Jan 24, 2009

ಆಫ್ರಿಕಾ ಮಕ್ಕಳು

ನಮ್ಮಲ್ಲಿ ಎಷ್ಟೋ ಮಂದಿ,
ನಮ್ಮ ಕುಟುಂಬ ಸುಧಾರಣೆಗಾಗಿ ಮತ್ತೆ
ಮುಂಜಾವಿನ ಅದೃಷ್ಟದ ಕೋಳಿಕೂಗು
ಕೇಳಿಸಿಕೊಳ್ಳಲು ಹಂಬಲಿಸುತ್ತೇವೆ.
ಹಸನ್ಮುಖರಾಗಿ, ಕ್ಷಿಪ್ರಗತಿಯ ಲಯಕೆ ಕುಂಡಿ ತಿರುಗಿಸಿ ಕುಣಿಯುತ್ತೇವೆ.

ದೇಶದೆಲ್ಲೆಡೆಗೆ ನಾವು ಜೀವ ತುಂಬುತ್ತೇವೆ,
ಎಲ್ಲವೂ ಧೂಳಬ್ಬಿರುವ ಈ ರಸ್ತೆಗಳಲ್ಲೇ ಆಗುತ್ತದೆ,
ನಾವು ಕಂಬಳಿಗಾಗಿ, ಕೂಳಿಗಾಗಿ ಹೊಡೆದಾಡುತ್ತೇವೆ,
ಪುಟ್ಟ ತಂಗಿಯ ಜೀವಕ್ಕಾಗಿ, ಅವಳಿಗೆ ಅಗತ್ಯವಿದ್ದಾಗ
ಆ ನಿರ್ಜನ ಪೊದೆಗಳ ಮೂಲಕ ಬೆನ್ನಮೇಲೊಯ್ಯುತ್ತೇವೆ.
ಮತ್ತು ಅವಳು ಹಾಗೆ.

ನಮಗೆ ಸಾವು ಗೊತ್ತಿದೆ,
ಅದೊಂದು ಸೊಂಬೇರಿ ಕಳ್ಳ,
ನಮ್ಮ ಅಮ್ಮನನ್ನು ನಿಧಾನವಾಗಿ ತುಂಡು, ತುಂಡಾಗಿ ಕಬಳಿಸುತ್ತದೆ.
ನಾವವಳ ಬಿಸಿಯಾದ ಮೈಯನ್ನು ಸವರುತ್ತಾ,
ಸುತ್ತಲೂ ಸ್ವಶ್ಚವಾಗಿಡಲು ಯತ್ನಿಸುತ್ತೇವೆ.
ಮತ್ತೆ ಅದು ಕಿರುಚುತ್ತಾ ನಮ್ಮನ್ನು ಎಬ್ಬಿಸುತ್ತದೆ.

ಆದರೂ ನಮಗೆ ಮಾತಾಡಲು ಶಕ್ತಿಕೊಡಿ,
ಆಗ ನಾವು ನಮ್ಮ ಕರುಳಿಂದ ಹಾಡುತ್ತೇವೆ.
ನಂಬಿಕೆ, ಎಷ್ಟೋಸಾರಿ ಇವನೊಬ್ಬನೇ,
ನಮ್ಮ ಹೆಸರುಗಳ ನೆನಪಿಟ್ಟುಕೊಂಡವನು.

ನಾವು ಬಲ್ಲೆವು, ಆ ಬೆಂಕಿಯ ಚೆಂಡು ಸೂರ್ಯ
ಸ್ಥಬ್ಧ, ಭೀಕರ ಬಯಲಲ್ಲಿ ಸುಡುವ ಬಿಸಿಲಿಂದ ಕರಗುವ ದಿನ,
ಹೇಗೆ ತೂಗಾಡುವನೆಂದು,

ನಾವು ಈ ಧೂಳಿನಲ್ಲೇ ನಿದ್ರಿಸುತ್ತೇವೆ,
ಆ ನಿರ್ಭಯ ನಕ್ಷತ್ರಗಳ ಅಡಿಯಲ್ಲೇ.

(ಮೂಲಕವಿ: ನಿಕೋಲ್ ಬಿಯೋಚಾಂಪ್ )

No comments: