ಹೊಳೆವ ಮುಖದಲಿ ಭಯದ ನೆರಳು
ಮುಗ್ಧ ಮನಸಲಿ ಕಹಿಯ ಸಾಲು
ಸಿಗುವ ಸಿಗದಿಹ ಈ ಆಟ ದಿನವು
ಎನ್ನ ಅಲುಗಾಡಿಸದಿರೊ ಚಂದಿರ
ಊರುಕೇರಿಯ ನೆನಪಿನೊಡನೆ
ಕಳೆದ ಬಾಲ್ಯದ ಮಧುರ ಕಲ್ಪನೆ
ಕಣ್ಣಂಚ ದಾಟಿ ಹೊರಬಿದ್ದ ಮುತ್ತಿನ
ಹನಿಗಳ ಲೆಕ್ಕ ಬೇಕೆ ಚಂದಿರ
ದುಷ್ಟ ಶಕ್ತಿಯ ಪರಾಕಾಷ್ಠೆ
ನೆತ್ತಿಗೇರಿ ಸುತ್ತ ಗದ್ದಲ
ಶಿಷ್ಟ ಶಕ್ತಿಯ ಮೌನದಿಂದೆ
ಯಾವ ತಿರುಳಿದೆ ಚಂದಿರ
ಆರು ಬಂದರು ಆರು ಹೋದರು
ಲೆಕ್ಕ ಸಿಗುವುದೆ ನಾವಿಕ
ಅಲೆಗಳೆದ್ದು ಹಡಗು ಮುಳುಗಲು
ಆಳದರಿವು ಬೇಕೆ ಚಂದಿರ
ದಿನವು ಹೊಸತನು ಹುಡುಕುತಿರು
ಕ್ಷಣವು ಉಸಿರನು ಮರೆಯದಂತೆ
ಅಲೆಗಳೆಲ್ಲವು ದಡದಿ ಕರಗಲು
ಮತ್ತೆ ಎದ್ದು ಬರುವವೊ ಚಂದಿರ
ಎಲ್ಲೆ ಇರದಿಹ ಜೀವ ಸಂಕುಲ
ಇರುವ ಪರಿಯ ಅರಿವ ಛಲ
ಕಣ ಕಣಗಳು ಸೇರಿ ಸಕಲ
ಜಗದ ಉದಯವೊ ಚಂದಿರ
ಭಾರವಾದ ಏಕಾಂತ ಅನುಭವಿಸಿ
ಕಹಿಯ ಭಾವಗಳ ನೋವು ಸಹಿಸಿ
ಹಗುರಾಗಿ ಹಾರಿ ಹೋಗುವಾಸೆಗೆ
ರೆಕ್ಕೆ ಕೊಡುವನೊ ಚಂದಿರ
ಅಂತರಂಗದ ಅಗಾಧ ಏಕಾಂತದಿ
ಅನುಭವದ ವಿಶಾಲ ಅರಿವಿಂದ
ಮುಗ್ಧ ಮಗುವಂತೆ ನೀನಾದಾಗ
ಮುದ್ದಾದ ಜಗವ ಕಾಣುವೆ ಚಂದಿರ
ಮನವು ಮರಗಟ್ಟಿ ತಟಸ್ಥ
ಮಾಡುವ ಕೆಲಸ ಅಸ್ತವ್ಯಸ್ತ
ಭರಿಸಲಾಗದ ಆಯಾಸಕೆ
ವಿಶ್ರಾಂತಿ ನೀಡೊ ಚಂದಿರ
ವಿಡಂಬನಾತ್ಮಕ ನೋಟಗಳೇಕೆ
ರಕ್ಷಣಾತ್ಮಕ ನಿಲುವುಗಳು ಬೇಕೆ
ಅಂತರಂಗದ ಆಳಕಿಳಿದು ಕೇಳು
ಏಕಾಂತ ಬೇಡುವುದು ಚಂದಿರ
No comments:
Post a Comment