ಜ್ಞಾನದ ವಿಸ್ತಾರ ತಿಳಿದವರಾರಿಹರು
ಬ್ರಹ್ಮಾಂಡದೊಳಹೊರಗ ಬಲ್ಲವರಾರಿಹರು
ವಿಜ್ಞಾನದಿ ಉತ್ತರವ ಹುಡುಕುವ ಯತ್ನಕೆ
ಮೌನ ಬೆಂಬಲ ಕೊಡುವ ಚಂದಿರ
ಬುದ್ಧಿವಂತಿಕೆಗೆ ಧರ್ಮದ ಮೊಗವಿರೆ
ಮಂಗನಿಗೆ ಮಾಣಿಕ್ಯವಾಗದು ಹೊರೆ
ಹಿಡಿತವಿರುವ ಜ್ಞಾನ ಮನುಕುಲಕೆ
ವರದಾನ ಕಾಣೋ ಚಂದಿರ
ಅಂತರಂಗ ಬಹಿರಂಗದೊಳ ಹೊಕ್ಕು
ನಿತ್ಯ ಚಿತ್ರಗಳ ಸರಿದೂಗುವ ಶ್ರಮಕೆ
ತೆರೆ ತೆರೆಯಾಗಿ ಪದರುಗಳ ಕಳಚಲು
ಸತ್ಯ ಕಾಣುವುದಾಗ ಚಂದಿರ
ಅವಸರದ ನಡೆಯಿಂದ
ಕವಲೊಡೆದ ಗುರಿಯಿಂದ
ಬಾಡಿರುವ ಮೊಗದಲ್ಲಿ
ನಗುವಿರುವುದೇ ಚಂದಿರ
ಕನಸು ಕಲ್ಪನೆಗೆ ಹಿಡಿದ ಕನ್ನಡಿ
ಕ್ರಿಯಾಶೀಲತೆಗೆ ಕಲ್ಪನೆ ಮುನ್ನುಡಿ
ಕನಸು ನನಸಿಗೆ ಕ್ರಿಯೆಯ ಕೈಪಿಡಿ
ನುಡಿದಂತೆ ನಡೆಯುತಿರುವ ಚಂದಿರ
ಸಮಯಕೆ ಇಲ್ಲ ಯಾವ ರಿಯಾಯಿತಿ
ಸರಿ ತಪ್ಪುಗಳೆಲ್ಲ ನಮ್ಮದೇ ಕಿತಾಪತಿ
ಸದ್ಭಳಕೆಯೊಂದಿಗೆ ಹಿಡಿತ ಸಾಧಿಸು
ಜೊತೆಗೆ ಬರುವನೋ ಚಂದಿರ
ದಾನವರ ಸಂತತಿ ಸಾಗರದ ಹಿತಿಮಿತಿ
ಸಕಲ ಜೀವಕಣ ಕಾಣೆಯಾಗುವ ಸ್ಥಿತಿ
ಮೊರೆಯಿಡುವೆ ದೇವ ಮೌನಮುರಿಯೋ
ಕಾಣದಾದಾನು ಒಮ್ಮೆಗೇ ಚಂದಿರ
ಬಿಳಿಯ ಹಾಳೆಯಲ್ಲಿ ಬೆಳೆದು ನಿಂತ ಭಾವಗಳೆ
ಖಾಲಿ ಎದೆಯ ಗೂಡಲ್ಲಿ ಬೆಚ್ಚಗಿರುವ ನೀವುಗಳೆ
ಬಿರುಗಾಳಿಯ ನೆವವೊಡ್ಡಿ ತೇಲಿ ಹೋಗದಿರಿ ಮತ್ತೆ
ಕದವ ಜಡಿದಾನು ಹೇಳದೇ ಚಂದಿರ
ಸರ್ವ ರೋಗ ನಿವಾರಣ
ಸರಳ ಜೀವನ ಯಾನ
ಸತತ ಕಾಯಕ ಕರ್ಮಕೆ
ಮರಳಿ ಬಾರೋ ಚಂದಿರ
ಮುಗಿಲು, ನೆಲವನರಿವ ಛಲ
ಕ್ಷಣ ಕ್ಷಣವು ಕೆರಳಿ ಕುತೂಹಲ
ದಿಟ್ಟ ಹೆಜ್ಜೆ, ನೆಟ್ಟ ನೇರನೋಟಕೆ
ಸನಿಹ ಬರುವ ನಗುತ ಚಂದಿರ
No comments:
Post a Comment