Jul 9, 2008

ಆಸ್ತಿ

ಆಳದಲಿ ಅಡಗಿಸಿಟ್ಟ
ಅಮೂಲ್ಯ ಆಸ್ತಿ
ಸುತ್ತಲೂ ಸುತ್ತಿ ಸುತ್ತಿ
ಬ್ಯಾಂಡ್ಯೇಜು ಸುತ್ತುವಂತೆ
ಒಂದರ ಮೇಲೊಂದು ಪೇರಿಸಿ
ಎಷ್ಟೋ ಲೆಕ್ಕವಿಲ್ಲದಷ್ಟು ಸಲ
ಭಾರೀ ಮಜಬೂತು
ಆಗ ಒಂದಷ್ಟು ತೃಪ್ತಿ.

ಬಿಡಿಸಲು ಅಸಾಧ್ಯ
ನೂರೆಂಟು ಬ್ರಹ್ಮಗಂಟು
ಆದಿ, ಅಂತ್ಯದ
ಸುಳಿವಿಲ್ಲ
ಕೈ ಕಾಲು ನೆಟ್ಟಗಿದ್ದರು
ಪ್ರಯತ್ನ ಫಲಕಾರಿಯಾಗುವ
ಭರವಸೆಯಿಲ್ಲ
ಪೆಟ್ಟು ಹೆಚ್ಚಾದಂತೆ
ನೆನಪುಳಿಸಿ ,
ಉಮ್ಮಸ್ಸು ಕರಗುವುದು ನಿಜ.

ಎಲ್ಲರ ಕಣ್ತಪ್ಪಿಸಿ
ತೀವ್ರ ನಿಗಾವಹಿಸಿ
ನಿಶಬ್ಧ ವಾತಾವರಣದೆಡೆಗೆ
ಸುಳಿವು ಸಿಗದ
ನಿಗೂಢ ಸ್ಥಳದಲ್ಲಿ
ಸುಲಭ ಕಾರ್ಯದಲ್ಲಿ
ಕೃತಕ ವಿಶ್ರಾಂತಿ
ನೆನಪುಗಳು ಮಾಗಿದಷ್ಟೂ
ಭರಿಸಲಾಗದೆ ಬೆನ್ನು ಹತ್ತುವ ರುಚಿ.

ಕದಲಿಸುವ ಮುನ್ನ
ಕರುಣೆಯಿರಲಿ
ಉರಿವ ಉಲ್ಕೆಗಳು
ಬೀಳುವವು ಮೈ ಮೇಲೆ
ಭಯ ಸಹಜ
ಭಾರವಿಳಿಸುವ ಬಯಕೆ
ಸ್ವಾಭಾವಿಕ
ನೀತಿ, ನಿಯಮ ಪಾಲನೆ
ಇಲ್ಲಿ ಕಡ್ಡಾಯವೇನಲ್ಲ.

No comments: