗಿ ,
ನಿರಮ್ಮಳವಾಗಿ ಹಾಗೇ ...
ತಂತ್ರಜ್ಞಾನ, ವಿಜ್ಞಾನ ,
ವೈಚಾರಿಕತೆ, ಪುರಾವೆ ,
ಚಿಂತನೆ, ಮಂಥನ ,
ತರ್ಕ, ವಾದ-ವಿವಾದಗಳ
ಸೃಷ್ಠಿಸಿದವರು ಯಾರೋ
ತನಗರಿವಿಲ್ಲದಂತೆಯೇ
ಮುಂದುವರೆಸಿದೆ ಹಾಗೇ ...
ಅದೇ ಶೃತಿ ಲಯದಲ್ಲಿ
ರಾಗ ತಾಳಗಳರಿವಿರದೆ
ಯೋಗ ಭೋಗಗಳ ನೋಡುತ
ಹಸಿವು, ನಲಿವುಗಳಿಗೆ ಪ್ರತಿಕ್ರಿಯಿಸದೆ
ಬಡವ, ಬಲ್ಲಿದರಿಗೆ ,
ಜಾತಿ, ಮತಗಳಿಗೆ
ಯಾವುದೇ ಉತ್ತರ ನೀಡದೆ
ತನ್ನಷ್ಟಕ್ಕೆ ತಾನೇ ಜೊತೆಯಾಗಿ
ಚಕ್ರ ಸುತ್ತುತ್ತಲೇ ಇದೆ
ನಿಲ್ಲದೆ ಎಂದಿನಂತೆ
No comments:
Post a Comment