Jul 7, 2008

ಸೆರೆ ಸಿಕ್ಕ ಹಕ್ಕಿ

ಹಕ್ಕಿಯೊಡಳೊಳಗೆ ಅಡಗಿ
ಪಿಸುಗುಡುವ ಹತ್ತಾರು ಚುಕ್ಕಿ
ಗರ್ಭದೊಳಗಿನ ಬ್ರಹ್ಮಾಂಡ ಹೊಕ್ಕಂತೆ
ಬಿಗುವಾದ ಮುಖ ಸಡಿಲಿಸುವ ಹಂಬಲ

ಕೃತಕ ನಗುವಿಂದ ಕರೆವ
ಲಲನೆಯರ ಪ್ರತ್ಯಕ್ಷ ,
ಕಿರುನಗು, ಪಿಸು ಮಾತು, ಇಲ್ಲಿ
ಕಿರಿಕಿರಿಗಿಲ್ಲ ಅವಕಾಶ

ವಿಶೇಷ ಸೂಚನೆಗಳ ಜೊತೆ
ಸೂಕ್ತ ಸವಲತ್ತು ಲಭ್ಯ
ಸೆರೆಸಿಕ್ಕ ಹಕ್ಕಿಗಳ ಭಯಮಿಶ್ರಿತ ಮುಖಭಾವ
ನಿಟ್ಟುಸಿರಿಡುವ ತವಕ ನಿಮಿಷದ ಲೆಕ್ಕ

ಚಲನೆ ಶುರುವಿಟ್ಟ ಕ್ಷಣ
ರಭಸದೆದೆಬಡಿತ,
ಆಗಸದೆಡೆಗೆ ಒಮ್ಮೆಗೆ ಹಾರಿ ಮೋಡಗಳಲಿ
ತೂರುವ ತವಕ.

ಅಲ್ಲಲ್ಲಿ ಹಸಿರ ತೇಪೆ, ಕೆರೆಗಳ ತಿಲಕ ,
ಬೆಟ್ಟ, ಗುಡ್ಡದ ಮೊಡವೆ, ರಸ್ತೆ ಓಡಾಡುವ ಹಾವು
ಮನೆಗಳು ಬೆಂಕಿಪೊಟ್ಟಣ ಜೋಡಿಸಿಟ್ಟಂತೆ
ಬಿಳಿ, ಹಳದಿ, ಕೆಂಪು ಕಂಡು ಮರೆಯಾದವು

ಮೋಡಗಳ ನುಸುಳಿ ಹೊಕ್ಕಂತೆ
ಎತ್ತಿನಗಾಡಿ ಸವಾರಿ ನೆನಪು
ದಾಟಿ ಹಾರಲು ಹೊರಗೆ
ಆಗಸದಲ್ಲಿ ಅಲೆವ ನಾರದನ ನೆನಪು.

ಹಗಲು ಕರಗಿದಂತೆಲ್ಲಾ ಮಿಂಚುವ ಹಣತೆಗಳ ಸಾಲು
ಅಲ್ಲಲ್ಲಿ ಬೆಳಗುವ ತಾರೆಗಳ ಹಿಂಡು, ಹಿಂಡು
ಉಯ್ಯಾಲೆ ತೂಗಿ ಆರತಿಯ ಬೆಳಗಿ
ಅತ್ತಿತ್ತ ಕಣ್ಣಾಡಿಸಿ ದಾರಿ ಹುಡುಕುವ ದೀಪ

ಜಾರಿ ಬಿದ್ದಂತೆ, ತಡೆದು ನಿಂತಂತೆ
ಧರೆಗೆ ಮುತ್ತಿಡುವ ಆತುರ
ಭೂಕಂಪವಾದಂತೆ ಕ್ಷಣ ಉಸಿರು ನಿಂತು
ನಿಟ್ಟುಸಿರಿಡುವ ಸಮಯ, ಅಂತೂ ಗೆದ್ದ ಭಾವ.

No comments: