ಮುತ್ತಿಟ್ಟ ಹನಿ ಎಲೆಯ ಮೇಲಿನ ಮುತ್ತು
ಮೆತ್ತಗೊತ್ತಿದರು ಭಯವು ಬೀಳುವ ಕುತ್ತು
ಪಾರದರ್ಶಕದೊಡಲು ಹೊಳೆಯುತಿರಲು
ಗಾಳಿ ಬೀಸಿದೆಡೆಗೆ ಎಲೆಯು ತಲೆದೂಗಿತು.
ಮುಂಜಾನೆ ರವಿಕಿರಣ ನುಸುಳಿ ಬರಲಲ್ಲಿ
ಮಿಂಚುಗಳ ತೇರು ಮೈತುಂಬಿ ಮಿಂಚಿತ್ತು
ಹಣತೆಗಳ ಆರತಿ ನಯವಾಗಿ ಬೀಸುತಿರೆ
ಬಿರುಗಾಳಿಯ ಶಾಪಕೆ ಆರದಿರಲಿ ಬೆಳಕು.
ಬೆಳಕಿತ್ತ ಕಿರಣಗಳು ಬಿಸಿಯೇರಿದಂತೆ
ಮೆಲ್ಲಗೆ ಹನಿಗಳು ಕರಗಿ ಕಾಣೆಯಾಗುವವು
ನೆರಳಲ್ಲಿ ಅಡಗಿದ್ದ ಹನಿಗಳುರುಳಿ ಬಿದ್ದವು
ಮತ್ತದೇ ಹನಿಗಳಿಗೆ ಎಲೆಗಳು ಕಾದಿದ್ದವು.
ಧನ್ಯತಾಭಾವ ಮೈತುಂಬಿಕೊಂಡಾಗ
ಅಂತರಾಳಕೆ ಹಬ್ಬದನುಭವದ ಕ್ಷಣವಾಗ
ಮತ್ತೆ ಬರುವನೆಂದೋ ಅತಿಥಿ ಮನೆಗೆ
ಮುತ್ತಿಟ್ಟು ಮೈ ಮೇಲೆ ಮಿಂಚಿ ಬೆಳಗಲು?
No comments:
Post a Comment