ನನಗೆ ಹಸಿವಾದಾಗ ಈ ಊಟದಿಂದ ದೂರವಿಡು, ಅದು ನಿನಗೆ ಇಷ್ಟವಾದರೆ,
ನಾನು ಉಸಿರಾಡುವ ಗಾಳಿಯನ್ನೂ ಸಹ ತೆಗೆದುಕೊಂಡು ಹೋಗು,
ಆದರೆ,
ಆ ನಿನ್ನ ಮಾದಕ ನಗುವನ್ನು ಮಾತ್ರ,
ನನ್ನಿಂದ ದೂರಮಾಡಬೇಡ.
ನನ್ನನು, ಆ ಕೆಂಗುಲಾಬಿಯಿಂದ ದೂರವಿಡಬೇಡ ದಯವಿಟ್ಟು,
ಆ ಸುಂದರ ಹೂವನ್ನು ನೀನೇ ಕಿತ್ತು ಕೊಟ್ಟಿದ್ದೆ ನೆನಪಿರಲಿ,
ಇದ್ದಕಿದ್ದಂತೆ ಆ ನೀರು ಖುಷಿಯಿಂದ ಕುಣಿದಾಡುತ್ತದೆ,
ಸುಂದರ ಪರಿಮಳ ಆಗ ನಿನ್ನಿಂದ ಹೊರ ಹೊಮ್ಮುತ್ತದೆ.
ನಾನು ತಂಬ ಕಷ್ಟದ ಕೆಲಸ ಮುಗಿಸಿ ಮನೆಗೆ ಮರಳಿದಾಗ,
ನನ್ನ ಕಣ್ಣುಗಳು ಸೋತಿರುತ್ತವೆ,
ಕೆಲವು ಸಲ ಏಕತಾನತೆಯಿಂದ ಬೇಸರಗೊಂಡಿರುತ್ತೇನೆ,
ಆದರೆ ನೀನು ನಗುವಾಗ, ಅದು ಆಗಸದೆತ್ತರಕ್ಕೆ ಹಾರಿ,
ನನ್ನನ್ನೇ ಹುಡುಕುತ್ತಾ ಬರುತ್ತದೆ,
ಅದು ನನಗೆ ಸಂತಸದ ಎಲ್ಲಾ ಬಾಗಿಲುಗಳನ್ನು
ತೆರೆಯುತ್ತದೆ.
ನನ್ನ ಪ್ರೀತಿಯೇ, ಕಗ್ಗತ್ತಲಲ್ಲಿ ನೀ
ನಗು ಬೀರಿದಾಗ, ತಕ್ಷಣವೇ ಕಾಣುವೆ
ನನ್ನ ರಕ್ತ ರಸ್ತೆಯ ಕಲ್ಲುಗಳಿಗೆ ರಾಚಿರುವುದನ್ನು,
ನಗು, ನಗುತ್ತಲೇ ಇರು, ಏಕೆಂದರೆ
ನಿನ್ನ ನಗುವೇ, ನನ್ನ ಕೈಗಳಿಗೆ
ಸಿಕ್ಕ ಹೊಸ ಖಡ್ಗ.
ಸಾಗರದಂಚಿಗೆ ಆ ಶ್ರಾವಣದಲ್ಲಿ,
ನಿನ್ನ ನಗು ಮಾದಕತೆಯಿಂದ ಹುರಿದುಂಬಿಸುವುದು,
ಮತ್ತೆ, ವಸಂತದಲ್ಲಿ, ನನ್ನ ಸಖಿ,
ನಿನ್ನ ನಗು ನಾನಿಷ್ಟಪಟ್ಟು ಕಾಯುತ್ತಿದ್ದ
ಆ ಮೋಹಕ ಹೂವಿನಂತಿಹುದು, ತಿಳಿನೀಲಿ ಗುಲಾಬಿ
ತೂಗಾಡಿದಾಗ, ಸಂಗೀತದಂತೆ ಮನ ಸೆಳೆವುದು.
ರಾತ್ರಿಯಲ್ಲಿ ನಗು, ದಿನದಲ್ಲಿ ನಗು,
ಚಂದ್ರನ ಕಾಣುತ್ತಾ ನಗು,
ಸುಳಿದಾಡುವ ರಸ್ತೆಗಳತ್ತ ನೋಡುತ್ತಾ ನಗು,
ನಿನ್ನ ತೀವ್ರವಾಗಿ ಪ್ರೀತಿಸುವ,
ಈ ಕೊಳಕು ಹುಡುಗನತ್ತ ನೋಡಿ ನಗು,
ಆದರೆ ನಾನು ಕಣ್ತೆರೆದು ಮುಚ್ಚಿದಾಗ,
ನಾನು ಎಲ್ಲೋ ನಡೆದು ಹೋದಾಗ,
ಮತ್ತೆ ದಣಿದು ಮರಳಿದಾಗ,
ನನಗೆ ಊಟ, ಗಾಳಿ, ನೀರು,
ಬೆಳಕು, ನೆರಳು ಯಾವುದೂ ಬೇಡ,
ಆದರೆ ನಿನ್ನ ನಗುವಿರದಿದ್ದರೆ,
ನಾನು ಖಂಡಿತ ಬದುಕಿರಲಾರೆ.
(ಮೂಲ ಕವಿ: ಪ್ಯಾಬ್ಲೊ ನೆರುದ)
No comments:
Post a Comment