Dec 17, 2008

ಮತ್ತೆ ಬರುವನು ಚಂದಿರ - 9

ಸೂಕ್ಷ್ಮಸಂವೇದನೆಗಳ ತಳಪಾಯದಿಂದ
ಸ್ಪಂದನಗಳ ಗ್ರಹಿಸುವ ಸಾಮರ್ಥ್ಯದಿಂದ
ಬಿಂಬಗಳ ಕೆಡಹುವ ಉಪಾಯದಿಂದ
ರಸಾನುಭವ ಪಡೆಯೊ ನೀ ಚಂದಿರ

ಹೋಲಿಕೆಯೆಂಬ ದೊಡ್ಡ ರೋಗ
ತೀವ್ರವಾಗಿ ನಮಗೆ ಕಾಡುವಾಗ
ಮನ - ಮನೆಯಲಿ ನಿತ್ಯ ಸಮರ-
ದಿಂದ ವಿರಾಮವೆಂದೊ ಚಂದಿರ

ವಿದ್ಯಮಾನಗಳ ಎಲ್ಲೆ ಮೀರಿ
ಕವಲುದಾರಿಗಳ ಎಲ್ಲ ತೂರಿ
ಈ ಹುಚ್ಚು ಕುದುರೆ ಸವಾರಿಯ
ನೀ ತೊರೆದು ಬಾರೊ ಚಂದಿರ

ಸರಳತೆಯ ಹೆಸರಲ್ಲಿ ಸಂಕೀರ್ಣದತ್ತ
ಸ್ಪರ್ಧೆಯ ಹೆಸರಲ್ಲಿ ಸಮಾಧಿಯತ್ತ
ಸಮೃದ್ಧತೆಯೆಂದು ದುರ್ಬಲರ ತುಳಿಯುತ್ತ
ಇದು ಜನಸೇವೆಯೆನ್ನುವನಿವ ಚಂದಿರ

ಭಾಷೆಯ ಹೆಸರಿಗೆ ಬೇಕೆ ಬೀದಿ ರಂಪಾಟ
ಒಳಗೊಳಗೆ ನಡೆಯುತಿದೆ ಹಗ್ಗ-ಜಗ್ಗಾಟ
ಮುಗ್ಧರ ಮನಕೆಡಿಸಿ, ಮನೆಕಟ್ಟುವವರ
ಒಳಬಣ್ಣ ತೋರಿಸೊ ಚಂದಿರ

ಸೃಜನಶೀಲತೆಗೆ ಸಾಕ್ಷಿ ಸೃಷ್ಟಿಕರ್ತ
ಕ್ರೀಯಾಶೀಲತೆಗೆ ಇವನೆ ಆಪ್ತಮಿತ್ರ
ಪ್ರಕೃತಿಯೆಡೆಗೆ ಪಯಣ ಬೆಳೆಸುವ ಚಿತ್ತ
ಆತ್ಮ ಬೆಳಗುವುದಂದು ಚಂದಿರ

ಅಸಮಾನತೆಯೆ ತೀವ್ರ ಆತಂಕವಾದಿ
ಅಸಮಧಾನವೆ ಉರಿಯುವ ಉಗ್ರವಾದಿ
ಅತಿಯಾಸೆಯನ್ನೊಮ್ಮೆ ಅಂತ್ಯವಾಗಿಸಿ
ಕಣ್ಣು ತೆರೆಸೊ ನಮಗೆ ಚಂದಿರ

ವಸ್ತು ವ್ಯಾಮೋಹವಿದು ಯಾರದೊ ವ್ಯೂಹ
ಭಾವ ಬಂಧಗಳ ತೊರೆದ ಚಕ್ರವ್ಯೂಹ
ಯಾರ ಮೋಡಿಗೆ ನೀ ಮರುಳಾದೆ ಮುಗುದೆ
ಮುಕ್ತಿದೊರೆವುದೆಂದೊ ನಿನಗೆ ಚಂದಿರ

ಭಾವ ಜಗತ್ತಿನ ಪಯಣದ ಮಿಡಿತ
ಅರಿವಿನ ಪಾತಳಿಗಳಿಗೇರುವ ತುಡಿತ
ಸಂಯಮದ ನಡೆಯಿಂದ ಜಾಗೃತಿಯ
ಮೂಡಿಸುವ ಚತುರನಿವನೇ ಚಂದಿರ

ಅವತರಿಪ ಆಧ್ಯತೆಗಳ ಸ್ವೀಕರಿಸುತಾ,
ಸಮಸ್ಯೆಗಳ ಸಮರ್ಥವಾಗಿ ನಿರ್ವಹಿಸುತಾ
ಸಾಧಸಿದ ಅನನ್ಯ ಅನುಭವದ ಜೊತೆಗೆ
ಮನುಜತ್ವ ಮರೆಯದಿರೊ ಚಂದಿರ

No comments: