ಮುಗ್ಧತೆಯು ಮೊಗ್ಗಲ್ಲಿ ಮೈದುಂಬಿ,
ಅರಳಿದ ಸೌಂದರ್ಯಕೆ ಸಾರ್ಥಕ
ಕಾಯಾಗಿನ ಪ್ರೀತಿ ಹಣ್ಣಿಲ್ಲಿ ಮುಕ್ತಿ
ಇದೇ ಸಹಜ ನೀತಿ ಚಂದಿರ
ಪ್ರೀತಿಗಿರಲು ಹಲವು ಬಣ್ಣ
ಎಲ್ಲ ಅಡಗಿ ಶ್ವೇತವರ್ಣ
ಒಲವೇ ಕಡಲು ಜಗದ ನೆರಳು
ಜಡವ ತೊರೆಯೊ ಚಂದಿರ
ಹಣವಿದ್ದ ಕಡೆ ವಿಷ ಸರ್ಪದೆಡೆ
ಹಾಲುಂಡು ವಿಷಕಾರುವ ಆಪ್ತಪಡೆ
ಹಣದ ಗೊಬ್ಬರ ಹರಡು ಎಲ್ಲೆಡೆ
ಚಂದ ಫಸಲು ಪಡೆವೆ ಚಂದಿರ
ಮೌಲ್ಯಗಳಲಿ ನಂಬಿಕೆಯನಿರಿಸು
ಅಚಲ ಮನದ ಸ್ನೇಹಗಳಿಸು
ಕಠಿಣ ಕಲಹಗಳ ನಿದ್ದೆಗೆಡಿಸು
ಹತ್ತಿರವಾಗು ಎತ್ತರಕೆ ಚಂದಿರ
ಜ್ಞಾನದಸಿವನು ಇಂಗಿಸುವ ಕರ್ಮ
ಹರಡಿ ಹಸಿವನೆಚ್ಚಿಸುವ ಮರ್ಮ
ಮನುಜಗೆ ಮನುಷತ್ವ ಏಕೈಕ ಧರ್ಮ
ಆನಂದ ಜಗವಂದು ಚಂದಿರ
ಜ್ಞಾನ, ಹಣ ಗೊಬ್ಬರದಂತೆ ಹರಡಿ
ಬರಡು ನೆಲಕೆ ಉಸಿರು ನೀಡಿ
ಹಸಿರು ತುಂಬಿ ಹಸಿವ ನೀಗಿ
ಮುಕ್ತಿ ಪಡೆಯೊ ಚಂದಿರ
ಜಾತಿ, ಮತ ಮತಿಯ ಕೆಡಿಸದಿರಲಿ
ದೀನ, ದುರ್ಬಲರ ಸಹಿಸಿ ಸಲಹುತ
ಅವರಂತರಂಗದ ದೇವರ ಕಾಣುತಲಿ
ದಿಟ ಮನುಜನಾಗು ಚಂದಿರ
ಕೋಪವೆಂಬ ಶಾಪದಿಂದ
ಮುಕ್ತನಾಗು ಗೆಳೆಯನೆ
ಸಹನೆಯೆಂಬ ಸ್ನೇಹದಿಂದ
ಜಗವ ಬೆಳಗು ಚಂದಿರ
ತನು, ಮನವ ಪಳಗಿಸಿದಾಗ
ಬಾಳು ನಂದನವನವು
ಜಾರಿ ಹೋಗದ ಮನವು
ಸವಿಜೇನಿನಾಂಗ ಚಂದಿರ
ಇರುವವರೆಡೆಗೆ ಇರುವೆಗಳ ಸಾಲು
ಇರದವರೆಡೆಗೆ ಬರುವೆನೀಗ ತಾಳು
ನಿದರ್ಶನವಿದೇ ನಿಜವನರಿಯಲು
ಮುಖವಾಡ ತೆರೆಸಿದವನೇ ಚಂದಿರ
No comments:
Post a Comment