Dec 2, 2008

ಕಲ್ಲುಹೃದಯ

ಹಾರಿಹೋಯಿತು ಜೀವ ಗೆಳೆಯ
ನೂರು ಕನಸನು ಕೊಚ್ಚಿಕಡಿದು
ನಿಲ್ಲದಾಯಿತೊ ರಕ್ತದೋಕುಳಿ
ಕುಣಿಯುತಿದೆಯೊ ಕಲ್ಲುಹೃದಯ

ತೊಟ್ಟತೊಡುಗೆ ಹರಿದುಹೋಗಿದೆ
ಮುಖವಾಡ ನೋಡು ಜಾರಿಬಿದ್ದಿದೆ
ಇರುವ ಪರದೆಗಳೆಲ್ಲ ಕಳಚಲು
ನಗ್ನ ದರ್ಶನ ಪಡೆದು ಪಾವನ

ಅದೇ ರಾಗ, ಅದೇ ವೇಗ,
ಅದೇ ಯಾಂತ್ರಿಕ ಸ್ಪಂದನೆ
ಹೃದಯಹೀನ ಈ ರಾಜಕಾರಣ
ಮುಕ್ತಿ ಕೊಡುವೆಯಾ ಆಪ್ತನೆ

ಸನ್ನಿವೇಶಕೆ ತಕ್ಕ ವೇಶ
ಮುಖದಲಿರಲು ಕೃತಕ ಆವೇಶ
ಇದು ಯಾವ ಸ್ತರದ ಆತ್ಮವಂಚನೆ
ಇಲ್ಲವಾಯಿತೇ ವಿವೇಚನೆ

ಲಾಭ ಪಡೆವ ಏಕೈಕ ತವಕ
ನಡೆ ನುಡಿಗಳದಕೆ ಪೂರಕ
ಉರಿವ ಬೆಂಕಿಗೆ ತೈಲವೆರೆದು
ಗಹಗಹಿಸಿ ನಗುತಿಹ ಕೀಚಕ

ಇದು ಯಾವ ಪರಿಯ ನಾಟಕ
ಘೋರ ಹೃದಯವಿದ್ರಾವಕ
ಪ್ರತಿಭೆಯ ಪ್ರದರ್ಶನ ತಾರಕ
ಧನ್ಯನಾದೆನೊ ನಾಯಕ

ಒಂದು, ಎರಡು, ಮೂರು ದಿನ
ಸಾಕು ಮರೆಯುವೆ ಮರುದಿನ
ಅಡಗಿ ಕುಳಿತಿಹ ಇಲಿಗಳೆಲ್ಲ
ಹೊರಗೆ ಬರಲದೆ ಶುಭದಿನ

ಮುಗ್ಧ ಜನರ ಮರಣಹೋಮ
ಸಾವು ಬದುಕು ಜನರ ಕರ್ಮ
ನಿತ್ಯ ನರಕ, ನಿತ್ಯ ಚರಕ
ನಿತ್ಯ ಹಸಿವಿಗೆ ಬೇಕು ಕಾಯಕ

No comments: